Homeಅಂಕಣಗಳುನಮ್ಮ ಜನ | ಗಿರೀಶ್ ತಾಳಿಕಟ್ಟೆಬದುಕನ್ನು ಜಯಿಸಿ ಕಥೆಯಾಗಿಸಿದವಳು ಬೇಬಿ ಹಲ್ಡೇರ್

ಬದುಕನ್ನು ಜಯಿಸಿ ಕಥೆಯಾಗಿಸಿದವಳು ಬೇಬಿ ಹಲ್ಡೇರ್

- Advertisement -
- Advertisement -

ಕಸ ಗುಡಿಸುತ್ತಿದ್ದ ಆ ಮನೆಗೆಲಸದವಳು ಅತ್ತ ದೃಷ್ಟಿ ಹರಿಸಿ ನೋಡಿದಳು. ರ್ಯಾಕಿನ ತುಂಬಾ ಜೋಡಿಸಿಟ್ಟಿದ್ದ ಸಾಲುಸಾಲು ಪುಸ್ತಕಗಳು. ಆಕೆಯ ಕೈಗಳು ತಮ್ಮ ಕರ್ತವ್ಯ ಮರೆತವು. ಕಣ್ಣುಗಳು ಪುಸ್ತಕದ ರಾಶಿಯ ಮೇಲೆ ಹರಿದಾಡತೊಡಗಿದವು. ಆ ಹರಿದಾಟದಲ್ಲಿ ಒಂದು ಬಗೆಯ ಅನೂಹ್ಯ ಖುಷಿಯಿತ್ತು, ನಿಗೂಢ ಒಲವಿತ್ತು. ಇಂಥಾ ಅನುಭವ ಹೊಸದೇನೂ ಅಲ್ಲ. ಪ್ರತಿದಿನ ಯಜಮಾನನ ಕೋಣೆ ಹೊಕ್ಕುತ್ತಿದ್ದಂತೆಯೇ ಆ ಪುಸ್ತಕಗಳ ಮುಂದೆ ಮಂತ್ರಮುಗ್ಧಳಾಗಿ ನಿಂತುಬಿಡುತ್ತಿದ್ದಳು. ಆ ಆಸಕ್ತಿಗೆ ಏನರ್ಥ ಎಂಬುದು ಆಕೆಗೂ ಗೊತ್ತಿರಲಿಲ್ಲ. ಇವತ್ತು ತುಸು ಧೈರ್ಯದೋರಿ ಒಪ್ಪವಾಗಿ ಜೋಡಿಸಿಟ್ಟಿದ್ದ ಸಾಲಿನಿಂದ ಒಂದು ಪುಸ್ತಕವನ್ನು ಹಿರಿದು ತೆಗೆದಳು. ತಾಯಿ, ಮಲಗಿ ನಿದ್ರಿಸುತ್ತಿರುವ ತನ್ನ ಕಂದನ ಮೊಗವನ್ನು ಅಕ್ಕರೆತುಂಬಿ ನೇವರಿಸುವಂತೆ ಮುಖಪಟವನ್ನು ನವಿರಾಗಿ ಸವರಿ ಪುಟ ಬಿಡಿಸಿದಳು. ಕಣ್ಣಿಗೆ ಬಿದ್ದ ಅಕ್ಷರಗಳನ್ನು ಜೋಡಿಸಿ ಓದುವ ಯತ್ನಕೆ ಮುಂದಾದಳು.
ಇದೆಲ್ಲವನ್ನು, ಬಾಗಿಲಲ್ಲಿ ನಿಂತಿದ್ದ ಮನೆಯ ಯಜಮಾನ ಗಮನಿಸುತ್ತಿದ್ದ. “ಏನು, ಪುಸ್ತಕ ಓದಬೇಕು ಅನ್ನಿಸುತ್ತಿದೆಯೇನು?” ಅವನ ದನಿಗೆ ಬೆಚ್ಚಿಬಿದ್ದ ಮನೆಗೆಲಸದವಳು “ಆಹ್ಞಾಂ! ಏನಿಲ್ಲ ‘ತಾತೂಸ್’ ಹಾಗೇ ಸುಮ್ಮನೆ ನೋಡುತ್ತಿದ್ದೆ ಅಷ್ಟೆ” ಎಂದು ಅವಸರದಲ್ಲೆ ಪೊರಕೆಗಾಗಿ ತಡವರಿಸಿದಳು.
“ಕೊಡು ಯಾವ ಪುಸ್ತಕ ಅದು ನೋಡೋಣ” ಯಜಮಾನ, ಇನ್ನೂ ಅವಳ ಕೈಯಲ್ಲೇ ಇದ್ದ ಪುಸ್ತಕ ಬಿಡಿಸಿಕೊಂಡು ನೋಡಿದ. ಅದು ಬಾಂಗ್ಲಾ ಬರಹಗಾರ್ತಿ ತಸ್ಲೀಮಾ ನಸ್ರೀನ್ ತನ್ನ ಬದುಕನ್ನೇ ಚಿತ್ರಿಸಿಕೊಂಡಿದ್ದ ‘ಅಮರ್ ಮೆಯೆಬೆಲ’ (ನನ್ನ ಬಾಲ್ಯ) ಆತ್ಮಕಥೆ. ಬಡ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ, ಕಟ್ಟರ್ ನಂಬಿಕೆಯ ಸಮಾಜದ ನಡುವೆ ಒಬ್ಬ ಹೆಣ್ಣಾಗಿ ತಾನು ಅನುಭವಿಸಿದ ನೋವು, ಯಾತನೆ, ಸಂಕಟಗಳನ್ನೆಲ್ಲ ತಸ್ಲೀಮಾ ಆ ಕೃತಿಯಲ್ಲಿ ಹಿಡಿದಿಟ್ಟುಕೊಟ್ಟಿದ್ದರು. ಕೆಲ ದಿನಗಳಿಂದ ಮನೆಗೆಲಸದವಳ ವರ್ತನೆಯನ್ನು ಗಮನಿಸುತ್ತಲೇ ಇದ್ದ ಯಜಮಾನ ಪ್ರಶ್ನಿಸಿದ, “ನೀನು ಎಷ್ಟನೇ ಇಯತ್ತೆವರೆಗೆ ಓದಿದ್ದೀಯಾ?”.
“ಹೆಚ್ಚೇನು ಇಲ್ಲ ತಾತೂಸ್ ಆರನೇ ಈಯತ್ತೆ ಅಷ್ಟೆ” ಆಕೆಯಿಂದ ನಿರ್ಲಿಪ್ತ ಉತ್ತರ ಹೊರಬಂತು. “ಓದುವ ಜ್ಞಾನಕ್ಕೆ ಅಷ್ಟು ಸಾಕು. ತಗೋ ಈ ಪುಸ್ತಕ. ನೀನು ಓದಲೇಬೇಕಿರುವ ಕೃತಿ ಇದು. ಓದಿ ಮುಗಿಸು. ಆಮೇಲೆ ನಾವಿಬ್ಬರೂ ಇದರ ಕುರಿತು ಮಾತಾಡೋಣ” ಎಂದವರೇ ತಸ್ಲೀಮಾಳ ಬದುಕನ್ನು ಆಕೆಯ ಅಂಗೈಯಲ್ಲಿಟ್ಟು, ಯಾವ ಉತ್ತರಕ್ಕು ಕಾಯದೆ ಹೊರಟುಹೋದರು.
ವಾರ ಉರುಳಿರಬಹುದು, ಆ ಪುಸ್ತಕವನ್ನಿಡಿದು ಯಜಮಾನನ ಮುಂದೆ ನಿಂತವಳ ಕಣ್ಣಾಲಿಗಳಲ್ಲಿ ಕಂಬನಿ ತುಂಬಿತ್ತು. “ತಾತೂಸ್, ತಗೋಳ್ಳಿ ಈ ಪುಸ್ತಕ. ಇದು ತಸ್ಲೀಮಾರ ಕೃತಿಯಲ್ಲ. ನನ್ನದೇ ಬದುಕನ್ನು ನಾನು ಮತ್ತೆ ಹೊಕ್ಕಿ ಬಂದಂತಾಯ್ತು. ಆ ಕೆಂಡದುಂಡೆಯ ಅನುಭವಗಳ ಬೇಗೆ ಇಲ್ಲಿಗೆ ಸಾಕಾಗಲಿ. ತಗೋಳ್ಳಿ ಈ ಪುಸ್ತಕ” ಆಕೆಯ ದನಿ ಕಂಪಿಸುತ್ತಿತ್ತು. ಯಜಮಾನ ಇದೆಲ್ಲವನ್ನು ನಿರೀಕ್ಷಿಸಿಯೇ ತಸ್ಲೀಮಾ ಆತ್ಮಕಥೆಯನ್ನು ಆಕೆಗೊಪ್ಪಿಸಿದ್ದ.
