Homeಮುಖಪುಟಪ್ರಶಾಂತ್ ಭೂಷಣ್ ಸಂದರ್ಶನ : "ಮೋದಿ ಮತ್ತು ಬಿಜೆಪಿಯದು ಸೈದ್ಧಾಂತಿಕ ಸರ್ವಾಧಿಕಾರ"

ಪ್ರಶಾಂತ್ ಭೂಷಣ್ ಸಂದರ್ಶನ : “ಮೋದಿ ಮತ್ತು ಬಿಜೆಪಿಯದು ಸೈದ್ಧಾಂತಿಕ ಸರ್ವಾಧಿಕಾರ”

- Advertisement -
ಸಂದರ್ಶನ: ದೊಡ್ಡಿಪಾಳ್ಯ ನರಸಿಂಹಮೂರ್ತಿ |
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೋಮುವಾದ, ಸರ್ವಾಧಿಕಾರ ಮತ್ತು ಹಗರಣಗಳ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧದ ದನಿ ಹೊರಡಿಸುತ್ತಾ ಸರ್ವೋಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನೂ ಹೂಡಿ ಹೋರಾಡುತ್ತಿರುವ ಸ್ವರಾಜ್ ಇಂಡಿಯಾದ ಪ್ರಶಾಂತ್ ಭೂಷಣ್‍ರ ಜೊತೆ ಪತ್ರಿಕೆ ನಡೆಸಿದ ಸಂದರ್ಶನ ಇಲ್ಲಿದೆ.
* * * *
ದೇಶದ ಅರ್ಥ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರಿ ಬ್ಯಾಂಕುಗಳ ಎನ್‍ಪಿಎ ಬಿಕ್ಕಟ್ಟು ತೀವ್ರಗೊಂಡಿದೆ. ಈ ಬಗ್ಗೆ ತಾವು ಕಾನೂನು ಹೋರಾಟ ನಡೆಸಿದ್ದೀರಿ. ಈ ಬಿಕ್ಕಟ್ಟು ಇಷ್ಟೊಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು ಹೇಗೆ ?
90ರ ದಶಕದಲ್ಲೇ ಈ ಸಮಸ್ಯೆಯ ಬಗ್ಗೆ ಒಂದು ಪಿಐಎಲ್ ದಾಖಲಿಸಿದ್ದೆವು. ಆಗ ಬ್ಯಾಂಕುಗಳು ಮತ್ತು ರಿಜರ್ವ್ ಬ್ಯಾಂಕ್ ಹೇಳಿದ್ದು ಈ ಸಮಸ್ಯೆ ಸಂಪೂರ್ಣ ನಿಯಂತ್ರಣದಲ್ಲಿದೆ, ನ್ಯಾಯಾಲಯ ತಲೆಹಾಕಬೇಕಾದ ಅವಶ್ಯಕತೆಯಿಲ್ಲ, ಅಂತಾ. ಆಗಿನ ಹೋರಾಟದ ಫಲವಾಗಿ ‘ವಿಲ್‍ಫುಲ್ ಡಿಫಾಲ್ಟರ್ (ಉದ್ದೇಶಪೂರ್ವಕ ಸುಸ್ತಿದಾರರು) ಎಂಬ ಒಂದು ಹೊಸ ಅಂಶದ ನಿರೂಪಣೆಯಾಯ್ತು. ಈ ಪಟ್ಟಿಯಲ್ಲಿ ಗುರುತಿಸಲ್ಪಟ್ಟವರಿಗೆ ಹೊಸ ಸಾಲಗಳನ್ನು ಕೊಡುವುದನ್ನು ನಿರ್ಬಂಧಿಸಬೇಕೆಂದು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂಬ ನಿಯಮ ರೂಪು ತಳೆಯಿತು.
ನಂತರದ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಾ ಸಾಗಿದೆ. ವಿಲ್‍ಫುಲ್ ಡಿಫಾಲ್ಟರ್ಸ್ ಪಟ್ಟಿಯಲ್ಲಿದ್ದವರಿಗೂ ಸಾವಿರಾರು ಕೋಟಿ ಸಾಲ ಮುಂಜೂರು ಮಾಡಲಾಗಿದೆ. ಪುನರ್‍ರಚನೆ(ಸಿಡಿಆರ್) ಹೆಸರಿನಲ್ಲಿ ಎನ್‍ಪಿಎ ಪಟ್ಟಿಯಲ್ಲಿದ್ದವರ ಸಾಲಗಳನ್ನು ಮುಚ್ಚಿಹಾಕಲಾಗುತ್ತಿದೆ. ಬಡ್ಡಿ ಮನ್ನಾ ಮಾಡುವ, ಸಾಲದ ತೀರುವಳಿ ಅವಧಿಯನ್ನು 25 ವರ್ಷಗಳವರೆಗೂ ವಿಸ್ತರಿಸುವ ಅನೇಕ ವಂಚಕ ವಿಧಾನಗಳ ಮೂಲಕ ಸಾರ್ವಜನಿಕರ ಹಣವನ್ನು ಕಬಳಿಸಲಾಗುತ್ತಿದೆ. ಅಷ್ಟೇ ಏಕೆ? ಕ್ರೋನಿ ಬಂಡವಾಳಿಗರ ಲಕ್ಷಾಂತರ ಕೋಟಿ ಸಾಲಗಳನ್ನು ಮನ್ನಾ ಮಾಡಲಾಗಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಸಮಸ್ಯೆ ಹಲವು ಪಟ್ಟು ಹೆಚ್ಚಾಗಿದೆ. ಆಗ ಸುಮಾರು 3 ಲಕ್ಷ ಕೋಟಿಯಷ್ಟಿದ್ದ ಎನ್‍ಪಿಎ ಮೊತ್ತ ಈಗ 10 ಲಕ್ಷ ಕೋಟಿಯಷ್ಟಾಗಿದೆ.
ಸ್ವರಾಜ್ ಅಭಿಯಾನ್ ಸಂಘಟನೆಯಿಂದ ನಾವು ಈ ಸಮಸ್ಯೆಯನ್ನು ಅಧ್ಯಯನ ಮಾಡಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸುಪ್ರಿಂಕೋರ್ಟ್‍ನಲ್ಲಿ ಪಿಐಎಲ್ ದಾಖಲಿಸಿದೆವು. ಬ್ಯಾಂಕ್‍ಗಳಲ್ಲಿರುವುದು ಸಾರ್ವಜನಿಕರ ಹಣ, ಸಾರ್ವಜನಿಕರಿಗೆ ಅದರ ಲೆಕ್ಕ ಕೊಡಬೇಕಾದ್ದು ಬ್ಯಾಂಕುಗಳ ಜವಾಬ್ದಾರಿ. ಆದ್ದರಿಂದ ಕೋಟ್ಯಾಂತರ ಸಾಲ ಪಡೆದು ಮರುಪಾವತಿ ಮಾಡದೇ ಇರುವ ಬಾಕಿದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿದೆವು. 500 ಕೋಟಿಗಳಿಗೂ ಹೆಚ್ಚಿನ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಕೊಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಕೋರ್ಟ್ ಆದೇಶದಂತೆ ಆರ್‍ಬಿಐ ಮುಚ್ಚಿದ ಲಕೋಟೆಯಲ್ಲಿ ಬಾಕಿದಾರರ ಪಟ್ಟಿ ಸಲ್ಲಿಸಿತು. ಆದರೆ, ‘ಈ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕಗೊಳಿಸಬಾರದು, ಒಂದುವೇಳೆ ಸಾರ್ವಜನಿಕಗೊಳಿಸಿದರೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಸಂಪೂರ್ಣ ನಾಶವಾಗಿಬಿಡುತ್ತೆ’ ಅಂತ ಒಂದು ಅಫಿಡೇವಿಟ್ ಹಾಕಿದರು. ಅಂದರೆ ಇದರರ್ಥ ಏನು?
ಆ ವೇಳೆಗೆ ಎನ್‍ಪಿಎ ಬಗ್ಗೆ ಬಾಕಿದಾರರ ಮಾಹಿತಿ ಕೇಳಿದ ಒಂಬತ್ತು ಆರ್‍ಟಿಐ ಅರ್ಜಿಗಳ ವಿಚಾರಣೆ ನಡೆದಿತ್ತು. ಆ ಒಂಬತ್ತೂ ಅರ್ಜಿಗಳಲ್ಲಿ ಕೇಳಿರುವ ಮಾಹಿತಿಯನ್ನು ಒದಗಿಸುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿತ್ತು. ಯಾಕೆಂದರೆ ಅದು ಜನರ ದುಡ್ಡು. ಬ್ಯಾಂಕುಗಳು ಮಾಹಿತಿ ಕೊಡೋದಿಲ್ಲ ಅಂದರೆ ಏನರ್ಥ? ಅರ್ಥ ಇಷ್ಟೆ, ಬ್ಯಾಂಕುಗಳ ಆಡಳಿತ ಮಂಡಳಿ ಮತ್ತು ರಿಜರ್ವ್ ಬ್ಯಾಂಕ್ ಆಡಳಿತ ಮಂಡಳಿಗಳು ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ, ಅಂಬಾನಿ, ಅದಾನಿ ರಂತಹ ಉದ್ಯಮಿಗಳ ಜೊತೆ ಶಾಮೀಲಾಗಿ ಕೊಟ್ಯಾಂತರ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ಈ ಮಾಹಿತಿ ಸಾರ್ವಜನಿಕಗೊಂಡರೆ ತಮ್ಮ ಬಂಡವಾಳ ಬಯಲಾಗುತ್ತದೆ ಅಂತ ಮಾಹಿತಿ ಕೊಡಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ನಾವು ರಿಜರ್ವ್ ಬ್ಯಾಂಕ್ ಗವರ್ನರ್ ಮತ್ತು ಪ್ರಧಾನಮಂತ್ರಿಗೆ ಪತ್ರ ಬರೆದೆವು. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮತ್ತೊಂದು ರಿಮೈಂಡರ್ ಕಳಿಸಿದೆವು. ಊಹೂಂ, ಇದುವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲ.
ಅಂದಿನ ಆರ್‍ಬಿಐ ಗವರ್ನರ್ ರಘುರಾಮ ರಾಜನ್ ಎನ್‍ಪಿಎ ಸಮಸ್ಯೆಯನ್ನು ನಿವಾರಿಸಲು ಬಯಸಿದ್ದರು. ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಕೂಡ ಬರೆದಿದ್ದರು. ಬ್ಯಾಂಕ್ ಹಣವನ್ನು ಗುಳುಂ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದಕೊಳ್ಳುವ ಬದಲು ರಾಜನ್ ಅವರನ್ನೇ ಆರ್‍ಬಿಐನಿಂದ ದೂರ ಮಾಡಲಾಯ್ತು. ಸರ್ಕಾರದ ಇಂತಹ ಕ್ರೋನಿ-ಪರ ನೀತಿಗಳಿಂದಾಗಿಯೇ ಇಂದು ಸಾವಿರಾರು ಕೋಟಿಗಳನ್ನು ಗುಳುಂ ಮಾಡಿದವರು ದೇಶದಿಂದ ಪರಾರಿಯಾಗಿ ವಿದೇಶಗಳಲ್ಲಿ ಆರಾಮಾಗಿ ಸೆಟ್ಲ್ ಆಗಲಿಕ್ಕೆ ಸಾಧ್ಯವಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪನಿಯ ಮಾಲೀಕ ನಿತಿನ್ ಸಂದೇಸರ ಮತ್ತು ಅವರ ಕುಟುಂಬದವರು ಪರಾರಿಯಾಗಿ ನೈಜೀರಿಯಾದಲ್ಲಿ ಸೆಟಲ್ ಆಗಿದ್ದಾರೆ. ಈತ ರೂ. 5600 ಕೋಟಿಗಳನ್ನು ಗುಳುಂ ಮಾಡಿದ್ದಾನೆ. ಈ ಸುದ್ದಿ ಮಾದ್ಯಮಗಳಲ್ಲೂ ಹೆಚ್ಚು ಕಾಣಿಸಿಕೊಳ್ಳದಂತೆ ಮ್ಯಾನೇಜ್ ಮಾಡಲಾಗಿದೆ. ಇದು ಹೀಗೇ ಮುಂದುವರೆದರೆ ದೇಶದ ಆರ್ಥಿಕತೆಗೆ ಗಂಡಾಂತರ ಎದುರಾಗಲಿದೆ ಎಂದು ಆರ್‍ಬಿಐನ ಅಧಿಕಾರಿಗಳೇ ಬಹಿರಂಗವಾಗಿ ಹೇಳಿಕೆ ಕೊಟ್ಟಿರುವುದು ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿ.
ಮತ್ತೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದು ಒಳ್ಳೆಯದು. ಸಾರ್ವಜನಿಕ ಕ್ಷೇತ್ರದ ಹಣಕಾಸು ಸಂಸ್ಥೆಗಳಲ್ಲಿ ಎಸ್‍ಬಿಐಗಿಂತಲೂ ಎಲ್‍ಐಸಿ ಬಹಳ ದೊಡ್ಡದು. ಈ ಎಲ್‍ಐಸಿ ಯಲ್ಲಿ ಪ್ರತಿವರ್ಷ ಲಕ್ಷಾಂತರ ಕೋಟಿಗಳ ಅವ್ಯವಹಾರ ನಡೆಯುತ್ತಿದೆ. ಒಂದುವೇಳೆ ಅದು ಹೊರಗಡೆ ಬಂದರೆ ಈ ದೇಶದ ಅತಿ ದೊಡ್ಡ ಹಗರಣವಾಗಲಿದೆ.
• ಭ್ರಷ್ಟಾಚಾರ ನಿರ್ಮೂಲ ಮಾಡುತ್ತೇನೆಂದು ಮೋದಿ ಘೋಷಿಸಿಕೊಂಡಿದ್ದಾರಲ್ಲಾ…?
ಭ್ರಷ್ಟಾಚಾರ ನಿರ್ಮೂಲ ಅಂತ ಘೋಷಣೆ ಮಾಡುತ್ತಲೇ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಬಹಳ ವ್ಯವಸ್ಥಿತವಾಗಿ, ಬಹಳ ಯೋಜನಾಬದ್ಧವಾಗಿ ನಾಶ ಮಾಡುತ್ತಿದ್ದಾರೆ. ಉದಾಹರಣೆಗೆ ಸಿಬಿಐ ನೋಡಿ. ಇದು ಭ್ರಷ್ಟಾಚಾರದ ತನಿಖೆ ನಡೆಸುವ ಅತಿದೊಡ್ಡ ಸಂಸ್ಥೆ. ಈ ಸಿಬಿಐಯನ್ನು ಸರ್ಕಾರದ ಹಿಡಿತದಿಂದ ಸ್ವತಂತ್ರಗೊಳಿಸಬೇಕೆಂಬ ಬೇಡಿಕೆ ಬಹಳ ಹಳೆಯದು. ಯಾಕೆಂದರೆ ಸಿಬಿಐ ಸರ್ಕಾರದಲ್ಲಿರುವವರ ಭ್ರಷ್ಟಾಚಾರದ ಬಗ್ಗೆಯೇ ತನಿಖೆ ಮಾಡಬೇಕಾಗಿದೆ. ಆದ್ದರಿಂದಲೇ, ಒಂದುಕಡೆ ಸಿಬಿಐಗೆ ಸ್ವತಂತ್ರ ಕೊಡದೆ ತಮ್ಮ ಕಬ್ಜಾದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಈ ಸಂಸ್ಥೆಯನ್ನು ಒಳಗಿನಿಂದಲೇ ದುರ್ಬಲಗೊಳಿಸುವ ತಂತ್ರ ಜಾರಿಯಲ್ಲಿದೆ. ಕೆಲಸದ ಒತ್ತಡದ ಹೆಚ್ಚುತ್ತಲೇ ಇರುವುದರಿಂದ ಇಂಥಾ ತನಿಖಾ ಸಂಸ್ಥೆಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬದಲಿಗೆ ಈ ಸರ್ಕಾರ ನೂರಾರು ಹುದ್ದೆಗಳನ್ನು ಖಾಲಿ ಉಳಿಸಿ, ಸಂಸ್ಥೆಯನ್ನೇ ದುರ್ಬಲಗೊಳಿಸುವ ಹುನ್ನಾರ ನಡೆಸಿದೆ.
