Homeಕರ್ನಾಟಕಕರ್ನಾಟಕದ ಹೊಲಸು ರಾಜಕಾರಣ ತಂದಿಟ್ಟ ಬಿಕ್ಕಟ್ಟು ಶಾಸಕಾಂಗ ವರ್ಸಸ್ ನ್ಯಾಯಾಂಗ ಯಾರು ಸರಿ?

ಕರ್ನಾಟಕದ ಹೊಲಸು ರಾಜಕಾರಣ ತಂದಿಟ್ಟ ಬಿಕ್ಕಟ್ಟು ಶಾಸಕಾಂಗ ವರ್ಸಸ್ ನ್ಯಾಯಾಂಗ ಯಾರು ಸರಿ?

- Advertisement -
- Advertisement -

| ನೀಲಗಾರ |

ಈ ವರದಿಯನ್ನು ಬರೆಯುವ ಹೊತ್ತಿಗೆ, ಇದು ಶಾಸಕಾಂಗ ವರ್ಸಸ್ ಕಾರ್ಯಾಂಗ ಎಂಬಂತೆಯೂ ಆಗುವ ತಿರುವು ಪಡೆದುಕೊಳ್ಳುತ್ತಿದೆ. ಕಾರ್ಯಾಂಗದ ಭಾಗವಾಗಿರುವ (ಕೇಂದ್ರ ಸರ್ಕಾರದ ಗೃಹಖಾತೆಯ ನಿರ್ದೇಶನದಡಿ ಕೆಲಸ ಮಾಡುವ) ರಾಜ್ಯಪಾಲರು ಶಾಸಕಾಂಗದ ನಡಾವಳಿಗಳನ್ನು ನಡೆಸುವ ಸ್ಪೀಕರ್‍ರಿಗೆ ಒಂದು ಸಂದೇಶ ಕಳಿಸಿದ್ದಾರೆ. ವಿಶ್ವಾಸಮತ ಯಾಚನೆ ಮಾಡಲು ಕರೆದಿರುವ ಅಧಿವೇಶನದಲ್ಲಿ, ಅದರ ಕುರಿತ ಚರ್ಚೆ ಆರಂಭವಾಗುವ ಮುನ್ನವೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಕ್ರಿಯಾಲೋಪ ಎತ್ತಿದರು. ಅಲ್ಲಿಂದಾಚೆಗೆ ಸದನದಲ್ಲಿ ವಿಶ್ವಾಸಮತ ಚರ್ಚೆ ಶುರುವಾಗಲೇ ಇಲ್ಲ. ಆದರೆ ಅದರ ಮಧ್ಯೆ ರಾಜ್ಯಪಾಲರು ಸಂದೇಶ ಕಳಿಸಿ ‘ಇಂದಿನ ದಿನ ಮುಗಿಯುವಷ್ಟರಲ್ಲಿ ವಿಶ್ವಾಸಮತ ಯಾಚನೆ ಮುಗಿಸಿ’ ಎಂದು ಹೇಳಿದ್ದಾರೆ. ಒಂದು ರೀತಿಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳೆಲ್ಲವೂ ಪಕ್ಷಪಾತದಿಂದ ನಡೆದುಕೊಳ್ಳುತ್ತಿವೆ ಎಂಬ ಭಾವನೆ ಗಟ್ಟಿಯಾಗುವ ದುಸ್ಥಿತಿ ಏರ್ಪಟ್ಟಿದೆ.

ಇಂದು ವಿಶ್ವಾಸಮತ ಯಾಚನೆ ನಡೆಯುವ ಸಾಧ್ಯತೆ ಇಲ್ಲ. ಏಕೆಂದರೆ ಸಿದ್ದರಾಮಯ್ಯನವರ ಪ್ರಶ್ನೆಯೇನೆಂದರೆ, ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವಾಗ ವಿಪ್ ಕೊಡುವ ತನ್ನ (ಶಾಸಕಾಂಗ ಪಕ್ಷದ ನಾಯಕನ) ಅಧಿಕಾರದ ಬಗ್ಗೆ ಗೊಂದಲವುಂಟಾಗಿದೆ. ರಾಜೀನಾಮೆ ಕೊಟ್ಟಿರುವ ಶಾಸಕರನ್ನು ಸದನಕ್ಕೆ ಬರುವಂತೆ ಬಲವಂತ ಮಾಡುವ ಹಾಗಿಲ್ಲ ಎಂಬ ಸುಪ್ರೀಂಕೋರ್ಟಿನ ತೀರ್ಪಿನ ಕುರಿತು ಸ್ಪೀಕರ್‍ರ ಸ್ಪಷ್ಟೀಕರಣವನ್ನು ಅವರು ಕೇಳಿದ್ದರು. ಅಲ್ಲಿಂದ ಶುರುವಾದ ಚರ್ಚೆಯು ಇಡೀ ದಿನ ನಡೆಯಿತು. ಚರ್ಚೆ ಮುಂದುವರೆಯದೇ, ಬೇಗನೇ ವೋಟಿಂಗ್ ನಡೆಯಬೇಕು ಎಂಬುದು ಬಿಜೆಪಿಯವರ ಬಯಕೆಯಾಗಿತ್ತು.

