Homeಮುಖಪುಟಯಡ್ಯೂರಪ್ಪ-ಈಶ್ವರಪ್ಪ ತವರಲ್ಲೇ ಕಮರಲಿದೆ ಕಮಲ

ಯಡ್ಯೂರಪ್ಪ-ಈಶ್ವರಪ್ಪ ತವರಲ್ಲೇ ಕಮರಲಿದೆ ಕಮಲ

- Advertisement -
  • ಈಶ್ವರ್ /
- Advertisement -

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಮಕಾಡೆ ಮಲಗುವುದು ಖಚಿತವಾಗತೊಡಗಿದೆ. ಯಡ್ಡಿ ಸಾಹೇಬರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ಫಿಕ್ಸ್ ಮಾಡುತ್ತಿದ್ದಾರಾದರೂ ಅವರಿಗೆ ತಮ್ಮ ಜಿಲ್ಲೆಯಲ್ಲೇ ಪಕ್ಷವನ್ನು ಗೆಲ್ಲಿಸುವ ಆತ್ಮವಿಶ್ವಾಸವಿಲ್ಲ. ಸುಳ್ಳುಬುರುಕ ಮೋದಿ ಬಂದುಹೋದ ನಂತರವಾದರೂ ಬಿಜೆಪಿ ಹವಾ ಸೃಷ್ಟಿಯಾದೀತಾ ಎಂಬ ನಿರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಇದ್ದಾರೆಂಬುದು ನಿಜವಾದರೂ ಹಿಂದುತ್ವದ ಆಧಾರದಲ್ಲಿ ನನ್ನ ಚುನಾವಣೆ ಎಂಬುದಾಗಿ ಈಶ್ವರಪ್ಪ ಘೋಷಿಸಿರುವುದು ಶಿವಮೊಗ್ಗದಲ್ಲಿ ಬರುವ ದಿನಗಳಲ್ಲಿ ಚುನಾವಣೆ ಯಾವ ಹಾದಿಯಲ್ಲಿ ಸಾಗಲಿದೆ ಎಂಬುದರ ಸೂಚನೆಯನ್ನಂತೂ ನೀಡುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಸೊರಬ- ಹೀಗೆ ಹರಡಿಕೊಂಡಿರುವ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿಯವರಿಗೆ ಗೆಲ್ಲುವ ಖಾತ್ರಿಯಿರುವುದು ಶಿಕಾರಿಪುರ ಮಾತ್ರವೇ. ಆದರೆ ಶಿಕಾರಿಪುರದಲ್ಲೂ ಚುನಾವಣೆ ಸಮೀಪಿಸುತ್ತಿರುವಾಗ ಬದಲಾಗುತ್ತಿರುವ ರಾಜಕಾರಣ ಬಿಜೆಪಿ ಪಾಲಿಗೆ ಗಂಭೀರ ಪರಿಸ್ಥಿತಿಯನ್ನು ತಂದೊಡ್ಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ ಕ್ಷೇತ್ರಗಳು ಜೆಡಿಎಸ್ ಪಾಲಾಗಿದ್ದವು. ಶಿಕಾರಿಪುರದಲ್ಲಿ ಕೆಜೆಪಿಯಿಂದ ಯಡಿಯೂರಪ್ಪ ಗೆದ್ದು ಅವರು ಬಿಜೆಪಿ ಸೇರಿ ಸಂಸದರಾದ ಮೇಲೆ ಅವರ ಪುತ್ರ ಬಿ.ವೈ.ರಾಘವೇಂದ್ರ ಬಿಜೆಪಿಯಿಂದ ಗೆದ್ದು ಪಕ್ಷದ ಅಸ್ತಿತ್ವ ಉಳಿಸಿದ್ದರು. ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್-ಕಾಂಗ್ರೆಸ್ ಪಾಲಿಗೆ ಅಷ್ಟಿಷ್ಟು ವ್ಯತ್ಯಾಸವಾದರೂ ಬಿಜೆಪಿ ಪಾಲಿಗೆ ಅಂತಹ ವ್ಯತ್ಯಾಸವಾಗಲಿಕ್ಕಿಲ್ಲ ಎಂಬ ಅಭಿಪ್ರಾಯ ಬಹುತೇಕ ಸಮೀಕ್ಷೆಗಳಲ್ಲಿ ವ್ಯಕ್ತವಾಗುತ್ತಿದೆ. ಮೋದಿ ಬಂದುಹೋದ ಮೇಲಾದರೂ ಶಿವಮೊಗ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಿಜೆಪಿಗೆ ಅನುಕೂಲವಾದೀತು ಎಂಬ ನಿರೀಕ್ಷೆಯಲ್ಲಿಯೇ ಮೇ 5ಕ್ಕೆ ಶಿವಮೊಗ್ಗದಲ್ಲಿ ಮೋದಿ ಬಹಿರಂಗ ಸಭೆ ಏರ್ಪಾಟಾಗಿದೆ.

