Homeಅಂಕಣಗಳುಸಂಪಾದಕೀಯ

ಸಂಪಾದಕೀಯ

- Advertisement -
- Advertisement -

ಕವಿದ ಕತ್ತಲ ನಡುವೆ ಬೆಳಕಿನ ಭರವಸೆಗಳು

ಸಂಪಾದಕೀಯ ತಂಡದ ಪರವಾಗಿ
@ ದೊಡ್ಡಿಪಾಳ್ಯ ನರಸಿಂಹಮೂರ್ತಿ

ಹಸುಗೂಸು ಆಸಿಫಾಳ ಮೇಲೆ ನಡೆದ ಆ ಕ್ರೌರ್ಯ ಕಲ್ಲುಹೃದಯಗಳನ್ನೂ ಕಲಕಿಬಿಟ್ಟಿದೆ. ಸೂಕ್ಷ್ಮಸಂವೇದನೆಯ ಅದೆಷ್ಟೋ ಮಂದಿ ಈ ಆಘಾತದ ವಿವರ ಕೇಳಿ ಮಂಕುಬಡಿದವರಂತಾಗಿದ್ದಾರೆ. ಆಸಿಫಾಳ ಪ್ರಸ್ತಾಪ ಬಂದಾಕ್ಷಣ ತೀವ್ರ ವ್ಯಾಕುಲತೆಗೆ ಜಾರುವವರಿದ್ದಾರೆ. ‘ಪ್ಲೀಸ್, ಆ ವಿಷ್ಯ ನಿಲ್ಸಿ, ಮತ್ತೆ ನೆನಪಿಸಬೇಡಿ’ ಎಂದು ಮರೆಯಲೆತ್ನಿಸುವವರೂ ಇದ್ದಾರೆ. ಹೌದು, ಇವೆಲ್ಲಾ ಮನುಷ್ಯರ ಸಹಜ ಪ್ರತಿಕ್ರಿಯೆಗಳು.

ಆದರೆ ಪಾತಕಿಗಳ ಪರವಾಗಿ ನಿಂತು ಆ ಮುಗ್ದ ಕೂಸಿನ ಮೇಲೆ ನಡೆದ ಕ್ರೌರ್ಯವನ್ನು ಮುಚ್ಚಿಹಾಕಲು ಹರಸಾಹಸಪಟ್ಟ ಕಥುವಾದ ಪೊಲೀಸರೂ ಮನುಷ್ಯರೇ ತಾನೆ? ಭಾರತ್ ಮಾತಾ ಕಿ ಜೈ ಘೋಷಣೆಯ ಅಬ್ಬರದಡಿ ನ್ಯಾಯದ ಕೂಗನ್ನು ಮುಚ್ಚಿಹಾಕಲು ಹೆಣಗುತ್ತಿರುವವರು, ತ್ರಿವರ್ಣದ್ವಜವನ್ನು ಪಟಪಟಿಸಿ ಅದರಡಿಯಲ್ಲಿ ಪಾತಕಿಗಳಿಗೆ ರಕ್ಷಣೆ ಒದಗಿಸಿದ್ದವರಿಗೂ ಕೂಡ ಮನುಷ್ಯ ರೂಪವೇ ಇತ್ತಲ್ಲಾ? ಅತ್ಯಾಚಾರಿ, ಕೊಲೆಗಡುಕರ ಪರವಾಗಿ ಭಾರೀ ರ್ಯಾಲಿ ಏರ್ಪಡಿಸಿದ ಸಂಘಿ ಕೂಟದ ‘ಹಿಂದೂ ಏಕತಾ ಮಂಚ್’ನವರ ಅಸಲಿಯತ್ತಾದರೂ ಏನು? ‘ಯಾರೊಬ್ಬರನ್ನೂ ಅರೆಸ್ಟ್ ಮಾಡುವಂತಿಲ್ಲ’ ಎಂದು ಬಿಜೆಪಿಯ ಕೈಗಾರಿಕಾ ಸಚಿವ ಚಂದ್ರಪ್ರಕಾಶ್ ಗಂಗ ಈ ಬಹಿರಂಗ ರ್ಯಾಲಿಗಳಲ್ಲೇ ಧಮಕಿ ಹಾಕುತ್ತಾನೆಂದರೆ ಅಲ್ಲಿ ಎಂಥಾ ವ್ಯವಸ್ಥೆ ಇರಬಹುದು? ‘ಒಬ್ಬ ಹುಡುಗಿಯಷ್ಟೇ ಸತ್ತಿರೋದು, ಇನ್ನೂ ಬಹಳ ಹೆಣ್ಣುಮಕ್ಕಳು ನಮ್ಮ ಮುಂದೆಯೇ ಇದ್ದಾರೆ’ ಎಂದು ಉಗ್ರಹಿಂದುತ್ವದ ಭಾಷಣ ಮಾಡಿ ಘೋರಪಾತಕಗಳಿಗೆ ಬಹಿರಂಗ ಪ್ರಚೋದನೆ ನೀಡಿದ ಲಾಲ್‍ಸಿಂಗ್ ಆ ರಾಜ್ಯದ ಅರಣ್ಯ ಸಚಿವನೆಂದರೆ ನಂಬುವುದಾದರೂ ಹೇಗೆ?

