Homeರಾಜಕೀಯಅನಿತಾ ಪಟ್ಟಾಭಿಷೇಕ?

ಅನಿತಾ ಪಟ್ಟಾಭಿಷೇಕ?

- Advertisement -
- Advertisement -

1994ರಲ್ಲಿ ದೇವೇಗೌಡರು ರಾಮನಗರದಿಂದ ಸ್ಪರ್ಧಿಸುವ ತೀರ್ಮಾನ ಮಾಡುವುದಕ್ಕೆ ಮೂರು ಕಾರಣಗಳಿದ್ದವು. ರಾಮನಗರದಿಂದ ಗೆದ್ದ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದರಿಂದ, ಆ ಸಾರಿ ಮುಖ್ಯಮಂತ್ರಿಯಾಗಲು ಆ ಅದೃಷ್ಟ ಕೆಲಸ ಮಾಡುತ್ತದೆಂಬ ನಂಬಿಕೆ. (ಅದೇ ರಾಮನಗರದಿಂದ ಗೆದ್ದ ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿಯಾಗಿದ್ದರಿಂದ ಈ ನಂಬಿಕೆ ಇನ್ನಷ್ಟು ಗಟ್ಟಿಯಾಗಿರಲೂಬಹುದು). ಹೊಳೆನರಸೀಪುರದಲ್ಲಿ ಗೆಲ್ಲುವ ಸಾಧ್ಯತೆ ಇದ್ದರೂ, ಅದನ್ನು ಮಗ ರೇವಣ್ಣರಿಗೆ ಬಿಟ್ಟುಕೊಟ್ಟರೆ, ಪಕ್ಷಕ್ಕೆ ಒಂದು ಸೀಟು ಹೆಚ್ಚಾಗುತ್ತದೆ ಮತ್ತು ರಾಜಕೀಯ ಉತ್ತರಾಧಿಕಾರಿಯನ್ನು ಕುಟುಂಬದೊಳಗೇ ಹುಡುಕಿಕೊಳ್ಳುವುದು ಸಾಧ್ಯವಾಗುತ್ತದೆ. ಮೂರನೆಯದಾಗಿ, ರಾಮನಗರ ಅವರಿಗೆ ಹೊಸದಾಗಿರಲಿಲ್ಲ. ಅಂದಿನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರದ ಪಕ್ಕದ ಸಾತನೂರಿನಲ್ಲಿ ಆಗಲೇ ಒಂದು ಬಾರಿ ಡಿ.ಕೆ.ಶಿವಕುಮಾರ್‍ರನ್ನು 1985ರಲ್ಲಿ ಸೋಲಿಸಿದ್ದರು. ಅದೇ ವರ್ಷ ಹೊಳೆನರಸೀಪುರದಲ್ಲೂ ಗೆದ್ದುದರಿಂದ ಸಾತನೂರನ್ನು ಬಿಟ್ಟುಕೊಟ್ಟಿದ್ದರು. ಆದರೆ, 1989ರಲ್ಲಿ ತಮ್ಮದೇ ಸಮಾಜವಾದಿ ಜನತಾಪಕ್ಷದಿಂದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದರು. ಈ ಸೋಲು ಗೆಲುವುಗಳ ಮಧ್ಯೆ ಆ ಭಾಗದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿತ್ತು.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಒಬ್ಬ ದೊಡ್ಡ ನಾಯಕ ತನ್ನ ಕ್ಷೇತ್ರದಿಂದಾಚೆ ಬೇರೆ ಕಡೆಯೂ ಗೆಲ್ಲಲು ಸಾಧ್ಯವಾಗುವುದು ಅವರ ಹೆಗ್ಗಳಿಕೆಯೇ. ಆದರೆ, ಇಲ್ಲಿಂದಾಚೆಗೆ ಈ ಭಾಗದ ಪಾರುಪತ್ಯಕ್ಕೆ ಡಿ.ಕೆ.ಶಿವಕುಮಾರ್ ಜೊತೆ ಸತತವಾದ ಜಿದ್ದಾಜಿದ್ದಿ ನಡೆದೇ ಇದೆ. ಆ ಜಿದ್ದಾಜಿದ್ದಿಯಲ್ಲಿ ಗೌಡರು ಆರಿಸಿಕೊಂಡಿರುವುದು ತಮ್ಮ ಕುಟುಂಬದ ಹುರಿಯಾಳುಗಳನ್ನೇ.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಕನಕಪುರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಆಗಿನ್ನೂ ರಾಜಕಾರಣಕ್ಕೆ ಹೊಸಬರಾಗಿದ್ದ ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿಯವರನ್ನು. ಜನತಾದಳದಿಂದ ಕರ್ನಾಟಕದಲ್ಲಿ 16 ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡಿದ್ದು, ಕೇಂದ್ರದಲ್ಲಿ ಬೇರೆ ಆಯ್ಕೆ ಇಲ್ಲದ್ದು ಎಲ್ಲವೂ ಸೇರಿ, ಸಾಂದರ್ಭಿಕ ಶಿಶುವಾಗಿ ಪ್ರಧಾನಿ ಪಟ್ಟಕ್ಕೇರಿದರು. ಅವರು ರಾಜೀನಾಮೆ ಕೊಟ್ಟ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದಿಂದ ಚಿತ್ರನಟ ಅಂಬರೀಷ್‍ರನ್ನು ಕಣಕ್ಕಿಳಿಸಿದರಾದರೂ, ಅವರು ಸಿ.ಎಂ.ಲಿಂಗಪ್ಪರ ಎದುರು ಸೋತರು.
ಅದರ ಮುಂದಿನ ಚುನಾವಣೆಯಲ್ಲಿ ವಿಭಜಿತವಾಗಿದ್ದ ಜನತಾದಳದ ‘ಜಾತ್ಯತೀತ’ ಬಣದಿಂದ ಡಿಕೆಶಿ ವಿರುದ್ಧ ಸಾತನೂರು ಕ್ಷೇತ್ರದಲ್ಲಿ ಸೋತರಷ್ಟೇ ಅಲ್ಲದೇ, ಕನಕಪುರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಠೇವಣಿ ಸಹ ಕಳೆದುಕೊಂಡರು. ಮಗ ಕುಮಾರಸ್ವಾಮಿಯನ್ನು ಈ ಪರಿ ಸೋಲಿಸಿದ್ದ ಎಂ.ವಿ. ಚಂದ್ರಶೇಖರ ಮೂರ್ತಿಯವರು ನಿಧನರಾದ್ದರಿಂದ ನಡೆದ ಉಪಚುನಾವಣೆಯಲ್ಲಿ ತಂದೆ ದೇವೇಗೌಡರು ಹುರಿಯಾಳಾದರು. ಆಗ ಕಾಂಗ್ರೆಸ್‍ನ ಸ್ಪರ್ಧಿ ಡಿ.ಕೆ.ಶಿವಕುಮಾರ್. ಈ ಹೊತ್ತಿಗೆ ಮಾಜಿ ಪ್ರಧಾನಿಯಾಗಿ ಹಾಸನ ಲೋಕಸಭಾ ಕ್ಷೇತ್ರದಲ್ಲೂ ಸೋತಿದ್ದ ದೇವೇಗೌಡರಿಗೆ ಜನತಾಪರಿವಾರವೆಲ್ಲವೂ ಬೆಂಬಲಿಸಿತು. ಗೌಡರು ಗೆದ್ದರು.
2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳೆರಡಕ್ಕೂ ಒಟ್ಟಿಗೆ ಚುನಾವಣೆ ನಡೆಯಿತು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಗೆದ್ದರೆ, ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು. ಅವರ ವಿರುದ್ಧ ಗೆದ್ದದ್ದು ಡಿ.ಕೆ.ಶಿ ಅವರು ಜ್ಯೋತಿಷಿಗಳ ಮಾತು ಕೇಳಿ ಹುಡುಕಿ ತಂದಿದ್ದ ಮಹಿಳಾ ಅಭ್ಯರ್ಥಿ ತೇಜಸ್ವಿನಿ. ಆದರೆ ಹಾಸನದಲ್ಲಿ ಗೌಡರು ಗೆದ್ದಿದ್ದರು. ಜೆಡಿಎಸ್‍ನ ಕಥೆ ಮುಗಿಯಿತು ಎಂದು ಹೇಳಿದ್ದ ಸಮೀಕ್ಷೆಗಳನ್ನು ಸುಳ್ಳು ಮಾಡಿ 58 ಸ್ಥಾನ ಗೆದ್ದಿದ್ದ ಪಕ್ಷವು ಕಾಂಗ್ರೆಸ್‍ನೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿತು.
ಕೇವಲ ರಾಮನಗರ ಶಾಸಕರಾಗಿದ್ದ ಕುಮಾರಸ್ವಾಮಿಯವರು ಈ ಮೈತ್ರಿಯನ್ನು ಮುರಿದು ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾದರು. ಈ ಹೊತ್ತಿಗೆ ಹಾಸನ ಜಿಲ್ಲೆಯ ರಾಜಕಾರಣದ ಮೇಲೆ ಅವರ ಅಣ್ಣ ಎಚ್.ಡಿ.ರೇವಣ್ಣರ ಅಧಿಪತ್ಯ ಸ್ಥಾಪನೆಯಾಗಿತ್ತು. ನಿರಂತರವಾಗಿ ದೊಡ್ಡ ಗೌಡರು ಅಲ್ಲಿಂದ ಲೋಕಸಭಾ ಸದಸ್ಯರಾಗುತ್ತಿದ್ದರೆ, ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಹಾಸನ ಜಿಲ್ಲೆಯುದ್ದಕ್ಕೂ ಜೆಡಿಎಸ್ ಗೆಲ್ಲುತ್ತಾ ಬರುತ್ತಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಲ್ಲಿಗೆ ಮಾತ್ರ ರೇವಣ್ಣನವರೇ ಮುಖ್ಯಮಂತ್ರಿ. ಅಲ್ಲಿ ರೇವಣ್ಣನವರ ಪತ್ನಿ ಭವಾನಿಯವರು ಜಿ.ಪಂ. ಸದಸ್ಯೆ. ಕಾಂಗ್ರೆಸ್‍ನವರು ಉದ್ದೇಶಪೂರ್ವಕವಾಗಿ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಿಸದೇ ಹೋಗಿದ್ದರೆ, ಅವರೀಗ ಜಿ.ಪಂ ಅಧ್ಯಕ್ಷೆಯಾಗಿ ವಿರಾಜಮಾನರಾಗಿರುತ್ತಿದ್ದರು.
ಇಷ್ಟಾಗಿದ್ದರೂ ಸಹಿಸಿಕೊಳ್ಳಬಹುದಿತ್ತು. ಬಿಜೆಪಿಯ ಆಪರೇಷನ್ ಕಮಲದ ಭಾಗವಾಗಿ ಮಧುಗಿರಿಯ ಗೌರಿಶಂಕರ್ ಸನ್‍ಆಫ್ ಚೆನ್ನಿಗಪ್ಪ ಜೆಡಿಎಸ್‍ನಿಂದ ಪಕ್ಷಾಂತರ ಮಾಡಿದಾಗ, ಅಲ್ಲಿ ಜೆಡಿಎಸ್ ಕ್ಯಾಂಡಿಡೇಟಾಗಿದ್ದು ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ. ಅಲ್ಲಿ ಶಾಸಕರಾದ ಮೇಲೆ ಯಾವ ಕೆಲಸವನ್ನೂ ಮಾಡದ ಅನಿತಾ ನಂತರದ ಚುನಾವಣೆಯಲ್ಲಿ ಅಲ್ಲಿಂದ ಸ್ಪರ್ಧಿಸಲಿಲ್ಲ. ಬದಲಿಗೆ 2013ರ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರು. ವಾಸ್ತವದಲ್ಲಿ ಇದಕ್ಕೆ ಹಿಂದಿನ 5 ವರ್ಷಗಳಲ್ಲಿ ಚನ್ನಪಟ್ಟಣವು ಎರಡು ಸಾರಿ ಉಪಚುನಾವಣೆ ಕಂಡಿತ್ತು. ಒಮ್ಮೆ ಯೋಗೇಶ್ವರ್ ಪಕ್ಷ ಬದಲಾಯಿಸಿ ಬಿಜೆಪಿಗೆ ಆಪರೇಷನ್ ಕಮಲವಾದ್ದರಿಂದ, ಜೆಡಿಎಸ್‍ನ ಎಂ.ಸಿ.ಅಶ್ವತ್ಥ್ ಗೆದ್ದು ಬಂದರು. ಅವರೂ ಬಿಜೆಪಿಗೆ ಹೋದಾಗ, ಜೆಡಿಎಸ್‍ನಿಂದ ಟಿಕೆಟ್ ಕೊಟ್ಟಿದ್ದು ಸಿಂ.ಲಿಂ.ನಾಗರಾಜು ಅವರಿಗೆ. ಅತ್ಯಂತ ಸಾಮಾನ್ಯ ಕುಟುಂಬದ, ಸಾಮಾಜಿಕ ಹೋರಾಟಗಳಲ್ಲೂ ಪಾಲ್ಗೊಳ್ಳುತ್ತಿದ್ದ ಸಿಂ.ಲಿಂ ಗೆಲ್ಲಲಿಲ್ಲ.
