Homeರಾಜಕೀಯಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

ಜಯಮಾಲ ಮೇಡಂಗೆ ಮಂತ್ರಿಗಿರಿ ಒಲಿದ ಮರ್ಮವೇನು?

- Advertisement -
- Advertisement -

ಸಿಕ್ಕಾಪಟ್ಟೆ ಸರ್ಕಸ್ ತರುವಾಯ ಸಮ್ಮಿಶ್ರ ಸರ್ಕಾರದ ಅರೆಬೆಂದ ಸಚಿವ ಸಂಪುಟ ಅಣಿಯಾಗಿದೆ. ಸಚಿವಗಿರಿ ಸಿಗದೆ ಬಂಡಾಯದ ಬಾವುಟ ಹಾರಾಡಿಸಿಕೊಂಡು ದಿಲ್ಲಿಗೂ, ಬೆಂಗ್ಳೂರಿಗೂ ಅಲೆದಾಡಿದ ಪುಣ್ಯಾತ್ಮರೂ ದಿನದಿಂದ ದಿನಕ್ಕೆ ತಣ್ಣಗಾಗುತ್ತಿದ್ದಾರೆ. ಇನ್ನು ಸಿಕ್ಕ ಖಾತೆಗಳ ಬಗ್ಗೆ ಕ್ಯಾತೆ ತೆಗೆದವರೂ, ಪಾಲಿಗೆ ಬಂದ ಪಂಚಾಮೃತದ ಮುಂದೆ ಚಕ್ಕಮಕ್ಕಳ ಹಾಕಿ ಕೂತು, ಕೈ-ಬಾಯಿ ಅಣಿಯಾಗಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಕುಮಾರಣ್ಣನ ಸಂಪುಟದ ರೈಲು ನಿಧಾನಕ್ಕೆ ಹಳಿಗಳಿಗೆ ಕುದುರಿಕೊಳ್ಳಲು ಶುರುವಾಗಿದೆ. ಒಂದು ಸರ್ಕಾರ ಅಂತ ರಚನೆಯಾದಾಗ, ಅದರಲ್ಲೂ ಬಣ್ಣಬಣ್ಣದ ಕೌದಿಯಂತಹ ಸಮ್ಮಿಶ್ರ ಸರ್ಕಾರ ಅಂದಮೇಲೆ ಇಂತದ್ದೆಲ್ಲ ಮಾಮೂಲಿ. ಈ ಸಲದ ಸಂಪುಟ ಕಸರತ್ತಿನಲ್ಲಿ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿಯಂತಹ ಘಟಾನುಘಟಿಗಳಿಗೆ ಮಂತ್ರಿಗಿರಿ ಮಿಸ್ ಆಗಿರೋದು ಎಷ್ಟು ಶಾಕ್‍ನ ಸಂಗತಿಯೋ, ಗಿರಿಕನ್ಯೆ ಜಯಮಾಲಾ ಮೇಡಂಗೆ ಮಂತ್ರಿಗಿರಿ ಸಿಕ್ಕಿರೋದೂ ಅಷ್ಟೇ ದಿಗ್ಬ್ರಾಂತಿಯ ವಿಷಯವಾಗಿದೆ. ಯಾಕೆಂದರೆ ಯಾರೊಬ್ಬರೂ ಜಯಮಾಲಾ ಮಿನಿಸ್ಟರ್ ಆಗಲಿದ್ದಾರೆ ಅಂತ ಎಣಿಸಿರಲಿಲ್ಲ. ಮಹಿಳಾ ಕೋಟಾದ ಪ್ರಶ್ನೆ ಬಂದಾಗಲೂ ಡಿಕೇಶಿ ಬಳಗದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮರಾಠಾ ಬ್ರ್ಯಾಂಡಿನ ಖಾನಾಪುರದ ಅಂಜಲಿ ನಿಂಬಾಳ್ಕರ್ ನಡುವೆಯೇ ಹಗ್ಗಜಗ್ಗಾಟ ನಡೆದಿತ್ತು. ಪಾಪದ ಮೋಟಮ್ಮ ನನ್ನನ್ನ ಮಂತ್ರಿ ಮಾಡಿ ಅಂತ ಕೇಳಿದಾಗಲೂ `ಏಯ್ ಸುಮ್ನೇ ಇರಮ್ಮ, ಗೆದ್ದ ಶಾಸಕರನ್ನೇ ಬಿಜೆಪಿಯವರ ಬಕಾಸುರ ಬಾಯಿಂದ ಕಾಪಾಡಿಕೊಳ್ಳಲು ಹೆಣಗಾಡ್ತಿದೀವಿ. ಹಾಗಾಗಿ ಅವ್ರನ್ನ ತೃಪ್ತಿ ಪಡಿಸ್ಲಿಕ್ಕೇ ಸಾಕುಸಾಕಾಗಿ ಹೋಗ್ತಿದೆ. ಅದಕ್ಕೋಸ್ಕರ ಈ ಸಲ ಎಂಎಲ್‍ಸಿಗಳಿಗೆ ಮಂತ್ರಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ನಂತ್ರ ನೋಡೋಣ’ ಅನ್ನೋ ಉತ್ತರ ಬಿಸಾಕಿದ ದಿಲ್ಲಿ ದಲ್ಲಾಳಿಗಳು ಆಯಮ್ಮನನ್ನು ಗದರಿಕೊಂಡಿದ್ದರಂತೆ.