ಲೋಕಾಯುಕ್ತ, ಲೋಕಪಾಲ್ ಮುಂತಾದ ವಿಚಾರಗಳಲ್ಲೂ ಮೋದಿ ಇದೇ ಫಾರ್ಮುಲಾ ಅಳವಡಿಸಿದ್ದಾರೆ. ಗುಜರಾತ್‍ನಲ್ಲಿದ್ದಾಗ ಲೋಕಾಯುಕ್ತ ಕಾಯ್ದೆ ಜಾರಿಯಾಗಿ 12 ವರ್ಷಗಳ ಕಾಲ ಲೋಕಾಯುಕ್ತರನ್ನೇ ನೇಮಿಸಲಿಲ್ಲ. ಕೇಂದ್ರದ ಲೋಕಪಾಲ್ ಕಾಯ್ದೆ ಅನುಮೋದನೆಗೊಂಡು 5 ವರ್ಷ ಕಳೆದರೂ ಇದುವರೆಗೆ ಲೋಕಪಾಲ್‍ರನ್ನು ನೇಮಿಸುವ ಗೋಜಿಗೇ ಹೋಗಿಲ್ಲ.
ಕೇಂದ್ರ ಜಾಗೃತ ಆಯೋಗ(ಸಿವಿಸಿ)ದ ಮೂರು ಹುದ್ದೆಗಳಲ್ಲಿ ಎರಡು ಹುದ್ದೆಗಳನ್ನು ವರ್ಷಗಟ್ಟಲೆ ಖಾಲಿ ಉಳಿಸಲಾಗಿತ್ತು. ಸುಪ್ರಿಂಕೋರ್ಟ್‍ಗೆ ನಾವು ಪಿಐಎಲ್ ಹಾಕಿ, ಕೋರ್ಟ್ ಆದೇಶ ಬಂದ ನಂತರ ಹುದ್ದೆಗಳನ್ನು ಭರ್ತಿ ಮಾಡಲಾಯ್ತು. ಆದರೆ ಭ್ರಷ್ಟಾಚಾರ ತನಿಖಾ ಸಂಸ್ಥೆಗೆ ಪರಮಭ್ರಷ್ಟರನ್ನೇ ನೇಮಕ ಮಾಡಲಾಯ್ತು. ಈ ಸಮಸ್ಯೆಗಳನ್ನು ಸರಿಪಡಿಸಲು ಇರುವ ಮತ್ತೊಂದು ಪ್ರಮುಖ ಅಸ್ತ್ರ ಮಾಹಿತಿ ಹಕ್ಕು ಕಾಯ್ದೆ. ಕೇಂದ್ರ ಮಾಹಿತಿ ಆಯೋಗದಲ್ಲಿ ನಾಲ್ಕು ಪ್ರಮುಖ ಹುದ್ದೆಗಳನ್ನು ಖಾಲಿ ಉಳಿಸಿದ್ದರು. ನಾವು ಹೈಕೋರ್ಟ್ ಮೊರೆಹೋಗಿ, ಕೂಡಲೇ ಹುದ್ದೆಗಳನ್ನು ಭರ್ತಿ ಮಾಡುವಂತೆ ಆದೇಶ ಬಂದರೂ ಭರ್ತಿ ಮಾಡಲಿಲ್ಲ. ನಂತರ ಸುಪ್ರೀಂಕೋರ್ಟ್ ಆದೇಶ ಬಂದ ನಂತರ ಭರ್ತಿ ಮಾಡಿದ್ದಾರೆ. ಅದೂ ಮಾಮೂಲಿ ಬ್ಯೂರಾಕ್ರಾಟ್‍ಗಳನ್ನು ತಂದು ಕೂರಿಸಿದ್ದಾರೆ. ರಾಜ್ಯ ಮಾಹಿತಿ ಆಯೋಗಗಳಲ್ಲಿ ಬಹಳಷ್ಟು ಹುದ್ದೆಗಳು ಒಂದೋ ಖಾಲಿ ಇವೆ, ಅಥವಾ ಯೋಗ್ಯರಲ್ಲದವರನ್ನು ಕೂರಿಸಲಾಗಿದೆ.
ಭ್ರಷ್ಟಾಚಾರದ ವಿರುದ್ಧ ದೇಶದಲ್ಲಿ ಅಷ್ಟೊಂದು ದೊಡ್ಡ ಚಳವಳಿ ನಡೆದ ನಂತರವೂ ಪರಿಸ್ಥಿತಿ ಹೀಗಿದೆ ಎಂದರೆ ದೇಶ ಎಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
• ಈಗ ಸಿಬಿಐ ಅಧಿಕಾರಿಗಳ ಸಂಘರ್ಷ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆಯಲ್ಲಾ.. ನೀವು ಆ ಬಗ್ಗೆ ಒಂದು ಪಿಐಎಲ್ ದಾಖಲಿಸಿದ್ದೀರಿ. 
