ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಜನವರಿ 29ರಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 2000 ಜನರು ಸಾವನ್ನಪ್ಪಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಮಂಗಳವಾರ (ಫೆ.4) ರಾಜ್ಯಸಭೆಯಲ್ಲಿ ರಾಷ್ಟ್ರಪತಿಯ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುವಾಗ ಕಾಲ್ತುಳಿತ ಅವಘಡವನ್ನು ಪ್ರಸ್ತಾಪಿಸಿದ ರಾವತ್, ಸಾವನ್ನಪ್ಪಿದವರ ಅಧಿಕೃತ ಮಾಹಿತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
“4-5 ದಿನಗಳ ಹಿಂದೆ ಕಾಲ್ತುಳಿತ ಸಂಭವಿಸಿದಾಗ, ಅದು ಕಾಲ್ತುಳಿತವಲ್ಲ ವದಂತಿ ಎಂದು ಹೇಳಲಾಗಿತ್ತು. ನಂತರ 30 ಜನರು ಸತ್ತರು ಎಂದಿದ್ದಾರೆ. ಈ ಅಂಕಿ ಅಂಶ ನಿಜವೇ? ಸಾವಿನ ಸಂಖ್ಯೆಯನ್ನು ಮುಚ್ಚಿಡಬೇಡಿ. ಒಬ್ಬ ವ್ಯಕ್ತಿ ಸತ್ತರೂ ನಾವು ಜವಾಬ್ದಾರರು. ನಾವು ನಮ್ಮ ಕಣ್ಣಾರೆ ನೋಡಿದ ಅಂಕಿ ಅಂಶಗಳ ಪ್ರಕಾರ 2,000 ಜನರು ಸತ್ತಿದ್ದಾರೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಅವಘಡ ಸಂಭವಿಸಲು ‘ಕಳಪೆ ನಿರ್ವಹಣೆ’ಯೇ ಕಾರಣ ಎಂದಿರುವ ರಾವತ್, ಕುಂಭ ಮೇಳವನ್ನು ‘ರಾಜಕೀಯ ಮಾರುಕಟ್ಟೆಯ ರಾಜಕೀಯ ಕಾರ್ಯಕ್ರಮ’ ಎಂದು ಕರೆದಿದ್ದಾರೆ.
ಬೇರೆ ದೇಶಗಳಲ್ಲಿ ಇಂತಹ ಘಟನೆ ನಡೆದಿದ್ದರೆ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹ ವ್ಯಕ್ತವಾಗುತ್ತಿತ್ತು ಎಂದು ರಾವತ್ ಹೇಳಿದ್ದಾರೆ.
ರಾವತ್ ಹೇಳಿಕೆಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಜಗದೀಪ್ ಧನ್ಕರ್ ಅವರು ” ನೀವು ಯಾವುದೇ ಅಂಕಿ ಅಂಶ ಹೇಳಿದರೂ, ಅದನ್ನು ಸಮರ್ಥಿಸಬೇಕು” ಎಂದು ರಾವತ್ ಅವರಿಗೆ ಹೇಳಿದ್ದಾರೆ. ಸಂಜೆಯೊಳಗೆ ಅಂಕಿ ಅಂಶವನ್ನು ದೃಢೀಕರಿಸುತ್ತೇನೆ ಎಂದು ರಾವತ್ ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಲ್ತುಳಿತದಲ್ಲಿ ಸಾವಿರಾರು ಸಾವುಗಳು ಸಂಭವಿಸಿವೆ ಎಂದು ಹೇಳಿದ ಬೆನ್ನಲ್ಲೇ ರಾವತ್ ಅವರು ಹೇಳಿಕೆ ನೀಡಿದ್ದಾರೆ. ಇದು ಮೇಲ್ಮನೆಯಲ್ಲಿ ಪ್ರತಿಭಟನೆಗೆ ಕಾರಣವಾಯಿತು. ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಖರ್ಗೆ ಅವರಿಗೆ ಸಭಾಧ್ಯಕ್ಷ ಸೂಚಿಸಿದ್ದರು.
ಅಮೃತಸರಕ್ಕೆ ಬಂದಿಳಿಯಲಿದೆ ದಾಖಲೆರಹಿತ ಭಾರತೀಯರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ


