Homeಸಾಮಾಜಿಕಕಬ್ಬಿನ ಕಗ್ಗಂಟು

ಕಬ್ಬಿನ ಕಗ್ಗಂಟು

- Advertisement -
- Advertisement -

ಪಿ.ಕೆ.ಮಲ್ಲನಗೌಡರ್ |

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಹುದ್ದೆಯ ಘನತೆ ಮರೆತು ಪ್ರತಿಭಟನಾನಿರತ ಮಹಿಳೆಯೊಬ್ಬರ ಮೇಲೆ ಕ್ಷುಲ್ಲಕ ಭಾಷೆ ಬಳಸಿ ನಿಂದಿಸುವ ಮೂಲಕ ಕಬ್ಬಿನ ಕಗ್ಗಂಟು ಮತ್ತೊಂದು ಮಜಲಿಗೆ ತಲುಪಿದೆ. ಕುಮಾರಸ್ವಾಮಿಯರ ಈ ಪಾಳೆಗಾರಿಕೆ ಮನೋಭಾವವನ್ನು ನಾಡಿನ ಜನತೆ ಖಂಡಿಸಿ, ಕ್ಷಮೆಯಾಚನೆಗೆ ಆಗ್ರಹಿಸಬೇಕಿದೆ. ಕುಮಾರಸ್ವಾಮಿ ನವಂಬರ್ 19ರ ಸಭೆಯನ್ನು 20ಕ್ಕೆ ಮುಂದೂಡಿ, ಅದನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ್ದು ಪ್ರತಿಭಟನಾನಿರತ ರೈತರ ಆಕ್ರೋಶ ಹೆಚ್ಚಲು ಕಾರಣವಾಯ್ತು. ಆಕ್ರೋಶವನ್ನು ವ್ಯಕ್ತಪಡಿಸಿದ ವಿಧಾನವು ಕಾನೂನುಪ್ರಕಾರ ತಪ್ಪಾದರೂ ಅದು ಆ ಕ್ಷಣದ ಸಿಟ್ಟಾಗಿತ್ತು ಎಂಬುದನ್ನು ಸರ್ಕಾರ ಅರಿತು ನವಂಬರ್ 20ರ ಸಭೆಯಲ್ಲಿ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಬೆಕಿದೆ.

ಪ್ರತಿವರ್ಷ ನವಂಬರ್ ಬಂತೆಂದರೆ ಸುವರ್ಣಸೌಧದ ಚಳಿಗಾಲದ ಅಧಿವೇಶನಕ್ಕೂ ಸ್ವಲ್ಪ ಮುಂಚೆ ಈ ಕಬ್ಬಿನ ಕಗ್ಗಂಟು ಮುನ್ನೆಲೆಗೆ ಬರುತ್ತಿದೆದೆ. ಸರ್ಕಾರ ಸಕ್ಕರೆ ಕಾರ್ಖಾನೆಗಳ ಜೊತೆ ತೆರೆಮರೆಯ ಆಟ ನಡೆಸಿ ರೈತರಿಗೆ ಸಮಾಧಾನ ಎನಿಸುವ ಒಂದು ನಿರ್ಣಯಕ್ಕೆ ಬಂದು ತಿಪ್ಪೆ ಸಾರಿಸುತ್ತದೆ. ಕಾರ್ಖಾನೆಗಳು ಅಷ್ಟೋ ಇಷ್ಟೋ ಬಾಕಿ ನೀಡಿ ಕಬ್ಬು ಅರೆಯುತ್ತವೆ. ಮತ್ತೆ ಮುಂದಿನ ಸೀಸನ್ ಹೊತ್ತಿಗೆ ರೈತರ ಕಬ್ಬು ಬಿಲ್‌ನ ಬಾಕಿ ಏರಿಕೆಯಾಗಿರುತ್ತದೆ.

ಈ ವರ್ಷ ಜುಲೈನಲ್ಲಿ ಕೇಂದ್ರ ಸರ್ಕಾರ ಎಫ್‌ಆರ್‌ಪಿ (Fair and Remunarative Price) ನಿಗದಿ ಮಾಡಿತು. ಕ್ವಿಂಟಲ್ ಕಬ್ಬಿಗೆ 20 ರೂ. ದರ ಹೆಚ್ಚಿಸಿದ ಕೇಂದ್ರ ಸರ್ಕಾರ, ತನ್ನ ಬೆನ್ನು ತಾನೇ ತಟ್ಟಿಗೊಂಡಿತು. ಅಂದರೆ ಕಳೆದ ವರ್ಷ ಕ್ವಿಂಟಲ್‌ಗೆ 255 ರೂ. ಇದ್ದುದು, ಈ ಸಲ ಅದು 275 ರೂ.ಗೆ ಏರಿಕೆಯಾಗಿದೆ. (ಟನ್ ಕಬ್ಬಿಗೆ 2,750 ರೂ.) ಕಬ್ಬು ಬೆಳೆಗಾರರ ಮೇಲೆ ಈ ಎಫ್‌ಆರ್‌ಪಿ ದರವನ್ನು ಹೇರುತ್ತ ಬರಲಾಗಿದೆ. ನವಂಬರ್‌ನಲ್ಲಿ ಕಬ್ಬು ಕಟಾವು ಬರುವ ಹೊತ್ತಿಗೆ ಕೇಂದ್ರ ಸರ್ಕಾರ ಹಿನ್ನೆಲೆಗೆ ಸರಿಯುವುದರಿಂದ ರಾಜ್ಯಸರ್ಕಾರಗಳು ಏಕಾಂಗಿಯಾಗಿ ಈ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಟನ್‌ಗೆ 2,750 ರೂ ಏನೇನೂ ಅಲ್ಲ. ಇಲ್ಲಿ ರೈತರ ಶ್ರಮಕ್ಕೆ ಸಮರ್ಪಕ ಬೆಲೆ ನಿಗದಿ ಮಾಡದೇ ಇರುವುದರಿಂದ ಈ ದರವು ಯಾವ ರೀತಿಯಲ್ಲೂ ರೈತನಿಗೆ ನ್ಯಾಯ ಒದಗಿಸಲಾರದು ಎನ್ನುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವಿಠ್ಠಲ ಗಣಾಚಾರಿ.

ಏರಿಕೆಯಾಗಿದ್ದು ಇಪ್ಪತ್ತಲ್ಲ, ಬರೀ ಏಳು ರೂ.!

ಇಲ್ಲಿ ಕೇಂದ್ರ ಸರ್ಕಾರದ ಒಂದು ಸೂಕ್ಷ್ಮ ವಂಚನೆಯನ್ನು ಗಮನಿಸಬೇಕು. ಈಗಾಗಲೇ ಅದರ ನಾಯಕರು ಅಲ್ಲಿ ಚುನಾವಣಾ ಪ್ರಚಾರಗಳಲ್ಲಿ ಕ್ವಿಂಟಲ್ ಕಬ್ಬಿಗೆ 20 ರೂ ಹೆಚ್ಚಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಕಳೆದ ವರ್ಷದ ದರಕ್ಕೆ ಹೋಲಿಸಿದರೆ ವಾಸ್ತವದಲ್ಲಿ ಹೆಚ್ಚಳವಾಗಿರುವುದು ಕೇವಲ 7 ರೂ ಮಾತ್ರ. ಎಫ್‌ಆರ್‌ಪಿ ದರದಲ್ಲಿ ಖರೀದಿ ಮಾಡುವಾಗ ರಿಕವರಿ ಅಂಶ (ಕಬ್ಬಿನಲ್ಲಿರುವ ಸಕ್ಕರೆ ಪ್ರಮಾಣ. ಇದನ್ನು ನಿರ್ಧರಿಸುವವರು ಕಾರ್ಖಾನೆಗಳು!) ಮಹತ್ವದ ಪಾತ್ರ ವಹಿಸುತ್ತದೆ. ಕಳೆದ ವರ್ಷ ಶೇ 9.5 ರಿಕವರಿ ಅಂಶವನ್ನು ಬೇಸ್ ಆಗಿ ಪರಿಗಣಿಸಿ ಕ್ವಿಂಟಲ್‌ಗೆ 255 ರೂ. ನಿಗದಿ ಮಾಡಲಾಗಿತ್ತು. ಈ ವರ್ಷ ರಿಕವರಿಯನ್ನು ಶೇ. 10ಕ್ಕೆ ಹೆಚ್ಚಿಸಿರುವುದರಿಂದ ರೈತರ ಪಾಲಿಗೆ ಏರಿಕೆ 20 ರೂ. ಬದಲಾಗಿ ಕೇವಲ 7 ರೂ ಮಾತ್ರ!

ಬಾಕಿ ಮೊತ್ತ ಎಂಬ ಭೂತ!

ಕೆಲವೇ ಕೆಲವು ಸಹಕಾರಿ ಸರ್ಕಾರಿ ಕಾರ್ಖಾನೆಗಳನ್ನು ಬಿಟ್ಟರೆ ಎಲ್ಲ ಕಾರ್ಖಾನೆಗಳು ವಿವಿಧ ರಾಜಕೀಯ ಪಕ್ಷಗಳ ಹಿಡಿತದಲ್ಲಿ ಇರುವುದರಿಂದ ಎಲ್ಲ ಪಕ್ಷಗಳೂ ಬಾಕಿ ಬಿಡುಗಡೆ ವಿಷಯ ಬಂದಾಗ ನಾಟಕ ಶುರು ಹಚ್ಚಿಕೊಳ್ಳುತ್ತವೆ. ದೇಶದಲ್ಲಿ ರೈತರಿಗೆ ಒಟ್ಟು ನೀಡಬೇಕಾದ ಕಬ್ಬಿನ ಬಾಕಿ ಮೊತ್ತ 18 ಸಾವಿರ ಕೋಟಿ ರೂ. ಇದರಲ್ಲಿ ಉತ್ತರ ಪ್ರದೇಶದ ಕಾರ್ಖಾನೆಗಳ ಪಾಲು 11 ಸಾವಿರ ಕೋಟಿ. ರಾಜ್ಯದಲ್ಲಿ ಸದ್ಯ 485 ಕೋಟಿ ಬಾಕಿಯಿದೆ ಎನ್ನಲಾಗಿದ್ದು, ಇದರಲ್ಲಿ ಜಾರಕಿಹೊಳಿಗಳ (ಕಾಂಗ್ರೆಸ್, ಬಿಜೆಪಿ) ಮಾಲಿಕತ್ವದ ಕಾರ್ಖಾನೆಗಳು, ಉಮೇಶ ಕತ್ತಿ, ಮುರಗೇಶ್ ನಿರಾಣಿ (ಬಿಜೆಪಿ) ಕಾರ್ಖಾನೆಗಳು ಅಗ್ರಸ್ಥಾನದಲ್ಲಿವೆ. ಉಳಿದಂತೆ ಎಲ್ಲ ಪಾರ್ಟಿಗಳ ಹಿರಿಕಿರಿ ಪುಢಾರಿಗಳ ನಿಯಂತ್ರಣದಲ್ಲಿರುವ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ರಾಜಕೀಯ ನಾಯಕರು, ಅಧಿಕಾರಿಗಳು ಈ ಮಾಫಿಯಾದೊಂದಿಗೆ ತೆರೆಮರೆಯಲ್ಲಿ ಸ್ನೇಹ ಹೊಂದಿರುವುದರಿಂದ ಬಾಕಿ ಎಂಬ ಭೂತವನ್ನು ಶಾಶ್ವತವಾಗಿ ನಿಯಂತ್ರಿಸಲಾಗುತ್ತಿಲ್ಲ.

ನವಂಬರ್ 20ರ ಸಭೆಯಲ್ಲಿ ಒಂದು ಸಂಧಾನಸೂತ್ರ ಏರ್ಪಟ್ಟು ರಾಜ್ಯಸರ್ಕಾರ 100 ರೂ.ಗಳಿಂದ 150 ರೂಗಳವರೆಗೆ ಬೆಂಬಲ ಬೆಲೆ ನೀಡಿ, ಟನ್ ಕಬ್ಬಿಗೆ ದರವನ್ನು 2,750ರ ಬದಲಾಗಿ 2,850ರಿಂದ 2,900 ರೂ.ಗೆ ನಿಗದಿ ಮಾಡಿ ತಿಪ್ಪೆ ಸಾರಿಸುತ್ತದೆ. ಕಬ್ಬಿನ ಬಾಕಿಯನ್ನು ಹಂತಹಂತವಾಗಿ ತೀರಿಸುವುದಾಗಿ ಕಾರ್ಖಾನೆಗಳು ಭರವಸೆ ನೀಡುತ್ತವೆ. ರೈತ ಕಬ್ಬನ್ನು ಕಾರ್ಖಾನೆಗೆ ಒಯ್ದು ಸುರಿದ ನಂತರ, ರಿಕವರಿ (ಸಕ್ಕರೆ ಪ್ರಮಾಣ) ಅಂಶವನ್ನು ಕಡಿಮೆ ತೋರಿಸಿ ರೈತರನ್ನು ವಂಚಿಸಲಾಗುತ್ತದೆ. ವಂಚನೆಯ ಅಸ್ತ್ರವನ್ನೇ ಕಾರ್ಖಾನೆಗಳ ಮಾಲಿಕರ ಕೈಯಲ್ಲಿ ಕೊಟ್ಡಿರುವ ಕೇಂದ್ರ ಸರ್ಕಾರ, ಬಾಕಿ ವಸೂಲಿ ಮಾಡಿ ಕೊಡಲಾಗದ ರಾಜ್ಯ ಸರ್ಕಾರಗಳು ರೈತರಿಗೆ ನಯವಾಗಿ ದ್ರೋಹ ಬಗೆಯುತ್ತವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆಗಳ ಕಬ್ಬು ಬೆಳೆಗಾರರು ಅಲ್ಲಿನ ರಾಜಕೀಯ ಹುನ್ನಾರಗಳನ್ನು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಅರ್ಥ ಮಾಡಿಕೊಂಡು ಒಂದು ಪಕ್ಷಾತೀತ ಸಂಘಟನೆ ಕಟ್ಟುವವರೆಗೆ ಪ್ರತಿವರ್ಷ ನವಂಬರ್‌ನಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯಲಿದೆ… ಕಬ್ಬಿನ ಕಗ್ಗಂಟು ಮುಂದಿನ ವರ್ಷಕ್ಕೆ ಪೋಸ್ಟ್ಪೋನ್ ಆಗುತ್ತಲೇ ಇರುತ್ತದೆ.

ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯೇ ಕಾರಣ

ರವಿವಾರ ಬೆಳಗಾವಿಯಲ್ಲಿ ನಡೆದ ಗದ್ದಲ, ರಂಪಾಟಗಳಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಮುಧೋಳ, ಅಥಣಿ, ಮಹಾಲಿಂಗಪುರಗಳಲ್ಲಿ 20 ದಿನಗಳ ಹಿಂದಿನಿಂದಲೂ ಪ್ರತಿಭಟನೆ ನಡೆಯುತ್ತಲೇ ಇವೆ. ಹೆದ್ದಾರಿ ಬಂದ್, ಕಬ್ಬಿನ ಲಾರಿಗಳಿಗೆ ಬೆಂಕಿ ಜರುಗುತ್ತಲೇ ಬಂದಿವೆ. ಈ ಪ್ರತಿಭಟನೆಗಳನ್ನು ಬೆಳಗಾವಿ, ಬಾಗಲಕೋಟೆ ಜಿಲ್ಲಾಡಳಿತಗಳು ಉಪೇಕ್ಷೆ ಮಾಡುತ್ತಲೇ ಬಂದವು. ನವಂಬರ್ 17ರಂದು ಬೆಳಗಾವಿಯಲ್ಲಿ ದೊಡ್ಡ ಪ್ರತಿಭಟನೆ ನಡೆದಾಗ ಎಚ್ಚೆತ್ತುಗೊಂಡ ಬೆಳಗಾವಿ ಜಿಲ್ಲಾಡಳಿತ ಸಿಎಂ ಮೊರೆ ಹೋಗಿತು. ನವಂಬರ್ 19ಕ್ಕೆ ಸಭೆ ನಿಗದಿ ಮಾಡಿ ಸರಿಯಾದ ಹೆಜ್ಜೆ ಇಟ್ಟಿದ್ದ ಸಿಎಂ ಅದ್ಯಾವ ಲಾಬಿಯ ಒತ್ತಡಕ್ಕೆ ಒಳಗಾಗಿ ಸಭೆ ಮುಂದೂಡಿ, ಬೆಂಗಳೂರಿಗೆ ಶಿಫ್ಟ್ ಮಾಡಿದರೋ? ಅಲ್ಲಿಗೆ ರೈತರ ಸಹನೆಯ ಕಟ್ಟೆ ಒಡೆದಿತ್ತು. ಸುವರ್ಣಸೌಧಕ್ಕೆ ಸೂಕ್ತ ಭದ್ರತೆ ಒದಗಿಸದ ಹೊಣೆಗೇಡಿ ಅಧಿಕಾರಿಗಳು ರೈತರ ಆ ಕ್ಷಣದ ಆಕ್ರೋಶವನ್ನೇ ಗೂಂಡಾಗಿರಿ ಎಂದು ಹೇಳಿ ಅಧ್ವಾನಕ್ಕೆ ಕಾರಣರಾದರು.

2019: ತತ್ತರಿಸಲಿದೆ ಕಬ್ಬು ಕೃಷಿ, ಸಕ್ಕರೆ ಉದ್ಯಮ!

ಈಗಿನದು ಮುನ್ನೆಚ್ಚರಿಕೆ. 2019ರ ಕಬ್ಬು ಕಟಾವಿನ ಹೊತ್ತಿಗೆ ಭಾರತದ ಕಬ್ಬು ಕೃಷಿ ಮತ್ತು ಸಕ್ಕರೆ ಉದ್ಯಮಗಳೆರಡೂ ತತ್ತರಿಸಿ ಹೋಗಲಿವೆ ಎನ್ನುತ್ತಾರೆ ಜಾಗತಿಕ ಕೃಷಿ ಮತ್ತು ಆರ್ಥಿಕ ತಜ್ಞರು. ಸಕ್ಕರೆಯ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಹೆಚ್ಚುತ್ತಲೇ ಇದೆ. ಸಕ್ಕರೆಗೆ ಪರ್ಯಾಯವಾದ ಸಿಹಿ ಪದಾರ್ಥಗಳ ಬಳಕೆ ಹೆಚ್ಚುತ್ತಿದೆ. ಆರೋಗ್ಯ ಜಾಗೃತಿ ಪರಿಣಾಮವಾಗಿ ಸಕ್ಕರೆ ಸೇವನೆ ಕ್ರಮೇಣ ಕಡಿಮೆಯಾಗುತ್ತಿದೆ. ಮುಂದಿನ ವರ್ಷ ದೇಶದಲ್ಲಿ 36 ಮಿಲಿಯನ್ ಟನ್ ಸಕ್ಕರೆ ಉತ್ಪಾನೆಯ ನಿರೀಕ್ಷೆಯಿದ್ದು ದೇಶಿಯವಾಗಿ ಆಂತರಿಕ ಬೇಡಿಕೆ 25 ಟನ್ ಇರಲಿದೆ. ರಫ್ತು ಮಾಡಲೂ ಆಗದು. ಏಕೆಂದರೆ ಬ್ರೆಜಿಲ್, ಥ್ಯೆಲ್ಯಾಂಡ್ ಮುಂತಾದ ದೇಶಗಳಲ್ಲೂ ಸಕ್ಕರೆ ಉತ್ಪಾದನೆ ಹೆಚ್ಚಳವಾಗಲಿದೆ. ಈ ಕುರಿತು ಮುಂದಾಲೋಚನೆ ಮಾಡಲೇಬೇಕಾದ ಸರ್ಕಾರ ಪಟೇಲರಿಗೊಂದು ಮೂರ್ತಿ, ಕಾವೇರಿಗೊಂದು ಮೂರ್ತಿ, ರಾಮನಿಗೊಂದು ಗುಡಿ ಕಟ್ಟುವ, ಅಯ್ಯಪ್ಪನ ಮನಸ್ಸು ಚಂಚಲತೆಗೆ ಒಳಗಾಗದಂತೆ ತಡೆಯುವ ವಿಚಾರಗಳಲ್ಲಿ ಆಸಕ್ತಿ ಹೊಂದಿದೆ.

ಬಾಕಿ ಹಣ: ಮೊದಲೂ ಇತ್ತು

ರೈತ ಮಹಿಳೆ ಜಯಶ್ರೀ ಆವೇಶದಲ್ಲಿ ಮಾಡಿದ ಟೀಕೆಗೆ ಉತ್ತರಿಸಿದ್ದ ಸಿಎಂ ಕುಮಾರಸ್ವಾಮಿ, `ನಾಲ್ಕೂವರೆ ವರ್ಷದ ಹಿಂದೆ ಯಾವುದೋ ಫ್ಯಾಕ್ಟರಿ ಬಿಲ್ ಉಳಿಸಿಕೊಂಡಿದ್ರೆ ಅದಕ್ಕೆ ನಾನ್ಹೇಗೆ ಜವಾಬುದಾರನಾಗುತ್ತೇನೆ? ಎಂದು ಪ್ರಶ್ನಿಸಿದ್ದರು. ಈ ಮಾತಲ್ಲಿ ಸತ್ಯವಿದೆ. ಕಬ್ಬಿನ ಬಾಕಿ ಹಿಂದಿನ ಮುಖ್ಯಮಂತ್ರಿಗಳ ಅವಧಿಯಿಂದಲೂ ಇದ್ದೇ ಇದೆ, ವರ್ಷವರ್ಷಕ್ಕೆ ಹೆಚ್ಚೂ ಕಡಿಮೆ ಆಗಿದೆ. ಯಡಿಯೂರಪ್ಪ 2011ರಲ್ಲಿ ಜೈಲಿಗೆ ಹೋಗಿ ಮುಖ್ಯಮಂತ್ರಿ ಪಟ್ಟ ಕಳೆದುಕೊಳ್ಳುವ ವೇಳೆ, ಬೆಳಗಾವಿ ಜಿಲ್ಲೆಯ ಫ್ಯಾಕ್ಟರಿಗಳು 830 ಕೋಟಿ ರೂ, ಬಾಗಲಕೋಟೆ ಜಿಲ್ಲೆಯ ಫ್ಯಾಕ್ಟರಿಗಳು 900 ಕೋಟಿ ಬಾಕಿ ಉಳಿಸಿಕೊಂಡಿದ್ದವು. ಉಳಿದ ಜಿಲ್ಲೆಗಳ ಫ್ಯಾಕ್ಟರಿಗಳೂ ಉಳಸಿಕೊಂಡಿದ್ದವು. ಮುಂದೆ ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಅವಧಿಯಲ್ಲಿ ಬಾಕಿ ಪಾವತಿಗೆ ಕ್ರಮ ಜರುಗಿಸದ್ದರಿಂದ ಈ ಬಾಕಿ ಹೆಚ್ಚುತ್ತಲೇ ಹೋಯಿತು.

2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ವಿವರದಂತೆ, 4 ಸಾವಿರ ಕೋಟಿ ಬಾಕಿ ಇತ್ತು. ಆಗ ರೈತರಿಗೆ ಕ್ವಿಂಟಲ್‌ಗೆ 200 ರೂ. ಪ್ರೋತ್ಸಾಹ ಧನ ನೀಡಿದ ಸಿದ್ದರಾಮಯ್ಯ, ಫ್ಯಾಕ್ಟರಿಗಳು ಬಾಕಿ ನೀಡಲು ವಿಳಂಬ ಮಾಡಿದರೆ ಸರ್ಕಾರವೇ ರೈತರಿಗೆ ಭರಿಸಿ, ನಂತರ ಫ್ಯಾಕ್ಟರಿಗಳಿಂದ ವಸೂಲು ಮಾಡಲಾಗುವುದು ಎಂದಿದ್ದರು. ಕ್ರಮೇಣ ಬಾಕಿ ಮೊತ್ತ ತಗ್ಗುತ್ತ ಬಂದಿತು. ಉತ್ತರ ಭಾರತದಲ್ಲಿ ಕಳೆದ 2 ವರ್ಷಗಳಿಂದ ಕಬ್ಬು ಬೆಳೆಗಾರರು ಬಾಕಿ ಪಾವತಿಗಾಗಿ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಕೇಂದ್ರ ದೇಶದ ಎಲ್ಲ ಫ್ಯಾಕ್ಟರಿಗಳಿಗೆ ಸಣ್ಣ ಮೊತ್ತದ ಪ್ಯಾಕೇಜ್ ಘೋಷಿಸಿತು. ಇದು ಫ್ಯಾಕ್ಟರಿಗಳಿಗೆ ಅಷ್ಟಿಷ್ಟು ಬಾಕಿ ತೀರಿಸಲು ನೆರವಾಗಿತ್ತು. ಈಗ ಕಬ್ಬು ಬೆಳೆಗಾರರ ಸಂಘದ ಪ್ರಕಾರ 450 ಕೋಟಿ ರೂ. ಬಾಕಿಯಿದೆ. ಕುಮಾರಸ್ವಾಮಿ ಅದು ಕೇವಲ 35 ಕೋಟಿ ಇದೆ ಎನ್ನುತ್ತಿದ್ದಾರೆ.
(2010ರಿಂದ 2016ರ ಮಾಹಿತಿ: ದಿ ಹಿಂದು, ಫೈನಾನ್ಸಿಯಲ್ ಎಕ್ಸ್ಪ್ರೆಸ್, ಬ್ಯುಸಿನೆಸ್ ಸ್ಟ್ಯಾಂಡರ್ಡ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...