ವಿಪ್ ನೀಡಬಹುದು ಎಂದು ಸ್ಪೀಕರ್ ಹೇಳಿದಲ್ಲಿ, ಅನರ್ಹತೆಯ ಭಯದಿಂದ ಮುಂಬೈ ಸೇರಿಕೊಂಡಿರುವ ಶಾಸಕರು ಮರಳಿ ಬರಬಹುದು, ಅದಕ್ಕಾಗಿ ಸದನ ಎಳೆಯಲಿ ಎಂದು ಕಾಂಗ್ರೆಸ್-ಜೆಡಿಎಸ್‍ಗಳು ಬಯಸುತ್ತಿದ್ದವು. ಸ್ಪೀಕರ್‍ರಿಗೆ ವಿಶ್ವಾಸಮತದ ಚರ್ಚೆ ನಡೆಯಲಿ ಎಂದಿದ್ದರೂ ಅವರು ಸರ್ಕಾರ ನಡೆಸುತ್ತಿರುವವರ ಪರವಾಗಿ (ಅವರು ಅದನ್ನು ಪ್ರಜಾಪ್ರಭುತ್ವದ ಪರವಾಗಿರುವುದು ಎಂದು ವ್ಯಾಖ್ಯಾನ ಮಾಡಬಹುದು) ವಾಲಿದಂತೆ ಕಾಣುತ್ತಿತ್ತು.

ಇವೆಲ್ಲದರ ಪರಿಣಾಮವಾಗಿ ಇಂದು ವಿಶ್ವಾಸಮತ ಮುಗಿಯುವ ಸಾಧ್ಯತೆ ಇಲ್ಲವೆಂಬುದು ಸ್ಪಷ್ಟ. ಈ ಮಧ್ಯೆ ಸ್ಪೀಕರ್ ಸುಪ್ರೀಂಕೋರ್ಟಿನ ಸ್ಪಷ್ಟೀಕರಣ ಕೇಳಲಲು ಬಯಸಿದ್ದಾರೆ ಎಂಬ ಸುದ್ದಿಯೂ ಹರಡಿತು. ಸುಪ್ರೀಂಕೋರ್ಟು ಈಗಾಗಲೇ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್‍ರ ತೀರ್ಮಾನವೇ ಅಂತಿಮ ಎಂದು ಹೇಳಿದೆಯದರೂ, ಸದರಿ ಮೊಕದ್ದಮೆಯಲ್ಲಿನ ಎರಡನೇ ಪ್ರಾರ್ಥನೆಯಾದ ‘ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ತೀರ್ಮಾನ ತೆಗೆದುಕೊಳ್ಳಬಾರದು’ ಎಂಬುದರ ಕುರಿತು ಅದೇನೂ ಹೇಳಿಲ್ಲ. ಇದು ಸ್ಪೀಕರ್‍ರ ವಿವೇಚನೆಗೆ ಬಹಳಷ್ಟು ಅಂಶಗಳನ್ನು ಬಿಟ್ಟಿದೆ.

ಈಗಾಗಲೇ ಸುಪ್ರೀಂಕೋರ್ಟಿನಲ್ಲಿ ಸಿಎಂ ವಕೀಲರಿಂದ ಮಂಡನೆಯಾಗಿರುವ ಹಾಗೆ ‘ಶಾಸಕರ ರಾಜೀನಾಮೆಗಳು ವ್ಯಕ್ತಿಗತ ರಾಜೀನಾಮೆಗಳಲ್ಲ. ಬದಲಿಗೆ ಅವರು ಗುಂಪುಗೂಡಿ ಬೇಟೆಯಾಡುತ್ತಿದ್ದಾರೆ. ಗುಂಪಾಗಿ ರಾಜೀನಾಮೆ, ಗುಂಪಾಗಿ ಪ್ರಯಾಣ ಮತ್ತು ಒಂದೇ ಗುಂಪಿನಲ್ಲಿ ಪರರಾಜ್ಯದ ಹೋಟೆಲ್‍ನಲ್ಲಿ ವಾಸ. ಈ ಮಧ್ಯೆ ಹಲವು ರೀತಿಯಲ್ಲಿ ವಿರೋಧ ಪಕ್ಷ ಬಿಜೆಪಿಯ ಜೊತೆಗೆ ಶಾಮೀಲಾಗಿರುವ ಕುರಿತು ಪುರಾವೆಗಳು’. ಹೀಗಿರುವಾಗ ಮತ್ತು ಸದನದಲ್ಲಿ ಇದೀಗ ವಿಪ್ ಉಲ್ಲಂಘನೆ ಸಹಾ ನಡೆದಿರುವಾಗ ಅವರನ್ನು ಅನರ್ಹಗೊಳಿಸುವ ಎಲ್ಲಾ ಸಾಧ್ಯತೆಗಳು ಇದ್ದೇ ಇವೆ.

ಆಪರೇಷನ್ ಕಮಲವು ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯವನ್ನೇ ಧ್ವಂಸಗೊಳಿಸುವ ರೀತಿಯಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಆದ್ದರಿಂದ ಸದರಿ ಶಾಸಕರನ್ನು ಅನರ್ಹಗೊಳಿಸಲು ಬೇಕಾದ ನೈತಿಕ ನೆಲೆಗಟ್ಟು ಇದ್ದೇ ಇದೆ. ಅದು ಸ್ಪೀಕರ್‍ರ ವಿವೇಚನೆಗೂ ಸೂಕ್ತವೆಂದು ಕಂಡುಬಂದಲ್ಲಿ ಅನರ್ಹರೆಂದು ಘೋಷಿಸಲು ಯಾವ ಅಡ್ಡಿಯೂ ಇಲ್ಲ. ಆ ನಂತರ ಆ ತೀರ್ಮಾನವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿ – ಸರಿ ತಪ್ಪು ತೀರ್ಪು ಪಡೆದುಕೊಳ್ಳಬಹುದು.

