Homeಮುಖಪುಟಯಾರು ಹಿತವರು ಈ ಮೂವರೊಳಗೆ

ಯಾರು ಹಿತವರು ಈ ಮೂವರೊಳಗೆ

- Advertisement -
- Advertisement -
  • ನೀಲಗಾರ /

ಕರ್ನಾಟಕದ ಈ ಚುನಾವಣೆಯು ಪ್ರಧಾನವಾಗಿ ಮೂರು ಪಕ್ಷಗಳ ನಡುವಿನ ಕದನವೇ ಆಗಿದೆ. ಆದರೂ ಇಂತಹ ಎಲ್ಲಾ ಕದನಗಳಲ್ಲಿ ಹೇಗೋ ಹಾಗೆ ಕೆಲವು ವ್ಯಕ್ತಿಗಳಿಗೆ ವಿಶೇಷ ಮಹತ್ವ ಇದ್ದೇ ಇದೆ. ಒಂದು ರೀತಿಯಲ್ಲಿ ಇದು ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ ನಡುವಿನ ಹಣಾಹಣಿ ಎಂದೂ ಬಿಂಬಿತವಾಗಿದೆ. ಇದಕ್ಕೆ ದೇಶದ ರಾಜಕೀಯ ಪರಿಸ್ಥಿತಿ ಒಂದು ಕಾರಣವಾಗಿದ್ದರೆ, ಸಿದ್ದರಾಮಯ್ಯನವರನ್ನು ಉಳಿದಿಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳು ಸರಿಗಟ್ಟಲಾರರು ಎಂಬ ಕಾರಣಕ್ಕೂ ನರೇಂದ್ರ ಮೋದಿಯೇ ಕಣದಲ್ಲಿದ್ದಾರೆ ಎಂದು ಮುಂದಿಡುತ್ತಿರುವ ಸಾಧ್ಯತೆಯಿದೆ. ಹಾಗೆ ನೋಡಿದರೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪನವರು ಘೋಷಿತ ಮುಖ್ಯಮಂತ್ರಿ ಅಭ್ಯರ್ಥಿಗಳು. ಕಾಂಗ್ರೆಸ್ ವತಿಯಿಂದ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರೋಕ್ಷವಾಗಿಯಷ್ಟೇ ಸೂಚಿಸಲಾಗಿದೆ. ಅದೇನೇ ಇದ್ದರೂ, ಕರ್ನಾಟಕದ ಮತದಾರರು ಆರಿಸಬೇಕಾಗಿರುವುದು ಈ ಮೂವರು ನಾಯಕರ ನೇತೃತ್ವದ ಪಕ್ಷಗಳನ್ನೇ ಆಗಿರುವುದರಿಂದ, ಮೂವರ ವ್ಯಕ್ತಿತ್ವ, ರಾಜಕಾರಣ, ಗುಣಾವಗುಣಗಳನ್ನು ಒರೆಗೆ ಹಚ್ಚುವ ಅಗತ್ಯ ಇದ್ದೇ ಇದೆ. ಅಂತಿಮವಾಗಿ ಒರೆಗೆ ಹಚ್ಚುವ ಕೆಲಸ ಮತದಾರರದ್ದೇ ಆಗಿರುವುದರಿಂದ, ಇಲ್ಲಿ ಕೆಲವು ಮಾಹಿತಿಗಳನ್ನಷ್ಟೇ ಮುಂದಿಡುವ ಕೆಲಸ ಮಾಡಲಾಗಿದೆ.

ಹಿನ್ನೆಲೆ

ಸಿದ್ದು ರಾಜಕಾರಣದ ಆರಂಭದ ದಿನಗಳು…

ಮೂವರಲ್ಲಿ ಯಡಿಯೂರಪ್ಪ (ಜನನ: 27.02.1943) ಮತ್ತು ಸಿದ್ದರಾಮಯ್ಯನವರು (ಜನನ: 12.08.1948) ಅತ್ಯಂತ ಸಾಧಾರಣ ಕುಟುಂಬಗಳಿಂದ ಬಂದವರು. ಕುಮಾರಸ್ವಾಮಿಯವರು ಹುಟ್ಟಿದಾಗ (ಜನನ: 16.12.1959) ಅವರ ತಂದೆ ಹೆಚ್.ಡಿ.ದೇವೇಗೌಡರು ಸಾರ್ವಜನಿಕ ಜೀವನ ಪ್ರವೇಶಿಸಿದ್ದರಾದರೂ ಇನ್ನೂ ರಾಜ್ಯ ನಾಯಕರಾಗಿರಲಿಲ್ಲ. ಅದೇನೇ ಇದ್ದರೂ, ಕುಮಾರಸ್ವಾಮಿಯವರು ರಾಜಕೀಯ ಜೀವನ ಪ್ರವೇಶಿಸುವ ಹೊತ್ತಿಗೆ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಿದ್ದಲಿಂಗಪ್ಪನವರ ಮಗ ಯಡಿಯೂರಪ್ಪನವರು ಬೂಕನಕೆರೆ, ಮಂಡ್ಯಗಳಲ್ಲಿ ಓದಿ ಪಿಯುಸಿ ಪಡೆದಿದ್ದಾರೆ. (ಬೆಂಗಳೂರಿನಲ್ಲಿ ಬಿಎ ಮಾಡಿದ್ದಾರೆಂದು ಕೆಲವು ಕಡೆ ಹೇಳಲಾಗಿದೆ) ಸಿದ್ದರಾಮಯ್ಯನವರು 10ನೇ ವಯಸ್ಸಿನವರೆಗೆ ಔಪಚಾರಿಕ ಶಾಲಾ ಶಿಕ್ಷಣವನ್ನೂ ಪಡೆದುಕೊಂಡವರಲ್ಲ. ನಂತರದ ದಿನಗಳಲ್ಲಿ ಬಿಎಸ್‍ಸಿ ಮುಗಿಸಿ ಕಾನೂನು ಪದವಿ ಪಡೆದುಕೊಂಡರು. ಕುಮಾರಸ್ವಾಮಿಯವರು ಹೊಳೆನರಸೀಪುರದಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಬೆಂಗಳೂರಿನಲ್ಲಿ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‍ಸಿ ಮಾಡಿದ್ದಾರೆ.
ಸಕ್ರಿಯ ರಾಜಕಾರಣಕ್ಕೆ ಬರುವ ಮುಂಚೆ: ಯಡಿಯೂರಪ್ಪ ನವರು ಬೂಕನಕೆರೆಯಿಂದ ಶಿಕಾರಿಪುರಕ್ಕೆ ಹೋದವರು ಆರೆಸ್ಸೆಸ್‍ನ ಚಟುವಟಿಕೆಯನ್ನು 1965ರಿಂದ ಆರಂಭಿಸಿದ್ದಾರೆ. ಶಿಕಾರಿಪುರದಲ್ಲಿ ವೀರಭದ್ರಶಾಸ್ತ್ರಿಗಳ ರೈಸ್‍ಮಿಲ್‍ನಲ್ಲಿ ರೈಟರ್ ಆಗುವ ಮುಂಚೆ ಸರ್ಕಾರೀ ನೌಕರಿ ತಿರಸ್ಕರಿಸಿದ್ದರು ಎಂತಲೂ ಹೇಳಲಾಗುತ್ತದೆ. ಅಲ್ಲಿನ ವೀರಶೈವ ಸೊಸೈಟಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಮೊದಲ ಸಾರ್ವಜನಿಕ ಜವಾಬ್ದಾರಿಯಾಗಿತ್ತು.
ಸಿದ್ದರಾಮಯ್ಯನವರು ವಿದ್ಯಾಭ್ಯಾಸ ಮುಗಿದನಂತರ ಮೈಸೂರಿನ ಸಮಾಜವಾದಿಗಳ ಒಡನಾಟದಲ್ಲಿದ್ದರು. ಮೈಸೂರಿನ ಕೋರ್ಟಿನಲ್ಲಿ ವಕೀಲಿಕೆ ಮಾಡುತ್ತಿದ್ದಾಗಲೇ ರೈತಚಳವಳಿಯಲ್ಲಿ ಕ್ರಿಯಾಶೀಲರಾದರು. ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಕಾರ್ಯದರ್ಶಿಯಾಗಿದ್ದರು.
ಕುಮಾರಸ್ವಾಮಿಯವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಿನೆಮಾ ಹುಚ್ಚು ಹತ್ತಿಸಿಕೊಂಡವರು. ಹೊಳೆನರಸೀಪುರದಲ್ಲಿ ಅವರ ಕುಟುಂಬದ ಒಡೆತನದ ಥಿಯೇಟರ್ ಇದೆ. ಸಿನೆಮಾ ವಿತರಕ ಮತ್ತು ನಿರ್ಮಾಪಕರಾಗಿದ್ದರು. ಸಹೋದರ ರೇವಣ್ಣ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು; ರಾಜಕಾರಣಕ್ಕೆ ಬರುವ ಮುಂಚೆ, ವಿವಿಧ ಬಗೆಯ ವ್ಯಕ್ತಿಗಳ ಸಾಹಚರ್ಯ, ವ್ಯವಹಾರಗಳ ಕಾರಣದಿಂದ ಸಾರ್ವಜನಿಕವಾಗಿ ಗೊತ್ತಿದ್ದರು.

ಸಾರ್ವಜನಿಕ ಜೀವನ ಹಾಗೂ ರಾಜಕೀಯ ಗ್ರಾಫ್

ಯಡಿಯೂರಪ್ಪನವರು ಮೊದಲು ಶಿಕಾರಿಪುರದ ಪುರಸಭೆ ಸದಸ್ಯರು, ನಂತರ ಅಧ್ಯಕ್ಷರೂ ಆದರು. ಜನಸಂಘದ ತಾಲೂಕು ಅಧ್ಯಕ್ಷರು, ನಂತರ ಅದು ಜನತಾಪಕ್ಷದಲ್ಲಿ ವಿಲೀನವಾದಾಗ ಅದರ ತಾಲೂಕು ಅಧ್ಯಕ್ಷರು. 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಅಲ್ಲಿಂದಲೇ ಆಯ್ಕೆ. 1985ರಲ್ಲಿ ಪುನರಾಯ್ಕೆ. 1988 ಮತ್ತು 1998ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ. ಮಧ್ಯೆ ಒಂದು ಸಾರಿ ಎಂಎಲ್‍ಎ ಚುನಾವಣೆಯಲ್ಲಿ ಸೋತು, ವಿಧಾನಪರಿಷತ್ ಸದಸ್ಯರೂ ಆಗಿದ್ದರು. ಎರಡು ಬಾರಿ ವಿರೋಧ ಪಕ್ಷದ ನಾಯಕ (1994 ಮತ್ತು 2004). ಈ ಅವಧಿಯಲ್ಲಿ ಬರ ಪರಿಹಾರ, ಜೀತ ವಿಮುಕ್ತಿ, ಅರಣ್ಯ ಭೂಮಿ (ಸಿ ಮತ್ತು ಡಿ ಭೂಮಿ ಹೋರಾಟ) ಕೊಡಿಸಲು ಹೋರಾಟ, ಸಾಲಮನ್ನಾಕ್ಕಾಗಿ ಹೋರಾಟ, ಬೆಂಗಳೂರಿನವರೆಗೆ ಪಾದಯಾತ್ರೆ ಇತ್ಯಾದಿಗಳ ಮೂಲಕ ರೈತಪರ ಎನ್ನುವ ಹೆಸರನ್ನು ಗಳಿಸಿಕೊಂಡರು. 2006ರಲ್ಲಿ ಕುಮಾರಸ್ವಾಮಿಯವರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಗೆ ಕೈಗೂಡಿಸಿ, ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾದರು.
ಸಿದ್ದರಾಮಯ್ಯನವರು ಮೊದಲ ಬಾರಿಗೆ (35ನೇ ವಯಸ್ಸಿನಲ್ಲಿ) ಚಾಮುಂಡೇಶ್ವರಿಯಿಂದ ಲೋಕದಳ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದದ್ದು ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿತ್ತು. ಆಳುವ ಮೈತ್ರಿಕೂಟದ ಭಾಗವಾಗಿ ಕನ್ನಡ ಕಾವಲು ಸಮಿತಿ(ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ)ಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಕೆ. 1985ರಲ್ಲಿ ಜನತಾಪಕ್ಷದಿಂದ ಪುನರಾಯ್ಕೆ. 1989 ಮತ್ತು 1999 ಎರಡು ಬಾರಿ ಅದೇ ಕ್ಷೇತ್ರದಿಂದ ಸೋತಿದ್ದು ಬಿಟ್ಟರೆ, ಮಿಕ್ಕೆಲ್ಲಾ ಸಾರಿ ಅದೇ ಕ್ಷೇತ್ರ (2009ರಿಂದ ಆ ಕ್ಷೇತ್ರ ವಿಭಜನೆಯಾದ ನಂತರ ವರುಣಾ ಭಾಗ)ದಿಂದ ಆಯ್ಕೆಯಾಗಿದ್ದಾರೆ. ಹೆಗಡೆಯವರ ಸಂಪುಟದಲ್ಲಿ ಪಶುಸಂಗೋಪನೆ, ಸಾರಿಗೆ ಸಚಿವರಾಗಿದ್ದರು, ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು. ನಂತರ ಜೆ.ಎಚ್.ಪಟೇಲರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆಯನ್ನೇ ಹೊಂದಿದ್ದರು.
ಕುಮಾರಸ್ವಾಮಿಯವರು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ 1996ರ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಗೆದ್ದು ಎಂಪಿಯಾಗುವ ಮೂಲಕ ರಾಜಕಾರಣ ಪ್ರವೇಶಿಸಿದರು. ಆದರೆ, 1998ಕ್ಕೆ ಮತ್ತೆ ಚುನಾವಣೆ ಬಂದಾಗ ತೀವ್ರ ಸೋಲನುಭವಿಸಿದರು. ಅದರ ನಂತರ 1999ರ ವಿಧಾನಸಭಾ ಚುನಾವಣೆಯಲ್ಲೂ ಸಾತನೂರು ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ಎದುರು ಸೋಲುಂಡರು. ಮೊದಲ ಬಾರಿಗೆ ಶಾಸಕರಾಗಿದ್ದು 2004ರಲ್ಲಿ ರಾಮನಗರ ಕ್ಷೇತ್ರದಿಂದ. ಆಗ ಸಮ್ಮಿಶ್ರ ಸರ್ಕಾರದಲ್ಲಿ ಸಹೋದರ ರೇವಣ್ಣ ಮಂತ್ರಿಯಾದರು. ಆದರೆ, ಶಾಸಕರಲ್ಲಿ ಹಲವರು ಕುಮಾರಸ್ವಾಮಿ ಸಖ್ಯದಲ್ಲಿದ್ದರು. ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ನಡುವೆ ಬಿರುಕು ಹೆಚ್ಚಾದಾಗ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಮ್ಮೆಗೇ ಮುಖ್ಯಮಂತ್ರಿಯಾದರು.

