Homeಮುಖಪುಟಕೆಪಿಎಸ್‌ಸಿ ಚೇಷ್ಟೆ : ಅಧಿಕಾರ ಶಾಹಿಗಳ ಜಾತಿ ಪೂರ್ವಗ್ರಹ

ಕೆಪಿಎಸ್‌ಸಿ ಚೇಷ್ಟೆ : ಅಧಿಕಾರ ಶಾಹಿಗಳ ಜಾತಿ ಪೂರ್ವಗ್ರಹ

- Advertisement -
- Advertisement -

ಪ್ರೊ.ನಗರಗೆರೆ ರಮೇಶ್ |

ನೀವು ಸರ್ಕಾರಿ ಬಸ್ಸುಗಳಲ್ಲಿ, ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದರೆ ಒಂದು ವಿಷಯವನ್ನು ಗಮನಿಸಿರಬಹುದು. ಮೊದಲ 16 ಸೀಟುಗಳು ಮಹಿಳೆಯರಿಗೆ ಮೀಸಲಿದ್ದು ಮತ್ತೆ ಕೆಲವು ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮೀಸಲು ಎಂದು ನಮೂದಾಗಿರುತ್ತದೆ. ಒಂದು ವೇಳೆ 16 ಸೀಟುಗಳು ಭರ್ತಿಯಾಗಿದ್ದರೆ ಉಳಿದ ಮಹಿಳೆಯರು ನಿಂತಿರುವುದನ್ನು ಕಾಣುತ್ತೀರಿ. ಹಿಂದಕ್ಕೆ ಬಂದು ಬೇರೆ ಸೀಟುಗಳಲ್ಲಿ ಸಾಮಾನ್ಯವಾಗಿ ಕುಳಿತುಕೊಳ್ಳುವುದಿಲ್ಲ. ಒಂದುವೇಳೆ ಯಾರಾದರೂ ಕುಳಿತರೆ ಕೆಲ ಗಂಡಸರು ಇವು ನಮ್ಮ ಸೀಟುಗಳು ತಾವು ಹೆಂಗಸರ ಸೀಟುಗಳಿಗೆ ಹೋಗಿ ಅಂತ ಹೇಳುವುದುಂಟು. ಕೆಲವರು ಮಹಿಳೆಯರು ಆ ಮಾತನ್ನು ಪಾಲಿಸುವುದೂ ಉಂಟು. ವಾಸ್ತವದಲ್ಲಿ ಅದು ಗಂಡಸರ ಸೀಟುಗಳಲ್ಲ. ಆಗ ಆ ಬಸ್ಸಿನಲ್ಲಿ ಗಂಡಸರಿಗೆ ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಮೀಸಲಾತಿ ಎಂದಾಗಿಬಿಡುತ್ತದೆ.

ಯಾವುದೇ ಕ್ಷೇತ್ರದಲ್ಲಾಗಲೀ ಮೀಸಲಿಗೆ ಒಳಗಾಗದ ಯಾವುದೇ ಸ್ಥಾನವು ಎಲ್ಲರಿಗೂ ಅಂದರೆ ಮೀಸಲಾತಿ ಸೌಲಭ್ಯವಿರುವ ಗುಂಪುಗಳವರಿಗೂ ಸೇರಿದಂತೆ ತೆರೆದಿರುತ್ತದೆ ಎನ್ನುವುದು ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ತಿಳಿದಿರುವ ಅಥವಾ ತಿಳಿದಿರಬೇಕಾದ ಸಂಗತಿ. ಆಶ್ಚರ್ಯದ ಸಂಗತಿಯೆಂದರೆ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಅನೇಕರಿಗೆ ಈ ವಿಷಯದ ಪರಿಜ್ಞಾನವಿಲ್ಲದಿರುವುದು ಕಂಡುಬರುತ್ತದೆ. ಈ ಅಜ್ಞಾನ ಆಡಳಿತದ ಉನ್ನತ ಸ್ಥಾನಗಳಲ್ಲಿರುವವರನ್ನೂ ಬಿಟ್ಟಿಲ್ಲ ಎನ್ನುವುದೇ ಈಗಿನ ಸಮಸ್ಯೆ.

