Homeಮುಖಪುಟಇಂದಿರಾ ಛಾಯೆಯ ಶರೀಫ್ ಸಾಹೇಬರು

ಇಂದಿರಾ ಛಾಯೆಯ ಶರೀಫ್ ಸಾಹೇಬರು

- Advertisement -
- Advertisement -

ವಾಸು ಎಚ್.ವಿ |

ಜಾಫರ್ ಶರೀಫರು ಹಲವು ಕಾರಣಗಳಿಂದ ಭಾರತದ ರಾಜಕಾರಣವು ನೆನಪಿಡಬೇಕಾದ ನಾಯಕ. ನಮ್ಮ ದೇಶದ ಪ್ರಜಾಪ್ರಭುತ್ವದ ಸೊಗಸು, ಸ್ವಾರಸ್ಯ, ತಂತ್ರ-ಕುತಂತ್ರ, ಸಾಧ್ಯತೆ ಮತ್ತು ಅವನತಿ ಎಲ್ಲಕ್ಕೂ ಅವರೊಂದು ದೃಷ್ಟಾಂತ. ಈ ದೇಶದ ರಾಜಕಾರಣವು ದೊಡ್ಡ ತಿರುವು ತೆಗೆದುಕೊಂಡ ಕಾಲದಲ್ಲೇ (1991ರಿಂದ 1995) ತಮ್ಮ ರಾಜಕೀಯ ಬದುಕಿನ ಎತ್ತರದ ಸ್ಥಾನದಲ್ಲಿದ್ದ ಅವರು, ಅಲ್ಲಿಂದ ಕೆಳಗಿಳಿಯಲಾರಂಭಿಸಿ ಮತ್ತೆ ಮೇಲೇಳಲೇ ಇಲ್ಲ. ಈ ಅವಧಿಯು ಭಾರತದ ಮುಸ್ಲಿಮರು ರಾಜಕಾರಣದಲ್ಲಿ ವಹಿಸಬಹುದಾದ ಪಾತ್ರದಲ್ಲೂ ದೊಡ್ಡ ಬದಲಾವಣೆಯನ್ನು ತಂದಿತ್ತು.

ಜಾಫರ್ ಶರೀಫರು ಅತ್ಯಂತ ಎತ್ತರಕ್ಕೇರಿದ್ದು ಪಿ.ವಿ.ನರಸಿಂಹರಾಯರ ಕಾಲದಲ್ಲಾದರೂ ಅವರು ಇಂದಿರಾ ಗಾಂಧಿ ಕಾಲದ ಪೊಲಿಟಿಕಲ್ ಪ್ರಾಡಕ್ಟ್. ಸಂಪೂರ್ಣ ನಿಜವಾಗಿರದಿದ್ದರೂ, ಅರ್ಧಸತ್ಯವಾದರೂ ಇದ್ದ ಒಂದು ದಂತಕಥೆ ಜಾಫರ್ ಶರೀಫರ ಬಗ್ಗೆ ಹರಿದಾಡುತ್ತಿತ್ತು. ಇಂಡಿಕೇಟ್ (ಇಂದಿರಾ ಗುಂಪು) ಮತ್ತು ಸಿಂಡಿಕೇಟ್ (ನಿಜಲಿಂಗಪ್ಪ, ಮೊರಾರ್ಜಿ ದೇಸಾಯಿ, ಕಾಮರಾಜ್ ಮತ್ತಿತರ ದೊಡ್ಡ ನಾಯಕರ ಗುಂಪು) ನಡುವೆ ವೈರುಧ್ಯ ತಾರಕಕ್ಕೇರಿದ್ದು ’60ರ ದಶಕದ ಕೊನೆಯ ಭಾಗದಲ್ಲಿ. ನೀಲಂ ಸಂಜೀವರೆಡ್ಡಿಯವರನ್ನು ರಾಷ್ಟ್ರಪತಿ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಪಕ್ಷದ ಮೇಲೆ ಹಿಡಿತ ಹೊಂದಿದ್ದ ಸಿಂಡಿಕೇಟ್ ಅಧಿಕೃತವಾಗಿ ಘೋಷಿಸಿತ್ತು. ವಿ.ವಿ.ಗಿರಿಯವರನ್ನು ಕಣಕ್ಕಿಳಿಸಿದ ಇಂದಿರಾಗಾಂಧಿ, ‘ಆತ್ಮಸಾಕ್ಷಿ ಮತ’ ಚಲಾಯಿಸುವಂತೆ ಕರೆಯಿತ್ತಿದ್ದರು. ಬಂಡಾಯ ಅಭ್ಯರ್ಥಿ ಗಿರಿಯವರು ರಾಷ್ಟ್ರಪತಿಯಾಗಿ ಆಯ್ಕೆಯಾದರು. ಕಾಂಗ್ರೆಸ್ ಹೋಳಾಗದೇ ಬೇರೆ ದಾರಿಯಿರಲಿಲ್ಲ.

