Homeಅಂಕಣಗಳುಹೆಣ್ಣು ಪ್ರಶ್ನೆ: ರಾಜಕಾರಣದ ನಡೆ

ಹೆಣ್ಣು ಪ್ರಶ್ನೆ: ರಾಜಕಾರಣದ ನಡೆ

- Advertisement -
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು 8.7.2018 ರಂದು ಧಾರವಾಡದಲ್ಲಿ `ಚುನಾವಣೆ ಒಳ-ಹೊರಗೆ’ ಎಂಬ ವಿಷಯವಾಗಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಪ್ರಬುದ್ಧ ರಾಜಕೀಯ ಚಿಂತಕಿ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರು ಆಗಮಿಸಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಘಟಕದ ಸದಸ್ಯೆ ಅನಿತಾ ಗುಂಜಾಳ ಅವರ ಪ್ರಶ್ನೆ ಮತ್ತು ನಿರೂಪಣೆ ಮಾಧ್ಯಮಗಳಲ್ಲಿ ಚರ್ಚೆಯ ಕೇಂದ್ರವಾಯಿತು. ಅನಿತಾ ಗುಂಜಾಳ ಅವರು `ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ತಾವು, ಸಹ ಪುರುಷಕಾರ್ಯಕರ್ತರ ಮತ್ತು ನಾಯಕರ ವರ್ತನೆಯಿಂದ ಮುಜುಗರ, ಅಪಮಾನ, ನೋವು ಅನುಭವಿಸಿದ್ದಾಗಿ’ ಭಾವೋದ್ವೇಗದಿಂದಲೇ ನಿವೇದಿಸಿಕೊಂಡರು. ಅವರ ಮಾತುಗಳನ್ನು ತಾತ್ವಿಕವಾಗಿ ಒಪ್ಪಿಕೊಂಡ ಮೋಟಮ್ಮ ಅವರು `ಇದು ಯಾವುದೇ ಪಕ್ಷಕ್ಕೆ ಸೀಮಿತವಾದ ಸ್ವಭಾವವಲ್ಲ. ಎಲ್ಲಕಡೆಗೂ ಇಂತಹ ಕೆಲವರು ಇರುತ್ತಾರೆ’ ಎಂದು ಸಮಜಾಯಿಷಿಯನ್ನು ಕೊಟ್ಟರು. ವಿದ್ಯುನ್ಮಾನ ಮಾಧ್ಯಮವೊಂದರ ಚರ್ಚೆಯಲ್ಲಿ, ಮಾಧ್ಯಮದ ನಿರೂಪಕರೇ ಈ ಪ್ರಶ್ನೆಯನ್ನು ಘಟನೆಯಾಗಿಸುವತ್ತ ಪಕ್ಷ ಕೇಂದ್ರಿತವಾಗಿಸುವತ್ತ ವಾಲುತ್ತಿದ್ದುದು ಆಶ್ಚರ್ಯಕರವಾಗಿತ್ತು. ಹೆಣ್ಣುಮಕ್ಕಳು ಯಾವ ಸಮಸ್ಯೆಯನ್ನು ತಾತ್ವಿಕವಾಗಿಟ್ಟುಕೊಂಡು ಚರ್ಚಿಸಲು ಹೊರಡುತ್ತಾರೋ, ಅದನ್ನು ಅಲಕ್ಷಿಸಿ ಅವರು ಮುಂದಿಡುವ ನಿದರ್ಶನಗಳ ಸುತ್ತವೇ ಗಿರಕಿ ಹಾಕುವ ಪ್ರಯತ್ನ ನಡೆಯುತ್ತದೆ. ಯಾರು? ಯಾವಾಗ? ಏನು? ಎಂಬ ರೋಚಕ ವಿವರಗಳಿಗೆ ಗಮನವನ್ನು ಕೇಂದ್ರೀಕರಿಸುತ್ತ ಮುಖ್ಯ ಸಮಸ್ಯೆಯನ್ನೇ ಮಸುಕಾಗಿಸುವ ವಿಚಿತ್ರವಿದು.
