Homeಅಂಕಣಗಳುಗಂಗೆ ತೊಳೆಯಬಲ್ಲಳೇ ಈ ಪಾಪವನ್ನು?

ಗಂಗೆ ತೊಳೆಯಬಲ್ಲಳೇ ಈ ಪಾಪವನ್ನು?

- Advertisement -
- Advertisement -

ಇವರ್ಯಾರೂ ರಾಜಕಾರಣಿಗಳಲ್ಲ. ಯಾವೊಂದು ಪಕ್ಷದ ಪರ ಅಥವಾ ವಿರುದ್ಧವಾಗಿ ಅವರು ಇಲ್ಲ. ಕೇಂದ್ರದಲ್ಲಿ ಸಂಯುಕ್ತರಂಗದ ಸರ್ಕಾರವಿದ್ದಾಗ, 1998ರಲ್ಲಿ ಗಂಗಾನದಿಯನ್ನು ಉಳಿಸಿಕೊಳ್ಳುವ ಅವರ ಆಂದೋಲನ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಉತ್ತರಾಖಂಡದಲ್ಲಿ 3 ಸಾರಿ ಆಡಳಿತ ಪಕ್ಷಗಳು ಬದಲಾಗಿವೆ; ಕೇಂದ್ರದಲ್ಲೂ ಬದಲಾಗಿವೆ. ಇವರ ಹೋರಾಟ ನಿರಂತರವಾಗಿ ಮುಂದುವರೆದಿದೆ. ಗಂಗೆಯ ಮಾಲಿನ್ಯವನ್ನು ತೊಳೆಯಬೇಕೆಂಬುದು ಅವರಿಗೆ ಆಧ್ಯಾತ್ಮಿಕ ಸಂಗತಿಯಾಗಿತ್ತು. ಮಾಲಿನ್ಯಕ್ಕಿಂತ ಅವರು ವಿರೋಧಿಸಿದ್ದು, ಗಂಗೆಯ ಹರಿವನ್ನು ನಿರ್ಬಂಧಿಸುವ ಅಣೆಕಟ್ಟುಗಳ ನಿರ್ಮಾಣವನ್ನು. ಗಂಗಾನದಿ ಉಗಮ ಸ್ಥಾನದಿಂದ ಕನಿಷ್ಠ 125 ಕಿ.ಮೀ.ಗಳಷ್ಟು ಉದ್ದದ ಭಾಗದಲ್ಲಾದರೂ ಜಲವಿದ್ಯುತ್ ಸ್ಥಾವರ ನಿಲ್ಲಿಸಿ ಎಂದು ಕೇಳಿದರು. ಗಂಗಾನದಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಬೇಕೆಂದು ಪದೇ ಪದೇ ಮನವಿ ಸಲ್ಲಿಸಿದರು. ಕೋರ್ಟುಗಳ ಮೊರೆ ಹೊಕ್ಕರು. ಅಂತಿಮವಾಗಿ ಉಪವಾಸ ಸತ್ಯಾಗ್ರಹವನ್ನು ತಮ್ಮ ಹೋರಾಟದ ಮಾರ್ಗವಾಗಿಸಿಕೊಂಡರು.
ಉಪವಾಸ ಮಾಡುತ್ತಲೇ ತೀರಿ ಹೋದವರಲ್ಲಿ ಮೂರು ದಿನದ ಕೆಳಗೆ ಇಲ್ಲವಾದ ಸಂತ ಸ್ವಾಮಿ ಗ್ಯಾನ್ ಸ್ವರೂಪ್ ಆನಂದ್ ಮೂರನೆಯವರು. ಇದಕ್ಕೆ ಹಿಂದೆ ಸ್ವಾಮಿ ನಿಗಮಾನಂದ್ ಮತ್ತು ಸ್ವಾಮಿ ಗೋಕುಲಾನಂದರು ಸಹಾ ಉಪವಾಸನಿರತರಾಗಿದ್ದಾಗಲೇ ಮರಣ ಹೊಂದಿದ್ದರು. ಸ್ವಾಮಿ ನಿಗಮಾನಂದ್ ಕೋಮಾದಲ್ಲಿದ್ದಾಗ, ಹೈಕೋರ್ಟು ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸಲು ಆದೇಶ ಹೊರಡಿಸಿತು. ಒಂದಲ್ಲಾ, ಎರಡಲ್ಲಾ ಹಲವು ಗೆಲುವುಗಳನ್ನು ಈ ಸಂತರು ಸಾಧಿಸಿದ್ದಾರೆ. ಆ ಅರ್ಥದಲ್ಲಿ ಇವರದ್ದು ಫಲವಿಲ್ಲದ ಹೋರಾಟವೂ ಅಲ್ಲ.
ಗಂಗೆಯ ಪಾವಿತ್ರ್ಯದ ಕಲ್ಪನೆ ಇಟ್ಟುಕೊಂಡು ವಾರಣಾಸಿ (ಕಾಶಿ)ಗೆ ಹೋದವರಿಗೆ ಅದರ ಕೊಳಕು ಗಾಬರಿ ಹುಟ್ಟಿಸುತ್ತದೆ; ‘ಹಿಂದುಗಳಿಗೆ ಪವಿತ್ರ’ವೆಂದು ಹೇಳಲಾಗುವ ಈ ನದಿಯ ಸ್ವಚ್ಛತೆಗೆ ಯಾರೂ ಏನೂ ಮಾಡುತ್ತಲೇ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಸಿನಿಕರೂ, ಧಾರ್ಮಿಕ ಢಾಂಬಿಕತೆಯ ಕುರಿತು ತಿರಸ್ಕಾರ ಹೊಂದಿರುವವರು ‘ಶ್ರದ್ಧಾವಂತ ಹಿಂದೂ ಧಾರ್ಮಿಕ’ ವ್ಯಕ್ತಿಗಳನ್ನು ಆಡಿಕೊಳ್ಳುತ್ತಾರೆ. ಆದರೆ, ‘ಧಾರ್ಮಿಕ ನೆಲೆ’ಯಲ್ಲಿ ಈ ಕುರಿತು ಕೆಲಸ ಮಾಡುತ್ತಿರುವ ಎರಡು ಬಗೆಯ ಜನರಿದ್ದಾರೆ. ಒಂದು, ಉತ್ತರಾಖಂಡದ ವಿವಿಧ ಹಿಂದೂ ಸಂತರು ಮತ್ತು ಅವರ ಅನುಯಾಯಿಗಳು. ಇವರಿಗೆ ಇದು ಗಂಗಾ ತಪಸ್ಯಾ. ಎರಡು, ‘ತಾಯಿ ಗಂಗೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಹೇಳಿ ವಾರಣಾಸಿಯಲ್ಲಿ ರಾಜಕಾರಣ ಮಾಡಲು ಹೋದ ‘ಹಿಂದುತ್ವ’ವಾದಿಗಳು. ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದ ನಿಜಸಂತರಿಗೂ, ಈ ವಾದಿಗಳಿಗೂ ಈಗ ವೈರುಧ್ಯ ಏರ್ಪಟ್ಟಿರುವುದು ಆಶ್ಚರ್ಯವೇನಲ್ಲ.
ವಾರಣಾಸಿಯ ಲೋಕಸಭಾ ಸದಸ್ಯರೂ ಆದ ಪ್ರಧಾನಮಂತ್ರಿಗಳಿಗೆ ಸಂತ ಗ್ಯಾನ್ ಆನಂದರು ಈ ವರ್ಷದಲ್ಲಿ ಎರಡು ಬಾರಿ ಪತ್ರ ಬರೆದಿದ್ದರು. ‘ನೀವು ಗಂಗಾಜೀ (ಗಂಗೆಯನ್ನು ಅವರು ಬೇರೆ ರೀತಿಯಲ್ಲಿ ಸಂಬೋಧಿಸುತ್ತಿರಲಿಲ್ಲ) ಕುರಿತು ಆಸಕ್ತಿ ತೋರಿ, ಅದಕ್ಕೆಂದೇ ಒಂದು ಇಲಾಖೆಯನ್ನು ಸೃಷ್ಟಿಸಿದಾಗ ನಾನು ಬಹಳ ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ. ದೊಡ್ಡ ಮೊತ್ತದ ಹಣ ಇದಕ್ಕಾಗಿ ಕಾದಿರಿಸಿದಿರಿ. ಆದರೆ, ಈ ಕುರಿತು ನೀವು ಮಾಡಿದ್ದೆಲ್ಲವೂ ಕಾರ್ಪೊರೇಟ್ ಕಂಪೆನಿಗಳ ಹಿತಕ್ಕಾಗಿ ಎಂದು ಕಂಡುಕೊಂಡಿದ್ದೇನೆ.’ ಸೂಕ್ತ ಕ್ರಮಗಳಿಗೆ ಮುಂದಾಗದಿದ್ದಲ್ಲಿ ‘ಗಂಗಾ ದಸರಾ’ದ ಆರಂಭದ ದಿನದಿಂದ ತಾನು ಉಪವಾಸ ಆರಂಭಿಸುವುದಾಗಿ ಸಂತ ಆನಂದರು ತಿಳಿಸಿದ್ದರು. ಅದರಂತೆ ಜೂನ್ 22ರಂದು ಹರಿದ್ವಾರದಲ್ಲಿ ಶುರುವಾದ ಉಪವಾಸ ಅಂತ್ಯಗೊಂಡಿದ್ದು, 111 ದಿನಗಳ ನಂತರ ಅವರ ಮರಣದೊಂದಿಗೆ. ನವರಾತ್ರಿ ಶುರುವಾಗುವ ದಿನದಿಂದ ತಾನು ನೀರನ್ನೂ ನಿಲ್ಲಿಸುತ್ತೇನೆಂದು ಹೇಳಿದ್ದವರು ಅದೇ ರೀತಿ ನಡೆದುಕೊಂಡಿದ್ದಾರೆ.
ಸಾವಿನ ಹಿಂದಿನ ದಿನವೂ ಸ್ಪಷ್ಟವಾಗಿ, ನಿಷ್ಠುರವಾಗಿ ಮಾತನಾಡಿದ್ದಾರೆ. ಕಾನೂನುಪ್ರಕಾರ ತನ್ನ ಒಪ್ಪಿಗೆಯಿಲ್ಲದೇ ಚಿಕಿತ್ಸೆ ಕೊಡುವ ಹಕ್ಕು ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಸಾವಿನ ದಿನ ಬೆಳಿಗ್ಗೆ ಒಂದು ಪತ್ರವನ್ನು ಬರೆದು ಪತ್ರಿಕೆಗಳಿಗೆ ಬಿಡುಗಡೆ ಮಾಡಲು ಹೇಳಿದ್ದಾರೆ. ತನ್ನ ಆಧ್ಯಾತ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಗೆ ತನ್ನ ಆರೋಗ್ಯ ಸ್ಥಿತಿ ಚೆನ್ನಾಗಿರುವುದರ ಕುರಿತು ಪತ್ರ ಬರೆದಿದ್ದಾರೆ. ಹೀಗಾಗಿಯೇ ಅವರ ಗುರು ಇದನ್ನೊಂದು ಕೊಲೆಯೆಂದು ಕರೆದು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ತಮಗೆ ತಿಳಿದಿರಲಿ, ಈ ಹಿಂದೆ 68 ದಿನಗಳ ಉಪವಾಸದ ನಂತರ ತೀರಿಕೊಂಡ ಸ್ವಾಮಿ ನಿಗಮಾನಂದರ ಮರಣದ ತನಿಖೆಯನ್ನೂ ಸಿಬಿಐ ನಡೆಸುತ್ತಿದೆ. ಬಲವಂತವಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದ ಅವರ ಮರಣಾನಂತರದ ದೇಹಸ್ಥಿತಿಯನ್ನು ನೋಡಿ ಅನುಯಾಯಿಗಳು ದನಿಯೆತ್ತಿದ್ದರು. ವೈದ್ಯಕೀಯ ವರದಿ ಪ್ರಕಾರ ಅವರ ದೇಹದಲ್ಲಿ ಆರ್ಗನೋಫಾಸ್ಫೇಟ್ ವಿಷವಿತ್ತು. 2003ರಲ್ಲಿ ಅದೇ ಆಶ್ರಮದ ಇನ್ನೊಬ್ಬ ಸ್ವಾಮಿ ಗೋಕುಲಾನಂದರಿಗೆ ಸ್ಕೋಲೀನ್ ಎಂಬ ಇಂಜೆಕ್ಷನ್ ಕೊಟ್ಟು ಕೊಲ್ಲಲಾಯಿತು ಎಂದು ಹೇಳಲಾಗುತ್ತಿದೆ.
ಆಶ್ಚರ್ಯವೆನಿಸಬಹುದು, ಆದರೆ ನಿಜ. ಇದೇ ದೇಶದಲ್ಲಿ ‘ಹಿಂದೂ ಸಂತ’ರು ಕಾರ್ಪೋರೇಟ್ ಸಂಸ್ಥೆಗಳು ಮತ್ತು ಮೈನಿಂಗ್ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಇಂತಹ ಆಂದೋಲನವನ್ನು 2 ದಶಕಗಳಿಂದ ನಡೆಸುತ್ತಿದ್ದಾರೆ. 2003ರಲ್ಲಿ ತೀರಿಹೋದ (?ಕೊಲ್ಲಲ್ಪಟ್ಟ) ಸ್ವಾಮಿ ಗೋಕುಲಾನಂದರು ನೈನಿತಾಲ್ ಅರಣ್ಯದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದರು.
ಇನ್ನೊಬ್ಬ ಸಂತ ಶಿವಾನಂದರೂ 2011ರ ಹೊತ್ತಿಗೇ ಸುಮಾರು ಆರು ದೀರ್ಘ ಉಪವಾಸಗಳನ್ನು ನಡೆಸಿದ್ದರು. ಅವರ ವೈಶಿಷ್ಟ್ಯವೆಂದರೆ, ಅವರು ಉಪವಾಸ ತಡೆಯಲು ಬರುವವರ ಕೈಗೆ ಸಿಗದಂತಿರಲು ತಮ್ಮ ಆಶ್ರಮದ ಸುತ್ತ ಭದ್ರ ಮಾಡಿಕೊಂಡು, ಒಳಗಿನಿಂದ ಬೀಗ ಹಾಕಿ ಉಪವಾಸ ಕೂರುತ್ತಾರೆ. ಸರ್ಕಾರದ ವತಿಯಿಂದ ಗಣಿಗಾರಿಕೆ ನಿಲ್ಲಿಸುವ ಆದೇಶವನ್ನು ಅವರ ಆಶ್ರಮದ ಬಾಗಿಲಿಗೆ ಅಂಟಿಸಿ, ಭಕ್ತರು ಅದನ್ನು ಶಿವಾನಂದರಿಗೆ ತಲುಪಿಸಿ ಅವರು ಓದಿದ ನಂತರವೇ ಬಾಗಿಲು ತೆಗೆದು ಸತ್ಯಾಗ್ರಹ ನಿಲ್ಲಿಸುತ್ತಾರೆ.