ಕೆಪಿಎಸ್ಸಿ ಅಧ್ಯಕ್ಷ ಶ್ಯಾಂ ಭಟ್

ಸಂವಿಧಾನದ ಅಡಿಯಲ್ಲಿ ಸಾಮಾಜಿಕವಾಗಿ ದಮನಕ್ಕೊಳಗಾದವರಿಗೆ ಹಾಗೂ ಹಿಂದುಳಿದವರಿಗೆ ಶಿಕ್ಷಣ ಮತ್ತು ಸರ್ಕಾರೀ ನೇಮಕಾತಿಗಳಲ್ಲಿ ಇಂತಿಷ್ಟು ಎಂದು ಸ್ಥಾನಗಳನ್ನು ಮೀಸಲಿಟ್ಟಿದ್ದು, ಅದರಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ತಳ ಸಮುದಾಯದವರಿಗೆ ಸಹಾಯವಾಗಿದೆ ಎನ್ನುವುದು ವಾಸ್ತವ. ಈ ಸಂದರ್ಭದಲ್ಲಿಯೂ ಸಹ ನಾವು ಬಳಸುವ ಜನರಲ್ ಮೆರಿಟ್ (ಸಾಮಾನ್ಯ ಪ್ರತಿಭೆ) ಎನ್ನುವ ಪದವೇ ತಪ್ಪು ಅದು ಜನರಲ್ ಕ್ಯಾಟಗರಿ ಎಂದು ಮಾತ್ರ ಇರಬೇಕು. ‘ಮೆರಿಟ್’ ಎಂದು ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಮಾತ್ರ ಬಳಸಿ ಉಳಿದವರಿಗೆ ಮಾತ್ರ ಕ್ಯಾಟಗರಿ ಎಂದು ಬಳಸುವ ಪರಿಪಾಠವಿದೆ. ಈ ಪದದ ಬಳಕೆಯಲ್ಲಿಯೇ ತಥಾಕಥಿತ ‘ಪ್ರತಿಭಾನ್ವಿತ’ ಜನರಲ್ಲಿ ತುಳಿತಕ್ಕೊಳಗಾದವರ/ ಹಿಂದುಳಿದವರ ಬಗ್ಗೆ ತಾತ್ಸಾರ ಮಾತ್ರವಲ್ಲ ಪೂರ್ವಗ್ರಹವೂ ಎದ್ದು ಕಾಣುತ್ತದೆ.

ಇದೇ ಪೂರ್ವಗ್ರಹ ಇತ್ತೀಚೆಗೆ ಕೆಪಿಎಸ್ಸಿ ತೆಗೆದುಕೊಂಡಿರುವ ನೀತಿ ನಿರ್ಧಾರದ ಸಂಬಂಧದಲ್ಲಿಯೂ ಕಾಣುತ್ತದೆ. ಕರ್ನಾಟಕ ಉಚ್ಚನ್ಯಾಯಾಲಯವು, ಡಾ.ಕೃಷ್ಣ ಅವರು ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆ ಕೇಸಿಗೆ ಮಾತ್ರ ಸೀಮಿತವಾಗುವಂತೆ ನೀಡಿದ ಒಂದು ತೀರ್ಪನ್ನು ಆಧಾರವಾಗಿಟ್ಟು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊಕದ್ದಮೆಯಲ್ಲಿ ಆ ಕೇಸಿಗೆ ಮಾತ್ರ ಅನ್ವಯವಾಗುವಂತೆ ನೀಡಿದ ತೀರ್ಪನ್ನು ಆಧರಿಸಿ ನ್ಯಾಯಾಲಯದ ಆ ತೀರ್ಪನ್ನು ಎಲ್ಲ ಸಂದರ್ಭಗಳಿಗೂ ಅನ್ವಯಿಸುವ ದೊಡ್ಡ ತಪ್ಪನ್ನು ಮಾಡುತ್ತಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವರ್ಗದಲ್ಲಿ ನೇಮಕಾತಿ ಹೊಂದುವಂತಿಲ್ಲ ಎನ್ನುವ ಕೆಪಿಎಸ್ಸಿಯ ಇತ್ತೀಚಿನ ನಿರ್ಧಾರ ಸಾಮಾಜಿಕವಾಗಿ ಪ್ರತಿಗಾಮಿಯಾದಂಥದು ಮಾತ್ರವಲ್ಲ ಸಂವಿಧಾನ ವಿರೋಧಿಯೂ ಸಹ ಆಗಿದೆ. ಮೀಸಲಾತಿಯು ಶೇ.50ನ್ನು ಮೀರಬಾರದು ಎನ್ನುವ ನೀತಿಯೇ ಅಸಂಬದ್ಧವಾಗಿರುವುದು ಒಂದು ಕಡೆಯಾದರೆ ಮೀಸಲಾತಿ ಸೌಲಭ್ಯವನ್ನು ಪಡೆದವರು ಸಾಮಾನ್ಯ ಪ್ರವರ್ಗದಲ್ಲಿ ಗಣನೆಗೇ ಅರ್ಹರಲ್ಲ ಎನ್ನುವುದು ದೊಡ್ಡ ಮೋಸ.

ಕರ್ನಾಟಕ ಲೋಕಸೇವಾ ಆಯೋಗ ಸರ್ಕಾರದ ಅಂಗಸಂಸ್ಥೆ ಮಾತ್ರ. ಅದಕ್ಕೆ ನೀಡಲಾಗಿರುವುದು ಸೀಮಿತ ಸ್ವಾಯತ್ತತೆ ಮಾತ್ರ. ಅದರ ಕೆಲಸವೇನಿದ್ದರೂ ಅನುಷ್ಠಾನಗೊಳಿಸುವುದೇ ಹೊರತು ತಾನೇ ನೀತಿ ನಿರ್ಧಾರ ಮಾಡುವಂತಿಲ್ಲ. ಮೀಸಲಾತಿ ಸೌಲಭ್ಯ ಪಡೆದವರನ್ನು ಸಾಮಾನ್ಯ ಪ್ರವರ್ಗದಲ್ಲಿ ಪರಿಗಣಿಸಲಾಗದು ಎನ್ನುವುದು ಒಂದು ಬಹುಮುಖ್ಯ ನೀತಿ ನಿರ್ಧಾರ. ಸಾಮಾಜಿಕ ಆರ್ಥಿಕ ಆಯಾಮಗಳುಳ್ಳದ್ದು. ಇಂಥ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರಿಗೆ ಕೊಟ್ಟರ‍್ಯಾರು? ವಿಚಿತ್ರವೆಂದರೆ ಕೆಪಿಎಸ್ಸಿಯ ಈ ನಿಲುವಿಗೆ ಸರ್ಕಾರದಿಂದಲೇ ಒಪ್ಪಿಗೆ ಬೆಂಬಲ ಸಿಗುತ್ತಿದೆ ಎನ್ನುವುದು ಬಾಲವೇ ಕುದುರೆಯನ್ನು ಆಡಿಸಿದಂತಾಗಿದೆ. ಸರ್ಕಾರದಲ್ಲಿನ ಕ್ಯಾಬಿನೆಟ್ ಹುದ್ದೆಯ ಮಂತ್ರಿಯಾದ ಪ್ರಿಯಾಂಕಖರ್ಗೆಯವರು ಈ ವಿಷಯದಲ್ಲಿ ಮುಖ್ಯಮಂತ್ರಿಗಳಿಗೆ ತಮ್ಮ ಆಕ್ಷೇಪಣೆಗಳನ್ನೊಳಗೊಂಡ ಪತ್ರವೊಂದನ್ನು ಬರೆದರೆಂದರೆ ಈ ವಿಷಯ ಮಂತ್ರಿ ಮಂಡಲದಲ್ಲಿಯೂ ಚರ್ಚೆಯಾಗಿಲ್ಲ ಎನ್ನುವುದು ಸ್ಪಷ್ಟ. ಮಂತ್ರಿಮಂಡಲದಲ್ಲಿ ಒಪ್ಪಿಗೆ ಇಲ್ಲದೆ ಇಂಥ ನಿರ್ಧಾರವನ್ನು ಸರ್ಕಾರದ ಅಂಗಸಂಸ್ಥೆಯೊಂದು ತೆಗೆದುಕೊಳ್ಳುವ ಧೈರ್ಯ ಮಾಡಿತೆಂದರೆ ರಾಜ್ಯದ ಆಡಳಿತ ಯಾವ ಮಟ್ಟವನ್ನು ಮುಟ್ಟಿದೆ ಎಂಬುದನ್ನು ಊಹಿಸಿಕೊಳ್ಳಬಹುದು.