ನಿಜಲಿಂಗಪ್ಪ

ಹಿರಿಯ ನಾಯಕರು ಬೆಂಗಳೂರಿನ ಲಾಲ್‍ಬಾಗಿನ ಗಾಜಿನ ಮನೆಯಲ್ಲಿ ಅಧಿವೇಶನವೊಂದನ್ನು ಕರೆದು ಪ್ರಧಾನಿ ಇಂದಿರಾಗಾಂಧಿಯವರನ್ನು ಕಾಂಗ್ರೆಸ್‍ನಿಂದ ಉಚ್ಛಾಟಿಸಲು ಯೋಜಿಸಿರುತ್ತಾರೆ. ನಿಜಲಿಂಗಪ್ಪನವರ ಜೊತೆಗಿದ್ದು ಇದನ್ನು ಕೇಳಿಸಿಕೊಂಡಿದ್ದ ಜಾಫರ್ ಶರೀಫ್, ಅದನ್ನು ಇಂದಿರಾಗಾಂಧಿಯವರಿಗೆ ತಿಳಿಸುತ್ತಾರೆ. ಅಧಿವೇಶನಕ್ಕೇ ಹೋಗದ ಇಂದಿರಾಗಾಂಧಿ ತನ್ನದೇ ಪ್ರತ್ಯೇಕ ಕಾಂಗ್ರೆಸ್ಸನ್ನು ಘೋಷಿಸುತ್ತಾರೆ, ಕಾಂಗ್ರೆಸ್ ಇಂದಿರಾ, ಕಾಂಗ್ರೆಸ್ ಐ. ಅಲ್ಲಿಂದಾಚೆಗೆ ಜಾಫರ್ ಶರೀಫರ ಸ್ಥಾನಮಾನ ಏರುತ್ತಾ ಹೋಗುತ್ತದೆ. ಶರೀಫರು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯ ಸಹಾಯಕರಾಗಿದ್ದಂತೂ ನಿಜ. ನಿಜಲಿಂಗಪ್ಪನವರ ಕಡೆಯಿಂದ ಇಂದಿರಾರ ಕಡೆಗೆ ತಮ್ಮ ನಿಷ್ಠೆ ಬದಲಿಸಿದ್ದೂ ನಿಜ. ಉಳಿದದ್ದು ನಿಜವೂ ಇರಬಹುದು, ಕೇವಲ ದಂತಕತೆಯೂ ಇರಬಹುದು.