ಹಿಮಾಲಯದ ತಪ್ಪಲಲ್ಲಿ, ಗಂಗೆಯಂತಹ ಜೀವನದಿಗಳು ಹರಿಯುವ ಪ್ರದೇಶದಲ್ಲೂ ಅಂತರ್ಜಲದ ಮಟ್ಟ ಕುಸಿದಿದ್ದು, 10 ಲಕ್ಷ ಎಕರೆಗಳಿಗೂ ಹೆಚ್ಚು ಪ್ರದೇಶ ಬಂಜರಾಗಿರಲು ಮರಳು ಮತ್ತು ಕಲ್ಲು ಗಣಿಗಾರಿಕೆಯೇ ಕಾರಣವೆಂದು ಉತ್ತರಾಖಂಡದ ಹೈಕೋರ್ಟ್ ಹೇಳಿದೆ. ಬಹುಶಃ ಈಗ ನಿಮಗೆ ಬಲಪಂಥೀಯರು ಉತ್ತರಾಂಚಲವೆಂದು (ಅದು ‘ದೇವರಿರುವ ಜಾಗ’ವೆನ್ನುವ ಕಾರಣಕ್ಕೆ) ಕರೆಯಬಯಸುವ ಉತ್ತರಾಖಂಡ ರಾಜ್ಯದಲ್ಲಿ ಭೂಮಿ, ನೀರು ಮತ್ತು ಅರಣ್ಯ ಲೂಟಿಯ ಪ್ರಮಾಣ ಹಾಗೂ ಅದರ ಹಿಂದಿನ ಕಾರ್ಪೋರೇಟ್ ಮಾಫಿಯಾ ಅರ್ಥವಾಗುತ್ತಿರಬಹುದು.
ಇದೊಂದು ಉದಾಹರಣೆ ಹೇಳಿದರೆ ಆ ಲಾಬಿಯ ಕಾರ್ಯವಿಧಾನದ ಕುರಿತು ಅರಿವಾಗಬಹುದು. ಮರಳು ಲೂಟಿಯ ವಿರುದ್ಧ ಒಮ್ಮೆ 20 ವರ್ಷದ ಸ್ವಾಮಿ ಯಜ್ಞಾನಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಆತನ ಆರೋಗ್ಯ ವಿಚಾರಿಸುವ ನೆಪದಲ್ಲಿ ಸ್ಥಳೀಯ ಅಧಿಕಾರಿಗಳು ಬಂದರು. ಅವರು ಮಾತನಾಡಿಸುವ ನಾಟಕ ಮಾಡುತ್ತಿದ್ದಾಗಲೇ, ಅವರ ಹಿಂದೆಯೇ ಬಂದಿದ್ದ ಮುಸುಕುಧಾರಿಗಳು ಆತನನ್ನು ಹೊತ್ತೊಯ್ದರು. ನಂತರ ಆ ಮುಸುಕುಧಾರಿಗಳನ್ನು ಪೊಲೀಸರೆಂದು ಹೇಳಲಾಯಿತು. ಯಜ್ಞಾನಂದರನ್ನು 2 ತಿಂಗಳ ಕಾಲ ಜೈಲಿನಲ್ಲಿಡಲಾಗಿತ್ತು. ಈ ಬಂಧನ ಅಕ್ರಮವೆಂದು ನ್ಯಾಯಾಲಯವು ಹೇಳಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಗಂಗೆಯನ್ನು ಉಳಿಸಿಕೊಳ್ಳುವ ಆಂದೋಲನವು ಅಹಿಂಸಾತ್ಮಕವಾಗಿ ಈ ಪ್ರಮಾಣಕ್ಕೆ ನಡೆದ ಇಷ್ಟೆಲ್ಲಾ ಇತಿಹಾಸ ಇರುವುದರಿಂದಲೇ, ವಾರಣಾಸಿಯ ಸಂಸದರೂ ಸಹಾ ತಮ್ಮ ವಿರುದ್ಧವೇ ಉಪವಾಸ ನಡೆಸುತ್ತಿದ್ದ ಸಂತರೊಬ್ಬರು ತೀರಿಕೊಂಡಾಗ ಸಂತಾಪಸೂಚಕ ಟ್ವೀಟ್ ಮಾಡಬೇಕಾಯಿತು. ಆದರೆ, ಈ ಸಂತಾಪ ಸಂದೇಶದಿಂದ ಅವರ ಪಾಪ ತೊಳೆದು ಹೋಗುವುದು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಅಥವಾ ಇನ್ನಾವುದೋ ಬಾಹ್ಯ ಶಕ್ತಿಯ ಚಿತಾವಣೆಯಿಂದ ನಡೆದ ಹೋರಾಟವೆಂದು ತಳ್ಳಿಹಾಕುವುದು ಸಾಧ್ಯವಿಲ್ಲ. ಸಂತ ಸ್ವಾಮಿ ಗ್ಯಾನ್ ಸ್ವರೂಪ್ ಆನಂದರ ಸಾವು ವಾರಣಾಸಿಯ ಸಂಸದರನ್ನು ಮಾತ್ರವಲ್ಲದೇ, ದೇಶದ ಜನರೆಲ್ಲರನ್ನೂ ಕಾಡುತ್ತದೆ.
