Homeಮುಖಪುಟನೊಬೆಲ್ ಶಾಂತಿ ಪ್ರಶಸ್ತಿ 2021; ಪ್ರಜಾಸತ್ತೆ ಕಾಯಲು ಸತ್ಯದ ದೊಂದಿ ಹಿಡಿದು ಹೊರಟವರು

ನೊಬೆಲ್ ಶಾಂತಿ ಪ್ರಶಸ್ತಿ 2021; ಪ್ರಜಾಸತ್ತೆ ಕಾಯಲು ಸತ್ಯದ ದೊಂದಿ ಹಿಡಿದು ಹೊರಟವರು

- Advertisement -
- Advertisement -

’ಅಪರಾಧವನ್ನು ಬಯಲು ಮಾಡುವುದನ್ನು ಅಪರಾಧವಾಗಿ ಬಿಂಬಿಸಲಾಗುತ್ತಿದೆ ಎಂದರೆ, ನಿಮ್ಮನ್ನು ಅಪರಾಧಿಗಳು ಆಳುತ್ತಿದ್ದಾರೆ ಎಂದರ್ಥ’.

ಅಮೆರಿಕದ ಸರ್ವಿಲೆನ್ಸ್ ಹಗರಣವೊಂದನ್ನು ಬಯಲಿಗೆಳೆದ ಎಡ್ವರ್ಡ್ ಸ್ನೋಡೆನ್ ಹೇಳಿದ ಮಾತಿದು. ಅಮೆರಿಕ ಪ್ರಜೆಗಳ ಖಾಸಗಿತನವನ್ನು ಕಸಿದುಕೊಳ್ಳುವ, ಅಮೆರಿಕದ ಸರ್ಕಾರದ ಸಂಚನ್ನು ಈತ ಬಯಲುಮಾಡಿದ್ದ. ಆದರೆ ದೇಶದ ಗೌಪ್ಯ ಮಾಹಿತಿ ಬಯಲು ಮಾಡಿದ್ದ ಆರೋಪದ ಮೇಲೆ ಈಗ ದೇಶದ್ರೋಹಿಯಾಗಿದ್ದಾನೆ.

ದುರಿತ ಕಾಲದಲ್ಲಿ ಸತ್ಯ ಹೇಳುವುದು ಸಾಮಾನ್ಯವೇನಲ್ಲ. ಕಳೆದೊಂದು ದಶಕದಿಂದ ಹೀಗೆ ಸತ್ಯವನ್ನು ಹೇಳುವ, ವಾಸ್ತವಕ್ಕೆ ಕನ್ನಡಿ ಹಿಡಿಯುವ ವೃತ್ತಿಯಲ್ಲಿರುವವರು ಎದುರಿಸುತ್ತಿರುವ ಅಪಾಯಗಳೂ ಕಡಿಮೆಯೇನಿಲ್ಲ.

ಪತ್ರಿಕೋದ್ಯೋಗವನ್ನು ಅಥವಾ ಮಾಧ್ಯಮವನ್ನು ಪ್ರಜಾಪ್ರಭುತ್ವದಲ್ಲಿ ನಾಲ್ಕನೆಯ ಸ್ತಂಭವೆಂದು ಗುರುತಿಸುತ್ತೇವೆ. ರಾಜ್ಯಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಪ್ರತಿಯೊಬ್ಬ ನಾಗರಿಕನ ಕಲ್ಯಾಣಕ್ಕಾಗಿ ದುಡಿಯುತ್ತವೆ. ಈ ಸಂಸ್ಥೆಗಳಲ್ಲಿ ಯಾವುದೇ ಲೋಪವಾದಲ್ಲಿ ಅದನ್ನು ಎತ್ತಿ ತೋರಿಸುವ, ಕೆಲಸವನ್ನು ನಾಲ್ಕನೆಯ ಅಂಗ ಮಾಡುತ್ತದೆ.

ಆದರೆ ಜಗತ್ತಿನಲ್ಲಿ ಬಂಡವಾಳಶಾಹಿ ಪರವಾದ ನಿರಂಕುಶ ಆಡಳಿತ ನಿಧಾನವಾಗಿ ತಲೆ ಎತ್ತಿ ಪ್ರಜಾಪ್ರಭುತ್ವ ಕಲ್ಪನೆಯೇ ಛಿದ್ರವಾಗುವಂತಾಗಿದೆ. ಇದನ್ನು ಸಾಧ್ಯವಾಗಿಸುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಮುಕ್ತ ಅಭಿವ್ಯಕ್ತಿ ಇಲ್ಲದೆ ಪ್ರಜಾಪ್ರಭುತ್ವ ಬದುಕುಳಿಯುವುದಿಲ್ಲ. ಅಂತಹ ಅಭಿವ್ಯಕ್ತಿಗೆ ಅವಕಾಶ ಒದಗಿಸುವುದು ಮಾಧ್ಯಮ. ಅದನ್ನು ಹಣ, ಅಧಿಕಾರದ ಮೂಲಕ ತಮ್ಮದಾಗಿಸಿಕೊಂಡ ಎಲ್ಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಉದ್ದೇಶ ಈಡೇರಿಸಿಕೊಳ್ಳುವ ಕಥನಗಳನ್ನು ಕಟ್ಟುವುದಕ್ಕೆ ಬಳಿಸಿಕೊಂಡರು.

ಜಗತ್ತಿನ ಹಲವು ದೇಶಗಳಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಭಾರತದ ವಿಷಯವನ್ನೇ ನೋಡೋಣ. ಪ್ರಸ್ತುತ ಸಾಲಿನ ವಿಶ್ವ ಮಾಧ್ಯಮ ಸ್ವಾತಂತ್ರ್ಯದ ಸೂಚ್ಯಂಕ ಹೊರಬಿತ್ತು. 180 ದೇಶಗಳು ಈ ಪಟ್ಟಿಯಲ್ಲಿವೆ. ಇದರಲ್ಲಿ ಭಾರತದ ಸ್ಥಾನವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. 142! ಕಳೆದ ಏಳು ವರ್ಷಗಳಲ್ಲಿ ಪತ್ರಕರ್ತರ ಕೊಲೆ, ಅವರ ಮೇಲೆ ಹಲ್ಲೆ, ಬಂಧನದಂತಹ ನೂರಾರು ಪ್ರಕರಣಗಳು ಕಣ್ಣ ಮುಂದಿವೆ.

PC : CBS News (ಮಾರಿಯಾ ರೆಸ್ಸಾ)

ಇತ್ತೀಚೆಗೆ ರೈತರ ಹೋರಾಟವನ್ನು ವರದಿ ಮಾಡಿದ 8 ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಹಾತ್ರಸ್ ಪ್ರಕರಣ ವರದಿ ಮಾಡಲು ಹೋದ ರಶಿದ್ ಕಪ್ಪನ್ ಸೆರೆಯಲ್ಲಿದ್ದಾರೆ. ಮಹಿಳಾ ಪತ್ರಕರ್ತರಾದ ನೇಹಾ ದೀಕ್ಷಿತ್, ರಾಣಾ ಅಯ್ಯೂಬ್, ರೋಹಿಣಿ ಸಿಂಗ್‌ನಂತಹವರು ಆನ್‌ಲೈನ್‌ನಲ್ಲಿ ಟ್ರಾಲ್‌ಗೆ ಒಳಗಾಗುವುದಷ್ಟೇ ಅಲ್ಲ, ಅತ್ಯಾಚಾರ, ಕೊಲೆ ಬೆದರಿಕೆಯನ್ನು ಎದುರಿಸಿದ್ದಾರೆ. 2020ರಲ್ಲಿ 67 ಪತ್ರಕರ್ತರ ಮೇಲೆ ದೈಹಿಕ ಹಲ್ಲೆಯಾಗಿದೆ.

