ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಕೃಷಿ ಭೂಮಿಯಲ್ಲಿ ಕೆಲಸಕ್ಕೆ ಬರದಿದ್ದಕ್ಕೆ 27 ವರ್ಷದ ಚೆಂಚು ಬುಡಕಟ್ಟು ಮಹಿಳೆಗೆ ಒಂದು ವಾರ ಕಾಲ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ಕೊಲ್ಲಾಪುರ ಮಂಡಲದ ಮೊಳಚಿಂತಲಪಲ್ಲಿ ಗ್ರಾಮದಲ್ಲಿ ಮಹಿಳೆಯ ಮೇಲೆ ಆಕೆಯ ಸಹೋದರಿ, ಸೋದರ ಮಾವ ಸೇರಿದಂತೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಕೆಲ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಬಳಿಕ ಆಕೆಯನ್ನು ರಕ್ಷಿಸಲಾಗಿದೆ. ಪ್ರಸ್ತುತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಯೊಬ್ಬನ ಒಡೆತನದ ಕೃಷಿ ಭೂಮಿಯಲ್ಲಿ ಕೆಲಸಕ್ಕೆ ಬಾರದಿದ್ದಕ್ಕಾಗಿ ದೊಣ್ಣೆಗಳಿಂದ ಹೊಡೆದು ಚಿತ್ರಹಿಂಸೆ ನೀಡಲಾಯಿತು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಲ್ಲೆಗೂ ಮುನ್ನ ಸಂತ್ರಸ್ತೆ ತನ್ನ ಸಹೋದರಿಯೊಂದಿಗೆ ಕೌಟುಂಬಿಕ ಸಮಸ್ಯೆ ಹಿನ್ನೆಲೆ ಜಗಳವಾಡಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ಸಂತ್ರಸ್ತೆಯ ಕಣ್ಣು ಮತ್ತು ದೇಹಕ್ಕೆ ಮೆಣಸಿನ ಹುಡಿ ಹಾಕಿದ್ದಲ್ಲದೆ, ಆಕೆಯ ಖಾಸಗಿ ಭಾಗ ಮತ್ತು ತೊಡೆ ಸುಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜೂನ್ 8 ರಿಂದ 19 ನಡುವೆ ಮಹಿಳೆಗೆ ಚಿತ್ರಹಿಂಸೆ ನೀಡಲಾಗಿದೆ. ಜೂನ್ 21ರ ಶುಕ್ರವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಯತ್ನ, ಸಂಬಂಧಿತ ಐಪಿಸಿ ಸೆಕ್ಷನ್‌ಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
ರಾಜ್ಯ ಅಬಕಾರಿ ಸಚಿವ ಜೂಪಲ್ಲಿ ಕೃಷ್ಣರಾವ್ ಅವರು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳಿದ್ದಾರೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ರಾವ್ ತಿಳಿಸಿದ್ದಾರೆ.
ಎರಡು ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿರುವ ಸಚಿವರು, ಆಕೆಯ ಮಕ್ಕಳ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಬುಡಕಟ್ಟು ನಾಯಕನ ಡಿಎನ್‌ಎ ಪರೀಕ್ಷೆ ಮಾಡಿಸುವ ಹೇಳಿಕೆ: ರಾಜಸ್ಥಾನದ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ


