| ಜಿ.ಆರ್ ವಿದ್ಯಾರಣ್ಯ |
ನಮ್ಮೆಲ್ಲರಿಗೂ ತಿಳಿದಂತೆ 2019ರ ಚುನಾವಣೆ ಚರ್ಚೆ ದೇಶಪ್ರೇಮ. ಆತಂಕವಾದ, ಮುಂತಾದವುಗಳ ಮೇಲೆಯೇ ಹೆಚ್ಚಾಗಿ ನಡೆಯಿತು. ದೇಶದ ಆರ್ಥಿಕ ಪರಿಸ್ಥಿತಿ ಅಥವಾ ನಿರುದ್ಯೋಗ ಸಮಸ್ಯೆ, ಕುಡಿಯುವ ನೀರು, ಸ್ವಚ್ಛ ಗಾಳಿ, ಪರ್ಯಾವರಣ, ರೈತ ಸಂಕಷ್ಟ, ಹಣದುಬ್ಬರ, ಬೆಲೆವಾಸಿ, ಇವುಗಳ ಮೇಲಿನ ಚರ್ಚೆಯನ್ನು ಯಾವ ರಾಜಕೀಯ ಪಕ್ಷವಾಗಲೀ, ನಾಯಕರಾಗಲೀ, ಪ್ರಜೆಗಳಾಗಲೀ ಅವಶ್ಯಕ ಎಂದು ಪರಿಗಣಿಸಲಿಲ್ಲ.
ದೇಶಪ್ರೇಮ ಮುಖ್ಯವೇನೋ ಸರಿ, ಅವಶ್ಯಕತೆ ಬಿದ್ದಲ್ಲಿ ದೇಶಕ್ಕೋಸ್ಕರ ಹೋರಾಡಲು ಅಥವಾ ಪ್ರಾಣತ್ಯಾಗಕ್ಕೂ ಸಿದ್ಧರಾಗಿರಬೇಕು, ಆದರೆ ಪ್ರಾಣತ್ಯಾಗಕ್ಕೆ ಮುಂಚೆ ದೇಶಪ್ರೇಮಿ ಜೀವಂತವಾಗಿರಬೇಕು, ಅಲ್ಲವೇ? 2017ರಲ್ಲಿ ಭಯೋತ್ಪಾದನೆಗೆ ಬಲಿಯಾದವರ ಸಂಖ್ಯೆ 766 ಅಂದರೆ ಆ ವರ್ಷ ಸತ್ತವರ ಒಟ್ಟು ಸಂಖ್ಯೆಯ 0.007%. ಆದರೆ ಆರೋಗ್ಯ ಸಂಬಂಧಿ ಕಾರಣದಿಂದ ಸತ್ತವರ ಸಂಖ್ಯೆ 66 ಲಕ್ಷ ಅಥವಾ ಒಟ್ಟು ಸತ್ತವರ ಸಂಖ್ಯೆಯ 90%. 2017ರಲ್ಲಿ ಸಮಾನಾಂತರವಾಗಿ ಪರಿಶೀಲಿಸಬಲ್ಲ ಸರಕಾರಿ ಅಂಕಿ-ಅಂಶಗಳ ಆಧಾರದ ಮೇಲೆ ಹೇಳುವುದಾದರೆ ನಮ್ಮ ರಕ್ಷಣಾ ಬಜೆಟ್ ನಮ್ಮ ಜನರ ಸ್ವಾಸ್ಥ್ಯ ಮುಂಗಡಪತ್ರದ ದುಪ್ಪಟ್ಟು.
