ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಇಂದು ಆರು ಜನ ನಕ್ಸಲ್ ನಾಯಕರು ಮುಖ್ಯವಾಹಿನಿಗೆ ಮರಳಿದ್ದು, ‘ಶಾಂತಿಗಾಗಿ ನಾಗರಿಕರ ವೇದಿಕೆ’ ಮುಖಂಡರ ಶ್ರಮ ಸಾರ್ಥಕವಾಗಿದೆ.
ಕಳೆದ ವರ್ಷ, ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಉಳಿದ ಹೋರಾಟಗಾರರ ಜೀವ ಉಳಿಸಬೇಕು ಎಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದರು. ದಲಿತರು, ಆದಿವಾದಿಗಳು ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡುತ್ತಿರುವವರನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಡ ಹಾಕಿದ್ದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ನಕ್ಸಲ್ ನಾಯಕರಾದ ಮುಂಡಗಾರು ಲತಾ (ಮುಂಡಗಾರು ಶೃಂಗೇರಿ), ವನಜಾಕ್ಷಿ (ಬಾಳೆಹೊಳೆ ಕಳಸ), ಸುಂದರಿ (ಕುತ್ಲೂರು ದಕ್ಷಿಣ ಕನ್ನಡ), ಮಾರಪ್ಪ ಅರೋಲಿ (ಕರ್ನಾಟಕ), ವಸಂತ ಟಿ (ತಮಿಳುನಾಡು), ಎನ್. ಜೀಶಾ (ಕೇರಳ) ಮುಖ್ಯವಾಹಿನಿಗೆ ಮರಳಿದ್ದಾರೆ.

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಡಿಸಿಎಂ ಡಿಕೆ ಶಿವಕುಮಾರ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಅಲೋಕ್ ಮೋಹನ್, ಶಾಂತಿಗಾಗಿ ನಾಗರಿಕರ ವೇದಿಕೆ ಮುಖಂಡರು, ಶರಣಾಗುತ್ತಿರುವ ನಕ್ಸಲ್ ನಾಯಕರ ಕುಟುಂಬದ ಸದಸ್ಯರು ಇದ್ದರು.
ಗೃಹ ಸಚಿವ ಜಿ. ಪರಮೇಶ್ವರ ಮಾತನಾಡಿ, ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡುವ ಯೋಜನೆ ಭಾಗವಾಗಿ ಆರು ಜನರು ಮುಖ್ಯವಾಹಿನಿಗೆ ಬಂದಿದ್ದಾರೆ. ಶರಣಾಗತಿ ಸಮಿತಿ ಸದಸ್ಯರೂ ಜೊತೆಯಲ್ಲಿ ಇದ್ದಾರೆ. ಈ ಬಗ್ಗೆ ಕೆಲಸ ಮಾಡಿರುವ ಪೊಲೀಸ್ ಅಧಿಕಾರಿಗಳು ಇದ್ದಾರೆ. ಮುಖ್ಯಮಂತ್ರಿಗಳ ಕರೆಗೆ ಆರು ಜನ ಹೋರಾಟಗಾರರು ಸ್ಪಂದಿಸಿ ಶರಣಾಗಿದ್ದಾರೆ ಎಂದರು.
ಮುಖ್ಯಮಂತ್ರಿಗಳಿಂದ ಸಂವಿಧಾನ ಪ್ರತಿ ಸ್ವೀಕರಿಸಿ ಮತನಾಡಿದ ಮುಂಡುಗಾರು ಲತಾ, “ಮುಖ್ಯವಾಹಿನಿಗೆ ಬಂದಿರುವ ನಮಗೆ ಮುಖ್ಯಮಂತ್ರಿಗಳು ಗೌರವ ನೀಡಿದ್ದಾರೆ. ನಾವೂ ಕೂಡ ಅವರನ್ನು ಅಭಿನಂದಿಸುತ್ತೇವೆ. ನಮ್ಮ ಬೇಡಿಕೆಗಳನ್ನು ಅವರ ಮುಂದೆ ಇಟ್ಟಿದ್ದೇವೆ. ಇನ್ನು ಮುಂದೆ ಕಾನೂನು ಬದ್ದವಾಗಿ ಹಾಗೂ ಸಂವಿಧಾನಬದ್ಧವಾಗಿ ಜನರ ಪರವಾಗಿ ಹೋರಾಟ ಮುಂದುವರಿಸುತ್ತೇವೆ. ನಾವೀಗ ಪರಿವರ್ತನೆಯಾಗಿದ್ದು, ನಕ್ಸಲ್ ಹೋರಾಟವನ್ನು ಬಿಟ್ಟು ಬಂದಿದಿದ್ದೇವೆ” ಎಂದರು.

ಶಾಂತಿಗಾಗಿ ನಾಗರಿಕರ ವೇದಿಕೆ ಮುಖಂಡರಾದ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, “ಮುಖ್ಯವಾಹಿನಿಗೆ ಮರಳಿದ ನಕ್ಸಲ್ ಹೋರಾಟಗಾರರಿಗೆ ಪುನರ್ವಸತಿ ಯೋಜನೆಯನ್ನು ಮುಖ್ಯಮಂತ್ರಿಗಳು ಕಲ್ಪಿಸಿದ್ದಾರೆ. ಇಡೀ ಸರ್ಕಾರ ಹಾಗೂ ಅಧಿಕಾರಿ ವರ್ಗ ಸಕಾಲಕ್ಕೆ ಸ್ಪಂಧಿಸಿದ್ದು, ನಕ್ಸಲರು ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದಾರೆ. ಸಶಸ್ತ್ರ ಪಡೆಯ ಕಟ್ಟಕಡೆಯ ತಂಡ ಇಂದು ಮುಖ್ಯವಾಹಿನಿಗೆ ಬಂದಿದೆ. ನಮ್ಮ ವೇದಿಕೆ ಪರವಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇವೆ” ಎಂದರು.
ಆರು ಜನರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಕರೆತರಲಾಗಿತ್ತು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರನ್ನು ಸ್ವಾಗತಿಸಲು ನಿರ್ಧರಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ತಾವೇ ಸ್ವಾಗತಿಸುವುದಾಗಿ ತಿಳಿಸಿದ್ದರಿಂದ, ಕಾರ್ಯಕ್ರಮವನ್ನು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಒದಿ; ನಕ್ಸಲ್ ಶರಣಾಗತಿ ಪ್ರಕ್ರಿಯೆಯಲ್ಲಿ ಬದಲಾವಣೆ; ಸಿಎಂ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಹೋರಾಟಗಾರರು


