ಮುಗಿದು ಹೋಗುತ್ತಿರುವ 2020ನೇ ವರ್ಷ ಕರ್ನಾಟಕದ ಪಾಲಿಗೆ ಹೇಗಿತ್ತು ಎನ್ನುವ ಪ್ರಶ್ನೆಗೆ ಉತ್ತರಿಸುವಾಗ ಕರ್ನಾಟಕ ಎಂಬ ರಾಜ್ಯ ಈ ವಿಶಾಲ ವಿಶ್ವದ ಮತ್ತು ಈ ದೊಡ್ಡ ದೇಶದ ಭಾಗವಾಗಿತ್ತು ಎನ್ನುವುದನ್ನು ಗಮನಿಸಿಯೇ ಮುಂದುವರಿಯಬೇಕಾಗುತ್ತದೆ. ವಿಶ್ವ ಮತ್ತು ದೇಶವನ್ನು ಕಾಡಿದ ಸಂಕಷ್ಟ ಕರ್ನಾಟಕವನ್ನೂ ಕಾಡಿತ್ತು. ಸಂಕಷ್ಟದ ನಿಭಾವಣೆಯಲ್ಲೇ ವಿಶ್ವದ ಜತೆ ಮತ್ತು ದೇಶದ ಜತೆ ಹೆಜ್ಜೆ ಹಾಕುತ್ತಾ ಕರ್ನಾಟಕವೂ ಮುಗಿದ ವರ್ಷವನ್ನು ಬೀಳ್ಕೊಡಬೇಕಾಗಿದೆ.
ಎಲ್ಲಾ ದೇಶಗಳ ಬಹುತೇಕ ಎಲ್ಲಾ ಪ್ರದೇಶಗಳನ್ನೂ ಕಾಡಿದ ಸಂಕಷ್ಟವೊಂದಕ್ಕೆ ಒಂದೊಂದು ದೇಶವೂ, ಒಂದೊಂದು ಪ್ರದೇಶವೂ ಪ್ರತಿಕ್ರಿಯಿಸಿದ ರೀತಿ ಬೇರೆಬೇರೆಯಾಗಿತ್ತು ಎನ್ನುವುದು ಕೂಡಾ ಇಲ್ಲಿ ಅಷ್ಟೇ ಮುಖ್ಯವಾದ ವಿಚಾರ. ಯಾವ್ಯಾವ ದೇಶಗಳು, ಯಾವ್ಯಾವ ಪ್ರದೇಶಗಳು ಹೇಗೆ ಪ್ರತಿಕ್ರಿಯಿಸಿದವು ಎನ್ನುವುದು ಆಯಾ ದೇಶಗಳ ಮತ್ತು ಆಯಾ ಪ್ರದೇಶಗಳ ಅರ್ಥಾತ್ ಆಯಾ ರಾಜ್ಯಗಳ ವಿಶಿಷ್ಟತೆಯ ಬಗ್ಗೆ ಮತ್ತು ಅನನ್ಯತೆಯ ಬಗ್ಗೆ ಬೇರೆ ಕತೆಗಳನ್ನು ಹೇಳಿದವು. ಹಾಗಾದರೆ, ಕರ್ನಾಟಕದ ಕತೆ ಏನು ಎನ್ನುವುದು ಪ್ರಶ್ನೆ. ಈ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಬೇಕು ಎಂದರೆ 2020 ಕರ್ನಾಟಕ ತನ್ನನ್ನು ತಾನು ಕಳೆದುಕೊಂಡ ವರ್ಷ.
