| ಮುತ್ತುರಾಜು |
ಐಎಂಎ ಗ್ರೂಪ್ ಆಫ್ ಕಂಪನಿ ಸಾವಿರಾರು ಜನರಿಗೆ ನೂರಾರು ಕೋಟಿ ರೂ ಹಣ ವಂಚನೆ ಮಾಡಿರುವ ಪ್ರಕರಣ ಬಗ್ಗೆ ನಿಮಗೆಲ್ಲಾ ತಿಳಿದಿದೆ. ರಾಜ್ಯದ ನಾನಾ ಮೂಲೆಗಳಿಂದ ಮೋಸ ಹೋಗಿರುವ ಜನರು ಬೆಂಗಳೂರಿಗೆ ಬಂದು ಕಂಪನಿ ವಿರುದ್ಧ ದೂರು ದಾಖಲಿಸುತ್ತಿದ್ದಾರೆ. ಈ ಜನರೆಲ್ಲಾ ಯಾರು? ಹಣ ಹೂಡಿಕೆ ಯಾಕೆ ಮಾಡಿದ್ದರು? ಅಂತಹ ಅಗತ್ಯವೇನಿತ್ತು? ನಿಮಗೆ ಗೊತ್ತೆ?
ದಿನಗೂಲಿ ಕಾರ್ಮಿಕರು, ಕೂಲಿಕಾರರು, ಬೀದಿ ಬದಿ ವ್ಯಾಪಾರಿಗಳು, ಗೃಹಿಣಿಯರು ಹೀಗೆ ನಾನಾ ರೀತಿಯ ಕೆಲಸ ಮಾಡುತ್ತಾ ಜೀವನ ನಡೆಸುತ್ತದ್ದ ಬಡ ಹಾಗೂ ಮಧ್ಯಮ ವರ್ಗದ ಜನರು ಮಕ್ಕಳ ಶಿಕ್ಷಣಕ್ಕಾಗಿ, ಮದುವೆ ಖರ್ಚಿಗಾಗಿ, ಸ್ವಂತ ಮನೆ, ಆಸ್ತಿ, ಜಮೀನು ಮಾಡಿಕೊಳ್ಳಬೇಕೆಂಬ ಕನಸನ್ನಿಟ್ಟುಕೊಂಡ ಇವರು ಹೆಚ್ಚು ಬಡ್ಡಿ ದೊರೆಯುತ್ತದೆ ಎಂಬ ಆಸೆಯಿಂದ ಸಾವಿರದಿಂದ ಕೋಟಿವರೆಗೂ ಹಣವನ್ನು ಹೂಡಿಕೆ ಮಾಡಿದ್ದರು.
ಕಳೆದ ಸೋಮವಾರ ಕಂಪನಿ ಮಾಲೀಕ ಹರಿಬಿಟ್ಟ ಆಡಿಯೋ ಮೂಲಕ ಹೂಡಿಕೆದಾರರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಧ್ಯಕ್ಕೆ ಕರ್ನಾಟಕ ಸರ್ಕಾರ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಜನರಿಂದ ದೂರುಗಳನ್ನು ದಾಖಲಿಸುತ್ತಿದ್ದಾರೆ. ಈವರೆಗೂ ಸುಮಾರು 11 ಸಾವಿರಕ್ಕೂ ಹೆಚ್ಚು ಜನರು ಮೊಹಮ್ಮದ್ ಮನ್ಸೂರ್ ಖಾನ್ ವಿರುದ್ಧ ದೂರು ನೀಡಿದ್ದಾರೆ.
ಮುಂದಿನ ಕಥೆ ಏನು? ಜನರ ಹಣ ವಾಪಸ್ ಬರುವುದೇ?
ಈಗಾಗಲೇ ಐಎಂಎ ಕಂಪನಿಯ ನಿರ್ದೇಶಕ ಮಂಡಳಿಯ ಎಲ್ಲಾ ಸದಸ್ಯರನ್ನು ಬಂಧಿಸಲಾಗಿದ್ದು, ಮನ್ಸೂರ್ ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಈ ಹಣ ವಂಚನೆ ಪ್ರಕರಣಗಳು ಕರ್ನಾಟಕದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ 15 ವರ್ಷಗಳಲ್ಲಿ ಸುಮಾರು 20ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ.
ಇಂತಹ ಮೋಸದ ಕಂಪನಿಗಳ ಮಾತುಗಳಿಗೆ ಮರುಳಾದವರು ಬರೀ ಜನಸಾಮಾನ್ಯರು ಮಾತ್ರವಲ್ಲ. 2002-18ರವರೆಗೆ ವ್ಯವಹಾರ ನಡೆಸುತ್ತಿದ್ದ ವಿಕ್ರಂ ಚಿಟ್ ಫಂಡ್ ಹಗರಣದಲ್ಲಿ ಪ್ರಕಾಶ್ ಪಡುಕೋಣೆ, ರಾಹುಲ್ ದ್ರಾವಿಡ್ ಕೂಡ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಆದರೆ ಇವರ್ಯಾರಿಗೂ ಹಣ ಕೈಸೇರಿಲ್ಲ.
ಈ ವರೆಗೂ ಕರ್ನಾಟಕದಲ್ಲಿ ನಡೆದಿರುವ ವಂಚನೆ ಪ್ರಕರಣಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ

ಕಳೆದ ವರ್ಷ ಪ್ರಜಾವಾಣಿಯಲ್ಲಿ ಸುದ್ದಿಯಾದ ವರದಿಯ ಪ್ರಕಾರ 2013-18 ರವರೆಗೆ ಸುಮಾರು 16 ಕಂಪನಿಗಳಿಂದ ಒಟ್ಟು 5,200 ಕೋಟಿ ರೂ ವಂಚನೆಯಾಗಿದೆಯಾಗಿದೆ ಎಂಬುದು ವರದಿಯಾಗಿದೆ.
ಇಷ್ಟೆಲ್ಲಾ ಪ್ರಕರಣಗಳಲ್ಲಿ ಸರ್ಕಾರ ಏನು ಮಾಡುತ್ತಿದೆ?
ಪ್ರತಿ ಪ್ರಕರಣ ಘಟನೆಗಳು ನಡೆದಾಗಲೂ ಸರ್ಕಾರ ತನಿಖೆ ನಡೆಸಲು ಆದೇಶಿಸುತ್ತಿದೆ. ಐಎಂಎ ಪ್ರಕರಣ ಒಳಗೊಂಡಂತೆ ಹಲವಾರು ಪ್ರಕರಣಗಳಲ್ಲಿ ರಾಜಕೀಯ ಮುಖಂಡರು, ಪ್ರಭಾವಿ ವ್ಯಕ್ತಿಗಳ ಕೈವಾಡವು ಇರುವುದು ಕಂಡುಬಂದಿದೆ. ಈ ಬಗ್ಗೆ ಪಕ್ಷಾತೀತವಾಗಿ ತನಿಖೆ ನಡೆಯಬೇಕು. ಈ ಹಿಂದೆ ನಡೆದ ಕೆಲವು ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿದೆ. ಆದರೆ ಜನರಿಗೆ ನ್ಯಾಯ ಸಿಕ್ಕಿರುವುದು ಸಂಶಯವೇ ಸರಿ. ಇಂತಹ ಪ್ರಕರಣಗಳು ನಡೆಯದಂತೆ ತಡೆಗಟ್ಟಲು ಸರ್ಕಾರವು ಯಾವ ನೀತಿಯನ್ನು ಜಾರಿಗೊಳಿಸಿಲ್ಲ.
ಇಷ್ಟೆಲ್ಲಾ ಪ್ರಕರಣಗಳ ಬಗ್ಗೆ ಜನರಿಗೆ ಅರಿವಿದ್ದರೂ ಪದೇ ಪದೇ ಮೋಸ ಹೋಗುತ್ತಿರುವುದೇಕೆ?
ದಿನಗೂಲಿ ಮಾಡಿ ಬದುಕು ನಡೆಸುತ್ತಿರುವ ಜನರು ತಮ್ಮ ಪುಟ್ಟ ಕನಸುಗಳಿಗಾಗಿ ಹಣ ಕೂಡಿಡುವುದು ಸಾಮಾನ್ಯ. ಹೆಚ್ಚು ಬಡ್ಡಿ ಬರುತ್ತದೆ, ಹಣ ಡಬಲ್ ಮಾಡಿಕೊಡುತ್ತೇವೆ ಎನ್ನುವ ಮೋಸದ ಮಾತುಗಳಿಗೆ ಬಲಿಯಾಗುತ್ತಿದ್ದಾರೆ. ಇನ್ನು ಮುಂದಾದರೂ ಇಂತಹ ವಂಚಕ ಕಂಪನಿಗಳ ಬಗ್ಗೆ ಜನರು ಎಚ್ಚರದಿಂದಿರಬೇಕು.
ಇಂತಹ ಮೋಸದ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವವರಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರೇ ಹೆಚ್ಚು. ಮಕ್ಕಳ ಓದು, ಸ್ವಂತ ಮನೆ ಇವರ ಕನಸಾಗಿರುತ್ತದೆ. ಹಾಗಾಗಿ ಸರ್ಕಾರ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಬೇಕು. ದುಡಿಮೆಗೆ ತಕ್ಕ ಪ್ರತಿಫಲ/ಸಂಬಳ ಸಿಕ್ಕರೆ ಜನರು ಹೀಗೆ ಮೋಸ ಹೋಗಲಾರರು. ಉತ್ತಮ ಗುಣಮಟ್ಟದ ಶಿಕ್ಷಣ, ಉಚಿತ ಆರೋಗ್ಯ, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ಬೀದಿ ಬದಿ ವ್ಯಾಪಾರಿಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳು ಇವೆಲ್ಲವನ್ನು ಸರ್ಕಾರ ಉಚಿತವಾಗಿ ಒದಗಿಸಿದರೆ ಜನರು ಮೋಸಹೋಗಲಾರರು.