“ಬಾ ಕೂತ್ಕೊ ಮಗಳೇ, ಎದೆಯೊಳಗಿನ ಬೆಂಕಿ ನೆಮ್ಮದಿಗೆ ಒಳ್ಳೆಯದಲ್ಲ. ನಿನ್ನ ಒಡಲೊಳಗಿನ ನೋವು ಏನೆಂಬುದು ನನಗೆ ಗೊತ್ತಿಲ್ಲ, ಆದರೆ ಎಷ್ಟೆಂಬುದು ಮಾತ್ರ ನನಗೆ ಕಾಣಿಸುತ್ತಿದೆ. ಅದನ್ನೆಲ್ಲ ಹೇಳಿಕೊಂಡು ಹಗುರಾಗು. ನಿನ್ನ ಮುಂದಿನ ದಾರಿ ಸ್ಪಷ್ಟವಾಗುತ್ತೆ. ಬಾ ಮಗಳೇ” ಯಜಮಾನನ ಕರೆಯನ್ನು ಅನುಸರಿಸಿ ಆತನ ಕುರ್ಚಿಯ ಕಾಲಬುಡದಲ್ಲಿ ಕೂತ ಮನೆಗೆಲಸದವಳು ತನ್ನ ನೋವಿನ ಕಥೆ ತೆರೆದಿಟ್ಟಳು.
* * * *
ಆಕೆ ಕಾಶ್ಮೀರದಲ್ಲಿ ಹುಟ್ಟಿದವಳು. ಅಪ್ಪ ಕುಡುಕ, ಬೇಜವಾಬ್ಧಾರಿಯ ಮನುಷ್ಯ. ವೃತ್ತಿಯಲ್ಲಿ ಡ್ರೈವರ್. ವಾರಗಟ್ಟಲೆ ಮನೆಯತ್ತ ಸುಳಿಯುತ್ತಿರಲಿಲ್ಲ. ಹಾಗೊಮ್ಮೆ ಬಂದರು ಹೆಂಡತಿಯನ್ನು ಹೊಡೆದು ಚಿತ್ರವಿಚಿತ್ರವಾಗಿ ಹಿಂಸಿಸುತ್ತಿದ್ದನೇ ಹೊರತು ಮಕ್ಕಳ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಅವನ ಹಿಂಸೆ ತಾಳದೆ ಹೆಂಡತಿ ಮಕ್ಕಳನ್ನೂ ಅನಾಥರನ್ನಾಗಿಸಿ ಅವನಿಂದ ದೂರಸರಿದಳು. ಅಪ್ಪ ಇನ್ನೊಬ್ಬಳನ್ನು ಮದುವೆಯಾದ. ಅಪ್ಪನ ಹಿಂಸೆಯ ಜೊತೆಗೆ ಮಲತಾಯಿ ಕಾಟವೂ ಶುರುವಾಯ್ತು. ಅಲೆಮಾರಿ ಕಸುಬಿನ ಅಪ್ಪ ಕೊನೆಗೆ ತನ್ನ ಕುಟುಂಬವನ್ನು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಕರೆತಂದು ಸ್ಥಾಯಿಗೊಳಿಸಿದ. ಸ್ಥಳ ಬದಲಾದರು ಬದುಕು ಬದಲಾಗಲಿಲ್ಲ. ಆಗೋ-ಈಗೋ ಆರನೇ ಈಯತ್ತೆಯಲ್ಲಿ ಓದುತ್ತಿದ್ದ ಅವಳ ಮುಂದೆ ನಿಂತ ಅಪ್ಪ ಅದೊಂದು ದಿನ ದುರುಗುಟ್ಟಿ ನೋಡಿ, “ನೀನು ಓದಿದ್ದು ಸಾಕು. ಒಂದೊಳ್ಳೆ ಸಂಬಂಧ ಗೊತ್ತು ಮಾಡಿಕೊಂಡು ಬಂದಿದೀನಿ. ಬಾಯಿ ಮುಚ್ಕೊಂಡು ಮದ್ವೆ ಆಗು” ಗದರಿಸಿದ. ಆಗ ಆಕೆಗಿನ್ನು ಹನ್ನೆರಡು ವರ್ಷ!
