ಮುಂಬೈನ ಆರೇ ಪ್ರದೇಶದಲ್ಲಿ ಪರಿಸರವಾದಿಗಳು ಮತ್ತು ಪರಿಸರ ಪ್ರೇಮಿಗಳ ಹೋರಾಟ ಜೋರಾದ ಹಿನ್ನೆಲೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ನಿನ್ನೆಯಷ್ಟೇ ಬಾಂಬೆ ಹೈಕೋರ್ಟ್ ಆರೇ ಪ್ರದೇಶವನ್ನು ಅರಣ್ಯವೆಂದು ಘೋಷಿಸಬೇಕು ಮತ್ತು ಮರಗಳನ್ನು ಕಡಿದು ಮುಂಬೈ ಮೆಟ್ರೋ ಕಾರ್ ಶೆಡ್ ದಾರಿ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆ ಪರಿಸರವಾದಿಗಳು ನಿನ್ನೆ ಸಂಜೆಯಿಂದ ಸೇವ್ ಟ್ರೀ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ಆರೇ ಪ್ರದೇಶದ ಮರಗಳ ನಾಶ ತಡೆಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಮೂಲಗಳ ಪ್ರಕಾರ, ಆರೇ ಪ್ರದೇಶದಲ್ಲಿರುವ ಸುಮಾರು 800 ಕ್ಕೂ ಹೆಚ್ಚು ಮರಗಳನ್ನು ಈಗಾಗಲೇ ಕಡಿಯಲಾಗಿದೆ. ಹೈಕೋರ್ಟ್ ಅರ್ಜಿ ವಜಾಗೊಳಿಸಿದ ನಂತರ ಮರಗಳನ್ನು ಕಡಿಯಲು ಮತ್ತಷ್ಟು ಮಷಿನ್ ಗಳನ್ನು ಸ್ಥಳಕ್ಕೆ ತರಲಾಗಿದೆ. ಪೊಲೀಸರು ಮತ್ತು ಹೋರಾಟಗಾರರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಮರಗಳ ಮಾರಣಹೋಮ ವಿರೋಧಿಸಿ, ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 353ರಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬಂಧಿತರನ್ನು ಕೋರ್ಟ್ ಗೆ ಹಾಜರುಪಡಿಸಲಾಗುವುದು. ಆರೇ ಪ್ರದೇಶಕ್ಕೆ ಹೋಗುವ ದಾರಿಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಆರೇ ಪ್ರದೇಶದ ಸುತ್ತಮುತ್ತ 144 ಸೆಕ್ಷನ್ ಜಾರಿಯಾಗಿದ್ದು, ಜನರನ್ನು ಒಟ್ಟುಗೂಡದಂತೆ ತಡೆಯಲಾಗುತ್ತಿದೆ. ಆರೇ ಪ್ರದೇಶದಲ್ಲಿ ಹೋರಾಟಗಾರರನನ್ನು ವಶಕ್ಕೆ ಪಡೆದಿರುವ ಕ್ರಮವನ್ನು ಶಿವಸೇನೆ ನಾಯಕ ಆದಿತ್ಯ ಠಾಕರೆ, ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಸೇರಿದಂತೆ ಅನೇಕ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಆದಿತ್ಯ ಠಾಕರೆ, ಕೇಂದ್ರದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿ, ಮರಗಳನ್ನು ಕಡಿಯುವ ನೀತಿ ಅನುಸರಿಸುವವರು, ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ಮಾತನಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಇತ್ತ ಯೋಗೇಂದ್ರ ಯಾದವ್ ಟ್ವೀಟ್ ಮಾಡಿ, ಮುಂದೆ ಜಲಕಂಟಕ ಎದುರಾಗುವಲ್ಲಿ ಯಾವುದೇ ಅನುಮಾನವಿಲ್ಲ. ಮಹಾರಾಷ್ಟ್ರ ಸರ್ಕಾರ ಮರಗಳ ಮಾರಣಹೋಮಕ್ಕೆ ಪುಷ್ಠಿ ನೀಡುತ್ತಿರುವುದು ಚಿಂತಾಜನಕ ವಿಷಯ ಎಂದು ಟ್ವೀಟಿಸಿದ್ದಾರೆ.