ಇನ್ನೊಂದೆಡೆ ಸಾಂಪ್ರದಾಯಿಕ ಮಾಧ್ಯಮಗಳು, ಸರ್ಕಾರ ಮತ್ತು ಬಂಡವಾಳಶಾಹಿಗಳ ತುತ್ತೂರಿಗಳಾಗಿ, ನಾಗರಿಕನನ್ನು ಸದಾ ಗೊಂದಲದಲ್ಲಿ, ಆತಂಕದಲ್ಲಿ ಇಡುವ ಸಾಧನಗಳಾಗಿ ಬಳಕೆಯಾಗುತ್ತಿವೆ. ಸತ್ಯವನ್ನು ಮರೆಮಾಚಿ, ಸುಳ್ಳುಗಳನ್ನು ಬಿತ್ತುವ ಈ ಮಾಧ್ಯಮಗಳು, ಪ್ರಜಾಪ್ರಭುತ್ವಕ್ಕೆ ಮಾಡಿರುವ ಘಾಸಿ, ಸಮಾಜದ ಇನ್ನಾವುದೇ ಶಕ್ತಿಯೂ ಮಾಡಿಲ್ಲ ಎಂಬುದನ್ನೂ ಯಾರೂ ಅಲ್ಲಗಳೆಯಲಿಕ್ಕಿಲ್ಲ.

ರಷ್ಯಾ, ಚೀನಾ, ಪಾಕಿಸ್ತಾನ, ಬ್ರೆಜಿಲ್, ಮೆಕ್ಸಿಕೋ ಹೀಗೆ ಹತ್ತಾರು ದೇಶಗಳಲ್ಲಿ ಮಾಧ್ಯಮ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ತೀವ್ರವಾಗಿ ಹೋರಾಡುತ್ತಿವೆ. ಈ ದೇಶಗಳಲ್ಲೆಲ್ಲಾ ಮಾಧ್ಯಮದ ಸ್ವಾತಂತ್ರ್ಯವನ್ನು ಹರಣ ಮಾಡಿರುವ ಬಗೆಯಾದರೂ ಹೇಗೆ? ಹಿಂದೆ ನೇರವಾಗಿ ಸೆನ್ಸಾರ್‌ಶಿಪ್ ಮೂಲಕ ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿತ್ತು. ಆದರೆ ತಂತ್ರಜ್ಞಾನ ತೆರೆದಿಟ್ಟ ಅವಕಾಶಗಳು, ನಿರಂಕುಶ ಶಕ್ತಿಗಳಿಗೆ ಮಾಧ್ಯಮವನ್ನು ಒಡೆದುಹಾಕುವ ಅಸ್ತ್ರಗಳನ್ನು ಕೊಟ್ಟವು. ಮಾಧ್ಯಮಗಳಿಗಿಂತ ವೇಗವಾಗಿ, ರಂಜಕವಾಗಿ, ವೈವಿಧ್ಯಮಯವಾಗಿ ಸುಳ್ಳು, ಅರೆ ವಾಸ್ತವಗಳನ್ನು ತಂತ್ರಜ್ಞಾನ ಒದಗಿಸಿದ ಎಲ್ಲ ವೇದಿಕೆಗಳ ಮೂಲಕ ಪ್ರವಾಹದೋಪಾದಿಯಲ್ಲಿ ಹರಿಯ ಬಿಡುವ ತಂತ್ರವನ್ನು ಅನುಸರಿಸುತ್ತಾ ಬರಲಾಗಿದೆ. ಇದು ಸೃಷ್ಟಿಸಿರುವ ಅಪಾಯವೇನು ಎಂಬುದನ್ನು ಭಾರತ, ಅಮೆರಿಕ ಸೇರಿದಂತೆ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಅರ್ಥ ಮಾಡಿಕೊಳ್ಳುವ ಸಾಲಿನಲ್ಲಿವೆ.

ಮಾಧ್ಯಮ ತನ್ನತನವನ್ನು ಉಳಿಸಿಕೊಳ್ಳುವುದಕ್ಕೆ ಈ ಸುಳ್ಳುಗಳ ವಿರುದ್ಧ ಹೋರಾಡುವುದೇ ದೊಡ್ಡ ಸವಾಲಾಗಿದೆ. ಸೆನ್ಸಾರ್‌ಶಿಪ್ ಮೀರಿ ಸತ್ಯ ಹೇಳುವ ಬದ್ಧತೆ ಒಂದು ರೀತಿಯದ್ದು. ಆದರೆ ಸುಳ್ಳಿನ ಸಾಗರದಲ್ಲಿ ಸತ್ಯವನ್ನು ಹೇಳುವುದು ಮತ್ತು ಅದನ್ನು ಮನವರಿಕೆ ಮಾಡುವುದು ನಿಜಕ್ಕೂ ಅಸಾಧ್ಯವಾದ ಶ್ರಮವನ್ನು ಬೇಡುತ್ತದೆ. ಇಂತಹ ದುಸ್ಥಿತಿಯ ಕಾಲದಲ್ಲಿ ಸತ್ಯ ಹೇಳುವುದು ಮತ್ತು ಅಧಿಕಾರದ ಬುಡವನ್ನೇ ಅಲುಗಾಡಿಸುವಂತಹ ಕೆಲಸ ಮಾಡುವುದು ಸಾಮಾನ್ಯವೇನಲ್ಲ.