ಇದು ಕೇವಲ ಅಧಿಕಾರಿಗಳ ನಡುವಿನ ಸಂಘರ್ಷ ಮಾತ್ರವಲ್ಲ; ಸಿಬಿಐ ಸಂಸ್ಥೆಗೂ ಮೋದಿ ಸರ್ಕಾರಕ್ಕೂ ನಡೆಯುತ್ತಿರುವ ಸಂಘರ್ಷವೂ ಹೌದು. ಸ್ಪೆಷಲ್ ಡೈರೆಕ್ಟರ್ ರಾಕೇಶ್ ಆಸ್ತಾನಾ ಸೂರತ್‍ನ ಪೊಲೀಸ್ ಕಮಿಷನರ್ ಆಗಿದ್ದವರು, ಮೋದಿಗೆ ಸಂಬಂಧಿಸಿದ ಹಲವು ಕೇಸುಗಳ ತನಿಖಾಧಿಕಾರಿಯಾಗಿದ್ದವರು, ಹೀಗೆ ಮೋದಿಗೆ ಹತ್ತಿರವಾಗಿದ್ದವರು. ಸೀನಿಯಾರಿಟಿ ಇದ್ದ ಪ್ರಾಮಾಣಿಕ ಅಧಿಕಾರಿ ಆರ್.ಕೆ.ದತ್ತಾ ಅವರನ್ನು ದಿಡೀರ್ ಎತ್ತಂಗಡಿ ಮಾಡಿ ಈ ರಾಕೇಶ್ ಅಸ್ತಾನಾರನ್ನು ತಂದು ಕೂರಿಸಲಾಯ್ತು. ವಿಚಿತ್ರವೆಂದರೆ ಆತನ ಮೇಲಿನ ಭ್ರಷ್ಟಾಚಾರದ ಹಲವು ಪ್ರಕರಣಗಳಿದ್ದು, ಖುದ್ದು ಸಿಬಿಐ ಅವುಗಳ ತನಿಖೆ ನಡೆಸುತ್ತಿತ್ತು. ಭ್ರಷ್ಟಾಚಾರದ ವಿರುದ್ಧ ಅವರ ಹೋರಾಟದ ಹಣೆಬರಹ ಹೀಗಿದೆ.
ನಾವು ಅಸ್ತಾನಾ ನೇಮಕಾತಿ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಹೋದೆವು. ಕೋರ್ಟ್ ಆದೇಶ ಬಂದಮೇಲೆ ವಿಧಿಯಿಲ್ಲದೆ, ಕೊಲಿಜಿಯಂ ಸಭೆ ನಡೆಸಿ ಅಲೋಕ್ ವರ್ಮಾರನ್ನು ನೇಮಕ ಮಾಡಲಾಯ್ತು. ಆದರೂ ವರ್ಮಾ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡದೆ ಅಸ್ತಾನಾ ಅನಗತ್ಯ ತಲೆತೂರಿಸುತ್ತಿದ್ದರು ಅನ್ನೋದು ಈಗ ಹೊರಬಂದಿದೆ. ನಾವು ರಫೇಲ್ ಭ್ರಷ್ಟಾಚಾರದ ತನಿಖೆ ನಡೆಸುವಂತೆ ಡೈರೆಕ್ಟರ್ ಅಲೋಕ್ ವರ್ಮಾ ಅವರಿಗೆ ಕಳೆದ ತಿಂಗಳು ದೂರು ಕೊಟ್ಟೆವು. ಸಮಗ್ರ ತನಿಖೆ ನಡೆಸುವ ಭರವಸೆ ಸಿಕ್ಕಿತ್ತು. ಇದಾದ ನಂತರದ ಬೆಳವಣಿಗೆಗಳು ಎಲ್ಲರಿಗೂ ಗೊತ್ತೇ ಇದೆ.
ಇಬ್ಬರು ಅಧಿಕಾರಿಗಳ ನಡುವಿನ ಸಂಘರ್ಷ ಎಂಬುದನ್ನು ನೆಪಮಾಡಿಕೊಂಡು ಅಲೋಕ್‍ವರ್ಮಾರ ಅಧಿಕಾರ ಕಸಿದುಕೊಂಡು ರಜೆ ಮೇಲೆ ಕಳಿಸಲಾಗಿದೆ. ಆ ಸ್ಥಾನಕ್ಕೆ ನಾಗೇಶ್ವರರಾವ್ ಎಂಬುವವರನ್ನು ಕೂರಿಸಲಾಗಿದೆ. ಆ ಮಹಾಶಯನ ಮೇಲೂ ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ. ಹೀಗೆ ಸಿಬಿಐ ಎಂಬ ಸಂಸ್ಥೆಯ ಘನತೆಯನ್ನೇ ನಾಶ ಮಾಡಲಾಗಿದೆ.
• ರಫೇಲ್ ಡೀಲ್ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ಒಂದು ಪಿಐಎಲ್ ದಾಖಲಿಸಿದ್ದೀರಿ. ಆ ಬಗ್ಗೆ… ?
