ಮೈಸೂರು: “ಆಡಳಿತ ವರ್ಗಕ್ಕೆ ಕಣ್ಣು ಕಿವಿ ಇಲ್ಲವೇ? ನಮ್ಮ ಸಮಸ್ಯೆ ನಮ್ಮ ಹೋರಾಟ ನಿಮಗೆ ಕಾಣಿಸುತ್ತಿಲ್ಲವೆ? ನಮ್ಮ ಸಮಸ್ಯೆಗೆ ಕಿವಿಗೊಟ್ಟು ಆಲಿಸಿ” ಎಂದು ವಜಾಗೊಂಡಿರುವ 21 ಮಂದಿ ಬೋಧಕೇತರ ನೌಕರರು ಆಗ್ರಹಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ 21 ಮಂದಿ ತಾತ್ಕಾಲಿಕ ಬೋಧಕೇತರ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ ನಡೆಯುತ್ತಿರುವ ಮುಷ್ಕರವು 31ನೇ ದಿನಕ್ಕೆ ಮಂಗಳವಾರ ಕಾಲಿಟ್ಟಿದೆ.
ಇಷ್ಟು ದಿನಗಳ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ಆಡಳಿತವರ್ಗದವರು ಕೇಳದೇ ಇರುವುದು ನಮ್ಮನ್ನು ಘಾಸಿಗೊಳಿಸಿದೆ. ಜತೆಗೆ ವಿಶ್ವವಿದ್ಯಾನಿಲಯದ ಕುಲಪತಿಗಳು ನೀಡುತ್ತಿರುವ ತಪ್ಪು ಮಾಹಿತಿಗಳು ನಮಗೆ ನ್ಯಾಯ ದೊರಕುವಲ್ಲಿ ಅಡ್ಡಗಾಲಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಮೊದಲನೇದಾಗಿ ನಮ್ಮ ಮುಷ್ಕರ ಸರ್ಕಾರದ ವಿರುದ್ಧವಿಲ್ಲ. ಸರ್ಕಾರ ನಮ್ಮನ್ನು ಕಳೆದ ಎಂಟು – ಹತ್ತು ಹನ್ನೆರಡು ವರ್ಷಗಳಿಂದ ಕೈಹಿಡಿದು ನಡೆಸಿದೆ. ಬದುಕಿಗಾಗಿ , ಒಂದು ನೌಕರಿಯನ್ನೂ ನೀಡಿದೆ. ಈಗ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯೋರ್ವರ ದ್ವೇಷದ ಆಡಳಿತಕ್ಕೆ ಬಲಿಯಾಗಿ ನಾವು ಬೀದಿಗೆ ಬಿದ್ದಿದ್ದೂ, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲು ಅನು ಶಾಸನಬದ್ಧವಾಗಿ ಮುಷ್ಕರದ ದಾರಿಯನ್ನು ಹಿಡಿದಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ನಮಗೆ ಕಳೆದ ಹನ್ನೆರಡು ತಿಂಗಳಿಂದ ಸಿಗಬೇಕಾಗಿದ್ದ ಸಂಬಳಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ ಹೊರತು ನಮ್ಮ ನೌಕರಿಯನ್ನು ಖಾಯಂಗೊಳಿಸಿ ಎಂದು ಖಂಡಿತ ಕೇಳುತ್ತಿಲ್ಲ ಎಂದು ತಿಳಿಸಿದ್ದಾರೆ.
ಎರಡನೆಯದಾಗಿ ಬೋಧಕೇತರರ ವೇತನ ನೀಡುವ ಸಲುವಾಗಿಯೇ ಸರ್ಕಾರವು ಕಳೆದ ಮಾರ್ಚ್ ತಿಂಗಳಲ್ಲಿ ರೂ. 180.80 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಆದರೆ ಕುಲಪತಿಗಳು ನಮಗೆ ಕೇವಲ 5 ತಿಂಗಳ ಸಂಬಳವನ್ನು ಮಾತ್ರ ನೀಡಿ ಕೈತೊಳೆದುಕೊಂಡಿದ್ದಾರೆ. ಜೊತೆಗೆ ವೇತನ ನೀಡಲು ಮಂಜೂರು ಆಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಲ್ಲಿ ವಯೋಮಿತಿ ಮೀರಿದವರೇ ಹೆಚ್ಚಾಗಿದ್ದೇವೆ. ಬದಲಿ ಉದ್ಯೋಗ ಸಿಗುತ್ತದೆಯೇ? ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕವಾಗಿ ಈಗಾಗಲೇ ಕುಗ್ಗಿರುವ ಅಸ್ವಸ್ಥರಾಗಿ ಅನಾರೋಗ್ಯದಿಂದ ಅಸ್ಪತ್ರೆ ಸೇರುತ್ತಿದ್ದೇವೆ. ಮಾನವೀಯತೆಯಿಂದ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಬೋಧಕೇತರ ಸಿಬ್ಬಂದಿ ಹನುಮಂತಪ್ಪ, “ವಿವಿ ಸ್ಥಾಪನೆಯಾದಾಗಿನಿಂದ ದುಡಿದಿದ್ದೇವೆ. ಅನುದಾನ ಬಿಡುಗಡೆಯಾಗಿದ್ದರೂ ನಮ್ಮ ಸಂಬಳ ಪಾವತಿಸಿಲ್ಲ. ವಿವಿಯಲ್ಲಿ ಬೋಧಕೇತರ ಖಾಯಂ ಸಿಬ್ಬಂದಿಯ ನೇಮಕಾತಿ ನಡೆದಿಲ್ಲ. ಇಲ್ಲಿನವರೆಗೂ ತಾತ್ಕಾಲಿಕವಾಗಿ 21 ಬೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದೆವು. ಆದರೆ ಈಗ ಎಲ್ಲರನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ. ಹೊಸ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅನುಭವಿ ನೌಕರರನ್ನು ವಿವಿ ಹೊರಗಿಡುತ್ತಿರುವುದಕ್ಕೆ ಏತಕ್ಕೆ” ಎಂದು ಪ್ರಶ್ನಿಸಿದರು.
ವಿವಿ ಕುಲಪತಿ ಏನಂತಾರೆ?
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ವಿವಿ ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ, “ಹುದ್ದೆಗಳ ಸೃಜನೆ ಇಲ್ಲದೆ ನೇಮಕಾತಿ ಮಾಡಿಕೊಂಡವರಿಗೆ ಸರ್ಕಾರದ ಹಣ ಕೊಡುವುದಿಲ್ಲ ಎಂಬ ಆದೇಶ ಬಂದಿದೆ. ಕೊರೊನಾ ಬಂದ ಮೇಲೆ ನಮ್ಮಲ್ಲಿ ಹಣದ ಕೊರತೆ ಇದೆ. ಅಭಿವೃದ್ಧಿ ಅನುದಾನವೂ ಇಲ್ಲ” ಎಂದರು.
“ಅಭಿವೃದ್ಧಿ ಅನುದಾನದಲ್ಲಿ ಸಂಬಳವನ್ನು ಕೊಡುವಂತಿಲ್ಲ. ಆದರೆ ಈ ಹಿಂದಿನ ಕುಲಪತಿಗಳು ಕೊಟ್ಟಿದ್ದರು. ಈಗ ಆರ್ಥಿಕ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ ಬಂದಿದೆ. ಹೆಚ್ಚುವರಿ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಸಂಬಳ ಕೊಟ್ಟಿಲ್ಲವೆಂದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್‌ನಲ್ಲಿ ಪ್ರಕರಣವಿದ್ದಾಗಲೂ ಹೋರಾಟ ಮಾಡುತ್ತಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದರು.
“ಕೋರ್ಟ್ ಆದೇಶದಂತೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ. ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ನೇಮಕಾತಿಯ ಸೂಚನೆಯೇ ಇಲ್ಲ. ಈ ಹಿಂದೆ ಇದ್ದ ಕುಲಪತಿಗಳು ಬೋಧಕೇತರ ಸಿಬ್ಬಂದಿಗಳನ್ನಾಗಿ 21 ಜನರನ್ನು ನೇಮಿಸಿದ್ದಾರೆ. ಆದರೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇದೆ. ಈ ಶೈಕ್ಷಣಿಕ ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಸೇರಿ 52 ಮಂದಿ ಮಾತ್ರ ಪ್ರವೇಶ ಪಡೆದಿದ್ದಾರೆ. 25 ಮಂದಿ ಬೋಧಕರಿದ್ದಾರೆ. ಸಣ್ಣಪುಟ್ಟ ಕೆಲಸಗಳಿದ್ದರೆ ಬೋಧಕರೇ ಮಾಡಿಕೊಳ್ಳುತ್ತಾರೆ” ಎಂದು ತಿಳಿಸಿದರು.
ಇದನ್ನೂ ಓದಿರಿ: ರೈಲ್ವೇ ನೇಮಕಾತಿ ಫಲಿತಾಂಶ ವಿರೋಧಿಸಿ ಶುಕ್ರವಾರ ‘ಬಿಹಾರ ಬಂದ್’ಗೆ ವಿದ್ಯಾರ್ಥಿ ಸಂಘಟನೆಗಳ ಕರೆ