ಕ್ಷೇತ್ರ ಯಾವುದೇ ಇರಲಿ, ಹೆಣ್ಣು ತನ್ನ ಅನುಭವವನ್ನು ಅಭಿವ್ಯಕ್ತಿಸುವಾಗ, ತನ್ನನ್ನು ಹೆಣ್ಣು ದೇಹವಾಗಿ ನೋಡಲಾಗುತ್ತದೆ, ಬಿಂಬಿಸಲಾಗುತ್ತದೆ. ಬಳಕೆಯ ವಸ್ತುವಾಗಿಸಿಕೊಳ್ಳಲು ಯತ್ನಿಸಲಾಗುತ್ತದೆ ಎಂಬ ತಕರಾರನ್ನು ಮಂಡಿಸದೆ ಗತ್ಯಂತರವಿಲ್ಲದ ಸ್ಥಿತಿಯಿದೆ. ಒಂದಿಷ್ಟು ಸ್ವಪ್ರಜ್ಞೆಯಿಂದ ಯೋಚಿಸಬಲ್ಲ ಯಾವ ಹೆಣ್ಣುಜೀವವೂ ಇದಕ್ಕೆ ಹೊರತಲ್ಲ. ಹೊರಬದುಕಿನ ಸಂಪರ್ಕವಿಲ್ಲದೆ, ಸಾಂಪ್ರದಾಯಿಕ ಹೆಣ್ಣಿನ ಪಾತ್ರವನ್ನು ಮಾತ್ರ ನಿಭಾಯಿಸುವ ಸ್ಥಿತಿಯಲ್ಲೂ ಇಂತಹ ಅನುಭವಗಳಿಗೆ ಕೊರತೆಯೇನೂ ಇಲ್ಲ. ಹಳ್ಳಿಯ ಜೀವನ ವಿಧಾನದಿಂದ ಅತಿನಾಗರಿಕ ಜೀವನ ವಿಧಾನಕ್ಕೆ ಪಲ್ಲಟವಾಗುತ್ತಿರುವ ಪ್ರತಿಯೊಂದು ಹೊರಳಿನಲ್ಲೂ, ತನ್ನನ್ನು ಬರಿಯ ದೇಹವಿಲ್ಲದೆ ಒಂದು ಜೀವವಾಗಿ ನೋಡಿ ಎಂಬ ಅಪೀಲನ್ನು ಅವಳು ಸಲ್ಲಿಸುತ್ತಲೇ ಇರುತ್ತಾಳೆ.
ಭಾರತದ ಪ್ರಜಾತಂತ್ರ ವ್ಯವಸ್ಥೆಯ ಸೋಲು ಗೆಲುವುಗಳು ಮತ್ತು ಹೆಣ್ಣಿನ ಪಾಲುದಾರಿಕೆಯ ಪ್ರಶ್ನೆಯ ನಿರ್ವಚನ ಸಾಕಷ್ಟು ಸಂಕೀರ್ಣವಾದದ್ದು. ಭಾರತೀಯ ಮಹಿಳೆ ಸಂವಿಧಾನದತ್ತವಾಗಿ ಮತದಾನದ ಹಕ್ಕನ್ನು ಪಡೆದದ್ದು ದೊಡ್ಡ ಗೆಲುವು. ಅಟ್ಲಾಂಟಿಕ ಸಾಗರದಲ್ಲಿ ಮುಳುಗಿ ಮೈಲುಗಟ್ಟಲೆ ದೂರವನ್ನು ಕ್ರಮಿಸಿಬಿಡುವ ಕೆಮ್ಮೀನಿನಂತೆ, ನಮ್ಮ ಸಂವಿಧಾನ ಹೆಣ್ಣಿಗೊಂದು ಲಂಘನಾ ಸಾಮಥ್ರ್ಯವನ್ನು ಕೊಟ್ಟಿತು. ಆದರೆ ಇಂದಿಗೂ, ಗಂಡಾಳಿಕೆಯನ್ನೇ ಸಂಸ್ಕøತಿ ಎಂದು ಒಪ್ಪಿಕೊಂಡಿರುವುದರಿಂದ, ಮನೆಯ ಎಲ್ಲ ನಿರ್ಣಯಗಳೂ ಗಂಡಿನ ಅಭಿಮತವಾಗಿರುವುದರಿಂದ ಸಹಜವಾಗಿಯೇ ಮತನಿರ್ಧಾರ, ಪಕ್ಷರಾಜಕಾರಣದ ಬೆಂಬಲ ಕೂಡ ಗಂಡು ನಿರ್ಧಾರವಾಗಿಯೇ ಇದೆ. ಭಾರತದ ಮಹಿಳೆಯರು ಮತಚಲಾಯಿಸುತ್ತಾರೆ. ಆದರೆ ಮತಾಧಿಕಾರವು ಕುಟುಂಬದ ಯಾಜಮಾನಿಕೆಯ ಸುಪರ್ದಿಯಲ್ಲಿರುತ್ತದೆ. ಇದಕ್ಕೆ ಅಪವಾದಗಳು ಇರಬಹುದಾದರೂ ಪ್ರಮಾಣ ಕ್ವಚಿತ್ತಾದುದು.
ಹಿಂದಿನಿಂದಲೂ ಮಹಿಳೆಯರ ರಾಜಕೀಯ ಪಾಲುದಾರಿಕೆ ಸಹಜ ಸಂಗತಿಯಾಗಿರಲಿಲ್ಲ. ರಾಣಿಚೆನ್ನಮ್ಮ ನಿರ್ಣಾಯಕ ಪಾತ್ರ ವಹಿಸಲು ಅವಳು ದೇಸಾಯಿ ಮನೆತನಕ್ಕೆ ಸೇರಿದವಳೆನ್ನುವುದು ಒಂದು ಮುಖವಾದರೆ, ಮಲ್ಲಸರ್ಜ ದೇಸಾಯಿ ಮರಣ ಇನ್ನೊಂದು ಮುಖವಾಗಿತ್ತು. ಇಂದಿಗೂ ರಾಜಕೀಯದಲ್ಲಿ ನುರಿತ ಕುಟುಂಬಗಳ ಹೆಣ್ಣುಮಕ್ಕಳಿಗೆ ಅವಕಾಶ ಲಭಿಸುತ್ತದೆ. ಅದರಲ್ಲೂ ಹತ್ತಿರದ ಪುರುಷ ಸಂಬಂಧಿಗಳ ಮರಣವೇ ಮುಂತಾದ ಕಾರಣಗಳಲ್ಲಿ ಮಹಿಳೆಗೆ ಅವಕಾಶ ತೀವ್ರವಾಗುತ್ತದೆ. ರಾಜಕೀಯವಾಗಿ ಅವಳಿಗಿರುವ ಪರದೆಯ ಹಿಂದಿನ ಅನುಭವವೇ ಈಗ ಮುನ್ನೆಲೆಯ ಕ್ರಿಯಾಶಕ್ತಿಯಾಗಿ ಕೆಲಸ ಮಾಡಬೇಕಾಗುತ್ತದೆ ಅಷ್ಟೇ. ಹಾಗಾಗಿ, ರಾಜಕಾರಣದಂತಹ ಸಾರ್ವಜನಿಕ ವಲಯದಲ್ಲಿ ಹೆಣ್ಣು ಗೆಲ್ಲುವ ಪ್ರಮಾಣ ಅತ್ಯಂತ ಕಡಿಮೆ, ಅಥವಾ ಗೆಲುವಿಗೆ ಅವಳು ಬಲು ಗುರುತರವಾದ ತೆರಿಗೆಯನ್ನೇ ಸಂದಾಯ ಮಾಡಬೇಕಾಗುತ್ತದೆ.