ಈ ತೀರ್ಮಾನಕ್ಕೆ ಬಂದದ್ದು ಕರ್ನಾಟಕ ಕೊರೊನಾ ಮಹಾಮಾರಿಯನ್ನು ಮತ್ತು ಅದು ಜನಜೀವನದ ಮೇಲೆ ಮಾಡಿದ ಆರ್ಥಿಕ ಪ್ರಹಾರವನ್ನು ನಿಭಾಯಿಸುವಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಲಿಲ್ಲ ಎಂಬ ಕಾರಣಕ್ಕಲ್ಲ. ಧುತ್ತನೇ ಬಂದೆರಗುವ ಸಾಂಕ್ರಾಮಿಕದಂತಹ ಸಂಕಷ್ಟಗಳನ್ನು ಒಂದು ಜಾನಾರೋಗ್ಯದ ಸಮಸ್ಯೆಯಾಗಿ ನಿಭಾಯಿಸುವಲ್ಲಿ ಹಾಗೂ ದಿಢೀರನೆ ಕುಸಿದ ಅರ್ಥವ್ಯವಸ್ಥೆಯನ್ನು ತೃಪ್ತಿಕರವಾಗಿ ನಿರ್ವಹಿಸುವಲ್ಲಿ ರಾಜ್ಯವೊಂದಕ್ಕೆ ಅದರದ್ದೇ ಆದ ಮಿತಿಗಳಿರುತ್ತವೆ. ಅದನ್ನು ಅರ್ಥಮಾಡಿಕೊಳ್ಳಬಹುದು. ಹಾಗಾದರೆ ಕರ್ನಾಟಕ ತನ್ನನ್ನು ತಾನು ಕಳೆದುಕೊಂಡದ್ದು ಎಲ್ಲಿ?
ಕೊರೊನಾ ಸಂಕಷ್ಟ ಕಾಲವು ಈ ದೇಶದಲ್ಲಿ ‘ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯುವ’ ಹೊಸ ರಾಜಕಾರಣವೊಂದನ್ನು ರಾಷ್ಟ್ರಮಟ್ಟದಲ್ಲಿ ಹುಟ್ಟುಹಾಕಿತು. ಪ್ರಸಿದ್ಧ ಅಭ್ಯುದಯ ಪತ್ರಕರ್ತ ಪಿ. ಸಾಯಿನಾಥ್ ಅವರ ಒಂದು ಒಳ್ಳೆಯ ’ಬರ ಎಂದರೆ ಎಲ್ಲರಿಗೂ ಇಷ್ಟ’ (ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್) ಎನ್ನುವ ಪುಸ್ತಕದ ಶೀರ್ಷಿಕೆಯನ್ನು ನೆನಪಿಸುವಂತೆ ಒಂದು ಭೀಕರ ಸಾಂಕ್ರಾಮಿಕ ತಂದ ಸಂಕಷ್ಟವು ಅಧಿಕಾರವಂತರಿಗೆ ಬಯಸದೇ ಬಂದ ಅವಕಾಶ-ಭಾಗ್ಯ ಎನ್ನುವ ರೀತಿಯ ರಾಜಕಾರಣವೊಂದು ದೇಶದಲ್ಲಿ ಹಬ್ಬಿತು. ಜನಜೀವನದ ದುರ್ಬರತೆಯ ದುರ್ಬಲ ಕ್ಷಣಗಳನ್ನೇ ಬಳಸಿಕೊಂಡು ಒಬ್ಬ ನಾಯಕ ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳುವುದು, ತನಗೆ ರಾಜಕೀಯವಾಗಿ ಲಾಭ ತಂದುಕೊಡುತ್ತಿರುವ ಸಿದ್ಧಾಂತವೊಂದನ್ನು ಜಾಣತನದಿಂದ ಸಂಸ್ಥಾಪಿಸಿಬಿಡುವುದು, ಯಾವುದೋ ರೀತಿಯ ಅಭಿವೃದ್ಧಿಯ ಮಾದರಿಯನ್ನು ದೇಶದ ಮೇಲೆ ಹೇರಿಬಿಡುವುದು ಈ ರಾಜಕಾರಣದ ಭಾಗ. ರಾಷ್ಟ್ರಮಟ್ಟದಲ್ಲಿ ಜರುಗಿಹೋದ ಈ ಸಾಂಕ್ರಾಮಿಕ ಕಾಲದ ರಾಜಕೀಯಕ್ಕೆ ಸಂಪೂರ್ಣ ಶರಣಾಗಿ ಕಪ್ಪ ಒಪ್ಪಿಸಿದ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಇದ್ದರೆ ಹೀಗೂ ಆಗಬಹುದು ಎಂದು ಕರ್ನಾಟಕದ ಜನರಿಗೆ ಅರ್ಥವಾಗಿ ಹೋದ ವರ್ಷ 2020.
ಕೇಂದ್ರ ಸರಕಾರದ ಮತ್ತು ಇನ್ಯಾವುದೋ ’ಕೇಂದ್ರ ಸ್ಥಾನದ’ ಅಣತಿಯಂತೆ ಕರ್ನಾಟಕ ಸಂಕಷ್ಟದ ಅವಧಿಯುದ್ಧಕ್ಕೂ ಕಾನೂನುಗಳ ಮೇಲೆ ಕಾನೂನುಗಳನ್ನು ತಂದಿತು. ಇಲ್ಲವೇ ಈಗಾಗಲೇ ಅಸ್ತಿತ್ವದಲ್ಲಿ ಇರುವಂತಹ ಕಾನೂನುಗಳನ್ನು ಬದಲಿಸಿತು. ಇಷ್ಟೊಂದು ಸಣ್ಣ ಅವಧಿಯಲ್ಲಿ ಇಷ್ಟೊಂದು ಸಂಖ್ಯೆಯ ಕಾನೂನುಗಳು ಈ ರಾಜ್ಯದಲ್ಲಿ ಸೃಷ್ಟಿಯಾದದ್ದು ಇದುವೇ ಮೊದಲಿಗಿರಬೇಕು. ಕೆಲವು ಕಾನೂನುಗಳನ್ನು ಕೇಂದ್ರದ ಅಣತಿಯಂತೆ ತರಲಾಯಿತು. ಇನ್ನು ಕೆಲವು ಕಾನೂನುಗಳನ್ನು ಅತ್ಯವಸರದಲ್ಲಿ ತರಬೇಕೆಂದು ಬಯಸಿದ ನಿಯಾಮಕ ಶಕ್ತಿ ಯಾವುದು ಎನ್ನುವುದು ಊಹೆಗೆ ಮಾತ್ರ ನಿಲುಕುವಂತದ್ದು; ಪಂಚೇಂದ್ರಿಯಗಳ ಮೂಲಕ ಪರಾಂಬರಿಸುವಂತದ್ದಲ್ಲ. ಕರ್ನಾಟಕದ ಸಾಮಾಜಿಕ-ಆರ್ಥಿಕ ಚಹರೆಯ ಮುದ್ರೆಯಂತಿದ್ದ ಭೂಸುಧಾರಣಾ ಕಾಯ್ದೆಯ ಅಕ್ಷರಶಃ ಚರಮ ಗೀತೆಗೆ ಕಳೆದ ವರ್ಷ ಸಾಕ್ಷಿಯಾಯಿತು. ಕೇಂದ್ರ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕರ್ನಾಟಕ ವಿಧೇಯತೆಯಿಂದ ಒಪ್ಪಿಕೊಂಡು ತನ್ನ ನೆಲದ ಕಾನೂನುಗಳನ್ನು ಮುರಿದುಕಟ್ಟಿತು. ಕಾರ್ಮಿಕ ಕಾನೂನುಗಳನ್ನು ಕೇಂದ್ರದ ಮರ್ಜಿಗೊಳಗಾಗಿ ದುಡಿಯುವ ವರ್ಗಕ್ಕೆ ವಿರೋಧಿಯಾಗಿ ಮರುರೂಪಿಸಿತು.
ನೆಲದ ಜತೆ ಜನರ ಸಂಬಂಧ, ಬೇಸಾಯದ ಜತೆ ಅರ್ಥವ್ಯವಸ್ಥೆಯ ಸಂಬಂಧ, ದುಡಿಯುವ ವರ್ಗಕ್ಕೆ ಮಾಲೀಕರ ಜತೆ ಇರುವ ಸಂಬಂಧ ಇತ್ಯಾದಿಗಳೆಲ್ಲ ರಾಜ್ಯದಿಂದ ರಾಜ್ಯಕ್ಕೆ ಸಾವಯವವಾಗಿ ಭಿನ್ನವಾಗಿರುತ್ತವೆ ಎನ್ನುವುದು ಸತ್ಯ. ಈ ಸತ್ಯವನ್ನು ಅರಿಯದೆ ಯಾರಿಗೋ ಆಪ್ಯಾಯಮಾನವಾದ ಯಾವುದೋ ಅಭಿವೃದ್ಧಿಯ ಮಾದರಿಯನ್ನು ರಾಜ್ಯದ ಸಾಮಾಜಿಕ ಆರ್ಥಿಕ ಅಂತರಂಗಕ್ಕೆ ಎಗ್ಗಿಲ್ಲದೆ ಬಿಟ್ಟುಕೊಟ್ಟದ್ದು 2020 ವರ್ಷ ಕಂಡ ಇನ್ನೊಂದು ದುರಂತ. ವರ್ಷದುದ್ದಕ್ಕೂ ಕರ್ನಾಟಕ ಕೇಳಿದ್ದು ಅಥವಾ ಬೇಡಿಕೊಂಡದ್ದು (ತೆರಿಗೆ ಪಾಲು, ನೆರೆ ಪರಿಹಾರ, ಜಿಎಸ್‌ಟಿ ಪರಿಹಾರ) ಏನೂ ಸಿಗಲಿಲ್ಲ. ವರ್ಷದುದ್ದಕ್ಕೂ ಕರ್ನಾಟಕ ’ಮೇಲಿನಿಂದ’ ಬಂದ ಆಜ್ಞೆಗಳೆಲ್ಲವನ್ನೂ ಬಿಂದು ವಿಸರ್ಗ ಬದಲಾವಣೆ ಇಲ್ಲದೆ ಒಪ್ಪಿ ಪಾಲಿಸಿತು.
ಪ್ರಪಂಚವೇ ಒಪ್ಪಿಕೊಂಡ ಒಂದು ಮಾದರಿ ರಾಜ್ಯದಿಂದ ಹೇಗೂ ಬಹುದಿನ ದೂರ ಉಳಿಯಲು ಸಾಧ್ಯವಿರಲಿಲ್ಲ ಎಂದು ವಾದಿಸಬಹುದು. ಅಲ್ಲೇ ಬರುವುದು ರಾಜ್ಯದ ಸ್ವಂತಿಕೆಯ ಪ್ರಶ್ನೆ. ತುರ್ತುಪರಿಸ್ಥಿತಿ ಕಾಲದ ದೇವರಾಜ ಅರಸು ಅವರ ನಡೆಗಳನ್ನು ನೆನಪಿಸಿಕೊಳ್ಳಬೇಕು. ಆಗಿನ ದೊಡ್ಡ ನಾಯಕಿಯ, ದೊಡ್ಡ ಆಣತಿಯನ್ನು ಕಾಯ-ವಾಚಾ-ಮನಸಾ ಸ್ವೀಕರಿಸಿ ಊರಿಗೆ ಬಂದ ತುರ್ತುಪರಿಸ್ಥಿತಿ ಕೇರಿಗೆ ಬಾರದೆ ಇದ್ದೀತೆ ಅಂತ ಅವರೂ ವರ್ತಿಸಿದ್ದರೆ ’ಅಂತಹಾ ತುರ್ತುಪರಿಸ್ಥಿತಿಯ ಕಾಲದಲ್ಲೂ ಕರ್ನಾಟಕ ಕರ್ನಾಟಕವೇ ಆಗಿತ್ತು’ ಅಂತ ಇಂದಿಗೂ ದೇಶ ನೆನಪಿಸಿಕೊಳ್ಳುವಂತಾಗಲು ಎಲ್ಲಿ ಸಾಧ್ಯವಾಗುತ್ತಿತ್ತು. ಕೊರೊನಾ ಕಾಲದಲ್ಲಿ ಕರ್ನಾಟಕದ ಸ್ವಂತಿಕೆಯೇ ಕಳೆದು ಹೋದದ್ದು ಈ ಅವಧಿಯಲ್ಲಿ ಕರ್ನಾಟಕ ಏನನ್ನು ಒಪ್ಪಿಕೊಂಡಿತು ಎನ್ನುವುದಕ್ಕಿಂತ ಹೆಚ್ಚಾಗಿ, ಒಪ್ಪಿಕೊಂಡದ್ದನ್ನೆಲ್ಲಾ ಯಾವ ರೀತಿಯಲ್ಲಿ ಒಪ್ಪಿಕೊಂಡುಬಿಟ್ಟಿತು ಎನ್ನುವುದರಲ್ಲಿ ಇದೆ. ‘ತಗ್ಗಿದ ತಲೆ, ಬಾಗಿದ ಬೆನ್ನು, ಮುಗಿದ ಕೈ’ – ಈ ಕರ್ನಾಟಕದ ಚಿತ್ರ 2020ರ ವರ್ಷದ ಜತೆಗೆ ಬೆಸೆದು ಹೋದಂತೆ ಭಾಸವಾಗುತ್ತಿದೆ.
ಒಂದು ವರ್ಷದಲ್ಲಿ ಒಂದು ರಾಜ್ಯದ ಆಗುಹೋಗುಗಳನ್ನು ಅವಲೋಕಿಸುವುದು ಎಂದರೆ ಕೇವಲ ಸರಕಾರದ ಕೆಲಸಗಳನ್ನಷ್ಟೇ ನೋಡುವುದಲ್ಲ. ಜನಜೀವನದ ಇತರ ಅಂಗಗಳತ್ತಲೂ ಗಮನ ಹರಿಸಬೇಕಾಗುತ್ತದೆ. ಹಾಗೆ ಗಮನ ಹರಿಸಿದಾಗ ಅನುಭವಕ್ಕೆ ಬರುವುದು ಎರಡು ರೀತಿಯ ಮೌನಗಳು. ಒಂದು ಸರಕಾರವನ್ನು ಪ್ರಶ್ನಿಸಬೇಕಾದವರು ಪ್ರಶ್ನಿಸದೆ ಶಾಮೀಲು ನೀತಿಯೊಂದನ್ನು ಒಪ್ಪಿಕೊಂಡದ್ದರಿಂದ ಆವರಿಸಿಕೊಂಡಿರುವ ಮೌನ. ಇನ್ನೊಂದು ಸರಕಾರದ ಕಿವಿ ಮುಟ್ಟುವಂತೆ ಅಳಬೇಕಾದವರಿಗೆ ಅಳುವುದಕ್ಕೂ ತ್ರಾಣವಿಲ್ಲದೆ ಹೋಗಿರುವ ಕಾರಣಕ್ಕೆ ಆವರಿಸಿಕೊಂಡಿರುವ ಮೌನ. ಈ ಎರಡು ಮೌನಗಳ ಮುಖಾಮುಖಿ 2020ರ ಹೆಗ್ಗುರುತು. ಇದು ದೇಶದ ಕತೆಯೂ ಹೌದು, ಕರ್ನಾಟಕದ ಕತೆ ಸ್ವಲ್ಪ ಹೆಚ್ಚಿನ ಮಟ್ಟಿಗೂ ಹೌದು.
ವರ್ಷ ಬರುತ್ತದೆ, ವರ್ಷ ಹೋಗುತ್ತದೆ. ಕಾಲಚಕ್ರ ಮುಂದುವರಿಯುತ್ತಲೇ ಇರುತ್ತದೆ. ಎಲ್ಲೆಡೆಯೂ ಏನೇನೂ ಆಗುತ್ತಲೇ ಇರುತ್ತದೆ. ಈ ವರ್ಷ ಕರ್ನಾಟಕದ್ದು ಅಂತ ಕರ್ನಾಟಕದಲ್ಲಿ ಆದದ್ದೇನು ಎನ್ನುವ ಪ್ರಶ್ನೆಯನ್ನು, ಇನ್ನೇನು ಸಂದುಹೋಗುವ 2020 ಉಳಿಸಿಹೋಗುತ್ತಿದೆ.

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.



ದೊಡ್ಡ ಊರುಗಳ ಸುತ್ತಾ ಇರುವ ಹಳ್ಳಿಗಳ ನೆಲಕ್ಕೆ ಸಿಕ್ಕಾಪಟ್ಟೆ ಬೆಲೆ ಬಂದಿದ್ದು, ಬೆಂಗಳೂರು, ಮಯ್ಸೂರಿನಂತ ಸುತ್ತಲ ಊರುಗಳ ಮಂದಿ ಇದ್ದಕ್ಕಿದ್ದಂತೆ, ತುಂಬಾ ಸಿರಿವಂತರಾದರೆ, ದೂರದ ಊರುಗಳ ಮಂದಿ ಮೊದಲಿನಂತೆ ಇದ್ದಾರೆ.
ಇದನ್ನು ತಡೆಯುವ ಕೆಲಸವನ್ನು ನಮ್ಮ ಆಳ್ವಿಕೆ ಮಾಡಲಿಲ್ಲ! .ಇದನ್ನು ಸರಿಮಾಡಲೇ ಬೇಕು. ರಿಯಲ್ ಎಸ್ಟೇಟ್ ಆಳ್ವಿಕೆ ಹಿಡಿತದಲ್ಲಿರಬೇಕು. ರಯ್ತರಿಗೆ ನೆಲ ಇರುವುದು ಬೆಳೆಬೆಳೆಯಲೇ ಹೊರತು, ರಿಯಲ್ ಎಸ್ಟೇಟ್ ಚಟುವಟಿಕೆಗೆ ಬಳಸುವುದಕ್ಕಲ್ಲ.