ಆದರೆ ಕೊನೇ ಘಳಿಗೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನು ಹಿಂದಿಕ್ಕಿದ್ದಲ್ಲದೇ, ಎಂಎಲ್‍ಸಿಗಳಿಗೆ ಮಂತ್ರಿಭಾಗ್ಯ ಇಲ್ಲ ಎಂಬ ಅಡ್ಡಗೋಡೆಯನ್ನೂ ಜಿಗಿದುಬಂದ ಜಯಮಾಲ ಮೇಡಂ ಮಂತ್ರಿಣಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮಂತ್ರಿಗಿರಿ ಮಿಸ್ ಮಾಡಿಕೊಂಡ `ಪುಣ್ಯಾತ್ಮ’ರು ಅಂಟಿಸುವ `ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷಕ್ಕೆ ದುಡಿದವರಿಗೆ ಸ್ಥಾನ ಕೊಡದೆ, ಬಕೇಟು ಹಿಡಿದ ಲಾಬಿ ಗಿರಾಕಿಗಳನ್ನು ಮಂತ್ರಿ ಮಾಡಿದ್ದಾರೆ. ನನ್ನ ಬೆಂಬಲಿಗರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರ್ತೀನಿ’ ಅನ್ನೋ ಠುಸ್ ಪಟಾಕಿಗೆ ಪ್ರತಿಯಾಗಿ ಮಂತ್ರಿಗಿರಿ ಸಿಕ್ಕ `ಮಹಾತ್ಮ’ರು `ನನ್ನ ನಿಷ್ಠೆ ನೋಡಿ ಪಕ್ಷ ಈ ಸ್ಥಾನ ನೀಡಿದೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿದವನೇ/ಳೇ ಅಲ್ಲ. ನನ್ನ ಗೆಲ್ಲಿಸಿದ ಜನರ ಸೇವೆಗೆ ಇದನ್ನು ಸದುಪಯೋಗ ಮಾಡಿಕೊಳ್ತೀನಿ’ ಅನ್ನೋ ಢಂಢಂ ಪಟಾಕಿ ಅಂಟಿಸೋದು ಸಹಜ. ಜಮಯಾಲ ಮೇಡಂ ಕೂಡಾ ಅಂತದ್ದೇ ಒಂದು ಢಂಢಂ ಪಟಾಕಿ ಅಂಟಿಸಿದ್ದಾರಾದರು ಅವರ ಮಂತ್ರಿಗಿರಿಯ ಹಿಂದೆ ಒಂದು ಪೊಲಿಟಿಕಲ್ ಲಾಬಿ ಇದ್ದೇ ಇದೆ ಅನ್ನೋದು ಮಾತ್ರ ಸುಳ್ಳಲ್ಲ.
