ಕೊರೊನಾ ಮತ್ತು ಎರಡು ತಿಂಗಳ ಲಾಕ್‌ಡೌನ್ ಮಧ್ಯೆ 35% ನಷ್ಟು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮ ಗಳು (ಎಂಎಸ್‌ಎಂಇ) ಹಾಗೂ 37% ಸ್ವಯಂ ಉದ್ಯೋಗಗಳು ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಮುಂದಾಗಿವೆ ಎಂದು ಅಖಿಲ ಭಾರತ ತಯಾರಕರ ಸಂಘ (ಎಐಎಂಒ) ಸಮೀಕ್ಷೆ ತಿಳಿಸಿದೆ.
ಮೇ 24 ಮತ್ತು ಮೇ 30 ರ ನಡುವೆ ಆನ್‌ಲೈನ್‌ನಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ ಒಟ್ಟು 46,425 ಸ್ವಉದ್ಯೋಗಿಗಳು, ಎಂಎಸ್‌ಎಂಇ ಮಾಲೀಕರು, ಕಾರ್ಪೊರೇಟ್ ಉದ್ಯೋಗದಾತರು ಹಾಗೂ ಉದ್ಯೋಗಿಗಳು ಭಾಗವಹಿಸಿದ್ದರು. ವಿಶೇಷವೆಂದರೆ, ಕೇಂದ್ರ ಸರ್ಕಾರವು ‘ಆತ್ಮನಿರ್ಭರ ಭಾರತ್’ ಪ್ಯಾಕೇಜ್ ಎಂಬ 20 ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜ್ ಘೋಷಿಸಿದ ನಂತರ ಈ ಸಮೀಕ್ಷೆಯನ್ನು ನಡೆಸಲಾಗಿದೆ.
“ವ್ಯವಹಾರವನ್ನು ಮುಂದುವರೆಸುವ ಅನಿಶ್ಚಿತತೆಯು ಎಂಎಸ್ಎಂಇ ವಿಭಾಗದಲ್ಲಿ ಸುಮಾರು 11% ಇದ್ದರೆ ಸ್ವಯಂ ಉದ್ಯೋಗ ವಿಭಾಗದಲ್ಲಿ ಸುಮಾರು 17% ಆಗಿದೆ. ಅವರು ಇನ್ನೂ ಚೇತರಿಸಿಕೊಳ್ಳಲು ಅವಕಾಶವಿದೆ” ಎಂದು ಸಮೀಕ್ಷೆ ತಿಳಿಸಿದೆ.
ಮೇ 13 ರಂದು ಹಣಕಾಸು ಪ್ಯಾಕೇಜ್ ಘೋಷಿಸುವಾಗ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಮರು ವರ್ಗೀಕರಿಸಲು ಎಂಎಸ್‌ಎಂಇಗಳ ವ್ಯಾಖ್ಯಾನವನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದರು. ಪ್ಯಾಕೇಜ್ ಅಡಿಯಲ್ಲಿ ಸುಮಾರು 3.5 ಲಕ್ಷ ಕೋಟಿ ರೂ.ಗಳನ್ನು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವಾಗಿ ಎಂಎಸ್‌ಎಂಇ ವಲಯಕ್ಕೆ ವಿಸ್ತರಿಸಲಾಯಿತು.
ಸಮೀಕ್ಷೆಯ ಇತರ ಸಂಶೋಧನೆಗಳ ಪೈಕಿ, 32% ಎಂಎಸ್‌ಎಂಇಗಳು ಮತ್ತು 26% ಕಾರ್ಪೊರೇಟ್‌ಗಳು ಕೊರೊನಾ ಪ್ರಭಾವದಿಂದ ಚೇತರಿಸಿಕೊಳ್ಳಲು ಆರು ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ, 46% ಕಾರ್ಪೊರೇಟ್‌ಗಳು ಮತ್ತು 27% ಸ್ವಯಂ ಉದ್ಯೋಗಿಗಳು ಮೂರು ತಿಂಗಳೊಳಗೆ ಚೇತರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಸಮೀಕ್ಷೆಯ ಫಲಿತಾಂಶಗಳು:
“ಕಾರ್ಪೊರೇಟ್ ವಲಯದಿಂದ ಪ್ರತಿಕ್ರಿಯಿಸಿದವರಲ್ಲಿ, ಕೊರೊನಾದಿಂದಾಗಿ ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದು ಸೂಚಿಸಿದ 46% ಜನರು, ಇದರಿಂದ ಚೇತರಿಸಿಕೊಳ್ಳಲು ಮೂರು ತಿಂಗಳುಗಳು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. 26% ಜನರು ಆರು ತಿಂಗಳ ಅವಧಿಯಲ್ಲಿ ವರ್ಷದ ಅಂತ್ಯದ ವೇಳೆಗೆ ಸರಿಯಾಗುತ್ತದೆ ಎಂದು ಭಾವಿಸಿದ್ದಾರೆ. ಈ ವಲಯವು ಭಾರಿ ಮುಚ್ಚುವಿಕೆಗಳನ್ನು ನೋಡುವುದಿಲ್ಲವಾದರೂ, ಅನೇಕ ಜನರು ಉದ್ಯೋಗ ಕಳೆದುಕೊಳ್ಳುವುದು, ಕೆಲಸದ ಪ್ರಮಾಣವನ್ನು ಕಡಿಮೆ ಮಾಡುವುದು ಇತ್ಯಾದಿ ಆಗುತ್ತದೆ” ಎಂದು ಎಐಎಂಒ ಗೌರವ ಪ್ರಧಾನ ಕಾರ್ಯದರ್ಶಿ ಕೆನ್ನಿ ರಾಮಾನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಎಸ್‌ಎಂಇ ವಲಯವು ಕೃಷಿಯ ನಂತರ ದೇಶದ ಅತಿದೊಡ್ಡ ಉದ್ಯೋಗ ಸೃಷ್ಟಿಸುವ ವಲಯವಾಗಿದೆ.
ಅಗತ್ಯ ಸೇವಾ ಪೂರೈಕೆದಾರರ ವ್ಯವಹಾರಗಳಲ್ಲಿ, ಕೊರೊನಾದಿಂದ ಯಾವುದೇ ಪರಿಣಾಮ ಬೀಳಲಿಲ್ಲ ಎಂದು ಸಮೀಕ್ಷೆ ಹೇಳುತ್ತದೆ.
ಸಂಗ್ರಹಿಸಿದ ದತ್ತಾಂಶಗಳ ಬಗ್ಗೆ ಎಐಎಂಒ ಹೆಚ್ಚಿನ ಫಲಿತಾಂಶಗಳನ್ನು ಈ ವಾರ ಬಿಡುಗಡೆ ಮಾಡಲಿದೆ ಎಂದು ಎಐಎಂಒ ಮಾಜಿ ಅಧ್ಯಕ್ಷ ಕೆ ಇ ರಘುನಾಥನ್ ತಿಳಿಸಿದ್ದಾರೆಂದು ನ್ಯೂಸ್ ಕ್ಲಿಕ್ ವರದಿ ಮಾಡಿದೆ.
“ಎಐಎಂಒ ಭಾರತದಲ್ಲಿನ ಎಂಎಸ್‌ಎಂಇಗಳ ಹೃದಯ ಬಡಿತವನ್ನು ತೋರಿಸುತ್ತಿದೆ. ಎಂಎಸ್‌ಎಂಇಗಳ ಅಗತ್ಯಗಳನ್ನು ಬೆಳಕಿಗೆ ತಂದಿದ್ದಕ್ಕಾಗಿ ನಾವು ಹಣಕಾಸು ಸಚಿವೆ ಮತ್ತು ಪ್ರಧಾನ ಮಂತ್ರಿಗಳನ್ನು ಶ್ಲಾಘಿಸುತ್ತೇವೆ. ಭಾರತದಾದ್ಯಂತದ ವಿವಿಧ ಎಂಎಸ್‌ಎಂಇ ಸಂಘಗಳ ಸದಸ್ಯರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಮಾತನಾಡಿದ್ದೇವೆ. ಸರ್ಕಾರ ಘೋಷಿಸಿದ ಹಣಕಾಸು ಪ್ಯಾಕೇಜ್‌ಗಳ ಪ್ರಯೋಜನಗಳು ಇನ್ನು ಎಂಎಸ್‌ಎಂಇಗಳ ಬಾಗಿಲನ್ನು ತಲುಪಿಲ್ಲ” ಎಂದು ರಘುನಾಥನ್ ಹೇಳಿದ್ದಾರೆ.
ಈ ಸಮೀಕ್ಷೆಯು ಇದುವರೆಗಿನ ಅತಿದೊಡ್ಡ ಉದ್ಯಮ ಸಮೀಕ್ಷೆಯಾಗಿದೆ ಎಂದು ಎಐಎಂಒ ಹೇಳಿದೆ. ಸಾಮಾಜಿಕ ತಂತ್ರಜ್ಞಾನ ಉದ್ಯಮ ಮತ್ತು ಫೆಡರೇಶನ್ ಆಫ್ ಇಂಡಿಯಾ ಇಂಡಸ್ಟ್ರಿ, ಡಿಜಿಟಲ್ ಫಾರ್ ಎಂಪವರ್‌ಮೆಂಟ್ (ಡಿ 4 ಇ), ಅಸೋಸಿಯೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ, ಸಿಮೆಂಟ್ ತಯಾರಕರ ಕಲ್ಯಾಣ ಸಂಘ, ಭಾರತೀಯ ಮಹಿಳಾ ಉದ್ಯಮಿಗಳ ಒಕ್ಕೂಟ, ಭಾರತೀಯ ಮಹಿಳಾ ಉದ್ಯಮಿಗಳ ಫಡರೇಶನ್, ಫಸ್ಟ್ ವಲ್ಡ್ ಕಮ್ಯೂನಿಟಿ, ಚೇಂಬರ್ ಆಫ್ ಸ್ಮಾಲ್ ಇಂಡಸ್ಟ್ರಿ ಅಸೋಸಿಯೇಷನ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಒಕ್ಕೂಟ ಮತ್ತು ಲಕ್ನೋದ ಅಮೌಸಿ ಇಂಡಸ್ಟ್ರೀಸ್ ಅಸೋಸಿಯೇಷನ್ ಸೇರಿದಂದತೆ ಮುಂತಾದ ಸಂಘಟನೆಗಳ ಸಹಯೋಗದೊಂದಿಗೆ ಈ ಸಮೀಕ್ಷೆಯು ನಡೆದಿತ್ತು.
ಓದಿ: ಕೊರೊನ ಸಮಯದಲ್ಲಿ ಮೃತರಾದ ಪತ್ರಕರ್ತರಿಗೆ 50 ಲಕ್ಷ ಪರಿಹಾರ ನೀಡಿ: ಕರ್ನಾಟಕ ಹೈಕೋರ್ಟ್