ಅಷ್ಟು ಹೊತ್ತಿಗೆ ಬಿಜೆಪಿ ಅಧಿಕಾರಕ್ಕೇರಿ ಆಗಿರುತ್ತದೆ. ಆದರೆ, ಈ ಶಾಸಕರು ಮಂತ್ರಿಗಳಾಗುವಂತಿಲ್ಲ. ಅನರ್ಹರಾಗಿರುವ ಶಾಸಕರು ತ್ರಿಶಂಕು ಸ್ಥಿತಿಗೆ ದೂಡಲ್ಪಡುತ್ತಾರೆ. ಅವರು ಅಂತಹ ಸ್ಥಿತಿಯಲ್ಲಿರುವಾಗ ಅದರ ಅನುಕೂಲ ಆಗುವುದು ಬಿಜೆಪಿಗೆ. ಏಕೆಂದರೆ ಇಬ್ಬರು ಪಕ್ಷೇತರರೂ ಒಳಗೊಂಡಂತೆ 17 ಜನಕ್ಕೆ ಮಂತ್ರಿ ಪದವಿ ನೀಡಿಬಿಟ್ಟರೆ, 105 ಶಾಸಕರಿರುವ ಬಿಜೆಪಿಯಲ್ಲಿ 17 ಜನರನ್ನು ಮಾತ್ರ ಸಚಿವರನ್ನಾಗಿಸಬಹುದು! ಈ ಮಧ್ಯೆ ಸ್ಪೀಕರ್‍ರನ್ನೂ ಬಿಜೆಪಿ ಬದಲಾಯಿಸಿಕೊಂಡಿರುತ್ತದಾದ್ದರಿಂದ ಅನರ್ಹತೆಯ ಭಯವಿಲ್ಲದೇ ಮತ್ತಷ್ಟು ಶಾಸಕರು ಕಾಂಗ್ರೆಸ್-ಜೆಡಿಎಸ್ ಕಡೆಯಿಂದ ಹೋಗಿರುತ್ತಾರೆ. ಅವರಲ್ಲಿ ಏಳೆಂಟು ಜನರು ಬಿಜೆಪಿಯಿಂದ ಗೆದ್ದು ಬಂದರೂ ಬಿಜೆಪಿಗೆ ಸರಳ ಬಹುಮತ ಇದ್ದೇ ಇರುತ್ತದೆ. ಸದ್ಯಕ್ಕೆ ಬಿಜೆಪಿಯು ಇನ್ನೂ ಬೆಳವಣಿಗೆಯಲ್ಲಿರುವ ಪಕ್ಷವಾದ್ದರಿಂದ ಮತ್ತು ದೇಶದ ಅತ್ಯಂತ ಬಲಾಢ್ಯ ಪಕ್ಷವಾದ್ದರಿಂದ, ಕೇಂದ್ರದಲ್ಲಿನ ಅಧಿಕಾರದ ಮೂಲಕ ಶಾಸಕರನ್ನು ಹೆದರಿಸಿ ಇಟ್ಟುಕೊಳ್ಳುವ ಸಾಧ್ಯತೆ ಇರುವುದರಿಂದ ಸರಳ ಬಹುಮತವೂ ಅದಕ್ಕೆ ಸದೃಢ ಬಹುಮತವೇ ಆಗಿರುತ್ತದೆ. ಅಷ್ಟಕ್ಕೂ ಮೀರಿ ನಂತರ ಯಾರಾದರೂ ಪಕ್ಷಾಂತರ ಮಾಡಿದರೆ ವಿಧಾನಸಭೆ ವಿಸರ್ಜನೆ ಮಾಡಿ ರಾಷ್ಟ್ರಪತಿ ಆಡಳಿತ ಹೇರಲು ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ನಂತರದ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆದ್ದು ಬರುವ ವಿಶ್ವಾಸ ಬಿಜೆಪಿಗಿದೆ.

ತೀರಾ ದೊಡ್ಡ ಪವಾಡಗಳೇನೂ ಸಂಭವಿಸದೇ ಇದ್ದರೆ, ಬಹುಶಃ ರಾಜ್ಯದ ರಾಜಕೀಯ ಮುಂದಿನ ಬೆಳವಣಿಗೆಗಳು ಈ ರೀತಿಯಲ್ಲಿಯೇ ಇರಲಿವೆ. ಆದರೆ, ಈ ಒಟ್ಟಾರೆ ವಿದ್ಯಮಾನದಲ್ಲಿ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ಅವನ್ನು ಚರ್ಚಿಸುವ ಅಗತ್ಯವಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಿದ್ದರೂ, ಯಾವುದೇ ಶಾಸಕರಿಗೆ ರಾಜೀನಾಮೆ ಕೊಡುವ ಹಕ್ಕು ಇದ್ದೇ ಇರುತ್ತದೆ. ಅದನ್ನು ಅನೈತಿಕವಾದ ಪಕ್ಷಾಂತರಕ್ಕೆ ಬಳಸಿಕೊಳ್ಳುತ್ತಿರುವುದು ವಾಸ್ತವವಾದರೂ, ಅದನ್ನು ತಡೆಯುವುದು ಸಾಧ್ಯವಿಲ್ಲ. ಏಕೆಂದರೆ, ನಿಜಕ್ಕೂ ಸೈದ್ಧಾಂತಿಕ ಕಾರಣಗಳಿಗೆ ಅಥವಾ ತನ್ನ ಪಕ್ಷವು ಭ್ರಷ್ಟವಾಗಿದೆ ಎಂತಲೋ ಅಥವಾ ಇನ್ನಾವುದೋ ಕಾರಣಕ್ಕೆ ಶಾಸಕರೊಬ್ಬರು ರಾಜೀನಾಮೆ ಕೊಟ್ಟರೆ ಅದನ್ನು ನಿರ್ಬಂಧಿಸುವುದು ಸಾಧುವಲ್ಲ. ಜೊತೆಗೆ ಆಡಳಿತ ಪಕ್ಷದಿಂದ ಆಯ್ಕೆಯಾಗುವ ಸ್ಪೀಕರ್ ಬಹುತೇಕ ಸಂದರ್ಭಗಳಲ್ಲಿ ಆಡಳಿತ ಪಕ್ಷದ ಪರವಾಗಿಯೇ ನಿಲುವು ತೆಗೆದುಕೊಂಡಿರುವುದು ಇತಿಹಾಸ. ಕೆಲವರಂತೂ ಅತ್ಯಂತ ಕೆಟ್ಟ ರೀತಿಯಲ್ಲಿ ಈ ಪಕ್ಷಪಾತಿತನ ತೋರಿದ್ದಾರೆ. ಹೀಗಿರುವಾಗ ಸ್ಪೀಕರ್‍ರ ನಿಲುವುಗಳು ಸುಪ್ರೀಂಕೋರ್ಟ್‍ನ ಪರಿಶೀಲನೆಗೆ ಒಳಪಡುವ ಅಗತ್ಯವಿಲ್ಲ ಎಂದು ಹೇಳಲಾಗದು.

