ಪಂಜಾಬ್‌ನ ಜಲಂಧರ್‌ನಲ್ಲಿ ಕಳೆದ ಶುಕ್ರವಾರ (ಮಾ.20), ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕೂದಲು ಹಿಡಿದು ಎಳೆದಾಡಿದ್ದಾರೆ ಎಂದು ‘ಸಿಯಾಸಾಟ್.ಕಾಮ್’ ವರದಿ ಮಾಡಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ತನ್ನ ಮೇಲೆ ಹಲ್ಲೆ ನಡೆಸಿದಾಗ, ನನ್ನ ಮಗನನ್ನು ಹಲ್ಲೆಯಿಂದ ರಕ್ಷಿಸಲು ಪ್ರಯತ್ನಿಸುತ್ತಿದ್ದೆ ಎಂದು ಸಂತ್ರಸ್ತೆ ಮಮತಾ ಭಗತ್ ಹೇಳಿಕೊಂಡಿದ್ದಾರೆ. ಅವರು ಮಗನನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುವಾಗ ತೀವ್ರ ಬಲಪ್ರಯೋಗ ಮಾಡಿ ಕ್ರೌರ್ಯದಿಂದ ವರ್ತಿಸಿದ್ದಾರೆ ಎಂದು ವರದಿಯಾಗಿದೆ.
“ಎಎಸ್‌ಐ ಎಲ್ಲಾ ಮಿತಿಗಳನ್ನು ಮೀರಿದ್ದರು. ಅವರು ಬಂದಾಗ ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಆ ಸಮಯದಲ್ಲಿ ನನ್ನ ಪುತ್ರರು ನಿದ್ರಿಸುತ್ತಿದ್ದರು. ನಾನು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಬದಲಿಗೆ ಅವರು ನನ್ನ ಕೂದಲನ್ನು ಹಿಡಿದು ನನ್ನ ಮಕ್ಕಳೊಂದಿಗೆ ಜಗಳವಾಡಿದರು” ಎಂದು ಮಮತಾ ವರದಿಗಾರರಿಗೆ ತಿಳಿಸಿದರು.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ನಡು ರಸ್ತೆಯಲ್ಲಿ ಅರ್ಧ ಬಟ್ಟೆ ಧರಿಸಿದ ಯುವಕರಿಗೆ ಪೊಲೀಸ್ ಅಧಿಕಾರಿಗಳು ಹೊಡೆಯುವುದನ್ನು ಕಾಣಬಹುದು. ಮಮತಾ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಅವರ ಹಣೆಯ ಸುತ್ತಲೂ ಬ್ಯಾಂಡೇಜ್ ಹಾಕಿರುವುದು ಕಂಡುಬಂದಿದೆ.
ದಾಳಿಗೆ ಕಾರಣರಾದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಲಂಧರ್ ಪಶ್ಚಿಮದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಾಯಕರು ಒತ್ತಾಯಿಸಿದಾಗ ವಿಷಯ ಉಲ್ಬಣಗೊಂಡಿತು.
ಭಾರ್ಗೋ ಕ್ಯಾಂಪ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದವರಲ್ಲಿ ಮಾಜಿ ಶಾಸಕ ಶೀತಲ್ ಅಂಗುರಲ್, ಕೌನ್ಸಿಲರ್ ತರ್ಸೆಮ್ ಲಖೋತ್ರಾ ಮತ್ತು ಮಾಜಿ ಕೌನ್ಸಿಲರ್ ವಿಪನ್ ಕುಮಾರ್ ಸೇರಿದ್ದಾರೆ. ನಂತರ ಪ್ರತಿಭಟನಾಕಾರರು ಎಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಂತ್ರಸ್ತೆಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದರು.
“ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೆ ನಾವು ಕದಲುವುದಿಲ್ಲ. ಸಂಬಂಧಪಟ್ಟ ಎಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ನಮಗೆ ತಿಳಿಸಲಾಗಿದೆ. ನಾವು ನಾಳೆ ರಾಜ್ಯ ಮಹಿಳಾ ಮತ್ತು ಎಸ್‌ಸಿ ಆಯೋಗಕ್ಕೂ ಈ ವಿಷಯವನ್ನು ಕೊಂಡೊಯ್ಯುತ್ತೇವೆ” ಎಂದು ಶೀತಲ್ ಅಂಗುರಲ್ ಹೇಳಿದರು.