 

ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ವರ್ಗದ ಮತದಾರರೇ ನಿರ್ಣಾಯಕವಾಗಿರುವ ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆಲ್ಲುತ್ತಾ ಬಂದಿದ್ದಾರೆಂದರೆ, ಎದುರಾಳಿ ಮತಗಳನ್ನು ಒಡೆಯುವ ಕಾರ್ಯತಂತ್ರ ಸಫಲವಾಗುತ್ತಿದ್ದುದೇ ಆಗಿತ್ತು. ಒಂದು ಬಾರಿ ಬಂಗಾರಪ್ಪ ಸಾದರ ಲಿಂಗಾಯಿತರಾದ ಮಹಾಲಿಂಗಪ್ಪ ಎಂಬ ಅಪರಿಚಿತ ಮುಖವನ್ನು ಕಣಕ್ಕಿಳಿಸಿ ಹಿಂದುಳಿದ ವರ್ಗದ ಬೆಂಬಲದಿಂದ ಮಣ್ಣು ಮುಕ್ಕಿಸಿದ್ದು ಬಿಟ್ಟರೆ, ಯಡಿಯೂರಪ್ಪ ಎದುರಾಳಿಗಳೇ ಇಲ್ಲದೆ ಪ್ರಬಲ ಶಕ್ತಿಯಾಗಿ ಉಳಿದಿದ್ದಾರೆ. ಈ ಬಾರಿ ಶಿಕಾರಿಪುರ ಕ್ಷೇತ್ರದಲ್ಲಿ 9 ಮಂದಿ ಅಭ್ಯರ್ಥಿಗಳಿದ್ದಾರೆ. ಬಿಜೆಪಿಯಿಂದ ಯಡಿಯೂರಪ್ಪ, ಜೆಡಿಎಸ್‍ನಿಂದ ಹೆಚ್.ಟಿ.ಬಳಿಗಾರ್, ಕಾಂಗ್ರೆಸ್‍ನಿಂದ ಜಿ.ಬಿ.ಮಾಲತೇಶ್ ಅಲಿಯಾಸ್ ಗೋಣಿ ಮಾಲತೇಶ್, ಆಮ್ ಆದ್ಮಿ ಪಾರ್ಟಿಯಿಂದ ಆರ್.ಚಂದ್ರಕಾಂತ್ ಸ್ಪರ್ಧಿಸಿದ್ದು, ಉಳಿದಂತೆ 5 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ.

ಜೆಡಿಎಸ್‍ನ ಬಳಿಗಾರ್ ಮತ್ತು ಕಾಂಗ್ರೆಸ್‍ನ ಮಾಲತೇಶ್ ಇಬ್ಬರೂ ಯಡ್ಡಿ ಜೊತೆ ರಾಜಿಯಾಗದೆ ರಾಜಕಾರಣ ಮಾಡಿಕೊಂಡು ಬಂದವರು. ಬಳಿಗಾರ್ ಬಂಗಾರಪ್ಪರ ಗರಡಿಯಲ್ಲಿ ಪಳಗಿದ ನಿವೃತ್ತ ಅಧಿಕಾರಿ. ಶಿಕಾರಿಪುರದ ಅಭಿವೃದ್ಧಿ ಕುರಿತು ಬಡಬಡಿಸುವ ಯಡ್ಡಿ ಯಾಕೆ ತಾಲ್ಲೂಕಿಗೆ ಒಂದೂ ನೀರಾವರಿ ಯೋಜನೆ ತರಲಿಲ್ಲ ಎಂಬುದಾಗಿ 6 ತಿಂಗಳ ಹಿಂದೆ ಎತ್ತಿದ ಒಂದೇ ಒಂದು ಪ್ರಶ್ನೆ ಯಡ್ಡಿ ಗ್ಯಾಂಗ್ ಅನ್ನು ಎಷ್ಟು ಕಂಗಾಲುಗೊಳಿಸಿತ್ತೆಂದರೆ ಈಗಲೂ ಆ ಕಂಪನ ನಿಂತಿಲ್ಲ. ಬಹುಶಃ ಬಿ.ವೈ. ರಾಘವೇಂದ್ರ ಸ್ಪರ್ಧಿಸಿದ್ದರೆ ಶಿಕಾರಿಪುರದಲ್ಲಿ ಈ ಬಾರಿ ಸೋಲು ಕಟ್ಟಿಟ್ಟಬುತ್ತಿಯಾಗಿತ್ತು. ಅಷ್ಟರಮಟ್ಟಿಗೆ ಅಸಮಾಧಾನ ಇದೆಯಾದರೂ, ಗೆಲ್ಲುವ ಅಭ್ಯರ್ಥಿ ಎದುರಾಳಿ ಕ್ಯಾಂಪ್‍ನಲ್ಲಿ ಕಾಣದಿರುವುದರಿಂದ ಯಡ್ಡಿ ಮತ್ತೊಂದು ಗೆಲುವು ಪಡೆದಾರು. ಕಾಂಗ್ರೆಸ್ ಶಿಕಾರಿಪುರವನ್ನು ಸೀರಿಯಸ್ಸಾಗಿ ಪರಿಗಣಿಸುತ್ತಲೇ ಇಲ್ಲವಾದ್ದರಿಂದ ಗಟ್ಟಿ ನಾಯಕತ್ವವೇ ಇಲ್ಲವಾಗಿದ್ದು, ಗೋಣಿ ಮಾಲತೇಶ್ ಎಂಬ ಒಂದು ಕಾಲದ ಪುಂಡಾಟಿಕೆ ಆಸಾಮಿಯನ್ನು ಕಣಕ್ಕಿಳಿಸಿ ಚುನಾವಣೆಗೆ ಮೊದಲೇ ನಿರಾಸೆ ಹುಟ್ಟಿಸಿದೆ.

