Homeಅಂಕಣಗಳುಎನ್.ಆರ್.ಸಿ ಎಂಬ ಪೊಲಿಟಿಕಲ್ ಸಂಚು

ಎನ್.ಆರ್.ಸಿ ಎಂಬ ಪೊಲಿಟಿಕಲ್ ಸಂಚು

- Advertisement -
- Advertisement -

ಅಸ್ಸಾಮ್ ಇಂದು ಒಂದು ಜ್ವಾಲಾಮುಖಿಯಾಗಿದೆ. ರಾಜ್ಯದಲ್ಲಿಯ ಜನಾಂಗೀಯ ಮಿಶ್ರಣ ಸ್ಫೋಟಗೊಳ್ಳುವ ಅಪಾಯದಲ್ಲಿರುವಾಗಲೇ ರಾಜಕೀಯ ಶಕ್ತಿಗಳು ಈ ಬಿಕ್ಕಟ್ಟಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಒಂದು ಅವಕಾಶವನ್ನು ಹುಡುಕುತ್ತಿದ್ದಾರೆ. ಭಾರತದ ಇತರ ಭಾಗ ಅಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ಮುಂಚಿನಿಂದಲೂ ತಲೆಕೆಡಿಸಿಕೊಂಡಿಲ್ಲ, ಈಗಲೂ ಏನಾಗುತ್ತಿದೆ ಎನ್ನುವುದರ ಅರಿವು ಇಲ್ಲ.
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ)ಗಾಗಿ ಆಗುತ್ತಿರುವ ಸಿದ್ಧತೆಗಳು ಹಳೆಯ ಗಾಯಗಳನ್ನು ಮತ್ತೆ ಕೆದಕಿವೆ. ಹಲವಾರು ದಶಕಗಳಿಂದ ‘ವಲಸಿಗರ’ ಸಮಸ್ಯೆ ಆಸ್ಸಾಮ್ ರಾಜ್ಯದ ರಾಜಕೀಯದಲ್ಲಿ ಎಲ್ಲಕ್ಕಿಂತ ಮುಖ್ಯ ವಿಷಯವಾಗಿದೆ. ಸ್ವಾತಂತ್ರಪೂರ್ವದಲ್ಲಿ ಮತ್ತು ಸ್ವಾತಂತ್ರೋತ್ತರದಲ್ಲಿ ಆಸ್ಸಾಮ್ ರಾಜ್ಯದಲ್ಲಿ ಹೊರಗಿನವರು ಬಂದಿರುವುದು ಸಾಮಾನ್ಯ ವಿಷಯ. ಇವರಲ್ಲಿ ಭಾರತದೊಳಗಿಂದಲೇ ವಲಸೆ ಬಂದ ಹಿಂದಿ ಭಾಷಿಕರು, ಜಾರ್ಖಂಡದಿಂದ ಬಂದ ಬುಡಕಟ್ಟು ಜನರು, ಪಶ್ಚಿಮ ಬಂಗಾಲದಿಂದ ಬಂದ ಹಿಂದು ಬೆಂಗಾಲಿಗಳು ಹಾಗೂ ನೇಪಾಳ ಮತ್ತು ಬಾಂಗ್ಲಾದೇಶದಿಂದ ಬಂದ ವಲಸಿಗರು ಸೇರಿದ್ದಾರೆ. ಅದರಲ್ಲಿ ಗಣನೀಯ ಸಂಖ್ಯೆಯಲ್ಲಿರುವವರು ಬಾಂಗ್ಲಾದೇಶದಿಂದ ಬಂದ ಹಿಂದೂ ಮತ್ತು ಮುಸ್ಲಿಮ್ ವಲಸಿಗರು. (ಆ ಸಂಖ್ಯೆ ಎಷ್ಟು ಎನ್ನುವುದೇ ಪ್ರಮುಖ ಪ್ರಶ್ನೆಯಾಗಿದೆ) ಅವರುಗಳು ಧಾರ್ಮಿಕ ಕಿರುಕುಳದಿಂದಲೂ ಮತ್ತು ಜೀವನೋಪಾಯವನ್ನು ಅರಸುತ್ತಲೂ ಈ ರಾಜ್ಯಕ್ಕೆ ಬಂದಿದ್ದಾರೆ. ಈ ಅಂಕಿಅಂಶವನ್ನು ಪರಿಗಣಿಸಿ, ದೇಶವಿಭಜನೆಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ 24% ಹಿಂದುಗಳಿದ್ದರು, ಆ ಸಂಖ್ಯೆ ಈಗ 9% ಗೆ ಇಳಿದಿದೆ. ಹಿಂದುಗಳ ಜನಸಂಖ್ಯೆಗೆ ಏನಾಯ್ತು ಎನ್ನುವುದನ್ನು ಯಾರಾದರೂ ಸುಲಭವಾಗಿ ಊಹಿಸಬಹುದು.