ದೊಡ್ಡ ರಾಜಕೀಯ ತಿರುವುಗಳು

ದೀರ್ಘ ಕಾಲ ವಿರೋಧ ಪಕ್ಷದಲ್ಲಿದ್ದುಕೊಂಡು ಬಡಿದಾಡುತ್ತಲೇ ಬಂದ ಯಡಿಯೂರಪ್ಪನವರು ಕುಮಾರಸ್ವಾಮಿಯವರ ಜೊತೆ ಸೇರಿ ಸಮ್ಮಿಶ್ರ ಸರ್ಕಾರಕ್ಕೆ ಕೈ ಹಾಕಿ ಉಪಮುಖ್ಯಮಂತ್ರಿಯಾಗಿದ್ದು ಒಂದು ತಿರುವು. ಜನತಾದಳವು ಒಪ್ಪಂದದಂತೆ ಅಧಿಕಾರ ಕೊಡದಿದ್ದಾಗ, ವಚನಭ್ರಷ್ಟತೆಯನ್ನು ಮುಂದೆ ಮಾಡಿ ಗೆದ್ದು ಮುಖ್ಯಮಂತ್ರಿಯಾಗಿದ್ದು ಮತ್ತೊಂದು ತಿರುವು. ಭ್ರಷ್ಟಾಚಾರದ ಆರೋಪದ ಕಾರಣಕ್ಕೆ ಮುಖ್ಯಮಂತ್ರಿ ಪಟ್ಟವನ್ನು ತೊರೆದು ಜೈಲು ಸೇರಬೇಕಾಗಿ ಬಂದು ಬಿಜೆಪಿಯಿಂದ ನಿರ್ಲಕ್ಷ್ಯಕ್ಕೊಳಗಾದಾಗ ಕೆಜೆಪಿ ಕಟ್ಟಿ ಬಿಜೆಪಿಯನ್ನು ಸೋಲಿಸಿದ್ದು ಮತ್ತೊಂದು ತಿರುವು. ನಂತರ ಮರಳಿ ಬಿಜೆಪಿಗೆ ಬಂದು ಈಗ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.
ಸಿದ್ದರಾಮಯ್ಯನವರು 1996ರಲ್ಲಿ ಮತ್ತು 2004ರಲ್ಲಿ ಉಪಮುಖ್ಯಮಂತ್ರಿ ಆಗುವತನಕ ಎಲ್ಲವೂ ಹಂತಹಂತವಾಗಿಯೇ ಸಂಭವಿಸಿವೆ. ಆದರೆ, ತಾನು ಮುಖ್ಯಮಂತ್ರಿಯಾಗುವುದನ್ನು ಗೌಡರು ತಪ್ಪಿಸಿರಬಹುದು ಮತ್ತು ಅವರ ಕುಟುಂಬದ ಹೊರತಾಗಿ ಬೇರೆಯವರನ್ನು ಮುಂದೆಯೂ ಮಾಡಲಾರರು ಎಂಬ ತಿಳಿವಳಿಕೆಯು ಗೌಡರಿಂದ ಮಾತ್ರವಲ್ಲದೇ ಜನತಾಪರಿವಾರದಿಂದಲೇ ದೂರ ಮಾಡಲಾರಂಭಿಸಿತು. ಅದರ ಪರಿಣಾಮವಾಗಿ ತನ್ನದೇ ಸ್ವಂತ ನೆಲೆ ಕಟ್ಟಿಕೊಳ್ಳಲು ಅಹಿಂದ ಸಮಾವೇಶಗಳನ್ನು ಮಾಡಲಾರಂಭಿಸಿದರು. ಕಾಂಗ್ರೆಸ್ ಬೆಂಬಲ ಮತ್ತು ಜೆಡಿಎಸ್‍ನಿಂದ ಉಚ್ಚಾಟನೆ ಎರಡೂ ಆಯಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಎದುರಿಸಿದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ 257 ಮತಗಳಿಂದ ಗೆದ್ದದ್ದು ಒಂದು ರೀತಿ ಮರುಜೀವ ನೀಡಿತು. ಕಾಂಗ್ರೆಸ್‍ನಲ್ಲಿ ಮೊದಮೊದಲು ಹೊಂದಿಕೊಳ್ಳದೇ, ಮುನಿಸು ತೋರಿದರಾದರೂ ನಿಧಾನಕ್ಕೆ ಹೈಕಮಾಂಡ್‍ನ ಒಲವು ಮತ್ತು ರಾಜ್ಯದ ಪ್ರಭಾವಿ ನಾಯಕರಾಗಿ ಪ್ರತಿಷ್ಠಾಪಿತರಾಗಿದ್ದಾರೆ.
ಮೇಲೆ ಹೇಳಲಾದ ರೀತಿಯಲ್ಲಿ ಮೊದಲ ಸಾರಿ ಎಂಎಲ್‍ಎ ಆದಾಗಲೇ ಮುಖ್ಯಮಂತ್ರಿಯಾದವರು (04.02.2006ರಿಂದ 9.10.2007) ಕುಮಾರಸ್ವಾಮಿ. 20 ತಿಂಗಳ ನಂತರ ಅಧಿಕಾರ ಕೊಡದೇ, ರಾಷ್ಟ್ರಪತಿ ಆಳ್ವಿಕೆಗೆ ಕಾರಣರಾದರು. ಆನಂತರ ಅಂತಹ ತಿರುವುಗಳು ಸಂಭವಿಸಿಲ್ಲ. ಈಗ ಮತ್ತೊಂದು ತಿರುವಿಗಾಗಿ ಕಾಯುತ್ತಿದ್ದಾರೆ.

