ಕುಸಿಯುತ್ತಿರುವ ಆರ್ಥಿಕತೆ, ನಿರುದ್ಯೋಗ ಸೇರಿ ಹಲವು ಸಮಸ್ಯೆಗಳು ಅಭಿವೃದ್ಧಿಗೆ ಮಾರಕವಾಗಿವೆ. ಜಿಡಿಪಿ ಕುಸಿದಿದ್ದು, ಹಲವು ಕ್ಷೇತ್ರಗಳು ಲಾಭವಿಲ್ಲದೇ ನೆಲಕಚ್ಚುತ್ತಿವೆ. ವ್ಯಾಪಾರ, ಉದ್ಯಮ, ಮಾರುಕಟ್ಟೆ ಸ್ಥಿತಿಗತಿ ಮಂದಗತಿಯಲ್ಲಿ ಸಾಗಿದೆ. ಕಾರ್ಪೊರೇಟ್ ವಲಯ ಚೇತರಿಕೆ ಕಾಣುತ್ತಿಲ್ಲ. ಹೀಗಿರುವಾಗ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಾತ್ರ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಿದೆ. ಕಾಂಗ್ರೆಸ್ ಆಡಳಿತವಿದ್ದಾಗಲೂ ಆರ್ಥಿಕತೆ ಕುಸಿತವುಂಟಾಗಿತ್ತು. ಆದರೆ ಹಲವು ಸುಧಾರಿತ ಕ್ರಮಗಳ ಜಾರಿಯ ನಂತರ ಎಲ್ಲವೂ ಸರಿಹೋಗಿ, ಜನತೆಯ ಜೀವನ ಕ್ರಮ ಉತ್ತಮವಾಗಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಹಾಗೇ ಆಗುತ್ತಿಲ್ಲ. ಬಿಜೆಪಿ ಸರ್ಕಾರ ಇತರೆ ಆರ್ಥಿಕ ತಜ್ಞರ ಸಲಹೆ ಪಡೆಯದೇ ತನ್ನ ಸೊಂಡಿಲಿನಿಂದ ತಾನೇ ನೀರು ಕುಡಿಯಲು ಹೊರಟಿರುವ ವಿಷಯ ಗೌಪ್ಯವಾಗಿ ಉಳಿದಿಲ್ಲ. ಈಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪರಕಲಾ ಪ್ರಭಾಕರ್, ದಿ ಹಿಂದೂ ದಿನಪತ್ರಿಕೆಯ ಅಭಿಪ್ರಾಯ ಸಂಗತಿಗೆ ಬರೆದ ಲೇಖನ ಜಗಜ್ಜಾಹೀರುಗೊಳಿಸಿದೆ.
ಹೌದು… ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಪರಕಲಾ ಪ್ರಭಾಕರ್ ಸುದೀರ್ಘ ಲೇಖನವೊಂದನ್ನು ಬರೆದಿದ್ದಾರೆ. ಅದರಲ್ಲಿ ಬಿಜೆಪಿ ಸರ್ಕಾರ, ಕಾಂಗ್ರೆಸ್ ಆಡಳಿತದಲ್ಲಿ ಅನುಸರಿಸಲಾಗಿದ್ದ ಆರ್ಥಿಕತೆ ಅಭಿವೃದ್ಧಿ ನಿಯಮಾವಳಿಗಳನ್ನು ಅನುಸರಿಸಬೇಕಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಬಿಜೆಪಿಯ ರಾಜಕೀಯ ಯೋಜನೆಗಳ ಐಕಾನ್ ಆಗಿ ಆಯ್ಕೆ ಮಾಡುತ್ತದೆ. ಹಾಗೆಯೇ ಆರ್ಥಿಕತೆಯ ವಾಸ್ತುಶಿಲ್ಪದ ಆಧಾರವಾಗಿ ನರಸಿಂಹರಾವ್ ಅವರ ದೃಢ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
60 ವರ್ಷದ ಪರಕಲಾ ಪ್ರಭಾಕರ್ ಅವರು, ಆಂಧ್ರಪ್ರದೇಶ ಸರ್ಕಾರದ ಮಾಜಿ ಸಂವಹನ ಸಲಹೆಗಾರರಾಗಿದ್ದರು. ನೆಹರು ಕಾಲದ ಆರ್ಥಿಕತೆಯ ವ್ಯವಸ್ಥೆ ಹಾಗೂ ಚೌಕಟ್ಟಿನ ಬಗ್ಗೆ ಬಿಜೆಪಿ ಸರ್ಕಾರ ಮಾಡುತ್ತಿರುವ ಟೀಕೆ, ವಿಮರ್ಶೆ, ವ್ಯಂಗ್ಯದ ವಿರುದ್ಧವೂ ಪ್ರಭಾಕರ್ ಮಾತನಾಡಿದ್ದಾರೆ. ಥಿಂಕ್-ತ್ಯಾಂಕ್, ತಪ್ಪನ್ನು ತಿದ್ದಿಕೊಂಡು, ಅರಿತು ನಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಆಧುನಿಕ ಮಾರುಕಟ್ಟೆ, ಜಾಗತೀಕರಣದ ಜಗತ್ತಲ್ಲಿ ಆಂತರಿಕವಾಗಿ ಸಮಗ್ರ ಮಾನವತಾವಾದದ ರಚನೆಯ ಮೇಲೆ ಪ್ರಾಯೋಗಿಕ ಉಪಕ್ರಮಗಳನ್ನು ರೂಪಿಸಲು ಸಾಧ್ಯವಿಲ್ಲ. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಆರ್ಥಿಕ ವಾಸ್ತುಶಿಲ್ಪ ಮತ್ತು ಅಭಿವೃದ್ಧಿ ಅಜೆಂಡಾವನ್ನು ಸ್ವೀಕರಿಸಿ ಅದನ್ನು ಅನುಸರಿಸುವ ಮೂಲಕ ಬಿಜೆಪಿ ಸೀಮಿತ ಕಾರ್ಯಸೂಚಿಯಿಂದ ಬಿಡುಗಡೆ ಹೊಂದಬಹುದು ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದ ಪ್ರಸ್ತುತ ಬೃಹತ್ ಸಮಸ್ಯೆ ಆರ್ಥಿಕತೆ ಕುಸಿತದಿಂದ ಹೊರಬರಲು ಬಿಜೆಪಿ ತನ್ನಲ್ಲಿರುವ ಕೆಲವು ಚಿಂತನೆಗಳಲ್ಲಿನ ದೌರ್ಬಲ್ಯತೆಯನ್ನು ಸರಿಪಡಿಸಿಕೊಳ್ಳಬೇಕಿದೆ. ಸರ್ಕಾರ ಇನ್ನೂ ನಿರಾಕರಣೆ ಕ್ರಮವನ್ನೇ ಅನುಸರಿಸುತ್ತಿದೆ. ಸಾರ್ವಜನಿಕ ವಲಯಕ್ಕೆ ಹರಿಯುವ ದತ್ತಾಂಶವು ನಂತರದ ದಿನಗಳಲ್ಲಿ ಎದುರಾಗಬಹುದಾದ ಗಂಭೀರ ಸವಾಲು ದುಃಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಬರೆದಿದ್ದಾರೆ.
ಇತ್ತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತಿಯ ಲೇಖನದ ಬಗ್ಗೆ ಪ್ರತಿಕ್ರಿಯಿಸಿ, 2014 ರಿಂದ 2019 ರವರೆಗೆ ಬಿಜೆಪಿ ಸರ್ಕಾರ ಮೂಲಭೂತ ಸುಧಾರಣೆಗಳನ್ನು ಮಾಡಿದೆ. ಸರಕು ಮತ್ತು ಸೇವಾ ತೆರಿಗೆ, ಆಧಾರ್ ಮತ್ತು ಅಡುಗೆ ಅನಿಲ ವಿತರಣೆಯಂತಹ ಕ್ರಮಗಳ ಬಗ್ಗೆ ಪಟ್ಟಿ ಮಾಡಿ ಹೇಳಿದರು.


