Homeಕರ್ನಾಟಕ`ಕಾಶ್ಮೀರ್‌ ಫೈಲ್ಸ್‌'ಗೆ ತೆರಿಗೆ ವಿನಾಯಿತಿ ನೀಡುವ ಸಿಎಂಗೆ ‘ಜೇಮ್ಸ್’ ನೆನಪಾಗಲಿಲ್ಲವೇ?: ಸಿದ್ದರಾಮಯ್ಯ ಪ್ರಶ್ನೆ

`ಕಾಶ್ಮೀರ್‌ ಫೈಲ್ಸ್‌’ಗೆ ತೆರಿಗೆ ವಿನಾಯಿತಿ ನೀಡುವ ಸಿಎಂಗೆ ‘ಜೇಮ್ಸ್’ ನೆನಪಾಗಲಿಲ್ಲವೇ?: ಸಿದ್ದರಾಮಯ್ಯ ಪ್ರಶ್ನೆ

- Advertisement -
- Advertisement -

ಪ್ರತಿಯೊಬ್ಬ ಕನ್ನಡಿಗನೂ ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಪ್ರದರ್ಶನವನ್ನು ಬಲವಂತದಿಂದ ನಿಲ್ಲಿಸಿ ‘ಕಾಶ್ಮೀರಿ ಫೈಲ್ಸ್’ ಚಿತ್ರ ಪ್ರದರ್ಶಿಸಲು ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಚಿತ್ರಮಂದಿರಗಳ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, “ಜೇಮ್ಸ್ ಚಿತ್ರದ ನಿರ್ಮಾಪಕರು ನನ್ನನ್ನು ಭೇಟಿಯಾಗಿ ತಿಳಿಸಿದ ವಿಷಯ ಆಘಾತಕಾರಿಯಾದುದು. ಅವರು ತಿಂಗಳುಗಳ ಹಿಂದೆಯೇ ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರಗಳನ್ನು ಬುಕ್ ಮಾಡಿ ಮುಂಗಡ ಹಣವನ್ನೂ ಪಾವತಿಸಿದ್ದಾರೆ. ಚಿತ್ರ ಹೌಸ್ ಪುಲ್ ಆಗಿ ಓಡುತ್ತಿದ್ದರೂ ಪ್ರದರ್ಶನ ನಿಲ್ಲಿಸುವಂತೆ ಬಲವಂತ ಮಾಡುತ್ತಿರುವುದು ಅನ್ಯಾಯ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮಧ್ಯಪ್ರವೇಶಿಸಿ ಜೇಮ್ಸ್ ಚಿತ್ರದ ಪ್ರದರ್ಶನಕ್ಕೆ ತಡೆಯೊಡ್ಡುತ್ತಿರುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನ ನಿಲ್ಲಿಸಲು ನಡೆಯುತ್ತಿರುವ ಹುನ್ನಾರದಲ್ಲಿ ರಾಜ್ಯ ಸರ್ಕಾರವೂ ಷಾಮೀಲಾಗಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

“ಪುನೀತ್ ರಾಜ್ ಕುಮಾರ್ ಅಗಲಿಕೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾದಿಯಾಗಿ ಸಚಿವರು, ಬಿಜೆಪಿ ಶಾಸಕರು ಮತ್ತು ನಾಯಕರು ಕಣ್ಣೀರು ಸುರಿಸಿದ್ದಾರೆ, ಅಪಾರ ಶೋಕ ವ್ಯಕ್ತಪಡಿಸಿದ್ದಾರೆ. ಆ ಎಲ್ಲ ಭಾವನೆಗಳು ಪ್ರಾಮಾಣಿಕವಾದುದೆಂದು ನಾನು ನಂಬಿದ್ದೇನೆ. ಅದನ್ನು ಸಾಬೀತುಪಡಿಸುವ ಕಾಲ ಈಗ ಬಂದಿದೆ” ಎಂದು ಅವರು ಹೇಳಿದ್ದಾರೆ.

“ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡುತ್ತಿರುವುದು ಕೇವಲ ಪುನೀತ್ ರಾಜ್ ಕುಮಾರ್ ಅವರಿಗೆ ಮಾಡುತ್ತಿರುವ ದ್ರೋಹ ಮಾತ್ರವಲ್ಲ ಸಮಸ್ತ ಕನ್ನಡಿಗರಿಗೆ ಮಾಡುತ್ತಿರುವ ಅವಮಾನವೂ ಹೌದು. ಈ ಅನ್ಯಾಯವನ್ನು ಖಂಡಿಸಿ ಕನ್ನಡಿಗರೆಲ್ಲರೂ ಬೀದಿಗೆ ಇಳಿಯುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡರೆ ಒಳಿತು” ಎಂದು ಅವರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಕಾಶ್ಮೀರದ ಈ ಎಲ್ಲಾ ಘಟನೆಗಳು ಮೋದಿ ಪ್ರಧಾನಿಯಾಗಿದ್ದಾಗಲೆ ನಡೆದಿದೆ!

“ಪುನೀತ್ ರಾಜ್ ಕುಮಾರ್ ಇಡೀ ವಿಶ್ವ ಕೊಂಡಾಡುತ್ತಿರುವ ಕನ್ನಡದ ಹೆಮ್ಮೆಯ ನಟ. ನಟನೆಯಿಂದ ಮಾತ್ರವಲ್ಲ ಸದ್ದಿಲ್ಲದೆ ಮಾಡಿದ ಸಮಾಜಮುಖಿ ಕೆಲಸಗಳಿಂದಲೂ ಜನಮನ ಗೆದ್ದಿರುವ ಅಪರೂಪದ ವ್ಯಕ್ತಿ. ಇವರ ಕೊನೆಯ ಚಿತ್ರವನ್ನು ವೀಕ್ಷಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲು ಜನ ಸಿದ್ಧವಾಗಿದ್ದಾರೆ.
ಕಾಶ್ಮೀರಿ ಫೈಲ್ಸ್ ಇರಲಿ, ಇನ್ನೊಂದಿರಲಿ. ಒಂದು ಚಿತ್ರವನ್ನು ಬಲವಂತದಿಂದ ಪ್ರದರ್ಶನ ಮಾಡಿ ಜನ ನೋಡುವಂತೆ ಒತ್ತಡ ಹೇರುವುದು ಸರಿ ಅಲ್ಲ” ಎಂದು ಅವರು ಹೇಳಿದ್ದಾರೆ.

“ಗಾಂಧೀಜಿ ಬಗ್ಗೆಯೂ ಚಿತ್ರ ಬಂದಿದೆ. ಇತ್ತೀಚೆಗೆ ಜೈಭೀಮ್ ಎಂಬ ಚಿತ್ರವೂ ಬಂದಿದೆ. ಅವುಗಳನ್ನು ನೋಡಬೇಕೆಂದು ಯಾರಾದರೂ ಬಲವಂತ ಮಾಡಿದ್ದಾರಾ?” ಎಂದು ಅವರು ಪ್ರಶ್ನಿಸಿದ್ದಾರೆ.

“ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಕನ್ನಡಿಗರೆಲ್ಲರೂ ನೋಡಲು ಪ್ರೋತ್ಸಾಹ ನೀಡಬೇಕಾಗಿತ್ತು. ಕಾಶ್ಮೀರಿ ಫೈಲ್ಸ್ ಎಂಬ ಹಿಂದಿ ಸಿನೆಮಾಕ್ಕೆ ತೆರಿಗೆ ವಿನಾಯಿತಿ ನೀಡುವಾಗ ಕನ್ನಡಿಗನೆಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಕನ್ನಡದ ಜೇಮ್ಸ್ ನೆನಪಾಗಲಿಲ್ಲವೇ? ತೆರಿಗೆ ವಿನಾಯಿತಿಗೆ ಈಗಲೂ ಕಾಲ ಮಿಂಚಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭೂಮಿ-ವಸತಿ ಸಮಸ್ಯೆಗಳ ಪರಿಹಾರಕ್ಕಾಗಿ ಮಲೆನಾಡಿಗರ ಬೈಕ್‌ ರ್‍ಯಾಲಿ ಮತ್ತು ಬೃಹತ್ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾಜಪದವರು ಕಾಶ್ಮೀರಿ ಫ಼ೈಲ್ಸ್ ಚಿತ್ರಕ್ಕೆ ಜನಗಳು ಬರದೇ ಇರೋದು ನೋಡಿ ಹುಚ್ಚರಾಗಿದ್ದಾರೆ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...