ಕಥುವಾ ಮತ್ತು ಉನ್ನಾವೊಗಳಲ್ಲಿ ಪಾತಕಿಗಳು, ಪೊಲೀಸರು ಮತ್ತು ಸರ್ಕಾರ ಎಲ್ಲರೂ ಒಂದೇ ಗ್ಯಾಂಗಿನ ಸದಸ್ಯರೆಂಬಂತೆ ವರ್ತಿಸಿದ್ದಾರೆ. ಇಷ್ಟು ಸಾಲದು ಎಂಬಂತೆ ಕೋಮುವ್ಯಾಧಿ ವೈರಸ್ ಹರಡುತ್ತಿರುವ ಶಕ್ತಿಗಳು ಈ ಪಾತಕಗಳಿಗೆ ಸಾಮಾಜಿಕ ಬೆಂಬಲ ಕೂಡಿಸುವ ಪಾಪದಲ್ಲಿ ತೊಡಗಿವೆ. ದೇಶಾದ್ಯಂತ ಈ ಜಾಲ ವೇಗವಾಗಿ ವಿಸ್ತರಿಸುತ್ತಿದೆ. ಹೀಗೇ ಮುಂದುವರೆದರೆ ಮನುಷ್ಯತ್ವಕ್ಕೆ ಉಳಿಗಾಲವಿದೆಯೆ? ನಮ್ಮ ಪ್ರಜಾತಂತ್ರಕ್ಕೆ ಭವಿಷ್ಯವಿದೆಯೆ ಎಂಬ ಆತಂಕ ಕಾಡುತ್ತದೆ. ನಾವು ಸಿನಿಕತೆಗೆ ಜಾರುವುದು ಇಂಥ ಸನ್ನಿವೇಶಗಳಲ್ಲೇ.

ಕೋರ್ಟ್ ಆವರಣದಲ್ಲಿ ದೀಪಿಕಾ ಸಿಂಗ್

ಇಂಥಾ ಕರಾಳ ಸನ್ನಿವೇಶದಲ್ಲೂ ಆಸಿಫಾಳ ಪೋಷಕರ ಪರ ನ್ಯಾಯಾಲಯದಲ್ಲಿ ದೃಡವಾಗಿ ಹೋರಾಡಿದ ಯುವ ವಕೀಲೆ ದೀಪಿಕಾ ಸಿಂಗ್ ರಜಾವತ್ ನಮಗೆ ಭರವಸೆಯ ಬೆಳಕಾಗಿ ಕಾಣುತ್ತಾರೆ. ಈ ಕೇಸು ಕೈಗೆತ್ತಿಕೊಂಡಿದ್ದಕ್ಕಾಗಿ ಸೋದರಿ ದೀಪಿಕಾರನ್ನು ಹಿಂದೂವಿರೋಧಿಯೆಂದು ಆರೋಪಿಸಿ ಹಿಂದೂ ಏಕತಾ ಮಂಚ್ ಗದ್ದಲವೆಬ್ಬಿಸಿತು. ಅವರ ಓಡಾಟಕ್ಕೇ ಆತಂಕ ಒಡ್ಡಲಾಯ್ತು. ಅತ್ಯಾಚಾರ ಮಾಡಿ ಕೊಲ್ಲುವ ಬೆದರಿಕೆಗಳೂ ಬಂದವು.

ದೀಪಿಕಾಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಕೊಟ್ಟಿದೆಯೆಂದರೆ ಆಕೆ ಎದುರಿಸುತ್ತಿರುವ ಪರಿಸ್ಥಿತಿಯನ್ನು ಯಾರಾದರೂ ಗ್ರಹಿಸಬಹುದು. ‘ಆಸಿಫಾ ನನ್ನ ಮಗಳು, ಆಕೆಯ ಪರವಾಗಿ ನನ್ನ ಉಸಿರಿರುವವರೆಗೂ ಹೋರಾಡುತ್ತೇನೆ’ ಎಂದ ದೀಪಿಕಾ ನಮ್ಮ ಭರವಸೆ.

ಈ ಪ್ರಕರಣದಲ್ಲಿ ಪಾತಕಿಗಳನ್ನು ಪತ್ತೆಹಚ್ಚಿ, ಕಂಬಿಗಳ ಹಿಂದೆ ಕಳಿಸುವಲ್ಲಿ ಬಹುಮುಖ್ಯಪಾತ್ರ ವಹಿಸಿದವರು ಎಸ್‍ಐಟಿಯ ಡಿವೈಎಸ್‍ಪಿ ಶ್ವೇತಾಂಬರಿ ಶರ್ಮ. ಅವರ ಮಾತುಗಳನ್ನೇ ಕೇಳೋಣ.

“ಬಹುತೇಕ ಆರೋಪಿಗಳು ಬ್ರಾಹ್ಮಣರೇ ಆಗಿದ್ದುದರಿಂದ ಅವರು ತಮ್ಮ ಸರ್‍ನೇಮ್‍ಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ನಾವೂ ನೀವೂ ಒಂದೇ ಜಾತಿಯವರು, ಒಂದೇ ಧರ್ಮದವರು. ಆದ್ದರಿಂದ ಆ ಮುಸ್ಲಿಂ ಹುಡುಗಿಯ ರೇಪ್ & ಮರ್ಡರ್ ಕೇಸಿನಿಂದ ತಮ್ಮನ್ನು ತಪ್ಪಿಸಬೇಕೆಂದು ನಾನಾ ವಿಧಾನದಲ್ಲಿ ಪ್ರಭಾವ ಬೀರಲು ಯತ್ನಿಸಿದರು. ಪೊಲೀಸ್ ಅಧಿಕಾರಿಯಾಗಿರುವ ನನಗೆ ಯಾವುದೇ ಧರ್ಮವಿಲ್ಲ, ನಾನು ತೊಟ್ಟಿರುವ ಸಮವಸ್ತ್ರವೇ ನನ್ನ ಧರ್ಮ ಎಂದು ಅವರಿಗೆ ಹೇಳಿ ಕಳಿಸಿದೆ.”

ರಮೇಶ ಕುಮಾರ್ ಜಲ್ಲಾ

ಈ ತನಿಖೆಯ ಮೇಲ್ವಿಚಾರಣಾಧಿಕಾರಿ ಎಸ್‍ಪಿ ರಮೇಶ್ ಕುಮಾರ್ ಜಲ್ಲಾ ಅತಿ ಸೂಕ್ಷ್ಮ ಕೇಸುಗಳನ್ನು ನಿಭಾಯಿಸಿದ ಅನುಭವಿ. ಅವರು ಆಸಿಫಾ ಕೇಸನ್ನು ಎಷ್ಟು ಮನಸ್ಸಿಗೆ ಹಚ್ಚಿಕೊಂಡಿದ್ದರೆಂದರೆ ‘ಎರಡು ತಿಂಗಳು ಹಗಲಿರುಳು ಶ್ರಮಿಸಿದ ನಂತರ ಅಂತಿಮವಾಗಿ ಚಾರ್ಜ್‍ಶೀಟ್ ದಾಖಲಿಸಲು ಸಾಧ್ಯವಾಯ್ತು. ನಂತರವಷ್ಟೇ ಕಣ್ತುಂಬಾ ನಿದ್ದೆ ಮಾಡಿದ್ದು’ ಎಂದು ವಿವರಿಸುತ್ತಾರೆ. ಶಿಸ್ತಿನ ಈ ಅಧಿಕಾರಿ ನುಸುಳುಕೋರರ ವಿರುದ್ಧದ ಹೋರಾಟದಲ್ಲಿ ಖ್ಯಾತಿ ಪಡೆದಿರುವವರು.

ಮಾನವೀಯತೆ ಹಾಗೂ ಕಾನೂನು ಆಡಳಿತದ ಪರವಾಗಿ ದಿಟ್ಟವಾಗಿ ನಿಂತ ಇಂಥಾ ಮಹಾನ್‍ವ್ಯಕ್ತಿಗಳ ಪ್ರಯತ್ನದಿಂದಲೇ ನಮ್ಮ ಸಮಾಜ ಇಷ್ಟಾದರೂ ಸಹ್ಯವಾಗಿ ಉಳಿದುಕೊಂಡಿದೆ. ಈ ದಿಟ್ಟ ದನಿಗಳಿಗೆ ಈಗ ದೇಶದಾದ್ಯಂತ ಕೋಟ್ಯಾಂತರ ಜನರು ಮಾರ್ದನಿಯಾಗಿದ್ದಾರೆ. ಮಾನವೀಯ ಭವಿಷ್ಯದ ಕನಸಿಗೆ ಮತ್ತಷ್ಟು ಕಸುವು ತುಂಬುತ್ತಿದ್ದಾರೆ.

ಕೊನೆಯದಾಗಿ, ಇನ್ಸ್‍ಟಾಗ್ರಾಮ್ ಮೂಲಕ ಪ್ರಧಾನಿ ಮೋದಿಗೆ ಪತ್ರ ಬರೆದ ಒಬ್ಬ ಮೋದಿ ಅಭಿಮಾನಿಯ ಮಾತನ್ನು ಕೇಳೋಣ.
“ಮಾನ್ಯ ಪ್ರಧಾನಿಯವರೆ,
ತಾವು ರಾತ್ರೋರಾತ್ರಿ ಕರೆನ್ಸಿ ನೋಟು ಬದಲಾಯಿಸಿಬಿಟ್ಟಿರಿ.
ರಾತ್ರೋರಾತ್ರಿ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಿಬಿಟ್ಟಿರಿ.
ರಾತ್ರೋರಾತ್ರಿ ಸರ್ಕಾರಗಳನ್ನೂ ಬದಲಾಯಿಬಿಡುತ್ತಿದ್ದೀರಿ.
ನೀವೀಗ ಈ ಅತ್ಯಾಚಾರದ ಸಂಸ್ಕøತಿಯನ್ನು ಬದಲಾಯಿಸದಿದ್ದರೆ, ಅತ್ಯಾಚಾರಿಗಳಿಗೆ ಶಿಕ್ಷೆಯಾಗುವಂತೆ ಮಾಡದಿದ್ದರೆ, ಆಗ ನಾನು ನನ್ನ ಓಟನ್ನು ರಾತ್ರೋರಾತ್ರಿ ಬದಲಿಸಬಲ್ಲೆ. 2019 ಬಹಳ ದೂರವೇನಿಲ್ಲ.”

ತಾವು ಬೆಂಬಲಿಸುವ ಬಿಜೆಪಿ ಪಕ್ಷದ ಮುಖಂಡರೇ ಘೋರ ಕೃತ್ಯಗಳಲ್ಲಿ ತೊಡಗಿದಾಗ, ಅದನ್ನು ಖಂಡಿಸಿ ಮಾನವೀಯತೆಯ ಪರವಾಗಿ ನಿಂತ ಸಹಸ್ರ ಸಹಸ್ರ ಮನುಷ್ಯರಿದ್ದಾರೆ. ಭವಿಷ್ಯದಲ್ಲಿ ಭರವಸೆ ಇಡೋಣ. ದನಿಗೂಡಿಸೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...