ಅದೇ ಸಂದರ್ಭದಲ್ಲಿ ತನ್ನ ಪಕ್ಷದ ಶಾಸಕರಿಗೆ ವಿಪ್ ನೀಡುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೂ ಇರುವುದಿಲ್ಲವೆಂದು ಸುಪ್ರೀಂಕೋರ್ಟು ಹೇಳಲು ಬರುವುದಿಲ್ಲ. ನಿರ್ದಿಷ್ಟವಾಗಿ ಅದನ್ನೇ ಹೇಳಿರದಿದ್ದರೂ, ಈ ಸಾರಿಯ ತೀರ್ಪಿನ ಪರಿಣಾಮ ಅದೇ ಆಗಿದೆ. ಇದು ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಕೆ.ಆರ್.ರಮೇಶ್‍ಕುಮಾರ್‍ರ ರೀತಿಯ ಸ್ಪೀಕರ್ ಇರುವುದರಿಂದ, ಇದನ್ನು ಸಾಂವಿಧಾನಿಕ ಭಾಷೆಯಲ್ಲಿ ಸಮರ್ಥವಾಗಿ ಅಭಿವ್ಯಕ್ತಿ ಮಾಡುತ್ತಿದ್ದಾರೆ. ಯಾವ ಕಾರಣಗಳಿಗಾಗಿ ರಮೇಶ್‍ಕುಮಾರ್ ಸದರಿ ಶಾಸಕರನ್ನು ಅನರ್ಹಗೊಳಿಸುವ ನೈತಿಕ ನೆಲೆಗಟ್ಟು ಏರ್ಪಟ್ಟಿದೆ ಎಂದು ಹೇಳಬಹುದೋ ಅದೇ ಕಾರಣಗಳಿಂದಾಗಿ ಸುಪ್ರೀಂಕೋರ್ಟು ಸಹಾ ವಿಪ್ ನೀಡುವುದನ್ನು ನಿರ್ಬಂಧಿಸದೇ ಇರಬಹುದಾಗಿತ್ತು.

ಆ ನಂತರ ಶಾಸಕರು ಅನರ್ಹಗೊಂಡು ವಿಧಾನಸಭೆಯ ಸಂಖ್ಯೆ ಕುಸಿಯುತ್ತಿತ್ತು ಮತ್ತು ಕುಮಾರಸ್ವಾಮಿ ಸರ್ಕಾರವು ಅಲ್ಪಮತಕ್ಕಿಳಿದು ಅಧಿಕಾರದಿಂದ ವಂಚಿತವಾಗುತ್ತಿತ್ತು. ಬಹುಮತವಿಲ್ಲದ ಈ ಸರ್ಕಾರವು ಮುಂದುವರೆಯುವುದೂ ಅನೈತಿಕವಾಗಿದೆ. ಆದರೆ, ಈಗ ಪಕ್ಷಾಂತರಕ್ಕೆ ಮುಂದಾಗಿರುವ ಶಾಸಕರ ಅನರ್ಹತೆಗೆ ತಡೆಯಾಗುವ ರೀತಿಯ ವಾತಾವರಣ ಸುಪ್ರೀಂಕೋರ್ಟಿನ ತೀರ್ಪಿನಿಂದ ಸೃಷ್ಟಿಯಾಗಿರುವುದೇ ಸಮಸ್ಯೆಯನ್ನು ಕಗ್ಗಂಟಾಗಿಸಿದೆ ಮತ್ತು ಶಾಸಕಾಂಗದ ಸ್ವಾಯತ್ತತೆಯ ಕುರಿತೂ ಪ್ರಶ್ನೆ ಎದ್ದಿದೆ. ಇದರ ಹೊಣೆಯನ್ನು ಸುಪ್ರೀಂಕೋರ್ಟೇ ಹೊರಬೇಕು.