ಬಣ್ಣದ ಲೋಕದಿಂದ ಬಂದ ಬೇರೆಬೇರೆ ಪಾರ್ಟ್‍ಟೈಂ ರಾಜಕಾರಣಿಗಳಿಗೆ ಹೋಲಿಸಿದರೆ ಜಯಮಾಲ ಮೇಡಮ್ಮು ಹೆಚ್ಚು ದಕ್ಷ, ದಿಟ್ಟ ರಾಜಕಾರಣಿ ಅನ್ನೋದ್ರಲ್ಲಿ ಸಂಶಯವಿಲ್ಲ. ಆದರೆ, ಇರೋ ಒಂದು ರೊಟ್ಟಿಯನ್ನೇ ಹರಿದು, ಹಸಿವಿನಿಂದ ರಂಪಾಟ ಮಾಡುತ್ತಿರುವ ತನ್ನ ಸಂತಾನ ಸೈನ್ಯಕ್ಕೆ ಹಂಚಬೇಕಾದ ನಿಕೃಷ್ಟ ಬರಗಾಲಕ್ಕೆ ಸಿಲುಕಿರುವ ಕಾಂಗ್ರೆಸ್ ಅನ್ನೋ ಶತಮಾನದ ಪಾರ್ಟಿ ಯಾವ ಲಾಬಿಯೂ ಇಲ್ಲದೆ, ದಕ್ಷತೆಯ ಮೈಲೇಜಿನ ಮೇಲೆ ಜಯಮಾಲರನ್ನು ಮಂತ್ರಿ ಮಾಡುತ್ತೆ ಅನ್ನೋದನ್ನು ನಂಬಲು ಕಷ್ಟ; ಅದೂ, ಮ್ಯಾನ್ ಆಫ್ ದಿ ಮ್ಯಾಚ್ ಡಿಕೇಶಿ ಬೆಟಾಲಿಯನ್ನಿನ ವಿಕೆಟನ್ನೇ ರನ್‍ಔಟ್ ಮಾಡಿಸಿ! ಜಯಮಾಲರನ್ನು ಮಂತ್ರಿ ಮಾಡಲೇಬೇಕು ಅಂತ ಪಟ್ಟು ಹಿಡಿದು, ಲಾಬಿ ಮಾಡಿದ್ದು ಮಾಜಿ ಸಿಎಂ ಸಿದ್ರಾಮಯ್ಯನವರು ಅನ್ನೋ ಮಾತುಗಳು ಕಾಂಗ್ರೆಸ್ ಪಡಸಾಲೆಯಿಂದಲೇ ಕೇಳಿಬರುತ್ತಿವೆ. ಜಯಮಾಲ ಮೊದಲಿನಿಂದಲೂ ಸಿದ್ರಾಮಯ್ಯನವರ ಅತ್ಯಾಪ್ತ ವಲಯದ ರಾಜಕೀಯ ಪಟು. ಸಿದ್ದು ಸಿಎಂ ಆಗಿದ್ದಾಗ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು 16 ಜನರ ಒಂದು ಸಮಿತಿ ರಚಿಸಿದ್ದರು. ಆ ಸಮಿತಿಗೆ ಅಧ್ಯಕ್ಷೆಯನ್ನಾಗಿ ಸಿದ್ದು ಆಯ್ಕೆ ಮಾಡಿದ್ದು ಇದೇ ಜಯಮಾಲ ಮೇಡಂರನ್ನು. ಇನ್ನು ಮೊನ್ನೆಯ ಎಲೆಕ್ಷನ್ ವೇಳೆ, ಸಿದ್ದುವಿಗೆ ಚಾಮುಂಡೇಶ್ವರಿಯಲ್ಲಿ ಕಂಟಕವಿರುವ ಮುನ್ಸೂಚನೆ ಸಿಕ್ಕಾಗ ಜಯಮಾಲ ಮೇಡಂ, ಒಂದು ಕಾಲದ ಬಿಜೆಪಿ ಒಡನಾಡಿ ಮುಖ್ಯಮಂತ್ರಿ ಚಂದ್ರುರಂತಹ ಸಹೋದ್ಯೋಗಿಯನ್ನೇ ಕರಕೊಂಡು ಬಂದು ಸಿದ್ದು ಪರ ಅದ್ದೂರಿ ಪ್ರಚಾರ ಮಾಡಿದ್ದರು. ಅಷ್ಟರಮಟ್ಟಿಗೆ ಅವರಿಬ್ಬರ ನಡುವೆ ಆಪ್ತತೆ ಇದೆ, ಅಭಿಮಾನವಿದೆ. ಸಿದ್ದು, ಜಯಮಾಲರ ಮೇಲಿಟ್ಟಿರುವ ಆ ಅಭಿಮಾನವೇ ಇವತ್ತು ಅವರನ್ನು ಮಂತ್ರಿ ಮಾಡಿದೆ. ಅಂದಹಾಗೆ, ಸಿದ್ದು ಬಗ್ಗೆ ಜಯಮಾಲ ಮೇಡಂಗೆ ಅಭಿಮಾನ ತುಂಬಿ ಬಂದು, ಅಂತರಾಳದಿಂದ ಹೆಮ್ಮೆ ಎನಿಸಿದಾಗ ಏನಂತ ಹೊಗಳ್ತಾರೆ ಗೊತ್ತುಂಟಾ, `ನಂ ಸಿದ್ರಾಮಯ್ಯನೋರು ಗಂಡು ಹುಲಿ ಕಣ್ರೀ!’.