ಜುಲೈ 2011ರಲ್ಲಿ ಈ ಹೆಸರು ಪಡೆದುಕೊಂಡು ಸನ್ಯಾಸಿಯಾಗುವ ಮುಂಚೆ ಅವರು ಪ್ರೊ.ಜಿ.ಡಿ.ಅಗರ್‍ವಾಲ್. ಮುಜಫ್ಪರ್‍ನಗರದ ಬಳಿಯ ರೈತ ಕುಟುಂಬವೊಂದರ ಹಿನ್ನೆಲೆಯ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಪಿಎಚ್‍ಡಿ ಪಡೆದಿದ್ದರು. ಐಐಟಿ ಕಾನ್‍ಪುರದಲ್ಲಿ ಸಿವಿಲ್ ಮತ್ತು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದುದಲ್ಲದೇ, 1979-80ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಐಐಟಿ ಕಾನ್‍ಪುರದ ತನ್ನ ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಕಂಪೆನಿ director of Envirotech Instruments (P) Limited, New Delhi ಯ ನಿರ್ದೇಶಕರಾಗಿದ್ದರು. ನವದೆಹಲಿಯ ಪ್ರಸಿದ್ಧ ವಿಜ್ಞಾನ ಮತ್ತು ಪರಿಸರ ಸಂಸ್ಥೆಯ ಸ್ಥಾಪಕ ಅನಿಲ್ ಅಗರ್‍ವಾಲ್ ಇವರ ವಿದ್ಯಾರ್ಥಿ. ಇಂತಹ ಹಿನ್ನೆಲೆಯ ಪ್ರೊ.ಜಿ.ಡಿ.ಅಗರ್‍ವಾಲ್ ‘ಶ್ರದ್ಧಾವಂತ ಹಿಂದೂ’ ಆಗಿದ್ದರು. ಪರಿಸರ ಮತ್ತು ಗಂಗಾಜೀ ಅವರಿಗೆ ವಿಜ್ಞಾನವೂ ಆಗಿತ್ತು, ಆಧ್ಯಾತ್ಮವೂ ಆಗಿತ್ತು.
ಭಾಗೀರಥಿಗೆ ಅಣೆಕಟ್ಟು ಕಟ್ಟಿ ಲೊಹಾರಿನಾಗ್ ಪಾಲಾ ಜಲವಿದ್ಯುತ್ ಯೋಜನೆ ಮಾಡುವುದರ ವಿರುದ್ಧ 2009ರಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸರ್ಕಾರವು ಅದನ್ನು ಹಿಂತೆಗೆದುಕೊಳ್ಳುವ ಘೋಷಣೆ ಮಾಡುವ ಹೊತ್ತಿಗೆ ಉಪವಾಸವು 38ನೇ ದಿನ ತಲುಪಿ ಅಗರ್‍ವಾಲ್ ಸಾವಿನಂಚಿಗೆ ಸರಿದಿದ್ದರು. ಇವರ ಇನ್ನೊಂದು ಉಪವಾಸವನ್ನು ಬೆಂಬಲಿಸಿ, ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರದೇಶ ಪ್ರಾಧಿಕಾರದ ಸದಸ್ಯರಾದ ರಾಜೇಂದ್ರ ಸಿಂಗ್, ರವಿ ಚೋಪ್ರಾ, ಹಯಾತ್ ಸಿದ್ದಿಖಿ ಇವರುಗಳು 2012ರ ಮಾರ್ಚ್‍ನಲ್ಲಿ ರಾಜೀನಾಮೆ ನೀಡಿದ್ದರು.