ಸಿದ್ಧಾಂತ

ಆರೆಸ್ಸೆಸ್ ಸಮವಸ್ತ್ರದಲ್ಲಿ ಯಡಿಯೂರಪ್ಪ

ಯಡಿಯೂರಪ್ಪನವರು ಅರ್ಧ ದಶಕಕ್ಕಿಂತಲೂ ಹೆಚ್ಚು ಕಾಲ ಸಂಘಪರಿವಾರದ ನಂಟನ್ನು ಹೊಂದಿರುವವರು. ಆಗಾಗ ಹಿಂದುತ್ವದ ಮಾತುಗಳನ್ನಾಡುತ್ತಾರೆ. ಕೆಲವು ಕೋಮು ಪ್ರಚೋದಕ ಮಾತುಗಳನ್ನಾಡಿದ್ದಾರಾದರೂ, ಅದನ್ನೇ ನಿರಂತರವಾಗಿ ಮಾಡಿದವರಲ್ಲ. ಮುಖ್ಯಮಂತ್ರಿಯಿರಲಿ, ಮಂತ್ರಿಯಾಗಲೂ ಸಾಧ್ಯವಾಗುತ್ತಿಲ್ಲ ಎಂದಾಗ, ಒಂದಷ್ಟು ಶಾಸಕರೊಂದಿಗೆ ಬಂದುಬಿಡುತ್ತೇನೆ ತನ್ನನ್ನು ಮಂತ್ರಿ ಮಾಡಿ ಎಂದು ಅರ್ಧರಾತ್ರಿಯಲ್ಲಿ ಕುಮಾರಸ್ವಾಮಿ ಮನೆ ಬಾಗಿಲು ತಟ್ಟಿದ್ದರೆಂಬ ಆರೋಪವಿದೆ. ಹಾಗೆಯೇ ಮುಖ್ಯಮಂತ್ರಿಯಾದಾಗ ಬಿಜೆಪಿ ನಿರ್ಲಕ್ಷಿಸಿತೆಂದು ಹೊರಗೆ ಹೋಗಿ ಕೆಜೆಪಿ ಕಟ್ಟಿದ್ದರು.
ಸಿದ್ದರಾಮಯ್ಯನವರು ಶೋಷಿತ ಸಮುದಾಯಗಳ ಹಾಗೂ ಸಮಾನತೆಯ ಆಶಯವನ್ನು ಮುಂಚಿನಿಂದಲೂ ಪ್ರತಿಪಾದಿಸುತ್ತಾ ಬಂದವರು. ಅದಕ್ಕಾಗಿ ಬೀದಿ ಹೋರಾಟ ನಡೆಸಿದ ನಿದರ್ಶನಗಳಿಲ್ಲ. ಹಾಗೆಂದು ರಾಜಕಾರಣದ ರಾಜಿಗಳ ಹೊರತಾಗಿ ಈ ಆಶಯಗಳಿಂದ ದೂರ ಸರಿದರೆಂತಲೂ ಹೇಳಲಾಗದು. ಅದರಲ್ಲೂ ಕಾಂಗ್ರೆಸ್‍ನ ಚೌಕಟ್ಟಿನೊಳಗೇ ಸಿಕ್ಕ ಮುಖ್ಯಮಂತ್ರಿತ್ವದ ಸಂದರ್ಭದಲ್ಲಿ ನೋವುಂಡ ಸಮುದಾಯಗಳ ಪರವಾಗಿ ಕೆಲಸ ಮಾಡುವ ಪ್ರಯತ್ನ ಎದ್ದು ಕಾಣುತ್ತದೆ. ಆರಂಭದಿಂದ 2004ರವರೆಗೆ ಜನತಾ ಪರಿವಾರದಲ್ಲಿದ್ದವರು, ಮೇಲೆ ಹೇಳಲಾದ ಕಾರಣಗಳಿಗಾಗಿ ಕಾಂಗ್ರೆಸ್ ಕಡೆಗೆ ಹೋದರು. ಕಾಂಗ್ರೆಸ್‍ನೊಳಗೆ ಮುನಿಸಿ ಕೊಂಡಾಗ ಬಿಜೆಪಿಯ ಜೊತೆ ಮಾತುಕತೆ ನಡೆಸಿದ್ದರೆಂಬ ಗುಲ್ಲು ಎದ್ದಿತ್ತಾ ದರೂ, ಅದಕ್ಕೆ ಪುರಾವೆಗಳಿಲ್ಲ.

ಕುಮಾರ ಸ್ವಾಮಿಯವರಿಗೆ ಇಂತಹುದೇ ಸಿದ್ಧಾಂತ ಎಂಬುದು ಇಲ್ಲ. ಪಕ್ಷದ ಹೆಸರಿನಲ್ಲೇ ಇರುವ ಜಾತ್ಯತೀತತೆ ಎಂದರೆ ಏನು ಎಂದು ಬಹಿರಂಗವಾಗಿ ಕೇಳಿದ್ದರು. ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಎಂಬ ಜನಪ್ರಿಯತೆ ಅವರಿಗಿದೆ. ಅದರ ಹೊರತಾಗಿ ನಿರ್ದಿಷ್ಟವಾದ ಸಿದ್ಧಾಂತಕ್ಕೂ ಅವರಿಗೂ ದೂರ.