ಆದರೆ ಇದೇ ಸಂದರ್ಭದಲ್ಲಿ ಶಾಸಕಾಂಗದ ನಡವಳಿಕೆಯೂ ಅತ್ಯಂತ ಬೇಜವಾಬ್ದಾರಿಯುತವಾದುದಾಗಿದೆ. ಒಂದೆಡೆ ಮಾರಾಟವಾಗಲು ಸಿದ್ಧವಾಗಿರುವ ಕುದುರೆ ಅಥವಾ ಕತ್ತೆ ಅಥವಾ ದನಗಳಾಗಿರುವ ಶಾಸಕರ ದ್ರೋಹ ಇದೆ. ಇನ್ನೊಂದೆಡೆ ಅವರನ್ನು ಕೊಳ್ಳಲು ಸಾಮ, ದಾನ, ಬೇಧ, ದಂಡಗಳನ್ನೆಲ್ಲಾ ಪ್ರಯೋಗಿಸುತ್ತಿರುವ ಬಿಜೆಪಿ ಪಕ್ಷವಿದೆ. ಮಾರಾಟವಾಗಬಹುದಾದಂಥವರಿಗೇ ಟಿಕೆಟ್ ನೀಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಸಿದ್ಧಾಂತ ಹೀನ ಸ್ಥಿತಿ. ಇಂತಹ ಸಂದರ್ಭದಲ್ಲಿ ಬಿಜೆಪಿಯ ನಡವಳಿಕೆಯನ್ನು ಖಂಡಿಸಲು ಹಲವು ಕಾರಣಗಳಿವೆ. ಆದರೆ, ತಾಂತ್ರಿಕವಾಗಿ ಸಮ್ಮಿಶ್ರ ಸರ್ಕಾರವೂ ಬಹುಮತ ಕಳೆದುಕೊಂಡಿರುವಾಗ ಅದನ್ನು ಉಳಿಸಿಕೊಳ್ಳಲು ಹಲವು ರೀತಿಯ ಸರ್ಕಸ್‍ಗಳನ್ನು ಮಾಡುತ್ತಿದೆ.

ಬಿಜೆಪಿಯ ಅನೈತಿಕ ಕ್ರಮಗಳನ್ನು ಖಂಡಿಸುತ್ತಿರುವ ಇವರು, ತಮ್ಮಿಂದ ದೂರ ಹೋಗಿರುವ ಶಾಸಕರು ಅನರ್ಹರಾಗಲಿ ಎಂದಷ್ಟೇ ಬಯಸುತ್ತಿಲ್ಲ. ಬದಲಿಗೆ, ಅನರ್ಹತೆಯ ಭಯ ಹುಟ್ಟಿಸಿ ಅವರನ್ನು ತಮ್ಮೆಡೆಗೆ ಕರೆ ತರಬೇಕೆಂಬ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸ್ಥಿತಿ ಇರುವಾಗ ವಿರೋಧ ಪಕ್ಷವಾದ ಬಿಜೆಪಿಯು ಮುಖ್ಯಮಂತ್ರಿ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಮುಂದಾಗಿರುವ ಹೊತ್ತಿನಲ್ಲಿ ಚರ್ಚೆಗೂ ತಯಾರಿಲ್ಲ. ಪ್ರತಿಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗುವ ಆತುರದಲ್ಲಿರುವ ಯಡಿಯೂರಪ್ಪನವರು ಸ್ಪೀಕರ್‍ರನ್ನುದ್ದೇಶಿಸಿ ಒಂದು ಮಾತನ್ನು ಹೇಳಿದರು. ‘ಆಡಳಿತ ಪಕ್ಷಗಳವರೆಲ್ಲರೂ ಮಾತನಾಡಲಿ. ನಾವುಗಳು ಒಂದೈದು ನಿಮಿಷ ಮಾತಾಡುತ್ತೇವಷ್ಟೇ. ಮತಕ್ಕೆ ಹಾಕಿ’.

ಅಂದರೆ ಚರ್ಚೆ ದೀರ್ಘವಾದರೆ, ತಾವು ಮುಂಬೈನಲ್ಲಿ ಹಿಡಿದಿಟ್ಟುಕೊಂಡಿರುವ ಶಾಸಕರು ಮತ್ತೆ ಪಕ್ಷ ಬದಲಿಸಬಹುದೆನ್ನುವ ಭಯ ಅವರಿಗೆ. ಇಂತಹ ಯಡಿಯೂರಪ್ಪನವರು ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಷಡ್ಯಂತ್ರ ನಡೆಯುತ್ತಿದೆ’ ಎಂದು ಹೇಳಿದರು. ಯಡಿಯೂರಪ್ಪನವರ ಬಾಯಲ್ಲಿ ಇಂತಹ ಮಾತುಗಳನ್ನು ಕೇಳಿದರೆ ಅಕ್ಷರಗಳು, ಮಾತುಗಳೇ ಅರ್ಥಹೀನವಾಗುವ ಭಯ ಹುಟ್ಟುತ್ತದೆ. ಇವೆಲ್ಲದರ ಜೊತೆಗೆ, ಬಹಳ ಹಿಂದಿನಿಂದಲೂ ಸಂಪ್ರದಾಯವಾಗಿರುವಂತೆ ರಾಜ್ಯಪಾಲರು ಕೇಂದ್ರದಲ್ಲಿರುವ ಪಕ್ಷದ ಪರವಾಗಿ ಬ್ಯಾಟಿಂಗ್ ಮಾಡುವ ಕೆಲಸಕ್ಕಿಳಿಯುತ್ತಾರೆ. ಪ್ರಭುತ್ವದ ಮೂರು ಅಂಗಗಳ ಜೊತೆಗೆ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಭಾವಿಸಲಾಗುತ್ತಿದ್ದ ಮಾಧ್ಯಮಗಳು ಇನ್ನೂ ಪಾತಾಳಕ್ಕಿಳಿದಿವೆ.

