Homeರಾಜಕೀಯಹೊಳಲ್ಕೆರೆ: ದಲಿತ ಮಂತ್ರಿ ಸೋಲಿಸಲು ಸಂಘ ಪರಿವಾರದ ಹರಸಾಹಸ

ಹೊಳಲ್ಕೆರೆ: ದಲಿತ ಮಂತ್ರಿ ಸೋಲಿಸಲು ಸಂಘ ಪರಿವಾರದ ಹರಸಾಹಸ

- Advertisement -
 
ಸದ್ಯದ ಎಲೆಕ್ಷನ್ ಮೂಡ್‍ನಲ್ಲಿ ಹೊಳಲ್ಕೆರೆ ಮತಕ್ಷೇತ್ರ ರಾಜ್ಯದ ಹಾಟ್‍ಸ್ಪಾಟ್‍ಗಳಲ್ಲಿ ಒಂದು. ಯಾಕೆಂದರೆ ಸಂಘ ಪರಿವಾರ ಈ ಸಲ ಶತಾಯಗತಾಯ ಸೋಲಿಸಲೇಬೇಕು ಅಂತ ರೆಡಿ ಮಾಡಿಕೊಂಡಿರುವ ಟಾರ್ಗೆಟ್‍ಗಳಲ್ಲಿ ಹಾಲಿ ಸಮಾಜ ಕಲ್ಯಾಣ ಮಂತ್ರಿ ಆಂಜನೇಯ ಕೂಡಾ ಇದ್ದಾರೆ. ಸಿಎಂ ಸಿದ್ರಾಮಯ್ಯ ಕಟ್ಟಿಟ್ಟಿರುವ `ಅಹಿಂದ’ ವೋಟ್ ಬ್ಯಾಂಕನ್ನು ಛಿದ್ರಗೊಳಿಸಬೇಕೆಂದರೆ ಮೊದಲು ಅದರ ಮೂಲ ಬೇರುಗಳನ್ನು ಅರ್ಥಾತ್ ಆ ನಾಯಕತ್ವಗಳನ್ನು ಮಟ್ಟ ಹಾಕಬೇಕೆಂಬುದು ಆರೆಸ್ಸೆಸ್‍ನ ವೆರಿಓಲ್ಡ್ ಫಾರ್ಮುಲಾ. ಅಂತೆಯೇ ಸಿದ್ದು, ಖಾದರ್, ಜಾರ್ಜ್, ಆಂಜನೇಯ ಹೀಗೆ ಶೂದ್ರ ಮತ್ತು ಅಲ್ಪಸಂಖ್ಯಾತ ಲೀಡರ್‍ಶಿಪ್‍ಗಳನ್ನು ಧ್ವಂಸ ಮಾಡುವುದು ಸಂಘ ಪರಿವಾರದ ಲೇಟೆಸ್ಟ್ ಅಜೆಂಡಾ. ಸದ್ಯದಮಟ್ಟಿಗೆ ತಮ್ಮ ವಿರೋಧಿ ಪಾಳೆಯದಲ್ಲಿ ಖರ್ಗೆಯವರನ್ನು ಬಿಟ್ಟರೆ ದಲಿತ ರಾಜಕಾರಣವನ್ನು ಧ್ರುವೀಕರಣಗೊಳಿಸಬಲ್ಲಂತಹ ಮುಖವೆಂದರೆ ಅದು ಮಂತ್ರಿ ಆಂಜನೇಯರದು ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿಯ ಮಾತೃಸಂಘಟನೆ ಹೊಳಲ್ಕೆರೆ ಕದನ ಕಣವನ್ನು ಸೀರಿಯಸ್ಸಾಗಿ ಪರಿಗಣಿಸಿದೆ. ಇತ್ತ ಖರ್ಗೆ ಸಾಹೇಬರು ಸೀನಿಯಾರಿಟಿಯ ಗಾಂಭೀರ್ಯತೆಯಲ್ಲಿ ಸಿದ್ರಾಮಯ್ಯನವರಿಂದ ಅಂತರ ಕಾಯ್ದುಕೊಂಡು `ಅಹಿಂದ’ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಅತ್ತ ಬುಡಕಟ್ಟು ಹಾಡಿಗಳಲ್ಲಿ, ದಲಿತರ ಕೇರಿಗಳಲ್ಲಿ ವಾಸ್ತವ್ಯ ಮಾಡುತ್ತಾ `ಸಿದ್ದು ಆಪ್ತ’ ವಲಯದಲ್ಲಿ ಮಿಂಚುತ್ತಿರುವ ಆಂಜನೇಯ ಸಹಜವಾಗಿಯೇ ಸಂಘ ಪರಿವಾರದ ಟಾರ್ಗೆಟ್ಟಾಗಿ ಫಿಕ್ಸ್ ಆಗಿದ್ದಾರೆ. ಆ ಕಾರಣಕ್ಕೇ, ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಹೊಳಲ್ಕೆರೆಯ ಟಿಕೆಟ್ಟನ್ನು ಯಾರಿಗೂ ಘೋಷಿಸದೆ ವೆಯ್ಟಿಂಗ್ ಲಿಸ್ಟ್‍ನಲ್ಲಿ ಇರಿಸಿಕೊಂಡಿದೆ. ಇಲ್ಲದೇ ಹೋಗಿದ್ದಲ್ಲಿ, ಕೆಜೆಪಿ ಕೋಟಾದಲ್ಲಿ ಯಡಿಯೂರಪ್ಪನವರ ಪಟ್ಟಾ ಶಿಷ್ಯ ಚಂದ್ರಪ್ಪನಿಗೆ ಇಷ್ಟೊತ್ತಿಗಾಗಲೇ ಟಿಕೆಟು ಘೋಷಿಸಬೇಕಾಗಿತ್ತು!
`ಮಠ’ ವರ್ಸಸ್ `ಧರ್ಮ’
ಹೇಗಾದರೂ ಮಾಡಿ ಚಿತ್ರದುರ್ಗ ಜಿಲ್ಲಾ ರಾಜಕಾರಣವನ್ನು ವಶಮಾಡಿಕೊಳ್ಳಬೇಕೆನ್ನುವುದು ಸಂಘ ಪರಿವಾರದ ಗುರಿ. ಕರ್ನಾಟಕದಲ್ಲಿ ತನ್ನ ಕೋಮುವಾದಿ ರಾಜಕಾರಣವನ್ನು ಪಸರಿಸಲು ಅದು ಏನೆಲ್ಲಾ ಪ್ರಯತ್ನ ಪಟ್ಟರೂ ಕರಾವಳಿ ಸೆರಗಿನಿಂದಾಚೆಗೆ ಅದರ ಪ್ರಭಾವ ವಿಸ್ತರಿಸುತ್ತಿಲ್ಲ. ಹಾಗಂತ ಅವರು ಕೈಕಟ್ಟಿ ಕೂತಿಲ್ಲ. ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇದ್ದಾರೆ. ಅದರ ಭಾಗವಾಗಿ ದಾವಣಗೆರೆ, ಚಿತ್ರದುರ್ಗ, ಹಾವೇರಿಯಂತಹ ಮಧ್ಯ ಕರ್ನಾಟಕದ ನೆಲಗಳನ್ನು ಹೊಕ್ಕು ಕೋಮುವರ್ಣ ಸುರಿದುಬಿಟ್ಟರೆ ಉತ್ತರಕ್ಕೂ, ದಕ್ಷಿಣಕ್ಕೂ ವ್ಯಾಪಿಸಿಬಿಡೋದು ಕಷ್ಟವಲ್ಲ ಅನ್ನೋದು ಸಂಘ ಪರಿವಾರದ ಲೆಕ್ಕಾಚಾರ. ಹಾಗಾಗಿಯೇ ಈ ಜಿಲ್ಲೆಗಳ ರಾಜಕಾರಣದ ಮೂಲಕ ತನ್ನ ಅಜೆಂಡಾವನ್ನು ಈಡೇರಿಸಿಕೊಳ್ಳಲು ಕರಾವಳಿಯ ಕೇಸರಿ ಕೂಟ ಹಾತೊರೆಯುತ್ತಿದೆ.
