Homeಸಾಮಾಜಿಕಜೀವನದುದ್ದಕ್ಕೂ ಕಲಬುರ್ಗಿಯವರನ್ನು ಕಾಡಿದ ವ್ಯಕ್ತಿಗೆ ಕಲಬುರ್ಗಿ ಪ್ರಶಸ್ತಿ!!!!

ಜೀವನದುದ್ದಕ್ಕೂ ಕಲಬುರ್ಗಿಯವರನ್ನು ಕಾಡಿದ ವ್ಯಕ್ತಿಗೆ ಕಲಬುರ್ಗಿ ಪ್ರಶಸ್ತಿ!!!!

- Advertisement -
- Advertisement -

ಸಿದ್ದಪ್ಪ ಮೂಲಗೆ |

ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಿಂದ ಕೊಡಮಾಡುವ ‘ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನಾ ಪ್ರಶಸ್ತಿ-2018’ಯನ್ನು ಕಲಬುರ್ಗಿಯ ಕಡಗಂಚಿನಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ(ಸಿಯುಕೆ)ಕುಲಪತಿಗಳಾದ ಡಾ.ಎಚ್.ಎಂ.ಮಹೇಶ್ವರಯ್ಯ ಅವರಿಗೆ ನೀಡುತ್ತಿರುವುದು ವ್ಯಂಗ್ಯದ ಪರಮಾವಧಿಯಾಗಿದೆ. ಇದನ್ನು ಕಂಡು ನಾಡಿನ ಕಲಬುರ್ಗಿ ಅಭಿಮಾನಿಗಳಿಗೆ ನೋವುಂಟಾಗಿದೆ.

ಈ ವಿಷಯ ಮಾಧ್ಯಮಗಳ ಮೂಲಕ ಅರಿತ ಕಲಬುರ್ಗಿಯ ಎಂ.ಎಂ.ಕಲಬುರ್ಗಿಯವರ ಅಭಿಮಾನಿಗಳು, ಒಡನಾಡಿಗಳು ಬಸವಕೇಂದ್ರದ ಕಛೇರಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಲಬುರ್ಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ, ಕಾರ್ಯದರ್ಶಿಗಳಾದ ಆರ್.ಜಿ.ಶಟಕಾರ, ಕಲಬುರ್ಗಿಯವರ ಅತ್ಯಂತ ಆಪ್ತರಾಗಿದ್ದ ಬಸವಕೇಂದ್ರದ ಸೋಮಣ್ಣ ನಡುಕಟ್ಟಿ, ಸಿದ್ರಾಮ ಯಳವಂತಗಿ, ಮಲ್ಲಣ್ಣ ನಾಗರಾಳ, ಮಹಾಂತೇಶ ಕಲಬುರ್ಗಿ, ರವೀಂದ್ರ ಶಾಬಾದಿ, ವೀರೇಶ್ ಮಾಲಿಪಾಟೀಲ, ಅಯ್ಯನಗೌಡ ಪಾಟೀಲ, ಉದಯಕುಮಾರ್ ಸಾಲಿ ಮುಂತಾದ ನೂರಾರು ಜನ ಸಭೆ ಸೇರಿದ್ದರು. ಕಲಬುರ್ಗಿಯವರಿಗೆ ಜೀವನದುದ್ದಕ್ಕೂ ಕಾಡಿದ ಮನುಷ್ಯನಿಗೆ ಅವರದ್ದೇ ಹೆಸರಿನ ಪ್ರಶಸ್ತಿ ನೀಡುತ್ತಿರುವುದು, ಭಾಲ್ಕಿ ಶ್ರೀಗಳು ತಿಳಿದೋ ಅಥವಾ ತಿಳಿಯದೆಯೋ ಮಾಡುತ್ತಿರುವ ಅವಮಾನವೇ ಆಗಿದೆ ಎಂಬುದು ಎಲ್ಲರ ಅನಿಸಿಕೆಯಾಗಿತ್ತು.

ಈ ಅನಿಸಿಕೆಯ ಮೂಲದ ಜಾಡನ್ನು ಹಿಡಿದು ಹೊರಟರೆ ಅಲ್ಲೊಂದು ನೋವಿನ ಕಥೆ ನಮ್ಮ ಕಣ್ಣೆದುರೇ ಬಂದು ನಿಲ್ಲುತ್ತದೆ. ಕಲಬುರ್ಗಿಯವರು ತನ್ನ ವೃತ್ತಿಜೀವನದ ಬಹುತೇಕ ಸಮಯ ಕಳೆದಿರುವುದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ. ಇದೆ ವಿಶ್ವವಿದ್ಯಾಲಯದಲ್ಲಿ ಕಲಬುರ್ಗಿಯವರ ಶಿಷ್ಯರಾದ ಎಚ್.ಎಂ.ಮಹೇಶ್ವರಯ್ಯರವರು ಸಹ ಉಪನ್ಯಾಸಕರಾಗಿ ಸೇರಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ಇವರಿಬ್ಬರ ಸಂಬಂಧ ಚೆನ್ನಾಗಿಯೇ ಇರುತ್ತದೆ. ಯಾವಾಗ ಕಲಬುರ್ಗಿಯವರು ಬಸವಾದಿಶರಣರನ್ನ ಹಚ್ಚಿಕೊಂಡು, ಬಸವಾದಿಶರಣರ ಸಮಗ್ರ ಬದುಕಿನ ಮೇಲೆ ಹಗಲಿರುಳು ಗಂಭೀರ ಅಧ್ಯಯನ ಮತ್ತು ಸಂಶೋಧನೆ ಮಾಡಲು ಪ್ರಾರಂಭಿಸಿದರೋ ಆವಾಗಿನಿಂದ ಈ ಗುರು-ಶಿಷ್ಯರ ಮಧ್ಯೆ ವೈಮನಸ್ಸು ಪ್ರಾರಂಭವಾಗುತ್ತದೆ. ಏಕೆಂದರೆ ಮಹೇಶ್ವರಯ್ಯರವರು ಪಂಚಪೀಠಾಧಿಪತಿಗಳ ಪ್ರಬಲ ಪ್ರತಿಪಾದಕರು. ಆದರೆ ಕಲಬುರ್ಗಿಯವರು ಅಪ್ಪಟ ಬಸವಾಭಿಮಾನಿಗಳು.

ಕಲಬುರ್ಗಿಯವರು ಯಾವುದಕ್ಕೂ ಅಂಜದೆ, ಜಗ್ಗದೆ ಪಂಚಪೀಠಾಧಿಪತಿಗಳು ಇತಿಹಾಸದುದ್ದಕ್ಕೂ ಬಸವಣ್ಣನವರಿಗೆ ಮಾಡಿದ ಮೋಸವನ್ನು ಎಳೆಎಳೆಯಾಗಿ ತಮ್ಮ ಸಂಶೋಧನೆ ಮೂಲಕ ನಾಡಿನ ಜನತೆಯ ಮುಂದೆ ಬಿಚ್ಚಿಡುತ್ತಾರೆ. ಪಂಚಪೀಠಾಧಿಪತಿಗಳು ಮೂಲತಃ ಆಂಧ್ರದ ಆರಾಧ್ಯರು. ಇವರಿಗೂ ಬಸವಣ್ಣನಿಗೂ ಯಾವುದೇ ತರಹ ಸಂಬಂಧವಿಲ್ಲ, ಇವರು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಬಸವಣ್ಣನ ಹಿಂದೆ ಗಂಟುಬಿದ್ದಿದ್ದಾರೆ. ಬಸವಣ್ಣನನ್ನ ಬಿಟ್ಟರೆ ಇವರ ಗತಿ ಅಧೋಗತಿಯಾಗುತ್ತದೆ ಎನ್ನುವ ಭಯದಿಂದ ಅವರು ಬಸವಣ್ಣನನ್ನು ಬಿಡುತ್ತಿಲ್ಲ; ಬಸವಾದಿಶರಣರಿಗೆ ಮತ್ತು ಇಡಿ ಲಿಂಗಾಯತ ಸಮುದಾಯಕ್ಕೆ ಇಲ್ಲಿಯವರೆಗೂ ಅವರು ಮಾಡಿದ ಕಿತಾಪತಿಗಳನ್ನು ತನ್ನ ಬರವಣಿಗೆಯಲ್ಲಿ ಅಧಿಕೃತವಾಗಿ ದಾಖಲಿಸುವ ಮೂಲಕ ಪಂಚಪೀಠಿಗಳ ಸುಳ್ಳಿನ ಸಾಮ್ರಾಜ್ಯದ ಬುಡವನ್ನೆ ಅಲ್ಲಾಡಿಸುತ್ತಾರೆ. ಇಂದು ಕರ್ನಾಟಕದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ನಡೆಯುತ್ತಿರುವ ಜನಾಂದೋಲನದ ತಾತ್ವಿಕ ನೆಲೆಯನ್ನು ರೂಪಿಸಿದವರು ಅವರೇ ಆಗಿದ್ದಾರೆ.

