ಗಿರೀಶ್ ತಾಳಿಕಟ್ಟೆ |

ನಟ ಜಗ್ಗಣ್ಣ ಯಶವಂತಪುರ ಕಾಳಗದಲ್ಲಿ ಸೋತಿರೋದು ಅಚ್ಚರಿಯೂ ಅಲ್ಲ, ಆಘಾತವೂ ಅಲ್ಲ. ಅಲ್ಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ನಿಕ್ಕಿಯಾದ ಮೇಲೆಯೇ ಬಿಜೆಪಿ ಕಾಮಿಡಿ ಕಿಲಾಡಿಯನ್ನು ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದ್ದರ ಹಿಂದೆ ಇದ್ದದ್ದು ಒಂದೇ ಅಜೆಂಡಾ. ಕಾಂಗ್ರೆಸ್‍ನ ಎಸ್.ಟಿ.ಸೋಮಶೇಖರ್‍ಗೆ ಹೋಗಬಹುದಾಗಿದ್ದ ಒಕ್ಕಲಿಗ ಮತಗಳನ್ನು ಛಿದ್ರಗೊಳಿಸಿ, ಅದೇ ಸಮುದಾಯದ ಜೆಡಿಎಸ್‍ನ ಜವರಾಯಿ ಗೌಡರಿಗೆ ನೆರವಾಗುವುದಷ್ಟೇ ಆ ಸ್ಪರ್ಧೆಯ ಉದ್ದೇಶವಾಗಿತ್ತು. ಹಿಂದೊಮ್ಮೆ ಬಿಜೆಪಿಯ ಲೇಡಿ ಲೀಡರ್ ಶೋಭಕ್ಕ ಯಾನೆ ಶೋಭ ಕರಂದ್ಲಾಜೆ ಯಶವಂತಪುರದಿಂದ ಗೆದ್ದು ಈ ಕ್ಷೇತ್ರವನ್ನು ಅನಾಥವಾಗಿಸಿ ಹೋದ ತರುವಾಯ ಇಲ್ಲಿ ಬಿಜೆಪಿಗೆ ನೆಲೆಯೆಂಬುದೇ ಇಲ್ಲದಂತಾಗಿದೆ. ಇಲ್ಲದೇ ಹೋಗಿದ್ದರೆ ಉಳಿದಿಬ್ಬರು ತಲಾ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಕಬಳಿಸುವ ಕ್ಷೇತ್ರದಲ್ಲಿ ಬಿಜೆಪಿಯ ಜಗ್ಗಣ್ಣನಿಗೆ ಕೇವಲ ಐವತ್ತೊಂಬತ್ತು ಸಾವಿರ ಮತಗಳಷ್ಟೇ ಗಟ್ಟಿಯಾಗುತ್ತಿರಲಿಲ್ಲ. ಅದೂ ರಾಜ್ಯದ ಅತಿದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಯ ಯಶವಂತಪುರದಲ್ಲಿ!

ಆದ್ರೆ ಜಗ್ಗಣ್ಣನ ಸೋಲು ಸುದ್ದಿಯಾಗುತ್ತಿರೋದು ಆ ವಿಚಾರಕ್ಕಲ್ಲ. ಈ ಮೊದಲು ಕಾಂಗ್ರೆಸ್‍ನಲ್ಲಿದ್ದ ಜಗ್ಗಣ್ಣ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಬಿಕರಿಗೊಂಡು ಕೇಸರಿ ಪಾಳೆಯ ಸೇರಿದ ತರುವಾಯ ಪಕ್ಕಾ ಹಿಂದೂತ್ವವಾದಿಯಂತೆ ಸೋಗುಹಾಕಲು ಶುರು ಮಾಡಿರೋದು ಹೊಸ ವಿಚಾರವೇನಲ್ಲ. ಅದೇ ಧಾಟಿಯಲ್ಲಿ ಮೊನ್ನೆ ಎಲೆಕ್ಷನ್‍ಗೆ ಸ್ಪರ್ಧಿಸಿದ್ದಾಗ `ಈ ಜಗ್ಗೇಶ್ ಗೆದ್ದರೆ ಮೋದಿ ಗೆದ್ದಂತೆ, ಮೋದಿ ಪರಿಕಲ್ಪನೆ ಗೆದ್ದಂತೆ, ಈ ಜಗ್ಗೇಶ್ ಗೆದ್ದರೆ ಹಿಂದೂ ಗೆದ್ದಂತೆ, ಪಾಂಡವರು ಗೆದ್ದಂತೆ…..’ ಎಂಬ ಡೈಲಾಗ್ ಟ್ವೀಟ್ ಮಾಡಿದ್ದರು. ಬಹಿರಂಗ ಪ್ರಚಾರ ಸಭೆಯಲ್ಲಿ ಮೋದಿ ಸೀಟಿನ ಹಿಂದೆ ಕೂರಲು ಜಾಗ ಸಿಕ್ಕಿದ್ದನ್ನೇ ಮ್ಯಾಗ್ಸೆಸ್ಸೆ ಅವಾರ್ಡ್ ಸಿಕ್ಕ ರೇಂಜಿಗೆ ಖುಷಿಯಿಂದ ಗೀಚಿಕೊಂಡಿದ್ದ ಜಗ್ಗಣ್ಣ ಹಿಂದೂತ್ವದ ಟ್ರಂಪ್ ಕಾರ್ಡ್ ಬಳಸಲು ಹೋಗಿ ಮುಗ್ಗರಿಸಿದ್ದಾರೆ. ಜೊತೆಗೆ ಸ್ವತಃ ಟ್ವಿಟ್ಟರ್‍ನಲ್ಲಿ ಗೀಚಿಕೊಂಡಂತೆ ತಾನು ಸೋಲೋದಲ್ಲದೆ ತನ್ನ ಜತೆ ಮೋದಿಯನ್ನೂ ಸೋಲಿಸಿ ಮುಗುಮ್ಮಾಗಿ ಕೂತಿದ್ದಾರೆ!

LEAVE A REPLY

Please enter your comment!
Please enter your name here