ಆಡಳಿತ ಮತ್ತು ವಿರೋಧಿ ಅಲೆ
ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದರು. ವಿವಿಧ ಜಾತಿಸಮುದಾಯಗಳ ಮಠಗಳಿಗೆ ಹಣ ನೀಡಿದ್ದು ಮತ್ತು ಜಾತಿ ಸಮಾವೇಶಗಳನ್ನು ಸಂಘಟಿಸುವ ಮೂಲಕ ಅವರೆಲ್ಲರಿಗೆ ಹತ್ತಿರವಾಗುವ ಪ್ರಯತ್ನ ಮಾಡಿದರು. ಆದರೆ ಆಡಳಿತದುದ್ದಕ್ಕೂ ಗಣಿ ಮಾಫಿಯಾದ ಹಿಡಿತದಲ್ಲಿದ್ದದ್ದು, ತಾವೂ ಅದೇ ಕ್ಷೇತ್ರದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿದ್ದು, ಒಂದಾದ ಮೇಲೆ ಒಂದು ಹಗರಣಗಳು ಅಂತಿಮವಾಗಿ ರಾಜೀನಾಮೆ ಕೊಡುವಂತೆ ಮಾಡಿದವು. ಮೊದಲ ಬಾರಿ ಸ್ವತಂತ್ರ ಅಧಿಕಾರ ಪಡೆದುಕೊಂಡ ಯಡಿಯೂರಪ್ಪನವರಿಗೆ ಮಾತ್ರವಲ್ಲದೇ, ಬಿಜೆಪಿಯ ವಿರುದ್ಧ ಅಭಿಪ್ರಾಯ ಮೂಡಲು ಕಾರಣವಾದರು. ಆದರೆ, ರಾಜ್ಯದ ಮೊದಲ ಮೂರು ಜನಪ್ರಿಯ ನಾಯಕರಲ್ಲಿ ಒಬ್ಬರಾಗಿ ಯಡಿಯೂರಪ್ಪನವರು ಸ್ಥಿರಗೊಂಡಿದ್ದೂ ವಾಸ್ತವ.
ಸಿದ್ದರಾಮಯ್ಯನವರ ಕಾಲದಲ್ಲಿ ಖಚಿತವಾಗಿ ನಡೆದಿದೆ ಎನ್ನುವಂತಹ ಹಗರಣಗಳ ಆರೋಪಗಳು ಸುತ್ತಿಕೊಳ್ಳಲಿಲ್ಲವಾದರೂ, ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಅನ್ನಿಸುತ್ತಿಲ್ಲ. ಆಡಳಿತವು ಬಿಗಿಯಾಗಿತ್ತು ಎನಿಸುವಂತೆ ಅವರ ಆಡಳಿತ ಇರಲಿಲ್ಲ. ಆದರೆ, ಜನಪ್ರಿಯ ಕಾರ್ಯಕ್ರಮಗಳನ್ನು ಸಾಕಷ್ಟು ನೀಡಿದರು. ಮೇಲ್ಜಾತಿಗಳ ವಿರೋಧ ಕಟ್ಟಿಕೊಂಡರೂ ಶೋಷಿತ ಸಮುದಾಯಗಳ ಪರವಾಗಿ ನಿಂತರು. ಬಾಯುಳ್ಳ ವರ್ಗಗಳು ಮತ್ತು ಅವರ ಕೈಯ್ಯಲ್ಲಿರುವ ಮಾಧ್ಯಮಗಳ ಕಾರಣದಿಂದ, ನೆಗೆಟಿವ್ ಪ್ರಚಾರಕ್ಕೆ ಗುರಿಯಾದರು. ಅದನ್ನು ಹೊರತುಪಡಿಸಿದರೆ ವಿರೋಧಿ ಅಲೆಯೆಂಬುದು ಇಲ್ಲ. ವಾಸ್ತವದಲ್ಲಿ ಕಡೆಯ ಒಂದು ವರ್ಷದಲ್ಲಿ ಸಿದ್ದರಾಮಯ್ಯನವರು ಆಡಿದ ಮಾಸ್ಟರ್ ಸ್ಟ್ರೋಕ್‍ಗಳು ಮತ್ತು ದೇಶದ ರಾಜಕೀಯ ವಾತಾವರಣದ ಕಾರಣದಿಂದ ಮೋದಿ ವಿರುದ್ಧದ ಪ್ರಬಲ ನಾಯಕರಂತೆ ಬಿಂಬಿತರಾದರು.
ಇದ್ದಕ್ಕಿದ್ದಂತೆ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ನಿಸ್ಸಂದೇಹವಾಗಿ ಆ ಸಂದರ್ಭದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡರು. ಹಲವರು ಆಡಿಕೊಂಡರೂ, ಅವರ ಗ್ರಾಮವಾಸ್ತವ್ಯವೂ ಸೇರಿದಂತೆ ಕೆಲವು ನಡೆಗಳು ಜನಪ್ರಿಯತೆಯನ್ನು ತಂದುಕೊಟ್ಟವು. ಆಡಳಿತದ ಕಾರಣಕ್ಕೆ ವಿರೋಧಿ ಅಲೆ ಸೃಷ್ಟಿಯಾಗದಿದ್ದರೂ, ವಚನಭ್ರಷ್ಟತೆಯ ಕಾರಣದಿಂದ ವಿರೋಧವನ್ನು ಎದುರಿಸಬೇಕಾಯಿತು. ಸ್ವಕೇಂದ್ರಿತ ಹಾಗೂ ಕುಟುಂಬ ರಾಜಕಾರಣದಿಂದ ಮಿತ್ರರೇ ವಿರೋಧಿಗಳಾಗಿದ್ದು ಅವರ ಕಡಿಮೆ ಅವಧಿಯ ಸಕ್ರಿಯ ರಾಜಕಾರಣದ ಪ್ರಮುಖ ಬೆಳವಣಿಗೆಯಾಗಿದೆ.

ಆಸ್ತಿ, ವ್ಯವಹಾರ, ಖಾಸಗಿ ಸಾಮ್ರಾಜ್ಯ ಸ್ಥಾಪನೆ
ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರಿಬ್ಬರೂ ಖಾಸಗಿ ಸಾಮ್ರಾಜ್ಯ ಸ್ಥಾಪನೆ ಮಾಡಿರುವುದು ಗುಟ್ಟೇನಲ್ಲ. ಶಿವಮೊಗ್ಗದಲ್ಲಿ ಆಸ್ತಿ ಮಾಡಿದ್ದು, ಪಿಇಎಸ್ ಸಂಸ್ಥೆಯ ಪಾಲುದಾರಿಕೆ ಯಡಿಯೂರಪ್ಪನವರ ಎದ್ದು ಕಂಡ ಕೆಲವು ವ್ಯವಹಾರಗಳಷ್ಟೇ. ಕುಮಾರಸ್ವಾಮಿ ಮುಂಚಿನಿಂದಲೂ ಬಿಸಿನೆಸ್‍ಮನ್. ಕಸ್ತೂರಿ ಚಾನೆಲ್ ಅವರಿಗೆ ಲಾಭವನ್ನೇನೂ ತರುತ್ತಿಲ್ಲವಾದರೂ, ದೇವೇಗೌಡರ ಕುಟುಂಬವು ರಾಜಕಾರಣಕ್ಕೆ ಸ್ವಂತ ಹಣ ಬಿಚ್ಚದೇ ಆಸ್ತಿ ಮಾಡಿಕೊಂಡಿದ್ದಾರೆಂದುಕೊಳ್ಳಲು ಕಾರಣಗಳಿವೆ.
ಸಿದ್ದರಾಮಯ್ಯನವರ ಕಾಲದಲ್ಲಿ ಕೆಲವು ಮಂತ್ರಿಗಳು ಸಾಕಷ್ಟು ಹಣ ಮಾಡಿಕೊಂಡಿದ್ದಾರೆಂಬುದರಲ್ಲಿ ಯಾವುದೇ ಸಂಶಯವಿಲ್ಲವಾದರೂ, ಸ್ವಂತ ಸಾಮ್ರಾಜ್ಯ ಸ್ಥಾಪಿಸಲು ಸ್ವತಃ ಅವರೇ ಸಂಪತ್ತು ಸಂಗ್ರಹಿಸಿದ್ದಾರೆಂದು ನಂಬಲ ಕಾರಣಗಳಿಲ್ಲ.

ಹಗರಣಗಳು – ವಿವಾದಗಳು
ಯಡಿಯೂರಪ್ಪನವರು ಜೈಲಿಗೆ ಹೋದ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಪಟ್ಟವನ್ನು ಶಾಶ್ವತವಾಗಿ ಹೊಂದುತ್ತಾರೆ. ಚೆಕ್‍ನಲ್ಲಿ ಲಂಚ ಪಡೆದವರು ಎಂಬುದೂ ಸೇರಿದಂತೆ ಹಲವು ಪ್ರಥಮಗಳು ಅವರ ಅವಧಿಯಲ್ಲಿ ಸಂಭವಿಸಿದವು. ನೇರವಾಗಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದಾರೆ ಎಂದು ಹೇಳಬಹುದಾದ ಹಗರಣಗಳು ಇಲ್ಲವಾದರೂ, ಡಿ.ಕೆ.ರವಿ ಪ್ರಕರಣವೂ ಸೇರಿದಂತೆ ಕೆಲವನ್ನು ನಿಭಾಯಿಸುವಲ್ಲಿ ಜಾಣ್ಮೆ ತೋರದೆ ತಾತ್ಕಾಲಿಕವಾಗಿ ವಿವಾದಗಳಿಗೆ ಸಿಕ್ಕಿಕೊಂಡರು. ಅದರಲ್ಲೂ ದುಬಾರಿ ವಾಚ್ ಹಗರಣ ಮತ್ತು ಭ್ರಷ್ಟ ಸಹೋದ್ಯೋಗಿಗಳಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆಂಬ ಆರೋಪ ಇದೆ. ಕುಮಾರಸ್ವಾಮಿಯವರು ಜಂತಕಲ್ ಮೈನಿಂಗ್ ಹಗರಣದಲ್ಲಿ ಆರೋಪಿಯಾಗಿದ್ದಾರೆ. ಹಣ ಪಡೆದೇ ರಾಜ್ಯಸಭಾ ಟಿಕೆಟ್ ನೀಡುತ್ತೇವೆನ್ನುವ ರೀತಿಯ ವಿವಾದಕ್ಕೀಡಾಗುವ ಮಾತುಗಳನ್ನು ಆಗಾಗ್ಗೆ ಆಡಿದ್ದಾರೆ.

ಜಾತಿ ಜನಬೆಂಬಲ
ಜನಬೆಂಬಲದ ದೃಷ್ಟಿಯಲ್ಲಿ ಜಾತಿ ಲೆಕ್ಕಾಚಾರವೇ ಪ್ರಧಾನ ಪಾತ್ರ ವಹಿಸುತ್ತದೆ. ಯಡಿಯೂರಪ್ಪನವರು ವೀರಶೈವ-ಲಿಂಗಾಯಿತರ ನಾಯಕನಾಗಿ 15 ವರ್ಷಗಳ ಅವಧಿಯಲ್ಲಿ ರೂಪುಗೊಂಡರಾದರೂ, ಅಧಿಕಾರದಿಂದ ವಂಚಿತರಾದಾಗ ಆ ಸಮುದಾಯ ಗಟ್ಟಿಯಾಗಿ ಅವರ ಬೆಂಬಲಕ್ಕೆ ನಿಂತಿತು. ಆದರೆ ಕಳೆದೆರಡು ವರ್ಷಗಳಲ್ಲಿ ಲಿಂಗಾಯಿತ-ವೀರಶೈವ ವಿವಾದದ ನಂತರ ಆ ಸಮುದಾಯದ ಏಕೈಕ ನಾಯಕರಾಗಿ ಯಡಿಯೂರಪ್ಪನವರು ಉಳಿದಿಲ್ಲ. ಆದರೆ ಬಿಜೆಪಿಯಲ್ಲಿ ಜನಬೆಂಬಲವಿರುವ ಪ್ರಧಾನ ನಾಯಕರೆಂದರೆ ಯಡಿಯೂರಪ್ಪನವರೇ ಆಗಿದ್ದಾರೆ.
ಜನನಾಯಕನಾಗಿ ಸಿದ್ದರಾಮಯ್ಯನವರ ಬೆಳವಣಿಗೆ ಸುಮಾರು 25 ವರ್ಷಗಳ ಅವಧಿಯಲ್ಲಿ ಆಗಿದೆ. ಈ ಸದ್ಯ ರಾಜ್ಯದಲ್ಲಿ ಮತ್ತು ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯನವರೇ ಅತೀದೊಡ್ಡ ಜನನಾಯಕರಾಗಿದ್ದಾರೆ. ಸಾಮಾನ್ಯವಾಗಿ ವ್ಯಕ್ತಿಗತ ಜನಪ್ರಿಯತೆಯಲ್ಲಿ ಮುಂದಿರುತ್ತಿದ್ದ ಕುಮಾರಸ್ವಾಮಿಯವರನ್ನು ಅವರು ಹಿಂದಿಕ್ಕಿರುವುದು ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ಕಂಡುಬರುತ್ತದೆ. ಕುರುಬ ಸಮುದಾಯದೊಂದಿಗೆ ಕೆಲವು ಶೋಷಿತ ಹಿಂದುಳಿದ ಸಮುದಾಯಗಳು ಸಿದ್ದರಾಮಯ್ಯನವರಲ್ಲೇ ತಮ್ಮ ಏಕೈಕ ನಾಯಕನನ್ನು ಕಂಡುಕೊಂಡಿದ್ದಾರೆ.
ಒಕ್ಕಲಿಗ ಜನಾಂಗಕ್ಕೆ ದೇವೇಗೌಡರ ನಂತರದ ನಾಯಕರೆಂದರೆ ಕುಮಾರಸ್ವಾಮಿಯೇ. ಇದಲ್ಲದೇ ಒಂದಷ್ಟು ಯುವಜನರ ನಡುವೆ ಮತ್ತು ಅವರ ಕಾಲದ ಕಾರ್ಯಕ್ರಮಗಳ ಮೂಲಕ ಸಂಪಾದಿಸಿದ ಜನಪ್ರಿಯತೆಯು ಅವರನ್ನು ಮೂರನೇ ದೊಡ್ಡ ನಾಯಕನನ್ನಾಗಿ ಇಂದಿಗೂ ಉಳಿಸಿದೆ.

ಆರೋಗ್ಯ

ಮೂವರಲ್ಲಿ ಯಡಿಯೂರಪ್ಪನವರೇ ಹಿರಿಯರು. ಬಿಜೆಪಿಯಲ್ಲಿ ಮಾರ್ಗದರ್ಶಕ ಮಂಡಳಿ ಸೇರಲು ಬೇಕಾದಷ್ಟು ವಯಸ್ಸು (75) ಅವರಿಗೆ ಆಗಿದೆ. ಆದರೆ, ಅನಾರೋಗ್ಯದ ಕಾರಣದಿಂದ ಕುಸಿದು ಕುಳಿತ ಸುದ್ದಿಯಿಲ್ಲ. ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವ ತಹತಹವೇ ಅವರಿಗೆ ಸಾಕಷ್ಟು ಎನರ್ಜಿ ಕೊಟ್ಟಿರುವಂತಿದೆ.
ಸಿದ್ದರಾಮಯ್ಯನವರಿಗೆ ಇದ್ದ ನಿದ್ರಾರೋಗ (ಸ್ಲೀಪ್ ಆಪ್ನಿಯಾ)ಕ್ಕೆ ಕಡೆಗೂ ಚಿಕಿತ್ಸೆ ತೆಗೆದುಕೊಂಡಿದ್ದಾರೆ. ಅದಲ್ಲದೇ ಅವರ ಕಾಲುನೋವು ಕೆಳಗೆ ಕೂರದಂತೆ ನಿರ್ಬಂಧಿಸಿದೆ. ಅದನ್ನು ಹೊರತುಪಡಿಸಿದರೆ ದೊಡ್ಡ ಆರೋಗ್ಯದ ತೊಂದರೆ ಇದ್ದಂತೆ ಕಾಣುತ್ತಿಲ್ಲ.
ಉಳಿದಿಬ್ಬರಿಗಿಂತ ವಯಸ್ಸಿನಲ್ಲಿ ಚಿಕ್ಕವರಾದ (59) ಕುಮಾರಸ್ವಾಮಿ ಉಳಿದಿಬ್ಬರಿಗಿಂತ ಕಡಿಮೆ ಆರೋಗ್ಯವನ್ನು ಹೊಂದಿರುವುದು ದುರಂತ. ಹೃದಯ ರೋಗ ಮಾತ್ರವಲ್ಲದೇ, ಈಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣ ಕೇಳುವಷ್ಟು ಎನರ್ಜಿಯಿಲ್ಲದೇ ದೈಹಿಕವಾಗಿ ದುರ್ಬಲವಾಗಿರುವುದು ಹತ್ತಿರದಿಂದ ನೋಡುವ ಯಾರಿಗೇ ಆದರೂ ಎದ್ದು ಕಾಣುತ್ತದೆ.

ಖಾಸಗಿ ಬದುಕು
ಸಿದ್ದರಾಮಯ್ಯನವರ ಪತ್ನಿಯ ಫೋಟೋ ಇದುವರೆಗೆ ನೋಡಿದವರೇ ಕಮ್ಮಿ. ಅಷ್ಟರಮಟ್ಟಿಗೆ ಅವರು ಸಾರ್ವಜನಿಕ ಜೀವನದಿಂದ ದೂರ. ಮಗ ರಾಕೇಶ್‍ಗಿದ್ದ ಚಟಗಳು ಮತ್ತು ಆತನ ಅಕಾಲಿಕ ಸಾವಿಗೆ ಕಾರಣವಾದ ಅಂಶಗಳ ಕುರಿತು ಒಂದಷ್ಟು ಪುಕಾರುಗಳಿವೆ. ರಾಜಕಾರಣದ ಆಕಾಂಕ್ಷೆಯೂ ಇದ್ದ ರಾಕೇಶ್ ಗೆಳೆಯರ ಬಳಗದ ಕುರಿತು ಅಷ್ಟೇನೂ ಒಳ್ಳೆಯ ಅಭಿಪ್ರಾಯಗಳಿಲ್ಲ. ಇನ್ನು ಅವರ ‘ಒಳ್ಳೆಯ ಮಗ’ನಾಗಿರುವ ಡಾ.ಯತೀಂದ್ರರನ್ನು ರಾಜಕಾರಣಕ್ಕೆ ಎಳೆದುತಂದು ವರುಣಾ ಕ್ಷೇತ್ರ ಬಿಟ್ಟುಕೊಟ್ಟಿದ್ದು ಅವರು ಈಚಿನ ವರ್ಷಗಳಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರವಾಗಿತ್ತು. ಇದನ್ನು ಹೊರತುಪಡಿಸಿದರೆ ಸಿದ್ದರಾಮಯ್ಯನವರ ಖಾಸಗಿ ಬದುಕಿನ ಕುರಿತು ತಕರಾರೆತ್ತಬಹುದಾದ ಸಂಗತಿಗಳು ಸಾರ್ವಜನಿಕ ವಲಯದಲ್ಲಿಲ್ಲ.