ರಾಜಕಾರಣದಿಂದ ದೂರ ಇಡಬೇಕಾದವರ ಪಟ್ಟಿಯಲ್ಲಿ ಮೊದಲು ಹೆಣ್ಣನ್ನು ಉಲ್ಲೇಖಿಸುವ ಚಾಣಕ್ಯನ ಅರ್ಥಶಾಸ್ತ್ರದ ಅಂಬೋಣದಿಂದ; ವೈರಿಯನ್ನು ಬೇರು ಸಹಿತ ಕಿತ್ತು ಸರ್ವನಾಶಮಾಡುವ ಯಾವ ಅನೈತಿಕ ದಾರಿಯಿಂದಲಾದರೂ ಅಧಿಕಾರವನ್ನು ಕಬಳಿಸುವ ಕ್ರೌರ್ಯವು ವಿಜೃಂಭಿಸುತ್ತಿರುವ, ರಾಜಕೀಯ ನಾಯಕರನ್ನು ಚಾಣಕ್ಯರೆಂದು ಹೊಗಳುತ್ತಿರುವ ಕಾಲದವರೆಗಿನ ಬಲು ದೀರ್ಘದಾರಿಯಿದು. ‘1978ರ ಚುನಾವಣೆಗೂ ಇಂದಿನ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ’ ಎಂದು ಮೋಟಮ್ಮ ಅವರು ನೆನಪಿಸಿಕೊಂಡಿದ್ದು, ಹೆಣ್ಣಿಗೆ ಇಕ್ಕಟ್ಟಾಗುತ್ತಿರುವ ರಾಜಕೀಯದ ದಾರಿಯನ್ನು ಸೂಚಿಸುತ್ತಿದೆ. ಗ್ರಾಮಪಂಚಾಯತಿ, ಮಂಡಲಪಂಚಾಯತಿಗಳು ಮಹಿಳಾ ಮೀಸಲು ಜಾಗೆಗಳ ಮೂಲಕ ಮಹಿಳೆಯರಿಗೆ ರಾಜಕೀಯ, ತಿಳುವಳಿಕೆಯನ್ನೂ ಅಧಿಕಾರದ ಅವಕಾಶವನ್ನೂ ಕೊಟ್ಟವು. ಮುಕ್ಕಾಲಾಂಶ ಮಹಿಳಾ ಮೀಸಲಾತಿಯಲ್ಲಿ ಅವಳ ಹತ್ತಿರದ ಪುರುಷ ಸಂಬಂಧಿಗಳೇ ಅಧಿಕಾರದ ಹಕ್ಕುದಾರಿಕೆ ನಡೆಸಿದ್ದು ನಿಜ. ಈಗೊಂದು 20 ವರ್ಷಗಳ ಹಿಂದೆ ಗಜೇಂದ್ರಗಡದಲ್ಲಿ ನಡೆಸಿದ್ದ ಮಹಿಳಾ ಕಾರ್ಯಾಗಾರವೊಂದರಲ್ಲಿ ಅನಕ್ಷರಸ್ಥ ಗ್ರಾಮಪಂಚಾಯತಿ ಅಧ್ಯಕ್ಷೆಯೊಬ್ಬರು, ‘ನಾ ಹೆಬ್ಬಟ್ಟನಾಕೀರಿ. ನನ ಗಂಡ ನನ ಮಗಾ ತೋರ್ಸಿದಲ್ಲ ಹೆಬ್ಬಟ್ ಒತ್ತಕೋತ ಬಂದೆ. ಆದ್ರ ಇತ್ತಿತ್ತಲಾಗ, ಇದ್ಯಾಕೋ ಸರಿಕಾಣವಲ್ದು ಅನ್ಸಾಕತ್ತಿತ್ತು. ನನ್ನೂರಿಗೆ ನಾನು ಏನಾರ ಗಟ್ಟುಳ್ಳ ಕೆಲ್ಸ ಮಾಡ್ಬೇಕು ಅಂತ ಲೆಕ್ಕಾ ಹಾಕಾಕತ್ತಿದ್ದೆ. ನಿನ್ ಅವಧಿ ಮುಗೀತತ್ತಾಗ ಅಂದ್ರು’ ಅಂತ ನಿವೇದನೆ ಮಾಡಿಕೊಂಡಿದ್ದು ನೆನಪಾಗುತ್ತಿದೆ. ಆದರೆ ಈ ಬಗ್ಗೆ ತರಬೇತಿಯಿಲ್ಲದೆ, ಅವಕಾಶ ಮಾಡಿಕೊಡದೆ ಹೆಣ್ಣುರಾಜಕೀಯ ತಿಳಿವು ಪಡೆಯುವುದಾದರೂ ಹೇಗೆ?ಜಯಮಾಲಾ ಅವರಿಗೆ ದೊರೆತ ಅವಕಾಶದ ಬಗೆಗಿನ ಚರ್ಚೆಯನ್ನು ಗಮನಿಸುವಾಗ ಈ ಘಟನೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ಹೌದು, ಕಾಂಗ್ರೆಸ್ ಪಕ್ಷದಲ್ಲಿ ಜಯಮಾಲಾ ಅವರಿಗಿಂತ ಪರಿಣತರು ಹಿರಿಯರು ಇದ್ದಾರೆ. ಅದು ಎಂದೂ ಮುಗಿಯದ ಸರತಿ ಅಲ್ಲವೇ? ಅವರು ನಡೆಯಲು ತೊಡಗಿ ಅದೆಷ್ಟೋ ಕಾಲವೇ ಸಂದುಹೋಗಿದೆ. ಹೆಣ್ಣು ಸದಾ ಸರತಿಯ ಹಿಂದೇ ನಿಂತರೆ, ಮುಂದಿರುವ ಅನುಭವ ದಕ್ಕುವುದು ಯಾವಾಗ? ಅವಳ ಅನುಭವ ಸಮಾಜಕ್ಕೆ ಒದಗುವುದು ಯಾವಾಗ?
ಈ ಎರಡು ದಶಕಗಳಲ್ಲಿ ಕಾಲ ಬದಲಾಗಿದೆ. ಮಹಿಳೆಯ ಶಿಕ್ಷಣ ಮತ್ತು ಸ್ವಂತಿಕೆಯ ಹಾದಿ ದೂರ ಕ್ರಮಿಸಿದೆ. ಅವಳ ಹತ್ತಿರದ ಪುರುಷ ಸಂಬಂಧಿಯ ನೇರ ಮಿಲಾಕತ್ ಕಡಿಮೆಯಾಗಿದೆ ಅಥವಾ ಅಮೂರ್ತವಾಗಿದೆ. ದುರಂತವೆಂದರೆ, ರಾಜಕಾರಣದ ಒಟ್ಟು ಸ್ವರೂಪವೇ ಗಂಡಾಳಿಕೆಯ ಬಿಗಿತಕ್ಕೆ ಒಳಗಾಗಿದೆ. ಮತ ಎನ್ನುವುದು ಪಡೆಯುವುದಲ್ಲ, ಕೊಳ್ಳುವುದಾಗಿದೆ. ಹಣದ ಹರಿವು ಲೆಕ್ಕ ಮೀರಿದೆ; ಜಾತಿ, ಧರ್ಮಗಳ ಹುಕಿ ಹೊಕ್ಕಿರುವ ಸಮಾಜ; ಭಯೋತ್ಪಾದಕ ಚಟುವಟಿಕೆಗಳನ್ನೇ ಚುನಾವಣಾ ಕಾರ್ಯವೈಖರಿ ಎಂದು ಒಪ್ಪಿಕೊಳ್ಳುತ್ತಿದೆ. ಚುನಾವಣೆಯೀಗ ಯಾವ ರಂಗು ಪಡೆದಿದೆಯೋ ಅದನ್ನು ಮಹಿಳೆ ಅರಗಿಸಿಕೊಳ್ಳುವುದು ಸಲೀಸಲ್ಲ. ಅದಕ್ಕೀಗ ಗಂಡುಲೋಕದ ಒರಟು, ದಾಷ್ಟ್ರ್ಯಗಳ ಗಾರೆಗಚ್ಚಿನ ಗೋಡೆಯೆದ್ದಿದೆ. ಆಟದ ನಿಯಮಗಳು ಗಂಡು ಜಗತ್ತಿನವು. ಆಟ ಆಡುವ ಚಾಲಾಕನ್ನು ಹೆಣ್ಣು ತೋರಬೆಕಾದ ಬಿಕ್ಕಟ್ಟಿದು. ಇತ್ತೀಚಿನ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳೂ ಮಹಿಳೆಯರನ್ನು ಸೋಲುವ ಅಭ್ಯರ್ಥಿಗಳು ಎಂದು ತೀರ್ಮಾನಿಸಿ ಮೂಲೆಯಲ್ಲಿಟ್ಟುಬಿಡುತ್ತಿದೆ. ಒಂದೊಮ್ಮೆ ಪಕ್ಷ ಆ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರೆ ಬಲಾಢ್ಯವಾದ ಪುರುಷ ಒತ್ತಾಸೆಯಿರಲೇಬೇಕು. ಚುನಾವಣಾ ಫಲಿತಾಂಶ ಕೂಡ, ಯಶಸ್ವಿ ರಾಜಕಾರಣಿಯಾಗಿ, ಮಂತ್ರಿಯಾಗಿ ಸಾಕಷ್ಟು ಜನಪರ ಕೆಲಸ ಮಾಡಿದ ಮಹಿಳೆಯರನ್ನು ಸೋಲಿಸಿ ಒಟ್ಟೂ ಮಹಿಳಾ ರಾಜಕೀಯ ಚಿಂತನೆಗೇ ಸವಾಲೊಡ್ಡುತ್ತಿದೆ.
ಚುನಾವಣಾ ರಾಜಕಾರಣದ ಒಟ್ಟಾರೆ ಚೌಕಟ್ಟನ್ನು ಬದಲಿಸದಿದ್ದರೆ ಮಹಿಳೆಯರಿಗದು ನಿಷೇಧಿತ ವಲಯ ಆಗಿಬಿಡಬಹುದು. ಭಾರತದ ಪ್ರಜಾತಂತ್ರದ ಬಹುದೊಡ್ಡ ಸೋಲೆಂದರೆ ಪ್ರತಿಯೊಂದು ಆಧುನಿಕ ಸಾಮಾಜಿಕ ಆರ್ಥಿಕ ವಲಯಗಳೂ ಪುರುಷ ಚಿಂತನೆಯಿಂದ ಇಡಿಕಿರಿದಿರುವುದು. ಅಲ್ಲಿ ಹೆಣ್ಣಿನನೋಟ, ಹೆಣ್ಣುಸಂವೇದನೆ, ಲಿಂಗಸೂಕ್ಷ್ಮತೆಗಳಿಗೆ ಆಸ್ಪದಗಳಿಲ್ಲ. ಹೆಣ್ಣು, ತನ್ನನ್ನು ತಾನು ಬದಲಿಸಿಕೊಂಡು ಆ ಚೌಕಟ್ಟಿಗೆ ತನ್ನನ್ನು ಹೊಂದಿಸಿಕೊಳ್ಳಬೇಕಿದೆ. ಹಾಗಾಗಿ ಎಲ್ಲ ವಲಯಗಳಲ್ಲೂ ಮಹಿಳೆಯರಿದ್ದಾರೆ ಮತ್ತು ಮಹಿಳಾ ಸಂವೇದನಾಶೀಲತೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅವಳು ಬದಲಬೇಕು ಅಥವಾ ಹಿಂದೆ ಸರಿಯಬೇಕು ಎಂಬ ಅಲಿಖಿತ ಶಾಸನವಿದು. ಇತ್ತೀಚಿನ ಚುನಾವಣೆಯಲ್ಲಿ ಜಯಶಾಲಿಯಾದ ಅಭ್ಯರ್ಥಿಯ ಪರವಾಗಿ ಮಹಿಳೆಯರು ಬೀದಿರಂಪದ ಕುಣಿತ ಕುಣಿಯುವುದಿರಬಹುದು; ಪಕ್ಷದ ತುತ್ತೂರಿಗಳಾಗಿ ಸ್ವವಿವೇಚನೆಯಿಲ್ಲದೆ ಜನಬದುಕಿನಲ್ಲಿ ಕೋಮುದ್ವೇಷದ ವಿಷ ಬೆರೆಸುವಂಥ ಕಿರುಚುವಿಕೆಗಳಿರಬಹುದು, ಇವೆಲ್ಲ ಪುರುಷ ಹಿತಾಸಕ್ತ ಮಾದರಿಯ ಅನುಕರಣೆಗಳೇ.