ಈ ತರಹದ ದೊಡ್ಡಪ್ರಮಾಣದ ವಲಸೆಗಳು ಆಸ್ಸಾಮ್ ರಾಜ್ಯಕ್ಕೆ ಹೊಸದೇನಲ್ಲ. ವಲಸೆಗಳು ಇಂತಹ ಅಲೆಗಳಿಂದಲೇ ಆಸ್ಸಾಮ್ ರಾಜ್ಯದ ಇತಿಹಾಸ ತುಂಬಿಹೋಗಿದೆ. ಆದರೂ ಸ್ವಾತಂತ್ರೋತ್ತರದ ಈ ಬೃಹತ್ ಪ್ರಮಾಣದ ವಲಸೆ ಇಲ್ಲಿಯ ಜನಾಂಗೀಯ ಸಮತೋಲನವನ್ನು ಅಸ್ತವ್ಯಸ್ತಗೊಳಿಸಿದೆ. ಸರಕಾರ ಭಾಷಾವಾರು ಅಂಕಿಅಂಶಗಳನ್ನು ಇನ್ನೂ ಬಿಡಗಡೆ ಮಾಡದಿದ್ದರೂ, 2011 ರ ಜನಗಣತಿ ಆಸ್ಸಾಮೀಸ್ ಭಾಷಿಕರು ತಮ್ಮ ರಾಜ್ಯದಲ್ಲಿಯೇ ಅಲ್ಪಸಂಖ್ಯಾತರಾಗಿದ್ದರೆಂದು ತೋರಿಸುತ್ತದೆ; 1991 ರಿಂದ 2001 ರ ನಡುವೆ, ಅವರ ಸಂಖ್ಯೆ 58% ರಿಂದ 48% ಗೆ ಇಳಿದಿದೆ. ಅದೇ ಸಮಯದಲ್ಲಿ ಬೆಂಗಾಲಿ ಭಾಷಿಕರ ಸಂಖ್ಯೆ 21% ರಿಂದ 28% ಗೆ ಏರಿಕೆಯನ್ನು ಕಂಡಿದೆ. ಇದೇ ಟ್ರೆಂಡ್‍ನೊಂದಿಗೆ ಮುಂದುವರೆದು ನೋಡಿದಾಗ, ರಾಜ್ಯದಲ್ಲಿ ಈಗ 40% ಆಸ್ಸಾಮೀಸ್ ಭಾಷಿಕರಿದ್ದು, 33% ರಷ್ಟು ಜನ ಬೆಂಗಾಲಿ ಭಾಷಿಕರಾಗಿದ್ದಾರೆ. ಧಾರ್ಮಿಕ ಸಮುದಾಯಗಳಿಗೆ ಸಂಬಂಧಪಟ್ಟಂತೆ, 1951ರಲ್ಲಿ 25% ರಷ್ಟಿದ್ದ ಮುಸ್ಲಿಮ್ ಜನಸಂಖ್ಯೆ 2011ರಲ್ಲಿ 34% ರಷ್ಟಾಗಿದೆ.
ಜನಸಂಖ್ಯೆಯ ಈ ಭಾಷಾವಾರು ಮತ್ತು ಧಾರ್ಮಿಕ ವ್ಯತ್ಯಾಸಗಳ ಸಂಯೋಜನೆ ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಎದ್ದುಕಾಣುತ್ತದೆ. ಆಸ್ಸಾಮ್ ಒಂದು ಮುಸ್ಲಿಮ್ ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ ಎನ್ನುವುದರಲ್ಲಿ ಸತ್ಯಾಂಶವಿರದಿದ್ದರೂ, ಅಹೋಮಿಯಾ, ಬೋಡೋ ಮತ್ತು ಇತರ ಮಣ್ಣಿನ ಮಕ್ಕಳಾದ ಬುಡಕಟ್ಟು ಸಮುದಾಯಗಳ ಕಳವಳಗಳನ್ನು ವಜಾಗೊಳಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿ ಜನಾಂಗೀಯ ಸಂಘರ್ಷ ಮತ್ತು ಹಿಂಸೆಗೆ ಪೂರಕವಾಗಿದೆಯೆಂದೇ ಹೇಳಬಹುದು.