ಕೆಪಿಎಸ್ಸಿ ಕಾರ್ಯದರ್ಶಿ ಜನ್ನು

ಈ ವಿಷಯವಾಗಿ ಈಗಾಗಲೇ ಹಲವು ದಲಿತ ಸಂಘಟನೆಗಳು ಮತ್ತು ಚಿಂತಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ದಲಿತ ಸಂಘಟನೆಗಳು ಬೆಂಗಳೂರಿನಲ್ಲಿ 19.11.2018ರಂದು ಪ್ರತಿಭಟನೆಯನ್ನು ನಡೆಸಿದ್ದಾರೆ. ತಾವು ಮಾಡುತ್ತಿರುವ ಸಂವಿಧಾನ ವಿರೋಧಿ ಕೆಲಸದ ಪರಿಣಾಮ ಎಂಥದು ಎನ್ನುವ ಕುರಿತು ಉನ್ನತ ಸ್ಥಾನಗಳಲ್ಲಿ ಕುಳಿತಿರುವವರನ್ನು ಈ ಬೆಳವಣಿಗೆಗಳಾದರೂ ಎಚ್ಚರಿಸುತ್ತವೆ. ತಕ್ಷಣವೇ ಲೋಕಸೇವಾ ಆಯೋಗವು ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಮಾತ್ರವಲ್ಲ, ಇಂಥ ಉದ್ಧಟತನದ ನಿರ್ಧಾರವನ್ನು ತಮಗೆ ನೀಡಲಾಗಿರುವ ಯಾವ ಅಧಿಕಾರದ ಭಾಗವಾಗಿ ತೆಗೆದುಕೊಳ್ಳಲಾಯಿತು ಎಂಬುದನ್ನು ಸ್ಪಷ್ಟಪಡಿಸುವಂತೆ ಸರ್ಕಾರವು ಆಯೋಗದ ಅಧ್ಯಕ್ಷರಿಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜೆಡಿಎಸ್ ಜಾತಿವಾದಿ ಎಂಬ ಆಪಾದನೆ ಈಗಾಗಲೇ ಇದೆ. ಕಾಂಗ್ರೆಸ್ಸಿನ ಹಲವರು ನಾಯಕರೂ ಸಹ ಇಂಥ ಆಪಾದನೆಯಿಂದ ಮುಕ್ತವಾಗಿಲ್ಲ. ಕೆಪಿಎಸ್ಸಿಯ ಈಗಿನ ದಲಿತ ವಿರೋಧಿ ನಿರ್ಧಾರ ಸಾಮಾನ್ಯ ವರ್ಗಗಳವರಿಗೆ ಸಂತೋಷವನ್ನು ಉಂಟು ಮಾಡಬಹುದು. ಆದರೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದವರ ದಮನಿತರ ಪ್ರಾತಿನಿಧ್ಯವನ್ನು ಖಾತರಿ ಪಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾಪಿತವಾದ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು. ಈ ಜವಾಬ್ದಾರಿಯನ್ನು ಆಡಳಿತ ನಡೆಸುವವರು ಮರೆತರೆ ಇದೇ ರೀತಿ ಆಗುತ್ತದೆ.

ಈಗ ತುರ್ತಾಗಿ ಇಂಥ ಅಕ್ಷಮ್ಯ ಕ್ರಮಕ್ಕೆ ಮುಂದಾದವರು ಯಾರು ಎಂಬುದು ಜನರಿಗೆ ತಿಳಿಯಬೇಕಾಗಿದೆ. ಕೆಲವು ದಿನಗಳಿಂದ ಸಾರ್ವಜನಿಕವಾಗಿ ಬಿಸಿಬಿಸಿ ಚರ್ಚೆಗೆ ವಸ್ತುವಾಗಿರುವ ಈ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ತುಟಿಬಿಚ್ಚದಿರುವುದು ಏನನ್ನು ಹೇಳುತ್ತದೆ. ದೊಡ್ಡ ಸಂಖ್ಯೆಯಲ್ಲಿರುವ ಕೆಳ ಸಮುದಾಯಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಅಲ್ಪಸಂಖ್ಯಾತರಾದ, ಆದರೆ ಆಯಕಟ್ಟಿನ ಜಾಗಗಳಲ್ಲಿ ಸ್ಥಾಪಿತವಾಗಿರುವ ಮೇಲ್ಜಾತಿ ಮೇಲ್ವರ್ಗದವರು ತೆಗೆದುಕೊಳ್ಳಬಹುದಾದರೆ ಇಲ್ಲಿನ ಪ್ರಜಾತಂತ್ರದ ಭವಿಷ್ಯವೇನು ಎನ್ನುವುದು ಪ್ರಶ್ನೆ.