ಸಾರ್ವಜನಿಕ ಸ್ವಾಸ್ಥ್ಯ ಮತ್ತು ಶಿಕ್ಷಣದ ಮೇಲೆ ದೇಶದ ಹೂಡುವಳಿ ಕಡಿಮೆಯಾಗುತ್ತಿದ್ದು ಇದು ನೇರವಾಗಿ ನೇರವಾಗಿ ಔದ್ಯೋಗಿಕ ಮತ್ತು ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತೀಯರ ಅತ್ತ್ಯುತ್ತಮ ಉತ್ಪನ್ನಕಾರಕ ಸಾಮರ್ಥ್ಯ ಕೇವಲ ಆರೂವರೆ ವರ್ಷ ಮಾತ್ರ ಆದರೆ ಚೀನಾ ದೇಶದ ಜನರ ಸಾಮರ್ಥ್ಯ 20 ವರ್ಷ, ಅಂದರೆ ನಮ್ಮ ಮೂರು ಪಟ್ಟು. ಬ್ರೆಜಿಲ್ ದೇಶದಲ್ಲಿ 16 ವರ್ಷ ಮತ್ತು ಶ್ರೀಲಂಕಾದಲ್ಲಿ 13 ವರ್ಷ ಎಂದರೆ ಆಶ್ಚರ್ಯವಲ್ಲವೇ? 195 ದೇಶಗಳ ಮಾನವ ಬಂಡವಾಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನ 158. ಇದನ್ನು ಸೆಪ್ಟೆಂಬರ್ 2018ರಲ್ಲಿ “ಇಂಡಿಯಾಸ್ಪೆಂಡ್” ಸಂಸ್ಥೆ ಪ್ರಕಟಿಸಿದೆ.
ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ ಭಯೋತ್ಪಾದನೆಗೆ ಸತ್ತವರ ಸಂಖ್ಯೆಗಿಂತಲೂ 8,000 ಪಟ್ಟು ಹೆಚ್ಚು
2017ರಲ್ಲಿ ಸತ್ತವರು ಒಟ್ಟು 99 ಲಕ್ಷ, ಅದರಲ್ಲಿ ಡಯಾಬಿಟೀಸ್ನಿಂದ ಸತ್ತವರು 2,54,500, ಆತ್ಮಹತ್ಯೆ ಮಾಡಿಕೊಂಡವರು 2,10,800, ಸಾಂಕ್ರಮಿಕ ರೋಗಕ್ಕೆ ತುತ್ತಾದವರು 20 ಲಕ್ಷ, ಸಾಂಕ್ರಮಿಕವಲ್ಲದ ರೋಗದಿಂದ ಸತ್ತವರು 62 ಲಕ್ಷ. ಇವೆಲ್ಲವನ್ನು ಒಟ್ಟುಗೂಡಿಸಿದಲ್ಲಿ ಆತಂಕವಾದಕ್ಕೆ ಬಲಿಯದವರ ಸಂಖ್ಯೆಯ 8,000 ಪಟ್ಟು ಜನ ಆರೋಗ್ಯ ಸಂಬಂಧಿ ಕಾರಣಕ್ಕೆ ಜೀವ ಕಳೆದು ಕೊಂಡಿದ್ದಾರೆ.
ಹಾಗಾದರೆ ನಮ್ಮ ಸರಕಾರದ ಆದ್ಯತೆ ಯಾವ ವಿಷಯಕ್ಕೆ ಇರಬೇಕು, ಚುನಾವಣೆಯ ಸಮಯದಲ್ಲಿ ಚರ್ಚೆ ಯಾವ ವಿಷಯದ ಮೇಲಿರಬೇಕು ಅಥವಾ ಈ ವಿಷಯದಲ್ಲಿ ಮಾತನಾಡುವ ಹಕ್ಕು ಜನಸಾಮಾನ್ಯರಿಗಿದೆಯೇ? ನಮ್ಮ ಮುಖ್ಯ ವಾಹಿನಿ ಮಾಧ್ಯಮ ಇಂತಹ ವಿಷಯದ ಚರ್ಚೆ ಇತ್ತೀಚೆಗೆ ಏರ್ಪಡಿಸಿರುವುದು ನಿಮಗೆ ನೆನಪಿದೆಯೇ ನೀವೇ ಯೋಚಿಸಿ.


