Homeಸಾಹಿತ್ಯ-ಸಂಸ್ಕೃತಿಕಥೆಗೌರಿ ಗಣೇಶ, ಗುಬ್ಬಿ ಗೂಡು ಮತ್ತು ಮೋದಿ

ಗೌರಿ ಗಣೇಶ, ಗುಬ್ಬಿ ಗೂಡು ಮತ್ತು ಮೋದಿ

- Advertisement -
- Advertisement -

ಬಹಳ ಕಾಲದ ನಂತರ ಮೂರು ದಿನಗಳ ಮಟ್ಟಿಗೆ ರೈತನಾಗುವ ಅವಕಾಶ ಮೊನ್ನೆ ಕೂಡಿಬಂತು. ಬಿಸಿಲುಸೀಮೆ ಚಿತ್ರದುರ್ಗ ಜಿಲ್ಲೆಯ ಅಂಚಿನಲ್ಲಿರುವ ನನ್ನ ಪುಟ್ಟ ಊರಿನಲ್ಲಿ ಗೌರಿಗಣೇಶ ಹಬ್ಬವೆಂದರೆ ಒಂಥರಾ ನೆಲದ ಹಬ್ಬವಿದ್ದಂತೆ. ಬೆಳೆದು ನಿಂತ ಹಸಿರು ಪೈರುಗಳ ಬೈತಲೆಯಂಥ ಅವರವರ ಹೊಲದ ಬದುಗಳಲ್ಲಿ ಹುತ್ತಗಳನ್ನು ಹುಡುಕಿ ಹಾಲೆರೆದು ಸಂಭ್ರಮಿಸುವ, ಆ ನೆಪದಲ್ಲಿ ಕಟಾವಿಗೆ ಸಜ್ಜಾದ ತಮ್ಮ ಬೆವರ ಶ್ರಮದ ನಡುವೆ ಇಡೀ ಕುಟುಂಬ ನಿಂತು ಖುಷಿಪಡುವ ನನ್ನ ಜನರ ಆಚರಣೆಯಲ್ಲಿ ಮೌಢ್ಯ ಇರಬಹುದಾದರು ಅದು ಅವರ ಮುಗ್ಧತೆಯ ಮುಂದೆ ನಗಣ್ಯ ಎನಿಸಿಬಿಡುತ್ತೆ. ಹಾಗಾಗಿಯೇ ಬಹಳಷ್ಟು ಹಬ್ಬಗಳನ್ನು ನೆಗ್‍ಲೆಕ್ಟ್ ಮಾಡುವ ನಾನು ಇದೊಂದು ಹಬ್ಬಕ್ಕೆ ತಪ್ಪದೇ ಮಕ್ಕಳ ಸಮೇತ ಊರಿಗೆ ಹಾರಿಬಿಡುತ್ತೇನೆ. ಯಂತ್ರನಗರಿಯ ಏಕತಾನತೆಯಿಂದ ಕಳಚಿಕೊಂಡು ನನ್ನ ಬೇರುಗಳನ್ನು ನನ್ನ ಮಕ್ಕಳಿಗೂ ಚಾಚಿಸುವ ಪ್ರಯತ್ನಕ್ಕೆ ಈ ಹಬ್ಬ ಒಂದು ನೆಪ. ವರ್ಷದ ಮೂರು ಕಾಲವೂ ಕಾದ ಕಪ್ಪುಬಂಡೆಯಂತೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಒಂದೇಸಮನೆ ಚಾಚಿಕೊಂಡ ಎರೆಮಣ್ಣಿನ ನನ್ನ ಪರಿಸರ, ಹಸಿರು ಪೈರುಗಳಿಂದ ನಳನಳಿಸಿ ಮುದನೀಡುವ ಈ ಕಾಲದಲ್ಲಿ ರಾಗಿಯೋ, ಜೋಳವೋ, ಈರುಳ್ಳಿಯೋ, ಮೆಣಸಿನಕಾಯಿಯೊ… ಹೀಗೆ ಯಾವುದಾದರು ಒಂದು ಫಸಲು ಬಸಿರುಕಟ್ಟಿ ನಿಂತಿರುತ್ತೆ. ಉತ್ತ ರೈತನ ದೇಹದ ಅಷ್ಟೂ ಆಯಾಸವನ್ನು ಒಂದೇಏಟಿಗೆ ಆರಿಸಿ ಅವನ ಎದೆಯಲ್ಲಿ ಖುಷಿ ಚಿಮ್ಮಿಸುವ ಯಕ್ಷಿಣಿಗಳು ಇವು.
