ರಾಯ್‌ಪುರ: ಕಾಶ್ಮೀರಿ ಹಿಂದೂಗಳ ವಲಸೆ ಆಧರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಅರ್ಧಸತ್ಯವನ್ನು ತೋರಿಸುತ್ತದೆ, ಜೊತೆಗೆ ಹಿಂಸೆಯನ್ನು ಹೊರತುಪಡಿಸಿ ಯಾವುದೇ ನೈಜ ಸಂದೇಶವನ್ನು ನೀಡಿಲ್ಲ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಹೇಳಿದ್ದಾರೆ.
ಶಾಸಕರೊಂದಿಗೆ ಸಿನಿಮಾ ನೋಡಿರುವ ಅವರು, ಕಾಶ್ಮೀರದಲ್ಲಿ ಹಿಂದೂಗಳು ಮಾತ್ರವಲ್ಲ, ಬೌದ್ಧರು, ಮುಸ್ಲಿಮರು, ಸಿಖ್ಖರು ಕೂಡ ಹತ್ಯೆಯಾಗಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.
“…ಚಿತ್ರವು ಅರ್ಧ ಸತ್ಯವನ್ನು ತೋರಿಸುತ್ತದೆ. ಇದು ಯಾವುದೇ ಪರಿಹಾರವನ್ನು ಸೂಚಿಸುವುದಿಲ್ಲ. ಸುಧಾರಣೆಯ ದಿಕ್ಕಿನಲ್ಲಿ ಯಾವುದೇ ಪ್ರಯತ್ನವನ್ನು ಈ ಸಿನಿಮಾ ಮಾಡಿಲ್ಲ. ಇದು ಯಾವುದೇ ಅರ್ಥವಿಲ್ಲದ ಹಿಂಸೆಯನ್ನು ಮಾತ್ರ ತೋರಿಸುತ್ತದೆ” ಎಂದು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಮಲ್ಟಿಪ್ಲೆಕ್ಸ್‌ನಲ್ಲಿ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದ ಬಳಿಕ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಚಲನಚಿತ್ರವನ್ನು ಶ್ಲಾಘಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಎನ್ನುವವರು ಕಾಶ್ಮೀರ್ ಫೈಲ್ಸ್ ವಿರುದ್ಧ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಪಿ ಸಿಂಗ್ ಪ್ರಧಾನಿಯಾಗಿದ್ದಾಗ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರ ಬೆಂಬಲದೊಂದಿಗೆ ಕಾಶ್ಮೀರಿ ಪಂಡಿತರ ವಲಸೆ ನಡೆಯಿತು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ತಿಳಿಸಿದ್ದಾರೆ.
”ರಾಜಕೀಯ ಸಂದೇಶ ನೀಡುವ ಪ್ರಯತ್ನ ನಡೆದಿದೆ. ಆಗ ಬಿಜೆಪಿಯ ಬೆಂಬಲದೊಂದಿಗೆ (ಕೇಂದ್ರದಲ್ಲಿ) ಅಧಿಕಾರದಲ್ಲಿದ್ದ ವಿಪಿ ಸಿಂಗ್ ಸರ್ಕಾರವು ಕಾಶ್ಮೀರಿ ಪಂಡಿತರನ್ನು ತಡೆಯಲು ಪ್ರಯತ್ನಿಸಲಿಲ್ಲ. ಬದಲಿಗೆ ಅವರನ್ನು ತೊರೆಯುವಂತೆ ಹೇಳಿತು ಎಂದು ಚಿತ್ರದಲ್ಲಿ ತೋರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಸೇನೆಯನ್ನು ಕೇಂದ್ರದಿಂದ ಅಲ್ಲಿಗೆ ಕಳುಹಿಸಿರಲಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಸೇನೆಯನ್ನು ಅಲ್ಲಿಗೆ ಕಳುಹಿಸಲಾಯಿತು” ಎಂದು ಬಾಘೆಲ್ ವಿವರಿಸಿದ್ದಾರೆ.
ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದತ್ತ ತಿರುಗಿಬಿದ್ದಿರುವ ಬಘೇಲ್, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಿದ ನಂತರವೂ ಕಾಶ್ಮೀರಿ ಪಂಡಿತರ ವಿಷಯದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಎಂದು ಆರೋಪಿಸಿದ್ದಾರೆ.
370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಈ (ಕೇಂದ್ರ) ಸರ್ಕಾರ ಕೇವಲ ರಾಜಕೀಯ ಮಾಡಿದೆ ಮತ್ತು ಕಾಶ್ಮೀರಿ ಪಂಡಿತರಿಗೆ ನೆರವು ನೀಡಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ.
ಛತ್ತೀಸ್‌ಗಢದ ಬಿಜೆಪಿ ಸೇರಿದಂತೆ ಪ್ರತಿಪಕ್ಷ ನಾಯಕರು ಚಿತ್ರ ವೀಕ್ಷಿಸಲು ತಮ್ಮೊಂದಿಗೆ ಬಂದು ಕೂರದಿದ್ದಕ್ಕಾಗಿ ಮುಖ್ಯಮಂತ್ರಿ ಬಾಘೇಲ್ ವಿಷಾದ ವ್ಯಕ್ತಪಡಿಸಿದರು. ಯಾರಾದರೂ ಅವರನ್ನು ಎದುರಿಸಿದಾಗ ಅವರು ಓಡಿಹೋಗುತ್ತಾರೆ ಎಂದು ಕುಟುಕಿದ್ದಾರೆ.
ವಿರೋಧ ಪಕ್ಷದ ನಾಯಕ, ಬಿಜೆಪಿಯ ಹಿರಿಯ ನಾಯಕ ಧರ್ಮಲಾಲ್ ಕೌಶಿಕ್ ಅವರು ಛತ್ತೀಸ್‌ಗಢದಲ್ಲಿ ‘ದಿ ಕಾಶ್ಮೀರ ಫೈಲ್ಸ್’ಗೆ ತೆರಿಗೆಯಿಂದ ವಿನಾಯಿತಿ ನೀಡುವ ಬೇಡಿಕೆಯನ್ನು ಇಟ್ಟಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ ಮತ್ತು ಮಧ್ಯಪ್ರದೇಶದಂತಹ ಹಲವಾರು ಬಿಜೆಪಿ ಆಡಳಿತದ ರಾಜ್ಯಗಳು ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿವೆ. ಬುಧವಾರ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವೂ ಈ ಘೋಷಣೆ ಮಾಡಿದೆ. ಬಾಘೆಲ್ ನೇರವಾಗಿ ಬೇಡಿಕೆಯನ್ನು ತಿರಸ್ಕರಿಸಿಲ್ಲ. ಆದರೆ ರಾಜ್ಯಗಳಿಗಿಂತ ಹೆಚ್ಚಾಗಿ ಕೇಂದ್ರವು ತನ್ನ ತೆರಿಗೆಯ ಪಾಲನ್ನು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದ್ದಾರೆ.
“ಬಿಜೆಪಿ ಶಾಸಕರು ರಾಜ್ಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು (ಮನರಂಜನೆ) ತೆರಿಗೆಯಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಈ ಚಿತ್ರದ ಮೇಲಿನ ಕೇಂದ್ರ ಜಿಎಸ್‌ಟಿಯನ್ನು ಮನ್ನಾ ಮಾಡಲು ಮಾನ್ಯ ಪ್ರಧಾನ ಮಂತ್ರಿಗಳು ಘೋಷಿಸಬೇಕೆಂದು ನಾನು ವಿನಂತಿಸುತ್ತೇನೆ. ಆಗ ಚಿತ್ರವು ದೇಶಾದ್ಯಂತ ತೆರಿಗೆ ಮುಕ್ತವಾಗಿರುತ್ತದೆ” ಎಂದು ಬಘೇಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಅರ್ಧದಷ್ಟು ತೆರಿಗೆ ಪಾಲು ಕೇಂದ್ರಕ್ಕೆ ಹೋಗುತ್ತದೆ ಎಂದು ವಿಧಾನಸಭೆಯಲ್ಲಿ ಅವರು ವಿವರಿಸಿದ್ದಾರೆ. “ಕೇಂದ್ರ ಸರ್ಕಾರ ಈ ಚಲನಚಿತ್ರವನ್ನು ತೆರಿಗೆ ಮುಕ್ತ ಎಂದು ಘೋಷಿಸಬೇಕು” ಎಂದು ಬಾಘೇಲ್ ಆಗ್ರಹಿಸಿದ್ದಾರೆ.
ಇದನ್ನೂ ಓದಿರಿ: ಅಪ್ಪು ಹೆಸರಲ್ಲಿ ಮುಸ್ಲಿಮರ ವಿರುದ್ಧ ದ್ವೇಶ ಬಿತ್ತಲು ಯತ್ನಿಸಿದ ಪೋಸ್ಟ್‌ಕಾರ್ಡ್; ಜನರಿಂದ ತರಾಟೆ