ಈ ಹಿಂದೆ ಅಪ್ಪನ ಹಠದ ಎದುರು ಸೋತು, ಮದುವೆಯಾಗಿದ್ದ ಅಕ್ಕನನ್ನು ಅವಳ ಗಂಡ ತನ್ನ ಕಣ್ಣೆದುರೇ ಕತ್ತು ಹಿಸುಕಿ ಸಾಯಿಸಿದ್ದನ್ನು ಕಂಡಿದ್ದ ಅವಳು ಮದುವೆ ಎಂದಾಕ್ಷಣ ಹೌಹಾರಿದಳು. ಆದರು ಅಪ್ಪ, ಮಲತಾಯಿಯ ಮೊಂಡಾಟದ ಮುಂದೆ ಮೈಮೂಳೆ ಮುರಿಸಿಕೊಂಡು ಸೋಲಬೇಕಾಯ್ತು. ತನಗಿಂತ ದುಪ್ಪಟ್ಟು ವಯಸ್ಸಿನ ವರನಿಗೆ ಬಾಲವಧುವಾಗಿ ಕೊರಳೊಡ್ಡಿದಳು. ಅವಳ ಆತಂಕ ನಿಜವೇ ಆಗಿತ್ತು. ಗಂಡ, ಅಪ್ಪನಿಗಿಂತ ಭಿನ್ನವಾಗೇನೂ ಇರಲಿಲ್ಲ. ತಾಯಿಯ ಯಾತನೆಯ ಬದುಕು ತನ್ನೊಳಗೆ ಬೇರಿಳಿಸಿಕೊಂಡು ಮುಂದುವರೆದ ಸಂಕಟ ಆಕೆಯನ್ನು ಮುತ್ತಿತು. ಮದುವೆಯಾಗಿ ವರ್ಷ ತುಂಬುವುದರೊಳಗೆ ಬಸುರಿಯಾದಳು. ಜೀವನದ ದುರಂತ, ಮಗುವಿಗೇ ಒಂದು ಮಗು!
ಮೊದಲ ಮಗು ಹಡೆದಾಗ ಅವಳ ವಯಸ್ಸು ಹದಿಮೂರು. ಆಮೇಲೆ ಮತ್ತೆರಡು ಮಕ್ಕಳು. ಹದಿನಾರು ದಾಟುವ ಮುನ್ನವೇ ಆ ಬಾಲೆ ಮೂರು ಮಕ್ಕಳ ತಾಯಿ!
‘ಬದುಕು ಇಷ್ಟು ಕ್ರೂರಿಯಾಗಿರಲು ಸಾಧ್ಯವೇ?’ ಒಮ್ಮೆ ಅವಳಿಗೆ ಅವಳೇ ಕೇಳಿಕೊಂಡಳು. `ಇಲ್ಲ. ಸಾಧ್ಯವೇ ಇಲ್ಲ. ನನ್ನ ಬದುಕನ್ನು ಬೆಳಕಾಗಿಸುವ ಯಾವುದೋ ಒಂದು ಕಿರಣ ಇದೆ. ನಾನು ಹೀಗೆ ಸೋತು ಕೈಕಟ್ಟಿ ಕೂರಬಾರದು. ಆ ಕಿರಣದತ್ತ ಸಾಗುತ್ತೇನೆ. ನನ್ನ ಮಕ್ಕಳಿಗೆ ನನ್ನದೇ ಬದುಕನ್ನು ಬಳುವಳಿಯಾಗಿ ಕೊಡಲಾರೆ. ಅವರಿಗೆ ಬೇರೆಯದೇ ಭವಿಷ್ಯ ರೂಪಿಸುತ್ತೇನೆ. ಹೌದು, ನಾನಿದನ್ನು ಸಾಧಿಸಿಯೇ ತೀರುತ್ತೇನೆ’ ಅವಳ ಮನಸ್ಸು ದೃಢವಾದ ನಿರ್ಧಾರಕ್ಕೆ ಬಂದಾಗಿತ್ತು.
ಹೊಣೆಗೇಡಿ ಅಪ್ಪನಿಂದ ತಾಯಿಯ ಬದುಕು ಛಿದ್ರವಾಗಿ ಹೋಗಿತ್ತು, ಅಕ್ಕ ಕಣ್ಣೆದುರೇ ಹೆಣವಾಗಿ ಹೋಗಿದ್ದಳು, ನೆರೆ ಮನೆಯವಳೊಬ್ಬಳ ಮೇಲೆ ಆಸಿಡ್ ಸುರಿದು, ನಂತರ ಜೀವಂತವಾಗಿ ಸುಟ್ಟುಹಾಕಿದ್ದರು. ತಮ್ಮದಲ್ಲದ ತಪ್ಪಿಗೆ ಮೂವರು ಹೆಣ್ಮಕ್ಕಳು ಪುರುಷಪ್ರಧಾನ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾದದ್ದನ್ನು ಕಂಡ ಆಕೆ ಗಟ್ಟಿಯಾಗಿ ನುಡಿದುಕೊಂಡಳು, ‘ಇಲ್ಲ, ನಾನು ಆ ನಾಲ್ಕನೇ ಹೆಣ್ಣಾಗಲಾರೆ!’
ಅವಕಾಶಕ್ಕಾಗಿ ಕಾದ ಆಕೆ ಅದೊಮ್ಮೆ ತನ್ನ ಮೂರೂ ಮಕ್ಕಳನ್ನು ಕರೆದುಕೊಂಡು ಗಂಡನನ್ನು ತೊರೆದು ದಿಲ್ಲಿ ಸೇರಿಕೊಂಡಳು. ಅಲ್ಲಿ ಅಣ್ಣನ ಮನೆಯಲ್ಲಿ ತಂಗಿದ್ದ ಆಕೆಗೆ ಅತ್ತಿಗೆಯ ಕಿರಿಕಿರಿ. ದಿನ ಬೆಳಗಾದರೆ ಜಗಳ. ಅಂಥಾ ಸಮಯದಲ್ಲಿ ಅಣ್ಣನ ಗೆಳೆಯನೊಬ್ಬ ಒಂದು ಮನೆಯಲ್ಲಿ ಮನೆಗೆಲಸದ ಕೆಲಸ ಕೊಡಿಸಿದ. ಅದೇ ಮನೆಯಲ್ಲಿ ಮಕ್ಕಳ ಸಮೇತ ವಾಸ ಶುರು ಮಾಡಿದಳು. ಆದರೆ ಆ ಮನೆಯವರು ಮನುಷ್ಯತ್ವವೇ ಇಲ್ಲದವರು. ಆಕೆಯನ್ನು ಮಾತ್ರವಲ್ಲ, ಮಕ್ಕಳನ್ನೂ ಜೀತದಾಳುಗಳಂತೆ ಕಾಣುತ್ತಿದ್ದರು. `ಇಂಥಾ ಬದುಕಿಗಾಗಿ ನಾನು ಗಂಡನ ಮನೆ ತೊರೆದು ಬರಬೇಕಾಯ್ತಾ?’ ಅವಳ ಪ್ರಶ್ನೆಗೆ ಅವಳ ಬಳಿಯೇ ಉತ್ತರವಿರಲಿಲ್ಲ.
ಮನೆಗೆಲಸದ ಹೊಸ ಮನೆಗಾಗಿ ಹುಡುಕಾಟ ಶುರು ಮಾಡಿದಳು. ಕೊನೆಗೆ ಯಾರೋ ಪರಿಚಯಸ್ಥರು ಆಕೆಯನ್ನು `ತಾತೂಸ್’ ಮನೆಗೆ ತಂದು ತಲುಪಿಸಿದ್ದರು. ಆಮೇಲೆಯೇ ಆಕೆ ಕೊಂಚ ನಿಟ್ಟುಸಿರು ಬಿಡುವಂತಾದದ್ದು.
* * * *
ಆಕೆ ಕಣ್ಣೀರಾಗಿದ್ದಳು. ಸೆರಗೂ ಅವಳನ್ನು ಸಂತೈಸುವಲ್ಲಿ ಸೋತುಹೋಗಿತ್ತು. ಕಾಲಬಳಿ ಕೂತಿದ್ದ ಮನೆಗೆಲಸದವಳ ತಲೆ ನೇವರಿಸಿ “ಸಮಾಧಾನ ಮಾಡ್ಕೊ ಮಗಳೆ. ಎಲ್ಲರ ಬದುಕಿನಲ್ಲೂ ಏರಿಳಿತಗಳು ಇದ್ದೇ ಇರುತ್ತವೆ. ನಿನ್ನ ಬದುಕಿನಲ್ಲಿ ಅವುಗಳ ಆಗ ಕೊಂಚ ಘೋರವಿರಬಹುದು. ಆದ್ರೆ ನೀನು ಕೇಳಿಕೊಂಡ ಪ್ರಶ್ನೆ ಸರಿಯಾಗಿಯೇ ಇದೆ. ಬದುಕು ಇಷ್ಟು ಕ್ರೂರಿಯಾಗಲು ಸಾಧ್ಯವಿಲ್ಲ. ಆ ಕ್ರೂರತೆಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ನಾವೇ ಮಾಡಿಕೊಳ್ಳಬೇಕು. ನಿನ್ನನ್ನು ನಾನು ಮೊದಲಿಂದಲೂ ಗಮನಿಸುತ್ತಿದ್ದೇನೆ. ನಿನ್ನಲ್ಲಿ ಬೇರೇನೊ ಸಾಮಥ್ರ್ಯ ಇದೆ. ನಾನು ಹೇಳಿದ ಹಾಗೆ ಮಾಡ್ತೀಯಾ?” ಸಾಂತ್ವನದ ಕೊನೆಯಲ್ಲಿ ಒಂದು ಕುತೂಹಲ ಹುಟ್ಟುಹಾಕಿದರು ಮನೆಯ ಯಜಮಾನ.