ಅಂದಹಾಗೆ, ಹುತ್ತಕ್ಕೆ ಹಾಲೆರೆಯುವುದಕ್ಕೆಂದೇ ನಮ್ಮ ಪಂಚಾಂಗಗಳು ನಾಗರಪಂಚಮಿಯನ್ನು ನಿಕ್ಕಿ ಮಾಡಿರುವಾಗ ಈ ನನ್ನ ಹಳ್ಳಿ ಜನರೇಕೆ ಅಂದು ನಾಗನನ್ನು ನೆನಪಿಸಿಕೊಳ್ಳದೆ ಗೌರಿಗಣೇಶ ಹಬ್ಬದಲ್ಲಿ ಹುತ್ತವನ್ನು ಹುಡುಕಿ ಹೊರಡುತ್ತಾರೆ ಅನ್ನೋದು ಬಹಳ ದಿನಗಳು ನನ್ನನ್ನು ಕಾಡಿದ ಪ್ರಶ್ನೆ. ಇತ್ತೀಚೆಗೆ ನಿಖಿಲ್ ಕೋಲ್ಪೆಯವರು ನಮ್ಮ `ಗೌರಿ ಪತ್ರಿಕೆ’ಯಲ್ಲಿ ಗ್ರಾಮೀಣಿಗರ ನಂಬಿಕೆ, ಆಚರಣೆಗಳ ಮೇಲೆ ವೈದಿಕ ಮೌಢ್ಯ ದಾಳಿ ನಡೆಸುತ್ತಿರೋದನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿರೋದನ್ನು ಗಮನಿಸಿದ ನಂತರ ಈ ಪ್ರಶ್ನೆಗೆ ನನ್ನದೇ ಆದ ಉತ್ತರ ಕಂಡುಕೊಂಡಿದ್ದೇನೆ. ಏನೆಂದರೆ, ಮನುಷ್ಯ ಮೊದಲಿನಿಂದಲೂ ಪ್ರಕೃತಿಯ ಆರಾಧಕ. ತನಗೆ ಅತೀತವೆನಿಸಿದ, ಅರ್ಥವಾಗದ ಸತ್ಯಗಳಿಗೆಲ್ಲ ಅವನು ಕಂಡುಕೊಂಡ ಉತ್ತರ ದೇವರು. ಆ ದೇವರನ್ನು ಸಹಾ ಆತ ಬೇರೆಲ್ಲೋ ಕಾಣದೆ, ತನ್ನ ಸುತ್ತಲಿನ ಪ್ರಕೃತಿಯಿಂದಲೇ ಕಾಣತೊಡಗಿದ. ಹಾಗಾಗಿಯೇ ಒಂದು ಮರ, ಒಂದು ಬಂಡೆ, ಒಂದು ನೀರಿನ ತೊರೆಯೇ ಅವನಿಗೆ ದೇವರಾಗಲು ಸಾಧ್ಯವಾದದ್ದು. ತನ್ನ ಕೈಲಿ ಪರಿಹಾರ ಸಾಧ್ಯವಾಗದ ಸವಾಲುಗಳಿಗೆಲ್ಲ ಪ್ರಕೃತಿಯ ರೂಪಗಳನ್ನು ಆರಾಧಿಸುವ ಮೂಲಕ ಸಾಂತ್ವನ ಕಂಡುಕೊಳ್ಳುತ್ತಾ ಬಂದ. ಮುಂದೆ ಇದೇ ಪ್ರವೃತ್ತಿ, ಮೌಢ್ಯಾರಾಧಕರು ಅವನನ್ನು ಶೋಷಿಸಲು ಅಸ್ತ್ರವಾಗಿ ದುರ್ಬಳಕೆಯಾಯ್ತು ಅನ್ನೋದು ಬೇರೆಮಾತು. ಆದರೆ ತನ್ನ ಅಸಹಾಯಕತೆಯನ್ನು ಸಂತೈಸಿಕೊಂಡು ಸವಾಲುಗಳ ನಡುವೆ ಬದುಕಲು ತನ್ನ ಮಿತಿಯಾನುಸಾರ ಆತ ದಾರಿಕಂಡುಕೊಂಡ ಬಗೆ ಅದು. ಬಹುಶಃ ಗೌರಿಗಣೇಶ ಹಬ್ಬದಲ್ಲಿ ಹುತ್ತವನ್ನು ಹುಡುಕಿ ಹೊರಡೋದು ಅಂತದ್ದೇ ಒಂದು ಆಚರಣೆಯಾಗಿರಬಹುದು. ಸಾಮಾನ್ಯವಾಗಿ ಗೌರಿಗಣೇಶ ಹಬ್ಬದ ವೇಳೆಗೆ ಫಸಲುಗಳು ಕಟಾವಿಗೆ ಸನಿಹ ಬಂದಿರುತ್ತವೆ. ಬೆಳೆದುನಿಂತ ಬೆಳೆ, ಅದರ ನಡುವಿನ ಕಳೆ ಹುಲ್ಲುಗಳ ನಡುವೆ ಕೆಲಸ ಮಾಡಲು ಹೊಲಕ್ಕಿಳಿದಾಗ ಹಾವು ಕಡಿತದಿಂದ ಸಾವಿಗೀಡಾಗುವ ಅಪಾಯ ಹೆಚ್ಚಿರುತ್ತದೆ. ಇಲಿ, ಕಪ್ಪೆ, ಹುಳ ಹುಪ್ಪಟೆಗಳಂತಹ ಆಹಾರವನ್ನು ಹುಡುಕಲು ಹಾವುಗಳಿಗಾದರು ಇಂಥಾ ತಾಣಗಳೇ ಅಚ್ಚುಮೆಚ್ಚಲ್ಲವೇ. ಯಥಾ ಪ್ರಕಾರ ಇದಕ್ಕೆ ಪರಿಹಾರ ತನ್ನಿಂದ ಸಾಧ್ಯವಾಗದೆ ಹೋದಾಗ, ನಮ್ಮ ಜನ ಆ ಸಮಯದಲ್ಲಿ ಬರುವ ಗೌರಿಗಣೇಶ ಹಬ್ಬದ ನೆಪದಲ್ಲಿ ಹಾವುಗಳ ಆವಾಸವಾದ ಹುತ್ತಗಳನ್ನು ಪೂಜಿಸುವ ಮೂಲಕ ಕಟಾವಿನ ಸಂದರ್ಭದಲ್ಲಿ ಸಂಭವಿಸುವ ಹಾವು ಕಡಿತಕ್ಕೆ ತಮ್ಮದೇ ಬಗೆಯಲ್ಲಿ ಸಮಾಧಾನ ಕಂಡುಕೊಂಡಿರ ಬಹುದು. ಮೊದಲೇ ಹೇಳಿದಂತೆ ನನ್ನೊಳಗಿನ ತಾರ್ಕಿಕ ಕಾಗುಣಿತದಿಂದ ಕಂಡುಕೊಂಡ ಉತ್ತರ ಇದಾಗಿರೋದ್ರಿಂದ ಪುರಾವೆ ಒದಗಿಸಲಾರೆ.
ಆರಂಭದಲ್ಲಿ ನಮ್ಮ ಜನ ಇದನ್ನು `ಗೌರೀಹಬ್ಬ’ ಅಂತಷ್ಟೇ ಕರೆಯುತ್ತಿದ್ದರು. ಈಗಲೂ ಹಲವು ಕಡೆ ಹೀಗೇ ಕರೆಯುತ್ತಾರೆ. ಆಮೇಲೆ ನಿಧಾನಕ್ಕೆ `ಗೌರಿ’ಗೆ `ಗಣೇಶ’ ಸೇರ್ಪಡೆ ಆಗುತ್ತಾ ಬಂದ. ನನಗೆ ಚೆನ್ನಾಗಿ ನೆನಪಿರುವಂತೆ ನನ್ನೂರಿನಲ್ಲಿ ಈ ಹಬ್ಬದ ವೇಳೆ ಗಣೇಶನ ವಿಗ್ರಹವನ್ನು ಕೂರಿಸುವ ಪರಿಪಾಠವೂ ಇರಲಿಲ್ಲ. ಅಕ್ಕಪಕ್ಕದ ಊರುಗಳಲ್ಲಿ ಗಣೇಶನನ್ನು ಕೂರಿಸೋದನ್ನು ಕಂಡು ಒಂದಷ್ಟು ಯುವಕರು `ಪಟ್ಟಿ’ ಎತ್ತಿ ಊರ ಮಧ್ಯದ `ಡಿಪೋ ಮನೆ’ಯಲ್ಲಿ ಗಣೇಶನನ್ನು ಮೊದಲ ಬಾರಿ ಕೂರಿಸಿದ್ದುಂಟು. ಅದಾದ ಮುಂದಿನ ವರ್ಷ ಆ ದೊಡ್ಡವರಿಗೆ ಸೆಡ್ಡು ಹೊಡೆಯುವ ಉಮೇದಿ ಚಿಕ್ಕವರಾಗಿದ್ದ ನಮಗೂ ಶುರುವಾಯ್ತು. ಆದರೆ ಅವರಂತೆ ಪಟ್ಟಿ ಎತ್ತುವಹಾಗಿರಲಿಲ್ಲ. ಯಾಕೆಂದರೆ ಒಬ್ಬನೇ ಗಣೇಶನಿಗೆ ಎರಡೆರಡು ಬಾರಿ ರೊಕ್ಕ ಕೊಡಲು ನಮ್ಮ ಜನ ಹಣಕಾಸಿನಲ್ಲಿ ಕಟ್ಟುಮಸ್ತರಲ್ಲ. ಸರಿ, ಖರ್ಚಿಲ್ಲದೆ ಗಣೇಶನನ್ನು ಕೂರಿಸಿ ಗೌರೀ ಹಬ್ಬ ಮಾಡಲು ನಾವು ನಿರ್ಧರಿಸಿದೆವು. ನಾವು ಅಂದರೆ ಐದಾರು ಮಂದಿ ಹುಡುಗರು, ಮೂರ್ನಾಲ್ಕು ಹುಡುಗಿಯರು ಅಷ್ಟೆ. ಕೆರೆಯಿಂದ ಎರೆಮಣ್ಣು ಎರೆದುತಂದು ನಮಗೆ ತಿಳಿದಂತೆ ಪ್ರಾಥಮಿಕ ಆಕಾರವುಳ್ಳ ಗಣೇಶನನ್ನು ಮಾಡಿದೆವು. ಕಪ್ಪು ಮಣ್ಣಿನ ಗಣೇಶ ಕರ್ರಗೆ ಕಂಡಿದ್ದರಿಂದ ಸಮಾಧಾನವಾಗಲಿಲ್ಲ. ನಮ್ಮಲ್ಲೇ ಒಬ್ಬ ತನ್ನ ಮನೆಯಿಂದ ಬಟ್ಟೆಗೆ ಹಾಕುವ `ನೀಲಿಪುಡಿ’ ಕದ್ದುತಂದ. ಅದರ ಪೇಸ್ಟನ್ನು ಗಣೇಶನಿಗೆ ಬಳಿದು ಒಂದು ವಿಚಿತ್ರ ಬಣ್ಣ ಕೊಟ್ಟು ನಮ್ಮ ಸ್ನೇಹಿತನೊಬ್ಬನ ಮನೆಯಲ್ಲಿ ಪ್ರತಿಷ್ಟಾಪನೆಯನ್ನೂ ಮಾಡಿದೆವು.
ನಮ್ಮ ಅವ್ವಂದಿರ ಸೀರೆಗಳನ್ನೇ ಬೈಸಿಕೊಂಡು ತಂದು ಅಡ್ಡಡ್ಡ ಕಟ್ಟಿ, ಆ ಕಾಲದಲ್ಲಿ ಅರಳಿನಿಂತಿದ್ದ ಹೂವುಗಳನ್ನೆಲ್ಲ ಕಿತ್ತುತಂದು ಮಂಟಪ ಅಲಂಕರಿಸಿ ಸಾಧ್ಯವಾದಷ್ಟು ಚೆಂದವಾಗಿಸಿದೆವು. ಅಷ್ಟು ಸಿಂಪಲ್ಲಾಗಿ ಶುರುವಾದ ಗಣೇಶನ ಪ್ರತಿಷ್ಠಾಪನೆ ಮೂರನೇ ದಿನ ವಿಸರ್ಜನೆ ತಲುಪುವ ವೇಳೆಗಾಗಲೆ ಅಪಾರ ಜನಪ್ರಿಯತೆ ದಕ್ಕಿಸಿಕೊಂಡಿತ್ತು. ಮನೆಮನೆಯಿಂದ ದೊಡ್ಡವರು `ಎಡೆ’ತಂದು ಪೂಜೆ ಮಾಡಿಸಲು ಶುರು ಮಾಡಿದರು. ಯಾವುದಕ್ಕೂ ಇರಲಿ ಅಂತ ಮುಂದಿಟ್ಟಿದ್ದ ಕಾಣಿಕೆ ಡಬ್ಬಿಯಲ್ಲಿ ಕಾಯಿನ್‍ಗಳು ಸದ್ದು ಮಾಡಲಾರಂಭಿಸಿದವು. ವಿಸರ್ಜನೆಯ ಪೂಜೆಗೆ `ಮಂಡಕ್ಕಿ ಪಲ್ಲಾರ’ ವ್ಯವಸ್ಥೆ ಮಾಡಿಸುವಷ್ಟು ನಾವು ಶಕ್ತರಾಗಿದ್ದೆವು. ಕೊನೆಗೆ ತಟ್ಟೆಯೊಂದರಲ್ಲಿ ಗಣೇಶನನ್ನು ಕೂರಿಸಿ, ತಲೆಮೇಲೆ ಹೊತ್ತು ಊರತುಂಬಾ ಮೆರವಣಿಗೆ ಮಾಡಿ, ಕುಣಿದು ಕುಪ್ಪಳಿಸಿ ಊರ ಹೊರಗಿನ `ಮಾದರ ಬಾವಿ’ಯಲ್ಲಿ ಮುಳುಗಿಸಿ ಬಂದೆವು. ಆದರೆ ಈಗ ಗಣೇಶ ಬದಲಾಗಿದ್ದಾನೆ. `ಪಟ್ಟಿ’ಗೆ ಅಡ್ಡಗಟ್ಟಿ ಡಿಮ್ಯಾಂಡ್ ಮಾಡುತ್ತಾನೆ, ರಸ್ತೆ ಮದ್ಯೆ ಪೆಂಡಾಲ್ ಕೇಳುತ್ತಾನೆ, ಹಾರ-ತುರಾಯಿ-ಮೈಕುಗಳ ಅರಚಾಟ ಹಂಬಲಿಸುತ್ತಾನೆ, ಝಗಮಗ ಲೈಟು ನಿರೀಕ್ಷಿಸುತ್ತಾನೆ. ಅವನ ನಗುವೂ ಕೃತಕವಾಗಿಬಿಟ್ಟಿದೆ.
ಆದರೂ ಗೌರಿಗಣೇಶ ಹಬ್ಬಕ್ಕೆ ನನ್ನೂರಿಗೆ ಹೋಗುವುದನ್ನು ತಪ್ಪಿಸೋದಿಲ್ಲ. ಈ ಸಲ ಹೋದಾಗ ಈರುಳ್ಳಿ ಬೆಳೆ ಕಟಾವಿಗೆ ಬಂದಿತ್ತು. ರೈತನಾಗುವ ಅಪರೂಪದ ಅವಕಾಶ ಸಿಕ್ಕಿದ್ದೇ ತಡ ಅಪ್ಪ-ಅವ್ವನ ಜೊತೆಗೂಡಿ ನಾನೂ ಈರುಳ್ಳಿ ಕೊಯ್ಯಲು ಹೊರಟೆ. ಒಂದಿಡೀ ದಿನ ಹೊಲದ ಎದೆಯ ಮೇಲೆ ಕೂತು, ಬಿಸಿಲನ್ನೂ ಆಸ್ವಾದಿಸುತ್ತಾ, ಏನೇನೊ ಹರಟುತ್ತಾ ಈರುಳ್ಳಿ ಕೊಯ್ದು, ಚೀಲದಲ್ಲಿ ಅಡಕಿ ಸುಸ್ತಾಗಿಹೋದರು, ಆ ಸುಸ್ತಿನಲ್ಲಿ ಒಂದು ಖುಷಿಯಿತ್ತು. ಹೊಲದ ತುಂಬಾ ಬೇಕಾಬಿಟ್ಟಿ ಬೆಳೆದು ಹರಡಿಕೊಂಡಿದ್ದ ಟೊಮ್ಯಾಟೊ ಗಿಡಗಳನ್ನು ಕೊಯ್ದು ಎಸೆಯುವಂತೆ ಅವ್ವ ನನಗೆ ಆಜ್ಞಾಪಿಸಿದಳು. ಬೆಳಿಗ್ಗೆಯೇ ಹೊಲಕ್ಕೆ ಹೋಗಿ ಗಿಡಗಳನ್ನು ಕೊಯ್ಯುವಾಗ ನನ್ನಿಂದ ಒಂದು ಯಡವಟ್ಟಾಗಿಹೋಯ್ತು. ಯಾವುದೋ ಗುಬ್ಬಿ ಜಾತಿಯ ಪುಟಾಣಿ ಹಕ್ಕಿಯೊಂದು ತನ್ನ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಮಾಡಲು ನಾರಿನಲ್ಲೇ ಹೆಣೆದ ಪುಟ್ಟ ಗೂಡೊಂದನ್ನು ಆ ಟೊಮ್ಯಾಟೊ ಪೆಳೆಯ ನಡುವೆ ಇದ್ದ ಬದನೆಕಾಯಿ ಗಿಡದಲ್ಲಿ ಕಟ್ಟಿಕೊಂಡಿತ್ತು. ಜೀವಜಗತ್ತಿನ ಅಂಥಾ ಸೂಕ್ಷ್ಮ ಸಂಗತಿಗಳ ಬಗ್ಗೆ ಅರಿವಿಲ್ಲದ ನಾನು ಮನುಷ್ಯ ಸಹಜ ಒರಟುತನದಲ್ಲಿ ಗಿಡಗಳನ್ನು ಕೊಯ್ದು ಅಡ್ಡಾದಿಡ್ಡಿ ಎಳೆದಾಡಿದ ರಭಸಕ್ಕೆ ಆ ಗೂಡು ನೆಲ ಸೇರಿತು. ಸಣ್ಣವರಿದ್ದಾಗ ಕಂಡಿದ್ದ ಅಂತಹ ಗೂಡನ್ನು ಮಗನಿಗೂ ತೋರಿಸುವ ಆಸೆಯಾಗಿ ನನ್ನೊಟ್ಟಿಗೆ ಹೊಲಕ್ಕೆ ಬಂದು ಪಕ್ಕದ ಬಯಲಿನಲ್ಲೇ ಆಟವಾಡುತ್ತಿದ್ದ ಹಿರಿಮಗನನ್ನು ಕೂಗಿ ಕರೆದು ಅದನ್ನು ತೋರಿಸಿದೆ.
`ಏನಪ್ಪಾ, ಇದು, ಬಟ್ಟಲು ಥರಾ ಇದೆ?’ ಎಂದ ಅವನಿಗೆ ಹಕ್ಕಿಯ ಗೂಡಿನ ಬಗ್ಗೆ ನಾನು ಭಾಷಣ ಬಿಗಿಯುತ್ತಿರುವಾಗಲೇ, `ಅಯ್ಯೋ, ಅಪ್ಪಾ, ಅಲ್ನೋಡು, ಪಾಪಾ ಮರಿಯನ್ನೂ ಎಳೆದು ಬೀಳಿಸಿದ್ದೀಯ’ ಅಂತ ನನ್ನ ಪ್ರಮಾದದ ಪರಿಚಯ ಮಾಡಿಸಿದ. ಮೈಮೇಲೆ ನೆಟ್ಟಗೆ ಪುಕ್ಕಗಳೂ ಮೂಡದ ಹಸಿಮೈನ ಪುಟಾಣಿ ಮರಿ ನೆಲದ ಮೇಲೆ ಬಿದ್ದು ಒದ್ದಾಡುತ್ತಿತ್ತು. ಏನು ಮಾಡಬೇಕೊ ಗೊತ್ತಾಗಲಿಲ್ಲ. ಕೈಯಲ್ಲಿ ಎತ್ತಿ ಅದನ್ನು ಗೂಡಿನೊಳಕ್ಕೆ ಬಿಡಲಿಕ್ಕೆ ಹೋದವನು ಒಂದುಕ್ಷಣ ತಡೆದೆ. ಮನುಷ್ಯ ಮುಟ್ಟಿದ ಪ್ರಾಣಿ, ಪಕ್ಷಿಗಳನ್ನು ತಮ್ಮ ಸಂಕುಲಕ್ಕೆ ಅವು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಕೇಳಿದ್ದು ನೆನಪಾಯ್ತು. ಗೂಡನ್ನೇ ಮರಿಯ ಹತ್ತಿರ ಒಯ್ದು ಕಡ್ಡಿಯಲ್ಲಿ ಎತ್ತಿ ಅದರೊಳಕ್ಕೆ ಹಾಕಿದೆ. ಬದನೆಕಾಯಿ ಗಿಡದಲ್ಲಿದ್ದ ಗೂಡಿನ ಕುರುಹುಗಳನ್ನು ಆಧರಿಸಿ ಅದನ್ನು ಅಲ್ಲೇ ಮತ್ತೆ ಕಟ್ಟುತ್ತಿರೋದನ್ನು ನೋಡಿದ ನನ್ನ ಮಗ `ಅಪ್ಪ, ಅದುನ್ನ್ಯಾಕೆ ಅಲ್ಲಿ ಕಟ್ಟುತ್ತೀಯ. ಮನೆಗೆ ತಗೊಂಡು ಹೋಗೋಣ. ಈ ಮರೀನ ನಾನು ಸಾಕ್ತೀನಿ’ ಅಂತ ಕಕ್ಕುಲಾತಿ ತೋರಿದ.
ಒಂದು ಪಕ್ಷಿಯ ಆಹಾರ ಕ್ರಮ, ಅದರ ಮರಿಗಳ ಲಾಲನೆ-ಪಾಲನೆಗಳ ವಿಧಾನ ಗೊತ್ತಿಲ್ಲದೆ ಅದನ್ನು ಮನೆಗೊಯ್ಯುವುದು ಅದನ್ನು ಸಾಯಿಸಿದಷ್ಟೇ ಮಹಾಪರಾಧ ಆಗುತ್ತೆ ಅನ್ನೋದನ್ನು ನನ್ನ ನೆಚ್ಚಿನ ಬರಹಗಾರ ಪೂರ್ಣಚಂದ್ರ ತೇಜಸ್ವಿಯವರು ಉಲ್ಲೇಖಿಸಿದ ಒಂದು ಸ್ವ-ಅನುಭವದ ಉದಾಹರಣೆ ಸಹಿತ ಅವನಿಗೆ ವಿವರಿಸಿ ಹೇಳಿದ. ಅದು ಅವನಿಗೆ ಅಷ್ಟು ಅರ್ಥವಾದಂತೆ ಕಾಣಲಿಲ್ಲ. `ಇಲ್ಲಾ, ಅಪ್ಪಾ, ನಾನು ಚೆನ್ನಾಗಿ ನೋಡ್ಕೋತೀನಿ. ಊಟ, ತಿಂಡಿ ಎಲ್ಲಾ ಕೊಡ್ತೀನಿ. ತಗೊಂಡೋಗೋಣ’ ಎಂಬ ಹಠವನ್ನೇ ಮುಂದು ಮಾಡಿದ. ಈಗಾಗಲೇ ನಾನು ಮಾಡಿದ ಯಡವಟ್ಟಿನಿಂದಾಗಿ ಆ ತಾಯಿಹಕ್ಕಿ ವಾಪಾಸ್ಸು ಬರುವ ಸಂಭವವೇ ಇಲ್ಲವಾಗಬಹುದು ಎಂಬ ಚಿಂತೆಯಲ್ಲಿದ್ದ ಅವನಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸುವಲ್ಲಿ ಸಾಕುಸಾಕಾಗಿ ಹೋಯ್ತು. ಕೊನೆಗೂ ಒಪ್ಪಿಕೊಂಡ. ಮತ್ತೆ ಹೊಲದಲ್ಲಿ ಕೆಲಸ ಮುಂದುವರೆಸಲು ಮನಸ್ಸಾಗಲಿಲ್ಲ. ಮಗನ ಜೊತೆ ಮನೆಕಡೆಗೆ ಹೊರಟೆ. ಕೊನೆಬಾರಿಗೆ ಈ ಗೂಡಿನತ್ತ ನೋಡಿದಾಗ ಮರಿ ಹಸಿವಿಗೋ ಅಥವಾ ತನಗಾದ ಆಘಾತಕ್ಕೆ ಬೆದರಿಯೋ ಬಾಯಿ ಕಳೆಯುತ್ತಲೇ ಇತ್ತು. ಅಪಾರ ಖೇದವೆನಿಸಿತು.
ಮಧ್ಯಾಹ್ನದ ಬಿಸಿಲು ಇಳಿಸಿಕೊಂಡು ಸಂಜೆಗೆ ಈರುಳ್ಳಿ ಕೊಯ್ಯಲೆಂದು ಅವ್ವನೊಟ್ಟಿಗೆ ಹೊಲಕ್ಕೆ ಹೋದಾಗ, ಬಲು ಕಾತರದಿಂದ ಗೂಡಿನ ಬಳಿಹೋಗಿ ನೋಡಿದೆ. ಟೊಮ್ಯೊಟೊ ಪೊದೆಯಲ್ಲಿ ಅಡಗಿ ಕೂತಿದ್ದ ಗೂಡನ್ನು ಈಗ ನಾನು ಬಯಲು ಮಾಡಿದ್ದರಿಂದ ಯಾವುದಾದರು ಪ್ರಾಣಿ ಅಥವಾ ಮಾಂಸಹಾರಿ ಹಕ್ಕಿ ಆ ಮರಿಯನ್ನು ತಿಂದು ಹಾಕಿದ್ದರೇನು ಗತಿ? ಎಂಬುದು ನನ್ನ ಆತಂಕವಾಗಿತ್ತು. ಆದರೆ ಅಂತಹ ಯಾವ ಅನಾಹುತವೂ ಘಟಿಸಿರಲಿಲ್ಲ. ಮರಿ ಸುರಕ್ಷಿತವಾಗಿತ್ತು. ಅತ್ತಿತ್ತ ಹೊರಳಾಡುತ್ತಿದ್ದುದರಿಂದ ಅದು ಸತ್ತಿಲ್ಲ ಎನ್ನುವುದು ಖಾತ್ರಿಯಾಯ್ತು. ಅಷ್ಟೇ ಅಲ್ಲ, ಬೆಳಿಗ್ಗೆ ಮಾಡಿದಂತೆ ಬಾಯಿ ತೆರೆದು-ಮುಚ್ಚುವುದು ಮಾಡದೆ ನಿರಾತಂಕವಾಗಿ ಮಲಗಿದಂತೆ ಕಂಡುಬಂತು. ಬಹುಶಃ ತಾಯಿಹಕ್ಕಿ ಬಂದು ಆಹಾರ ಕೊಟ್ಟುಹೋಗಿರಬಹುದು ಅಂತ ನನಗೆ ನಾನೇ ಕಲ್ಪಿಸಿಕೊಂಡೆ. ನನ್ನ ಪಾಪಪ್ರಜ್ಞೆ ಕೊಂಚ ಕಡಿಮೆಯಾದಂತೆನಿಸಿ, ಅವ್ವ ಕೂತಿದ್ದ ಈರುಳ್ಳಿ ಸೊಪ್ಪಿನ ರಾಶಿ ಬಳಿ ಬಂದು ಕುಡುಗೋಲನ್ನು ಅಣಿ ಮಾಡಿಕೊಂಡು ಈರುಳ್ಳಿ ಕೊಯ್ಯತೊಡಗಿದೆ.