ಕೇಂದ್ರದಲ್ಲಿ ಬ್ರಾಹ್ಮಣಿಯ ಮೌಲ್ಯಗಳ ಪ್ರತಿನಿಧಿಯಾಗಿರುವ ಬಿಜೆಪಿಯು ವಿಜೃಂಭಿಸುತ್ತಿರುವಾಗ ಕೋಮುವಾದಿಗಳ ವಿರೋಧಿಗಳು ನಾವು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು, ಕೇವಲ ಆಡಳಿತವನ್ನು ಕೈವಶಮಾಡಿಕೊಳ್ಳುವುದು ಮಾತ್ರವಲ್ಲದೇ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಜನಪರ ಧೋರಣೆಯನ್ನು ಸಾಬೀತುಗೊಳಿಸಬೇಕಾಗಿದೆ. ತಾವು ಜನಪರ ಎಂದು ಭಾವಿಸುವುದು ಮಾತ್ರವಲ್ಲ ಜನಪರ ಎಂದು ಬಿಂಬಿಸಿಕೊಳ್ಳುವುದು ಮಾತ್ರವಲ್ಲ, ತಮ್ಮ ಜನಪರತೆಯನ್ನು ಸಾಬೀತುಮಾಡುವ ಜವಾಬ್ದಾರಿಯೂ ಅಧಿಕಾರಸ್ಥರಿಗಿದೆ. ಹಾಗೆ ಮಾಡದಿದ್ದರೆ ಅವರ ಮಾತುಗಳ ಹಾಗೂ ಕೃತ್ಯಕ್ಕೆ ನಡುವಿನ ಅಂತರ ಬಹುಬೇಗನೇ ಜಗಜ್ಜಾಹೀರಾಗುವುದು ಖಂಡಿತಾ.

ಸರ್ಕಾರವು ತನ್ನದೇ ಆದ ಈ ವಿಷಯದಲ್ಲಿ ಕಾರ್ಯಪ್ರವೃತ್ತವಾಗಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲಿ. ಅಲ್ಲದೆ ಈ ಹುನ್ನಾರದ ಹಿಂದಿನ ಕುಟಿಲ ಮನಸ್ಸುಗಳನ್ನೂ ಗುರುತಿಸಿ ಮುಂದೆ ಇನ್ನೆಂದು ಇಂತಹದಕ್ಕೆ ಕೈ ಹಾಕದಂತೆ ಕ್ರಮ ತೆಗೆದುಕೊಂಡರೆ ಮಾತ್ರ ಈಗಾಗಲೇ ಜನರು ಈ ಸರ್ಕಾರದ ವಿರುದ್ಧ ಆಡುತ್ತಿರುವ ಮಾತುಗಳ ಪಟ್ಟಿಗೆ ಮತ್ತೊಂದು ಅಂಥದ್ದೇ ಮಾತು ಸೇರಿಕೊಳ್ಳದಂತೆ ತಡೆಯಬಹುದು. ಹಾಗಾಗಿದ್ದಲ್ಲಿ ಇವರು ರಾಜಕೀಯವನ್ನು ತಂತ್ರಗಾರಿಕೆ, ಕುತಂತ್ರಗಳ ಮಟ್ಟಕ್ಕೆ ಇಳಿಸುವ ಕಾರ್ಯಗಳಿಗೇ ಸೀಮಿತವಾಗಿ ಇತಿಹಾಸದಲ್ಲಿ ದಾಖಲೆಯೊಂದಿಗೆ ಉಳಿದು ಬಿಡುತ್ತಾರೆ. ಆಯ್ಕೆ ಸರ್ಕಾರಕ್ಕೆ ಬಿಟ್ಟಿದ್ದು ಒಂದಂತೂ ಗ್ಯಾರಂಟಿ ಈ ಅನಾಹುತವನ್ನು ಸರಿಪಡಿಸದಿದ್ದಲ್ಲಿ ದಲಿತರ ಹಿಂದುಳಿದವರ ವಿರೋಧ, ಆಸಂತೋಷಗಳನ್ನು ಎದುರಿಸಲು ಬದ್ಧವಾಗಬೇಕು. ಹಾಗೆ ಮಾಡುವುದು ಸರ್ಕಾರಕ್ಕೆ ಒಳ್ಳೆಯದಂತೂ ಆಗುವುದಿಲ್ಲ.

