ಇತ್ತೀಚೆಗೆ ರಾಜ್ಯದ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಕೋಮು ಸೌಹಾರ್ದ ಕದಡುತ್ತಿರುವ ಹಿನ್ನಲೆಯಲ್ಲಿ, ಸಮಾಜದಲ್ಲಿ ಶಾಂತಿ ಸೌಹಾರ್ದತೆ ಎತ್ತಿ ಹಿಡಿಯುವ ಉದ್ದೇಶದಿಂದ ಮೇ ತಿಂಗಳ 7 ರಂದು ‘ಸಾಮರಸ್ಯ ನಡಿಗೆ’ ಮತ್ತು ‘ರಾಜ್ಯ ಮಟ್ಟದ ಸೌಹಾರ್ದತಾ ಸಮಾವೇಶ’ ನಡೆಯಲಿದೆ ಎಂದು ವರದಿಯಾಗಿದೆ.
ಉಡುಪಿಯಲ್ಲಿ ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಯಾದ ಎಬಿವಿಪಿ ಮತ್ತು ಸಂಘಪರಿವಾರ ಗಲಭೆಯನ್ನು ಹುಟ್ಟು ಹಾಕಲು ಪ್ರಯತ್ನಿಸಿತ್ತು. ಶಾಲಾ ಮಟ್ಟದಲ್ಲಿ ಮುಗಿಯಬಹುದಾಗಿದ್ದ ಹಿಜಾಬ್ ವಿಚಾರವನ್ನು ಬಿಜೆಪಿ ಶಾಸಕ ಮತ್ತು ನಾಯಕರುಗಳು ವಿಶ್ವ ಮಟ್ಟದಲ್ಲಿ ಸುದ್ದಿಯಾಗುವಂತೆ ವಿವಾದವನ್ನಾಗಿ ಮಾಡಿ, ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದ್ದರು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಭೂಮಿ-ವಸತಿ ಸಮಸ್ಯೆಗಳ ಪರಿಹಾರಕ್ಕಾಗಿ ಮಲೆನಾಡಿಗರ ಬೈಕ್ ರ್‍ಯಾಲಿ ಮತ್ತು ಬೃಹತ್ ಪ್ರತಿಭಟನೆ
ಇದರ ನಂತರ ಕೂಡಾ ಕರಾವಳಿ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಹಾಳುಗೆಡವುವಂತಹ ಘಟನೆಗಳು ನಡೆಯುತ್ತಿದ್ದು, ನಾಗರೀಕರನ್ನು ಕಂಗೆಡಿಸಿದೆ. ಹಿಜಾಬ್ ವಿಚಾರವನ್ನೇ ಮುಂದುವರೆಸಿರುವ ಬಿಜೆಪಿ ಬೆಂಬಲಿತ ಸಂಘಟನೆಗಳು ಇತ್ತೀಚೆಗೆ ಜಾತ್ರೆಗಳಿಗೂ ಮುಸ್ಲಿಂ ವ್ಯಾಪಾರಿಗಳು ಬರಬಾರದು ಎಂದು ಬ್ಯಾನರ್‌ಗಳನ್ನು ಕಟ್ಟಿ ಮತ್ತಷ್ಟು ಕೋಮು ಧ್ರುವೀಕರಣ ಮಾಡಿ ಇಸ್ಲಾಮೊಫೊಬಿಯಾವನ್ನು ಹರಡುತ್ತಿವೆ. ಇದನ್ನು ‘ಸಹಬಾಳ್ವೆ ಉಡುಪಿ’ ತಂಡವು ಇತ್ತೀಚೆಗೆ ವಿರೋಧಿಸಿತ್ತು.
ಸೌಹಾರ್ದ ಸಮಾವೇಶದ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿರುವ ‘ಸಹಬಾಳ್ವೆ ಉಡುಪಿ’ ತಂಡದ ಸಂಚಾಲಕ ಅಮೃತ ಶೆಣೈ, “ಉಡುಪಿಯಿಂದ ಹಲವಾರು ವಿವಾದಗಳು ಪ್ರಾರಂಭವಾಗಿದೆ. ಇದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಅವುಗಳೆಲ್ಲವೂ ಬಹುತೇಕ ಸಾಮರಸ್ಯ ಕೆಡಿಸುವಂತ ವಿವಾದ ಹಾಗೂ ವಿಚಾರಗಳಾಗಿವೆ. ಹಾಗಾಗಿ ಶಾಂತಿ, ಸಾಮರಸ್ಯದ ಸಂದೇಶವನ್ನು ಉಡುಪಿಯಿಂದಲೇ ಸಾರಬೇಕು ಎಂಬ ಕಾರಣದಿಂದ ಇದನ್ನು ಹಮ್ಮಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ.
ಕಾರ್ಯಕ್ರಮವನ್ನು ಸಹಬಾಳ್ವೆ ಉಡುಪಿ ಮತ್ತು ಸಮಾನ ಮನಸ್ಕ ಸಂಘಟನೆಗಳ ಅಡಿಯಲ್ಲಿ ಇದನ್ನು ನಡೆಸಲಿದ್ದೇವೆ ಎಂದು ಅಮೃತ್ ಶೆಣೈ ಹೇಳಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಸೌಹಾರ್ಧ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಯಲಿದೆ. ಮುಖ್ಯವಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಹಾಗೂ ರಾಜಕೀಯೇತರ ನಾಯಕರುಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಅಮೃತ್ ಶೆಣೈ ಹೇಳಿದ್ದಾರೆ.
ಇದನ್ನೂ ಓದಿ: ನಾಲ್ಕು ತಿಂಗಳ ನಂತರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ; ಗುಲ್ಬರ್ಗಾದಲ್ಲಿ 1.45, ಮೈಸೂರಿನಲ್ಲಿ 1 ರೂ. ಏರಿಕೆ!


