Homeಸಾಮಾಜಿಕಹಸನ್ ನಯೀಮ್ ಸುರಕೋಡರ ಪ್ರೇಮತತ್ವ..!

ಹಸನ್ ನಯೀಮ್ ಸುರಕೋಡರ ಪ್ರೇಮತತ್ವ..!

- Advertisement -
- Advertisement -

ಹಸನ್ ನಯೀಮ್ ಸುರಕೋಡ ಅವರು ಅನುವಾದಗಳಿಂದ ಖ್ಯಾತರು. ಅವರ ಬರೆಹ ಮತ್ತು ಅನುವಾದಗಳ ಒಂದು ಥೀಮ್ ಎಂದರೆ, ಪ್ರೇಮ. ಅವರು ಕನ್ನಡಿಸಿದ ಸಜ್ಜಾದ್ ಜಾಹಿರ್ ಕಾವ್ಯ, ಸಾದತ್ ಹಸನ್ ಮಂಟೂ ಕತೆಗಳು, ಅಮೃತಾ ಪ್ರೀತಂ ಆತ್ಮಕತೆ, ಸಾರಾಶಗುಫ್ತಾ ಎಂಬ ಕವಯಿತ್ರಿಯ ಜೀವನ ಚರಿತ್ರೆ, ಲೋಹಿಯಾರ ಜಾತಿಪದ್ಧತಿ ಪುಸ್ತಕದ ಅನುವಾದ ಎಲ್ಲರಲ್ಲೂ ಈ ಪ್ರೇಮತತ್ವವಿದೆ. ಸಜ್ಜಾದ್ ಕುರಿತ ಅವರ ಜೀವನ ಚರಿತ್ರೆಯ ಹೆಸರು `ಪ್ರೇಮಲೋಕದ ಮಾಯಾವಿ‘. ಅವರು ಅನುವಾದಕ್ಕೆ ಆರಿಸಿಕೊಂಡ ಕೃತಿಗಳಲ್ಲಿ ಮತ್ತು ಬರೆದ ಸ್ವಂತ ಬರೆಹಗಳಲ್ಲಿ ಪ್ರೇಮವು ಒಂದು ದರ್ಶನವಾಗಿ ಬೆಳೆಯುತ್ತದೆ. ಇದರ ಭಾಗವಾಗಿಯೇ ಅವರು ಧರ್ಮ ದೇಶಪ್ರÉ್ರೀಮ ಜಾತಿಗಳ ಹೆಸರಲ್ಲಿ ಮಾನವರನ್ನು ಹಾಗೂ ದೇಶಗಳನ್ನು ವಿಭಜಿಸುವ ಎಲ್ಲ ಬಗೆಯ ಸಿದ್ಧಾಂತಗಳನ್ನು ವಿರೋಧಿಸುವ ಸಾಹಿತ್ಯವನ್ನೂ ಅನುವಾದಿಸಿದರು. ಇದಕ್ಕೆ ಕೆಲವು ಕಾರಣಗಳಿವೆ.