ಆದರೆ ಸಂಘ ಪರಿವಾರಕ್ಕೆ ಇಷ್ಟುದಿನ ಇಲ್ಲೂ ಒಂದು `ಧರ್ಮ’ ಸಂಕಟವಿತ್ತು. ಅದು ಸಿರಿಗೆರೆ ಸದ್ಧರ್ಮ ಪೀಠದ ರಾಜಕೀಯ ಪಾಳೆಗಾರಿಕೆ! ಮೂಲ ಬಸವತತ್ವದಿಂದ ದೂರ ಸರಿದು, ಇತ್ತೀಚಿನವರೆಗೆ ಮನುವಾದಿಗಳ `ಜಾತಿ’ ಪದರಕ್ಕೆ ಕುಸಿದು ಕುಳಿತಿದ್ದ ಮಧ್ಯ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ರಾಜಕೀಯ ಒಮ್ಮತ ನಿರ್ಧಾರವಾಗುತ್ತಿದ್ದುದೇ ಸಿರಿಗೆರೆ ಸ್ವಾಮಿಗಳ ಫರ್ಮಾನನ್ನು ಆಧರಿಸಿ! ಅವರು ಯಾವ ಅಭ್ಯರ್ಥಿಯ ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಾರೋ ಅವರೇ ಈ ಭಾಗದಲ್ಲಿ ಗೆಲ್ಲುತ್ತಾ ಬಂದಿದ್ದಾರೆ ಅನ್ನೋದರಲ್ಲಿ ಸಂಶಯವೇ ಇಲ್ಲ. ಕಳೆದ ಎಲೆಕ್ಷನ್‍ನಲ್ಲಿ ಇದೇ ಆಂಜನೇಯರ ಗೆಲುವು ಕೊನೇಕ್ಷಣದವರೆಗೂ ಡೋಲಾಯಮಾನ ಸ್ಥಿತಿಯಲ್ಲಿತ್ತು. ಸಿರಿಗೆರೆ ಸ್ವಾಮಿಗಳ ವಿರುದ್ಧ ಆಂಜನೇಯ ಸಣ್ಣಗೆ ಮುನಿಸಿಕೊಂಡದ್ದು ಅದಕ್ಕೆ ಕಾರಣ. ಆದರೆ ಯಾವಾಗ ಇನ್ನು ತಡಮಾಡಿದರೆ ತಾನು ಸೋಲುತ್ತೇನೆಂಬ ಆತಂಕ ಶುರುವಾಯಿತೋ ಆಗ ಸೀದಾ ಮಠದ ದಾರಿ ಹಿಡಿದ ಆಂಜನೇಯ ಸಿರಿಗೆರೆ ಸ್ವಾಮಿಗಳ ಪಾದಕ್ಕೆರಗಿದ್ದರು. ಹಾಗಾಗಿಯೇ ಅವರು ಗೆಲ್ಲುವಂತಾಯ್ತು ಅನ್ನೋದು ಜನರ ಅಭಿಪ್ರಾಯ.