ಆದರೆ, ಅಲ್ಲಿಂದಾಚೆಗೆ ಚಳ್ಳಕೆರೆಯ ಸಾಮಾನ್ಯ ಕುಟುಂಬದ ಕರೀಂಸಾಬರ ಮಗ ಸಿ.ಕೆ.ಜಾಫರ್‍ಷರೀಫ್ ಮೇಲೇರುತ್ತಾ ಹೋಗುತ್ತಾರೆ. ಕಾಂಗ್ರೆಸ್ ಹೋಳಾದ ನಂತರ ನಡೆದ 1971ರ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಎಂಪಿಯಾದರೆ, ಒಟ್ಟು ಏಳು ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾರೆ. ಮುಸ್ಲಿಂ ಬಾಹುಳ್ಯವಿದ್ದರೂ, ಮುಸ್ಲಿಂ ಬಹುಸಂಖ್ಯಾತರೇನೂ ಇರದ ಕ್ಷೇತ್ರ ಅದಾಗಿತ್ತು. ಗ್ರಾಮೀಣ ಭಾಗದ ತಾಲೂಕುಗಳನ್ನೂ ಒಳಗೊಂಡಿದ್ದ ಅಲ್ಲಿ ಷರೀಫ್ ಸಾಹೇಬರು 5 ಚುನಾವಣೆಗಳಲ್ಲಿ ಸತತವಾಗಿ ಗೆದ್ದಿದ್ದರು. 1996ರಲ್ಲಿ ಮಾತ್ರ ಅವರಿಗೆ ಟಿಕೆಟ್ ನಿರಾಕರಣೆಯಾಗಿತ್ತು. 2004ರಲ್ಲಿ ಹಳೆಯ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಸೋತರು. ಆಗ ಜನತಾದಳದಿಂದ ಸ್ಪರ್ಧಿಸಿದ್ದ ಸಿ.ಎಂ.ಇಬ್ರಾಹಿಂ, 2 ಲಕ್ಷಕ್ಕೂ ಹೆಚ್ಚು ಮತ ತೆಗೆದುಕೊಂಡಿದ್ದರಿಂದ ಇವರಿಗೆ ಸೋಲಾಗಿ, ಬಿಜೆಪಿಯ ಸಾಂಗ್ಲಿಯಾನಾ ಗೆದ್ದಿದ್ದರು.

ವಿಪರ್ಯಾಸವೆಂದರೆ, ಅಮೆರಿಕದ ಜೊತೆಗೆ ಅಣುಒಪ್ಪಂದಕ್ಕೆ ಮುಂದಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ 1 ಸರ್ಕಾರಕ್ಕೆ ಬಿಜೆಪಿ ಎಂಪಿ ಸಾಂಗ್ಲಿಯಾನಾ ಅವರು ಬೆಂಬಲ ನೀಡಿ ಸರ್ಕಾರವನ್ನು ಉಳಿಸಿದರು. ಆಗ ನೀಡಿದ್ದ ಮಾತಿನಂತೆ 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‍ಅನ್ನು ಸೋನಿಯಾಗಾಂಧಿ ಅವರಿಗೇ ನೀಡಿದರು. ಅದೂ ಅವರು ಬಯಸಿದಂತೆ, ಹೊಸದಾಗಿ ರೂಪುಗೊಂಡಿದ್ದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ. ಅಲ್ಲೇ ಹೆಚ್ಚು ಮುಸ್ಲಿಂ ಮತಗಳೂ ಇದ್ದವಾದ್ದರಿಂದ ಜಾಫರ್ ಷರೀಫರೂ ಅಲ್ಲೇ ಟಿಕೆಟ್ ಕೇಳಿದ್ದರು. ವಚನಭ್ರಷ್ಟರಾಗದ ಸೋನಿಯಾ, ಇವರಿಗೆ ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸಲು ಹೇಳಿದರು. ಷರೀಫರು ಅಲ್ಲಿ ಸ್ಪರ್ಧಿಸಿ ಸೋತರು. ಅದೇ ಅವರ ಕಡೆಯ ಚುನಾವಣೆಯಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡೂ ಚುನಾವಣೆಗಳಲ್ಲಿ ಷರೀಫ್ ಸಾಹೇಬರು ಎಂಪಿಯಾಗಿರಲಿಲ್ಲ.