ಹಾಗಾಗಿ ಇದು ಕೇವಲ ಸಾಂವಿಧಾನಿಕ ಬಿಕ್ಕಟ್ಟಲ್ಲ, ಪ್ರಜಾತಂತ್ರದ ಬಿಕ್ಕಟ್ಟಾಗಿ ಪರಿವರ್ತನೆಯಾಗಿದೆ. ಮುಂದಿನ ದಿನಗಳ ಬೆಳವಣಿಗೆಗಳು ಯಾವ ರೀತಿ ಅನಾವರಣಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕು. ಇದು ಕೇವಲ ಕರ್ನಾಟಕದ ವಿಧಾನಸಭೆಯಲ್ಲಿ ಬಗೆಹರಿಯದೇ ಮತ್ತೆ ಸುಪ್ರೀಂಕೋರ್ಟ್‍ನ ಅಂಗಳದಲ್ಲೂ ಚರ್ಚೆಯಾಗುವುದರಲ್ಲಿ ಸಂಶಯವಿಲ್ಲ. ಸುಪ್ರೀಂಕೋರ್ಟು ಸಂಶಯಗಳನ್ನು ಬಗೆಹರಿಸುತ್ತದೋ, ಇನ್ನಷ್ಟು ಗೊಂದಲ ಮೂಡಿಸುತ್ತದೋ ಎಂಬುದರ ಬಗ್ಗೆಯೂ ಖಾತರಿಯಿಲ್ಲ. ಅದೂ ಸಹಾ ಇಂದಿನ ದುರಂತಗಳಲ್ಲಿ ಒಂದು.

ಮೀಡಿಯಾ: ಆಪರೇಷನ್ ಕಮಲ, ದೋಸ್ತಿ ಖತಂ

ಆಪರೇಷನ್ ಕಮಲ ಎಂಬ ಹೊಲಸು ವಿದ್ಯಮಾನವನ್ನು ಖಂಡಿಸುವ ವಿಶೇಷ ಕಾರ್ಯಕ್ರಮವನ್ನು ಯಾವ ಮಾಧ್ಯಮವೂ ಮಾಡಿದ ನಿದರ್ಶನವಿಲ್ಲ. ಅದನ್ನು ಒಂದು ರೋಚಕ ವಿದ್ಯಮಾನವಾಗಿ ಮಾತ್ರ ಬಿಂಬಿಸಲಾಗುತ್ತಿದೆ. ಈ ಸಾರಿಯಂತೂ ಯಾವ ಚಾನೆಲ್ ಸಹಾ ‘ಆಪರೇಷನ್ ಕಮಲ’ ಎಂಬ ಟೈಟಲ್ ಸಹಾ ಬಳಸುತ್ತಿಲ್ಲ. ಬದಲಿಗೆ ದೋಸ್ತಿ ಖತಂ ಎಂಬುದೇ ಟೈಟಲ್ಲು. ಅದಕ್ಕೂ ಮಿಗಿಲಾಗಿ ಈ ಸಾರಿ ವಿವಿಧ ಶಾಸಕರನ್ನು ಸಂಪರ್ಕಿಸಿ ಡೀಲ್ ಕುದುರಿಸಲು ಪ್ರತಿದಿನ ಲೋಕಕ್ಕೆಲ್ಲಾ ಉಪದೇಶ ಹೇಳುವ ಚಾನೆಲ್ ಸಂಪಾದಕರೊಬ್ಬರನ್ನು ಬಿಜೆಪಿಯು ನಿಯೋಜಿಸಿದೆ ಎಂಬ ಮಾತು ರಾಜಕೀಯ ವಲಯಗಳಲ್ಲೆಲ್ಲಾ ಕೇಳಿ ಬರುತ್ತಿದೆ.

ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಜೊತೆ ಸೇರಿ ಮೊದಲ ಸುತ್ತಿನ ಕೆಲಸ ಮುಗಿಸಿಕೊಟ್ಟರು. ನಂತರ ಬಿಜೆಪಿ ಹೈಕಮ್ಯಾಂಡ್‍ನ ಸೂತ್ರಧಾರಿಗಳು ಕಾರ್ಯಾಚರಣೆಗಿಳಿದು ಫೈನಲ್ ಟಚ್ ಕೊಟ್ಟರು ಮತ್ತು 10ಕ್ಕೂ ಹೆಚ್ಚು ಶಾಸಕರು ಮುಂಬೈ ಸೇರಿಕೊಂಡ ನಂತರ ಉಳಿದವರಿಗೆ ಗಾಳ ಹಾಕಲಾಯಿತು ಎಂಬುದು ಗುಟ್ಟುಗುಟ್ಟಾಗೇನೂ ಚರ್ಚೆಯಾಗುತ್ತಿಲ್ಲ.
ಅದು ಎಷ್ಟು ವಾಸ್ತವವೋ ಗೊತ್ತಿಲ್ಲವಾದರೂ, ಈ ಆಪರೇಷನ್‍ಗೆ ಮಾನ್ಯತೆ ದೊರಕಿಸಿಕೊಡುವಲ್ಲಿ ಮಾಧ್ಯಮಗಳ ಪಾತ್ರವನ್ನು ಅಲ್ಲಗಳೆಯುವಂತೆಯೇ ಇಲ್ಲ.

ಸಿದ್ದು – ರೇವಣ್ಣ ಇವರೇ ಕಾರಣವಾ?

ತನ್ನ ಬದ್ಧವೈರಿಗಳಾದ ಗೌಡರ ಕುಟುಂಬಕ್ಕೆ ಅಧಿಕಾರ ತಪ್ಪಿಸುವುದು ಸಿದ್ದರಾಮಯ್ಯನವರಿಗೆ ಬೇಕಿದ್ದುದರಿಂದಲೇ ಇವೆಲ್ಲವೂ ನಡೆಯಿತು ಎಂಬ ವಾದವೂ ಚಾಲ್ತಿಯಲ್ಲಿದೆ. 2018ರ ವಿಧಾನಸಭಾ ಚುನಾವಣೆಯ ನಂತರ ನಡೆದ ಹಲವು ಬೆಳವಣಿಗೆಗಳ ಕಾರಣದಿಂದಲೇ ಸಿದ್ದರಾಮಯ್ಯನವರ ಮೇಲೆ ಅನುಮಾನ ಏರ್ಪಟ್ಟಿದೆ. ಈಗ ಹೋಗಿರುವವರಲ್ಲಿ ಹಲವರು ಸಿದ್ದರಾಮಯ್ಯನವರಿಗೆ ಪರಮ ನಿಷ್ಠರು ಇರುವುದೂ ಅದನ್ನು ಪುಷ್ಟೀಕರಿಸಿದೆ. ಈ ಅನುಮಾವನ್ನು ಹೆಚ್ಚಿಸಲೆಂದೇ ಇಂದು ಕಾಣೆಯಾಗಿರುವ ಶ್ರೀಮಂತ್ ಪಾಟೀಲರ ಗಾಯಬ್ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಪಾತ್ರವೇ ಇದೆ ಎಂಬಂತೆ ಸಿ.ಟಿ.ರವಿ ಮಾತನಾಡಿದ್ದು. ಬೇಲಿಯೇ ಎದ್ದು ಹೊಲ ಮೇಯ್ದಿರಬಹುದಲ್ಲವಾ? ಎಂದು ಪದೇ ಪದೇ ಅವರು ಚುಚ್ಚಲೆತ್ನಿಸಿದರು. ಆದರೆ, ಬಿಜೆಪಿ ಶಾಸಕ ಲಕ್ಷ್ಮಣ ಸವದಿಯು ಶ್ರೀಮಂತ ಪಾಟೀಲ್ ಜೊತೆ ಇದ್ದ ಫೋಟೋ ತೋರಿಸಿ ಕಾಂಗ್ರೆಸ್ಸಿಗರು ಅವರ ಬಾಯಿ ಮುಚ್ಚಿಸಿದರು.

ಹಾಗೆಯೇ ಅಧಿಕಾರ ಸಿಕ್ಕಾಗ ಮೈಮೇಲೆ ದೆವ್ವ ಹೊಕ್ಕಂತಾಡುವ ರೇವಣ್ಣರ ಅವರ ಮನೋಭಾವವೂ ಸಾಕಷ್ಟು ಪ್ರಚಲಿತ. ಅವರು ಉಳಿದ ಸಚಿವರಿಗೆ ಹಸ್ತಕ್ಷೇಪದ ಮೂಲಕ ತೊಂದರೆ ಕೊಟ್ಟಿದ್ದಾರೆ ಎಂದರೆ ನಂಬುವಂತೆಯೇ ಅವರ ವ್ಯಕ್ತಿತ್ವವೂ ಇದೆ.

ಇವಿಷ್ಟೇ ಇಂದಿನ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎನ್ನುವುದಾದರೆ ಸಿದ್ದರಾಮಯ್ಯನವರ ಬದ್ಧವೈರಿ ಎಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯನವರ ‘ಆಪ್ತರು’ ಒಟ್ಟಿಗೇ ಸೇರಿದ್ದು ಹೇಗೆ ಎಂಬುದನ್ನು ವಿವರಿಸುವುದು ಕಷ್ಟ. ಅದಕ್ಕಿಂತ ಮುಖ್ಯವಾಗಿ ಗೋವಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು ಇಲ್ಲೆಲ್ಲಾ ವಿವಿಧ ಪಕ್ಷಗಳ ಜನಪ್ರತಿನಿಧಿಗಳನ್ನು ಗುಡಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಬಿಜೆಪಿಯ ನಡವಳಿಕೆಗೆ ಏನು ಕಾರಣ? ಕರ್ನಾಟಕದ್ದು ಮಾತ್ರ ಆ ವಿದ್ಯಮಾನದಿಂದ ಹೊರತಾದ ಬೆಳವಣಿಗೆಯೇ ಎಂಬ ಪ್ರಶ್ನೆ ಏಳುತ್ತದೆ.

ಸಿದ್ದರಾಮಯ್ಯನವರ ಪಾತ್ರ ಈ ಬೆಳವಣಿಗೆಯಲ್ಲಿ ಇದೆ ಎನ್ನುವುದಕ್ಕಿಂತ ಇದನ್ನು ಅವರ ವೈಫಲ್ಯ ಎಂದರೆ ಹೆಚ್ಚು ಸಮಂಜಸವಾದೀತು. ಹಾಗೆಯೇ ರೇವಣ್ಣರ ಧೋರಣೆಯು ಹಲವರಿಗೆ ಸಮಸ್ಯೆ ತಂದಿರುವುದು ನಿಜವಾದರೂ, ಅವರೇ ಮುಖ್ಯ ವಿಲನ್ ಎಂಬುದೂ ವಾಸ್ತವವಲ್ಲ.

ಎಂಟಿಬಿಗೆ ನೇರ ಫೋನ್ ಮಾಡಿದರೇ ಅಮಿತ್‍ಷಾ?

ಇದು ಕೇವಲ ವದಂತಿಯಷ್ಟೇ ಎಂದು ಹೇಳುವ ಸ್ಥಿತಿಯಿಲ್ಲ. ಏಕೆಂದರೆ ಅಮಿತ್‍ಷಾ ಈಗ ದೇಶದಲ್ಲಿ ಎಲ್ಲರಲ್ಲೂ ಭಯ ಹುಟ್ಟಿಸುವ ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದ್ದಾರೆ. ಅದು ಗುಜರಾತ್‍ನಿಂದ ಆರಂಭವಾಗಿತ್ತು; ನಂತರ ಬಿಜೆಪಿಯಲ್ಲಿ ಅವರಿಗೆ ಎದುರಾಡಿದವರು ಉಳಿದುಕೊಳ್ಳುತ್ತಿರಲಿಲ್ಲ. ಈಗ ಅದು ಇಡೀ ದೇಶಕ್ಕೆ ವ್ಯಾಪಿಸಿಕೊಂಡಿದೆ. ಎಂಟಿಬಿಯವರ ಆಪ್ತ ವಲಯದಿಂದ ಕೇಳಿಬಂದ ಸುದ್ದಿಯೆಂದರೆ, ಅಮಿತ್‍ಷಾ ಎಂಟಿಬಿ ನಾಗರಾಜು ಅವರಿಗೆ ಫೋನ್ ಮಾಡಿ ಯಾವ ಆಮಿಷವನ್ನೂ ಒಡ್ಡಲಿಲ್ಲ. ‘ನಿಮಗೆ 48 ಗಂಟೆ ಸಮಯ ಕೊಡುತ್ತೇನೆ. ಅಷ್ಟರಲ್ಲಿ ರಾಜೀನಾಮೆ ಕೊಡಬೇಕು’ ಎಂದಷ್ಟೇ ಹೇಳಿದರು. ಅಂದರೆ ನಿರ್ದಿಷ್ಟ ಬೆದರಿಕೆಯ ಮಾತುಗಳೂ ಇಲ್ಲದೇ, ಕೇವಲ ಇಷ್ಟು ಮಾತನ್ನು ಹೇಳಿದರೆ ಸಾಕು ಥರ ಥರ ನಡುಗುವ ಪರಿಸ್ಥಿತಿ ಉಂಟಾಗಿದೆ. ಆ ರೀತಿ ಹೆದರುವ ಸ್ಥಿತಿಯಲ್ಲಿ ಎಂಟಿಬಿ ನಾಗರಾಜು ಏಕಿದ್ದಾರೆ?

2018ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ಅವರು ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಆಸ್ತಿ ಘೋಷಿಸಿಕೊಂಡ ಶಾಸಕರಾಗಿದ್ದರು ಎಂದರೆ ಉಳಿದುದನ್ನು ಊಹಿಸಬಹುದು. ಘೋಷಿಸಿಕೊಂಡ ಆಸ್ತಿಯೇ ಇಷ್ಟಿರಬೇಕಾದರೆ ಅವರ ವ್ಯವಹಾರಗಳ ರೀತಿ ನೀತಿ ಏನಿರಬಹುದು? ಇಲ್ಲದಿದ್ದರೆ ಸಿದ್ದರಾಮಯ್ಯನವರಿಗೆ ಆಪ್ತರಾಗಿದ್ದ, ಮಂತ್ರಿ ಪದವಿಯನ್ನೂ ಪಡೆದುಕೊಂಡಿದ್ದ ಎಂಟಿಬಿ ಪಕ್ಷ ಬದಲಿಸಿದ್ದಕ್ಕೆ ಬೇರೆ ಕಾರಣಗಳು ಕಾಣುತ್ತಿಲ್ಲ. ಸ್ವತಃ ತಾವೂ ಸಾಕಷ್ಟು ಆಸ್ತಿವಂತರೇ ಆಗಿರುವ ರಾಮಲಿಂಗಾರೆಡ್ಡಿಯವರು ಇದರ ಕುರಿತು ತಮ್ಮ ಮನೆಗೆ ಬಂದ ಕಾಂಗ್ರೆಸ್ ನಾಯಕರ ಮುಂದೆ ಮಾತಾಡಿದರು ಎಂದೂ ಹೇಳಲಾಗುತ್ತಿದೆ. ‘ಬರುತ್ತಿರುವ ಒತ್ತಡಗಳನ್ನು ನಾನು ತಡೆದುಕೊಳ್ಳುತ್ತೇನೆ. ಆದರೆ ಉಳಿದವರನ್ನು ನೀವು ಹೇಗೆ ಸೇಫ್ ಮಾಡುತ್ತೀರಿ ಯೋಚಿಸಿ’ ಎಂದು ವಾಸ್ತವವನ್ನು ಅವರು ಬಿಚ್ಚಿಟ್ಟರು ಎಂದು ಕಾಂಗ್ರೆಸ್ ಮೂಲಗಳು ತಿಳಿಸುತ್ತವೆ.
ಈಗ ರಾಜೀನಾಮೆ ಕೊಟ್ಟಿರುವವರಲ್ಲಿ ಹಲವರು 30 ಕೋಟಿಗೆ ಮಾರಾಟವಾಗುವ ಕುಳಗಳು ಅಲ್ಲವೇ ಅಲ್ಲ. ಅದೇ ರೇಟಿಗೆ 8-10 ಜನರನ್ನು ಕೊಳ್ಳಬಲ್ಲ ಆರ್ಥಿಕ ಶಕ್ತಿ ಅವರಲ್ಲಿದೆ. ಆದರೆ, ಈ ಆರ್ಥಿಕ ಶಕ್ತಿಯ ಮೂಲಗಳೆಲ್ಲವೂ ಪರಿಶುದ್ಧವಾಗಿಲ್ಲದಿರುವುದರಿಂದ ಅವರಿಗೆ ಹೆದರಿಕೆಯೂ ಇದೆ ಎಂಬುದು ಸ್ಪಷ್ಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...