ರಾಜಸ್ಥಾನದಲ್ಲಿನ ತಮ್ಮ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷ ಬಿಜೆಪಿ ಪ್ರಯತ್ನಿಸುತ್ತಿದ್ದು, ಶಾಸಕರಿಗೆ ತಲಾ 15 ಕೋಟಿ ರೂಗಳ ಆಮಿಷವೊಡ್ಡಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಜನರಿಗಾಗಿ ಕೆಲಸ ಮಾಡುತ್ತಿರುವಾಗ ಬಿಜೆಪಿ ಸರ್ಕಾರ ಉರುಳಿಸುವ ಕುತಂತ್ರ ಹೆಣೆದಿದೆ ಎಂದು ಕಿಡಿಕಾರಿದ್ದಾರೆ.
ಕಳೆದ ವರ್ಷ ಕರ್ನಾಟಕದಲ್ಲಿ ಮತ್ತು ಈ ವರ್ಷ ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಅನಧಿಕೃತವಾಗಿ ಅಧಿಕಾರ ಹಿಡಿದಿದೆ ಎಂದು ಆರೋಪಿಸಿದ ಅವರು ಅದೇ ವರ್ತನೆಯನ್ನು ರಾಜಸ್ಥಾನದಲ್ಲಿಯೂ ತೋರುತ್ತಿದೆ ಎಂದಿದ್ದಾರೆ.
ಪಕ್ಷ ಬದಲಿಸಲು ಶಾಸಕರಿಗೆ 15 ಕೋಟಿ ರೂಗಳ ಆಮಿಷವೊಡ್ಡಿದ್ದಾರೆ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿವೆ. ಒಟ್ಟಾರೆ ನಿರಂತರವಾಗಿ ಬಿಜೆಪಿ ಸರ್ಕಾರ ಉರುಳಿಸಲು ಪ್ರಯತ್ನಿಸಿತ್ತಿದ್ದು, ಕೋವಿಡ್ ಸಮಯದಲ್ಲಿ ಅಸ್ಥಿರತೆ ಉಂಟು ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
“2014 ರಲ್ಲಿ ಕೇಂದ್ರ ಬಿಜೆಪಿ ಅಧಿಕಾರ ಹಿಡಿದಾಗಿನಿಂದಲೂ ಅದರ ನಿಜ ಮುಖವನ್ನು ಬಹಿರಂಗಪಡಿಸಲಾಗಿದೆ. ಅವರು ಮೊದಲು ರಹಸ್ಯವಾಗಿ ಮಾಡಿದ್ದನ್ನು ಈಗ ಬಹಿರಂಗವಾಗಿ ಮಾಡುತ್ತಾರೆ. ಗೋವಾ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ನೀವು ಇದನ್ನು ನೋಡಿದ್ದೀರಿ” ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ನಾಚಿಕೆಯಿಲ್ಲದ ಬಿಜೆಪಿಯು ಗುಜರಾತ್‌ನಲ್ಲಿ ಏಳು ಶಾಸಕರನ್ನು ಖರೀದಿಸಿದೆ ಎಂದು ಟೀಕಿಸಿದ್ದಾರೆ.
“ಅವರು ರಾಜಸ್ಥಾನದಲ್ಲಿ ಅದೇ ಕೆಲಸವನ್ನು ಮಾಡಲು ಪ್ರಯತ್ನಿಸಿದರು. ಆದರೆ ನಾವು ಅದನ್ನು ತಡೆದು ಅವರಿಗೆ ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುವ ಪಾಠ ನೀಡಿದ್ದೇವೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ಜನರು ಎಲ್ಲವನ್ನೂ ನೋಡುತ್ತಿದ್ದಾರೆ ಮತ್ತು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಈ ದುರಹಂಕಾರವು ಕೊನೆಯಾಗಲಿದ್ದ, ಭಾರತದ ಜನರು ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕರು ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ರಾಜಸ್ಥಾನ ಪೊಲೀಸರ ಎಸ್‌ಒಜಿ (ವಿಶೇಷ ಕಾರ್ಯಾಚರಣೆ ಗುಂಪು) ಮತ್ತು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಗೆ ದೂರು ಸಲ್ಲಿಸಿರುವ ಕಾಂಗ್ರೆಸ್ ನಾಯಕ ಮಹೇಶ್ ಜೋಶಿ, ಬಿಜೆಪಿ ಭಯಭೀತರಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಬಿಜೆಪಿಯು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
200 ಸದಸ್ಯರ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಸ್ಥಾನಗಳನ್ನು ಹೊಂದಿದ್ದು, 12 ಸ್ವತಂತ್ರ ಅಭ್ಯರ್ಥಿಗಳ ಬೆಂಬಲವನ್ನು ಹೊಂದಿದೆ. ಇದಲ್ಲದೆ ಇತರ ಪಕ್ಷಗಳ ಐದು ಶಾಸಕರು ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಭಾರತದೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಶಿಕ್ಷೆ: ಭೂತಾನ್