ಸಂಪುಟ ರಚನೆಯಲ್ಲಿ ಸಿದ್ರಾಮಯ್ಯರನ್ನು ಹೈಕಮಾಂಡ್ ಮೂಲೆಗುಂಪು ಮಾಡಿದೆ, ಅವರ ಆಪ್ತರಿಗೆ ಸಚಿವಗಿರಿ ತಪ್ಪಿಸಲಾಗಿದೆ ಅಂತ ಬೊಬ್ಬಿಡುವ ಖಾಲಿ ಡಬ್ಬಗಳಿಗೆ ಜಯಮಾಲ ಆಯ್ಕೆಯೇ ಒಂದು ದೊಡ್ಡ ಉತ್ತರ. ಕಾಂಗ್ರೆಸ್‍ನೊಳಗೆ ಸಿದ್ದು ಈಗಲೂ ಡಿಗ್ನಿಫೈಡ್ ರೋಲ್ ನಿಭಾಯಿಸುತ್ತಿದ್ದಾರೆ ಅನ್ನೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‍ರನ್ನ ಓವರ್‍ಟೇಕ್ ಮಾಡಿ ಜಯಮಾಲ ಮಂತ್ರಿಯಾಗಿರೋದು ಸಾಕ್ಷಿ. ಇದೆಲ್ಲ ಆಯ್ಕೆ ಹಿಂದಿನ ಕಸರತ್ತಾಯ್ತು. ಇನ್ನು ದಕ್ಷತೆ ವಿಚಾರಕ್ಕೆ ಬಂದರೆ, ಈ ಸಮ್ಮಿಶ್ರ ಸಂಪುಟದಲ್ಲಿರುವ ಕೆಲವೇ ಕೆಲವು ಅರ್ಹ ಮಂತ್ರಿಗಳಲ್ಲಿ ಜಯಮಾಲ ಕೂಡಾ ಒಬ್ಬರು ಅನ್ನೋದ್ರಲ್ಲಿ ತಪ್ಪಿಲ್ಲ. ಸಿದ್ದು ಲಾಬಿಯಿಂದ ಸಿಕ್ಕಿದೆಯೋ, ಬಿಲ್ಲವ ಕೋಟಾದಡಿ ದಕ್ಕಿದೆಯೋ, ಒಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಬ್ಬ ಸಮರ್ಥ ಸಾರಥಿಯೇ ಸಿಕ್ಕಂತಾಗಿದೆ. ಯಾಕೆಂದರೆ ಜಯಮಾಲ ಗ್ರಾಮೀಣ ಮಹಿಳೆಯರ ಪುನರ್ವಸತಿ ವಿಷಯದ ಮೇಲೆ ಅಧ್ಯಯನ ಮಾಡಿಯೇ ಡಾಕ್ಟರೇಟ್ ಪದವಿ ಪಡೆದುಕೊಂಡಂತವರು. ಮೊದಲೇ ಹೇಳಿದಂತೆ ಕಳೆದ ಸರ್ಕಾರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ ಸಮಿತಿಯ ಅಧ್ಯಕ್ಷೆಯಾಗಿಯೂ ಮಹಿಳಾ ಸವಾಲುಗಳನ್ನು ಕಂಡ ಅನುಭವವಿದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಕನ್ನಡ ಸಿನಿರಂಗದ ಬಿಕ್ಕಟ್ಟುಗಳನ್ನು ಬಗೆಹರಿಸಿದ ಗಟ್ಟಿತನವಿರುವ ಜಯಮಾಲರಿಗೆ ಮಂತ್ರಿಯಾಗುವ ಸಾಮಥ್ರ್ಯ ಉಳಿದ ಬಣ್ಣದ ಮಂದಿಗಿಂತ ಹೆಚ್ಚಿದೆ ಅನ್ನೋದ್ರಲ್ಲಿ ತಪ್ಪಿಲ್ಲ. ಅಂದಹಾಗೆ, 1993ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಘಳಿಗೆಯಿಂದ ಇಲ್ಲಿಯವರೆಗು ಕಾಂಗ್ರೆಸ್‍ನಲ್ಲೇ ಗುರುತಿಸಿಕೊಂಡು ಬಂದಿದ್ದಾರೆ. ಇತರರಂತೆ ಪಕ್ಷಾಂತರ ಮಾಡಿದವರಲ್ಲ.
ತನ್ನ 13ನೇ ವಯಸ್ಸಿಗೇ ಬಣ್ಣ ಹಚ್ಚಿ, 16ನೇ ವಯಸ್ಸಿಗೆ ಡಾ.ರಾಜ್ ಎದುರು ಪ್ರೇಮದ ಕಾಣಿಕೆಯಲ್ಲಿ ನಾಯಕಿಯಾಗಿ ಮಿಂಚಿದ ಈ ಗಿರಿಕನ್ಯೆ ತನ್ನ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡುಬಂದಂತವರು. ಪ್ರತಿಭಾವಂತ ನಟನಾಗಿದ್ದರೂ, ತನ್ನ ಚಟಗಳಿಗೆ ಮಿತಿ ಹೇರಿಕೊಳ್ಳದೆ ಮರೆಯಾಗಿ ಹೋದ ಟೈಗರ್ ಪ್ರಭಾಕರ್ ಜೊತೆ ಜಯಮಾಲ ಇಟ್ಟ ಮೊದಲ ದಾಂಪತ್ಯ ದೀರ್ಘಕಾಲ ಉಳಿಯಲಿಲ್ಲ. ಯಾವ ಮುಲಾಜುಗಳಿಗೂ ಕಟ್ಟುಬೀಳದೆ ಡೈವೋರ್ಸ್ ಪಡೆದು ಆ ದಾಂಪತ್ಯದಿಂದ ಹೊರಬಂದ ಅವರು ನಂತರ ಛಾಯಾಗ್ರಾಹಕ ರಾಮಚಂದ್ರರವರನ್ನು ಮದುವೆಯಾಗಿ ಮತ್ತೊಮ್ಮೆ ದಿಟ್ಟತೆ ತೋರಿದ್ದರು. ಮಹಿಳೆಯರಿಗೆ ಪ್ರವೇಶವಿಲ್ಲದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ವಿವಾದ ಭುಗಿಲೆದ್ದಾಗಲೂ ಜಯಮಾಲ ಬಲು ದಿಟ್ಟತೆಯಿಂದಲೇ ಎದುರಿಸಿದ್ದರು. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ಮಿಂಚುತ್ತಲೇ `ತಾಯಿ ಸಾಹೇಬ’ದಂತಹ ರಾಷ್ಟ್ರಪ್ರಶಸ್ತಿ ವಿಜೇತ ಕಲಾತ್ಮಕ ಚಿತ್ರವನ್ನೂ ನಿರ್ಮಿಸಿ ಸೈ ಅನ್ನಿಸಿಕೊಂಡಿದ್ದ ಅವರು ಮಹಿಳಾ ಕಲ್ಯಾಣ ಹಾಗೂ ಕನ್ನಡ, ಸಂಸ್ಕøತಿ ಇಲಾಖೆಗಳಿಗೆ ನ್ಯಾಯ ಸಲ್ಲಿಸುತ್ತಾರೆಂಬ ವಿಶ್ವಾಸವಿದೆ. ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...