Homeಅಂಕಣಗಳುನೂರರ ನೋಟ | ವಂಚಿತ ಸಮುದಾಯಗಳ ಕಡೆಗಣನೆ ನಿಲ್ಲಲಿ

ನೂರರ ನೋಟ | ವಂಚಿತ ಸಮುದಾಯಗಳ ಕಡೆಗಣನೆ ನಿಲ್ಲಲಿ

- Advertisement -
- Advertisement -
  • ಎಚ್.ಎಸ್.ದೊರೆಸ್ವಾಮಿ |

27.05.2018ರ ಪ್ರಜಾವಾಣಿ ಪತ್ರಿಕೆಯಲ್ಲಿ ಒಂದು ಜಾಹೀರಾತು ಅಚ್ಚಾಗಿದೆ. ಮಾದಿಗ ಜನಾಂಗದವರು ಕಾಂಗ್ರೆಸ್ಸನ್ನು ಚಿಂದಿ ಮಾಡಿದೆವು ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ಜಾಹೀರಾತು ಅದು.

ಮಾದಿಗರಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕೆಂದು ನಾಲ್ಕಾರು ವರ್ಷಗಳಿಂದ ಕರ್ನಾಟಕದಲ್ಲಿ ಚಳವಳಿ ನಡೆಯುತ್ತಿದೆ. ನ್ಯಾಯಮೂರ್ತಿ ಸದಾಶಿವ ಅವರು ಕೂಡ ತಮ್ಮ ವರದಿಯಲ್ಲಿ ಮಾದಿಗರಿಗೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಹೀಗಿದ್ದೂ ಸಿದ್ದರಾಮಯ್ಯನವರ ಸರ್ಕಾರ ಮಾದಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿಲ್ಲ. ಇತ್ತೀಚೆಗೆ ವಿಭಜನೆಗೊಂಡ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತರ ಹಣೆಪಟ್ಟಿಗೆ ಶಿಫಾರಸ್ಸು ಮಾಡಿ, ಆ ಮೂಲಕ ಅವರಿಗೆ ಮೀಸಲಾತಿ ಸೌಲಭ್ಯಕ್ಕೂ ಅವಕಾಶ ಕಲ್ಪಿಸಿದÀ ಸರ್ಕಾರ ಮಾದಿಗ ಸಮುದಾಯದ ಬಹಳ ದಿನಗಳ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಮುನ್ನವೇ ಮಾದಿಗ ಮುಖಂಡರು ಕಾಂಗ್ರೆಸ್ಸಿಗೆ ಈ ಬಾರಿ ನಾವು ಮತ ಹಾಕುವುದಿಲ್ಲವೆಂದು ಘೋಷಣೆ ಕೂಡ ಮಾಡಿದ್ದರು. ನಾನಾಕಾರಣಗಳಿಂದ ಈ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ 78 ಉಮೇದುವಾರರು ಮಾತ್ರ ಗೆದ್ದು ಬಂದರು. ಭಾಜಪ, ಕಾಂಗ್ರೆಸ್, ಜಾತ್ಯತೀತ ಜನತಾದಳದ ಯಾರಿಗೂ ಬಹುಮತ ದೊರಕಲಿಲ್ಲ. ಈಗ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಸಂಯುಕ್ತ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಲಿ ಸರ್ಕಾರ ಕೂಡಲೇ ತಡಮಾಡದೆ ವಂಚಿತ ಮಾದಿಗ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಘೋಷಣೆ ಮಾಡಬೇಕು ಹಾಗೂ ಆ ಸಮುದಾಯದ ಆದರಕ್ಕೆ ಪಾತ್ರರಾಗಬೇಕು.

ಹಾಗೆಯೇ ಮಾದಿಗ ಸಮುದಾಯದವರು ಒಂದು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾರಿಗೋ ಅಪಶಕುನ ಮಾಡಲು ಹೋಗಿ ತನ್ನ ಮೂಗನ್ನೇ ಕೊಯ್ದುಕೊಂಡಂತಾಗಬಾರದು. ಒಳಮೀಸಲಾತಿ ಒದಗಿಸಲಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್‍ಅನ್ನು ಚಿಂದಿ ಮಾಡುವ ಆವೇಶದಲ್ಲಿ, ಸಂವಿಧಾನವನ್ನೇ ಬುಡಮೇಲು ಮಾಡುವ ಹಾಗೂ ಮೀಸಲಾತಿ ವ್ಯವಸ್ಥೆಯನ್ನೇ ನಾಶ ಮಾಡಲು ಹವಣಿಸುತ್ತಿರುವ ಶಕ್ತಿಗಳ ಕಡೆಗೆ ವಾಲುವಂತಾಗಬಾರದು. ಹಾಗಾದರೆ ನಮ್ಮ ಕಾಲನ್ನು ನಾವೇ ಕತ್ತರಿಸಿಕೊಂಡಂತೆ.

ಮಾದಿಗ ಸಮುದಾಯದ ಜಾಹೀರಾತನ್ನು ಮತ್ತೊಂದು ದೃಷ್ಟಿಯಿಂದ ಗಮನಿಸಿ ಅರ್ಥಮಾಡಿಕೊಳ್ಳಬೇಕಾದ ಜರೂರಿದೆ. ಸ್ವತಂತ್ರ ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಕುರಿತು ನಾವೆಲ್ಲ ಚಿಂತನೆ ಮಾಡಬೇಕು. ಕೆಂಗಲ್ ಹನುಮಂತಯ್ಯನವರು ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಸಮಯದಲ್ಲಿ ವಿಧಾನಸಭೆಯ ಚುನಾವಣೆ ಬಂತು. ಕಾಂಗ್ರೆಸ್ ಉಮೇದುವಾರರ ಆಯ್ಕೆಯೂ ಆಯ್ತು. ಬಲಿಜ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‍ನ ಹಿರಿಯ ಧುರೀಣ ಕೆ.ಪಟ್ಟಾಬಿರಾಮನ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗಿತ್ತಾದರೂ, ಅವರು ಅಲ್ಪಸಂಖ್ಯಾತ ಸಮುದಾಯದವರ ಆಯ್ಕೆಯ ಕ್ರಮವನ್ನು ಒಪ್ಪದೆ ತಮಗೆ ನೀಡಿದ್ದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದರು. ಅವರು ಹನುಮಂತಯ್ಯನವರಿಗೆ ಒಂದು ಪತ್ರ ಬರೆದು ‘ನೀವು ವಿಚಾರವಂತರು, ಆಧುನಿಕರು. ಉಮೇದುವಾರರ ಆಯ್ಕೆಯಲ್ಲಿ ಹೊಸ ವಿಧಾನವನ್ನು ಅನುಸರಿಸುವಿರಿ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಒಕ್ಕಲಿಗರು ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಮತ್ತು ಲಿಂಗಾಯತರು ಜಾಸ್ತಿ ಇರುವ ಕ್ಷೇತ್ರಗಳಲ್ಲಿ ಲಿಂಗಾಯತ ಉಮೇದುವಾರರನ್ನೇ ಆಯ್ಕೆ ಮಾಡಿದ್ದಿರಿ. ಈ ಹಳೆಯ ಸಂಪ್ರದಾಯವನ್ನು ಕೈಬಿಟ್ಟು ಅಲ್ಪಸಂಖ್ಯಾತರನ್ನು ಒಕ್ಕಲಿಗ, ಲಿಂಗಾಯತ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಉಮೇದುವಾರರನ್ನಾಗಿ ನಿಲ್ಲಿಸಿ, ಗೆಲ್ಲಿಸುವಿರೆಂದು ಭಾವಿಸಿದ್ದೆ. ನೀವು ಕೂಡ ಹಿಂದಿನ ಅಧ್ಯಕ್ಷರುಗಳಂತೆ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಕೆಲಸ ಮಾಡಿದ್ದೀರಿ. ಇದನ್ನು ವಿರೋಧಿಸಿ ನಾನು ನೀವು ನೀಡಿರುವ ಟಿಕೆಟ್‍ಅನ್ನು ಹಿಂದಿರುಗಿಸುತ್ತಿದ್ದೇನೆ. ನಾನು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ಎಂದು ತಿಳಿಸಿದ್ದರು. ಅದರಂತೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕೋಲಾರದಲ್ಲಿ ನಿಂತು ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಬಂದಿದ್ದರು. ಇಂಥಾ ಆದರ್ಶಗಳೆಲ್ಲಾ ಈಗ ಎಲ್ಲಿ ಮಾಯವಾದವು?

ಇಂದು ಕಾಂಗ್ರೆಸ್ ಮಾತ್ರವಲ್ಲ, ಎಲ್ಲ ಪಕ್ಷಗಳಲ್ಲೂ ಬಹುಸಂಖ್ಯೆಯಲ್ಲಿರುವ ಜಾತಿಗಳ ಉಮೇದುವಾರರನ್ನೇ ಹುಡುಕಿ ಹುಡುಕಿ ಉಮೇದುವಾರರನ್ನಾಗಿ ಮಾಡುವ ಚಾಳಿ ವ್ಯಾಪಿಸಿದೆ. ಅಲ್ಪಸಂಖ್ಯೆಯ ಸಮುದಾಯಗಳನ್ನು ಕಡೆಗಣಿಸಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಯೆಂದರೆ ‘ನಿಮಗೆ ಜಾತಿಯ ಜಾತಿಯ ಬಲವಿದೆಯೆ? ನಿಮ್ಮಲ್ಲಿ ಕೋಟಿ ಕೋಟಿ ಹಣವಿದೆಯೆ? ನೀವು ಗೆಲ್ಲುವ ಕುದುರೆಯೆ?’ ಎಂಬ ಅಂಶಗಳ ಆಧಾರದ ಮೇಲೆ ಉಮೇದುವಾರರನ್ನು ಆಯ್ಕೆ ಮಾಡಲಾಗುತ್ತಿದೆ. ದೀನದಲಿತರು, ಅಲ್ಪಸಂಖ್ಯಾತರನ್ನು ಈ ಮೂಲಕ ಕಡೆಗಣಿಸಲಾಗುತ್ತಿದೆ.

ಚುನಾವಣೆಯಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕಡ್ಡಾಯ ಮೀಸಲಾತಿ ಇರುವುದರಿಂದ, ವಿಧಿಯಿಲ್ಲದೆ ರಾಜಕೀಯ ಪಕ್ಷಗಳು ಅವರಿಗೆ ಉಮೇದುವಾರಿಕೆ ನೀಡುತ್ತಿವೆ. ಈ ಮೀಸಲಾತಿ ವ್ಯವಸ್ಥೆ ಇಲ್ಲದೆ ಹೋಗಿದ್ದರೆ ಈ ರಾಜಕೀಯ ಪಕ್ಷಗಳು ಬಹುಸಂಖ್ಯೆಯ ಹಾಗೂ ಬಲಾಢ್ಯ ಜನಾಂಗದವರಿಗೇ ಎಲ್ಲ ಸೀಟುಗಳನ್ನು ಹಂಚಿಬಿಡುತ್ತಿದ್ದರು ಎಂಬುದರಲ್ಲಿ ಯಾರಿಗೂ ಅನುಮಾನ ಬೇಡ.

ಜನಸಂಖ್ಯೆಯ ಅನುಪಾತದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಸಿಗಬೇಕಾಗಿದ್ದ ಪ್ರಾತಿನಿಧ್ಯ 57 ಶಾಸಕ ಸ್ಥಾನಗಳು ಮಾತ್ರ. ಆದರೆ 2018ರ ಚುನಾವಣೆಯಲ್ಲಿ ಗೆದ್ದು ಬಂದಿರುವ ಲಿಂಗಾಯತ ಮತ್ತು ಒಕ್ಕಲಿಗರ ಪ್ರಾತಿನಿಧ್ಯ 117. ಅಲ್ಪಸಂಖ್ಯಾತರನ್ನು ಕಡೆಗಣಿಸಿರುವುದಕ್ಕೆ ಜೀವಂತ ನಿದರ್ಶನ ಇದು. ಪ್ರಜಾತಂತ್ರದ ಮೂಲ ಆಶಯವನ್ನೇ ದುರ್ಬಲಗೊಳಿಸುತ್ತಿರುವ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಬಂದೊದಗಿದೆ.

ಬಿಜೆಪಿಯಂತೂ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಡಬಾರದು ಎಂಬ ತೀರ್ಮಾನ ಮಾಡಿ ಎಷ್ಟೋ ವರ್ಷಗಳಾದವು. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂಡ ಒಕ್ಕಲಿಗ ಮತ್ತು ಲಿಂಗಾಯತ ರಾಜಕಾರಣಿಗಳಿಗೆ ಸಿಂಹಪಾಲು ಹಂಚಿಕೆ ಮಾಡುತ್ತಿವೆ. ಬಿಜೆಪಿ ಪಕ್ಷವು ಈ ಮಲತಾಯಿ ಮಾತ್ಸರ್ಯದ ಜೊತೆಗೆ, ಅಲ್ಪಸಂಖ್ಯಾತ ಧಾರ್ಮಿಕರನ್ನು ಮೂಲೆಗುಂಪು ಮಾಡುವ ಧೋರಣೆಯನ್ನೂ ಅಳವಡಿಸಿಕೊಂಡಿದೆ.

ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಿರುವ ಕ್ಷೇತ್ರದಲ್ಲಿ ನಿಲ್ಲಿಸಿ, ನಿಮ್ಮ ಗೆಲುವು ನಮ್ಮ ಹೊಣೆ ಎಂದು ಬಹುಸಂಖ್ಯಾತರು ಘೋಷಣೆ ಮಾಡುವಂತಾಗಬೇಕು. ಆಗ ಸಾಮಾಜಿಕ ನ್ಯಾಯ ಎಲ್ಲ ಜನಾಂಗದವರಿಗೂ ದೊರಕಿಸಿಕೊಟ್ಟಂತಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...