2018ರ ಚುನಾವಣೆ ಕರ್ನಾಟಕದ ಜನತೆಯನ್ನು ಸಾಕ್ಷಿಪ್ರಜ್ಞೆಯಾಗಿಸಿಕೊಂಡು ದೇಶದ ರಾಜಕೀಯ ವಲಯದಲ್ಲಿ ಒಂದು ಸಂಚಲನ ಮೂಡಿಸಿದೆ. ಸೋನಿಯಾಗಾಂಧಿ, ಮಾಯಾವತಿ ಮತ್ತು ಮಮತಾ ಬ್ಯಾನರ್ಜಿಯವರ ಒಕ್ಕೂಟ ರಾಜಕಾರಣಕ್ಕೊಂದು ವಿಭಿನ್ನ ನಡೆ ಬರೆವ ಸುಳುಹನ್ನು ನೀಡಿದೆ. ಆನಂತರದ ಸಣ್ಣಪುಟ್ಟ ಬೆಳವಣಿಗೆಗಳು ಅದೊಂದು ಸರಳ ಸಾಹಸವಲ್ಲ ಎಂಬ ಸೂಚನೆಯನ್ನೂ ನೀಡಿವೆ. ರಾಜ್ಯದಲ್ಲಿ ಜಯಮಾಲಾ ಪಡೆದುಕೊಂಡ ಅವಕಾಶಕ್ಕೆ, ಅವರದೇ ಪಕ್ಷದ, ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾದ ಲಕ್ಷ್ಮಿ ಹೆಬ್ಬಾಳ್ಕರ್, ಕೆಟ್ಟ ಅಭಿರುಚಿಯ ಕಮೆಂಟ್ ಮಾಡುವ ಮೂಲಕ ಸುದ್ದಿಯಾದರು. ಈಗ ಮತ್ತೆ ಅನಿತಾ ಗುಂಜಾಳ ಗ್ಲಾಮರಸ್ ಆಗಿರುವವರು ಮತ್ತು ನಾಯಕತ್ವದ ಗುಣ ಅವಕಾಶಗಳಿಗೆ ಸಂಬಂಧ ಕಲ್ಪಿಸುವ ಮಾತನಾಡಿದರು. ಒಂದೆಡೆ ವಿಧಾನಸಭೆ, ವಿಧಾನಪರಿಷತ್ ಕಲಾಪ ನಡೆದಾಗ ಹೆಣ್ಣುಮಕ್ಕಳ ಮೈಮಾಟದ ವೀಡಿಯೋ ನೋಡುತ್ತ ಕೂತವರು ಮತ್ತೆ ಶಾಸನಸಭೆಗೆ ಆಯ್ಕೆಯಾಗುತ್ತಾರೆ. ಲೈಂಗಿಕತೆ ಮತ್ತು ಹೆಣ್ಣಿಗೆ ಸಂಬಂಧಿಸಿದ ಭಾಷೆಯಲ್ಲಿ ಪರಸ್ಪರ ಕೆಸರೆರೆಚಾಟದಲ್ಲಿ ರಾಜಕಾರಣಿಗಳು ತಲ್ಲೀನರಾಗುತ್ತಾರೆ. ಮಹಿಳಾ ರಾಜಕಾರಣಿಗಳು ಪುರುಷ ಭಾಷೆ ಮತ್ತು ಪುರುಷ ಚಿಂತನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪರಸ್ಪರ ಅಸಭ್ಯ ಆರೋಪಗಳಲ್ಲಿ ಮುಳುಗಿ ನಗೆಪಾಟಲಿಗೆ ಈಡಾಗುತ್ತಾರೆ. ಹಾಗಾದರೆ, ಬದಲಾಗುವಿಕೆ ಎಲ್ಲಿ ಮತ್ತು ಹೇಗೆ? ಮಹಿಳೆಯರನ್ನು ಅಪಮಾನಿಸುವ ಪ್ರವೃತ್ತಿಯನ್ನು ತಡೆಯುವ ಪ್ರಶ್ನಿಸುವ ಮೀರುವ ಹಾದಿಯಲ್ಲಿ ಮುನ್ನಡೆಯಲು, ಸ್ವಾಯತ್ತ ವ್ಯಕ್ತಿತ್ವ ಸಂಚಿತಗೊಳ್ಳಬೇಕಿದೆ. ಅದೇ ಸಿದ್ಧಮಾದರಿಯಲ್ಲಿ ಸ್ವಾರ್ಥಕ್ಕಾಗಿ, ಅವಕಾಶವಾದಿತನಕ್ಕಾಗಿ ಮಹಿಳೆ ಅಥವಾ ಮಹಿಳೆಯರು ನಡೆಸುವ ಏಕಾಂಗಿಯಾದ ಅಥವಾ ಸಂಘಟನಾತ್ಮಕವಾದ ಚಟುವಟಿಕೆಗಳು ಮತ್ತದೇ ಪಿತೃತ್ವದ ರಚನೆಗಳನ್ನು ಬಲಪಡಿಸುವ ಬೇಲಿಗಳಾಗಬಹುದು. ರಾಜಕಾರಣದಲ್ಲಿ ಈ ಸಾಧ್ಯತೆ ತುಂಬ ಹೆಚ್ಚಾಗಿರುತ್ತದೆ.
– ಡಾ. ವಿನಯ  ಒಕ್ಕುಂದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...