ಹೀಗೆ ರಾಜಕಾರಣದ ಪಾಳೇಗಾರಿಕೆಯ ರುಚಿ ಕಂಡಿರುವ ಜಗದ್ಗುರುಗಳಿಗೆ ಸಂಘ ಪರಿವಾರ ಆ ಸಾಮ್ರಾಜ್ಯವನ್ನು ಆಕ್ರಮಿಸಿಕೊಳ್ಳೋದು ಸುತರಾಂ ಇಷ್ಟವಿರಲಿಲ್ಲ. ಯಾಕೆಂದರೆ ಸಂಘದ ರಾಜಕಾರಣ ಶುರುವಾಗಿಬಿಟ್ಟರೆ ತಮ್ಮ ಮಠ ರಾಜಕಾರಣವನ್ನು ಮೂಲೆಗುಂಪು ಮಾಡುತ್ತಾರೆ ಎಂಬ ಆತಂಕ ಅವರಿಗಿತ್ತು. ಹಾಗಾಗಿ ಕರಾವಳಿ ಭಾಗದಿಂದ ಧರ್ಮ ರಾಜಕಾರಣದ ದಾಳಿ ಶುರುವಾಗುತ್ತಿದ್ದಂತೆಯೇ ಮಠ ರಾಜಕಾರಣ ಅದಕ್ಕೆ ಅಡ್ಡಗಾಲು ಹಾಕುತ್ತಿತ್ತು. ಕಾವಿಧಾರಿಗಳ ವಿರುದ್ಧ ಅಷ್ಟು ಸುಲಭಕ್ಕೆ ಪಿತೂರಿ ನಡೆಸಲಾಗದ ಸಂಘ ಪರಿವಾರವೂ ಕೈಕೈ ಹಿಸುಕಿಕೊಳ್ಳುತ್ತಾ ತನ್ನ ಪ್ರಯತ್ನದಿಂದ ಹಿಂದೆ ಸರಿಯುತ್ತಿತ್ತು.
ಮಾದಾರ ಚೆನ್ನಯ್ಯ ಎಂಟ್ರಿ
ಆದರೆ ಈ ಸಲ ಸಂಘ ಪರಿವಾರ ಮಾದಾರ ಚೆನ್ನಯ್ಯ ಎಂಬ ರಾಜಕೀಯ ಹಪಾಹಪಿತನದ ಕಾವಿಧಾರಿಯನ್ನು ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಇಶ್ಯೂವನ್ನು ಮುಂದಿಟ್ಟುಕೊಂಡು ಸಿರಿಗೆರೆ ಸ್ವಾಮಿಗಳ ಮನವೊಲಿಸಿ ಅಖಾಡಕ್ಕಿಳಿಯುವ ಪ್ರಯತ್ನ ಮಾಡುತ್ತಿದೆ. ಸದ್ಧರ್ಮ ಪೀಠಕ್ಕೂ, ಆಂಜನೇಯಗೂ ಕೊಂಚ ವ್ಯತ್ಯಾಸ ಮೂಡಿಬಂದಿದೆ. ಅಲ್ಲದೇ, ಸಿದ್ದು ಸರ್ಕಾರ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಲು ಮುಂದಾಗಿರೋದು ಮಠ ರಾಜಕಾರಣದ ತಮಗೆ ಅನುಕೂಲವಾಗುತ್ತೋ, ಅನಾನುಕೂಲವಾಗುತ್ತೋ ಎಂಬ ಗೊಂದಲ ಸಿರಿಗೆರೆ ಸ್ವಾಮಿಗಳನ್ನು ಕಾಡುತ್ತಿದೆ. ಪರವಾಗಿ ನಿಲ್ಲಬೇಕೊ, ವಿರೋಧ ವ್ಯಕ್ತಪಡಿಸಬೇಕು ಎನ್ನುವ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಬಹುಶಃ ಯಡಿಯೂರಪ್ಪ ನೇತೃತ್ವದಲ್ಲಿ ಇಂತಹ ಪ್ರಯತ್ನ ನಡೆದಿದ್ದರೆ ಅದಕ್ಕೆ ಬೆಂಬಲ ನೀಡುತ್ತಿದ್ದರೇನೊ ಆದರೆ ಸಿದ್ದು ಮುಂದಾಳತ್ವದಲ್ಲಿ ಪ್ರತ್ಯೇಕ ಧರ್ಮದ ಪ್ರಯತ್ನ ನಡೆಯುತ್ತಿರೋದು ಅವರಿಗೆ ಕೊಂಚ ಕಸಿವಿಸಿ ಉಂಟುಮಾಡಿದೆ ಅಂತ ಮಠದ ಆವರಣದೊಳಗೇ ಮಾತುಗಳು ಕೇಳಿಬರುತ್ತಿವೆ. ಇದನ್ನೇ ಸಂಘ ಪರಿವಾರ ಎನ್‍ಕ್ಯಾಶ್ ಮಾಡಿಕೊಂಡು ಕೋಟೆ ನಾಡಿನಲ್ಲಿ ತನ್ನ ಪ್ರಭಾವಳಿ ವಿಸ್ತರಿಸಲು ಹವಣಿಸುತ್ತಿದೆ. ಜೊತೆಗೆ ಮಾದಾರ ಚೆನ್ನಯ್ಯ ಸ್ವಾಮಿಗೂ, ಮಾದಾರ ಪೀಠದ ಕಾರ್ಯದರ್ಶಿಯಾದ ಮಂತ್ರಿ ಆಂಜನೇಯಗೂ ವೈಮನಸ್ಸು ಶುರುವಾಗಿರೋದ್ರಿಂದ ದಲಿತ ಮಂತ್ರಿಯನ್ನು ಸೋಲಿಸಲು ದಲಿತ ಸ್ವಾಮಿಯನ್ನೇ ಅದು ದಾಳವಾಗಿ ಬಳಸಿಕೊಳ್ಳಲು ಮುಂದಾಗಿದೆ.
ಮಾದಾರ ಚನ್ನಯ್ಯ, ಮಾದಿಗ ಸಮುದಾಯದ ಪೀಠಾಧಿಪತಿಯಾದರೂ ಮನುವಾದಿಗಳ ಕೈಗೊಂಬೆಯಂತೆ ವರ್ತಿಸುತ್ತಾ ಬಂದವರು. ಪೂರ್ವಾಶ್ರಮದಲ್ಲಿ ಪತ್ರಕರ್ತನ ಗೆಟಪ್ಪಿನಲ್ಲಿ ಮಿಂಚಿದ್ದ ಈ ಸ್ವಾಮೀಜಿ ರಾಜಕೀಯ ಮಹತ್ವಾಕಾಂಕ್ಷಿ. ಕೈಪಾಳೆಯದಲ್ಲಿ ತನ್ನ ರಾಜಕೀಯ ಕನವರಿಕೆ ಈಡೇರದು ಎಂದರಿತು ಬಿಜೆಪಿಯ ಬೆನ್ನುಹತ್ತಿ ಹೊರಟಿದ್ದಾರೆ. ಎಲೆಕ್ಷನ್ ಬಿಸಿ ಶುರುವಾದ ಆರಂಭದಲ್ಲಿ ಮಾದಾರ ಚೆನ್ನಯ್ಯರು ಬಿಜೆಪಿ ಅಭ್ಯರ್ಥಿಯಾಗಿ ನೇರ ಚುನಾವಣಾ ಅಖಾಡಕ್ಕೇ ಇಳಿಯುತ್ತಾರೆ ಎಂಬ ಮಾತು ಕೇಳಿಬಂದಿದ್ದವು. ಬಹುಶಃ ಉತ್ತರ ಪ್ರದೇಶದಲ್ಲಿ ಕಾವಿಧಾರಿ ಯೋಗಿ ಆದಿತ್ಯನಾಥನನ್ನು ಸಿಎಂ ಮಾಡಿದ್ದರಿಂದ ಪುಳಕಗೊಂಡು ಈ ಹೈವೇ ಸ್ವಾಮಿ ಅಂತಹ ಸಾಹಸ ಮಾಡಿದ್ದರೂ ಮಾಡಿರಬಹುದು. ಆದರೆ ಈಗ ಆ ಮಾತು ತಣ್ಣಗಾಗಿದೆ. ಆದರೂ 2019ರ ಎಂಪಿ ಎಲೆಕ್ಷನ್‍ನಲ್ಲಿ ಚಿತ್ರದುರ್ಗದಿಂದ ಬಿಜೆಪಿ ಹುರಿಯಾಳಾಗುತ್ತಾರೆ ಎಂಬ ಗಾಳಿಸುದ್ದಿ ಇದೆ. ಬಹುಶಃ ಈ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಆಂಜನೇಯರನ್ನು ಮಣಿಸಲು ಸಂಘ ಪರಿವಾರ ಮಾದಾರ ಚೆನ್ನಯ್ಯರ ಮೂಗಿಗೆ ಅಂತಹ ತುಪ್ಪ ಸವರಿದ್ದರೂ ಸವರಿರಬಹುದು. ವಾಸ್ತವವೇನೆಂದರೆ, ಮಾದಿಗ ಸಮುದಾಯ ಈ ಸ್ವಾಮಿಗೆ ಕೈಮುಗಿಯಬಹುದೇ ವಿನಾಃ ಅವರ ಮಾತು ಕೇಳಿ ಮತ ಹಾಕುವಂತಹ ಪರಿಸ್ಥಿತಿ ಹೊಳಲ್ಕೆರೆ ಮಟ್ಟಿಗಂತೂ ಇಲ್ಲ.
ಬಿಜೆಪಿಯ ಬಂಡಾಯ
ಸಂಘ ಪರಿವಾರದ ಇಷ್ಟೆಲ್ಲ ಕಸರತ್ತುಗಳ ಹೊರತಾಗಿಯೂ ಹೊಳಲ್ಕೆರೆಯಲ್ಲಿ ಆಂಜನೇಯ ಪರವಾದ ವಾತಾವರಣವೇ ಇದೆ. ಅದಕ್ಕೆ ಮುಖ್ಯ ಕಾರಣ ಸ್ಥಳೀಯ ಬಿಜೆಪಿಯೊಳಗಿನ ಬಿರುಕು. 2008ರಲ್ಲಿ ಬಿಜೆಪಿಯಿಂದ ಗೆದ್ದು 2013ರಲ್ಲಿ ಯಡಿಯೂರಪ್ಪನವರ ಕೆಜೆಪಿಗೆ ಕೆನೆದು ಮಾಜಿ ಶಾಸಕನಾಗಿರುವ ಚಂದ್ರಪ್ಪನಿಗೆ ಈಗ ಆತನ ದುರಹಂಕಾರಿ ನಡವಳಿಕೆಯೇ ಮುಳುವಾಗುತ್ತಿದೆ. ಚಂದ್ರಪ್ಪನ ವಿರೋಧಿಗಳು ಈತನಿಗೆ ಟಿಕೆಟ್ ತಪ್ಪಿಸಲು, ಪರ್ಯಾಯ ಅಭ್ಯರ್ಥಿಯನ್ನು ರೂಪಿಸಲು, ಅಕಸ್ಮಾತ್ ಆತನಿಗೆ ಟಿಕೆಟ್ ಸಿಕ್ಕರೂ ಸೋಲಿಸಲು ಸಜ್ಜಾಗಿದ್ದಾರೆ. ಆತನಿಗೆ ಪರ್ಯಾಯವಾಗಿ ಹನುಮಕ್ಕ ಎಂಬ ಮಹಿಳೆಯನ್ನು ಬಿಜೆಪಿ ಅಭ್ಯರ್ಥಿಯಾಗಿಸುವ ಕಸರತ್ತುಗಳು ನಡೆದಿದ್ದವು. ಆದರೆ ಯಡಿಯೂರಪ್ಪ ಮಾತ್ರವಲ್ಲದೇ ದಾವಣಗೆರೆ ಸಂಸದ ಸಿದ್ದೇಶ್ವರರ ಕೃಪಾಕಟಾಕ್ಷವೂ ಇರೋದ್ರಿಂದ ಟಿಕೆಟ್ ರೇಸ್‍ನಲ್ಲಿ ಚಂದ್ರಪ್ಪ, ಹನುಮಕ್ಕನಿಗಿಂತ ಬಹಳಷ್ಟು ಮುಂದಿದ್ದಾನೆ. ಆದಾಗ್ಯೂ ಚಂದ್ರಪ್ಪನ ವಿರೋಧಿಗಳು ಆತನನ್ನು ಮಣಿಸುವ ಹಿಡನ್ ಕಾರ್ಯತಂತ್ರವನ್ನು ಜೀವಂತವಾಗಿಟ್ಟಿದ್ದಾರೆ. ಚಂದ್ರಪ್ಪನೇ ಬಿಜೆಪಿ ಅಭ್ಯರ್ಥಿ ಎಂದಾದರೆ ಹನುಮಕ್ಕ ಸೇರಿದಂತೆ ಶಶಿಕುಮಾರನಾಯ್ಕ, ಶಶಿನಾಯ್ಕ, ದೇವೇಂದ್ರ ನಾಯ್ಕ ಹೀಗೆ ನಾಲ್ವರನ್ನು ಅಥವಾ ಕನಿಷ್ಠಪಕ್ಷ ಒಬ್ಬರನ್ನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿಸಲು ಕಸರತ್ತು ನಡೆಸಿದ್ದಾರೆ.