ರಫೇಲ್ ಡೀಲ್ ಹಗರಣ ಇಡೀ ಭಾರತದ ರಕ್ಷಣಾಕ್ಷೇತ್ರದ ಇತಿಹಾಸದಲ್ಲೇ ಅತಿದೊಡ್ಡ ಹಗರಣ. ಒಟ್ಟು 60,000 ಕೋಟಿಗಳ ವಹಿವಾಟಿನಲ್ಲಿ 21,000 ಕೋಟಿಗಳ ಆಫ್‍ಸೆಟ್ ಗುತ್ತಿಗೆಯನ್ನು ಪ್ರಧಾನಿ ಮೋದಿಯವರು ತಮ್ಮ ಮಿತ್ರ ಅನಿಲ್ ಅಂಬಾನಿಗೆ ಕೊಡಿಸಿದ್ದಾರೆ. ಯುದ್ಧವಿಮಾನಕ್ಕೂ ಅನಿಲ್ ಅಂಬಾನಿಗೂ ಏನು ಸಂಬಂಧ? ಇದುವರೆಗೂ ಅಂಬಾನಿ ಕಂಪನಿ ಅದರ ಒಂದು ಸ್ಕ್ರೂ ಅನ್ನಾದರೂ ತಯಾರಿಸಿದ ಅನುಭವ, ಇತಿಹಾಸ ಇಲ್ಲ. ಜನರ ತೆರಿಗೆಯ ಹಣವನ್ನು ನೇರವಾಗಿ ತಮ್ಮ ಕ್ರೋನಿ ಬಂಡವಾಳಿಗರ ಬಾಯಿಗೆ ಹಾಕಿದ ಡೀಲ್ ಇದು. ಬೊಫೋರ್ಸ್ ಹಗರಣದ ಡೀಲ್‍ನಲ್ಲಿ ಕೇವಲ 64 ಕೋಟಿ ಕಮಿಷನ್ ಪಡೆದ ಆರೋಪ ಇತ್ತು. ಅದಕ್ಕೆ ಹೋಲಿಸಿದರೆ ರಫೇಲ್ ಹಗರಣ ನೂರಾರು ಪಟ್ಟು ದೊಡ್ಡ ಹಗರಣ. ಸಾರ್ವಜನಿಕ ಬೊಕ್ಕಸದ ಹಣವನ್ನು ಲೂಟಿ ಮಾಡಲಿಕ್ಕಾಗಿ ಎಚ್‍ಎಎಲ್‍ನಿಂದ ಗುತ್ತಿಗೆಯನ್ನು ಕಿತ್ತುಕೊಂಡು ಅನಿಲ್ ಅಂಬಾನಿಗೆ ಕೊಡಲಾಗಿದೆ. ಈ ಡೀಲ್‍ನ ನೇರ ಹೊಣೆ ಪ್ರಧಾನಿ ಮೋದಿಯೇ ಹೊರತು ಬೇರಾರೂ ಅಲ್ಲ.
ಸುಪ್ರೀಂ ಕೋರ್ಟ್‍ನಲ್ಲಿ ಕೇಸಿನ ವಿಚಾರಣೆ ಶುರುವಾಗಿದೆ. ‘ವಿಮಾನಗಳ ಬೆಲೆ ತಿಳಿಸಲಾಗುವುದಿಲ್ಲ, ಯಾಕೆಂದರೆ ಅದು ರಕ್ಷಣಾ ರಹಸ್ಯ’ ಎನ್ನುತ್ತಿದ್ದಾರೆ. ಇದು ಎಂತಹ ವಿತಂಡ ವಾದ? ಬೆಲೆ ತಿಳಿಸಿದರೆ ಭ್ರಷ್ಟಾಚಾರದ ಬಂಡವಾಳ ಬಯಲಾಗುತ್ತದೆಂಬ ಭಯ ಅವರಿಗೆ. ವಿವಾದ ಬಿಸಿಯೇರುತ್ತಿದ್ದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದಿಡೀರ್ ಫ್ರಾನ್ಸ್ ಪ್ರವಾಸ ಹೋಗಿಬಂದರು. ಅದಾದ ಕೆಲದಿನಗಳ ನಂತರ ಡಸಾಲ್ಟ್ ಕಂಪನಿಯ ಸಿಇಒ ಒಂದು ಸಂದರ್ಶನ ಕೊಡುತ್ತಾರೆ, ನಾವೇ ಅನಿಲ್ ಅಂಬಾನಿಯ ಕಂಪನಿಯನ್ನು ಆಯ್ಕೆ ಮಾಡಿದ್ದು, ಸರ್ಕಾರಕ್ಕೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳಿಕೆ ಕೊಡುತ್ತಾರೆ. ಯಾರನ್ನು ರಕ್ಷಣೆ ಮಾಡಲಿಕ್ಕೆ ಇದೆಲ್ಲಾ ನಡೀತಾ ಇದೆ? ಸರ್ಕಾರ ಸತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದಂತೆಲ್ಲಾ ಹುದುಗಿಹೋಗಿದ್ದ ಇನ್ನಷ್ಟು ಸತ್ಯಗಳು ಹೊರಬೀಳುತ್ತಿವೆ. ಇವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ಸುಪ್ರೀಂ ಕೋರ್ಟ್ ನಿಗಾವಣೆಯಲ್ಲಿ ಈ ಇಡೀ ಹಗರಣದ ತನಿಖೆ ಆಗಬೇಕೆಂದು ನಾವು ಮನವಿ ಕೊಟ್ಟಿದ್ದೇವೆ. ಸುಪ್ರೀಂ ಕೋರ್ಟ್ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಭರವಸೆಯಿದೆ… ನೋಡೋಣ.
• ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ ಅಂತ ವ್ಯಾಖ್ಯಾನಿಸಲಾಗುತ್ತಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಹಾಗೂ ಈಗಿನ ಮೋದಿ ಆಡಳಿತದ ಅಘೋಷಿತ ತುರ್ತು ಪರಿಸ್ಥಿತಿಗಳನ್ನು ಹೇಗೆ ತುಲನೆ ಮಾಡುತ್ತೀರಿ?
ಈ ಎರಡೂ ಸನ್ನಿವೇಶಗಳ ನಡುವೆ ಮೂಲಭೂತ ಭಿನ್ನತೆಗಳಿವೆ. ಇಂದಿರಾ ಗಾಂಧಿಯ ಸರ್ವಾಧಿಕಾರ ಒಂದುರೀತಿಯ ಸಮಯಸಾಧಕ ಪ್ರವೃತ್ತಿಯದು. ತನ್ನ ಅಧಿಕಾರಕ್ಕೆ ಸಂಚಕಾರ ಬಂದಾಗ ಹೇಗಾದರೂ ಅಧಿಕಾರ ಉಳಿಸಿಕೊಳ್ಳಬೇಕೆಂಬ ವಾಂಛೆಯಿಂದ ಆಕೆ ಸರ್ವಾಧಿಕಾರಿ ಪ್ರವೃತ್ತಿ ಪ್ರದರ್ಶಿಸಿದರು. ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡರು. ಮಾದ್ಯಮ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದರು. ನ್ಯಾಯಾಂಗವನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು. ಆದರೆ ಈಗಿನ ಪ್ರಧಾನಿ ಮೋದಿ, ಮತ್ತು ಅವರ ಇತರ ಹಲವಾರು ನಾಯಕರು ಹಾಗೂ ಬಿಜೆಪಿ ಪಕ್ಷ ಸೈದ್ಧಾಂತಿಕವಾಗಿಯೇ ಸರ್ವಾಧಿಕಾರಿ ಧೋರಣೆಯವರು. ಈ ಸರ್ವಾಧಿಕಾರಿ ಧೋರಣೆ ಆರೆಸ್ಸೆಸ್ ಮೂಲದಿಂದ ಬಂದಿದ್ದು. ಆರೆಸ್ಸೆಸ್ ಸಿದ್ಧಾಂತಕರ್ತರಾದ ಗೋಲ್ವಾಲ್ಕರ್, ಹೆಡಗೆವಾರ್, ಸಾವರ್ಕರ್ ಮುಂತಾದವರು ಸಾರಾಂಶದಲ್ಲಿ ಸರ್ವಾಧಿಕಾರಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದವರು. ಅವರು ಹಿಟ್ಲರ್, ಮುಸಲೋನಿಯಂತಹವರನ್ನು ಆರಾಧಿಸುತ್ತಿದ್ದರು. ಹಿಟ್ಲರ್, ಮುಸಲೋನಿಯ ಸರ್ವಾಧಿಕಾರಿ ಮಾದರಿಯನ್ನು ಭಾರತದಲ್ಲಿ ಅಳವಡಿಸಲು ಬಯಸಿದ್ದವರು, ಭಿನ್ನಮತವನ್ನು ಹೊಸಕಿಹಾಕಬೇಕೆಂದು ಬಯಸಿದ್ದವರು. ಈ ಸೈದ್ಧಾಂತಿಕ ಸರ್ವಾಧಿಕಾರಿಗಳ ಕೈಗೆ ಅಧಿಕಾರ ಸಿಕ್ಕಾಗ ಏನಾಗುತ್ತದೆ ಎಂಬುದಕ್ಕೆ ಸಮಕಾಲೀನ ವಿದ್ಯಮಾನಗಳನ್ನು ನೋಡಿ. ದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೆನಿಸಿಕೊಂಡಿರುವ ಜೆ.ಎನ್.ಯು, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಹೈದರಾಬಾದ್ ವಿಶ್ವವಿದ್ಯಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಇದಕ್ಕೆ ಉತ್ತಮ ನಿದರ್ಶನ. ಈ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿ ಮುಚ್ಚಿಬಿಡಲು ತೀರ್ಮಾನಿಸಿದ್ದಾರೆ. ಯಾಕೆಂದರೆ ಈ ವಿಶ್ವವಿದ್ಯಾಲಯಗಳು ಮುಕ್ತ ಚಿಂತನೆಗಳನ್ನು ಪ್ರೋತ್ಸಾಹಿಸುತ್ತವೆ; ಅಧಿಕಾರದಲ್ಲಿರುವವರ ದುರ್ನೀತಿಗಳನ್ನು ಪ್ರಶ್ನಿಸುವ, ಭಿನ್ನಮತವನ್ನು ನಿರ್ಭಿಡೆಯಾಗಿ ವ್ಯಕ್ತಪಡಿಸುವ ಪ್ರಜಾತಾಂತ್ರಿಕ ಚಿಂತನೆಗಳಿಗೆ ಇವು ಹೆಸರುವಾಸಿಯಾಗಿವೆ. ಸಮಾನತೆಯ ಮೌಲ್ಯಗಳನ್ನು ಸಾರುವ ಅನೇಕ ಚಿಂತಕರು ಇಲ್ಲಿ ರೂಪುಗೊಂಡಿದ್ದಾರೆ. ಅಂದರೆ ಆರೆಸ್ಸೆಸ್-ಬಿಜೆಪಿಗಳ ಕರ್ಮಠ ಸಿದ್ಧಾಂತಕ್ಕೆ ಇವು ನೇರ ಸವಾಲೊಡ್ಡುತ್ತವೆ. ಆದ್ದರಿಂದಲೇ ಈ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ, ಅವುಗಳನ್ನು ಶಾಶ್ವತವಾಗಿ ಮುಚ್ಚಿಬಿಡುವ ಹುನ್ನಾರ ನಡೆದಿದೆ. ಬದಲಿಗೆ, ಆದೇಶಗಳನ್ನು ಮರುಮಾತಾಡದೆ ಪಾಲಿಸುವ, ಮುಕ್ತಚಿಂತನೆಗೆ ಕುರುಡಾಗಿರುವ, ತಮ್ಮ ಸಂಕುಚಿತ ‘ರಾಷ್ಟ್ರೀಯವಾದಿ’ ಉನ್ಮಾದವನ್ನು ಮೈಗೂಡಿಸಿಕೊಳ್ಳುವ ಅಂಧವಿಶ್ವಾಸಿಗಳನ್ನು ಹುಟ್ಟುಹಾಕುತ್ತಿದ್ದಾರೆ.
