ಅಮೆರಿಕದಲ್ಲಿ ವಾಸಿಸುತ್ತಿರುವ ಇನ್ನೂ 487 ಅಕ್ರಮ ಭಾರತೀಯ ವಲಸಿಗರನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಅವರನ್ನು ಶೀಘ್ರದಲ್ಲೇ ಗಡೀಪಾರು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, “487 ಶಂಕಿತ ಭಾರತೀಯ ಪ್ರಜೆಗಳನ್ನು ಗಡೀಪಾರು ಆದೇಶಗಳನ್ನು ನೀಡಲಾಗಿದೆ ಎಂದು ಅಮೆರಿಕ ಭಾರತ ಸರ್ಕಾರಕ್ಕೆ ತಿಳಿಸಿದೆ” ಎಂದು ಹೇಳಿದರು.
“ಅಂತಿಮ ಗಡೀಪಾರು ಆದೇಶಗಳೊಂದಿಗೆ 487 ಶಂಕಿತ ಭಾರತೀಯ ನಾಗರಿಕರು ಇದ್ದಾರೆ ಎಂದು ನಮಗೆ ತಿಳಿಸಲಾಗಿದೆ” ಎಂದು ಮಿಶ್ರಿ ಹೇಳಿದರು.
“ಹೆಚ್ಚಿನ ವಿವರಗಳು ಹೊರಬರುತ್ತಿದ್ದಂತೆ ಈ ಸಂಖ್ಯೆಗಳು ಹೆಚ್ಚಾಗಬಹುದು. ಆದರೆ, ಇತರ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಯುಎಸ್ ಅಧಿಕಾರಿಗಳು ಇನ್ನೂ ಒದಗಿಸಿಲ್ಲ” ಎಂದು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು. ಗಡೀಪಾರು ಪಟ್ಟಿಯಲ್ಲಿರುವ ಪ್ರಸ್ತುತ 487 ವಲಸಿಗರ ಗುರುತುಗಳನ್ನು ಸರ್ಕಾರ ಪರಿಶೀಲಿಸಿದೆ.
104 ಗಡೀಪಾರು ಮಾಡಲಾದ ವಲಸಿಗರನ್ನು ಹೊತ್ತೊಯ್ಯುವ ಯುಎಸ್ ಮಿಲಿಟರಿ ವಿಮಾನವು ಜನವರಿ 5 ರಂದು ಅಮೃತಸರದಲ್ಲಿ ಬಂದಿಳಿದಿದ್ದು, ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಡಿಯಲ್ಲಿ ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮದ ಭಾಗವಾಗಿ ಮೊದಲ ದೊಡ್ಡ ಪ್ರಮಾಣದ ಗಡೀಪಾರು ಪ್ರಕ್ರಿಯೆ ಇದಾಗಿತ್ತು.
ಅನಧಿಕೃತ ಮಾರ್ಗಗಳ ಮೂಲಕ ಅಮೆರಿಕಕ್ಕೆ ಪ್ರವೇಶಿಸಲು ಯತ್ನಿಸಿದವರು, “ಪ್ರಯಾಣದುದ್ದಕ್ಕೂ ತಮ್ಮ ಕೈ ಮತ್ತು ಕಾಲುಗಳನ್ನು ಬಂಧಿಸಲಾಗಿತ್ತು; ಅಮೃತಸರದಲ್ಲಿ ಇಳಿದ ನಂತರವೇ ಅವುಗಳನ್ನು ಬಿಚ್ಚಲಾಯಿತು” ಎಂದು ಹೇಳಿಕೊಂಡರು.
ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯ ನಾಗರಿಕರ ಮೇಲಿನ ಅಮಾನವೀಯ ವರ್ತನೆಯ ವಿಷಯದ ಬಗ್ಗೆ ಮಾತನಾಡಿದ ಮಿಶ್ರಿ, “ಭಾರತ ಸರ್ಕಾರವು ಅಮೆರಿಕ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಚರ್ಚಿಸುತ್ತದೆ” ಎಂದು ಹೇಳಿದರು.
ಇದನ್ನೂ ಓದಿ; ‘ಕತ್ತೆ ಮಾರ್ಗ’ದ ಮೂಲಕ ಅಮೆರಿಕ ಪ್ರವೇಶಿಸಲು ₹72 ಲಕ್ಷ ಪಾವತಿಸಿದ್ದ ಹರಿಯಾಣದ ಆಕಾಶ್


