ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ.
ಗಂಗಲೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಈವರೆಗೆ 12 ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಇದಲ್ಲದೆ ಐಇಡಿ ಸ್ಫೋಟದಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಯೋಧ ಗಾಯಗೊಂಡಿದ್ದಾರೆ. ಛತ್ತೀಸ್‌ಗಢದಲ್ಲಿ ಈ ವರ್ಷ ಕೊಲ್ಲಲ್ಪಟ್ಟ ಮಾವೋವಾದಿಗಳ ಸಂಖ್ಯೆ ಈಗ 103ಕ್ಕೆ ಏರಿಕೆಯಾಗಿದೆ. ಇದು 2019ರಿಂದ ಅತ್ಯಧಿಕವಾಗಿದೆ.
ಮಾವೋವಾದಿಗಳ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ಪಿಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಲೂರು ಪ್ರದೇಶದಲ್ಲಿ ಘಟನೆ ನಡೆದಿದೆ. ಇದು ಒಂದೇ ವಾರಗಳಲ್ಲಿ ಗಂಗಲೂರಿನಲ್ಲಿ ನಡೆದ ಎರಡನೇ ಪ್ರಮುಖ ಎನ್‌ಕೌಂಟರ್ ಆಗಿತ್ತು. ಏಪ್ರಿಲ್ 2ರಂದು ಈ ಪ್ರದೇಶದಲ್ಲಿ 13 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿತ್ತು.
ಪಿಡಿಯಾ ಅರಣ್ಯದಲ್ಲಿ ಸುಮಾರು 150 ಮಾವೋವಾದಿಗಳು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಾವೋವಾದಿಗಳು ಪಶ್ಚಿಮ ಬಸ್ತಾರ್ ವಿಭಾಗ, ದರ್ಭಾ ವಿಭಾಗ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಜಿಎಲ್‌ಎ) ಕಂಪನಿ 2ರ ಕಮಾಂಡರ್ ವೆಲ್ಲಾಗೆ ಸೇರಿದವರಾಗಿದ್ದರು ಎಂದು ಬಿಜಾಪುರ ಎಸ್ಪಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
ಮಾವೋವಾದಿಗಳು ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾದ ಡಿಆರ್‌ಜಿ ಸಿಬ್ಬಂದಿ, ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ, ಕೋಬ್ರಾ ಮತ್ತು ಸಿಆರ್‌ಪಿಎಫ್ ಬೆಟಾಲಿಯನ್‌ಗಳನ್ನು ಒಳಗೊಂಡ ಭದ್ರತಾ ಪಡೆಗಳು ರಾತ್ರಿ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿವೆ. 800ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೂರು ಜಿಲ್ಲೆಗಳ ಪಡೆಗಳ ಜಂಟಿ ಪ್ರಯತ್ನ ಇದಾಗಿದೆ. ಕಾರ್ಯಾಚರಣೆಯನ್ನು ಹಲವಾರು ದಿಕ್ಕುಗಳಿಂದ ಪ್ರಾರಂಭಿಸಲಾಯಿತು. ಆರಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು 12 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ ಎಂದು ದಂತೇವಾಡ ಎಸ್ಪಿ ಗೌರವ್ ರೈ ಹೇಳಿದ್ದಾರೆ.
ಈ ಎನ್‌ಕೌಂಟರ್ ಬಿಜಾಪುರ ಜಿಲ್ಲಾ ಕೇಂದ್ರದಿಂದ 40 ಕಿಮೀ ದೂರದಲ್ಲಿ ಮತ್ತು ಏಪ್ರಿಲ್ 2ರಂದು ನಡೆದ ಎನ್‌ಕೌಂಟರ್ ಸೈಟ್‌ನಿಂದ ದಕ್ಷಿಣಕ್ಕೆ 8-10 ಕಿಮೀ ದೂರದಲ್ಲಿ ನಡೆದಿದೆ.
ಇದನ್ನು ಓದಿ: ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ ಗಾಂಧಿ