ಸಿದ್ದು ಪತ್ನಿ
ಯಡಿಯೂರಪ್ಪ ಪತ್ನಿ

ಯಡಿಯೂರಪ್ಪನವರ ಮಕ್ಕಳು ಮತ್ತು ಅಳಿಯ ಅವರೊಂದಿಗೆ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ರಾಘವೇಂದ್ರ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದರೆ, ವಿಜಯೇಂದ್ರ ಎಂಟ್ರಿ ಸ್ವಲ್ಪದರಲ್ಲೇ ಮಿಸ್ ಆಗಿದೆ. 2004ರಲ್ಲಿ ನಡೆದ ಅವರ ಪತ್ನಿ ಮೈತ್ರಾದೇವಿಯವರ ನಿಗೂಢ ಸಾವಿನ ಕುರಿತು ಕೆಲವು ಪುಕಾರುಗಳಿವೆ. ಅವರ ರಾಜಕೀಯ ಸಹೋದ್ಯೋಗಿಯೊಬ್ಬರ ಜೊತೆಗಿನ ಸಂಬಂಧದ ಕುರಿತು ವಿಪರೀತ ಗುಲ್ಲುಗಳಿವೆ. ಯಡಿಯೂರಪ್ಪನವರು ಇನ್ಯಾರ ಕುಟುಂಬ ರಾಜಕಾರಣದ ಕುರಿತೂ ಮಾತಾಡಲಾಗದಷ್ಟು ಸಮಸ್ಯೆ ಹೊಂದಿದ್ದಾರೆ.
ಕುಮಾರಸ್ವಾಮಿಯವರ ವ್ಯಕ್ತಿಗತ ಜೀವನದ ಸಮಸ್ಯೆಗಳು ಸಾಕಷ್ಟು ಜನಜನಿತವಾಗಿವೆ. ಅದರ ಬಹುತೇಕ ವಿವರಗಳು ಈಗಾಗಲೇ ಬಹಳ ಸಾರ್ವಜನಿಕವಾಗಿರುವುದರಿಂದ ಇನ್ನೊಮ್ಮೆ ದಾಖಲಿಸುವ ಅಗತ್ಯವಿಲ್ಲ.

ವ್ಯಕ್ತಿಗತ ನಡವಳಿಕೆಯ ಕುರಿತ ಆರೋಪಗಳು
ಯಡಿಯೂರಪ್ಪ: ಮುಂಗೋಪ, ಅಸಹನೆ, ವಿರೋಧಿಗಳನ್ನು ಸಹಿಸದಿರುವುದು, ಇತ್ತೀಚೆಗಂತೂ ನಗುವನ್ನೇ ಮರೆತಿರುವುದು.
ಸಿದ್ದರಾಮಯ್ಯ: ಉಡಾಫೆ, ಜೊತೆಗಿರುವವರನ್ನು ತಾನೇ ಮುಂದಾಗಿ ಮಾತಾಡಿಸದಿರುವುದು, ತನಗಾಗಿ ದುಡಿದವರಿಗೆ ಸ್ಥಾನಮಾನ ಕಲ್ಪಿಸಲು ಆಸಕ್ತಿ ತೋರದೇ ಇರುವುದು.
ಕುಮಾರಸ್ವಾಮಿ: ಫುಲ್‍ಟೈಂ ರಾಜಕಾರಣಿಗಿರಬೇಕಾದ ಬದ್ಧತೆ ಇಲ್ಲದಿರುವುದು, ಅಷ್ಟು ಸಭ್ಯರಲ್ಲದವರನ್ನು ವಿಪರೀತ ಹಚ್ಚಿಕೊಳ್ಳುವುದು, ಸ್ವಕೇಂದ್ರಿತ ಕಾರಣಗಳಿಗಾಗಿ ಮಿತ್ರರಿಂದ ದೂರವಾಗುವುದು.
ಯಾವುದೇ ಪೂರ್ವಗ್ರಹಗಳಿಲ್ಲದೇ ಪ್ರತಿಯೊಬ್ಬರ ಕುರಿತು ನೋಡೋಣವೆಂದುಕೊಂಡಾಗ ಸಿದ್ದರಾಮಯ್ಯನವರು ಮಿಕ್ಕ ಇಬ್ಬರಿಗಿಂತ ರಾಜ್ಯಕ್ಕೆ ಬೇಕಾದ ಜನನಾಯಕನಂತೆ ತೋರುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕೆ ಕಾರಣ ಬರೆದವರ ಅಥವಾ ಈ ಪತ್ರಿಕೆಯ ಒಲವು ಎಂದು ಯಾರಾದರೂ ಆರೋಪಿಸಬಹುದು. ವಾಸ್ತವದಲ್ಲಿ ಮೇಲೆ ಬಿಟ್ಟುಹೋಗಿರುವ ಇನ್ನೂ ಎಷ್ಟೋ ಅಂಶಗಳು ಮೂವರ ಬಗ್ಗೆಯೂ ಇವೆ. ಮೆಚ್ಚಿಕೊಳ್ಳಬಹುದಾದಂಥವು, ತಿರಸ್ಕರಿಸಬೇಕಾದಂಥವು. ಆದರೆ, ಅವೆಲ್ಲವನ್ನೂ ಜೊತೆಗಿಟ್ಟು ತೂಕ ಹಾಕುತ್ತಾ ಹೋದರೆ, ಸಿದ್ದರಾಮಯ್ಯನವರಿಗೂ ಉಳಿದಿಬ್ಬರಿಗೂ ಅಂತರ ಹೆಚ್ಚುತ್ತಲೇ ಹೋಗುತ್ತವೆ. ತಮಗೆಂಥ ನಾಯಕ ಬೇಕು ಎಂಬ ಅಂತಿಮ ತೀರ್ಮಾನವನ್ನು ಹೇಗೂ ರಾಜ್ಯದ ಜನತೆ ಸದ್ಯದಲ್ಲೇ ಮಾಡಲಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...