ಕಪ್ಪುಮಣ್ಣಿನ ಜಮೀನುಗಳಿಗೆ ಹೇಳಿ ಮಾಡಿಸಿದಂತ ಬೆಳೆಯಾದ ಈ ಈರುಳ್ಳಿ ಬಲು ನಾಜೂಕಿನ ಬೆಳೆ. ಒಂಚೂರು ಮಳೆ ಹೆಚ್ಚಾಗುವಂತಿಲ್ಲ, ಕಡಿಮೆಯಾಗುವಂತಿಲ್ಲ. ಇಬ್ಬನಿ ಬಿದ್ದರೂ ತೊಂಡೆಯನ್ನು ಬಾಡಿಸಿಕೊಂಡು ನೆಲಕಚ್ಚಿ ಬಿಡುತ್ತೆ. ಅದನ್ನು ಜತನ ಮಾಡಿ, ಕೊಯ್ದು ಮಾರಾಟ ಮಾಡುವುದರೊಳಗೆ ನಮ್ಮ ಜನ ಸಾಕುಸಾಕಾಗಿ ಹೋಗಿರುತ್ತಾರೆ. ಆದರು ನಾಲ್ಕು ಕಾಸು ಕಾಣುವಂತೆ ಮಾಡುವ ಬೆಳೆ ಇದಾದ್ದರಿಂದ ಪ್ರತಿ ಸಲ ಕಟಾವಿನ ಸಮಯದಲ್ಲಿ `ಥೂ, ಇವನೌನು, ಈ ನೀರುಳ್ಳಿ ಸವಾಸ ಸಾಕಪ್ಪ. ಇದುರ ಬದ್ಲು ಮ್ಯೆಕ್ಕೆಜ್ವಾಳನಾರು ಹಾಕಿದ್ರೆ, ಅರಾಮಾಗಿ ಫಸಲು ತಕಂಬೌದು. ಬೀಜ ಬಿತ್ತಿ ಒಂದ್ಸಾರಿ ಎಡೆಕುಂಟೆ ಹೊಡ್ದು, ಗೊಬ್ಬುರ ಚ್ಯೆಲ್ಲಿದುವಿ ಅಂದ್ರೆ ಮುಗೀತು. ಆಮ್ಯಾಕೆ ತೆನೆ ಮುರ್ಕಂಡು ಮಿಷಿನ್ನಿಗೆ ಹಾಕಿಸಿ ಚೀಲ ತುಂಬುಸೋದು ಅಷ್ಟೇಯ. ಈ ದರಿದ್ರುದ ನೀರುಳ್ಳಿ ಬೀಜ ಚ್ಯೆಲ್ಲಿದಾಗಿಂದ ಬೆಂಗ್ಳೂರು ಮಾರ್ಕೆಟ್ಟಿಗೊ, ದಲ್ಲಾಳಿ ಸಾಬಣ್ಣುಂಗೊ ಸಾಗಾಕೊವರುಗೂ ನಾವು ಹೊಲುದಾಗೇ ಬಿದ್ದು ಸಾಯಬೇಕು. ಕೊಯ್ಸಿದ ಮ್ಯಾಲೆ, ರೇಟು ಇಲ್ಲ ಅಂತ ಜ್ಯಾಸ್ತಿ ದಿನ ಇಟ್ಕಣಂಗೂ ಇರಲ್ಲ. ಮಳೆ ಬಂದ್ರೆ ನೆನದು, ತುಂಬಿದ ಚ್ಯೀಲದೊಳಿಗೇ ಕ್ಯೆಟ್ಟು ಹೋಯ್ತವೆ. ಕೊಯ್ಯೋರಿಗೂ, ಅಡುಕೋರಿಗು ಕೂಲಿ ಕೊಟ್ಟುಕೊಟ್ಟು ಸಣ್ಣಗಾಗ್ತೀವಿ. ರೇಟೂ ಅಷ್ಟಕ್ಕಷ್ಟೆ’ ಅಂತ ಮೂದಲಿಸುವ ಜನ ಬಿತ್ತೊ ಕಾಲ ಬಂದಾಗ ಎರಡನೇ ಆಲೋಚನೆಗೂ ಅವಕಾಶ ಇಲ್ಲದೆ ಈರುಳ್ಳಿ ಬೀಜ ಚೆಲ್ಲಿಬಿಡ್ತಾರೆ. ಯಾಕಂದ್ರೆ ಸರಿಯಾದ ಬೆಳೆ ಬಂದು ರೇಟು ಸಿಕ್ತು ಅಂದ್ರೆ, ನಮ್ಮ ಜನ ಒಂದಷ್ಟು ಕಾಸು ಅಂತ ನೋಡೋದು ಇದೇ ಈರುಳ್ಳಿಯಿಂದ.