ಚಳ್ಳಕೆರೆಯು ಅಪೂರ್ವವಾದ ಹಿಂದೂ ಮುಸ್ಲಿಂ ಐಕ್ಯತೆಯ ಜಾಗ. ಅದನ್ನು ಐಕ್ಯತೆ ಎಂದು ಕರೆಯುವುದೇ ವಿಪರ್ಯಾಸ. ಏಕೆಂದರೆ, ಅದೊಂದು ಸಹಜ ಸಾಮರಸ್ಯದ ಬದುಕು. ಚಳ್ಳಕೆರೆ ತಾಲೂಕಿನ ಥಳಕಿನ ಪಕ್ಕದ ಚಿಕ್ಕಮ್ಮನಹಳ್ಳಿ ದರ್ಗಾದ ಗುರುವನ್ನು ಇಂದಿಗೂ ಹಿಂದೂ-ಮುಸ್ಲಿಮರಿಬ್ಬರೂ ಆರಾಧಿಸುತ್ತಾರೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದ ಷರೀಫರು, ಹಿಂದೂಗಳೊಂದಿಗೆ ಸಹಜವಾಗಿ ಬೆರೆಯುವ ಹಳ್ಳಿ ಮುಸ್ಲಿಂ ಗುಣವನ್ನು ಕಡೆಯವರೆಗೂ ಇಟ್ಟುಕೊಂಡಿದ್ದರು. ರಾಜಕಾರಣದ ವರಸೆಗೋಸ್ಕರ ರಾಮನಗರದ ಕೋಮುಗಲಭೆಯೊಂದಕ್ಕೂ ಕಾರಣರಾಗಿದ್ದರೆನ್ನುವ ಅಪಖ್ಯಾತಿ ಅವರಿಗಿದ್ದರೂ, ಅದು ಆ ಕಾಲದ ಕಾಂಗ್ರೆಸ್‍ನ ದುಷ್ಟತನದ ಭಾಗವಾಗಿ ಅವರು ಆಡಿದ ಆಟವಾಗಿತ್ತು.