ಮಧು ಬಂಗಾರಿ

ಪಕ್ಕದ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪರ ಆರ್ಭಟಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿಯೇ ಇಲ್ಲ. ರಾಜು ತಲ್ಲೂರು ಎಂಬ ದುಡ್ಡಿನ ಆಸಾಮಿಯನ್ನು ಬಿಜೆಪಿಯಿಂದ ತಂದು ಕಣಕ್ಕಿಳಿಸಿದ್ದು, ಇದೊಂದು ಅಡ್ಜ್‍ಸ್ಟ್‍ಮೆಂಟ್ ರಾಜಕೀಯವಲ್ಲದೆ ಮತ್ತೇನೂ ಅಲ್ಲ. 5 ಅಭ್ಯರ್ಥಿಗಳು ಸೊರಬ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಸ್ವರಾಜ್ ಇಂಡಿಯಾದ ಅಭ್ಯರ್ಥಿಯಾಗಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನೆಲ್ಲ ಸುತ್ತಾಡಿ ಬಂದಿರುವ ಹುಣವಳ್ಳಿ ಗಂಗಾಧರಪ್ಪ ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್‍ನಿಂದ ಎಸ್.ಎಂ.ಕೃಷ್ಣರ ಅಂಗಿ ಚುಂಗು ಹಿಡಿದು ಬಿಜೆಪಿ ಸೇರಿರುವ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ. ಬಿಜೆಪಿ ಓಟು ಒಡೆಯುವಂತಹ ಅಭ್ಯರ್ಥಿಯನ್ನು ಕಾಂಗ್ರೆಸ್ಸಿನಿಂದ ಕಣಕ್ಕಿಳಿಯುವಂತೆ ಕಾಗೋಡು ಮೂಲಕ ಡೀಲು ಕುದುರಿಸಿರುವ ಮಧು ಗೆಲ್ಲುವ ದಾರಿಯಲ್ಲಿದ್ದಾರೆ. ಕುಮಾರ್ ಬಂಗಾರಪ್ಪ ಗೆಲ್ಲಬೇಕಾದರೆ ಯಡ್ಡಿ ಪವಾಡವನ್ನೇ ಮಾಡಬೇಕು.

ಕಾಗೋಡು ತಿಮ್ಮಪ್ಪ

ಇನ್ನು ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ ಅಭ್ಯರ್ಥಿ. ಕಳೆದ ಬಾರಿ ತನ್ನದು ಕೊನೆಯ ಚುನಾವಣೆ ಎಂದು ಗೋಗರೆದು ಗೆದ್ದು ಬಂದು ತಮ್ಮ ಕೊಳಕು ನಾಲಿಗೆ ಝಳಪಿಸಿಯೇ ಕ್ಷೇತ್ರದಲ್ಲಿ ಜನ ವಿರೋಧ ಕಟ್ಟಿಕೊಂಡಿದ್ದ ಈ ಅಜ್ಜ ಈ ಬಾರಿ ಯಡ್ಡಿ ಹಾಗೂ ಮಧು ಬಂಗಾರಪ್ಪ ಜೊತೆಗಿನ ಡೀಲ್‍ನಿಂದ ಗೆಲುವಿನ ದಾರಿ ಸುಗಮಗೊಳಿಸಿಕೊಂಡಿದ್ದಾರೆ. ಸಾಗರದಲ್ಲಿ ಜೆಡಿಎಸ್‍ನಿಂದ ಡಮ್ಮಿ ಅಭ್ಯರ್ಥಿ ಸೊರಬದಲ್ಲಿ ಕಾಂಗ್ರೆಸ್‍ನಿಂದ ಡಮ್ಮಿ ಅಭ್ಯರ್ಥಿ ಶಿಕಾರಿಪುರದಲ್ಲಿ ಕಾಂಗ್ರೆಸ್‍ನಿಂದ ಡಮ್ಮಿ ಅಭ್ಯರ್ಥಿ, ಸಾಗರದಲ್ಲಿ ಬಿಜೆಪಿಯಿಂದ ಬೇಳೂರು ಗೋಪಾಲಕೃಷ್ಣರಿಗೆ ಟಿಕೆಟ್ ವಂಚನೆ. ಇದು ಯಡ್ಡಿ, ಕಾಗೋಡು, ಮಧು ಮೂವರೂ ಸೇರಿ ಮಾಡಿಕೊಂಡಿರುವ ಅಡ್ಜಸ್ಟ್‍ಮೆಂಟ್.

ಬೇಳೂರು ಮತ್ತು ಹರತಾಳು

ಆದರೆ ಸಾಗರದಲ್ಲಿ ಕಾಗೋಡು ಅಷ್ಟು ಸುಲಭವಾಗಿ ಗೆಲ್ಲಲಾರರು. ಏಕೆಂದರೆ ಅವರು ಮಾಡಿಕೊಂಡ ಅವಾಂತರ ಅಷ್ಟಿವೆ. ಸಾಗರ ಕ್ಷೇತ್ರದಿಂದ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಸ್ವರಾಜ್ ಇಂಡಿಯಾದಿಂದ ದೂಗೂರು ಪರಮೇಶ್ವರ ಎಂಬ ದಲಿತ ಮುಖಂಡ ಕಣದಲ್ಲಿದ್ದಾರೆ. ಜೆಡಿಎಸ್‍ನಿಂದ ಸ್ಪರ್ಧಿಸಿರುವ ಗಿರೀಶ್‍ಗೌಡ ನಾಮಪತ್ರ ಸಲ್ಲಿಕೆಯ ಹಿಂದಿನ ರಾತ್ರಿವರೆಗೆ ಕಾಗೋಡು ಜೊತೆಯಲ್ಲೇ ಇದ್ದವರು. ಬಿಜೆಪಿಯಿಂದ ಹರತಾಳು ಹಾಲಪ್ಪ ಅಭ್ಯರ್ಥಿ. ಬೇಳೂರು ಗೋಪಾಲಕೃಷ್ಣ ಬಿಜೆಪಿ ಅಭ್ಯರ್ಥಿಯಾದರೆ ಕಾಗೋಡು ಮನೆಗೆ ಎಂಬ ಮಾತು ಜನಜನಿತವಾಗಿತ್ತು. ಅದು ನಿಜವೂ ಆಗಿತ್ತು. ಆದರೆ ಕಾಗೋಡು ಬಾಯಿಗೆ ಲಾಡು ಇಟ್ಟಿದ್ದು ಯಡ್ಡಿಯೇ. ಹಠಕ್ಕೆ ಬಿದ್ದು ಹರತಾಳು ಹಾಲಪ್ಪರಿಗೆ ಟಿಕೆಟ್ ಕೊಟ್ಟ ಯಡ್ಡಿ ವಿರುದ್ಧ ವಾಚಾಮಗೋಚರ ಬೈಯ್ದು ಬೇಳೂರು ಗೋಪಾಲ ಕೃಷ್ಣ ಎಂಬ ಬಾಲವಿಲ್ಲದ ಮಂಗ ಹಾರಿದ್ದು ಕಾಂಗ್ರೆಸ್‍ಗೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಜೆಡಿಎಸ್‍ಗೆ ಹಾರಿದ್ದ ಬೇಳೂರು ಈ ಬಾರಿ ಕಾಂಗ್ರೆಸ್‍ಗೆ ನೆಗೆದಿದ್ದಾರೆ. ಆ ಮೂಲಕ ಅಜ್ಜನನ್ನು ಸೋಲಿನ ದವಡೆಯಿಂದ ಪಾರು ಮಾಡುವ ಆಪದ್ಭಾಂಧವನಾಗಿ ಅವತರಿಸಿದ್ದಾರೆ. ಏನೇ ಆಗಲಿ ಕೋಮುವಾದಿ ಪಕ್ಷದ ಹಾಲಪ್ಪನಂತಹ ಅನಾಚಾರಿ ಗೆಲ್ಲುವುದಕ್ಕಿಂತ ಉದ್ಧಟತನ, ದುರಹಂಕಾರದ ಕಾಗೋಡು ಗೆದ್ದು ಬಂದರೆ ಅಡ್ಡಿಯಿಲ್ಲ ಎಂಬುದಂತೂ ಸತ್ಯವೇ.

ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವುದು ಅಹಿರಾವಣ- ಮಹಿರಾವಣ ಕಾಳಗ. ಇಲ್ಲಿ ಕಿಮ್ಮನೆ ರತ್ನಾಕರ್ ಗೆಲ್ಲಬೇಕಾದ ಅಭ್ಯರ್ಥಿ. ಹೆಜ್ಜೆನಿಸುವಷ್ಟು ತಮ್ಮ ಪ್ರಾಮಾಣಿಕತೆಯನ್ನು ಹೊಗಳಿಕೊಳ್ಳುತ್ತಾರೆ ಹಾಗೂ ಅವರು ತೋರಿಸಿಕೊಳ್ಳುವಷ್ಟೇನೂ ಪ್ರಾಮಾಣಿಕರಲ್ಲ ಹಾಗೂ ದಕ್ಷರೂ ಅಲ್ಲ ಎಂಬುದು ನಿಜವೇ ಆದರೂ ತೀರ್ಥಹಳ್ಳಿಯ ಇವತ್ತಿನ ಪರಿಸ್ಥಿತಿಯಲ್ಲಿ ಕಿಮ್ಮನೆ ಆಯ್ಕೆಯಾಗಬೇಕಾದ ಅಭ್ಯರ್ಥಿಯೇ.

ತೀರ್ಥಹಳ್ಳಿಯಲ್ಲಿ ಕಣದಲ್ಲಿರುವುದು 8 ಮಂದಿ ಅಭ್ಯರ್ಥಿಗಳು, ಕಳೆದ ಬಾರಿಯಂತೆ ಯಥಾ ಪ್ರಕಾರ ಬಿಜೆಪಿಯಿಂದ ಆರಗ e್ಞÁನೇಂದ್ರ, ಜೆಡಿಎಸ್‍ನಿಂದ ಆರ್.ಎಂ.ಮಂಜುನಾಥಗೌಡ, ಕಳೆದ ಚುನಾವಣೆಯಲ್ಲಿ ಮಂಜುನಾಥ ಗೌಡ ಕೆಜೆಪಿ ಅಭ್ಯರ್ಥಿಯಾಗಿದ್ದರು. ಅಧಿಕಾರವಿದ್ದಾಗ ಬಿಜೆಪಿ ಸೇರಿ ಯಡ್ಡಿ ಜೊತೆ ಕೆಜೆಪಿಗೆ ಹೋಗಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾಂಗ್ರೆಸ್‍ಗೆ ನೆಗೆದು ಚುನಾವಣೆ ಬರುತ್ತಲೇ ಜೆಡಿಎಸ್ ಸೇರಿರುವ ಮಂಜುನಾಥಗೌಡ 20 ವರ್ಷದ ಹಿಂದೆ ಇದ್ದ ಜನತಾ ಪರಿವಾರ ಸೇರಿದ್ದಾರೆ. ಕಿಮ್ಮನೆ ಹ್ಯಾಟ್ರಿಕ್ ಗೆಲುವಿನ ಯತ್ನದಲ್ಲಿದ್ದರೆ 2 ಬಾರಿ ಗೆದ್ದು 2 ಬಾರಿ ಸೋತಿರುವ ಆರಗ ಜ್ಞಾನೇಂದ್ರ ಮತ್ತೆ ಗೆದ್ದು ಸಚಿವರಾಗುವ ಕನಸು ಕಾಣುತ್ತಿದ್ದಾರೆ. ಇವರಿಬ್ಬರಿಗೂ ಅಡ್ಡಿಯಾಗಿರುವುದು ಮಂಜುನಾಥಗೌಡ. ಡಿಸಿಸಿ ಬ್ಯಾಂಕ್‍ನ 62 ಕೋಟಿ ರೂ. ನಕಲಿ ಬಂಗಾರ ಹಗರಣದ ಆರೋಪ ಹೊತ್ತು ಕೇಸು ಹಾಕಿಸಿಕೊಂಡು ಲೋಕಾಯುಕ್ತ ದಾಳಿ, ಐಟಿ ದಾಳಿಯಿಂದೆಲ್ಲ ಹೈರಾಣಾಗಿ ಈ ಬಾರಿ ಗೆಲ್ಲದಿದ್ದರೆ ರಾಜಕೀಯ ಅವಸಾನ ಎಂಬ ಸ್ಥಿತಿಯಲ್ಲಿ ಮಂಜುನಾಥಗೌಡ ಕಳೆದ ಚುನಾವಣೆಯಂತೆಯೇ ಹಣದ ಹೊಳೆ ಹರಿಸಲು ಸನ್ನದ್ಧರಾಗಿದ್ದಾರೆ. ಎರ್ರಾಬಿರ್ರಿ ದುಡ್ಡು ಖರ್ಚು ಮಾಡಿಯೂ ಕಿಮ್ಮನೆ ಕಂಗಾಲಾಗಿದ್ದಾರೆ. ಆದರೆ ಯಾರಿಗೂ ಕೇಡು ಬಯಸದ ಕಿಮ್ಮನೆ ಪರವಾದ ಜನಾಭಿಪ್ರಾಯ ತೀರ್ಥಹಳ್ಳಿಯಲ್ಲಿದ್ದು, ಇದು ಯಾವ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಾಗಿದೆ. ಆರಗ ಜ್ಞಾನೇಂದ್ರ ಪರವಾಗಿ ಆರೆಸ್ಸೆಸ್ ಕೆಲಸ ಮಾಡುತ್ತಿರುವುದು ಮತ್ತೊಂದು ಬಗೆಯ ಅಂಡರ್ ಕರೆಂಟ್ ಆಗಿದ್ದು ಇಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆಯಿದೆ. ಮೊದಲಿಂದಲೂ ತೀರ್ಥಹಳ್ಳಿಯಲ್ಲಿ ಯಾರೇ ಗೆದ್ದರೂ ಸಣ್ಣ ಮಾರ್ಜಿನ್‍ನಲ್ಲೇ ಎಂಬುದು ಗಮನಾರ್ಹ.

ಶಿವಮೊಗ್ಗದಲ್ಲಿ ಬಿಜೆಪಿಯಿಂದ ಹಠಕ್ಕೆ ಬಿದ್ದು ಟಿಕೆಟ್ ಪಡೆದು ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ ಈಗಾಗಲೇ ಹಿಂದುತ್ವದ ಆಧಾರದಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿಯಾಗಿದೆ. ಬಿಜೆಪಿಯ ಭಯಂಕರ ಅನಾಹುತಕಾರಿ ಮುಖವಾಗಿರುವ ಈಶ್ವರಪ್ಪ ಒಂದು ಟಿಕೆಟ್ ಪಡೆಯಲು ಭರ್ಜರಿ ಕಸರತ್ತು ನಡೆಸಬೇಕಾಯಿತು ಎಂಬುದು ಪಕ್ಷದಲ್ಲಿ ಈಶ್ವರಪ್ಪನ ಹಣೆಬರಹವನ್ನು ಸೂಚಿಸುತ್ತದೆ. ಶುದ್ಧ ಅವಿವೇಕಿಯೂ, ಜನಸೇವೆಗೆ ಅಯೋಗ್ಯನೂ ಆದ ಈಶ್ವರಪ್ಪನನ್ನು ಕೃಷ್ಣ ಪರಮಾತ್ಮನೂ ಗೆಲ್ಲಿಸಲಾರ ಎಂಬ ಪರಿಸ್ಥಿತಿ ಇದೆ. ಶಿವಮೊಗ್ಗ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ ಈಶ್ವರಪ್ಪ ಕಣಕ್ಕಿಳಿಸಿದ 6 ಮಂದಿ ಇದ್ದಾರೆ. ಕಾಂಗ್ರೆಸ್‍ನಿಂದ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್‍ನಿಂದ ನಿರಂಜನ್ ಕಣದಲ್ಲಿದ್ದಾರೆ. ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನರಸಿಂಹಮೂರ್ತಿ ಎಂಬ ಮುಖವೂ ಕಣದಲ್ಲಿದೆ.

ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗದ ಕೋಮುಗಲಭೆಗಳ ಸೃಷ್ಟಿಕರ್ತರೇ ಇಲ್ಲಿಯ ಆರೆಸ್ಸೆಸ್ ಬ್ರಾಹ್ಮಣರು. ಅವರೇ ಈ ಬಾರಿ ಈಶ್ವರಪ್ಪಗೆ ಕೈಕೊಟ್ಟು ಜಾತಿಯ ಕಾರಣಕ್ಕಾಗಿ ಕೆ.ಬಿ.ಪ್ರಸನ್ನಕುಮಾರ್ ಬೆನ್ನಿಗೆ ನಿಂತಿದ್ದಾರೆ. ಸುಮಾರು 52 ಸಾವಿರದಷ್ಟು ಇರುವ ಮುಸ್ಲಿಮರು 45 ಸಾವಿರದಷ್ಟು ಇರುವ ಬ್ರಾಹ್ಮಣರು ಒಟ್ಟಾಗಿರುವುದು, ಲಿಂಗಾಯಿತರು ಈಶ್ವರಪ್ಪರಿಗೆ ಕೈಕೊಡುತ್ತಿರುವುದು, ಈಶ್ವರಪ್ಪರನ್ನು ಕಂಗಾಲುಗೊಳಿಸಿದೆ. ಸಿದ್ದು ಹೆಸರು ಹಿಂದುಳಿದವರು, ದಲಿತರ ನಡುವೆ ಜನಪ್ರಿಯವಾಗಿರುವುದು ಕಾಂಗ್ರೆಸ್‍ಗೆ ಅನುಕೂಲಕರವಾಗಿದೆ. ಹೀಗೆಲ್ಲ ಇರುವ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್‍ನ ಕೆ.ಬಿ.ಪ್ರಸನ್ನಕುಮಾರ್ ಪುನರಾಯ್ಕೆಗೆ ಆತಂಕವೇನೂ ಇಲ್ಲ.