ಹಾಗಂತ ಆಂಜನೇಯ ಮೈಮರೆತು ಕೂತರೆ, ಸಂಘ ಪರಿವಾರ ಮೇಲುಗೈ ಸಾಧಿಸುವ ಸಾಧ್ಯತೆಯುಂಟು. ಜೊತೆಗೆ ಆಂಜನೇಯ, ತನ್ನದೇ ಪಟಾಲಮ್ಮು ಪಡೆಯನ್ನು ಹೊರತುಪಡಿಸಿ ಜನಸಾಮಾನ್ಯರ ಕೈಗೆ ಸರಾಗವಾಗಿ ಲಭಿಸುವುದೇ ದುಸ್ತರ ಎನ್ನುವಂತೆ ಮಾಡಿಕೊಂಡು ಬಂದಿದ್ದಾರೆ. ಅದೂಅಲ್ಲದೇ, `ವಿಜಯಾ ಬ್ಯಾಂಕ್’ ನಾಣ್ಣುಡಿಯೂ ಅವರ ಮೈಲೇಜಿಗೆ ಬ್ರೇಕು ಹಾಕುತ್ತಿದೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಎಪಿಎಂಸಿ ಎಲೆಕ್ಷನ್‍ನಲ್ಲಿ ಹೊಳಲ್ಕೆರೆಯಲ್ಲಿ ಕಾಂಗ್ರೆಸ್ ಪಾರ್ಟಿ ಮುಗ್ಗರಿಸಿದ್ದು ಆಂಜನೇಯರ ಬಗ್ಗೆ ಜನರಿಗೆ ಇರುವ ಇಂಥಾ ಅಸಮಾಧಾನಗಳಿಂದಾಗಿಯೇ. ಅಲ್ಲದೇ ಎಲ್ಲಾ ಕಡೆ ಇರುವಂತೆ ಶೂದ್ರ ಸಮುದಾಯದೊಳಗೇ ಇರುವ, ಮುಖ್ಯವಾಗಿ ದಲಿತ ಸಮುದಾಯಗಳ ಎಡಗೈ ಬಲಗೈ ನಡುವಿನ ಆಂತರಿಕ ತಿಕ್ಕಾಟಗಳನ್ನು ಆಂಜನೇಯ ನಾಜೂಕಾಗಿ ನಿಭಾಯಿಸದೇ ಹೋದಲ್ಲಿ ಕುರುಬ, ನಾಯಕ, ಮಡಿವಾಳರಂತಹ ಅಹಿಂದ ಮತಗಳೂ ಕಾಂಗ್ರೆಸ್‍ನಿಂದ ವಿಮುಖಗೊಳ್ಳುವ ಸಂಭಾವ್ಯತೆ ಹೊಳಲ್ಕೆರೆಯಲ್ಲಿ ಕಾಣಬರುತ್ತಿದೆ. ಈ ಕೆಮಿಸ್ಟ್ರಿಯನ್ನು ಆಂಜನೇಯ ಅರ್ಥ ಮಾಡಿಕೊಳ್ಳದೇ ಹೋದಲ್ಲಿ ಮೇ 15ರಂದು ಹೊಳಲ್ಕೆರೆಯಲ್ಲಿ ಕೇಸರಿ ಪಡೆ ಕೇಕೆ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕಲಾಗುವುದಿಲ್ಲ.
– ಟಿ.ಎನ್. ಷಣ್ಮುಖ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...