ಈ ಮಧ್ಯೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಚನ್ನಪಟ್ಟಣ ತಾಲೂಕಿನ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳೇ ಗೆದ್ದಿದ್ದರು. ಅಷ್ಟು ಬಲವಾಗಿದ್ದ ಕ್ಷೇತ್ರದಲ್ಲಿ ಸಿಂ.ಲಿಂ ಅವರಿಗೇ ಮತ್ತೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರಲು ಬೇಕಾದ ಕೆಲಸವನ್ನು ಗೌಡರ ಫ್ಯಾಮಿಲಿ ಮಾಡಲಿಲ್ಲ. ಬದಲಿಗೆ, ಅನಿತಾ ಕುಮಾರಸ್ವಾಮಿಯವರನ್ನು ತಂದು ನಿಲ್ಲಿಸಿದರು. ಅನಿತಾ ಸೋತು ಯೋಗೇಶ್ವರ್ ಗೆದ್ದರು. ಅದರ ಮುಂದಿನ ಸಾರಿಗೆ ಯೋಗೇಶ್ವರ್ ಹಣಿಯಲು ಎಚ್‍ಡಿಕೆ, ಡಿಕೆಶಿ ಕೈ ಜೋಡಿಸಿದರು. ಸ್ವತಃ ಎಚ್‍ಡಿಕೆ ರಾಮನಗರ, ಚನ್ನಪಟ್ಟಣ ಎರಡೂ ಕಡೆ ನಿಂತು ಎರಡೂ ಕಡೆ ಗೆದ್ದರು.
ಗೆದ್ದು ಸಿಎಂ ಆಗಿರುವ ಎಚ್‍ಡಿಕೆ ಚನ್ನಪಟ್ಟಣ ಉಳಿಸಿಕೊಂಡಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ಮುಖಂಡರು ಸುಮ್ಮನಿರಲು ಸಿದ್ಧರಿಲ್ಲ. ಏಕೆಂದರೆ ಈ ಚುನಾವಣೆಯಲ್ಲಿ ರಾಮನಗರದಲ್ಲಿ ಇನ್ನು ಸ್ವಲ್ಪ ಏರುಪೇರಾಗಿದ್ದರೆ ಎಚ್‍ಡಿಕೆ ಸೋತುಬಿಡುವ ಸನ್ನಿವೇಶವಿತ್ತು. ಏಕೆಂದರೆ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳ ಜೊತೆಗೆ ಮುಸ್ಲಿಮರು ಸಾರಾಸಗಟಾಗಿ ಎಚ್‍ಡಿಕೆ ವಿರುದ್ಧ ಓಟು ಹಾಕಿದ್ದರು. ಅಂತಹ ಕಡೆ ಅಭ್ಯರ್ಥಿಯನ್ನೇ ಹಾಕದಿದ್ದರೆ ತಮ್ಮ ಅಸ್ತಿತ್ವವೇನು ಎಂದು ಚಿಂತೆಗೆ ಬಿದ್ದವರು ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಬಿಜೆಪಿಗೆ ಮುಸ್ಲಿಮರು ಓಟು ಹಾಕುವ ಸಾಧ್ಯತೆಯಿಲ್ಲ; ಕಾಂಗ್ರೆಸ್ ಅಭ್ಯರ್ಥಿಯೇ ಇರುವುದಿಲ್ಲ. ಹೀಗಾಗಿ ಬೇರೊಬ್ಬರಿಗೆ ಟಿಕೆಟ್ ಕೊಡುವ ಮನಸ್ಸು ಗೌಡರ ಕುಟುಂಬಕ್ಕಿಲ್ಲ.
ಮತ್ತೆ ಅನಿತಾ ಕುಮಾರಸ್ವಾಮಿಯವರೇ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಈ ಹಿಂದೆ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳೆರಡರಲ್ಲೂ ಎಚ್‍ಡಿಕೆಯೇ ಸ್ಪರ್ಧಿಯಾಗಲು ಯೋಗೇಶ್ವರ್ ಹಣಿಯುವುದೊಂದೇ ಕಾರಣವಾಗಿರಲಿಲ್ಲ. ಆಗ ಅನಿತಾ ಅವರಿಗೆ ಟಿಕೆಟ್ ಕೊಟ್ಟಿದ್ದರೆ, ರೇವಣ್ಣರ ಪತ್ನಿ ಅಥವಾ ಪುತ್ರ ಪ್ರಜ್ವಲ್‍ಗೂ ಟಿಕೆಟ್ ಕೊಡಬೇಕಾಗುತ್ತಿತ್ತು ಎಂಬ ಕಾರಣವಿತ್ತು. ಅಂದರೆ ಗೌಡರ ಕುಟುಂಬದ ಜಗಳಗಳನ್ನು ಸರಿಪಡಿಸಲು ರಾಜ್ಯದ ಜನರು ಉಪಚುನಾವಣೆಗಳನ್ನು ನೋಡಬೇಕು.
ಹೌದು, ಮಧುಗಿರಿಯಲ್ಲಿ ಚೆನ್ನಿಗಪ್ಪರನ್ನು ಸೋಲಿಸಲು ಕುಮಾರಸ್ವಾಮಿ (ಕುಟುಂಬದ ಸದಸ್ಯರನ್ನು, ಅದರಲ್ಲೂ ಪತ್ನಿಯನ್ನು ಜನರು ಹೀಗೇ ನೋಡುತ್ತಾರೆ) ಕ್ಯಾಂಡಿಡೇಟ್ ಆಗುವ ಅಗತ್ಯ ಆ ಪಕ್ಷಕ್ಕೂ ಇದ್ದಿರಬಹುದು. ಆದರೆ, ನಿರಂತರವಾಗಿ ಪಕ್ಷಕ್ಕೆ ದುಡಿಯುತ್ತಾ ಬಂದ ಕಾರ್ಯಕರ್ತರ ಪಾಡೇನು? ಜೆಡಿಎಸ್ ಪಕ್ಷವು ಈ ರೀತಿ ಗೌಡರ ಕುಟುಂಬದ ಪಕ್ಷವಾಗಿದೆ; ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡಬಹುದು, ಬಿಜೆಪಿಯ ಜೊತೆಗೂ ಕೈಜೋಡಿಸಬಹುದು ಎಂದು ಮುಸ್ಲಿಮರಿಗೆ ಅನ್ನಿಸಿದ್ದರಿಂದಲೇ ಅವರು ಜೆಡಿಎಸ್ ವಿರುದ್ಧ ಓಟು ಹಾಕಿದ್ದು. ಕುಮಾರಸ್ವಾಮಿ ರಾಮನಗರದಲ್ಲಿ ಕಷ್ಟಪಟ್ಟು ಗೆಲ್ಲಬೇಕಾಗಿ ಬಂದಿದ್ದು ಅದರಿಂದಲೇ. ಹಾಸನ ನಗರದಲ್ಲಿ ಮುಸ್ಲಿಮರು ಜೆಡಿಎಸ್‍ಗೆ ಮತ ಹಾಕದೇ ಇದ್ದುದರಿಂದಲೇ ಗೆಲ್ಲಲು ಬೇಕಿದ್ದ ಹೆಚ್ಚುವರಿ ಮತಗಳು ಇಲ್ಲದೇ ಬಿಜೆಪಿ ಶಾಸಕ ಗೆದ್ದದ್ದು. ಮಂಡ್ಯ ನಗರದಲ್ಲಿ ಬೋರ್ಡಿಗೇ ಇಲ್ಲದಿದ್ದ ಗಣಿಗ ರವಿಕುಮಾರ್, ಚುನಾವಣೆಯ ಹಿಂದಿನ ದಿನ ತಲೆ ತಪ್ಪಿಸಿಕೊಂಡು ಹೋದರು, ಮುಸ್ಲಿಮರ ಓಟು ಪಡೆದುಕೊಂಡಿದ್ದರಿಂದ ತೀರಾ ಹತ್ತಿರಕ್ಕೇ ಬಂದದ್ದು.
ಇಂತಹುದ್ದೇ ಕಾರಣಕ್ಕೆ ಪ್ರತೀ ಚುನಾವಣೆಯ ನಂತರ ಜೆಡಿಎಸ್‍ನ ಒಂದಷ್ಟು ಶಾಸಕರು ಪಕ್ಷ ಬಿಟ್ಟು ಹೋಗುವುದು. ಆಶ್ಚರ್ಯಕರ ಸಂಗತಿಯೆಂದರೆ, ಎಂದೂ ಜೆಡಿಎಸ್‍ನಿಂದ ಹೊರಗೆ ಹೋಗುವ ಆಲೋಚನೆ ಇಲ್ಲದ ಸಿ.ಎಸ್.ಪುಟ್ಟರಾಜು ಒಳಗೊಳಗೇ ಮುನಿಸಿ ಕೊಂಡಿದ್ದಾರೆ. ಜಿ.ಟಿ. ದೇವೇಗೌಡರೂ ಮುಂದಿನ ಚುನಾವಣೆಯ ಹೊತ್ತಿಗೆ ಎಲ್ಲಿರುತ್ತಾರೆ ಹೇಳಲಾಗದು. ಏಕೆಂದರೆ, ಕಡೆಯವರೆಗೂ ಪಟ್ಟಿಯಲ್ಲೇ ಇರದಿದ್ದ ಗೌಡರ ಕುಟುಂಬದ ಬೀಗ ಡಿ.ಸಿ.ತಮ್ಮಣ್ಣರನ್ನು ಕ್ಯಾಬಿನೆಟ್‍ಗೆ ಸೇರಿಸಿಕೊಂಡು ಒಳ್ಳೆಯ ಸಾರಿಗೆ ಖಾತೆ ಕೊಟ್ಟರು; ತಮಗೆ ಇಷ್ಟವಿಲ್ಲದಿದ್ದ ಸಣ್ಣ ನೀರಾವರಿ ಕೊಟ್ಟರು ಎಂದು ಪುಟ್ಟರಾಜುವಿಗೆ ಕೋಪ. ಎಸ್‍ಎಸ್‍ಎಲ್‍ಸಿ ಪಾಸಾಗದ ತನಗೆ ಉನ್ನತ ಶಿಕ್ಷಣ ಕೊಟ್ಟು ಇನ್ನೊಬ್ಬ ಬೀಗ ಕೆ.ಎಸ್.ರಂಗಪ್ಪರನ್ನು ಸಲಹೆಗಾರನ ರೂಪದಲ್ಲಿ ತಲೆ ಮೇಲೆ ಕೂರಿಸಲು ಹೊರಟಿದ್ದರು ಎಂದು ಜಿ.ಟಿ.ದೇವೇಗೌಡರಿಗೆ ಸಿಟ್ಟು. ಈ ರೀತಿಯ ಇನ್ನೊಂದು ಪಕ್ಷಾಂತರವನ್ನು ಕರ್ನಾಟಕದ ಜನತೆ ನೋಡಲಿದ್ದಾರೆ. ಆದರೂ, ಮೂರನೆಯ ಶಕ್ತಿಯೊಂದು ಇಲ್ಲದಿರುವುದರಿಂದ ಈ ಭಾಗದಲ್ಲಿ ಜೆಡಿಎಸ್ ಚಲಾವಣೆಯಲ್ಲಿ ಮುಂದುವರೆಯಬಹುದು.
ಆದರೆ, ಇದು ಪ್ರಜಾಪ್ರಭುತ್ವದ ದುರಂತಗಳಲ್ಲೊಂದು. ದೇವೇಗೌಡರು ಹೊಂದಿರುವ ಸುದೀರ್ಘ ರಾಜಕೀಯ ಅನುಭವವು ಇದಕ್ಕಿಂತ ಹೆಚ್ಚಿನ ಜನಪರ ರಾಜಕಾರಣವನ್ನು ಕಟ್ಟಲು ಅವರಿಗೆ ನೆರವಾಗದಿರುವುದು ದುರಂತ. ಬಿಜೆಪಿಯನ್ನು ದೂರವಿಡುವ ಏಕೈಕ ಕಾರಣಕ್ಕೆ ಇಂತಹದ್ದೆಲ್ಲವನ್ನೂ ಕರ್ನಾಟಕದ ಜನರು ಸಹಿಸಬೇಕೇ?

– ನೀಲಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...