ಮೊದಲನೆಯದಾಗಿ ಪ್ರೇಮತತ್ವವೇ ಮುಖ್ಯವಾದ ಭಾರತದ ಪ್ರಗತಿಶೀಲ ಚಳವಳಿ. ಇದು ಕನ್ನಡದ ಪ್ರಗತಿಶೀಲ ಚಳವಳಿಗೆ ಹೋಲಿಸಿದರೆ ಭಿನ್ನವಾದುದು. ಪಂಜಾಬ್ ಲಾಹೋರುಗಳಿಂದ ಶುರುವಾದ ಈ ಚಳವಳಿಯಲ್ಲಿ ಇದ್ದವರು ಸ್ವಾತಂತ್ರ್ಯ ಹೋರಾಟಗಾರರು. ಸಮಾಜವಾದಿಗಳು ಹಾಗೂ ಎಡಪಂಥೀಯರು. ಜೀವವನ್ನೇ ಪಣವಾಗಿಟ್ಟು ಬದುಕಿದವರು ಹಾಗೂ ಬರೆದವರು. ಇವರು ಮಾಡಿದ ಪ್ರಯೋಗಗಳಲ್ಲಿ ಅಮೃತಸರದ ಬಳಿಕ ಕಟ್ಟಿದ ಪ್ರೀತನಗರವೂ ಒಂದು; ಇವರು ಪ್ರಕಟಿಸುತ್ತಿದ್ದ ಪತ್ರಿಕೆಯ ಹೆಸರು `ಪ್ರೀತಲಡಿ’. ಪ್ರೀತನಗರದ ಪ್ರಯೋಗವು ಅರವಿಂದರು ಆಧ್ಯಾತ್ಮಿಕ ಹಸಿವುಳ್ಳ ಲೋಕದ ಜನ ದೇಶ ಜಾತಿಧರ್ಮಗಳ ಗಡಿಯಿಲ್ಲದೆ ಬದುಕುವುದಕ್ಕೆಂದು ಪಾಂಡಿಚೇರಿಯಲ್ಲಿ ಕಟ್ಟಿದ ಅರೊವಿಲ್ಲ ಹಳ್ಳಿಯ ಪ್ರಯೋಗವನ್ನು ನೆನಪಿಸುತ್ತದೆ. ಅಮೃತಪ್ರೀತಂ, ಸಜ್ಜಾದ್ ಜಾಹಿರ್, ಫೈಜ್ ಅಹಮದ್ ಫೈಜ್, ಕೆ. ಎ. ಅಬ್ಬಾಸ್ ಮುಂತಾದ ಈ ಪ್ರಗತಿಶೀಲಲೋಕದ ಲೇಖಕರು ಮಾನವತಾವಾದಿಗಳು. ಅಸಹಾಯಕರ ಪರವಾಗಿ ನಿಲ್ಲುವುದೇ ನಿಜವಾದ ಕಲೆಯ ಉದ್ದೇಶವೆಂದು ತಿಳಿದವರು. ದೇಶವಿಭಜನೆಯ ಮಾನವೀಯ ದುರಂತಗಳನ್ನು ಕಂಡವರು. ಜನರನ್ನು ಧರ್ಮದ ಹೆಸರಲ್ಲಿ ವಿಭಜಿಸುವ ಸಿದ್ಧಾಂತ ರಾಜಕಾರಣವನ್ನು ಪ್ರತಿರೋಧಿಸಿದವರು. ರಾಷ್ಟ್ರದ, ಧರ್ಮದ ಹಾಗೂ ಜಾತೀಯ ಕೃತಕ ಸರಹದ್ದುಗಳಾಚೆ ಇರುವ ಮಾನವೀಯ ಸಂಬಂಧಗಳನ್ನು ಚಿತ್ರಿಸಿದವರು. ಇಂಥ ಲೇಖಕರನ್ನೇ ಸುರಕೋಡರು ಅನುವಾದಕ್ಕೆ ಆರಿಸಿಕೊಂಡರು.