ಶಿಕ್ಷಣ ಕ್ಷೇತ್ರ ಮಾತ್ರವಲ್ಲ; ಪ್ರತಿಯೊಂದು ಕ್ಷೇತ್ರದಲ್ಲೂ ಇದೇ ವಿದ್ಯಮಾನ ನಡೆಯುತ್ತಿದೆ. ಇವೆಲ್ಲಾ ಅಖಿಲ ಭಾರತಮಟ್ಟದಲ್ಲಿ ಬಹಳ ಸಂಘಟಿತವಾಗಿ, ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ಅಘೋಷಿತ ತುರ್ತು ಪರಿಸ್ಥಿತಿ ಇಂದಿರಾಗಾಂಧಿಯ ಕಾಲಕ್ಕಿಂತಲೂ ಹೆಚ್ಚು ದುಷ್ಟ ತಂತ್ರಗಳಿಂದ ಕೂಡಿದ್ದು ಹೆಚ್ಚು ಅಪಾಯಕಾರಿಯಾಗಿದೆ.
• 2019ರಲ್ಲಿ ಬಿಜೆಪಿ ಸರ್ಕಾರವನ್ನು ಬದಲಿಸಿ ಕಾಂಗ್ರೆಸ್ ಅಥವ ಮಿತ್ರಕೂಟ ಅಧಿಕಾರಕ್ಕೆ ಬಂದರೆ ಎಲ್ಲವೂ ಸರಿಯಾಗುತ್ತದೆಂದು ಭಾವಿಸುತ್ತೀರಾ? 
ಕಾಂಗ್ರೆಸ್ ಅಥವ ಬೇರೊಂದು ಪಕ್ಷ ಅಧಿಕಾರಕ್ಕೆ ಬಂದಾಕ್ಷಣ ಎಲ್ಲವೂ ಸರಿಯಾಗುವುದಿಲ್ಲ. ಆದರೆ ನಮ್ಮ ದೇಶ ಸಂಪೂರ್ಣ ಹಿಟ್ಲರ್‍ಶಾಹಿಯಾಗುವ ಕಡೆ ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಒಂದು ಮಧ್ಯಂತರ ಪರಿಹಾರದ ಅಗತ್ಯವಿದೆ. ಬರಲಿರುವ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವುದೇ ಆ ಮಧ್ಯಂತರ ಪರಿಹಾರ. ನಂತರದಲ್ಲಿ ಇತರ ಪಕ್ಷಗಳ ವಿರುದ್ಧ ನಮ್ಮ ಹೋರಾಟ ಇದ್ದೇ ಇರುತ್ತದೆ. ಇತರೆ ಪಕ್ಷಗಳ ಭ್ರಷ್ಟಾಚಾರ, ದುರಾಡಳಿತಗಳ ವಿರುದ್ಧ ನಾವು ನಿರಂತರ ಹೋರಾಡುತ್ತಲೇ ಬಂದಿದ್ದೇವೆ.
ಆದರೆ ಈಗ ಬಿಜೆಪಿಯನ್ನು ಸೋಲಿಸುವುದು ಭಾರತದ ಪ್ರಜಾತಂತ್ರದ ಅಳಿವು ಉಳಿವಿನ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾದುದು. ಈ ವಿಚಾರವನ್ನು ನಾವು ಕಡೆಗಣಿಸುವಂತಿಲ್ಲ.
• ಒಟ್ಟಾರೆ ಈ ವಿಪ್ಪತ್ತುಗಳಿಂದ ಪಾರಾಗಿ, ದೇಶ ಸರಿದಾರಿಯಲ್ಲಿ ಸಾಗಬೇಕೆಂದರೆ ನಿಜಕ್ಕೂ ಮಾಡಬೇಕಾದುದೇನು?
ಜನರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಜನರು ಸಂಘಟಿತರಾಗಬೇಕು. ಬೃಹತ್ ಜನ ಚಳವಳಿಗಳು ರೂಪುಗೊಳ್ಳಬೇಕು. ಮುಖ್ಯವಾಗಿ ಯುವಜನತೆ ಚಳವಳಿಗಳಲ್ಲಿ ಭಾಗವಹಿಸುವಂತಾಗಬೇಕು. ಅಂತಿಮವಾಗಿ ಜನರ ಹೋರಾಟದಿಂದ ಮಾತ್ರ ಪ್ರಜಾತಂತ್ರ ಉಳಿಯಲಿಕ್ಕೆ, ಬೆಳೆಯಲಿಕ್ಕೆ ಸಾಧ್ಯ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಎಕ್ಸಿಟ್ ಪೋಲ್ ಪ್ರಸಾರ ಮಾಡದಂತೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

0
ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆ ಏಪ್ರಿಲ್ 19ರಂದು ಬೆಳಿಗ್ಗೆ 7ರಿಂದ ಜೂನ್ 1ರ ಸಂಜೆ 6.30ರವರೆಗೆ ಸಮೀಕ್ಷೆಗಳನ್ನು ನಡೆಸುವುದು ಮತ್ತು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಷೇಧಿಸಿ...