| ಬಿ. ಶ್ರೀಪಾದ ಭಟ್ |
‘ಆನೆ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎನ್ನುವ ಗಾದೆ ಮಾತು 2019ರ ಚುನಾವಣೋತ್ತರ ಭಾರತದ ಇಂದಿನ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಅನ್ವಯಿಸುತ್ತದೆ ಮತ್ತು ಎಡ ಪಕ್ಷಗಳಿಗೆ ಇದನ್ನ ಹೇಳಿದರೆ ಸ್ವತಃ ಅವರೆ ನಾವು ಆನೆ ಅಲ್ಲವೆ ಅಲ್ಲ ಎಂದು ನಿರಾಕರಿಸುತ್ತಾರೆ. ಇಂದು ಸೋತು ಸುಣ್ಣವಾಗಿ ಬಸವಳಿದು ತೇಕುತ್ತಿರುವ ಕಾಂಗ್ರೆಸ್ ಮುಖ ಒರೆಸಿಕೊಳ್ಳಲೂ ಹೋಗದೆ ಎಂದಿನಂತೆ ಆರಾಮಾಗಿದೆ. ಅದು ನಿಶ್ಚಿಂತೆಯಿಂದಿದೆ. ಆದರೆ 2019ರ ಲೋಕಸಬಾ ಚುನಾವಣೆಯಲ್ಲಿ ಕೇವಲ 5 ಸೀಟುಗಳಲ್ಲಿ ಗೆಲುವು ಸಾದಿಸಿದ ಎಡ ಪಕ್ಷಗಳು ಮರಳಿ ನಮ್ಮ ಕಡೆಗೆ ಪ್ರಶ್ನಾರ್ಥವಾಗಿ ದೃಶ್ಟಿಸುತ್ತಿವೆ. ಅದರಲ್ಲೂ ತಮಿಳುನಾಡಿನಲ್ಲಿ ಡಿಎಂಕೆಯ ಔದಾರ್ಯದಿಂದ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾದಿಸಿದರೆ ಉಳಿದಂತೆ ಕೇರಳದಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದಿದೆ ಮತ್ತು ಉಳಿದ 19 ಕ್ಷೇತ್ರಗಳಲ್ಲಿ ಸೋತಿದೆ. ಇನ್ನು ಪ.ಬಂಗಾಲ, ತ್ರಿಪುರ ರಾಜ್ಯಗಳಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಸತತ ಸೋಲುಗಳಿಂದ ದೃತಿಗೆಟ್ಟಿರುವ ಕಮ್ಯುನಿಶ್ಟ್ ಪಕ್ಷಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಚುನಾವಣೆ ಫಲಿತಾಂಶದ ನಂತರ 24, ಮೇ 2019ರಂದು ಮಾದ್ಯಮಗಳೊಂದಿಗೆ ಮಾತನಾಡುತ್ತ ಸಿಪಿಐ(ಎಂ)ನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರು ‘ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳುತ್ತದೆ’ ಎಂದರು. ಮುಂದುವರೆದು ‘ಮತೀಯವಾದದ ಈ ಹುಚ್ಚು ಹೊಳೆಯ ವಾತಾವರಣದಲ್ಲಿ ಪ್ರಜಾತಾಂತ್ರಿಕ ಸೆಕ್ಯುಲರ್ ಪಕ್ಷಗಳಿಗೆ ಸ್ಥಾನವೇ ಇಲ್ಲ’ ಎಂದು ಹೇಳಿ ಎಂದಿನಂತೆ ಬಿಜೆಪಿ ಪಕ್ಷವನ್ನ ದೂಶಿಸಿ ಕೈತೊಳೆದುಕೊಂಡರು. ನಂತರ ಮೇ 26, 27ರಂದು ನಡೆದ ಪಾಲಿಟ್ ಬ್ಯೂರೋ ಸಬೆಯಲ್ಲಿಯೂ ಸಹ ಬಿಜೆಪಿ-ಆರೆಸ್ಸಸ್ ಪಕ್ಷದ ಈ ಬೆಳವಣಿಗೆ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿತು.
ಸೋಲುವುದು ಸಹಜ ಬಿಡಿ ಎಂದು ದೇಶಾವರಿ ಮಾತುಗಳಲ್ಲಿ ಪರಿಣಿತಿ ಸಾದಿಸಿರುವ ಎಡಪಕ್ಷಗಳು ಚುನಾವಣೆ ಯಾಕೆ? ಗೆಲ್ಲಬೇಕು ಯಾಕೆ? ಎಂದು ಮರಳಿ ಪ್ರಶ್ನೆಗಳ ಬಾಣ ಬಿಡುತ್ತಾರೆ. ರಾಶ್ಟ್ರ ಮಟ್ಟದಲ್ಲಿ ಚುನಾವಣೆಯ ಸಂದರ್ಬದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಇವರ ಮೈತ್ರಿ-ವಿರೋದ ಯಾವ ಬಗೆಯದು ಎಂದು ಸ್ವತಃ ಎಡ ಪಕ್ಷಗಳ ಕಾರ್ಯಕರ್ತರಿಗೆ ಅರ್ಥವಾಗಿಲ್ಲ. ಇಂತಹ ಅರಾಜಕತೆ, ಅಪನಂಬಿಕೆಗಳ ನಡುವೆ ಪ.ಬಂಗಾಳದಲ್ಲಿ ಮತಗಳು ಹಂಚಿಹೋಗುವುದನ್ನ ತಡೆಯಲು ಕಾಂಗ್ರೆಸ್ ಪಕ್ಷಕ್ಕೆ ನೀವು ಸ್ಪರ್ದಿಸಬೇಡಿ ಎಂದು ಯೆಚೂರಿ ಮನವಿ ಮಾಡಿಕೊಂಡಿದ್ದರು. ಆದರೆ ಕಾಂಗ್ರೆಸ್ ಕ್ಯಾರೆ ಎನ್ನದೆ ಎಲ್ಲಾ 42 ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡಿತು ಮತ್ತು ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾದಿಸಿ ಶೂನ್ಯ ಸಂಪಾದನೆ ಮಾಡಿದ ಎಡ ಪಕ್ಷಗಳತ್ತ ತಿರುಗಿ ನೋಡಿ ಎಂದು ನಗೆ ಬೀರುತ್ತಿದೆ. ಪ.ಬಂಗಾಳದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ವಲಸೆ ಹೋಗಿರುವುದು ಈ ಬಾರಿಯ ಫಲಿತಾಂಶದಿಂದ ಸಾಬೀತಾದರೂ ಸಹ ಕೊನೆಗೂ ತನ್ನ ಶತೃ ಟಿಎಂಸಿ ಪಕ್ಷ ಸೋಲುತ್ತಿದೆ ಎಂಬ ಖುಶಿಯಲ್ಲಿರುವ ಎಡ ಪಕ್ಷಗಳು ಮತಾಂದರ ಈ ಅಬೂತಪೂರ್ವ ಗೆಲುವಿಗೆ ಕಾರಣವೇನು ಎಂದು ಸ್ವತಃ ಆತ್ಮಾವಲೋಕನ ಮಾಡಿಕೊಂಡಂತೆ ಕಾಣುತ್ತಿಲ್ಲ. 2008ರ ನಂತರ ನಡೆದ ಪ್ರತಿ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಎಡ ಪಕ್ಷಗಳನ್ನ ನುಂಗಿ ಜೀರ್ಣಿಸಿಕೊಂಡಂತೆ 2021ರಲ್ಲಿ ಬಿಜೆಪಿ ಪಕ್ಷವು ಟಿಎಂಸಿ ಪಕ್ಷವನ್ನ ಆಪೋಶನ ತೆಗೆದುಕೊಳ್ಳಲಿದೆ ಎಂಬುದು ಈಗ ಕೊಲ್ಕತ್ತದ ಬದ್ರಲೋಕ್ ವಲಯಗಳಲ್ಲಿ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಆದರೆ ಬಹಳ ಹಿಂದೆ ಬೇಡ, 2004ರ ಲೋಕಸಭೆಯಲ್ಲಿ 59 ಸ್ಥಾನಗಳಲ್ಲಿ ಗೆಲುವು ಸಾದಿಸಿದ್ದ ಎಡಪಕ್ಷಗಳು ಈಗ 15 ವರ್ಶಗಳ ನಂತರ 5 ಸ್ಥಾನಗಳಿಗೆ ಕುಸಿದಿರುವಂತಹ ದಯನೀಯ ಸ್ಥಿತಿಗೆ ಯಾರಾದರೂ ಮರುಕ ಪಡುತ್ತಿದ್ದಾರೆಯೆ ಎಂದು ಸುತ್ತಲೂ ಕಣ್ಣಾಡಿಸಿದರೆ ಬದಲಿಗೆ ಕಲ್ಲು ಎಸೆಯುತ್ತಿರುವ ದೃಶ್ಯಗಳು ಮಾತ್ರ ಕಂಡುಬರುತ್ತಿವೆ.
ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಕಮ್ಯುನಿಶ್ಟ್ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಎಂದಿನಂತೆ ‘ನಮ್ಮದು ಚುನಾವಣಾ ಆದರಿತ ಪಕ್ಷವಲ್ಲ, ನಮ್ಮ ಶಕ್ತಿ ಚುನಾವಣೆ ಗೆಲ್ಲುವುದರಲಿಲ್ಲ ಬದಲಿಗೆ ಸಾಮಾಜಿಕ- ಆರ್ಥಿಕ ಹೋರಾಟಗಳನ್ನ ರೂಪಿಸುವುದರಲ್ಲಿ, ಅಲ್ಲಿ ಗೆಲುವು ಸಾದಿಸುವುದರಲ್ಲಿದೆ, ಅಲ್ಲಿ ನಾವು ಮತ್ತಶ್ಟು ಪ್ರಬಲರಾಗುತ್ತಿದ್ದೇವೆ’ ಎಂದು ಹೇಳುತ್ತಿದ್ದಾರೆ. ಆದರೆ ಮತ್ಯಾಕೆ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೀರಿ ಎಂದು ತಿರುಗಿ ಅವರನ್ನ ಯಾರೂ ಕೇಳುತ್ತಿಲ್ಲ, ಯಾಕೆಂದರೆ ಇಲ್ಲಿನ ಪ್ರಜ್ಞಾವಂತರೂ ಸಹ ಎಡಪಕ್ಷಗಳ ಕುರಿತು ಅಸಡ್ಡೆ, ನಿರ್ಲಕ್ಷ ಬೆಳೆಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಯೋಗೇಂದ್ರ ಯಾದವ್‍ರಂತಹ ಚುನಾವಣಾ ತಜ್ಞ, ಲೋಹಿಯಾವಾದಿಗಳು ‘ಎಡಪಂಥ ತೀರಿಕೊಂಡಿದೆ, ಆದರೆ ಭಾರತಕ್ಕೆ ಹೊಸ ಚಿಂತನೆಯ ಎಡಪಂಥದ ಅವಶ್ಯಕತೆ ಇದೆ’ ಎಂದು ಹೇಳುತ್ತಿದ್ದಾರೆ. ಯಾದವ್ ಅವರು ಕಳೆದ ಕೆಲವು ವರ್ಶಗಳಿಂದ ಭಾರತದ ರಾಜಕಾರಣದಲ್ಲಿ ಹೊಸ ದೃಶ್ಟಿಕೋನದಿಂದ ಯೋಚಿಸುತ್ತಿರುವ, ಪರ್ಯಾಯ ರಾಜಕಾರಣಕ್ಕಾಗಿ ಬದ್ದತೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಚಿಂತಕರು. ಅದರಲ್ಲೂ ಸ್ವರಾಜ್ ಅಬಿಯಾನ ಮೂಲಕ ಕಿಸಾನ್ ಚಳುವಳಿ ರೂಪಿಸುವಲ್ಲಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಸ್ವರಾಜ್ ಇಂಡಿಯಾ ಎನ್ನುವ ರಾಜಕೀಯ ಪಕ್ಷವೊಂದನ್ನ ಸ್ಥಾಪಿಸಿ ಅದನ್ನ ಬಿನ್ನವಾಗಿ ರೂಪಿಸುವಲ್ಲಿ ಹೆಣಗುತ್ತಿದ್ದಾರೆ. ತಮ್ಮ ಪಕ್ಷವನ್ನ ಸಿದ್ದಾಂತಗಳನ್ನ ಆದರಿಸಿದ ಪಕ್ಷಗಳ ರೀತಿಯ ಕೇಡರ್ ಮಾದರಿಯಲ್ಲಿ ಕಟ್ಟಬೇಕೆ ಅಥವಾ ಸಾಂಪ್ರದಾಯಿಕ ಪಕ್ಷಗಳ ರೀತಿಯಲ್ಲಿ ಹೈಕಮಾಂಡ್ ಸಂಸ್ಕøತಿಯ ರೀತಿಯಲ್ಲಿ ರೂಪಿಸಬೇಕೆ ಎಂಬುದರ ಕುರಿತಾಗಿ ಯಾದವ್ ಅವರಿಗೆ ಸ್ಪಶ್ಟತೆ ಇದ್ದಂತಿಲ್ಲ. ಆ ಪಕ್ಷದ ಪದಾದಿಕಾರಿಗಳಿಗೂ ಮತ್ತು ಕಾರ್ಯಕರ್ತರಿಗೂ ಯಾವುದೆ ಸ್ಪಶ್ಟತೆ ಇಲ್ಲ. ಏಕೆಂದರೆ ಕಳೆದ ಮೂರು ವರ್ಶಗಳಿಂದ ಸ್ವರಾಜ್ ಇಂಡಿಯಾ ಪಕ್ಷ ತಾನು ಸಕ್ರಿಯವಾಗಿರುವ ರಾಜ್ಯಗಳಲ್ಲಿ (ದೆಹಲಿ, ಹರ್ಯಾಣ) ಒಂದು ನಗರ ಸಬೆ ಚುನಾವಣೆ ಗೆಲ್ಲಲು ಸಾದ್ಯವಾಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಹುಟ್ಟಿನ ಹಂತದಿಂದ ಮುಂದಕ್ಕೆ ಚಲಿಸಲು ಒದ್ದಾಡುತ್ತಿದೆ. ಅದು ಯಾಕೆಂದು ಯಾದವ್ ಅವರಿಗೂ ಗೊತ್ತು. ಅವರಲ್ಲಿ ಅಸಹಾಯಕತೆ ಇದೆ. ನೂರು ವರ್ಶಗಳ ಇತಿಹಾಸವಿರುವ ಎಡ ಪಕ್ಷಗಳಲ್ಲಿರುವಂತಹ ಮಿತಿಗಳು ಮೂರು ವರ್ಶಗಳ ಸ್ವರಾಜ್ ಇಂಡಿಯಾ ಪಕ್ಷಕ್ಕೂ ಇದೆ. ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಎಡ ಪಕ್ಷಗಳ ಅಸಹಾಯಕತೆಗಳನ್ನ ಟೀಕಿಸುವ ಸಂದರ್ಬದಲ್ಲಿ ಯಾದವ್ ಅವರು ಈ ಹಳೆ ಲೋಹಿಯಾವಾದಿಯ ಕಮ್ಯುನಿಶ್ಟ್ ವಿರೋದಿ ಗೂಡಿನೊಳಗಿಂದಲೆ ಮಾತನಾಡಿದ್ದಾರೆ. ಆದರೆ ಲೋಹಿಯಾವಾದಿಗಳ ಈ ಮಾದರಿ ಸವಕಲಾಗಿದೆ, ಹಳಸಿದೆ ಎಂದು ಯಾದವ್ ಅವರಿಗೆ ಗೊತ್ತಿದೆ, ಆದರೂ ಅದನ್ನೆ ನೆಚ್ಚುತ್ತಾರೆ, ಇದೆ ಇವರ ಸಮಸ್ಯೆ
ಹಿಂದೆ 5, ಎಪ್ರಿಲ್ 2019ರಂದು ಮಾತನಾಡುತ್ತ ಯಾದವ್ ಅವರು ‘ದ್ರಾವಿಡ ಪಕ್ಷಗಳು ಡೆಡ್ ಎಂಡ್ ತಲುಪಿವೆ, ಅವು ಯಾವುದೆ ಸಿದ್ದಾಂತಗಳನ್ನ ಪ್ರತಿನಿದಿಸುತ್ತಿಲ್ಲ, ಅವರಿಗೆ ನೈತಿಕ ಮುಖವಿಲ್ಲ’ ಎಂದು ಟೀಕಿಸಿದ್ದರು. ಆದರೆ ದ್ರಾವಿಡ ಪಕ್ಷಗಳು ಕಟ್ಟಿದ ಆರೆಸ್ಸಸ್ ವಿರೋದಿ ರಾಜಕೀಯ ಚಳುವಳಿಗಳು, ರೂಪಿಸಿದ ಸಿದ್ದಾಂತಗಳು, ವೈಚಾರಿಕತೆ ಇಂದಿಗೂ ಐತಿಹಾಸಿಕ. ಈಗ ಅ ಪಕ್ಷಗಳು ಕವಲುಹಾದಿಯಲ್ಲಿವೆ. ಆದರೆ ಅದು ಡೆಡ್ ಎಂಡ್ ಅಲ್ಲ. ಏಕೆಂದರೆ 2019ರ ಚುನಾವಣೆಯಲ್ಲಿ ಮೋದಿಯ ಅಲೆಯನ್ನ ತಡೆದು ನಿಲ್ಲಿಸಿ ತ.ನಾಡಿನಲ್ಲಿ ಬಿಜೆಪಿ ಪಕ್ಷವನ್ನ ಸೋಲಿಸಿದ ಈ ದ್ರಾವಿಡ ಪಕ್ಷಗಳು ಯಾದವ್ ಅವರ ಈ ಸಂಕುಚಿತ ಟೀಕೆಗಳನ್ನ ಒಂದು ಮಿಥ್ಯೆ ಎಂದು ಸಾಬೀತುಪಡಿಸಿವೆ.
ಎಡ ಪಕ್ಷಗಳ ವಿರುದ್ದ ಟೀಕೆ ಮಾಡುತ್ತ ‘ಕಳೆದ ನೂರು ವರ್ಶಗಳಿಂದ ಎಡಪಂಥವು ಒಂದು ಸಂಕುಚಿತ, ಜಡಗೊಂಡ, ತತ್ವ ಸಿದ್ದಾಂತಗಳ ರಾಜಕಾರಣ ಮಾಡುತ್ತ ಬಂದಿದೆ. ಬಂಡವಾಳಶಾಹಿ ರಾಜಕೀಯ ಆರ್ಥಿಕತೆ, ಕ್ರಾಂತಿಯ ಅನಿವಾರ್ಯತೆಯ ಕುರಿತಾದ ನಂಬಿಕೆ, ಪ್ರಬುತ್ವ-ಸಮಾಜವಾದದ ಆದರ್ಶ ಮತ್ತು ದುಡಿಯುವ ವರ್ಗಗಳ ಸರ್ವಾದಿಕಾರದಂತಹ ಸಿದ್ದಾಂತಗಳಿಂದ ಸುತ್ತುಗಟ್ಟಲ್ಪಟ್ಟಿದೆ, ಸಿಪಿಐ, ಸಿಪಿಐ(ಎಂ), ಸಿಪಿಐ (ಮಾವೋವಾದಿ) ಮತ್ತು ಸಿಪಿಐ (ಎಂಲ್)ನ ಹಲವಾರು ಬಣಗಳು ಈ ರಾಜಕಾರಣವನ್ನ ಪ್ರತಿನಿದಿಸುತ್ತವೆ’ ಎಂದು ಬರೆಯುತ್ತಾರೆ. ಮುಂದುವರೆದು ‘ಸಾಂಪ್ರದಾಯಿಕ ಎಡಪಂಥ ಸತ್ತಿದೆ. ಇದು ಆಕಸ್ಮಿಕವಲ್ಲ’ ಎಂದು ಹೇಳುತ್ತಾರೆ. ಎಡ ಪಕ್ಷಗಳ ಯುರೋಪ್ ಕೇಂದ್ರಿತ ಚಿಂತನೆಗಳನ್ನ ಸರಿಯಾಗಿಯೆ ಗುರುತಿಸುವ ಯಾದವ್ ಅವರು ಸೋವಿಯತ್ ಒಕ್ಕೂಟವು ದ್ವಂಸಗೊಂಡು ಮೂರು ದಶಕಗಳ ನಂತರವೂ ಬಾರತದ ಕಮ್ಯುನಿಶ್ಟ ರಾಜಕಾರಣ ಉಳಿದುಕೊಂಡಿರುವುದು ಹೇಗೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅದೆ ದನಿಯಲ್ಲಿ ಪ್ರಜಾಪ್ರಬುತ್ವವನ್ನ ಉಳಿಸುವಲ್ಲಿ, ಅನೇಕ ಸಾಹಿತಿ, ಕಲಾವಿದರನ್ನ ರೂಪಿಸುವಲ್ಲಿ ಎಡಪಂಥದ ಕೊಡುಗೆಯನ್ನು ಸ್ಮರಿಸುತ್ತಾರೆ. ಯಾಕೆ ಏಕಪಕ್ಷೀಯವಾಗಿ ಟೀಕಿಸುತ್ತೀರಿ ಎಂದು ಪ್ರಶ್ನಿಸಿದರೆ ನೋಡಿ ಪ್ರಶಂಸಿಸಿದ್ದೇನೆ ಎನ್ನುವ ಒಂದು ಬಗೆಯಲ್ಲಿ ಸಮತೋಲನಗೊಳಿಸುವಂತೆ ಬರೆಯುತ್ತಾರೆ.
ಬಾರತದ ಸಂದರ್ಬದಲ್ಲಿ ಸಂಸದೀಯ ಪ್ರಜಾಪ್ರಬುತ್ವ ಮತ್ತು ಸಮಾಜವಾದದ ಕುರಿತಂತೆ ಸಮಾಜವಾದಿ ಪ್ರಜಾತಾಂತ್ರಿಕ ಎಡ ಪಕ್ಷಗಳು (ಸಿಪಿಐ, ಸಿಪಿಐ (ಎಂ), ಇತ್ಯಾದಿ) ಮತ್ತು ಲೋಹಿಯಾ ಸಮಾಜವಾದಿಗಳ ನಡುವೆ ಅನೇಕ ಸೈದ್ದಾಂತಿಕ ಬಿನ್ನಾಬಿಪ್ರಾಯಗಳಿವೆ. ಮೇಲಿನ ಎಡ ಪಕ್ಷಗಳನ್ನ ಯುರೋಪ್ ಕೇಂದ್ರಿತ ಸಿದ್ದಾಂತವಾದಿಗಳು (ಮೇಲೆ ಯಾದವ್ ಟೀಕಿಸಿದಂತೆ) ಎಂದು ಕಟುಕಿಯಾಡುವ ಲೋಹಿಯಾವಾದಿಗಳು ಸ್ವತಃ ಲೋಹಿಯಾ ಅವರು ಯುರೋಪಿಯನ್ ಸೋಶಿಯಲಿಸಂನ ಪ್ರಬಾವಕ್ಕೆ ಒಳಗಾಗಿದ್ದರು ಎಂದು ಮರೆಯುತ್ತಾರೆ. ಯುರೋಪ್ ಸಮಾಜವಾದಿಗಳ ನಾಸ್ತಿಕತೆ ಮತ್ತು ಬೌತಿಕವಾದವನ್ನ ಅದ್ಯಯನ ಮಾಡಿದ ಲೋಹಿಯಾ ಅದನ್ನ ಬಾರತದ ಜಾತಿಪದ್ದತಿಯ ಚೌಕಟ್ಟಿಗೆ ಹೊಂದಿಸಲು ಪ್ರಯತ್ನಿಸುತ್ತಾರೆ. ಈ ಘಟ್ಟದಲ್ಲಿ ತಮ್ಮನ್ನ ‘ಕೆಳಜಾತಿಯ ಗಾಂದಿವಾದಿ’ ಎಂದು ಗೇಲಿ ಮಾಡಿಕೊಳ್ಳುತ್ತಾರೆ. ಆದರೆ ಲೋಹಿಯಾ ಅವರ ಒಟ್ಟಾರೆ ಚಿಂತನೆಗಳು ಯುರೋಪಿಯನ್ ಸಮಾಜವಾದದ ಪ್ರಬಾವದಿಂದಲೆ ಮೂಡಿಬಂದಿದ್ದವು ಎಂಬುದನ್ನ ಯೋಗೇಂದ್ರ ಯಾದವ್ ಅವರಂತಹ ಅನುಯಾಯಿಗಳು ಜಾಣತನದಿಂದ ಮರೆಮಾಚುತ್ತಾರೆ. ಆದರೆ ಮಾಕ್ರ್ಸವಾದ ಮತ್ತು ಗಾಂದಿವಾದವನ್ನ ಬೆಸೆಯಲು ಪ್ರಯತ್ನಿಸಿದ್ದ ಇಂಡಿಯಾದ ಮಾಕ್ರ್ಸವಾದಿ ಎಡಪಂಥ ಚಳುವಳಿಗಳ ಇತಿಹಾಸವನ್ನ ಸಾರಾಸಗಟಾಗಿ ಯುರೋಪ್ ಕೇಂದ್ರಿತ ಎಂದು ಟೀಕಿಸುವುದು ಅಪ್ರಬುದ್ದ ನಡೆ ಎಂದು ಹೇಳಬೇಕಾಗುತ್ತದೆ. ಯಾಕೆಂದರೆ ಕಳೆದ ಎಪ್ಪತ್ತು ವರ್ಶಗಳಲ್ಲಿ ಈ ಲೋಹಿಯಾವಾದಿಗಳು ಸಮಾಜೋ-ರಾಜಕೀಯವಾಗಿ ಸಾದಿಸಿದ್ದು ಅತ್ಯಲ್ಪ. ಬದಲಿಗೆ ಕಮ್ಯುನಿಶ್ಟರನ್ನ ಬೈದುಕೊಂಡು ಅಡ್ಡಾಡಿದ್ದೆ ಜಾಸ್ತಿ. ಮತ್ತೊಂದೆಡೆ ಎಡಪಕ್ಷಗಳು ಕಟ್ಟಿದ, ರೂಪಿಸಿದ ಬಂಡವಾಳಶಾಹಿ ವಿರೋದಿ ವರ್ಗ ಸಂಘರ್ಶಗಳು, ಸೈದ್ದಾಂತಿಕ ಹೋರಾಟಗಳು ಚಾರಿತ್ರಿಕವಾಗಿ ಮಹತ್ವವನ್ನ ಪಡೆದಿವೆ ಮತ್ತು ದುಡಿಯುವ ವರ್ಗಗಳ ಬದುಕಿಗೆ ನೆರವಾಗಿವೆ. ದುಡಿಯುವ ವರ್ಗಗಳ ಸಮಾಜೋ-ಆರ್ಥಿಕ ಸಬಲೀಕರಣದ ಮಾದರಿಗಳನ್ನ ರೂಪಿಸಿವೆ. ಇದನ್ನ ಚುನಾವಣಾ ಸಂದರ್ಬದಲ್ಲಿನ ಕಮ್ಯುನಿಶ್ಟರ ಜಡತ್ವ, ಬೇಜವಬ್ದಾರಿ ಮತ್ತು ತರ್ಕಹೀನ ರಾಜಕಾರಣದೊಂದಿಗೆ ತಳಕು ಹಾಕುವ ಯೋಗೇಂದ್ರ ಯಾದವ್ ಅವರಿಗೆ ಹಾಗಿದ್ದಲ್ಲಿ ಪ್ರಜಾ ಸೋಶಿಯಲಿಸ್ಟ್ ಮತ್ತು ಸಮಾಜವಾದಿ ಪಕ್ಷಗಳ ಸಾದನೆ ಏನು ಎಂದು ಮರು ಪ್ರಶ್ನಿಸಿದಾಗ ಉತ್ತರಿಸದೆ ಮೌನವಾಗುತ್ತಾರೆ.
ನಿಜದಲ್ಲಿ ಎಡ ಪಕ್ಷಗಳು ಇಲ್ಲಿನ ಜಾತಿಪದ್ದತಿಯ ಕ್ರೌರ್ಯ ಮತ್ತು ದೌರ್ಜನ್ಯವನ್ನ ಅರ್ಥೈಸಿಕೊಳ್ಳಲು, ಒಳನೋಟಗಳನ್ನ ಕಂಡುಕೊಳ್ಳಲು ಸೋತಿವೆ. ಜಾತಿ ಸಂಘರ್ಶ ಮತ್ತು ವರ್ಗ ಸಂಘರ್ಶ ಒಂದಕ್ಕೊಂದು ಪೂರಕವಾಗಿ ಹೆಣೆದುಕೊಂಡು ಸಂಘಟಿತವಾಗಬೇಕು ಏಕೆಂದರೆ ಅವೆರಡಕ್ಕೂ ಕೇಂದ್ರ ಮಾತ್ರ ಒಂದೆ ಎಂಬ ಸತ್ಯವನ್ನ ಸಹ ಎಡ ಪಕ್ಷಗಳು ನಿರಾಕರಿಸುತ್ತಾರೆ. ಇದರ ಕುರಿತು ಚರ್ಚಿಸಲು ಯಾದವ್ ಅಶ್ಟೊಂದು ಉತ್ಸಾಹ ತೋರುವುದಿಲ್ಲ. ಏಕೆಂದರೆ ಸ್ವತಃ ಲೋಹಿಯಾವಾದಿಗಳೆ ಈ ವಿಶಯದಲ್ಲಿ ಯಾವುದೆ ಬದ್ದತೆ ಮತ್ತು ಕಾರ್ಯಯೋಜನೆಗಳನ್ನ ರೂಪಿಸಿದ ಉದಾಹರಣೆಗಳಿಲ್ಲ. ಇದು ಯೋಗೇಂದ್ರ ಯಾದವ್ ಅವರಿಗೂ ಗೊತ್ತು. ಅವರ ಸ್ವರಾಜ್ ಇಂಡಿಯಾದ ಸಂವಿದಾನದಲ್ಲಿಯೂ ಅಂಬೇಡ್ಕರ್ ರೂಪಿಸಿದ ಜಾತಿ ವಿರೋದಿ ಚಳುವಳಿಯ ಕುರಿತು ಪ್ರಸ್ತಾಪವಿಲ್ಲ, ಜಾತಿ ಪದ್ದತಿಯ ಅಸಮಾನತೆಯ ವಿರುದ್ದ ಹೋರಾಟ ರೂಪಿಸಬೇಕಾದ ಮಾರ್ಗಗಳ ಕುರಿತೂ ಸ್ಪಶ್ಟತೆ ಇಲ್ಲ.
ಲಿನಿನ್ ಒಂದೆಡೆ ‘ಕ್ರಾಂತಿಕಾರಿ ಸಂಘಟನೆಗಳ ಕ್ರಿಯಾಶೀಲತೆ ಮತ್ತು ಕಾರ್ಯಯೋಜನೆಗಳಿಗೆ ಸಂಪೂರ್ಣ ಸ್ವಾತಂತ್ರ ದೊರೆತಾಗಲೆ ಕ್ರಾಂತಿಕಾರಿ ರಾಜಕಾರಣವು ಯಶಸ್ವಿಯಾಗುತ್ತದೆ’ ಎಂದು ಹೇಳುತ್ತಾನೆ. ಅಂದರೆ ಎಡ ಪಕ್ಷಗಳ ಶ್ರಮಿಕರ ಪರವಾದ ವರ್ಗ ಸಂಘರ್ಶ ಮತ್ತು ಬಂಡವಾಳಶಾಹಿ ವಿರೋದಿ ಚಳುವಳಿಗಳು ಕಟ್ಟ ಕಡೆಯ ವ್ಯಕ್ತಿಯನ್ನ ಒಳಗೊಳ್ಳಬೇಕೆಂದರೆ, ಸಾರ್ಥಕತೆ ಪಡೆದುಕೊಳ್ಳಬೇಕೆಂದರೆ, ಪ್ರಸ್ತುತಗೊಳ್ಳಬೇಕೆಂದರೆ, ತಾರ್ಕಿಕ ಅಂತ್ಯ ತಲುಪಬೇಕಾದರೆ ಸಂಸದೀಯ ಪ್ರಜಾಪ್ರಬುತ್ವದ ಅವಶ್ಯಕತೆ ಇದೆ. ತಮ್ಮ ಚಳುವಳಿ, ಸಂಘಟನೆಗಳನ್ನ ಕಾಪಾಡಿಕೊಳ್ಳಲು, ಪ್ರಸ್ತುತಗೊಳಿಸಿಕೊಳ್ಳಲು, ದನಿ ಪಡೆದುಕೊಳ್ಳಲು ಚುನಾವಣಾ ಪ್ರಕ್ರಿಯೆಯಲ್ಲಿ ಬಾಗವಹಿಸಲೆ ಬೇಕಾಗುತ್ತದೆ ಮತ್ತು ಗೆಲ್ಲಲೇಬೇಕಾಗುತ್ತದೆ. ಆದರೆ ನಮ್ಮದು ಚುನಾವಣಾ ಆದಾರಿತ ಪಕ್ಷವಲ್ಲ, ಸಂಘಟನೆ ಆದಾರಿತ ಪಕ್ಷ ಎಂದು ಕಮ್ಯುನಿಶ್ಟ್ ಸಂಗಾತಿಗಳು ಹೇಳಿಕೊಳ್ಳುವುದು ಬಾಲಿಶವೆನಿಸಿಕೊಳ್ಳುತ್ತದೆ. ಇದು ಪಲಾಯನವಾದವಶ್ಟೆ. ಯೋಗೇಂದ್ರ ಯಾದವ್ ಅವರು ಇದನ್ನ ಮತ್ತಶ್ಟು ವಿಸ್ತರಿಸಿ ಎಡ ಪಕ್ಷಗಳನ್ನ ವಿಮರ್ಶಿಸಬೇಕಾಗಿದೆ. ಅವರಿಗೆ ಇದರಲ್ಲಿ ಪರಿಣಿತಿ ಇದೆ ಮತ್ತು ಅವರ ಈ ಪರಿಣಿತಿ ಅವರದೆ ಸ್ವರಾಜ್ ಇಂಡಿಯಾ ಪಕ್ಷಕ್ಕೂ ಅವಶ್ಯಕತೆ ಇದೆ.
21ನೆ ಶತಮಾನ ‘ಬಂಡವಾಳಶಾಹಿಗಳ ಸುವರ್ಣ ಯುಗ’ ಎಂದು ಪ್ರಬಾತ್ ಪಟ್ನಾಯಕ್ ವಿಮರ್ಶಿಸುತ್ತಾರೆ. ಬಂಡವಾಳಶಾಹಿಗಳ ಯುಗದಲ್ಲಿನ ‘ಬೇಡಿಕೆ-ಪೂರೈಕೆ’ಯ ಸರಪಣಿಯನ್ನ ಅಂದಕಾಲತ್ತಿಲ್ ಸಾಂಪ್ರದಾಯಿಕ ಮಾಕ್ರ್ಸವಾದಿ ತಿಳುವಳಿಕೆಯ ಮೂಲಕ ಅರ್ಥ ಮಾಡಿಕೊಳ್ಳುವ ಎಡಪಂಥೀಯರು ಈ ಕಾರಣಕ್ಕಾಗಿಯೆ ಪದೆ ಪದೆ ಎಡವುತ್ತಾರೆ. ಏಕೆಂದರೆ ನವ ಉದಾರೀಕರಣದ ಈ ‘ಬೇಡಿಕೆ-ಪೂರೈಕೆ’ಯ ವ್ಯವಸ್ಥೆಯಲ್ಲಿ ರಾಜ್ಯಗಳ ಪಾತ್ರ ಗೌಣವಾಗಿರುತ್ತದೆ. ಬೇಡಿಕೆ ಇದೆ, ಉತ್ಪಾದಕತೆ ಹೆಚ್ಚಿಸಬೇಕು ಎನ್ನುವ ಒಂದಂಶವನ್ನ ಮುಂದಿಟ್ಟುಕೊಂಡು ಸಾರ್ವಜನಿಕ ವ್ಯವಸ್ಥೆ ಕಣ್ಮರೆಯಾಗುತ್ತ ಖಾಸಗೀಕರಣ ಮೇಲುಗೈ ಸಾದಿಸುತ್ತದೆ. ಇದನ್ನ ಕೂಲಂಕುಶವಾಗಿ ಅರ್ಥ ಮಾಡಿಕೊಳ್ಳಲು ಎಡ ಸಂಘಟನೆಗಳಿಗೆ ಸಾದ್ಯವಾಗುತ್ತಿಲ್ಲ. ಕಲೋನಿಯಲಿಸಂ ಕಾರಣಕ್ಕೆ ಔದ್ಯಮೀಕರಣ ಮತ್ತು ಉತ್ಪಾದನ ಸಾಮಥ್ರ್ಯ ಹೆಚ್ಚುತ್ತ ಹೋಗುತ್ತದೆ ಎಂದು ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಸಮರ್ಥಕರು ಪ್ರತಿಪಾದಿಸುತ್ತಾರೆ. 21ನೆ ಶತಮಾನದಲ್ಲಿಯೂ ಬಾರತದಲ್ಲಿ ಕಲೋನಿಯಲಿಸಂ ಚಾಲ್ತಿಯಲ್ಲಿದೆ ಆದರೆ ಬೇರೆಯದೆ ಸ್ವರೂಪದಲ್ಲಿದೆ. ಆ ಸ್ವರೂಪವೇನು ಎಂದು ಕಂಡುಕೊಳ್ಳಲು ಎಡ ಸಂಘಟನೆಗಳು ಪ್ರಯತ್ನಿಸುತ್ತಿಲ್ಲ. ಹಳೆ ಗ್ರಹಿಕೆ, ನುಡಿಕಟ್ಟುಗಳಲ್ಲಿ ಕಳೆದುಹೋಗಿದ್ದಾರೆ. ಈ ಕಾರಣಕ್ಕಾಗಿಯೆ ಪ್ರಬುತ್ವ-ಸಮಾಜವಾದಿ ಎನ್ನುವ ನುಡಿಕಟ್ಟು ಮೌಲ್ಯವನ್ನೆ ಕಳೆದುಕೊಂಡು ಅದನ್ನ ಪ್ರತಿಪಾದಿಸುವ ಎಡ ಪಕ್ಷಗಳು ಗೇಲಿಗೊಳಗಾಗುತ್ತಾರೆ. ಇಂದಿಗೂ ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಕಟ್ಟುತ್ತೇವೆ ಎಂದು ಮುಗ್ದತೆಯಲ್ಲಿ ಮಾತನಾಡುತ್ತಾರೆ. ಆದರೆ ಇಲ್ಲಿ ಯಾವುದೆ ಪರ್ಯಾಯವೂ ಸಾದ್ಯವಿಲ್ಲ, ಬದಲಿಗೆ ಈ ಬಂಡವಾಳಶಾಹಿ ವ್ಯವಸ್ಥೆಯನ್ನೆ ದಾಟಿಕೊಂಡು ಮುಂದುವರೆಯಬೇಕು ಅದಕ್ಕೆ ಸಿದ್ದತೆಗಳು, ಅದ್ಯಯನಗಳು, ಪ್ರಾಯೋಗಿಕ ಕಾರ್ಯಯೋಜನೆಗಳ ಅವಶ್ಯಕತೆ ಇದೆ. ‘ಕಾರಣ ಮತ್ತು ಪರಿಣಾಮ’ (ಛಿಚಿuse ಚಿಟಿಜ eಜಿಜಿeಛಿಣ)ಗಳ ವಿಶ್ಲೇಶಿಸಬೇಕು. ಆದರೆ ಎಡ ಪಕ್ಷಗಳು ಇದರ ಕಡೆ ಗಮನ ಹರಿಸುತ್ತಿಲ್ಲ ಮತ್ತು ಅದರ ಕುರಿತು ಸಂವೇದನೆಯನ್ನ ಸಹ ವ್ಯಕ್ತಪಡಿಸುತ್ತಿಲ್ಲ. ಯೋಗೇಂದ್ರ ಯಾದವ್ ಅವರು ಕೇವಲ ಮೇಲ್ಮಟ್ಟದಲ್ಲಿ ಎಡ ಪಕ್ಷಗಳನ್ನ ಗೇಲಿ ಮಾಡುವುದನ್ನ ನಿಲ್ಲಿಸಿ ಅವರೊಂದಿಗೆ ಚರ್ಚೆ, ಸಂವಾದ ನಡೆಸಿ ಈ ಕುರಿತು ದೀರ್ಘಕಾಲೀನ ಕಾರ್ಯಯೋಜನೆಗಳನ್ನ ರೂಪಿಸಬೇಕು. ಏಕೆಂದರೆ ‘ಹೊಸ ಎಡಪಂಥ’ದ ಹುಟ್ಟಿನ ಅವಶ್ಯಕತೆಯ ಕುರಿತು ಮಾತನಾಡುವ ಯೋಗೇಂದ್ರ ಯಾದವ್ ಅವರು ‘ನವ ಉದಾರೀಕರಣ, ಜಾಗತೀಕರಣ ಮತ್ತು ಜಾತಿ ಪ್ರತ್ಯೇಕತೆ/ ತಾರತಮ್ಯ’ದ ಹಿನ್ನೆಲೆಯಲ್ಲಿ ಎಡ ಪಕ್ಷಗಳು ಮರುಹುಟ್ಟು ಪಡೆದುಕೊಳ್ಳುವ ಮಾದರಿಗಳೇನು ಎಂದು ವಿವರಿಸುವುದಿಲ್ಲ. ಆದರೆ ‘ಹೊಸ ಎಡಪಂಥ’ಕ್ಕೆ ಅವಶ್ಯಕವಾದ ಮೂಲದ್ರವ್ಯವನ್ನ ಜಯಪ್ರಕಾಶ ನಾರಾಯಣ, ನರೇಂದ್ರ ದೇವ, ರಾಮಮನೋಹರ ಲೋಹಿಯಾರಂತಹ ಸಮಾಜವಾದಿಗಳ ಬಳಿ ಪಡೆದುಕೊಳ್ಳಿ ಎಂದು ಹೇಳುತ್ತಾರೆ. ಇಲ್ಲಿ ಲೋಹಿಯಾ ಅವರನ್ನ ಹೊರತುಪಡಿಸಿ ಮಿಕ್ಕ ಸಮಾಜವಾದಿಗಳ ಚಿಂತನೆಗಳು ಇಂದಿನ ‘ಬಂಡವಾಳಶಾಹಿ-ಮತಾಂದತೆ-ನಿರಂಕುಶ ಪ್ರಬುತ್ವ’ಕ್ಕೆ ಸೂಕ್ತ ಪರಿಹಾರ ಒದಗಿಸಬಲ್ಲವು ಎಂದು ಯಾದವ್ ನಂಬಿದ್ದಾರೆ ಎಂದರೆ ನಾನಂತೂ ಅವರ ಈ ತರ್ಕವನ್ನ ಪ್ರಶ್ನಿಸುತ್ತೇನೆ. ಎಂದಿನಂತೆ ಅಂಬೇಡ್ಕರ್ ಅವರು ಇಲ್ಲಿ ಪ್ರಸ್ತಾಪವಾಗುವದೆ ಇಲ್ಲ. ಯಾಕೆಂದು ಯಾದವ್ ಅವರೆ ಉತ್ತರಿಸಬೇಕು.
ಲೋಹಿಯಾ ಚಿಂತನೆಗಳು ಇಂದು ಹಿಂದುಳಿದ ವರ್ಗಗಳನ್ನ ಪೊರೆಯುತ್ತಿಲ್ಲ ಮತ್ತು ಅದರ ಕುರಿತು ಅರಿವು, ಸಂವೇದನೆಯೂ ಇಲ್ಲ. ಆದರೆ ಹೊಸ ತಲೆಮಾರಿನ ದಲಿತ ಸಮುದಾಯವು ಅಂಬೇಡ್ಕರ್ ಅವರ ಬದುಕು ಮತ್ತು ಚಿಂತನೆಗಳನ್ನ ಉಸಿರಾಗಿಸಿಕೊಂಡಿದ್ದಾರೆ, ಅವರ ನಡೆ-ನುಡಿಯಾಗಿದೆ. ಅಂಬೇಡ್ಕರ್ ಅವರು ‘ಜಾತಿ ಪದ್ದತಿಯು ಹಿಂದೂ ದರ್ಮದೊಳಗೆ ಅಂತರ್ಗತವಾಗಿದೆ, ಹಿಂದೂಗಳು ಜಾತಿ ಪದ್ದತಿಯನ್ನ ಅದು ಒಂದು ದರ್ಮ ಎಂಬ ಕಾರಣಕ್ಕೆ ನಂಬುತ್ತಾರೆ’ ಎಂದು ವಿವರಿಸುತ್ತಾರೆ. ಆದರೆ ಲೋಹಿಯಾ ಅವರು ಈ ಕುರಿತು ಮೌನ ವಹಿಸುತ್ತಾರೆ. ಇದನ್ನ ಹೇಳುತ್ತಾ ಹೋಗಬಹುದು. ಈ ಸಂಕೀರ್ಣತೆ ಮತ್ತು ವೈರುದ್ಯಗಳನ್ನ ವಿಶ್ಲೇಶಿಸದೆ ಲೋಹಿಯಾ ಚಿಂತನೆಗಳ ಮೂಲಕ ಎಲ್ಲವನ್ನೂ ಪಡೆದುಕೊಳ್ಳಿ ಅಂತ ಹೇಳುವುದು ಮತ್ತೊಂದು ಸೋಲಿಗೆ ತಯಾರಾಗಿ ಎಂದೆ ಅರ್ಥ. ಇದನ್ನೆ ಮುಂದುವರೆಸಿದರೆ ಇಲ್ಲಿ ಹೊಸ ಎಡಪಂಥ ಹುಟ್ಟುವುದಕ್ಕಿಂತಲು ಮುಂಚೆ ಕೊನೆ ಉಸಿರೆಳೆಯುತ್ತದೆ.



ದಯವಿಟ್ಟು ಈ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿ.