ಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಬಳಿಕ ದೇಹ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಗುಣ ಪಡೆದುಕೊಳ್ಳುತ್ತದೆ ಎಂಬ ಸಂದೇಶ ವೈರಲ್ ಆಗುತ್ತಿದೆ. ಆದರೆ ಅದು ಸುಳ್ಳು ಎಂದಿರುವ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ನಾವು ಹೇಳಿದಂತೆ ಮೈಮೇಲೆ ಸ್ಯಾನಿಟೈಸರ್ ಮಾಡಿದ ಬಳಿಕ ದೇಹ ಮ್ಯಾಗ್ನೆಟಿಕ್ ಶಕ್ತಿ ಪಡೆದಿದೆಯೆಂದು ಮತ್ತು ಲೋಹಗಳು ಅದಕ್ಕೆ ಅಂಟಿಕೊಳ್ಳುತ್ತದೆ ಎಂದು ಸಾಬೀತುಪಡಿಸಿದವರಿಗೆ 1 ಲಕ್ಷ ರೂ ಬಹುಮಾನ ನೀಡುವುದಾಗಿ ಸವಾಲು ಹಾಕಿದ್ದಾರೆ.
ಕೊವೀಡ್ ಲಸಿಕೆ ತೆಗೆದುಕೊಂಡ ನಂತರ ನಾಸಿಕ್‌ನ 71 ವರ್ಷದ ವ್ಯಕ್ತಿಯೊಬ್ಬರ ದೇಹದಲ್ಲಿ ಕಾಂತಿಯ ಶಕ್ತಿ ಬಂದಿದೆ ಎನ್ನಲಾಗಿದ್ದು, ಅವರ ತೋಳು ಮತ್ತು ಕತ್ತಿನ ಮೇಲೆ ಕಬ್ಬಿಣ, ಸ್ಟೀಲ್ ವಸ್ತುಗಳು, ನಾಣ್ಯಗಳು ಅಂಟಿಕೊಳ್ಳುತ್ತಿರುವ ವಿಡಿಯೋ ವೈರಲ್ ಆದ ನಂತರ ಈ ಸುದ್ದಿ ಹಬ್ಬಿತ್ತು. ವ್ಯಕ್ತಿಯ ಚರ್ಮದ ಮೇಲಿನ ತೇವಾಂಶವು ಮೇಲ್ಮೈ ಒತ್ತಡದಿಂದ ವಸ್ತುಗಳು ಅಂಟಿಕೊಳ್ಳುವಂತೆ ಮಾಡುತ್ತದೆ. ಇದಕ್ಕೆ ಮ್ಯಾಗ್ನೆಟಿಸಮ್ ಎಂದು ಹೇಳಬಹುದು ಎಂದು ಅದರ ಹಿಂದಿನ ಕಾರಣವನ್ನು ನರೇಂದ್ರ ನಾಯಕ್ ವಿವರಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳುವುದರಿಂದ ಜನರು ಹಿಂಜರಿಯುವಂತೆ ಮಾಡಲು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತದೆ. ಲಸಿಕೆ ಮೂಲಕ ಅಥವಾ ಬೇರೆ ಯಾವುದೇ ವಿಧಾನದಿಂದ ಕಾಂತೀಯತೆಯನ್ನು ಮಾನವ ದೇಹಕ್ಕೆ ಪ್ರಚೋದಸಲು ಸಾಧ್ಯವಿಲ್ಲ. ಹೀಗೆ ಪ್ರತಿಪಾದಿಸುವವರಿಗೆ ನಾವು 10 ಸೆಕೆಂಡ್‌ಗಳ ಪರೀಕ್ಷೆಯ ಸವಾಲು ಹಾಕುತ್ತೇವೆ. ದೇಹದಲ್ಲಿ ಅಯಸ್ಕಾಂತೀಯ ಶಕ್ತಿಯಿದೆ ಎಂದು ಹೇಳಿಕೊಳ್ಳುವ ವ್ಯಕ್ತಿಯ ದೇಹದ ಮೇಲೆ ಕರವಸ್ತ್ರದಿಂದ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಹಾಕಿ ಅದು ಒಣಗಿದ ನಂತರ ಆ ದೇಹಕ್ಕೆ ಲೋಹದ ವಸ್ತುಗಳು ಅಂಟಿಕೊಳ್ಳುತ್ತವೆಯೇ ಎಂದು ನೋಡಬೇಕು ಎಂದು ಅವರು ತಿಳಿಸಿದ್ದಾರೆ.
ಸ್ಯಾನಿಟೈಸರ್ ವ್ಯಕ್ತಿಯ ಚರ್ಮದ ಮೇಲಿನ ತೇವಾಂಶದ ಮೇಲ್ಮೈ ಒತ್ತಡವನ್ನು ಕಡಿಮೆ ಮಾಡುವುದರಿಂದ ಆ ವ್ಯಕ್ತಿಯ ಮೇಲೆ ಲೋಹದ ವಸ್ತುಗಳು ಅಂಟಿಕೊಳ್ಳುವುದಿಲ್ಲ. ಒಂದು ವೇಳೆ ಅಂಟಿಕೊಳ್ಳುತ್ತದೆ ಎಂದು ಪ್ರತಿಪಾದಿಸುವವರು ಇದ್ದರೆ ನಮ್ಮ ಸವಾಲು ಸ್ವೀಕರಿಸಲು ಎಂದು ಅವರು ಘೋಷಿಸಿದ್ದಾರೆ.
ಸ್ಯಾನಿಟೈಸರ್ ಇಲ್ಲದಿದ್ದಲ್ಲಿ ಸೋಪ್ ದ್ರವದಿಂದ ಸಹ ಈ ಪರೀಕ್ಷೆ ಮಾಡಬಹುದು. ಸೋಪ್ ನೀರಿನಿಂದ ದೇಹವನ್ನು ತೊಳೆದ ನಂತರ ಚೆನ್ನಾಗಿ ಒಣಗಿದ ತಕ್ಷಣವೇ ಈ ಪರೀಕ್ಷೆ ಮಾಡಬೇಕು. ಯಾರಾದರೂ ಲೋಹದ ವಸ್ತುಗಳು ಅಂಟಿಕೊಳ್ಳುವುದನ್ನು ತೋರಿಸಿದರೆ ಅವರಿಗೆ 1 ಲಕ್ಷ ರೂಗಳ ಬಹುಮಾನ ನೀಡುತ್ತೇವೆ, ಅದಕ್ಕಾಗಿ ತಮ್ಮನ್ನು ಸಂಪರ್ಕಿಸುವಂತೆ ಅವರು ತಮ್ಮ ಮೊಬೈಲ್ ಸಂಖ್ಯೆ (94482 16343) ನೀಡಿದ್ದಾರೆ.
ಜನ ಲಸಿಕೆ ತೆಗೆದುಕೊಳ್ಳದಂತೆ ಭಯ ಹುಟ್ಟಿಸುವ ಇಂತಹ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ ಎಂದು ಅವರು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಪರವಾಗಿ ತಿಳಿಸಿದ್ದಾರೆ. ಈ ಕುರಿತು ಈ ಹಿಂದೆ ನಾನುಗೌರಿ.ಕಾಂ ಕೂಡ ಫ್ಯಾಕ್ಟ್‌ಚೆಕ್ ಲೇಖನ ಪ್ರಕಟಿಸಿದೆ. ಅದನ್ನು ಈ ಕೆಳಗೆ ಓದಬಹುದು.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೊವೀಡ್ ಲಸಿಕೆ ಪಡೆದ ಮೇಲೆ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿ ದೊರೆಯುತ್ತದೆಯೇ?