“ಹೇಳಿ `ತಾತೂಸ್’, ಗಂಡಸರನ್ನು ನಂಬಲೇಬಾರದು ಅನ್ನೋ ನನ್ನ ಅಭಿಪ್ರಾಯವ ಬದಲಿಸಿದವರು ನೀವು. ಏನು ಹೇಳಿ `ತಾತೂಸ್’, ನಾನು ಮಾಡ್ತೀನಿ” ಅವಳ ಮಾತಿನಲ್ಲಿ ಆಕೆ ಯಜಮಾನನ ಮೇಲೆ ಇಟ್ಟಿದ್ದ ವಿಶ್ವಾಸ ಎದ್ದು ಕಾಣುತ್ತಿತ್ತು.
ಒಂದು ಡೈರಿ ಮತ್ತು ಪೆನ್ನನ್ನು ಆಕೆಯ ಮುಂದಿಡಿದ ಯಜಮಾನ “ತಗೋ ಮಗಳೇ, ಇವತ್ತಿಂದ ನೀನು ಬರೆಯಲು ಶುರು ಮಾಡು”.
“ಬರೆಯೋದಾ? ನಾನಾ?” ದಿಗ್ಬ್ರಾಂತಳಾಗಿ ಪ್ರಶ್ನಿಸಿದಳು “ಏನನ್ನ ಬರೆಯಲಿ ‘ತಾತೂಸ್’?”
“ನಿನ್ನ ಬದುಕನ್ನು ನೀನು ಬರಿ. ನೀನು ಅನುಭವಿಸಿದ ನೋವು, ಯಾತನೆಗಳನ್ನು ಬರಿ. ಅದರಿಂದ ಕಲಿತ ಪಾಠ, ಕಂಡುಕೊಂಡ ಒಳನೋಟದ ಬಗ್ಗೆ ಬರಿ. ನಿನ್ನ ಬದುಕಿನ ಬಗ್ಗೆ ನಿನಗನ್ನಿಸಿದ್ದನ್ನೆಲ್ಲ ಬರಿ. ಒಟ್ಟಿನಲ್ಲಿ ಬರಿ” ಅವರ ದನಿ ಅಚಲವಾಗಿತ್ತು.
ಹನ್ನೆರಡರ ಅಮಾಯಕ ಹುಡುಗಿಯನ್ನು ನರಕಕ್ಕೆ ತಳ್ಳಿದ ತಂದೆಯ ಮಾತಿಗೆ ಒಪ್ಪಿದ್ದ ಆಕೆ `ತಾತೂಸ್’ನ ಬೆಳಕು ತುಂಬಿದ ಮಾತುಗಳನ್ನು ನಿರಾಕರಿಸದಾದಳು. ಯಾವ ಯೋಜನೆಯೂ ಇಲ್ಲದೆ ಮೂರು ಮಕ್ಕಳನ್ನು ಕಟ್ಟಿಕೊಂಡು ದುರ್ಗಾಪುರ ತೊರೆದಷ್ಟೇ ದಿಟ್ಟವಾಗಿ ಕೈಚಾಚಿ ಡೈರಿ, ಪೆನ್ನು ತೆಗೆದುಕೊಂಡಳು.
ಅಲ್ಲಿಂದ ಶುರುವಾಯ್ತು ಅವಳ ಬರವಣಿಗೆಯ ಹಾದಿ. ಬರೆದಂತೆಲ್ಲಾ ಅವಳ ಎದೆಯೊಳಗಿನ ನೋವು ಹೊರಬಂದು ಗಟ್ಟಿಯಾಗುತ್ತಾ ಬಂದಳು. ದಿನಚರಿಯ ಬರಹವಾಗಿ ಶುರುವಾದ ಅದು ಕುತೂಹಲದ ಕಥಾವಸ್ತುವಾಗುತ್ತಾ ಬಂತು. ಅದೊಂದು ದಿನ ತಾನು ಬರೆದ ಡೈರಿಯನ್ನು ಯಜಮಾನನ ಕೈಗಿತ್ತಳು “ಹೇಗಿದೆ, ಓದಿಹೇಳಿ `ತಾತೂಸ್’ ” ಎಂಬ ಕಿರು ಬೇಡಿಕೆಯೊಂದಿಗೆ.
ಅದಕ್ಕಾಗೇ ಕಾದಿದ್ದವನಂತೆ ಒಂದೇ ರಾತ್ರಿಯಲ್ಲಿ ಇಡೀ ಡೈರಿ ಓದಿ ಮುಗಿಸಿದ. ಮಾರನೇ ಬೆಳಿಗ್ಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಬಳಿ ಬಂದು, “ಮಗಳೇ,” ಅವನ ದನಿಯಲ್ಲಿ ಎಂದಿಗಿಂತ ತುಸು ಹೆಚ್ಚೇ ಮಮಕಾರ, ಹೆಮ್ಮೆ ಇಣುಕುತ್ತಿದ್ದವು “ನನ್ನ ಊಹೆ ನಿಜವಾಯ್ತು ಮಗಳೇ. ನಿನ್ನ ಸಾಮಥ್ರ್ಯ ಕೇವಲ ಮನೆಗೆಲಸಕ್ಕೆ ಕಟ್ಟುಬಿದ್ದಿರೋದಲ್ಲ. ಅದಕ್ಕೂ ಮೀರಿದ್ದಮ್ಮ. ಇದೋ, ಈ ಡೈರಿ ಅದಕ್ಕೆ ಸಾಕ್ಷಿ. ಇದರಲ್ಲಿರೋದು ಕೇವಲ ಜೀವಂತಿಕೆಯಿಲ್ಲದ ಅಕ್ಷರಗಳಲ್ಲ, ನಿನ್ನ ನೋವಿನ ಕಥೆಯೂ ಅಲ್ಲ; ಅದನ್ನೆಲ್ಲ ಮೀರಿದ ಸಾಹಿತ್ಯ ಸಿರಿ. ಇದು ಅದ್ಭುತ ಕಾದಂಬರಿ ಕಣಮ್ಮ”.
* * * *
ಅವಳ ಡೈರಿ ಕಾದಂಬರಿಯಾಗಿ ಪ್ರಕಟವಾಯ್ತು. ಕೆಲವೇ ದಿನಗಳಲ್ಲಿ ಸಾವಿರಾರು ಪ್ರತಿಗಳು ಮಾರಾಟವಾದವು. ಇಂಗ್ಲಿಷ್, ಜಪಾನಿ, ಕೊರಿಯಾ ಸೇರಿದಂತೆ 21 ಭಾಷೆಗಳಿಗೆ ಅದು ಅನುವಾದವಾಯ್ತು. ಪ್ಯಾರಿಸ್ ಒಂದರಲ್ಲೇ ಆರು ಲಕ್ಷ ಪ್ರತಿಗಳು ಖರ್ಚಾದವು. ಹೆಸರು, ಕೀರ್ತಿ, ಹಣ, ಗೌರವ ಆಕೆಯನ್ನು ಹುಡುಕಿಬಂದವು. ವಿದೇಶಗಳಿಗೆ ಕರೆದು ಆಕೆಯನ್ನು ಸನ್ಮಾನ ಮಾಡಲಾಯ್ತು. ಬಿಬಿಸಿಯಂತಹ ನ್ಯೂಸ್ ಏಜೆನ್ಸಿಗಳು ಅವಳ ಬದುಕನ್ನು ಡಾಕ್ಯುಮೆಂಟರಿಯಾಗಿ ಚಿತ್ರಿಸಿದವು. ಏನೇನೂ ಅಲ್ಲದ ಮನೆಗೆಲಸದವಳು ಈಗ ಪ್ರಖ್ಯಾತ ಲೇಖಕಿಯಾಗಿ ಹೆಸರಾದಳು.
* * * *
ಇದು ಯಾವುದೋ ಕಾದಂಬರಿಯ ಕಥಾವಸ್ತುವಲ್ಲ. ನಮ್ಮಂತೆಯೇ ಬದುಕುತ್ತಿರುವ, ಆದರೆ ತನ್ನ ಬದುಕಿನ ಮುಂದೆ ಸೋಲೊಪ್ಪಿಕೊಳ್ಳದೆ ಗೆದ್ದು ಸಾಧಿಸಿದ ಲೇಖಕಿಯ ನೈಜಕಥೆ. ಆ ಮನೆಗೆಲಸದವಳ ಹೆಸರು ಬೇಬಿ ಹಲ್ಡೇರ್. ಆಕೆ ಬರೆದ ಕೃತಿ `ಆಲೋ ಅಂಧೇರ್’ (ಬೆಳಕು ಕತ್ತಲೆ), ಇಂಗ್ಲಿಷ್ ಅವತರಿಣಿಕೆಯ ಹೆಸರು `ಎ ಲೈಫ್ ಲೆಸ್ ಆರ್ಡಿನರಿ’. ಯಾವ ಕೊಲ್ಕೊತ್ತಾದಿಂದ ಅಸಹನೀಯಗೊಂಡು ಓಡಿ ಬಂದಿದ್ದರೋ ಅದೇ ಬೆಂಗಾಳಿ ನಾಡು ಇವತ್ತು ಆಕೆಯನ್ನು ಅಕ್ಕರೆಯಿಂದ ಅಪ್ಪಿಕೊಂಡಿದೆ.
ಅಂದಹಾಗೆ, ಬೇಬಿಯ ಜೀವನಕ್ಕೆ ಹೊಸ ದಿಕ್ಕು ತೋರಿದ ಮನೆ ಯಜಮಾನ ಬೇರಾರು ಅಲ್ಲ. ಹಿಂದಿಯ ಖ್ಯಾತ ಸಾಹಿತಿ ಮುನ್ಷಿ ಪ್ರೇಮ್‍ಚಂದ್‍ಜೀಯವರ ಮೊಮ್ಮಗ ಪ್ರೊಫೆಸರ್ ಪ್ರಬೋದ್ ಕುಮಾರ್. ತಮ್ಮ ಮನೆಗೆಲಸಕ್ಕೆಂದು ಬಂದ ಮೊದಲ ದಿನದಿಂದಲೇ ಆಕೆಯಲ್ಲಿದ್ದ ವಿಶೇಷ ಸಾಮಥ್ರ್ಯವನ್ನು ಗುರುತಿಸಿ ಪೋಷಿಸಿದ ಪ್ರಬೋದ್, ಬೇಬಿ ಬೆಂಗಾಳಿ ಭಾಷೆಯಲ್ಲಿ ಬರೆದಿದ್ದ ಡೈರಿಯನ್ನು ತಿದ್ದಿ, ಹಿಂದಿಗೆ ಅನುವಾದಿಸಿ 2002ರಲ್ಲಿ ರೋಶನಿ ಪ್ರಕಾಶನದ ಮೂಲಕ ಪ್ರಕಟಿಸಿದರು. ಅದರ ಇಂಗ್ಲಿಷ್ ಅವತರಣಿಕೆ 2006ರಲ್ಲಿ ಪ್ರಕಟವಾಗಿ ಬೆಸ್ಟ್ ಸೆಲ್ಲರ್ ಎನಿಸಿಕೊಂಡಿತು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಆ ಕೃತಿಯನ್ನು `ಇದು ಭಾರತದ ಏಂಜೆಲ್ಸ್ ಆ್ಯಶಸ್’ ಎಂದು ಬಣ್ಣಿಸಿದೆ.
ಮೊದಮೊದಲು ವಾಡಿಕೆಯಂತೆ ತನ್ನನ್ನು `ಸಾಹೇಬ್’ ಎಂದು ಕರೆಯುತ್ತಿದ್ದ ಬೇಬಿಗೆ, “ಇನ್ಮುಂದೆ ಸಾಹೇಬ್ ಅನ್ನಬೇಡ. ನೀನೂ `ತಾತೂಸ್’ ಅಂತಲೇ ನನ್ನನ್ನು ಕರಿ’ ಎಂದು ಅವಳಿಗೆ ಹತ್ತಿರವಾದವರು ಪ್ರಬೋದ್ ಕುಮಾರ್. ಪೊಲಿಶ್ ಭಾಷೆಯಲ್ಲಿ ತಾತೂಸ್ ಎಂದರೆ `ಅಪ್ಪ’ ಎಂದರ್ಥ. ಮನೆಯಲ್ಲಿ ಪ್ರಬೋದ್‍ರನ್ನು ಅವರ ಮಕ್ಕಳು `ತಾತೂಸ್’ ಎಂತಲೇ ಕರೆಯುತ್ತಿದ್ದರು.
ಪ್ರಸ್ತುತ ಲೈಂಗಿಕ ಕಾರ್ಯಕರ್ತೆಯರ ಪರವಾಗಿ ಕೆಲಸ ಮಾಡುವ ಎನ್.ಜಿ.ಒ.ದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬೇಬಿ ಹಲ್ಡೇರ್ ತನ್ನ ನಾಲ್ಕನೇ ಕಾದಂಬರಿಯ ತಯಾರಿಯಲ್ಲಿದ್ದಾರೆ. `ನನ್ನಿಂದ ಒಬ್ಬ ಹೆಣ್ಮಗಳು ತನ್ನ ಸಂಕಲೆಗಳಿಂದ ಹೊರಬಂದರೆ ನನ್ನ ಬದುಕೇ ಸಾರ್ಥಕವಾದಂತೆ’ ಎನ್ನುವ ಆಕೆಯ ಮಾತುಗಳಲ್ಲಿ ಪ್ರಾಮಾಣಿಕತೆ ಕಾಣುತ್ತೆ. ಒಟ್ಟಿನಲ್ಲಿ ಬೇಬಿ ಹಲ್ಡೇರ್ `ತಾತೂಸ್’ರ ನಿರೀಕ್ಷೆಗಳನ್ನು ನಿಜ ಮಾಡಿದ್ದಾರೆ. ಸಾವಿರಾರು ಹತಾಶ ಬದುಕುಗಳಿಗೆ ಸ್ಫೂರ್ತಿಯಾಗಿದ್ದಾರೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...