ಡಿಸೆಂಬರ್ 9 ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿ ಸುಮಾರು 40 ಗಂಡಸರ ಗುಂಪೊಂದು ಮನೆಗೆ ನುಗ್ಗಿ 24 ವರ್ಷದ ಯುವತಿಯನ್ನು ಅಪಹರಿಸಿದ ನಂತರ 32 ಜನರನ್ನು ಬಂಧಿಸಲಾಗಿದೆ. ಆರು ಗಂಟೆಯೊಳಗೆ ಯುವತಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಪದವೀಧರ ಯುವತಿಯು ಅಂದು ನಿಶ್ಚಿತಾರ್ಥ ಮಾಡಿಕೊಳ್ಳಬೇಕಿತ್ತು. ನವೀನ್ ರೆಡ್ಡಿ ಎಂಬ ವ್ಯಕ್ತಿ ಗುಂಪೊಂದನ್ನು ಕಟ್ಟಿಕೊಂಡು ಬಂದು ಯುವತಿಯನ್ನು ಅಪಹರಿಸಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ತನ್ನನ್ನು ಮದುವೆಯಾಗುವಂತೆ ಯುವತಿಗೆ ನವೀನ್ ರೆಡ್ಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಕಿಡಿಗೇಡಿಗಳ ಗುಂಪು ಕಾರನ್ನು ಧ್ವಂಸಗೊಳಿಸುತ್ತಿರುವುದು, ಒಬ್ಬ ವ್ಯಕ್ತಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವುದು ಮತ್ತು ಮಹಿಳೆಯೊಬ್ಬರು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ದೊಣ್ಣೆಗಳಿಂದ ಹೊಡೆಯುವುದು ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ರಾಚಕೊಂಡ ಪೊಲೀಸರು ಇದುವರೆಗೆ 32 ಜನರನ್ನು ಬಂಧಿಸಿದ್ದು, ಅಪರಾಧಕ್ಕೆ ಬಳಸಿದ್ದ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಯಾರನ್ನೂ ಸುಮ್ಮನೇ ಬಿಡಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆ), 148 (ಮಾರಕ ಆಯುಧದಿಂದ ಶಸ್ತ್ರಸಜ್ಜಿತ), 307 (ಕೊಲೆಗೆ ಯತ್ನ), 324 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ನವೀನ್ ರೆಡ್ಡಿ ಮತ್ತು ಯುವತಿಯು ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಆದರೆ ಮದುವೆಯ ಪ್ರಸ್ತಾಪವನ್ನು ಯುವತಿ ತಿರಸ್ಕರಿಸಿದ್ದಳು. ಬಳಿಕ ಆತ ಸಾಮಾಜಿಕ ಮಾಧ್ಯಮಗಳ ಮೂಲಕ ಕಿರುಕುಳ ನೀಡಲು ಪ್ರಾರಂಭಿಸಿದ್ದನು. ಆತನ ವಿರುದ್ಧ ಪೊಲೀಸರಿಗೆ ಯುವತಿ ದೂರು ನೀಡಿದ್ದಳು.
ಟೀ ಅಂಗಡಿಯನ್ನು ನಡೆಸುತ್ತಿರುವ ನವೀನ್ ರೆಡ್ಡಿ, ಯುವತಿಯ ನಿಶ್ಚಿತಾರ್ಥದಂದು ತನ್ನ ಕೆಲಸಗಾರರೊಂದಿಗೆ ಆಕೆಯ ಮನೆಗೆ ನುಗ್ಗಿ ಅಪಹರಿಸಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ನವೀನ್ ರೆಡ್ಡಿ ಪೊಲೀಸರಿಗೆ ಸಿಕ್ಕದೆ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.


