| ಲಿಂಗೇಶ್ ಹುಣಸೂರು |
ಮಾನ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೇ, ನಮಸ್ಕಾರ,
ಬಹುಶಃ ಈ 103 ವರ್ಷಗಳಲ್ಲಿ ನಿಮ್ಮ ಅವಧಿಯ ಅಧ್ಯಕ್ಷಗಿರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯಚಟುವಟಿಕೆಗಳ ತೀರ್ಮಾನಗಳ ಬಗ್ಗೆ ವಿರೋಧ ವ್ಯಕ್ತವಾದಷ್ಟು ಹಿಂದೆಂದೂ ಆಗಿಲ್ಲ. ತಾವು ಯಾವುದೋ ಪರೀಕ್ಷೆ ಬರೆದು ಇಲ್ಲಿ ಅಧ್ಯಕ್ಷರಾಗಿಲ್ಲ. ನನ್ನಂತ ಸಾವಿರಾರು ಸದಸ್ಯರ ಪ್ರಜ್ಞಾವಂತಿಕೆಯ ಮತದಾನದಿಂದ ಆಯ್ಕೆ ಯಾಗಿದ್ದೀರಿ.
ಅದನ್ನು ಮರೆತು ಹಲವರ ವಿರೋಧದ ನಡುವೆಯೂ “ನಾನು ಅಂದುಕೊಂಡಂತೆಯೇ ಮಾಡುವುದು” ಅನ್ನುವ ದಾಟಿಯಲ್ಲಿ ಜೀವಪರವಲ್ಲದ ನಿಲುವುಗಳನ್ನು ತಳೆಯುತ್ತಿದ್ದೀರಿ. ನಿಮ್ಮ ಕಾರ್ಯಚಟುವಟಿಕೆಗಳಲ್ಲಿ ಕೇವಲ ಅಹಂ, ದರ್ಪ, ಸರ್ವಾಧಿಕಾರಿ ಧೋರಣೆಯನ್ನು ಕಾಣುತ್ತಿದ್ದೇವೆ ವಿನಹಃ ಕನ್ನಡ ಬದ್ಧತೆ ಬಗೆಗಿನ ಪ್ರಜ್ಞಾವಂತಿಕೆಯನ್ನು ಕಾಣದಿರುವುದು ವಿಪರ್ಯಾಸ.
ಇತ್ತೇಚೆಗೆ ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರಾದ ರೂಪ ಹಾಸನ (ಸದಸ್ಯತ್ವ ಸಂಖ್ಯೆ : 44,892) ರವರು ಕ.ಸಾ.ಪ ಆಜೀವ ಸದಸ್ಯತ್ವ ಸ್ಥಾನಕ್ಕೆ ದಿನಾಂಕ 15/11/2018ರಂದು ರಾಜೀನಾಮೆ ನೀಡಿದ್ದರು. ಅದಕ್ಕೆ ಯಾವುದೇ ವೈಯಕ್ತಿಕ ಕಾರಣಗಳಿರಲಿಲ್ಲ. ನಿಮ್ಮ ಮೇಲೆ ಕೋಪ, ದ್ವೇಷ ಯಾವುದೂ ಇರಲಿಲ್ಲ. ಕನ್ನಡ ಬದ್ಧತೆ ಬಗೆಗೆ ಪರಿಷತ್ತಿನ ವಿಮುಖ ನಡೆ ಬಗ್ಗೆ ಆಕ್ಷೇಪಿಸಿ ತಮಗೆ ಪತ್ರ ಬರೆದಿದ್ದರು.