ಇಂದು ಮತ್ತೇ ಈ ಜ್ವಾಲಾಮುಖಿ ಸ್ಫೋಟಗೊಳ್ಳುವ ಸ್ಥಿತಿಯಲ್ಲಿದೆ. 1985ರ ಆಸ್ಸಾಮ್ ಅಕಾರ್ಡನ ಒಂದು ಪ್ರಮುಖ ಅಂಶವೇನೆಂದರೆ, 25 ಮಾರ್ಚ 1971 ರಂದು ಮತ್ತು ಆ ದಿನದ ನಂತರ ಬಂದ ಎಲ್ಲಾ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡುವುದು. ಆದರೆ ಅದು ಆಗಲಿಲ್ಲ. ಅಸ್ಸಾಮ್ ಗಣಪರಿಷದ್ ಪಕ್ಷ ಎರಡು ಸಲ ಅಧಿಕಾರಕ್ಕೆ ಬಂದಾಗಲು ಅದನ್ನು ಮಾಡಲಾಗಲಿಲ್ಲ. 2015ರಲ್ಲೂ ಕೂಡ ರಾಜ್ಯದಲ್ಲಿ ಪ್ರತಿಭಟನೆಗೆ ಇಳಿದ ವಿದ್ಯಾರ್ಥಿಗಳಿಗೆ ಇದೇ ವಾಗ್ದಾನವನ್ನು ನೀಡಲಾಗಿತ್ತು. ವಿಷಯ ಬಗೆಹರಿಯದೇ ಸುಪ್ರೀಮ್ ಕೋರ್ಟಿಗೆ ತಲುಪಿತು. ಆಗ ಉಚ್ಚ ನ್ಯಾಯಾಲಯ ನ್ಯಾಯಯುತವಾದ ನಾಗರಿಕರನ್ನು ಗುರುತಿಸಲು 1951ರಲ್ಲಿ ತಯಾರಿಸಲಾದ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್.ಆರ್.ಸಿ.)ನವೀಕರಿಸಬೇಕು ಎಂದು ತೀರ್ಪು ನಿಡಿತು. ಉಚ್ಚ ನ್ಯಾಯಾಲಯದ ಮೇಲ್ವೀಚಾರಣೆಯಲ್ಲಿ ಈ ಕಾರ್ಯ ಕಳೆದ ಮೂರು ವರ್ಷಗಳಿಂದ ನಡೆಯುತ್ತಲಿದೆ. 2017ರ ಡಿಸೆಂಬರ್ 31 ರ ಒಳಗೆ ಇದು ಮುಗಿಯಬೇಕಿತ್ತು. ಇದನ್ನು ಮುಂದೂಡಬೇಕೆಂದು ರಾಜ್ಯ ಸರಕಾರ ಮನವಿ ಮಾಡಿದರೂ, ಗಡುವಿನೊಳಗಾಗಿ ಮೊದಲನೇ ಪಟ್ಟಿಯನ್ನಾದರೂ ಬಿಡಗಡೆ ಮಾಡಲೇಬೇಕೆಂದು ಉಚ್ಚ ನ್ಯಾಯಾಲಯ ಆದೇಶಿಸಿತು.
ಆ ಮೊದಲ ಪಟ್ಟಿ ಅತ್ಯಂತ ಭಯ, ಆತಂಕ ಮತ್ತು ಅನೇಕ ಗೊಂದಲಗಳನ್ನು ಸೃಷ್ಟಿಸಿತು. ಆ ಪಟ್ಟಿಯಲ್ಲಿ ನೊಂದಾವಣಿಗೆ ಅರ್ಜಿ ಸಲ್ಲಿಸಿದ 3.29 ಕೋಟಿ ಜನರಲ್ಲಿ 1.9 ಕೋಟಿ ಜನರ ಹೆಸರನ್ನು ಒಳಗೊಂಡಿತ್ತು. ಅದು ಒಂದು ಕರಡು ಮಾತ್ರವಾಗಿದ್ದು, ಬರೀ ಮೊದಲನೆಯ ಪಟ್ಟಿ ಎನ್ನುವುದರಲ್ಲಿ ಸಂಶಯವಿಲ್ಲ ಆದರೆ ಅದು ಅಸಾಧ್ಯವಾದ ಪರಿಣಾಮಗಳನ್ನು ಒಳಗೊಂಡಿದೆ. ಅಲ್ಪಸಂಖ್ಯಾತ ಸಮುದಾಯದ ಅನೇಕರ ಹೆಸರುಗಳು ಈ ಪಟ್ಟಿಯಲ್ಲಿ ಸೇರಿಸದೇ ಇರುವುದು ಇನ್ನಷ್ಟು ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ.
ಆ ಪಟ್ಟಿಯಲ್ಲಿ ಸೇರದ ಹೆಸರುಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ: ಸರಿಯಾದ, ಅಪೂರ್ಣ ದಾಖಲೆಗಳನ್ನು ಸಲ್ಲಿಸಿರುವ ಮೂಲನಿವಾಸಿಗಳು, ಅನುಮಾನಾಸ್ಪದ ಕೇಸುಗಳು ಹಾಗೂ ಪಂಚಾಯತಿ ನೀಡಿರುವ ಪ್ರಮಾಣಪತ್ರಗಳನ್ನು ಸಲ್ಲಿಸಿರುವವರ ವಿಶೇಷ ವಿಭಾಗ. ಈಗಿನ ಸದ್ಯದ ವಿವಾದ ಈ ಮೂರನೆ ಕೆಟೆಗರಿಗೆ ಸಂಬಂಧಪಟ್ಟಿದ್ದಾಗಿದೆ. ಹೈಕೋರ್ಟ ಈ ಪ್ರಮಾಣಪತ್ರಗಳನ್ನು ತಿರಸ್ಕರಿಸಿದೆ, ಕೋರ್ಟಿನ ಈ ನಿರ್ಧಾರಕ್ಕೆ ರಾಜ್ಯಸರಕಾರದ ಪೂರ್ಣ ಬೆಂಬಲವಿದೆ. ಈ ಕೆಟೆಗರಿಯಲ್ಲಿ 27 ಲಕ್ಷ ಮುಸ್ಲಿಮ್ ಮಹಿಳೆಯರಿದ್ದಾರೆ. ಈ ಮಹಿಳೆಯರ ಹತ್ತಿರ ಪಂಚಾಯತಿ ನೀಡಿದ ಪ್ರಮಾಣಪತ್ರದ ಹೊರತು ಬೇರಾವುದೇ ದಾಖಲೆಗಳಿಲ್ಲ, ಅವರ ವಿವಾಹಗಳನ್ನು ದಾಖಲಿಸಿರುವುದಿಲ್ಲ ಅಥವಾ ಅವರ ಹತ್ತಿರ ಯಾವುದೇ ಶೈಕ್ಷಣಿಕ ಡಿಗ್ರಿಯೂ ಇಲ್ಲ. ಅವರ ಪೌರತ್ವದ ಹಕ್ಕನ್ನು ನಿರಾಕರಿಸಬಹುದು.