ಈ ಬಾರಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಫಿಲಿಪ್ಪೀನ್ಸ್‌ನ ರ್‍ಯಾಪ್ಲರ್ ಎಂಬ ಮಾಧ್ಯಮ ಸಂಸ್ಥೆ ಕಟ್ಟಿದ ತನಿಖಾ ಪತ್ರಕರ್ತೆ ಮಾರಿಯಾ ರೆಸ್ಸಾ ಮತ್ತು ರಷ್ಯಾದಲ್ಲಿ ನೊವಾಯಾ ಗೆಝೆಟಾ ಎಂಬ ಸ್ವತಂತ್ರ ಪತ್ರಿಕೆಯನ್ನು ನಡೆಸುತ್ತಿರುವ ಡಿಮಿಟ್ರಿ ಮುರಾಟೋಫ್ ಅಂತಹ ಅಸಾಮಾನ್ಯ ಕೆಲಸ ಮಾಡಿರುವ ಪತ್ರಕರ್ತರು. ನೊಬೆಲ್ ಇತಿಹಾಸದಲ್ಲಿ ಎರಡನೆಯ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗುತ್ತಿರುವ ಪತ್ರಕರ್ತರು ಇವರು. ಜಗತ್ತಿನ ಶಾಂತಿ ಸ್ಥಾಪನೆಯ ಕೆಲಸದಲ್ಲಿ ತಮ್ಮ ವೃತ್ತಿಯ ಮೂಲಕ ಅಪಾರ ಸೇವೆ ಮಾಡಿದ್ದನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಗುರುತಿಸಿ ನೊಬೆಲ್ ಪುರಸ್ಕಾರದ ಮೂಲಕ ಗೌರವಿಸಿದೆ.

ತನ್ನ ದೇಶದಲ್ಲಿರುವ ನಿರಂಕುಶ ಅಧಿಕಾರದಿಂದ ಹೆಚ್ಚುತ್ತಿರುವ ಹಿಂಸೆ, ಅಧಿಕಾರದ ದುರುಪಯೋಗವನ್ನು ಬಯಲಿಗೆಳೆಯುವುದು ಮತ್ತು ನಿರಂಕುಶ ಅಧಿಕಾರ ಬಲಗೊಳ್ಳುತ್ತಿರುವುದನ್ನು ತೀವ್ರವಾಗಿ ಬಯಲು ಮಾಡುವ ಕೆಲಸವನ್ನು ರೆಸ್ಸಾ ಅವರ ಮಾಧ್ಯಮ ಸಂಸ್ಥೆ ಮಾಡಿದೆ.

ಅತ್ಯಂತ ಸವಾಲಿನ, ರಾಜಕೀಯ ಒತ್ತಡಗಳ ನಡುವೆಯೂ ದಶಕಗಳ ಕಾಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವುದಕ್ಕೆ ಮುರಟೋಫ್ ಅವರ ಪತ್ರಿಕೆ ಹೋರಾಡುತ್ತಾ ಬಂದಿದೆ. ಚೆಚೆನ್ಯಾದಲ್ಲಿ ರಷ್ಯಾದ ಯುದ್ಧ ಮಾಡಿದ ಅನಾಹುತಗಳನ್ನು ಬಯಲು ಮಾಡಿದ ಹೆಗ್ಗಳಿಕೆ ಈ ಪತ್ರಿಕೆಯದ್ದು. ಹಣ ಮತ್ತು ಅಧಿಕಾರದ ಶಕ್ತಿಗಳು ಸುಳ್ಳಿನ ಕತ್ತಲನು ಸೃಷ್ಟಿಸುತ್ತಿರುವಾಗ ಸತ್ಯದ ದೊಂದಿ ಹಿಡಿದು ಹೊರಟ ಈ ಇಬ್ಬರು ಪತ್ರಕರ್ತರು ಅಧಿಕಾರವನ್ನು ನಿರ್ಭೀತಿಯಿಂದ ಪ್ರಶ್ನೆ ಮಾಡುತ್ತಾ, ಸತ್ಯವನ್ನು ದಾಖಲಿಸುತ್ತಾ ಬಂದಿದ್ದಾರೆ. ಪತ್ರಿಕೋದ್ಯೋಗದ ಮೂಲ ತತ್ವಗಳಿಗೆ ಬದ್ಧವಾಗಿದ್ದು, ಅಧಿಕಾರ ಹಿಡಿದೇ ಇರಬೇಕೆನ್ನುವ ದುಷ್ಟ ಶಕ್ತಿಗಳ ದುರುದ್ದೇಶಗಳನ್ನು ಬಯಲು ಮಾಡಿ ಶಾಂತಿ, ಸಹಬಾಳ್ವೆಯ ಅಗತ್ಯವನ್ನು ಈ ಪತ್ರಕರ್ತರು ಜಗತ್ತಿನ ಮುಂದಿಡುತ್ತಾರೆ ಎಂದು ಈ ಇಬ್ಬರೂ ಪತ್ರಕರ್ತರು ಹೇಳಿದ್ದಾರೆ.

ಐವತ್ತೆಂಟು ವರ್ಷದ ಮಾರಿಯಾ ರೆಸ್ಸಾ 2012ರಲ್ಲಿ ರ್‍ಯಾಪ್ಲರ್ ಸಂಸ್ಥೆ ಆರಂಭಿಸಿದರು. ಈ ಸುದ್ದಿ ತಾಣಕ್ಕೆ ಫೇಸ್‌ಬುಕ್‌ನಲ್ಲಿ 45 ಲಕ್ಷ ಫಾಲೋವರ್‌ಗಳಿದ್ದಾರೆ. ತನ್ನ ತೀಕ್ಷ್ಣ ವಿಶ್ಲೇಷಣೆ ಮತ್ತು ಪರಿಣಾಮಕಾರಿಯಾದ ತನಿಖಾ ವರದಿಗಳ ಮೂಲಕ ಅತ್ಯಂತ ಜನಪ್ರಿಯವೂ ಪ್ರಭಾವಿಯೂ ಆಗಿ ಇದು ಬೆಳೆದು ನಿಂತಿದೆ. ಫಿಲಿಪ್ಪೀನ್ಸ್‌ನ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟೆ ಮತ್ತು ಆತನ ನೀತಿಗಳನ್ನು ತೀವ್ರವಾಗಿ ಟೀಕಿಸುವ ಕೆಲವೇ ಕೆಲವು ಮಾಧ್ಯಮ ಸಂಸ್ಥೆಗಳಲ್ಲಿ ರ್‍ಯಾಪ್ಲರ್ ಕೂಡ ಒಂದು.

ರೊಡ್ರಿಗೊನ ಮಾದಕ ವಸ್ತುಗಳ ಮೇಲಿನ ಸಮರ, ಸ್ತ್ರೀದ್ವೇಷ, ಮಾನವ ಹಕ್ಕುಗಳ ಉಲ್ಲಂಘನೆ, ಹಾಗೂ ಭ್ರಷ್ಟಾಚಾರ ಕುರಿತು ಹಲವು ತನಿಖಾ ವರದಿಗಳನ್ನು ರ್‍ಯಾಪ್ಲರ್ ಪ್ರಕಟಿಸಿದೆ. ಸ್ವತಃ ರೆಸ್ಸಾ ಸಾಮಾಜಿಕ ಜಾಲತಾಣಗಳ ಮೂಲಕ ಫಿಲಿಪ್ಪೀನ್ಸ್ ಸರ್ಕಾರ ಹೇಗೆ ಪ್ರೊಪಗಂಡವನ್ನು ಹರಡುತ್ತಿದೆ ಎಂಬುದನ್ನು ವರದಿ ಮಾಡಿದ್ದಾರೆ. ಅಧಿಕಾರವನ್ನು ನಿರ್ಭೀತಿಯಿಂದ ಪ್ರಶ್ನಿಸಿದ ಕಾರಣಕ್ಕೆ ರೆಸ್ಸಾ ಹಲವಾರು ಕಾನೂನು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಎಲ್ಲವೂ ರಾಜಕೀಯ ಪ್ರೇರಿತ ಪ್ರಕರಣಗಳು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ನೀನು ಪತ್ರಕರ್ತೆಯಾದ ಮಾತ್ರಕ್ಕೆ, ನೀನು ಹತ್ಯೆಯಾಗುವುದಿಲ್ಲ ಎಂದೇನು ಇಲ್ಲ ಎಂಬ ನೇರ ಬೆದರಿಕೆಯನ್ನು ಎದುರಿಸಿದ ರೆಸ್ಸಾ, ಒಂದಿಷ್ಟೂ ಕುಂದದೆ ಸತ್ಯ ದಾಖಲಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ನೊಬೆಲ್ ಪುರಸ್ಕಾರ ಘೋಷಣೆಯಾದ ಬಳಿಕ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ ಈ ಮಾತುಗಳು ನಿಜಕ್ಕೂ ಎಲ್ಲ ಪತ್ರಕರ್ತರು ನೆನಪಿಟ್ಟುಕೊಳ್ಳಬೇಕಾದ್ದು: “ನೊಬೆಲ್ ಸಮಿತಿ ಏನನ್ನು ಎತ್ತಿ ಹಿಡಿದಿದೆ ಎಂದರೆ, ವಾಸ್ತವಾಂಶಗಳಿಲ್ಲದೆ, ಸತ್ಯವನ್ನು ಕಂಡುಕೊಳ್ಳಲು ಆಗುವುದಿಲ್ಲ. ಸತ್ಯವಿಲ್ಲದೆ, ವಿಶ್ವಾಸ ಸಾಧ್ಯವಿಲ್ಲ. ಇವು ಯಾವೂ ಇಲ್ಲದೆ ಪ್ರಜಾಪ್ರಭುತ್ವ ನಡೆಯುವುದಿಲ್ಲ”.

ಡಿಮಿಟ್ರಿ ಮುರಾಟೋಫ್

ರೆಸ್ಸಾ ತಮ್ಮ ತನಿಖಾ ಪತ್ರಿಕೋದ್ಯಮದ ಅನುಭವಗಳನ್ನು ಪುಸ್ತಕ ರೂಪದಲ್ಲೂ ದಾಖಲಿಸಿದ್ದಾರೆ. ಸೀಡ್ಸ್ ಆಫ್ ಟೆರರ್: ಆನ್ ಐವಿಟ್‌ನೆಸ್ ಅಕೌಂಟ್ ಆಫ್ ಅಲ್‌ಖೈದಾಸ್ ನ್ಯೂಯೆಸ್ಟ್ ಸೆಂಟರ್, ಫ್ರಮ್ ಬಿನ್ ಲಾಡೆನ್ ಟು ಫೇಸ್‌ಬುಕ್ ಅವರ ಪ್ರಮುಖ ಕೃತಿಗಳು.

ರೆಸ್ಸಾ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿರುವ ಡಿಮಿಟ್ರಿ ಸಾಮಾನ್ಯದವರಲ್ಲ. 59 ವರ್ಷದ ಡಿಮಿಟ್ರಿ 1993ರಲ್ಲಿ ನೊವಾಯಾ ಗೆಝೆಟಾ ಆರಂಭಿಸಿದರು. ರಷ್ಯಾದಂತಹ ದೈತ್ಯ ರಾಷ್ಟ್ರದಲ್ಲಿ, ಸತತ ಅಧಿಕಾರದಲ್ಲಿ ಉಳಿದಿರುವ ಪುಟಿನ್ ಎದುರು ಅರಗಿಸಿಕೊಳ್ಳಲಾಗದ ಸತ್ಯಗಳನ್ನು ಅನಾವರಣ ಮಾಡುತ್ತಿರುವ ಡಿಮಿಟ್ರಿ ತಮ್ಮ ನೊವಾಯಾ ಗೆಝೆಟಾ ಮೂಲಕ ಸತ್ಯ, ನ್ಯಾಯ, ಪ್ರಜಾಪ್ರಭುತ್ವದ ಆಶಯಗಳಿಗೆ ಶ್ರಮಿಸುತ್ತಿದ್ದಾರೆ. ನೊವಾಯಾ ಗೆಜೆಟಾ, ಇಡೀ ರಷ್ಯಾದಲ್ಲಿ ತನ್ನ ಪ್ರಭಾವದ ಛಾಪು ಒತ್ತಿರುವ ಏಕೈಕ ಪತ್ರಿಕೆ ಎನಿಸಿಕೊಂಡಿದೆ.

ಚೆಚೆನ್ಯಾದಲ್ಲಿ ರಷ್ಯಾದ ಸೇನೆ ಮಾಡಿದ ಅನ್ಯಾಯಗಳನ್ನು, ಕ್ರೌರ್ಯ ಬಯಲು ಮಾಡಿದ ನೊವಾಯಾ ಗೆಝೆಟಾ ತನ್ನ ಆರು ಸಹೋದ್ಯೋಗಿಗಳನ್ನು ಕಳೆದುಕೊಂಡಿತು. ಪುಟಿನ್ ದುರಾಡಳಿತ, ಅಲ್ಲಿನ ಭ್ರಷ್ಟಾಚಾರವನ್ನು ಸತತವಾಗಿ ಬಯಲು ಮಾಡುತ್ತಾ ಬಂದಿರುವ ಡಿಮಿಟ್ರಿ ಅವರ ಪತ್ರಿಕೆ ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುವುದಕ್ಕೆ ಬದ್ಧತೆಯೊಂದಿಗೆ ಹೋರಾಡುತ್ತಿದೆ.

ನೊಬೆಲ್ ಪ್ರಶಸ್ತಿಗೆ ಪ್ರತಿಕ್ರಿಯಿಸಿದ ಡಿಮಿಟ್ರಿ “ರಷ್ಯಾದ ಪತ್ರಿಕೋದ್ಯಮ ಎದುರಿಸುತ್ತಿರುವ ದಬ್ಬಾಳಿಕೆಗೆ ಪ್ರತಿರೋಧವನ್ನು ಕಟ್ಟುವುದಕ್ಕೆ ಈ ಪ್ರಶಸ್ತಿಯನ್ನು ಬಳಸುತ್ತೇವೆ” ಎಂದಿದ್ದಾರೆ. “ಏಜೆಂಟರು ಎಂದು ಹಣೆಪಟ್ಟಿ ಅಂಟಿಸಿಕೊಂಡ, ಆಧಾರವಿಲ್ಲದೆ ಶಿಕ್ಷೆಗೆ ಗುರಿಯಾದ ಮತ್ತು ದೇಶ ತೊರೆಯಬೇಕಾದ ಪರಿಸ್ಥಿತಿ ಎದುರಿಸಿದ
ಅಸಹಾಯಕ ಜನರಿಗೆ ನೆರವಾಗಲು ಪ್ರಯತ್ನಿಸುತ್ತೇವೆ” ಎಂದೂ ಅವರು ಹೇಳಿದ್ದಾರೆ.

ತನ್ನನ್ನು ಮಾರಿಕೊಂಡು ಅಧಿಕಾರ ಕೈಗೊಂಬೆಯಾಗಿರುವ, ಕೊಲ್ಲುವ, ಒಡೆಯುವ ಅಸ್ತ್ರವಾಗಿರುವ ಮಾಧ್ಯಮ ನಿಜವಾಗಿಯೂ ಮಾಡಬೇಕಾದ ಕೆಲಸವೇನು ಎಂಬುದನ್ನು ಮಾರಿಯಾ ರೆಸ್ಸಾ ಮತ್ತು ಡಿಮಿಟ್ರಿ ಮುರಟೋಫ್ ಅವರು ನೆನಪಿಸಿದ್ದಾರೆ. ಸೀಮಿತ ಸಾಧ್ಯತೆಗಳ ನಡುವೆಯೂ ತನ್ನ ನೆಲದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯನ್ನು ಪ್ರಶ್ನಿಸುತ್ತಾ, ಜನರಿಗೆ ಸತ್ಯವನ್ನು ಅರ್ಥ ಮಾಡಿಸುವ ಕೆಲಸ ಜಗತ್ತಿನ ಎಲ್ಲ ಪಕ್ಷಪಾತಿ ಮತ್ತು ಆತ್ಮವಂಚಕ ಪತ್ರಕರ್ತರನ್ನು ಬಡಿದೆಬ್ಬಿಸಬೇಕು.


ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ-2021 ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...