ಮುಂದುವರೆದು ಪಂಚಪೀಠಾಧಿಪತಿಗಳ ಸುಳ್ಳಿನ ಇತಿಹಾಸವನ್ನು ಬಟಾಬಯಲು ಮಾಡುತ್ತಾರೆ. ಅದು ಸಿದ್ಧಾಂತ ಶಿಖಾಮಣಿ ಎನ್ನುವ ಖೊಟ್ಟಿ ಗ್ರಂಥದ ಬಗ್ಗೆ ಇರಬಹುದು; ಇತಿಹಾಸದಲ್ಲಿ ಇಲ್ಲದ ಜಾತವೇದ ಮುನಿಗಳನ್ನ/ಈಶಾನ್ಯ ಗುರುಗಳನ್ನ ದುಬ್ಕನೆ ಜನ್ಮಕ್ಕೊಟ್ಟಿದ್ದರ ಬಗ್ಗೆ ಇರಬಹುದು, ಕೂಡಲಸಂಗಮದಲ್ಲಿರುವದು ಸಂಗಮನಾಥ ದೇವಾಲಯದ ಪೂಜಾರಿಯಾಗಿದ್ದ ಮಲ್ಲಯ್ಯ ಮುತ್ಯಾನ ಗದ್ದುಗೆಯೆ ವಿನಹಃ ಅದು ಜಾತವೇದ ಮುನಿಗಳ ಗದ್ದುಗೆಯಲ್ಲ ಎಂದು ಹೇಳಿರುವದರ ಬಗ್ಗೆ ಇರಬಹುದು, ಬಸವಣ್ಣ ಸ್ವಯಂ ಇಷ್ಟಲಿಂಗಧಾರಿ ಅವರಿಗೆ ಯಾರು ದಿಕ್ಷಾಗುರುಗಳೆ ಇಲ್ಲ ಎಂದು ಹೇಳಿರುವದರ ಬಗ್ಗೆ ಇರಬಹುದು, ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ನಾವುಗಳು ಹಿಂದೂಗಳು ಅಲ್ಲ, ವೀರಶೈವರಂತೂ ಮೊದಲೆ ಅಲ್ಲ ಎಂದು ಗಂಟಾಘೋಷವಾಗಿ ಹೇಳಿರುವದರ ಬಗ್ಗೆ ಇರಬಹುದು, ಇಂತಹ ನೂರಾರು ಸಂಗತಿಗಳು ಹೊರತಂದು ಇತಿಹಾಸವೆ ಬೆಚ್ಚಿ ಬೀಳುವ ಹಾಗೆ ಮಾಡಿರುವುದು ಇವರ ಸಾಧನೆಯ ಹೆಜ್ಜೆ ಗುರುತುಗಳು.

ಎಚ್.ಎಂ.ಮಹೇಶ್ವರಯ್ಯರವರಿಗೆ ತನ್ನ ಕಣ್ಣೆದುರೆ ಪಂಚಪೀಠಾಧಿಪತಿಗಳ ಬುಡವೇ ಅಲ್ಲಾಡುತ್ತಿರುವುದು ನೋಡಿ ಚಿಂತಾಕ್ರಾಂತರಾಗಿ ಕಲಬುರ್ಗಿಯವರ ಮೇಲೆ ಕೆಂಡದಂತ ಕೋಪ ಬೆಳಸಿಕೊಂಡಿದ್ದರು. ಅವರಾಗಿ ಅವರೆ ಸ್ವತಃ ಜನರೆದುರೂ ಕಲಬುರ್ಗಿರವರ ಮೇಲಿನ ತನ್ನ ಕೋಪವನ್ನು express ಮಾಡಿಕೊಳ್ಳುತ್ತಾರೆ.

ದಿನಾಂಕ ಸೆ.9, 2016ರಂದು ಶಂಕ್ರಯ್ಯಾ ಘಂಟಿಯವರು ಕಲಬುರ್ಗಿಯ ಪಂಡಿತ ರಂಗಮಂದಿರದಲ್ಲಿ ಕಲಬುರ್ಗಿಯವರೆ ರಚಿಸಿದ ‘ಕೆಟ್ಟಿತ್ತು ಕಲ್ಯಾಣ’ ಎನ್ನುವ ನಾಟಕವನ್ನು ಪ್ರದರ್ಶನ ಮಾಡಲು ದಿನಾಂಕವನ್ನು ನಿಗದಿ ಮಾಡುತ್ತಾರೆ. ನಾಟಕದ ಬಗ್ಗೆ ಜನರಿಗೆ ಏನಾದರೂ ಪ್ರಶ್ನೆಗಳಿದ್ದರೆ ಉತ್ತರಿಸಲು ನಾನೆ ಸ್ವತಃ ಕಲಬುರ್ಗಿಯಲ್ಲಿ ಮೂರು ದಿವಸ ಉಳಿಯುತ್ತೇನೆ ಎಂದು ಆಯೋಜಕರಿಗೆ ವಾಗ್ದಾನ ಮಾಡುತ್ತಾರೆ. ಆದರೆ ಆಗಸ್ಟ್ 30ರಂದು ರಾತ್ರಿ ಕೇಸರಿ ಭಯೋತ್ಪಾದಕರಿಂದ ಕಲಬುರ್ಗಿಯವರ ಹತ್ಯೆಯಾಗುತ್ತದೆ.

ಆಯೋಜಕರು ನಿಗದಿಪಡಿಸಿದ ದಿನಾಂಕದಂದೇ ನಾವು ನಾಟಕ ಪ್ರದರ್ಶನ ಮಾಡಬೇಕು, ಜೊತೆಗೆ ಅವತ್ತೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಬೇಕು ಎಂದು ತೀರ್ಮಾನಿಸಿ, ಮಹೇಶ್ವರಯ್ಯರವರಿಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರೆಯುತ್ತಾರೆ. ಆದರೆ ಇವರು ತನ್ನ ಭಾಷಣದುದ್ದಕ್ಕೂ ಕಲಬುರ್ಗಿಯವರನ್ನು ಹೀಯಾಳಿಸಿ, ಇವನು ರಾಷ್ಟ್ರ ಮಟ್ಟದಲ್ಲಿ ಸಾಹಿತ್ಯ ರಚನೆ ಮಾಡೇ ಇಲ್ಲ, ರಾಜ್ಯಕ್ಕೆ ಮಾತ್ರ ಇವರ ಸಾಹಿತ್ಯ ಸೀಮಿತವಾಗಿತ್ತು. ‘ಖರೆ ಖರೆ ಸಂಗ್ಯಾ ಬಾಳ್ಯಾ’ ಅವನ ನಾಟಕ ನನಗೆ ಅರ್ಥವೆ ಆಗಲಿಲ್ಲ. ಅಷ್ಟೇ ಅಲ್ಲ ಇಡೀ ಇವನ ಸಾಹಿತ್ಯ ಕಳಪೆಮಟ್ಟದಿಂದ ಕೂಡಿದೆ ಎಂದು ಅವಹೇಳನಕಾರಿಯಾಗಿ ಏಕವಚನದಲ್ಲೇ ಮಾತನಾಡಿದರು. ಸಭೆ ಮುಗಿದನಂತರ ಎಂ.ಎಂ.ಕಲಬುರ್ಗಿಯವರ ನೂರಾರು ಅಭಿಮಾನಿಗಳು ಇವರ ಸುತ್ತಲೂ ಘೇರಾವ ಹಾಕಿ ಹೀಗೆ ಮಾತನಾಡಿದ ನಿಮ್ಮ ಉದ್ದೇಶ ಏನು? ಎಂದು ಕೇಳಿದಾಗ ಕಕ್ಕಾಬಿಕ್ಕಿಯಾಗಿ ಹಾರಿಕೆಯ ಉತ್ತರ ಕೊಟ್ಟು ಅಲ್ಲಿಂದ ಜಾರಿದರು.

ಇದೇ ಸಂದರ್ಭದಲ್ಲಿ ಕಲಬುರ್ಗಿಯ ಎಲ್ಲಾ ಪ್ರಗತಿಪರ ಸಂಘಟನೆಗಳು ಸೇರಿಕೊಂಡರು. ಕಲಬುರ್ಗಿಯವರನ್ನ ಕೊಂದ ಭಯೋತ್ಪಾದಕರನ್ನು ಶೀಘ್ರದಲ್ಲೇ ಬಂಧಿಸಬೇಕು ಮತ್ತು ಕೊಲೆಗಾರರ ಮುಖವನ್ನಲ್ಲದೆ, ಕೊಲೆಯ ಹಿಂದಿರುವ ಮುಖವಾಡವನ್ನು ಕೂಡಾ ಹುಡುಕಿ ಬಹಿರಂಗ ಪಡಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲು ಬಹಿರಂಗ ಸಭೆಯನ್ನು ಏರ್ಪಡಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಮಹೇಶ್ವರಯ್ಯರವರಿಗೆ ವೇದಿಕೆ ಹತ್ತಲೂ ಸಹಾ ಬಿಡುವುದಿಲ್ಲ.

ಇವರ ಬಸವನ ಮೇಲಿನ ದ್ವೇಷದ ಯಾತ್ರೆ ಇಲ್ಲಿಗೆ ನಿಲ್ಲುವುದಿಲ್ಲ. ಇದರ ಮುಂದುವರಿಕೆಯಾಗಿಯೇ, 2017 ಮತ್ತು 2018 ಸಾಲಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಸವ ಜಯಂತಿಯ ರಜೆಯನ್ನು ನೀಡುವುದಿಲ್ಲ ಮತ್ತು ತಮ್ಮ ವಿಶ್ವವಿದ್ಯಾಲಯದ ಕ್ಯಾಲೆಂಡರ್‌ನಲ್ಲಿ ಬಸವಜಯಂತಿಯನ್ನೆ ನಮೂದಿಸಿರುವದಿಲ್ಲ. ಇದನ್ನು ಕಂಡು ಕಲಬುರ್ಗಿಯ ಬಸವಕೇಂದ್ರದ ಸುಮಾರು 30 ಜನ ಬಸವಾಭಿಮಾನಿಗಳು ವಿಶ್ವವಿದ್ಯಾಲಯಕ್ಕೆ ಹೋಗಿ ಇವರನ್ನು ಕೇಳಿದಾಗ, ‘ಕ್ಷಮಿಸಿ ಮುಂದೆ ಹೀಗೆ ತಪ್ಪಾಗದ ಹಾಗೆ ನೋಡಿಕೊಳ್ಳುತ್ತೇನೆ’ ಎಂದು ಹೇಳುತ್ತಾರೆ.

ಈ ಹಿಂದೆ ಮಹೇಶ್ವರಯ್ಯನವರು ಕಲಬುರ್ಗಿಯವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೊಟ್ಟ ಕಿರುಕುಳ, ಮಾನಸಿಕ ಹಿಂಸೆ, ಕಾಟವನ್ನು ಶಬ್ದಗಳಲ್ಲಿ ಹೇಳಲು ಅಸಾಧ್ಯ ಎನ್ನುತ್ತಾರೆ ಇವರ ಒಡನಾಡಿಗಳು. ಈ ಮನುಷ್ಯನ ಹಿಂಸೆ ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ ಒಬ್ಬ ಮನುಷ್ಯನನ್ನು ಇಂತಹ ಪರಿಯಲ್ಲೂ ಹಿಂಸಿಸಬಹುದು ಎಂದು ನಮಗೆ ಗೊತ್ತಾಗಿದ್ದು ಆವಾಗಲೇ ಎನ್ನುತ್ತಾರೆ. ಕಲಬುರ್ಗಿಯವರ ಒಡನಾಡಿಗಳು ಮತ್ತು ಅಭಿಮಾನಿಗಳು. ಕೊನೆಗೆ ತಮ್ಮ ನಿವೃತ್ತಿಯ ದಿವಸ ಇವರ ಹಿಂಸೆಯನ್ನು ನೆನೆದು ನೋಯುತ್ತಲೇ ಮನೆಗೆ ಬಂದ ಕಲಬುರ್ಗಿಯವರು ಮತ್ತೆ ತಿರುಗಿ ಯಾವತ್ತೂ ಧಾರವಾಡದ ವಿಶ್ವವಿದ್ಯಾಲಯದಲ್ಲಿ ಕಾಲೇ ಹಾಕಲಿಲ್ಲ.

1997ರಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗುವ ಸಾಧ್ಯತೆಯನ್ನು ಕಂಡು ಮಹೇಶ್ವರಯ್ಯನವರು ತಮ್ಮ ತಂಡವನ್ನು ಕಟ್ಟಿಕೊಂಡು ಹಂಪಿ ವಿಶ್ವವಿದ್ಯಾಲಯದ ಆವರಣದಲ್ಲೆ ಪ್ರತಿರೋಧಾತ್ಮಕವಾಗಿ ಒಂದು ಸೆಮಿನಾರ್ ಹಮ್ಮಿಕೊಂಡು, ಇದರ ಮೂಲಕ ಕಲಬುರ್ಗಿಯವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಬರದ ಹಾಗೆ ಮಾನಸಿಕವಾಗಿ ಅವರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಇಷ್ಟು ಸಾಲದೆಂಬಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರ ಮುಂದೆ ಲಾಬಿಯನ್ನು ಮಾಡುತ್ತಾರೆ. ಅಲ್ಲಿಯೂ ಇವರ ಆಟ ನಡೆಯುವುದಿಲ್ಲ. ಏಕೆಂದರೆ ಸಚಿವೆಯಾಗಿದ್ದ ಲೀಲಾದೇವಿ ಆರ್ ಪ್ರಸಾದವರು ಕಲಬುರ್ಗಿಯವರೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಆಗಬೇಕು ಎಂದು ಪಟ್ಟು ಹಿಡಿದಿದ್ದರು.

ಇವೆಲ್ಲ ಕಾರಣಗಳಿಂದ ಇದೆ ತಿಂಗಳು 25ರಂದು ನಡೆಯಲಿರುವ ಬಸವಕಲ್ಯಾಣದ ಅನುಭವ ಮಂಟಪ ಉತ್ಸವ ಕಾರ್ಯಕ್ರಮದಲ್ಲಿ ಮಹೇಶ್ವರಯ್ಯರವರಿಗೆ ಕಲಬುರ್ಗಿಯವರ ಹಸರಿನ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಕಲಬುರ್ಗಿಯವರ ಅಭಿಮಾನಿಗಳಿಗೆ, ಅವರ ಒಡನಾಡಿಗಳಿಗೆ, ಅವರ ಅಪಾರ ಶಿಷ್ಯ ವರ್ಗಕ್ಕೆ ನೋವುಂಟಾಗಿರುವುದು ಸಹಜವಾಗಿದೆ. ಕಲಬುರ್ಗಿಯವರ ಮೇಲೆ, ಪ್ರೀತಿ ಮತ್ತು ಗೌರವವುಳ್ಳ ಭಾಲ್ಕಿ ಶ್ರೀಗಳು, ಕಲಬುರ್ಗಿಯವರನ್ನು ಜೀವನದುದ್ದಕ್ಕೂ ಕಾಡಿದ ಮನುಷ್ಯನಿಗೆ ಪ್ರಶಸ್ತಿ ನೀಡುತ್ತಿರುವುದು ನಾಡಿನ ಜನತೆಗೆ ಆಶ್ಚರ್ಯವುಂಟು ಮಾಡಿದೆ. ಭಾಲ್ಕಿ ಶ್ರೀಗಳಿಗೆ ತಪ್ಪು ದಾರಿಗೆ ಎಳೆದವರು ಯಾರು? ಎಂಬ ಪ್ರಶ್ನೆಯೂ ಎದ್ದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಳ್ಳಾರಿಯ ಚಿನ್ನಾಭರಣ ಮಳಿಗೆಯಲ್ಲಿ ನಡೆದಿರುವುದು ಬಾಂಬ್ ಸ್ಪೋಟವಲ್ಲ

0
ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಮಳಿಗೆಯಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಂಚಿಕೊಳ್ಳಲಾಗಿದೆ. "ಮತ್ತೊಂದು ದಿನ, ಕರ್ನಾಟಕದಲ್ಲಿ ಮತ್ತೊಂದು ಭಯಾನಕ ಘಟನೆ. ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಶೋ ರೂಮ್‌ನಲ್ಲಿ ಸ್ಪೋಟ ಸಂಭವಿಸಿದ್ದು,...