ಉತ್ತರ ಪ್ರದೇಶದಲ್ಲಿ ಭಾರಿ ಮಳೆ, ಸಿಡಿಲಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಹಲವು ಸ್ಥಳಗಳಲ್ಲಿ ಭಾನುವಾರ ಮಳೆಯಬ್ಬರ ಹೆಚ್ಚಾಗಿದ್ದು, ಪ್ರಯಾಗ್‌ರಾಜ್ ಜಿಲ್ಲೆಯಲ್ಲಿಯೇ 14 ಸಾವುಗಳು ವರದಿಯಾಗಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಭಾರಿ ಮಳೆಗೆ ಜಾನುವಾರುಗಳನ್ನು ಕಳೆದುಕೊಂಡವರಿಗೆ ಆರ್ಥಿಕ ಸಹಾಯವನ್ನೂ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಉತ್ತರಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿದ್ದು, ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. ಒಟ್ಟು 14 ಮಂದಿ ಬಲಿಯಾಗಿದ್ದಾರೆ. ಕಾನ್ಪುರ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ತಲಾ ಐದು ಸಾವುಗಳು ವರದಿಯಾಗಿವೆ. ಕೌಶಂಬಿಯಲ್ಲಿ, ಸಿಡಿಲಿನ ಹೊಡೆತದಿಂದ ನಾಲ್ಕು ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ಸೆಲ್ಫಿ ತೆಗೆದುಕೊಳ್ಳುವಾಗ ಸಿಡಿಲು ಬಡಿದು 11 ಮಂದಿ ಸಾವು
ಫಿರೋಜಾಬಾದ್, ಉನ್ನಾವೊ ಮತ್ತು ರೇ ಬರೇಲಿ ಜಿಲ್ಲೆಗಳಲ್ಲಿ ತಲಾ ಎರಡು ಸಾವುಗಳು ಮತ್ತು ಹರ್ದೋಯಿ ಮತ್ತು ಝಾನ್ಸಿಯಲ್ಲಿ ತಲಾ ಒಂದೊಂದು ಸಾವು ವರದಿಯಾಗಿದೆ.
ಸಿಡಿಲಿನಿಂದ ಪ್ರಾಣಹಾನಿ ಮತ್ತು ಆಸ್ತಿ, ಜಾನುವಾರು ಹಾನಿ ಸಂಭವಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಲಾಗಿದ್ದು, ಪಿಎಂ ಪರಿಹಾರ ನಿಧಿಯಿಂದ ಹಣವನ್ನು ಬಿಡುಗಡೆ ಮಾಡಲಾಗಿದೆ. ಮೃತಪಟ್ಟ ಕುಟುಂಬದವರಿಗೆ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುತ್ತದೆ.
The Prime Minister was briefed about the loss of lives and damages due to lightning in parts of Uttar Pradesh. An ex-gratia of Rs. 2 lakh each from PMNRF would be given to the next of kin of the deceased and Rs. 50,000 would be given to the injured.
— PMO India (@PMOIndia) July 12, 2021
ಶನಿವಾರ, ಭಾನುವಾರ ರಾಜಸ್ಥಾನದಲ್ಲಿ ಭಾರಿ ಮಳೆಯಾಗಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ 11 ಜನ ಸೆಲ್ಫಿ ತೆಗೆದುಕೊಳ್ಳುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಜೈಪುರ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್ ಬಳಿಯ ವಾಚ್ ಟವರ್‌ನಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು 11 ಜನರು ಮೃತಪಟ್ಟಿದ್ದು, 11 ರಿಂದ 12 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಮಾನ್ಸೂನ್ ಮಾರುತವು,ದೆಹಲಿ, ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳು, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಇನ್ನೂ ಕೆಲವು ಭಾಗಗಳಿಗೆ ಬೀಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಭಾನುವಾರ ತಿಳಿಸಿತ್ತು.
ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರಿ ಮಳೆ: ನೆಲಕ್ಕುರುಳಿದ ವಿದ್ಯುತ್ ಕಂಬಗಳು-ನದಿ ನೀರಿನ ಮಟ್ಟದಲ್ಲಿ ಹೆಚ್ಚಳ