ನಿಬಂಧನೆಯಲ್ಲಿ ಘೋಷಿಸಿರುವಂತೆ “ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕ.ಸಾ.ಪ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಪರಿಷತ್ತಿನ ಉದ್ದೇಶವಾಗಿರಬೇಕು”. ಆದರೆ ಪರಿಷತ್ತು ತನ್ನ ಮೂಲ ಉದ್ದೇಶ ಮರೆತು ಕೋಟಿಗಟ್ಟಲೆ ಹಣ ವ್ಯಯಮಾಡುತ್ತ ಅದ್ಧೂರಿ ಸಾಹಿತ್ಯ ಸಮ್ಮೇಳನಗಳನ್ನು ಮಾಡುತ್ತಿದೆ. ನಾಡಿನಲ್ಲಿ ಆದಂತಹ ಪಕೃತಿ ವಿಕೋಪ, ಬರಗಾಲ ಮತ್ತಿತತರ ಸಂಕಷ್ಟದ ಸಂದರ್ಭದಲ್ಲೂ, ಮಾನವೀಯತೆಯ ತೀರ್ಮಾನ ತೆಗೆದುಕೊಳ್ಳದೆ, ಸಮ್ಮೇಳನಗಳ ಹೆಸರಿನಲ್ಲಿ ಆಡಂಬರ ಪ್ರದರ್ಶಿಸುತ್ತಾ, ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿದ್ದರೂ ಯಾವುದೇ ನಿರ್ಣಾಯಕ ತೀರ್ಮಾನ ತೆಗೆದುಕೊಳ್ಳದೆ, ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳದೆ, ಸಮಯ ವ್ಯರ್ಥ ಮಾಡುತ್ತಿದ್ದೀರಿ. ಈ ಕಾರಣಗಳಿಂದ ಸದಸ್ಯತ್ವ ನನಗೆ ಅಸಹನೀಯವಾಗುತ್ತಿದೆ, ಇಂತಹ ವ್ಯವಸ್ಥೆಯಲ್ಲಿ ಇರುವುದಕ್ಕಿಂತ ಹೊರಹೋಗುವುದೇ ಲೇಸು ಎಂದು ಕನ್ನಡದ ವಾಸ್ತವ ಸ್ಥಿತಿಗತಿಗಳನ್ನು ಉಲ್ಲೇಖಿಸಿ, ಪರಿಷತ್ತಿನ ನಡೆಯ ಬಗೆಗೆ ಬೇಸರ ವ್ಯಕ್ತ ಪಡಿಸಿ ಪತ್ರ ಬರೆದಿದ್ದಾರೆ. ಈ ರೀತಿಯ ಬೇಸರವನ್ನು ತಾವು ಸರ್ವಾಧಿಕಾರಿ ಧೋರಣೆ ತಳೆದ ಸಂದರ್ಭದಲ್ಲಿ ಆಗಾಗ್ಗೆ, ಅಲ್ಲಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹಲವು ಆಜೀವ ಸದಸ್ಯರು, ಕನ್ನಡಿಗರು ವ್ಯಕ್ತಪಡಿಸಿದ್ದಾರೆ.
ಆದರೆ ರೂಪ ಹಾಸನ ಅವರು ಒಂದು ಹೆಜ್ಜೆ ಮುಂದೆ ಹೋಗಿ ರಾಜೀನಾಮೆಯ ಪ್ರಸ್ತಾಪ ಮಾಡಿದ್ದಾರೆ. ತಾವು ಸುದೀರ್ಘ 3 ತಿಂಗಳು ಸುದೀರ್ಘ ವಿಚಾರಣೆ ನಡೆಸಿ, 103 ವರ್ಷಗಳ ಇತಿಹಾಸದಲ್ಲಿ ಮೊದಲ ರಾಜೀನಾಮೆಯನ್ನು ದಿನಾಂಕ 07/03/19ರಂದು ಅಂಗೀಕರಿಸಿದ್ದೀರಿ. ಆ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿಯ ಬಗೆಗೆ, ನಾಡು-ನುಡಿಯ ಬಗೆಗೆ ಧ್ವನಿ ಎತ್ತುವವರ ಧ್ವನಿಯನ್ನು ತಗ್ಗಿಸಲು ನಮ್ಮ ಅಮೂಲ್ಯವಾದ ಮತ ವನ್ನು ಬಳಸಿಕೊಂಡಿದ್ದಲ್ಲದೆ, ರೂಪಾ ಹಾಸನ ಅವರು ಎತ್ತಿರುವ ಯಾವ ಪ್ರಶ್ನೆಗಳಿಗೂ, ಜವಾಬ್ಧಾರಿಯುತ ಉತ್ತರ ನೀಡದೆ ಕನ್ನಡ ಶಾಲೆಗಳ ಬಗೆಗೆ ನಮಗೆ ಕಾಳಜಿಯಿಲ್ಲ ಅನ್ನುವ ಅಂಶವನ್ನು ಪರಿಷತ್ತು ಒಪ್ಪಿಕೊಂಡಿದೆ ಎಂದು ಭಾವಿಸಬಹುದೆ ಅಧ್ಯಕ್ಷರೆ? ಈ ರಾಜೀನಾಮೆಯ ಅಂಗೀಕಾರ ಸಮಸ್ತ ಕನ್ನಡಪರವಾಗಿ ಕೆಲಸ ಮಾಡುತ್ತಿರುವವರಿಗೆ ,ಕನ್ನಡ ಶಾಲೆಗಳಿಗೆ ನೀವು ಮಾಡಿದ ದೊಡ್ಡ ಅವಮಾನ. ಹಾಗಾಗಿ ತಕ್ಷಣವೇ ಕ್ಷಮೆ ಕೇಳಬೇಕು ಮತ್ತು ರೂಪ ಹಾಸನ ಅವರ ಪತ್ರಕ್ಕೆ ಸಮರ್ಪಕ ಉತ್ತರ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ. ಹಾಗೆ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದೂ ಕೂಡ ಮನವಿ ಮಾಡುತ್ತಿದ್ದೇನೆ.
- ಆಜೀವ ಸದಸ್ಯತ್ವದ ರಾಜೀನಾಮೆಯ ಕುರಿತಾಗಿ ಬೈಲಾದಲ್ಲಿ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಆದರೂ ಯಾವ ಆಧಾರದ ಮೇಲೆ ರಾಜೀನಾಮೆ ಅಂಗೀಕಾರ ಮಾಡಿದಿರಿ?
- ಕ.ಸಾ.ಪ ಹಿತಾಸಕ್ತಿಗೆ ವಿರುದ್ಧವಾಗಿ ನಡೆದರೆ, ಅಂತವರನ್ನು ಸರ್ವ ಸದಸ್ಯರ ಸಭೆ ಕರೆದು ಉಚ್ಚಾಟನೆಗೆ ನಿರ್ಣಯ ಮಂಡಿಸಬಹುದು ಅಂತಿದೆ. ಅಂದರೆ ರಾಜೀನಾಮೆಯ ಅಂಗೀಕಾರವೂ ಕೂಡ ಸರ್ವ ಸದಸ್ಯರ ಸಭೆಯಲ್ಲೇ ತೀರ್ಮಾನವಾಗಬೇಕು ಎಂಬುದು ಅರ್ಥವಾಗುವಂತದ್ದು. ನಿಮ್ಮ ಅವಧಿಯಲ್ಲಿ ಪತ್ರಿಕೆಯ ಕ್ರೈಮ್ ಕಾಲಂ ನಲ್ಲಿ ಕ.ಸಾ ಪ ಜಿಲ್ಲಾಧ್ಯಕ್ಷರ ಬಗೆಗೆ ವರದಿ ಪ್ರಕಟವಾಯಿತು. ಭ್ರಷ್ಟಾಚಾರದ ಆರೋಪದ ವರದಿಗಳು ಮಾಧ್ಯಮಗಳಲ್ಲಿ ಮೇಳೈಸಿತು. ತಾವು ತುಟಿ ಪಿಟಕ್ಕೆನ್ನಲಿಲ್ಲ. ಆದರೆ ಒಬ್ಬ ಕನ್ನಡದ ಸಾಹಿತಿ ಎತ್ತಿದ ಪ್ರಶ್ನೆಗಳು ತಮಗೆ ಅಸಹನೀಯವಾಗಿಬಿಟ್ಟವು. ಈ ರಾಜೀನಾಮೆಯ ಅಂಗೀಕಾರಕ್ಕೆ ಯಾವಾಗ, ಎಲ್ಲಿ ಸರ್ವ ಸದಸ್ಯರ ಸಭೆ ಕರೆದಿದ್ದಿರಿ?