ಅವರ ಈ ಸಹಜ ಸೆಕ್ಯುಲರ್ ಬುದ್ಧಿಯು, ದೇಶಾದ್ಯಂತ ಬೆಳೆಯುತ್ತಿದ್ದ ಕೋಮುವಾದವನ್ನು ಎದುರಿಸಲು ಯಾವ ರೀತಿಯಲ್ಲೂ ಸಹಾಯಕ್ಕೆ ಬರಲಿಲ್ಲ. ಆ ವಿಚಾರದಲ್ಲಿ, ಜಾಫರ್ ಷರೀಫರಷ್ಟು ಒಳ್ಳೆಯ ಗುಣಗಳಿರದ ಸಿ.ಎಂ.ಇಬ್ರಾಹಿಂ ಅವರೇ ಮೇಲು ಎಂದು ಹೇಳಬಹುದು. ಹುಬ್ಬಳ್ಳಿ ಈದ್ಗಾ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಇಂದಿಗೂ ದೊಡ್ಡ ಸಂಖ್ಯೆಯ ಹಿಂದೂಗಳನ್ನು ಭಾಷಣದ ಮೂಲಕ ಸೆಳೆಯಬಲ್ಲ ಸಿ.ಎಂ.ಇಬ್ರಾಹಿಂ ಕೋಮುವಾದಿಗಳನ್ನು ವಿಶಿಷ್ಟ ರೀತಿಯಲ್ಲಿ ಎದುರಿಸುವ ಮಾತಿನ ಪಟ್ಟುಗಳನ್ನು ಹಾಕುತ್ತಾರೆ. ಹಿಂದಿನ ಕಾಲದ ಸೆಕ್ಯುಲರಿಸಂ ಜಾಫರ್‍ಷರೀಫರನ್ನು ಎಲ್ಲಿಗೆ ಒಯ್ದಿತು ಎಂಬುದಕ್ಕೆ ಒಂದು ಘಟನೆ ಸಾಕ್ಷಿಯಾಗಿದೆ. ಷರೀಫರು ಸೋತ ಹೊತ್ತಿನಲ್ಲಿ ಅವರ ಕ್ಷೇತ್ರಕ್ಕೆ ಸೇರಿದ ಒಂದು ಜಾಗದಲ್ಲಿ ಆರೆಸ್ಸೆಸ್ ರಾಷ್ಟ್ರೀಯ ಮಟ್ಟದ ದೊಡ್ಡ ಸಮಾವೇಶ ನಡೆಸಿ ಮೆರವಣಿಗೆ ಯೋಜಿಸಿತು. ಅದರ ಬಗ್ಗೆ ಮಾತಾಡುತ್ತಾ, ಆರೆಸ್ಸೆಸ್‍ನವರ ಮೆರವಣಿಗೆ ವಿಚಾರದಲ್ಲಿ ಅವರಿಗೇ ತಾನು ಎಂತಹ ವಾರ್ನಿಂಗ್ ಕೊಟ್ಟೆನೆಂದು ಹೆಮ್ಮೆಯಿಂದ ಬೀಗುತ್ತಾ ಹೇಳಿಕೊಳ್ಳುತ್ತಿದ್ದರು. ಆದರೆ, ಅದೇ ಷರೀಫ್ ಸಾಹೇಬರು, ಆ ಮೆರವಣಿಗೆಯನ್ನು ಸ್ವಾಗತಿಸಿ ಪಾನಕದ ವ್ಯವಸ್ಥೆಯನ್ನೂ ಮಾಡಿದ್ದರು. ಅವರಿಗೆ ಈ ಪಾನಕ ವಿತರಣೆಯು ಅಷ್ಟೊಂದು ಸಮಸ್ಯೆಯೆಂದು ಅನಿಸಿರಲಿಲ್ಲ. ಈ ರೀತಿಯ ಸೌಜನ್ಯವು ಸಂಘಪರಿವಾರದ ದುಷ್ಟ ಹುನ್ನಾರವನ್ನು ಯಾವ ರೀತಿಯಲ್ಲೂ ನ್ಯೂಟ್ರಲೈಸ್ ಮಾಡುವುದಿಲ್ಲ, ಬದಲಿಗೆ ಆರೆಸ್ಸೆಸ್‍ಗೇ ಪುಷ್ಟಿ ಕೊಟ್ಟು ಬೆಳೆಸುತ್ತದೆಂಬ ಅರಿವು ಅವರಿಗೆ ಇರಲಿಲ್ಲ; ಬಹುಶಃ ಬೇಕೂ ಇರಲಿಲ್ಲ. ಹಾಗಾಗಿಯೇ ಅವರದ್ದೇ ಕ್ಷೇತ್ರದಲ್ಲಿ ನಿಧಾನಕ್ಕೆ ಬಿಜೆಪಿಯ ಮತಪ್ರಮಾಣ (ಎರಡು ಚುನಾವಣೆಯಲ್ಲಿ ಅದು ಜೆಡಿಯು ಮತ್ತು ಲೋಕಶಕ್ತಿ ಅಭ್ಯರ್ಥಿಗೂ ಬಿದ್ದಿತ್ತೆಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು) ಏರುತ್ತಲೇ ಹೋಗಿ, 2004ರಿಂದ ಇಲ್ಲಿಯವರೆಗೆ ಗೆಲ್ಲುತ್ತಾ ಬಂದಿತು.

ತೀರಾ ಇತ್ತೀಚೆಗೆ ಅವರು ಮೋಹನ್ ಭಾಗವತ್ ರಾಷ್ಟ್ರಪತಿಯಾಗಬೇಕು ಎಂದಾಗ ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೆಂದು ಕೆಲವರು ಗೊಂದಲಕ್ಕೆ ಬಿದ್ದಿದ್ದರು. ವಾಸ್ತವದಲ್ಲಿ ಅದು ವ್ಯಂಗ್ಯವಾಗಿತ್ತೋ, ಭೋಳೇತನದಿಂದ ಹೇಳಿದ್ದರೋ ಯಾರಿಗೂ ಗೊತ್ತಾಗಲಿಲ್ಲ. ಅಥವಾ ಕಾಂಗ್ರೆಸ್ ನಾಯಕರಿಗೆ ಕೊಟ್ಟ ಎಚ್ಚರಿಕೆಯೂ ಆಗಿರಬಹುದು. ವೀರೇಂದ್ರ ಪಾಟೀಲರನ್ನು ಪಟ್ಟದಿಂದ ಕೆಳಗಿಳಿಸಲೆಂದೇ ರಾಮನಗರದ ಕೋಮುಗಲಭೆಗೆ ಪ್ರಚೋದನೆ ಕೊಟ್ಟಿದ್ದರೆಂಬ ಆರೋಪವನ್ನು ಹೊರತುಪಡಿಸಿದರೆ ತೀರಾ ದುಷ್ಟತನವಾಗಲೀ, ಸಿರಿವಂತರಿಗೇ ಸಹಾಯ ಮಾಡುವ ರೀತಿಯ ರಾಜಕಾರಣವಾಗಲೀ ಅವರಲ್ಲಿರಲಿಲ್ಲ.

ರೈಲ್ವೇ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಒಟ್ಟು 6000 ಕಿ.ಮೀ. ಗೇಜ್ ಪರಿವರ್ತನೆಯಲ್ಲಿ 1000 ಕಿ.ಮೀ ಕರ್ನಾಟಕದಲ್ಲೇ ಮಾಡಿದ್ದರು. ಅವರಿಗಿಂತ ಮುಂಚೆ ಕರ್ನಾಟಕದ ಇನ್ನೂ ಇಬ್ಬರು ರೈಲ್ವೇ ಮಂತ್ರಿಗಳು ಆಗಿ ಹೋಗಿದ್ದರೂ, ರಾಜ್ಯವು ರೈಲ್ವೇ ಅಭಿವೃದ್ಧಿಯಲ್ಲಿ ಹಿಂದುಳಿದೇ ಇತ್ತು. ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಷರೀಫ್ ಸಾಹೇಬರಿಂದಾಯಿತು. ಇದಕ್ಕೂ ಮುಂಚೆಯೇ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದ ಅವರ ವಿರುದ್ಧ ರೈಲ್ವೇ ಕಾರ್ಮಿಕರ ನಾಯಕ ಜಾರ್ಜ್ ಫರ್ನಾಂಡೀಸ್ ಒಮ್ಮೆ ಸ್ಪರ್ಧಿಸಿದ್ದರು. ಇಂದಿರಾ ಹತ್ಯೆಯ ನಂತರದ ಅನುಕಂಪದ ಅಲೆಯ ಹೊರತಾಗಿಯೂ ಕೇವಲ 41,000 ಲೀಡ್‍ನಲ್ಲಿ ಷರೀಫರು ಗೆದ್ದಿದ್ದರು.

2004ರ ಹೊತ್ತಿಗೆ ಬೆಂಗಳೂರು ಸೆಂಟ್ರಲ್ ಥರದ ಕ್ಷೇತ್ರ ಬಿಟ್ಟರೆ ಬೇರೆ ಕಡೆ ಮುಸ್ಲಿಮರೊಬ್ಬರು ಗೆಲ್ಲುವ ಸಾಧ್ಯತೆಯೂ ಇರಲಿಲ್ಲ. ಜಾಫರ್ ಷರೀಫರೂ ಅಷ್ಟು ಚರಿಷ್ಮಾ ಉಳಿಸಿಕೊಂಡಿರಲಿಲ್ಲ. ಜಮೀರ್ ಅಹಮದ್ ಥರದವರು ಮುಸ್ಲಿಮರ ನಾಯಕರಾದ ನಂತರ ಹಿರಿಯ ತಲೆಮಾರಿನವರಿಗೆ ಜಾಗವೂ ಇರಲಿಲ್ಲ. ಸಂಕ್ರಮಣ ಕಾಲಘಟ್ಟದಲ್ಲಿ ಬದುಕಿದ ಈ ಮುಸ್ಲಿಂ ನಾಯಕರ ರಾಜಕೀಯ ಉತ್ಕರ್ಷದ ಕಾಲದಲ್ಲೇ ಬಾಬ್ರಿ ಮಸೀದಿ ಧ್ವಂಸವಾಯಿತು. ಆಗ ಕೇಂದ್ರ ಸಂಪುಟದ ಪ್ರಭಾವಿ ಮಂತ್ರಿಯಾಗಿದ್ದ ಷರೀಫರಿಗೆ ನಿಜವಾಗಿಯೂ ಏನೆನ್ನಿಸಿತು ಎಂಬುದು ಎಲ್ಲಿಯಾದರೂ ದಾಖಲಾಗಿದ್ದರೆ, ಭಾರತದ ರಾಜಕಾರಣವನ್ನು ಅರ್ಥಮಾಡಿಕೊಳ್ಳಲು ಮತ್ತು ಮುಸ್ಲಿಂ ರಾಜಕಾರಣದ ದುರಂತವನ್ನು ತಿಳಿದುಕೊಳ್ಳಲು ನೆರವಿಗೆ ಬರುತ್ತದೆ.

2009ರ ನಂತದಲ್ಲಿ ಷರೀಫರು ಅಳಿಯನಿಗೆ, ಮೊಮ್ಮಗನಿಗೆ ಟಿಕೆಟ್ ಕೇಳುವಷ್ಟಕ್ಕೆ ಸೀಮಿತವಾದರು. ಆದರೆ ಅವರೂ ಸೋಲುವ ಅಭ್ಯರ್ಥಿಗಳಾಗಿದ್ದರು. ಒಮ್ಮೆ ಹಟ ಮಾಡಿ ಹೆಬ್ಬಾಳ ಕ್ಷೇತ್ರದ ಉಪಚುನಾವಣೆಯಲ್ಲಿ ಮೊಮ್ಮಗನಿಗೆ ಟಿಕೆಟ್ ಗಿಟ್ಟಿಸಿಕೊಂಡರಾದರೂ, 40 ಸಾವಿರ ಮತಗಳ ಅಂತರದಿಂದ ಆತ ಸೋಲಬೇಕಾಯಿತು. ಅದೇ ಕ್ಷೇತ್ರದಲ್ಲಿ ಈ ಸಾರಿ ಬೈರತಿ ಸುರೇಶ್ ಕಾಂಗ್ರೆಸ್‍ನಿಂದ ಭರ್ಜರಿ ಜಯ ಗಳಿಸಿದ್ದಾರೆ. ಜಮೀರ್ ಅಹಮದ್, ಬೈರತಿ ಸುರೇಶ್ ಲೆವೆಲ್ಲಿನ ರಾಜಕಾರಣದಲ್ಲಿ ಹಳೆಯ ರಾಜಕಾರಣಿ ಜಾಫರ್ ಷರೀಫರು ಉಳಿಯುವುದು ಸಾಧ್ಯವಿರಲಿಲ್ಲ.

ಚುನಾವಣೆಗೆ ಮುಂಚೆ ದೇವೇಗೌಡರನ್ನು ಭೇಟಿ ಮಾಡಿ, ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಪ್ರಯತ್ನವನ್ನು ಮಾಡಿದರಾದರೂ, ಆ ಹೊತ್ತಿಗೆ ಇಕ್ಕಟ್ಟಿಗೆ ಸಿಲುಕಿಸುವ ಶಕ್ತಿಯನ್ನೂ ಅವರು ಕಳೆದುಕೊಂಡಿದ್ದರು. ಮೇಲಾಗಿ ಮುಸ್ಲಿಮರಿಗೆ ಕಾಂಗ್ರೆಸ್ ಮಾತ್ರ ಗಟ್ಟಿ ಎನ್ನುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಜಾಫರ್ ಷರೀಫರಂತಹ ನಾಯಕರು ದೇಶದ ರಾಜಕಾರಣದಲ್ಲಿ ಹೋಗಲಿ, ಕಾಂಗ್ರೆಸ್ಸಿನಲ್ಲೂ ಹೆಚ್ಚಿನ ಸ್ಥಾನ ಪಡೆದುಕೊಳ್ಳದಿರಲು ಇದೂ ಒಂದು ಕಾರಣವಾಗಿದೆ. ಜಾಫರ್ ಷರೀಫರು ಮುಖ್ಯಮಂತ್ರಿಯಾಗುವ ಸಾಧ್ಯತೆ ಎಂದಾದರೂ ಇತ್ತೆಂದು ಹೇಳುವುದು ಕಷ್ಟ. ಭಾರತ ಮತ್ತು ಕರ್ನಾಟಕವು ಅಷ್ಟೊಂದು ಸೆಕ್ಯುಲರ್‍ಆಗಿ ಎಂದೂ ಇರಲಿಲ್ಲವೆನಿಸುತ್ತದೆ. ಈಗಂತೂ, ಯುವತಲೆಮಾರಿನ ರಾಜಕಾರಣಿ ರಿಜ್ವಾನ್ ಅರ್ಷದ್ ಹೇಳುವಂತೆ ಇಂದು ಮುಸ್ಲಿಮರು ಸಮಾನತೆ ಮತ್ತು ಹಕ್ಕಿಗಿಂತಲೂ ಅಮನ್ (ಶಾಂತಿ)ಯನ್ನಷ್ಟೇ ಬಯಸುವ ಸ್ಥಿತಿಗೆ ದೂಡಲ್ಪಟ್ಟಿದ್ದಾರೆ.

ಸಂಕ್ರಮಣ ಘಟ್ಟದಲ್ಲಿ ರಾಜಕಾರಣ ಮಾಡುತ್ತಿದ್ದ ನಾಯಕರು ಮುಸ್ಲಿಂ ಸಮುದಾಯದ ದಿಕ್ಕನ್ನು ಸರಿಯಾಗಿ ನಿರ್ದೇಶಿಸಿರದ ಕಾರಣಕ್ಕೂ ಈ ಸ್ಥಿತಿ ಬಂದಿದೆ. ಅದು ಜಾಫರ್‍ಷರೀಫರ ಸೋಲು ಎಂಬುದಕ್ಕಿಂತ, ಮುಸ್ಲಿಂ ಮತಗಳನ್ನು ನೆಚ್ಚಿಕೊಂಡು ರಾಜಕಾರಣ ಮಾಡಿದ ಕಾಂಗ್ರೆಸ್ ಪಕ್ಷದ ಸೋಲೂ ಹೌದು. ರಾಷ್ಟ್ರಮಟ್ಟದ ವರ್ಚಸ್ಸನ್ನು ಹೊಂದಿದ್ದ ಸೆಕ್ಯುಲರ್ ಬಾಳ್ವೆಯ ಹಿನ್ನೆಲೆಯ ಷರೀಫರನ್ನು ಬೇರೆ ರೀತಿಯಲ್ಲಿ ರೂಪಿಸಿ, ತೊಡಗಿಸುವ ನಾಯಕರೂ ಅಲ್ಲಿಯೂ ಇರಲಿಲ್ಲ. ಹಾಗಾಗಿ ಜನಾಬ್ ಸಿ.ಕೆ.ಜಾಫರ್‍ಷರೀಫ್‍ರು ವಹಿಸಬಹುದಾಗಿದ್ದ ಪಾತ್ರವೂ ಸೀಮಿತವಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...