ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸೇರಿದಂತೆ 59,87,477 ಪ್ರಕರಣಗಳು, ಸುಪ್ರೀಂ ಕೋರ್ಟ್‌ನಲ್ಲಿ 69,511 ಪ್ರಕರಣಗಳು ಫೆಬ್ರವರಿ 1ರವರೆಗೆ ಬಾಕಿ ಉಳಿದಿವೆ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ತೆಲುಗು ದೇಶಂ ಪಕ್ಷದ ಸಂಸದ ಕನಕಮೇಡಲ ರವೀಂದ್ರ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಈ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ 59,87,477 ಪ್ರಕರಣಗಳ ಪೈಕಿ ಅತಿ ಹೆಚ್ಚು (10,30,185) ಅಲಹಾಬಾದ್ ಹೈಕೋರ್ಟ್‌ನಲ್ಲಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (6,40,267), ಬಾಂಬೆ (6,20,586) ಹೈಕೋರ್ಟ್‌ಗಳಿದ್ದು, ಸಿಕ್ಕಿಂ ಹೈಕೋರ್ಟಿನಲ್ಲಿ ಫೆಬ್ರವರಿ 1ರವರೆಗೆ ಅತಿ ಕಡಿಮೆ (171) ಪ್ರಕರಣಗಳು ಬಾಕಿ ಉಳಿದಿವೆ.
ಡಿಸೆಂಬರ್ 31, 2022ರ ಅಂಕಿ-ಅಂಶದ ಪ್ರಕಾರ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 4.34 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಪಿಟಿಐ ವರದಿ ಮಾಡಿದೆ.
ಫೆಬ್ರವರಿ 2ರಂದು ನೀಡಿದ ಪ್ರತ್ಯೇಕ ಉತ್ತರದಲ್ಲಿ, “ಫೆಬ್ರವರಿ 2ರಂದು ಸುಪ್ರೀಂ ಕೋರ್ಟ್‌ನಲ್ಲಿ 81 ಪ್ರಕರಣಗಳು, ಹೈಕೋರ್ಟ್‌ಗಳಲ್ಲಿ 1,24,810 ಪ್ರಕರಣಗಳು, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 2,76,208 ಪ್ರಕರಣಗಳು 25 ವರ್ಷಗಳಿಂದ ಬಾಕಿ ಉಳಿದಿವೆ” ಎಂದು ರಿಜಿಜು ಹೇಳಿದ್ದಾರೆ.
ಜನತಾ ದಳ (ಯುನೈಟೆಡ್) ಸಂಸದ ರಾಮ್ ನಾಥ್ ಠಾಕೂರ್ ಅವರ ಪ್ರಶ್ನೆಗೆ ಉತ್ತರವಾಗಿ ಕಾನೂನು ಸಚಿವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳ ಲಭ್ಯತೆ, ಪೋಷಕ ನ್ಯಾಯಾಲಯದ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯದ ಕೊರತೆ ಸೇರಿದಂತೆ ಹಲವಾರು ಕಾರಣಗಳಿವೆ ಎಂದು ರಿಜಿಜು ಹೇಳಿದ್ದಾರೆ.
ಆಗಾಗ್ಗೆ ಮುಂದೂಡಿಕೆ ಮಾಡುವುದು, ಮೇಲ್ವಿಚಾರಣಾ ಕಾರ್ಯವಿಧಾನಗಳ ಕೊರತೆ ಮತ್ತು ಪ್ರಕರಣಗಳ ಸಂಕೀರ್ಣತೆಯು ದೀರ್ಘಾವಧಿಯವರೆಗೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಕಾರಣಗಳು ಎಂದು ಅವರು ಮಾಹಿತಿ ನೀಡಿದ್ದಾರೆ.