3. ಕ.ಸಾ.ಪ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ತಾವು ಕುಟುಂಬದ ಹಿರಿಯರು. ರೂಪ ಹಾಸನ ಅವರು ಯಾವುದೇ ವೈಯಕ್ತಿಕ ಲಾಭಕ್ಕೆ ಪ್ರಶ್ನೆ ಎತ್ತಿಲ್ಲ. ನಾಡು ನುಡಿಯ ಜ್ವಲಂತ ಸಮಸ್ಯೆಗಳ ಬಗೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಂತದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ತಾವು ಅವರನ್ನು ಕರೆಸಿ ಮಾತನಾಡಬಹುದಿತ್ತು. ಆಕೆ ನಾಡಿನ ಹೆಸರಾಂತ ಸಾಹಿತಿ. ಕನ್ನಡದ ಹೆಣ್ಣುಮಗಳು.
ಇಲ್ಲ ಅವರ ಆಕ್ಷೇಪಗಳಿಗೆ ಸಮರ್ಪಕ ಉತ್ತರ ನೀಡಬಹುದಿತ್ತು. ಎರಡೂ ಮಾಡದೆ 3 ತಿಂಗಳ ನಂತರ ಬೈಲಾ ನಿಯಮಗಳನ್ನು ಉಲ್ಲಂಘಿಸಿ ರಾಜೀನಾಮೆ ಅಂಗೀಕರಿಸಿದ್ದೀರಿ. ನೈತಿಕ ಜವಾಬ್ದಾರಿ ಹೊತ್ತು ತಾವೇಕೆ ರಾಜೀನಾಮೆ ನೀಡಬಾರದು ?
- ಹಲವು ಸದಸ್ಯರ ವಿರೋಧದ ನಡುವೆ ಕೇಂದ್ರ ಸ್ಥಾನ ಇರುವ ಬೆಂಗಳೂರಿನಿಂದ ನೂರಾರು ಕಿ ಮೀ ದೂರದ ಕೋಟಾದಲ್ಲಿ, ಕೆಲಸದ ದಿನವೇ ಸರ್ವ ಸದಸ್ಯರ ವಿಶೇಷ ಅಧಿವೇಶನ ಕರೆದಿರಿ. ಹಲವರ ವಿರೋಧದ ನಡುವೆ 3 ವರ್ಷಕ್ಕೆ ಆಯ್ಕೆಯಾದ ನೀವು 5 ವರ್ಷಕ್ಕೆ ಏರಿಸಿಕೊಳ್ಳಲು ಹವಣಿಸಿದಿರಿ. ಈ ಬಗ್ಗೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಈಗಾಗಲೇ ತಮಗೆ ನೋಟೀಸ್ ಜಾರಿ ಮಾಡಿದೆ. ಕೋಟಾದಲ್ಲಿ ಸೇರಿದ್ದ ಆಜೀವ ಸದಸ್ಯರು ಇಡೀ ಒಟ್ಟು ಸದಸ್ಯರ ಶೇ 1 ರಷ್ಟು ಇರಲಿಲ್ಲ. ಕಡೇಪಕ್ಷ ನಿಮಗೆ ಮತ ನೀಡಿ ಆರಿಸಿದ ಸದಸ್ಯರಷ್ಟು ಇಲ್ಲವೇ ಇಲ್ಲ. ಯಾವುದೇ ಅಕಾಡೆಮಿ, ಪ್ರಾಧಿಕಾರ, ಆಯೋಗಗಳ ಅಧಿಕಾರಾವಧಿ 3 ಮತ್ತು 3 ವರ್ಷಕ್ಕಿಂತ ಕಡಿಮೆಯೇ ಇದೆ. ಕೋಟಾಕ್ಕೆ ಬರಲು ಸಾಧ್ಯ ಆಗದಿದ್ದ ಅನೇಕ ಆಜೀವ ಸದಸ್ಯರು ಇದನ್ನು ವಿರೋಧಿಸುತ್ತಿದ್ದಾರೆ. ಆದರೂ ಯಾಕೀ ಅಧಿಕಾರ ಮೋಹ?