ಎರಡನೆಯದಾಗಿ- ಸೂಫಿಸಂ ಮತ್ತು ಉರ್ದುಸಾಹಿತ್ಯದಲ್ಲಿ ಸುರಕೋಡರಿಗಿರುವ ಸೆಳೆತ. ಸೂಫಿಸಂ ದೈವದ ಹುಡುಕಾಟವನ್ನು ಪ್ರೇಮದ ಪರಿಭಾಷೆಯಲ್ಲಿ ಮಾಡುತ್ತದೆ. ಅಲ್ಲಿನ ಗುರುಶಿಷ್ಯ ಸಂಬಂಧಗಳು ಕೂಡ ಪ್ರೇಮದ ಹುಡುಕಾಟದ ಬಗೆಯಲ್ಲಿವೆ. `ಇಶ್ಕ್’ (ಪ್ರೇಮ) ಸೂಫಿಸಂನ ಮೂಲತತ್ವ. ಸುರಕೋಡÀರು ಅನುವಾದಿಸಿದ ಬಹಳಷ್ಟು ಲೇಖಕರು ಸೂಫಿಸಂನಿಂದ ಪ್ರಭಾವಿತರಾದವರು. ಅಮೃತಾ ವಾರಿಸಶಾ ಕುರಿತು ನೀಳ್ಗವಿತೆ ಬರೆಯುತ್ತಾರೆ. ಫೈಜ್ ಕವಿಯಾಗದಿದ್ದರೆ ಸೂಫಿಸಂತನಾಗುತ್ತಿದ್ದವನು ಎಂಬ ಹೇಳಿಕೆಯನ್ನು ಅವರು ಉಲ್ಲೇಖಿಸುತ್ತಾರೆ. ಫೈಜರ “ಉಠೇಗಾ ಅನಲ್ ಹಖ್ ನಾರಾ ಜೋ ಮೈಭೀಹೂ ವೊ ತುಂ ಭೀ ಹೋ’’ ತರಹದ ಸಾಲುಗಳು (ನಾನೇನಾಗಿರುವೆನೊ ಅದು ನೀನೂ ಆಗಿರುವಿ ಅನಲ್ ಹಖ್ ಘೋಷವು ಮೊಳಗುತ್ತಿದೆ) ಅದ್ವಯತತ್ವದ ಪ್ರತಿಬಿಂಬವಾಗಿವೆ. ವಿರಹ ಶೃಂಗಾರವೇ ಪ್ರಮುಖವಾಗಿರುವ ಉರ್ದು ಗಜಲಿನಲ್ಲಿ ಆಸಕ್ತಿಯುಳ್ಳ ಸುರಕೋಡರು, ಅನೇಕ ಉರ್ದುಕವಿಗಳನ್ನು ಅನುವಾದಿಸಿದರು.
ಮೂರನೆಯದಾಗಿ- ದೇಶವಿಭಜನೆ ಹಾಗೂ ಭಾರತದ ಮತೀಯ ಗಲಭೆಗಳು. ಸುರಕೋಡÀರು ಮಂಟೂಕತೆಗಳ ಅನುವಾದಗಳ ಮುನ್ನುಡಿಯಲ್ಲಿ ಹೇಳುವುದನ್ನು ಗಮನಿಸಬೇಕು. “ಮಾನವೀಯತೆಯ ಮೇಲೆ ಹಲ್ಲೆಯಾಗುತ್ತಿರುವಾಗ ಕಣ್ಣುಮುಚ್ಚಿಕೊಂಡು ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಬರೀ ಹೇಡಿತನವಲ್ಲ. ಮಹಾ ಅಪರಾಧವಾಗುತ್ತದೆ. ಮತ್ತೆ ದೇಶ ಒಡೆಯದಿರಲೆಂದು ಒಡೆದ ಮನಸ್ಸುಗಳನ್ನು ಬೆಸೆಯುವ ಆಶಯದ ಚಳುವಳಿಗಳನ್ನು ಬಲಪಡಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಹಾನ್ ಮಾನವತಾವಾದಿ ಮಂಟೂ ಅವರ ಕತೆಗಳ ಅನುವಾದ ಕೂಡ ನೆರವಾಗಬಲ್ಲದೆಂದು ಆಶಿಸುತ್ತೇನೆ.’’ ಮತೀಯವಾದವು ಮಾಡಿದ ಗಾಯಗಳು ಮಾನವತೆ ಮತ್ತು ಪ್ರೀತಿತತ್ವಗಳನ್ನು ತತ್ವವಾಗಿ ಮಂಡಿಸಲು ಅವರನ್ನು ಪ್ರೇರಿಸಿದವು.
ನಾಲ್ಕನೆಯದಾಗಿ-ಉತ್ತರ ಕರ್ನಾಟಕದ ಕೂಡು ಬದುಕಿನ ಸಂಸ್ಕøತಿ. ಇಲ್ಲಿನ ಮೊಹರಂ ಕೃಷ್ಣಪಾರಿಜಾತ ಕಂಪನಿನಾಟಕ ಸೂಫಿಸಂ ಎಲ್ಲವೂ ಹಿಂದೂಮುಸ್ಲಿಂರನ್ನು ಒಳಗೊಂಡೇ ರೂಪುಗೊಂಡಿವೆ. ಸುರಕೋಡರಿಗೆ ರಾಮದುರ್ಗ ಪರಿಸರದಲ್ಲಿ ಜೀವನದಲ್ಲಿ ಸಿಕ್ಕ ಸೇಹಿತರ ಬಳಗವೂ ಇದಕ್ಕೆ ಪೂರಕವಾಗಿದೆ. ಅವರು ತಮ್ಮ ಮುನ್ನುಡಿಗಳಲ್ಲಿ ಉಲ್ಲೇಖಿಸುವ ಹೆಸರುಗಳನ್ನು ಗಮನಿಸಿದರೆ ಅವರ ಬದುಕಿನ ಜಾತ್ಯತೀತತೆಯ ಚಿತ್ರ ಸಿಗುತ್ತದೆ. ತಮ್ಮ ಕೃತಿಗಳ ಪ್ರಕಾಶಕರಾದ ಚನ್ನಬಸವಣ್ಣ ಅವರನ್ನು “ಬಲುಪ್ರೀತಿಯಿಂದ ಪ್ರಕಟಿಸಿದ ಚನ್ನಬಸವಣ್ಣ’’ನೆಂದೂ ಅವರು “ಹೃದಯಶ್ರೀಮಂತಿಕೆಯ ಸಾಹಿತ್ಯ ಪ್ರೇಮಿ’’ಯೆಂದು ಅವರು ಉಲ್ಲೇಖಿಸುತ್ತಾರೆ. “ಅನುಗಾಲದ ಗೆಳೆಯರಾದ ಚಿಕ್ಕನರಗುಂದ ಹಾಗೂ ರಾಜಶೇಖರ ನಲವಡಿ ಅವರಿಗೆ ಕರುಳಬಳ್ಳಿ ಹೆಣೆದು’’ ಎಂದು ತಮ್ಮ ಕೃತಿಯೊಂದನ್ನು ಅರ್ಪಿಸುತ್ತಾರೆ. ಇಲ್ಲಿ ಬರುವ ಪ್ರೀತಿ ಪ್ರೇಮಿ ಕರುಳಬಳ್ಳಿ ಶಬ್ದಗಳನ್ನು ಗಮನಿಸಬೇಕು.
ಸುರಕೋಡರ ಅನುವಾದ ಮತ್ತು ಬರೆಹಗಳಲ್ಲಿ ಪ್ರೇಮ-ಪ್ರೀತಿಯ ಸ್ವರೂಪಕ್ಕೆ 4 ಆಯಾಮಗಳಿವೆ.
ಅ. ಗಂಡುಹೆಣ್ಣಿನ ಪ್ರೇಮದ ಆಯಾಮ: ಧರ್ಮ ಮತ್ತು ಜಾತಿಗೆ ಅತೀತವಾಗಿ ಇರುವ ಗಂಡುಹೆಣ್ಣುಗಳ ಪ್ರೇಮವು ಸುರಕೋಡರಿಗೆ ಸದಾ ಕಾಡಿದೆ. ಅವರು ಅನುವಾದಿಸಿದ ಸಾಹಿರ್ ದಲಿಪ್ ಅಮ್ರೋಜ್ ಸಾರಾ ಅಮೃತಾ ಹಾಗೂ ಚಿತ್ರಿಸುವ ಅಮ್ರೋಜ್ ಸೈಯದ್ ಮುಂತಾದವರು ಧರ್ಮದ ಮತ್ತು ಕುಟುಂಬದ ಚೌಕಟ್ಟನ್ನು ಮುರಿದು ಪ್ರೇಮಿಸಿದವರು. ಕಲಾವಿದರು ಕವಿಗಳು. ಸುರಕೋಡರ ಬರೆಹಗಳಲ್ಲಿ ಲೈಲಾಮಜನೂ ರೂಪಕ ಮತ್ತೆಮತ್ತೆ ಬರುತ್ತದೆ. ಸ್ವತಃ ವೈಯಕ್ತಿಕವಾಗಿ ಸುರಕೋಡರು ತಮ್ಮ ಪರಿಸರದಲ್ಲಿರುವ ಧೀರಪ್ರೇಮಿಗಳ ಕಥೆಗಳನ್ನು ನಮಗೆಲ್ಲ ಹೇಳಿದ್ದರು ಮತ್ತು ಬರೆದಿದ್ದರು. ಆ ಪ್ರೇಮಿಗಳನ್ನು ನೋಡಲು ನಾನು ರಾಮದುರ್ಗಕ್ಕೆ ಹೋಗಿದ್ದುಂಟು. ಪ್ರೇಮಲೋಕದ ಕಥನಗಳನ್ನು ಬರೆಯಲು ಮತ್ತು ಅನುವಾದಿಸಲು ಅವರು ಕೋಮಲತೆ ನವಿರುತನವುಳ್ಳ ಭಾಷೆಯನ್ನು ಸುರಕೋಡರು ರೂಪಿಸಿಕೊಂಡರು. ಒಂದು ಕಡೆ “ಆಸೆಯೊಂದು ಮಾದ ಗಾಯಹಕ್ಕಳೆಗಟ್ಟಿ ಉದುರುತ್ತಿದೆ ಎನ್ನುವಂತೆ ತುಟಿಗೆ ಅಂಟಿಕೊಂಡಿತ್ತು’’ ಎಂಬ ಚರಣ ಬರುತ್ತದೆ. ಅವರದು ಹೆಂಗರಳುವಿನ ಅನುವಾದ.
ಆ. ತಾಯ್ತನದ ಆಯಾಮ: ಸುರಕೋಡÀರ ಅನುವಾದಗಳು ಒಂದು ಬಗೆಯಲ್ಲಿ ತಾಯಂದಿರ ಕಥನಗಳು. ಈ ತಾಯಂದಿರು ತಮ್ಮ ಮಕ್ಕಳಿಗಾಗಿ ಲೋಕದ ಕಣ್ಣಲ್ಲಿ ಪ್ರಶ್ನಿತರಾಗುತ್ತಾರೆ. ಅವರು ತಮ್ಮ ಮಕ್ಕಳನ್ನು ಕಸಿದುಕೊಳ್ಳುವ ಪುರುಷವಾದಿ ಸಮಾಜದಿಂದ ಮರಳಿ ಪಡೆಯಲು ಹೋರಾಟ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಅವರು ತಾಯ್ತನದ ಮೂಲಕವೇ ಘನತೆಯ ಬದುಕನ್ನು ನಡೆಸುವಂತಾಗಲು ಹೋರಾಡುವರು. ತನ್ನ ಮಗಳನ್ನು ಲೋಕವು ಹುಚ್ಚಿ ಅಶ್ಲೀಲಲೇಖಕಿ ಎಂದು ದೂರಿದಾಗ, ಅವಳನ್ನು ಉಳಿಸಿಕೊಳ್ಳಲು ಲೇಖಕಿ ಸಾರಾ ಶಗುಫ್ತಾಳ ತಾಯಿ ಆತುಕೊಳ್ಳುವುದನ್ನು ಗಮನಿಸಬೇಕು. ಅವರ ಅನುವಾದಗಳು ಒಂದು ಬಗೆಯಲ್ಲಿ ತಾಯಂದಿರ ಸಂತಾನಪ್ರೀತಿಯ ಹೋರಾಟದ ಕಥನಗಳು.
ಇ. ಗೆಳೆತನದ ಆಯಾಮ; ಸುರಕೋಡರ ಅನುವಾದ ಸಾಹಿತ್ಯದಲ್ಲಿ ಬಿಕ್ಕಟ್ಟುಗಳನ್ನು ಹಾಯುವ ಮತ್ತು ಮುರಿಯದ ಗೆಳೆತನಗಳ ಕಥನಗಳಿವೆ. ಅವುಗಳಲ್ಲಿ ಮುಂಬೈನಲ್ಲಿ ಜೀವದ ಗೆಳೆಯರಾಗಿದ್ದ ಶಾಮ್ ಮತ್ತು ಮಂಟೂ ಅವರ ಸ್ನೇಹ ಸೇರಿದೆ. ಸಾರಾ ಮತ್ತು ಅಮೃತಾರ ಗೆಳೆತನ. ಅಮೃತಾ ಮತ್ತು ದಲೀಪಳ ಗೆಳೆತನಗಳು ಸಹ ಇಂಥಹವೇ. ಈ ಸ್ನೇಹಗಳು ಧರ್ಮಾತೀತ ಮತ್ತು ಕುಟುಂಬದಾಚೆ ಇರುವ ಮಾನವ ಸಂಬಂಧಗಳು. ಇಲ್ಲಿಯೇ ತನ್ನಜ್ಜಿ ಮುಸ್ಲಿಮರು ಲಸ್ಸಿಕುಡಿದ ಲೋಟಗಳನ್ನು ಪ್ರತ್ಯೇಕವಾಗಿಡುವ ಪದ್ಧತಿಯನ್ನು ಬಾಲಕಿ ಅಮೃತಾ ಪ್ರೀತಂ ವಿರೋಧಿಸುವ ಪ್ರಕರಣವನ್ನು ಉಲ್ಲೇಖಿಸಬೇಕು.
ಈ. ಪಾಕಿಸ್ತಾನ ಭಾರತಗಳ ಆಯಾಮ: ಸುರಕೋಡರು ಅನುವಾದಿಸಿದ ಬಹುತೇಕ ಸಾಹಿತ್ಯ ಭಾರತ ವಿಭಜನೆಯ ಬಳಿಕ ಧರ್ಮ ಮತ್ತು ರಾಷ್ಟ್ರವಾದಗಳು ಹುಟ್ಟಿಸಿದ ಕ್ರೌರ್ಯ, ಕತ್ತರಿಸಿದ ಮಾನವ ಸಂಬಂಧಗಳನ್ನು ಕುರಿತವು. ಮಂಟೂ ಮತ್ತು ಶಾಮ್ ನಡುವಣ ಮಾತುಕತೆ ಇದರಲ್ಲಿ ಒಂದು. ಜೀವದ ಗೆಳೆಯನಾದ ಶಾಮ್, ಕರಾಚಿ ಲಾಹೋರುಗಳಲ್ಲಿ ಮುಸ್ಲಿಮರು ಸಿಖ್ಖರ ಮೇಲೆ ಮಾಡಿದ ಹಲ್ಲೆಯ ಕಥೆಗಳನ್ನು ಕೇಳುವಾಗ, ಶಾಮ್‍ಗೆ ಗೆಳೆಯ ಮಂಟೊನನ್ನು ಕೊಲ್ಲುವ ಆಲೋಚನೆ ಬರುತ್ತದೆ. ಆದರೆ ಇದೇ ಶಾಮ್ ಪಾಕಿಸ್ತಾನಕ್ಕೆ ವಲಸೆ ಹೋದ ಮಂಟೂನನ್ನು ನೋಡಲು ಲಾಹೋರಿಗೆ ಹೋಗುತ್ತಾನೆ. ಗೆಳೆಯನಿಗೆ ಹಣ ಕಳಿಸಿಕೊಡುತ್ತಾನೆ. ಸುರಕೋಡರು `ರಸೀದಿ ತಿಕೀಟು’ ಅರಿಕೆಯಲ್ಲಿ “ಒಂದು ದೇಶದಲ್ಲಿ ಕೇವಲ ಮುಸಲ್ಮಾನರು ಹಾಗೂ ಇನ್ನೊಂದು ದೇಶದಲ್ಲಿ ಬರೀ ಹಿಂದೂಗಳಿಲ್ಲ. ಎರಡೂ ಕಡೆ ಆಗಲೂ ಮನುಷ್ಯತ್ವದಲ್ಲಿ ನಂಬಿಕೆಯುಳ್ಳವರಿದ್ದರು, ಎಪ್ಪತ್ತು ವರ್ಷಗಳ ನಂತರವೂ ಅಂಥ ನಂಬಿಕೆಯುಳ್ಳವರಿದ್ದಾರೆ. ಎರಡೂ ದೇಶದ ಜನತೆಯ ಹಿತದೃಷ್ಟಿಯಿಂದ ಕೋಮು ಸೌಹಾರ್ದ ನೆಲೆಗೊಳ್ಳಲೇಬೇಕು’’ ಎಂದು ಬರೆಯುತ್ತಾರೆ. “ಎರಡೂ ದೇಶದ ಜನತೆ ಪರಸ್ಪರ ಸೌಹಾರ್ದ ಸಂಬಂಧ ಬೆಳೆಸುವುದರಲ್ಲಿ ಆಸಕ್ತರಾಗಿದ್ದಾರೆ. ಆದರೆ ಎರಡೂ ದೇಶದ ಸರ್ಕಾರಗಳಿಗೆ ತಮ್ಮತಮ್ಮ ಅಧಿಕಾರದÀ ಗದ್ದುಗೆಯದೇ ಚಿಂತೆ. ಹೃದಯಹೀನ ಸರ್ಕಾರಗಳು ಜನತೆ ಪರಸ್ಪರ ಹತ್ತಿರವಾಗುವುದನ್ನು ಸುತರಾಂ ಸಹಿಸಿಕೊಳ್ಳುವುದಿಲ್ಲ’’ ಎಂದು ವಿಶ್ಲೇಷಿಸುತ್ತಾರೆ. ಅವರು ಅನುವಾದಿಸಿದ ಲೋಹಿಯಾ ಕೂಡ ದೇಶವಿಭಜನೆಯನ್ನು ಘೋರದುರಂತ ಎಂದು ಭಾವಿಸಿದ್ದವರು. ಎರಡೂ ದೇಶಗಳು ದ್ವೇಷವಿಲ್ಲದೆ ಬದುಕುವ ದಿನವನ್ನು ಕುರಿತು ಕನಸನ್ನು ಕಂಡವರು. ಸುರಕೋಡರ ಅನುವಾದಗಳು, ಎರಡು ದೇಶಗಳ ನಡುವೆ ರಾಜಕೀಯ ಗಡಿಗಳಾಚೆ ಜೀವಂತವಾಗಿರುವ ಸಾಹಿತ್ಯಕ ಮತ್ತು ಮಾನುಷ ಸಂಬಂಧಗಳ ಮೇಲೆ ಇವೆ. ಅವರು ಅನುವಾದಿಸಿದ ಮಂಟೂ, ಫೈಜ್ ವಾರಿಸಶಾ ಅಮೃತಾ ಸಜ್ಜಾದ್ ಸಾರಾ ಎರಡೂ ದೇಶದ ಲೇಖಕರು.
ಈ ಹಿನ್ನೆಲೆಯಲ್ಲಿ ಸುರಕೋಡರು ದ್ವೇಷತತ್ವಗಳನ್ನು ವಿರೋಧಿಸುವ ಸಾಹಿತ್ಯವನ್ನು ಯಾಕೆ ಅನುವಾದಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರ ಮುನ್ನುಡಿಗಳಲ್ಲಿ ಕೋಮುವಾದವನ್ನು ಕಟುವಾಗಿ ವಿಮರ್ಶಿಸುವ ಸಾಲುಗಳಿವೆ. ಪ್ರೇಮವನ್ನು ಒಂದು ತತ್ವವಾಗಿ ದರ್ಶನವಾಗಿ ಪ್ರತಿಪಾದಿಸುವ ಯಾರೇ ಆಗಲಿ ದ್ವೇಷವನ್ನು ಬೆರಳಿಟ್ಟು ಗುರುತಿಸಬೇಕು; ದಿಟ್ಟವಾಗಿ ಪ್ರತಿರೋಧಿಸಬೇಕು. ಇಲ್ಲಿ ದ್ವೇಷತತ್ವ ಎಂದರೆ ಕೋಮುವಾದ ಮೂಲಭೂತವಾದ ಮಾತ್ರವಲ್ಲ, ಪುರುಷವಾದ ಜಾತಿವಾದ ಕೂಡ. ಸಾರಾಶಗುಪ್ತಾ ಜೀವನ ಚರಿತ್ರೆಯು ಪುರುಷವಾದಿ ಸಮಾಜದ ಕ್ರೌರ್ಯದ ಕಥನ; ಲೋಹಿಯಾರ `ಜಾತಿಪದ್ಧತಿ’ ಜಾತಿವಾದಿ ಕ್ರೌರ್ಯದ ಕಥನವಾಗಿದೆ.
“ಇಂದು ಮತ್ತೆ ಕೋಮು ಸಾಮರಸ್ಯ ಹದಗೆಡುತ್ತಿರುವಾಗ ಮತ್ತೆ ಮತ್ತೆ ಅಮಾಯಕರು ಕೋಮುವಾದಿಗಳ ಕರಾಳ ಕೃತ್ಯಗಳಿಗೆ ಬಲಿಯಾಗುತ್ತಿರುವ ಸಂದರ್ಭಗಳಲ್ಲಿ ಮಂಟೂ ಕತೆಗಳು ನಾವು ಇತಿಹಾಸದಿಂದ ಪಾಠ ಕಲಿಯುತ್ತಿಲ್ಲವೆಂದು ನಮ್ಮನ್ನು ಎಚ್ಚರಿಸುತ್ತಿವೆ. ಸಾಹಿತ್ಯ ಬದುಕಿನ ಕನ್ನಡಿಯೆನ್ನುವುದು ಈ ಕತೆಗಾರ ಸಾಬೀತುಪಡಿಸಿದ್ದಾರೆ. ಆದರೆ ಈ ಕನ್ನಡಿ ಒಡೆದು ಚೂರುಚೂರಾಗಿದೆ. ಹೊಸ ಕನ್ನಡಿಯಲ್ಲಿ ಹೊಸ ಸಾಹಿತ್ಯದ ಪ್ರತಿಬಿಂಬ ಕಾಣುವುದನ್ನೇ ಎದುರು ನೋಡಬೇಕಿದೆಯೇನೋ? ಮಾನವೀಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮ ಮನಸ್ಸುಗಳು ಚಿಂತನೆಗೆ ತೊಡಗುವುದಕ್ಕಾಗಿ ಮಂಟೋರಂಥ ಕತೆಗಾರರನ್ನು ಓದುವುದು ಅನಿವಾರ್ಯ’’ ಎಂದು ಸುರಕೋಡರು ಟಿಪ್ಪಣಿ ಬರೆಯುತ್ತಾರೆ.
ಸುರಕೋಡರು ಕನ್ನಡದ ವಿಶಿಷ್ಟ ಬರೆಹಗಾರ ಮತ್ತು ಅನುವಾದಕ. ಒಂದು ಪುಟ್ಟ ಊರಿನಲ್ಲಿದ್ದುಕೊಂಡು, ಇಡೀ ಭಾರತದ ಪ್ರೇಮ ಮಾನವೀಯತೆಯ ಸಾಹಿತ್ಯವನ್ನು ಕನ್ನಡಿಗರಿಗೆ ಒದಗಿಸಿದವರು. ಗುಬ್ಬಚ್ಚಿ ಎಲ್ಲೆಲ್ಲಿಂದಲೊ ಕಾಳನ್ನು ಹೆಕ್ಕಿತಂದು ಮರಿಗಳಿಗೆ ಗುಟುಕು ಕೊಡುವಂತೆ, ಕನ್ನಡ ಓದುಗರಿಗೆ ಭಾರತದ ಪ್ರೇಮ ಮತ್ತು ದ್ವೇಷವಿರೋಧಿ ಸಾಹಿತ್ಯವನ್ನು ತಂದು ಒದಗಿಸಿದವರು. ಅವರು ಬರೆದ ಬರೆಹ ಮಾಡಿದ ಅನುವಾದಗಳು, ಅವರ ಮಾನವೀಯ ಭಾರತದ ಕಲ್ಪನೆಯನ್ನು ಮುಂದಿಡುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...