ಪರಿಸರ ನಾಶ ಮತ್ತು ಲಾಬಿಗಳ ಜೊತೆ ಕೈ ಜೋಡಿಸುವುದರಲ್ಲಿ ಯಾವ ಪಕ್ಷಗಳೂ ಸಾಚಾ ಅಲ್ಲ. ಆದರೆ, ಗಂಗೆ ಕುರಿತಾದ ಧಾರ್ಮಿಕ ಭಾವನೆಗಳನ್ನು ಉದ್ದೀಪಿಸಿ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ ಪಕ್ಷದ ಟ್ರ್ಯಾಕ್ ರೆಕಾರ್ಡ್ ಮಿಕ್ಕೆಲ್ಲರಿಗಿಂತ ಕೆಟ್ಟದಾಗಿದೆ. ಗಂಗೆಗೆ ನಿಷ್ಠರಾದ ಹಿಂದೂ ಸಂತರ ವಿಚಾರದಲ್ಲೂ ಮಿಕ್ಕೆಲ್ಲರಿಗಿಂತ ಕೆಟ್ಟದಾಗಿ ನಡೆದುಕೊಂಡಿರುವುದು ಅದೇ ಪಕ್ಷ. 2013ರವರೆಗೆ ಗಂಗೆಯ ಹೆಸರಿನಲ್ಲಿ ಖರ್ಚಾದ ಹಣ ಒಂದು ಕಾರ್ಗಿಲ್ ಯುದ್ಧಕ್ಕೆ ಆದ ಖರ್ಚಿನಷ್ಟಾದರೆ, ಈ ಒಂದು ಸರ್ಕಾರದ ಅವಧಿಯಲ್ಲಿ ಮತ್ತೆ ಅಷ್ಟು ಹಣ ಮಂಜೂರಾಗಿದೆ ಮತ್ತು ಆಗಲೇ ಮುಕ್ಕಾಲು ಭಾಗ ಖರ್ಚಾಗಿದೆ. ಆದರೆ, ತೀರಿಕೊಳ್ಳುವ ಮುಂಚೆ ಸಂತ ಗ್ಯಾನ್ ಆನಂದರು ಹೇಳಿರುವಂತೆ ಇದು ಕಾರ್ಪೋರೇಟ್‍ಗಳ ಜೇಬಿಗೆ ಹೋಗಿದೆ.
ಹಾಗಾದರೆ, ಮಾ ಗಂಗಾ, ನಮಾಮಿ ಗಂಗೆ, ಗಂಗಾರತಿ, ಪವಿತ್ರ ಗಂಗೆ ಈ ಮಾತುಗಳಿಗೆಲ್ಲಾ ಏನು ಅರ್ಥ? ನಿಜವಾದ ಸಂತರು ಮಾತ್ರವೇ ತೋರಬಹುದಾದ ಧೈರ್ಯ, ಬದ್ಧತೆಯನ್ನು ತೋರುತ್ತಾ ಗಂಗಾ ತಪಸ್ಸಿನಲ್ಲಿ ನಿರತರಾಗಿರುವವರ ಮಾತನ್ನು ಕೇಳಿಸಿಕೊಳ್ಳಲಾಗದಷ್ಟು ನಮ್ಮ ಸರ್ಕಾರಗಳು ಮತಿಗೆಟ್ಟಿವೆಯೇ? ಈ ಪಾಪವನ್ನು ಗಂಗೆ ತೊಳೆಯಲಾದೀತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...