ಶಿವಮೊಗ್ಗ ಗ್ರಾಮಾಂತರದಲ್ಲಿ ಗೆಲ್ಲಬೇಕಾದ ಅಭ್ಯರ್ಥಿ ಜೆಡಿಎಸ್‍ನ ಶಾರದಾ ಪೂರ್ಯನಾಯ್ಕ, ಅವರಿಗೆ ಪರಿಸ್ಥಿತಿ ಅನುಕೂಲಕರವಾಗಿದೆ ಕೂಡ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದಿರುವುದು 7 ಮಂದಿ ಮಾತ್ರ. ಬಿಜೆಪಿಯಿಂದ ಅಶೋಕನಾಯ್ಕ, ಕಾಂಗ್ರೆಸ್‍ನಿಂದ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ.ಶ್ರೀನಿವಾಸ್ ಸ್ಪರ್ಧಿಗಳು. ಕಾಂಗ್ರೆಸ್ ಬಿಜೆಪಿಯಿಂದ ತಲಾ ಒಂದೊಂದು ಡಜನ್ ಆಕಾಂಕ್ಷಿಗಳಿದ್ದರು. ಟಕೆಟ್ ಸಿಗದಿದ್ದಾಗ ಬಂಡಾಯ ಸ್ಪರ್ಧೆಯ ಮಾತಾಡಿದ್ದವರು ಈಗ ಕಾಸು ಪಡೆದು ತಣ್ಣಗಾಗಿದ್ದಾರೆ. ಆದರೆ ಒಳ ಹೊಡೆತ ಸರಿಯಾಗಿಯೇ ಕೆಲಸ ಮಾಡಲಿದೆ. ಲಿಂಗಾಯತರ ಮತ ದೊಡ್ಡ ಸಂಖ್ಯೆಯಲ್ಲಿದ್ದು ಯಡ್ಡಿ ಕಾರಣಕ್ಕಾಗಿ ಲಿಂಗಾಯಿತರು ಬಿಜೆಪಿ ಬೆಂಬಲಿಸುವುದರಿಂದ ಅಶೋಕನಾಯ್ಕ ಪ್ರಬಲ ಅಭ್ಯರ್ಥಿ. ಲಂಬಾಣಿ, ಬೋವಿ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು ವಿಶಾಲವಾದ ಕ್ಷೇತ್ರವಿದು. ಇಲ್ಲಿ ಕಾಂಗ್ರೆಸ್‍ನ ಡಾ.ಶ್ರೀನಿವಾಸ್ ಡಮ್ಮಿಯಾಗುವ ಸಾಧ್ಯತೆಯಿದೆ. ಅಶೋಕನಾಯ್ಕ ಮತ್ತು ಶಾರದಾ ಪೂರ್ಯನಾಯ್ಕ ನಡುವೆ ನೇರ ಸ್ಪರ್ಧೆ ನಡೆಯಲಿದ್ದು ಶಾರದಾ ಪೂರ್ಯನಾಯ್ಕ ಗೆಲ್ಲಬೇಕಾದ ಸಜ್ಜನ ಅಭ್ಯರ್ಥಿ.

ಅಪ್ಪಾಜಿ ಗೌಡ

ಉಳಿದಂತೆ ಭದ್ರಾವತಿ ಕ್ಷೇತ್ರ ಆಸಕ್ತಿದಾಯಕ ಕ್ಷೇತ್ರವಲ್ಲ. ಸಜ್ಜನರ ರಾಜಕಾರಣಕ್ಕೆ ಅವಕಾಶವೇ ಇಲ್ಲದ ವಿಧಾನಸಭಾ ಕ್ಷೇತ್ರವಿದು. 3 ದಶಕಗಳಿಂದ ಬಿ.ಕೆ.ಸಂಗಮೇಶ್ ಮತ್ತು ಎಂ.ಜೆ.ಆಪ್ಪಾಜಿ ಗೌಡರ ವ್ಯಕ್ತಿಗತ ರಾಜಕಾರಣದ ಕದನ ಭೂಮಿಯಾಗಿದೆ. ಕೈಗಾರಿಕಾ ನಗರವಾಗಿದ್ದ ಭದ್ರಾವತಿಯಲ್ಲಿ ರೌಡಿಗಳ ಹಾವಳಿಯನ್ನು ತಾರಕಕ್ಕೇರಿಸಿದ ಕುಖ್ಯಾತಿ ಇವರಿಬ್ಬರಿಗೆ ಸಲ್ಲಬೇಕು. ಈಗ ವಯಸ್ಸಾಗಿದೆ. ಸಜ್ಜನರಂತೆ ತೋರಿಸಿಕೊಳ್ಳುತ್ತಾರೆ. ಇಬ್ಬರೂ ಪಕ್ಷೇತರರಾಗಿ ನಿಂತು ಸೋತು, ಗೆದ್ದು ರಾಜಕಾರಣಕ್ಕೆ ಬಂದವರು. ಸಂಗಮೇಶ್ ಕಾಂಗ್ರೆಸ್ ಬಾಗಿಲಲ್ಲೂ ಅಪ್ಪಾಜಿಗೌಡ ದಳದ ಬಾಗಿಲಲ್ಲೂ ಉಳಿದಿದ್ದಾರೆ. ಇಬ್ಬರಲ್ಲಿ ಒಬ್ಬರೂ ಬಿಜೆಪಿ ಸೇರಿಲ್ಲವಾದ್ದರಿಂದ ಆ ಪಕ್ಷ ಸತ್ತ ಸ್ಥಿತಿಯಲ್ಲಿ ಬದುಕಿದೆ. ಬಿಜೆಪಿ ಇಲ್ಲಿ 3000ಕ್ಕಿಂತ ಹೆಚ್ಚಿನ ಓಟು ಪಡೆಯಲು ಸಾಧ್ಯವಾಗಿಲ್ಲ. ಭಜರಂಗಿ ಮನಸ್ಸಿನ ಕಿಡಿಗೇಡಿಗಳಿಗೇನು ಇಲ್ಲಿ ಬರವಿಲ್ಲ. ಅವರೆಲ್ಲ ಸಂಗಮೇಶ್, ಅಪ್ಪಾಜಿ ಜೊತೆಗೇ ಇರುತ್ತಾರೆ. ಈ ಬಾರಿ ಸಂಗಮೇಶ್ ಕಾಂಗ್ರೆಸ್‍ನಿಂದ ಅಪ್ಪಾಜಿ ಜೆಡಿಎಸ್‍ನಿಂದ ಸ್ಪರ್ಧೆಗಿಳಿಸಿದ್ದಾರೆ. ಮಾಜಿ ಶಾಸಕ ರಾಜಶೇಖರ್ ಪುತ್ರ ಪ್ರವೀಣ್ ಪಟೇಲ್ ಎಂಬ ಹುಡುಗ ಕಾಂಗ್ರೆಸ್‍ನಿಂದ ಬಿಜೆಪಿ ಸೇರಿ ಕಣಕ್ಕಿಳಿದ್ದಿದ್ದಾನೆ. ಕಳೆದ ಬಾರಿ ಅಪ್ಪಾಜಿ ಗೆದಿದ್ದರಾದ್ದರಿಂದ ಈ ಬಾರಿ ಸಂಗಮೇಶ್‍ಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಮುಸ್ಲಿಮರು, ಲಿಂಗಾಯಿತರ ಮತ ಸಂಗಮೇಶ್ ಪಡೆದರೆ ಸಿದ್ದು ಹೆಸರಲ್ಲಿ ಹಿಂದುಳಿದವರು ಕೈ ಹಿಡಿಯುವ ಸಾಧ್ಯತೆ ಇದೆ.

ಹೀಗೆ ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ -ಜೆಡಿಎಸ್‍ನ ಸ್ಥಿತಿ ಇದೆ. ಶಿವಮೊಗ್ಗದ ಕೆ.ಬಿ.ಪ್ರಸನ್ನಕುಮಾರ್, ತೀರ್ಥಹಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್, ಸಾಗರದಲ್ಲಿ ಕಾಗೋಡು ತಿಮ್ಮಪ್ಪ , ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಶಾರದಾ ಪೂರ್ಯನಾಯ್ಕ ಜಿಲ್ಲೆಯಲ್ಲಿ ಪುನರಾಯ್ಕೆ ಆಗಬೇಕಾದ ಅಭ್ಯರ್ಥಿಗಳು. ಇವರ್ಯಾರೂ ಜಿಲ್ಲೆಯ ಮಾನ ಹರಾಜು ಹಾಕುವಂತಹವರಲ್ಲ. ಶಿಕಾರಿಪುರದಲ್ಲಿ ಜೆಡಿಎಸ್‍ನ ಹೆಚ್.ಟಿ.ಬಳಿಗಾರ್ ಪ್ರಬಲ ಅಭ್ಯರ್ಥಿಯಾಗಿ ಹೊರ ಹೊಮ್ಮಿದರೆ ಅದೊಂದು ಪಾಠವಾಗುತ್ತದೆ. ಉಳಿದಂತೆ ಸೊರಬ ಮತ್ತು ಭದ್ರಾವತಿಯಲ್ಲಿ ರೌಡಿ ರಾಜಕಾರಣದಿಂದ ಸದ್ಯಕ್ಕಂತೂ ಜನರಿಗೆ ಮುಕ್ತಿಯಿಲ್ಲವಾಗಿದ್ದು ಬಿಜೆಪಿ, ಜೆಡಿಎಸ್, ಕಾಂಗ್ರೆಸ್‍ನ ದಾದಾಗಿರಿ ಮುಖವನ್ನು ಈ ಮೂರು ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...