ಶೇ.93 ಜನಕ್ಕೆ ಶೇ.50 ಮೀಸಲಾತಿ. ಶೇ.7 ಜನಕ್ಕೆ ಶೇ.50 ಮೀಸಲಾತಿ

ಸುಪ್ರೀಂಕೋರ್ಟ್ ಒಟ್ಟಾರೆ ಮೀಸಲಾತಿ ಶೇ.50ನ್ನು ಮೀರಬಾರದೆಂದು ಹೇಳಿದೆ. ಅದು ಪ್ರಾತಿನಿಧ್ಯದಲ್ಲಿ ಮೀಸಲಾತಿಯನ್ನು ಸಾಮಾಜಿಕ ನ್ಯಾಯಕ್ಕೆ ತಕ್ಕಂತೆ ಅಳವಡಿಸಲು ದೊಡ್ಡ ಅಡ್ಡಿಯಾಗಿದೆ. ಇದೀಗ ಹೈಕೋರ್ಟ್ ಆದೇಶವು ನಿರ್ದಿಷ್ಟ ಪ್ರಕರಣದಲ್ಲಿ ಹೇಳಿರುವಂತೆ, ಮೀಸಲಾತಿಯನ್ನು ಪಡೆದುಕೊಳ್ಳುವ ಜಾತಿಗಳಿಗೆ ಸೇರಿದವರು ಹೆಚ್ಚಿನ ಅಂಕಗಳನ್ನು ಪಡೆದುಕೊಂಡರೂ ಅವರು ಜಾತಿಯೊಳಗೇ ಸೀಟು ಪಡೆದುಕೊಳ್ಳಬೇಕು ಎಂದು ಎಲ್ಲೆಡೆ ವಿಸ್ತರಿಸಿದರೆ ಏನಾಗುತ್ತದೆ? ಕರ್ನಾಟಕದಲ್ಲಿ ನೇರ ಮೀಸಲಾತಿಯನ್ನು ಪಡೆದುಕೊಳ್ಳುತ್ತಿರುವ ಸಮುದಾಯಗಳ ಒಟ್ಟು ಜನಸಂಖ್ಯೆ ಶೇ.93. ಅವರೆಲ್ಲರಿಗೆ ಸೇರಿ ಕೇವಲ ಶೇ.50ರಷ್ಟು ಪ್ರಾತಿನಿಧ್ಯ ಸಿಗುತ್ತದೆ. ಉಳಿದ ಶೇ.7ರಷ್ಟು ಸಮುದಾಯಗಳಿಗೆ ಶೇ.50ರಷ್ಟು ಮೀಸಲಾಗುತ್ತದೆ.

ಒಂದರ್ಥದಲ್ಲಿ ಇದು ಈ ದೇಶದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದದ್ದರ ಪುನರಾವರ್ತನೆ. ಅಂದರೆ ಮೇಲ್ಜಾತಿಗಳು ಅದರಲ್ಲೂ ಬ್ರಾಹ್ಮಣ ಸಮುದಾಯಗಳಿಗೆ ಸೇರಿದವರು ಎಲ್ಲೆಡೆ ಜನಸಂಖ್ಯೆಗೆ ಮೀರಿ, 10 ಪಟ್ಟಿಗೂ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿದ್ದರು. ಅದೂ ಒಂದು ರೀತಿಯ ಮೀಸಲಾತಿಯೇ ಆಗಿತ್ತು. ಕೆಲವು ಸಮುದಾಯಗಳಿಗೆ ಕೆಲವು ರೀತಿಯ ಕೆಲಸ ಮೀಸಲು ಎಂಬಂತೆ.

ಇಂದು ಇನ್ನೊಂದು ರೀತಿಯಲ್ಲಿ ಅದನ್ನೇ ಈ ಕ್ರಮವೂ ಜಾರಿ ಮಾಡುತ್ತಿದೆ. ಅತ್ಯಂತ ಅಪಾಯಕಾರಿಯಾದ ಕ್ರಮ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...