ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೊಕ್ಕಡಿ ಗ್ರಾಮದಲ್ಲಿ ಎಐಎಡಿಎಂಕೆಯ ಪಂಚಾಯತ್ ಸದಸ್ಯೆ ಮತ್ತು ಆಕೆಯ ಪತಿ ಸೇರಿದಂತೆ ಜನರ ಗುಂಪು ನಡೆಸಿದ ದಾಳಿಯಲ್ಲಿ ದಲಿತ ಸಮುದಾಯದ 10 ಮಂದಿ ಗಾಯಗೊಂಡಿದ್ದಾರೆ.
ದಲಿತ ಸಮುದಾಯದ ಜನರು ತಮ್ಮ ವಸತಿ ಪ್ರದೇಶದ ಬಳಿ ಕಲ್ಲು ಪಾಲಿಶ್ ಮಾಡುವ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿದ ಬಳಿಕ ಸಂಘರ್ಷಗಳು ನಡೆದಿದೆ. ಎಐಎಡಿಎಂಕೆಯ ಕೃಷ್ಣಗಿರಿ ವೆಸ್ಟ್ ಯೂನಿಯನ್ ಕಾರ್ಯದರ್ಶಿ ಸೊಕ್ಕಡಿ ರಾಜನ್, ಪಂಚಾಯತ್ ನಾಯಕಿ ಕೋಡಿಲ ರಾಮಲಿಂಗಂ ಮತ್ತು ಅವರ ಪತಿ ರಾಮಲಿಂಗಂ ಅವರು ಜಾತಿ ನಿಂದನೆಗಳನ್ನು ಮಾಡಿದ್ದು, ಬಳಿಕ ದಲಿತರ ಮೇಲೆ ಕಲ್ಲು ತೂರಾಟ ಮಾಡಲು ಜನರನ್ನು ಪ್ರೇರೇಪಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸೊಕ್ಕಡಿ ರಾಜನ್ ಮತ್ತು ರಾಮಲಿಂಗಂ ವಿರುದ್ಧ ಪೊಲೀಸರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
120ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುವ ಗ್ರಾಮದಲ್ಲಿ ಕಲ್ಲು ಪಾಲಿಶ್ ಮಾಡುವುದನ್ನು ಸ್ಥಳೀಯರು ವಿರೋಧಿಸಿದ್ದಾರೆ. ಇದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದರು. ಇದರಿಂದ ಕೋಪಗೊಂಡು ದಲಿತರು ವಾಸಿಸುತ್ತಿದ್ದ ವಸತಿ ಪ್ರದೇಶದಲ್ಲಿ ಕಲ್ಲು ತೂರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸೊಕ್ಕಾಡಿಯ ದಲಿತ ನಿವಾಸಿಯೊಬ್ಬರು ಮಾತನಾಡಿ, ಅ.29ರಂದು ಕೆಲವು ಯುವಕರು ತಮ್ಮ ಮನೆಗೆ ಕಲ್ಲಿನ ಧೂಳು ಬಂದು ಆರೋಗ್ಯ ಸಮಸ್ಯೆಯಾಗುತ್ತದೆ. ಇದರಿಂದ ಕಲ್ಲು ಪಾಲಿಶ್ ನಿಲ್ಲಿಸುವಂತೆ ಸಂಬಂಧಪಟ್ಟವರಿಗೆ ಆಗ್ರಹಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಸ್ಥಳಕ್ಕೆ ಬಂದ ಸೊಕ್ಕಾಡಿ ರಾಜನ್ ಅಲ್ಲಿದ್ದ ಜನರಿಗೆ ಜಾತಿ ನಿಂದನೆ ಮಾಡಿದ್ದರು. ಆ ಬಳಿಕ ವಾಗ್ವಾದ ನಡೆದು ಗ್ರಾಮದಲ್ಲಿ 30 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಆದರೆ ತಡರಾತ್ರಿ ಸೊಕ್ಕಡಿ ರಾಜನ್, ಪಂಚಾಯತ್ ನಾಯಕಿ ಕೋಡಿಲ ರಾಮಲಿಂಗಂ ಮತ್ತು ಅವರ ಪತಿ ರಾಮಲಿಂಗಂ ಅವರೊಂದಿಗೆ ವೆಲ್ಲಾಲ ಗೌಂಡರ್ ಜನರು ಬಂದು ದಲಿತರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕೃಷ್ಣಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಎರಡೂ ಕಡೆಯ 23 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ 13 ಜನರನ್ನು ಬಂಧಿಸಲಾಗಿದೆ.
ಈ ಬಗ್ಗೆ ಗ್ರಾಮದ ಇನ್ನೋರ್ವ ವ್ಯಕ್ತಿ ಮಾತನಾಡಿದ್ದು, ಮೂರು ತಿಂಗಳ ಹಿಂದೆ ಗ್ರಾಮದಲ್ಲಿ ಕಲ್ಲಿನ ಪಾಲಿಶ್ ಮಾಡುವ ಕೆಲಸ ಪ್ರಾರಂಭಿಸಿದ್ದರು. ಹಲವು ಬಾರಿ ನಾವು ಮನೆಗಳಿಗೆ ಧೂಳು ಹರಡದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೆವು. ಮನೆಯ ಆಹಾರ, ನೀರು ಎಲ್ಲಾ ದೂಳಲ್ಲಿ ಮುಳುಗುತ್ತದೆ. ನಮ್ಮ ಮನವಿಯನ್ನು ಅವರು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.
ಹರೂರಿನ ಸಿಪಿಐ(ಎಂ) ಮಾಜಿ ಶಾಸಕ ಡಿಲ್ಲಿ ಬಾಬು ಈ ಕುರಿತು ಮಾತನಾಡಿದ್ದು, ಈ ಸಮಸ್ಯೆ ಉಲ್ಬಣಗೊಂಡಾಗ ಪೊಲೀಸರು ದಲಿತರಿಗೆ ಯಾವುದೇ ರಕ್ಷಣೆ ನೀಡಲಿಲ್ಲ. ಇದು ಪೊಲೀಸರ ಸಮ್ಮುಖದಲ್ಲಿ ನಡೆದಿರುವುದು ಆಶ್ಚರ್ಯಕರವಾಗಿದೆ ಮತ್ತು ಈಗ ಪೊಲೀಸರು ದಾಳಿಕೋರರು ಮತ್ತು ಸಂತ್ರಸ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಸರೋಜ್ ಕುಮಾರ್ ಠಾಕೂರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರೂ ಪರಿಸ್ಥಿತಿ ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಅಲ್ ಜಝೀರಾ ಸಿಬ್ಬಂದಿಯ ಕುಟುಂಬದ 19 ಮಂದಿ ಬಲಿ