ಹಣದ ಹೊರತಾಗಿಯೂ ಜನ ಈರುಳ್ಳಿ ಬೆಳೆಯನ್ನ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಕಾರಣವಿದೆ. ಏನಂದ್ರೆ, ಈರುಳ್ಳಿ ಮಿಶ್ರಬೆಳೆಗೆ ಅವಕಾಶ ಮಾಡಿಕೊಡುತ್ತೆ. ಜೊತೆಗೆ ಮೂರ್ನಾಲ್ಕು ತಿಂಗಳಿಗೆ ಈರುಳ್ಳಿ ಕಟಾವಿಗೆ ಬರೋದ್ರಿಂದ ಇದೇ ಋತುವಿನಲ್ಲಿ ಮತ್ತೊಂದು ಬೆಳೆಯನ್ನೂ ತೆಗೆದುಕೊಳ್ಳಬಹುದು. ಇಷ್ಟೆಲ್ಲ ಅನುಕೂಲ ಇದ್ದಾಗ್ಯೂ ಸೂಕ್ತ ದಾಸ್ತಾನು ಸೌಲಭ್ಯಗಳು ಇಲ್ಲದೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ನಮ್ಮ ಜನ ಈರುಳ್ಳಿಯಲ್ಲಿ ಕೈಸುಟ್ಟುಕೊಳ್ಳುತ್ತಲೇ ಇದ್ದಾರೆ. ಬೆಂಗಳೂರಿನಲ್ಲಿ ಕೂತ ನಮ್ಮಂತವರು ಕೇಜಿಗೆ ಮೂವತ್ತು ನಲ್ವತ್ತು ರೂಪಾಯಿ ತೆತ್ತು ಈರುಳ್ಳಿ ಕೊಳ್ಳುವ ದುಬಾರಿ ವಾತಾವರಣ ಇದ್ದಾಗ್ಯೂ ರೈತರು ಕೇವಲ ಎಂಟೊಂಬತ್ತು ರೂಪಾಯಿ ಕೇಜಿಯಂತೆ ತಮ್ಮ ಫಸಲನ್ನು ಮಾರಾಟ ಮಾಡಿ ನಿಟ್ಟುಸಿರು ಬಿಡಬೇಕಾಗಿದೆ.
ಅವ್ವನೊಟ್ಟಿಗೆ ಇದೆಲ್ಲವನ್ನು ಚರ್ಚಿಸುತ್ತಲೇ ಈರುಳ್ಳಿ ಕೊಯ್ಯುವ ನನ್ನ ಕಾಯಕವೂ ಸಾಗಿತ್ತು. ಆಗ ಅವ್ವ ಈ ಆರ್ಥಿಕ ಆಯಾಮಕ್ಕೆ ತನ್ನದೇ ಮಿತಿಯ ರಾಜಕೀಯ ಪ್ರಜ್ಞೆಯನ್ನು ಬೆರೆಸಿ ಷರಾ ಬರೆದಂತೆ ಒಂದು ಮಾತು ನುಡಿದಳು, `ಈ ಮೋದಿ ಬಾಳ ಸುಮಾರದಾನೆ. ಮೋದಿ ಬಂದ್ರೆ ರೈತ್ರಿಗೆ ಅನುಕೂಲ ಆಗ್ತತೆ ಅಂದಿದ್ದ್ರು. ಆದ್ರೆ ಇಷ್ಟು ಬ್ಯೆಳೆ ಬೆಳುದ್ರೂ ಲಾಭ ಮಾತ್ರ ಕೈಗತ್ತುಲಿಲ್ಲ. ಅದ್ಯೇನೊ ಹೊರುದೇಸುದಿಂದ ನೀರುಳ್ಳಿ ತರಿಸ್ಕ್ಯಂಡಾನೆ, ಅದುಕ್ಕೇ ರೇಟು ಬಿದ್ದೋಗಿದೆ ಅಂತ ಮಾತಾಡ್ತಾವ್ರೆ. ಅಲ್ಲ ನಮ್ಮ ದ್ಯೇಸುದ ರೈತ್ರುನ್ನ ಕಣ್ಣೀರಗೆ ಕೈತೊಳೆಯಂಗೆ ಮಾಡಿ, ಬ್ಯಾರೆ ದ್ಯೇಸುದೋರ ಬೆಳೆ ಖರೀದಿ ಮಾಡಿದ್ರೆ ಏನ್ ಚೆಂದಾ.’
ಈಗ್ಗೆ ನಾಲ್ಕೂವರೆ ವರ್ಷದ ಹಿಂದೆ ಇಂತದ್ದೇ ಒಂದು ಸಂದರ್ಭದಲ್ಲಿ, `ಮೋದಿ ಗ್ಯೆದ್ದು ಬಂದ್ರೆ ರೈತ್ರಿಗೆ ಅನುಕೂಲ ಆಗ್ತದಂತೆ’ ಅಂದಿದ್ದ ಅವ್ವನ ಮಾತಿಗೆ ನಕ್ಕು ಸುಮ್ಮನಾಗಿದ್ದಂತೆಯೇ ಆಕೆಯ ಈಗಿನ ಮಾತಿಗೂ ನಕ್ಕು ಸುಮ್ಮನಾದೆ. ಕಾಲ ಬದಲಾಗುತ್ತಿದೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...