ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ “ನಮ್ಮ ನೀರು ನಮ್ಮ ಹಕ್ಕು” ಘೋಷಣೆಯೊಂದಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಯುತ್ತಿದ್ದ ಮೇಕೆದಾಟು ಪಾದಯಾತ್ರೆ ರಾಜ್ಯದಲ್ಲಿ ಕೊರೊನಾ ಏರಿಕೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಕೊರೊನಾ ಇಳಿಕೆಯಿಂದಾಗಿ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಇಂದಿನಿಂದ (ಫೆ.27) ಮತ್ತೆ ಆರಂಭವಾಗಿದೆ. ರಾಮನಗರದಲ್ಲಿ ಅರ್ಧಕ್ಕೆ ನಿಲ್ಲಿಸಲಾಗಿದ್ದ ಪಾದಯಾತ್ರೆಯನ್ನು ಅಲ್ಲಿಂದಲೇ ಮತ್ತೆ ಪುನರಾರಂಭಿಸಲಾಗಿದೆ.
ರಾಮನಗರದಲ್ಲಿ ಡೋಲು ಬಾರಿಸುವ ಮೂಲಕ ಮತ್ತೆ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವರು ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಇಂದಿನಿಂದ ಮತ್ತೆ ಆರಂಭ ಆಗಲಿರುವ ‘ಮೇಕೆದಾಟು ಪಾದಯಾತ್ರೆ’ ರಾಮನಗರದಿಂದ ಬೆಳಗ್ಗೆ 8:30ಕ್ಕೆ ಆರಂಭವಾಗಿದ್ದು, ಮಧ್ಯಾಹ್ನದ ಭೋಜನ ವಿರಾಮ ಮಾಯಗಾನ ಹಳ್ಳಿಯಲ್ಲಿರಲಿದೆ. ಬಳಿಕ ಬಿಡದಿಯಲ್ಲಿ ರಾತ್ರಿ ಭೋಜನ ಮಾಡಿ, ಸಭೆ ನಡೆಸಿ, ವಾಸ್ತವ್ಯ ಹೂಡಲಾಗುತ್ತದೆ.
ಇದನ್ನೂ ಓದಿ: ಕನ್ನಡ ದಿನಪತ್ರಿಕೆಗಳಿಗೆ ‘ಮೇಕೆದಾಟು’ ಜಾಹೀರಾತು ಕೊಟ್ಟವರ್‍ಯಾರು? ಪತ್ರಿಕೆಗಳು ಹೇಳಿದ್ದೇನು?
ಐತಿಹಾಸಿಕ ಮೇಕೆದಾಟು ಪಾದಯಾತ್ರೆ 2.O ನೇರಪ್ರಸಾರ #NammaNeeruNammaHakku https://t.co/cthfidm5oy
— Karnataka Congress (@INCKarnataka) February 27, 2022
ಮೇಕೆದಾಟು ಯೋಜನೆಯಿಂದಾಗುವ ಪ್ರಯೋಜನಗಳು ಆಡಳಿತ ಮಾಡುತ್ತಿರುವ ಸರ್ಕಾರಕ್ಕೆ ಅರಿವಿದ್ದಂತಿಲ್ಲ, ಡಬಲ್ ಇಂಜಿನ್ ಸರ್ಕಾರಗಳಿಗೆ ಜನಪರ ಕಾಳಜಿ, ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆಗೆ ಚಾಲನೆ ಸಿಗುತ್ತಿಲ್ಲ. ಜನಪರವಾಗಿ ಚಿಂತಿಸುವ ಕಾಂಗ್ರೆಸ್, ಪಾದಯಾತ್ರೆಯ ಮೂಲಕ ಸರ್ಕಾರವನ್ನು ಎಚ್ಚರಗೊಳಿಸುವುದಕ್ಕೆ ಸಿದ್ಧವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
“ಇದು ನಮ್ಮ ನೀರಿನ ಹಕ್ಕಿಗಾಗಿನ ಹೋರಾಟ, ಪಕ್ಷಾತೀತವಾಗಿ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಬೇಕು. ಹೋರಾಟವನ್ನು ಯಶಸ್ವಿಗೊಳಿಸಬೇಕು. ನಮ್ಮ ನೀರು ನಮ್ಮ ಹಕ್ಕು” ಎಂದು ಕಾಂಗ್ರೆಸ್ ಮುಖಂಡರು ಜನರಲ್ಲಿ ಮನವಿ ಮಾಡಿದ್ದಾರೆ.
ಜನವರಿಯಲ್ಲಿ ಈ ಪಾದಯಾತ್ರೆ ತಾತ್ಕಾಲಿಕ ಬಗ್ಗೆ ತಿಳಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ’ಮತ್ತೆ ಮೂರನೇ ಅಲೆ ಕಡಿಮೆ ಆಗಿ, ಕೊರೊನಾ ನಿಯಮಾವಳಿ ಸಡಿಲ ಆದ ಮೇಲೆ ರಾಮನಗರದಿಂದ ಬೆಂಗಳೂರುವರೆಗೆ ಉಳಿದ ಏಳು ದಿನದ ಪಾದಯಾತ್ರೆ ಮುಂದುವರಿಯಲಿದೆ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳಬೇಡಿ. ಮತ್ತೆ ಪಾದಯಾತ್ರೆ ಮಾಡುತ್ತೇವೆ. ಆಗಲೂ ಎಂದಿನಂತೆ ನಿಮ್ಮ ಸಹಕಾರ, ಉತ್ಸಾಹ ಬೇಕು” ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಜನರ ಹಿತದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕ ಸ್ಥಗಿತ: ಸಿದ್ದರಾಮಯ್ಯ