ರಾಜಕೀಯ ನಾಯಕತ್ವದ ತುಲನೆಯಾಗುವುದು ಇಲ್ಲಿಯೇ. ಆದರೆ ಶೋಚನೀಯ ವಿಷಯವೇನೆಂದರೆ, ಎಲ್ಲಾ ಪಕ್ಷಗಳು ತಮ್ಮ ಚುನಾವಣೆಯ ಲಾಭ ನಷ್ಟಗಳ ಮೇಲೆಯೇ ತಮ್ಮ ಗಮನವನ್ನು ಕೇಂದ್ರೀಕರಿಸಿವೆ. ಅತೀ ಹೆಚ್ಚಿನ ಕಾಲದವರೆಗೆ ರಾಜ್ಯವನ್ನು ಆಳಿದ ಕಾಂಗ್ರೆಸ್ ಪಕ್ಷ ಈ ಸಮಸ್ಯೆಯನ್ನು ಹದಗೆಡಿಸದೇ ಹೋದರೂ ಈ ಸಮಸ್ಯೆಯನ್ನು ನಿರಂತರವಾಗಿ ಕಡೆಗಣಿಸಿದ ತಪ್ಪನ್ನು ಮಾಡಿದೆ. ವಿದೇಶೀ ವಲಸಿಗರಿಗೆ ರಾಜ್ಯಕ್ಕೆ ಉಚಿತವಾಗಿ ಪ್ರವೇಶ ನೀಡಿ ಅದನಂತರ ಅವರನ್ನು ವೋಟ್ ಬ್ಯಾಂಕ್‍ಗಳಾಗಿ ಬಳಸಿತು. ದುರದೃಷ್ಟವಶಾತ್, ಪ್ರಗತಿಪರರ, ಬುದ್ಧಿಜೀವಿಗಳಲ್ಲಿಯ ಬಹುತೇಕರು ಈ ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸುವಲ್ಲಿ ವಿಫಲರಾದರು. ಎಡಪಕ್ಷಗಳು ತಮ್ಮ ಮೌನವನ್ನು ಕಾಪಾಡಿಕೊಂಡು ಬಂದರು ಹಾಗೂ ಈ ವಿಷಯವನ್ನು ಎತ್ತಿದವರನ್ನೇ ಜರಿದರು.
‘ಮಣ್ಣಿನ ಮಕ್ಕಳ’ ನ್ಯಾಯಯುತವಾದ ಆತಂಕವನ್ನು 1977 ರಿಂದ 1985ರವರೆಗೆ ವಿದ್ಯಾರ್ಥಿಗಳು ಮತ್ತು ಯುವಜನರಿಂದ ನಡೆದ ಆಸ್ಸಾಮ್ ಚಳವಳಿ ಸರಿಯಾಗಿ ವಿಶ್ಲೇಷಿಸಿದರು. ಈ ‘ವಿದೇಶಿ-ವಿರೋಧಿ’ ಚಳುವಳಿಯಲ್ಲಿ ಬೆಂಗಾಲಿವಿರೋಧಿ ಅಂಶ ಸ್ಪಷ್ಟವಾಗಿತ್ತು ಆದರೆ ಮುಸ್ಲಿಮ್‍ವಿರೋಧಿ ರಾಜಕೀಯವನ್ನು ಈ ಚಳುವಳಿ ಮಾಡಲಿಲ್ಲ. ವಲಸಿಗರ ಪ್ರಶ್ನೆಯನ್ನು ಎತ್ತುವುದರಲ್ಲಿ ಈ ಚಳುವಳಿ ಯಶಸ್ವಿಯಾಗಿತ್ತಾದರೂ ಒಂದು ಪರಿಣಾಮಕಾರಿ ಪರಿಹಾರವನ್ನು ಒದಗಿಸಲು ಅದರಿಂದ ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ಅಸ್ಸಾಮ್ ಗಣಪರಿಷತ್ತಿನ ಎರಡೂ ಸರಕಾರಗಳು ಇತರರಂತೆಯೇ ವಿಫಲವಾದವು.
ಇದೇ ವೈಫಲ್ಯ ಒಂದು ರಿತಿಯ ನಗ್ನ ಕೋಮು ರಾಜಕೀಯಕ್ಕೆ ದಾರಿ ಮಾಡಿಕೊಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಈ ಸಮಸ್ಯೆಯನ್ನು ಕೋಮು ಸಮಸ್ಯೆಯನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ ಹಾಗೂ ಈ ಭಾಷಾವಾರು ಮತ್ತು ಜನಾಂಗೀಯ ವಿಷಯಕ್ಕೆ ಧರ್ಮದ ಬಣ್ಣ ಬಳಿಯುವುದರಲ್ಲೂ ಯಶಸ್ವಿಯಾಗಿದೆ. ರಾಜ್ಯದಲ್ಲಿರುವ ಬೆಂಗಾಲಿ ಹಿಂದೂ ವೋಟ್‍ಬ್ಯಾಂಕ್‍ನ ಮೇಲೆಯೇ ಬಿಜೆಪಿಯ ರಾಜಕಾರಣ ನಿಂತಿದೆ. ಹಾಗಾಗಿ, ಬಿಜೆಪಿ ಎರಡು ಸ್ಪಷ್ಟ ಅಜೆಂಡಾ ಹೊಂದಿದೆ; ಬೆಂಗಾಲಿ ಹಿಂದೂಗಳಿಗೆ ಪೌರತ್ವವನ್ನು ನೀಡುವುದು ಮತ್ತು ಮುಸ್ಲಿಮರಿಗೆ ನಿರಾಕರಿಸುವುದು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲೂ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ ತನ್ನ ಅಜೆಂಡಾಗಳನ್ನು ಕಾರ್ಯಗತಗೊಳಿಸಲು ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಮಾರ್ಗವನ್ನು ಅನುಸರಿಸಲು ಬಿಜೆಪಿಗೆ ಸಾಧ್ಯವಾಗುತ್ತಿದೆ.
ರಾಜ್ಯಮಟ್ಟದಲ್ಲಿ, ಪಂಚಾಯತಿಯಿಂದ ನೀಡಿದ ಪ್ರಮಾಣಪತ್ರಗಳನ್ನು ರದ್ದುಗೊಳಿಸುವ ಕ್ರಮವನ್ನು ಬಿಜೆಪಿ ಅತ್ಯಂತ ಸಂತೋಷದಿಂದಲೇ ಬೆಂಬಲಿಸಿದೆ. ಕೇಂದ್ರದಲ್ಲಿ, 1955ರ ನಾಗರಿಕ ಕಾಯಿದೆಗೆ ಒಂದು ಅತ್ಯಂತ ಅಪಾಯಕಾರಿ ತಿದ್ದುಪಡಿ ತರಲು ಹೊರಟಿದೆ. ಈ ತಿದ್ದುಪಡಿಯಿಂದ (ಈಗಾಗಲೇ ಲೋಕಸಭೆಯ ಮುಂದೆ ಇಡಲಾಗಿದೆ)ನೆರೆರಾಷ್ಟ್ರಗಳಿಂದ(ನೇಪಾಳವನ್ನು ಬಿಟ್ಟು) ವಲಸೆ ಬರುವವರು ಮುಸ್ಲಿಮರಾಗದೇ ಇದ್ದಲ್ಲಿ ಅವರಿಗೆ ಪೌರತ್ವವನ್ನು ನೀಡುವುದನ್ನು ಸುಲಭವಾಗಿಸಲಿದೆ. ಅಂದರೆ ಬಾಂಗ್ಲಾದೇಶದಿಂದ ಬರುವ ಹಿಂದುಗಳಿಗೆ ವಿಶೇಷ ಸ್ಥಾನಮಾನವಿರುತ್ತೆ ಆದರೆ ಅದೇ ಸ್ಥಾನಮಾನ ಮುಸ್ಲಿಮರಿಗೆ ಇರುವುದಿಲ್ಲ. ಈ ತಿದ್ದುಪಡಿಯನ್ನು ಜಾರಿಗೊಳಿಸಿದರೆ ಭಾರತೀಯ ಪೌರತ್ವಕ್ಕೆ ಧಾರ್ಮಿಕ ಅರ್ಹತೆಯನ್ನು ಪರಿಚಯಿಸುತ್ತದೆ. ಜಿನ್ನಾ ಅವರ ಟು-ನೇಷನ್ ಸಿದ್ಧಾಂತ ಇದೇ ಆಗಿತ್ತು.
ನಿರೀಕ್ಷಿಸಬಹುದಾದಂತೆ, ಈ ವಿಷಯದಲ್ಲಿ ಆಸ್ಸಾಮ್ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಇಲ್ಲಿಯ ಹಿಂದು ಕೋಮುರಾಜಕಾರಣ ಸ್ಥಳೀಯ/ವಲಸಿಗರ ವಿಷಯವನ್ನು ಹಿಂದೂ/ಮುಸ್ಲಿಮ್ ವಿಷಯವನ್ನಾಗಿ ಬದಲಿಸಲು ಎನ್.ಆರ್.ಸಿ. ಯನ್ನು ಬಳಸುತ್ತಿದೆ. ಅದೇ ಸಮಯದಲ್ಲಿ ಅನೇಕ ಮುಸ್ಲಿಮ್ ಸಂಸ್ಥೆಗಳು ಎನ್.ಆರ್.ಸಿ. ಯನ್ನೇ ವಿರೋಧಿಸುತ್ತಿವೆ. ಈ ವಿಭಜನೆ ಒಂದು ದೊಡ್ಡ ಸ್ಫೋಟದ ಹಂತಕ್ಕೆ ತುಂಬಾ ಹತ್ತಿರದಲ್ಲಿ ಬಂದು ನಿಂತಿದೆ.
ಅದೃಷ್ಟವಶಾತ್, ಆಸ್ಸಾಮಿನ ಕೆಲವು ಹಿರಿಯ ಚಿಂತಕರು, ಹಿರೆನ್ ಗೊಹೇನ್ ಮತ್ತು ಅಪುರ್ಬ ಬರುವಾ ಅವರುಗಳು ಮೂರನೆಯ ಮತ್ತು ವಿವೇಕಯುಕ್ತ ನಿಲುವನ್ನು ತೆಗೆದುಕೊಂಡಿದ್ದಾರೆ. ಈ ಪ್ರಸ್ತಾಪ ಎನ್.ಆರ್.ಸಿ. ಪ್ರಕ್ರಿಯೆಂiÀiನ್ನು ಬೆಂಬಲಿಸುತ್ತಲೇ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ಒದಗಿಸಬೇಕೆಂದು ಹೇಳುತ್ತದೆ. ಅಸ್ಸಾಮಿನಲ್ಲಿ ಮುಂಚಿನಿಂದಲೂ ವಾಸಿಸುತ್ತಿರುವ ಜನರ ಸಾಂಸ್ಕøತಿಕ, ಜನಾಂಗೀಯ ಮತ್ತು ಭಾಷಾವಾರು ಕಳವಳ, ಕಾಳಜಿಗಳನ್ನು ನ್ಯಾಯಸಮ್ಮತವಾದದ್ದು ಎಂದು ಒಪ್ಪಿಕೊಳ್ಳುತ್ತದೆ ಹಾಗೂ ವಿದೇಶಿಯರನ್ನು ಗುರುತಿಸಲು ದೃಢವಾದ ಪ್ರಕ್ರಿಯೆ ಬೇಕೆಂದೂ ಒಪ್ಪಿಕೊಳ್ಳುತ್ತದೆ. ಹಾಗೂ ಅದೇ ಸಮಯದಲ್ಲಿ ಈ ಪ್ರಕ್ರಿಯೆಯಲ್ಲಿ ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಮಾಡಬಾರದು. ಮುಸ್ಲಿಮ್ ಮಹಿಳೆಯರ ವಿಷಯ ಬಂದಾಗ, ಪಂಚಾಯತಿ ನೀಡಿದ ಪ್ರಮಾಣಪತ್ರಗಳನ್ನು ಮಾನ್ಯವೆಂದು ಪರಿಗಣಿಸಬೇಕು. ಕೊನೆಯದಾಗಿ, ನಾಗರಿಕ ಕಾಯಿದೆಯ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕು ಏಕೆಂದರೆ ಈ ತಿದ್ದುಪಡಿ ಭಾರತೀಯ ಸಂವಿಧಾನ ಮತ್ತು ಭಾರತದ ರಾಷ್ಟ್ರೀಯ ಚಳುವಳಿಯ ಚೇತನಕ್ಕೆ ವ್ಯತಿರಿಕ್ತವಾಗಿದೆ.
ಆಸ್ಸಾಮಿನ ಒಳಗೆ ಮತ್ತು ಹೊರಗೆ ಈ ನಿಲುವಿನ ಬಗ್ಗೆ ನಮಗೆ ಒಂದು ರಾಷ್ಟ್ರೀಯ ಒಮ್ಮತೆಯ ಅತ್ಯಂತ ಅವಶ್ಯಕತೆ ಇದೆ. ಆದರೆ, ಯಾರಾದರೂ ಆಲಿಸುತ್ತಿದ್ದಾರೆಯೇ? ಅಥವಾ ಇನ್ನೊಂದು ನೆಲ್ಲಿ ಹತ್ಯಾಕಾಂಡಕ್ಕೆ ನಾವೆಲ್ಲರೂ ಕಾಯುತ್ತಿದ್ದೇವೆ?

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...