- ಮಹಿಳಾಪರ ಅಂತ ಹೇಳಿಕೊಳ್ಳುತ್ತಲೆ, ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ಮಾಡಿದಿರಿ. ಆದರೆ ಧಾರವಾಡದಲ್ಲಿ ಮಹಿಳೆಯರ ಮೇಲೆ ಕುಂಭ ಹೊರಿಸುವಿಕೆ ಬಗ್ಗೆ ಸಾಲುಸಾಲು ಆಕ್ಷೇಪ ವ್ಯಕ್ತವಾದರೂ ತಾವು ಕ್ಯಾರೇ ಎನ್ನಲಿಲ್ಲ. ಸರ್ವ ಸದಸ್ಯರ ಸಭೆಯಲ್ಲಾದರೂ 3 ಅವಧಿಯ ನಂತರ ಒಬ್ಬರಿಗೆ ಮಹಿಳಾ ಅಧ್ಯಕ್ಷರ ಆಯ್ಕೆಗೆ ನಿರ್ಣಯ ಅಂಗೀಕರಿಸಬಹುದಿತ್ತು. ಮಾಡಲಿಲ್ಲ. ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಪ್ರಾರಂಭಿಸಿದಿರಿ. ತದನಂತರ ಕೈ ಬಿಟ್ಟಿರಿ. ಇದೇನಾ ತಮ್ಮ ಮಹಿಳಾಪರ ಬದ್ಧತೆ.
- ಸರಕಾರ ಇಂಗ್ಲೀಷ್ ಮಾಧ್ಯಮ ಜಾರಿಗೆ ತರಲು ಹೊರಟಿದೆ. ಗೋಕಾಕ್ ಮಾದರಿ ಚಳುವಳಿ ಮಾಡುತ್ತೇನೆಂದ ನೀವು, ಆಡಂಬರದ ಸಾಹಿತ್ಯ ಸಮ್ಮೇಳನದ ಹಣದಲ್ಲಿ ಕನ್ನಡ ಶಾಲೆಗಳ ಪುನಶ್ಚೇತನ ಮಾಡಿ ಅಂತ ಸಲಹೆ ನೀಡಿದ ಲೇಖಕಿಯ ರಾಜೀನಾಮೆಯನ್ನು ಹಿಂದೂ ಮುಂದು ನೋಡದೆ ಅಂಗೀಕರಿಸುತ್ತೀರಿ. ತಮ್ಮ ಅವಧಿಯಲ್ಲಿ ಕನ್ನಡ ಶಾಲೆಯ ಅಭಿವೃದ್ಧಿಗಾಗಿ ತಾವೇನು ಮಾಡಿದ್ದೀರಿ? ಯಾಕೆ ಸಮ್ಮೇಳನವನ್ನು ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಬಾರದು. ಅದೇ ಹಣದಲ್ಲಿ ಕನ್ನಡ ಶಾಲೆಗಳ ಗುಣಮಟ್ಟ ವೃದ್ಧಿಸಬಾರದು? ಇದೇನ ನಿಮ್ಮ ಕನ್ನಡ ಶಾಲೆಗಳ ಬಗೆಗೆ ಇರುವ ಬದ್ಧತೆ ?
- “ಕನ್ನಡ ನುಡಿ” ಪತ್ರಿಕೆಗಾಗಿ ಸಾವಿರಾರು ರೂ ಹಣ ಖರ್ಚಾಗುತ್ತಿದೆ. ಎಷ್ಟು ಪತ್ರಿಕೆಗಳು ಹಿಂದಿರುಗುತ್ತಿವೆ? ಸದಸ್ಯರ ಪಟ್ಟಿ ಪರಿಷ್ಕರಣೆ ಮಾಡಿದರೆ, ಲಕ್ಷಾಂತರ ರೂ ಹಣ ಉಳಿಸಬಹುದು. ಈ ಬಗ್ಗೆ ತಾವು ಯಾವ ಕ್ರಮ ಕೈಗೂಂಡಿದ್ದೀರಿ? ವಾರ್ಡ್, ಹೋಬಳಿ, ಊರಿಗೊಂದು ಘಟಕವಿದೆ. ಯಾಕೆ ಮತದಾರರ ಪರಿಷ್ಕರಣೆ ಕಾರ್ಯ ನಡೆದಿಲ್ಲ. ಇವರೆಲ್ಲರೂ ತಮ್ಮ ಅಧಿಕಾರಾವಧಿಯಲ್ಲಿ ಒಂದೂಂದು ಸರಕಾರಿ ಶಾಲೆ ದತ್ತು ಪಡೆಯಬಹುದಲ್ಲವೆ? ಈ ಉಳಿಕೆ ಹಣವನ್ನು ಕನ್ನಡ ಶಾಲೆಗಳ ಉದ್ದಾರಕ್ಕೆ ಬಳಸಲು ಸಾಧ್ಯವಿಲ್ಲವೆ ?

- ಕಾವೇರಿ ನದಿ ನೀರು ಹಂಚಿಕೆ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮ, ಪ್ರತಿಭಟನೆ ಮಾಡಿದ ನೀವು, ಆ ನದಿಯ ಮೂಲ ಕೊಡಗು ಜಿಲ್ಲೆ ಕಣ್ಣೀರ ಕಡಲಲ್ಲಿ ಬೇಯುವಾಗ ತಾವು ಯಾವ ಕ್ರಮ ಕೈಗೂಂಡಿರಿ?
- ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಪ್ರತೀ ಕವಿಯ ಕನಸು. ಆದರೆ ನಿಮ್ಮ ಆಪ್ತರಿಗೆ ಅಲ್ಲಿ ಪದೇಪದೇ ಅವಕಾಶಗಳು ಸಿಗುತ್ತಿವೆ. ಸುಮಾರು 30ರಿಂದ 40 ಜನ ನಿಮ್ಮ ಅವಧಿಯ ಎಲ್ಲಾ ಸಮ್ಮೇಳನಗಳಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ಪ್ರತೀ ಕಾರ್ಯಕ್ರಮಗಳ ವಿಶೇಷ ಆಹ್ವಾನಿತರ ಪಟ್ಟಿಯನ್ನು ಬಿಡುಗಡೆ ಮಾಡಿ, ಫಲಾನುಭವಿಗಳ ವಿವರ ಆಚೆ ಬರುತ್ತದೆ. ಇದೇನಾ ನಿಮ್ಮ ಪಾರದರ್ಶಕ ಕನ್ನಡ ಪ್ರೀತಿ?
- ಕೊನೆಯದಾಗಿ ತಾವೂ ಅಧಿಕಾರಿಯಾಗಿದ್ದಾಗಿನ ಗತ್ತು ಈಗಲೂ ಇದೆ ಎಂದು ಅನೇಕರು ಆರೋಪಿಸಿದ್ದಾರೆ. ನಿಮ್ಮನ್ನು ಭೇಟಿ ಮಾಡಲು ಬರುವ ,ನಿಮ್ಮ ಜೊತೆ ದೂರವಾಣಿಯಲ್ಲಿ ಮಾತನಾಡುವ ಕವಿ ಮನಸುಗಳ ಮಾತುಗಳನ್ನು ಸಂಯಮದಿಂದ ಆಲಿಸುವಷ್ಟು ವ್ಯವಧಾನ ತೋರಿರಿ. ಎಲ್ಲರ ಬೇಡಿಕೆ ಪೂರೈಸಲು ಸಾಧ್ಯವಿಲ್ಲ.ಆದರೆ ಪ್ರೀತಿಯಿಂದ ಉತ್ತರ ಹೇಳಿ ಕಳುಹಿಸಿ. ಕಾರಣ ನಿಮ್ಮನ್ನು ಆರಿಸಿದ್ದು ಇದೇ ಸದಸ್ಯರು.
ಧನ್ಯವಾದಗಳು.
ಲಿಂಗೇಶ್ ಹುಣಸೂರು
ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯ, ಬೆಂಗಳೂರು ನಗರ ಜಿಲ್ಲಾ ಕ.ಸಾ.ಪ ಗೌರವ ಸಂಚಾಲಕ.
“ನಾನು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿದೀನಿ ಅಷ್ಟೇ”
– ಮನು ಬಳಿಗಾರ್
ರೂಪಾ ಹಾಸನರವರ ರಾಜೀನಾಮೆ ವಿವಾದದ ಕುರಿತಂತೆ ಪತ್ರಿಕೆ ಮನು ಬಳಿಗಾರ್ ಅವರನ್ನು ಫೋನ್‍ನಲ್ಲಿ ಸಂಪರ್ಕಿಸಿದಾಗ ಹೇಳಿದ್ದಿಷ್ಟು…
“ಅವ್ರು ರಾಜೀನಾಮೆ ಕೊಟ್ಟಿದಾರೆ, ನಾವು ಅಂಗೀಕರಿಸಿದೀವಿ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ನಾವು ಗೌರವಿಸ್ಲೇಬೇಕಲ್ಲವಾ? ಕಾರಣ ಏನೇ ಇರಬಹುದು, ಕೊಡ್ಬೇಕು ಅನ್ಸಿದೆ ಕೊಟ್ಟಿದಾರೆ. ನಾವು ತಗೊಂಡಿದೀವಿ. ಈಗಲೂ, ಬೇಡ ನಾನು ಸದಸ್ಯೆ ಆಗ್ತೀನಿ ಅಂತ ಬಂದ್ರೆ ಸದಸ್ಯತ್ವ ಕೊಡ್ತೀವಿ.” ಇನ್ನು ಐದು ವರ್ಷ ಅವಧಿ ವಿಸ್ತರಣೆ ಬಗ್ಗೆ ಕೇಳಿದಾಗಲು ನೇರವಾಗಿ ಅವರು ಹೇಳಿದ್ದಿಷ್ಟು “ಅದು ಅಧ್ಯಕ್ಷರ ಅವಧೀನ ಮಾತ್ರ ಹೆಚ್ಚಿಸ್ತಾ ಇರೋದಲ್ಲ. ಕಾರ್ಯಕಾರಿ ಸಮಿತಿಯ ಅವಧಿಯನ್ನೇ ಐದು ವರ್ಷಕ್ಕೆ ಹೆಚ್ಚಿಸ್ತಾ ಇರೋದು. ಇದು ಸಮಿತಿಯಲ್ಲೇ ತೀರ್ಮಾನ ಆಗಿದ್ದು. ಕೋರ್ಟ್‍ನಲ್ಲು ನಮ್ಮ ಪರವಾಗೇ ತೀರ್ಪು ಬಂದಿದೆ. ಮತ್ತೆ ಅವರು ಹೈಕೋರ್ಟ್‍ಗೆ ಹೋಗಿದಾರೆ ಅಂತ ಸುದ್ದಿಯಿದೆ. ಕೋರ್ಟ್‍ನಲ್ಲಿ ಇರೋದ್ರಿಂದ ನಾನು ಈಗ ಅದ್ರ ಬಗ್ಗೆ ಏನೂ ಹೇಳಲ್ಲ. ನೋ ಕಮೆಂಟ್!”
ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸುತ್ತಿರುವ ಉದ್ದೇಶದ ಕುರಿತ ಪ್ರಶ್ನೆ ಬರುವ ವೇಳೆಗೆ ಅವರು ಫೋನ್‍ನಲ್ಲೇ ತುಸು ಬ್ಯುಸಿಯಾದಂತೆ ಕಂಡುಬಂದು, “ಒಂದು ವರ್ಷದಿಂದಲೇ ಇದಕ್ಕೆ ಉತ್ತರ ಹೇಳ್ತಾ ಬಂದಿದೀನಿ. ಸಂಕ್ಷಿಪ್ತವಾಗಿ ಹೇಳೋಕ್ಕಾಗಲ್ಲ. ನನ್ನ ಹಳೆಯ ಉತ್ತರಗಳನ್ನೆ ಹುಡುಕಿನೋಡಿ ನಿಮಗೇ ಗೊತ್ತಾಗುತ್ತೆ” ಎಂದಷ್ಟೆ ಪ್ರತಿಕ್ರಿಯಿಸಿದರು. ಅಷ್ಟಕ್ಕೆ ನಮ್ಮ ಮತ್ತು ಅವರ ನಡುವಿನ ಸಂಕ್ಷಿಪ್ತ ಫೋನ್ ಸಂಭಾಷಣೆಯೂ ಕೊನೆಯಾಯ್ತು.



ಕನ್ನಡ ಸಾಹಿತ್ಯ ಪರಿಷತ್ತು ಉಳ್ಳವರು ಪುಡಾರಿಗಳು ಹಗಲು ದರೋಡೆ ಕೋರರು ಭ್ರಷ್ಟರು ಸಮಯ ಸಾಧಕರು ಲೂಟಿಕೋರರು ಕನ್ನಡ ಸಾಹಿತ್ಯ ಪರಿಷತ್ತಿನ ಗಂಧಗಾಳಿ ಘನತೆ-ಗೌರವಗಳ ನೆಲೆ-ಬೆಲೆ ಇಲ್ಲದವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಗದ್ದುಗೆಯನ್ನು ಹಣ ಹೆಂಡ ಖಂಡ ಕಾಣಿಕೆಗಳನ್ನು ಕೊಡುತ್ತಾ ಅನಕ್ಷರಸ್ಥರು ಅಮಾಯಕರು ಮುಗ್ಧರು ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಅರಿವಿಲ್ಲದ ಅವರನ್ನು ಅಜೀವ ಸದಸ್ಯರನ್ನಾಗಿ ಮಾಡಿಸಿ ಗದ್ದುಗೆ ಹಿಡಿದು ನಂತರ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಜನರಿಂದ ಸಂಘ-ಸಂಸ್ಥೆಗಳಿಂದ ಸ್ಥಳೀಯ ಸಂಸ್ಥೆಗಳಿಂದ ಬಲವಂತವಾಗಿ ಹಣ ವಸೂಲಿ ಮಾಡಿ ಕುಬೇರರಾಗುವ ಭಂಡತನದ ಸಜ್ಜನಿಕೆಯ ಮುಖವಾಡದ ದುರಹಂಕಾರಿಗಳು ಅಧಿಕಾರದಾಹಿ ಗಳು ಅಧ್ಯಕ್ಷರಾಗಿ ಅಧಿಕಾರದ ಮದವೇರಿದವರಾಗಿ ಮೆರೆದಾಡುತ್ತಾರೆ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಕಸಾಪ ಅಧ್ಯಕ್ಷರ ಅವಧಿಯು ೫ ವರ್ಷಗಳ ಕಾಲಾವಧಿಯ ಅತ್ಯಾವಶ್ಯಕತೆಯಿದೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