ಕಳೆದ ಕೆಲವು ವರ್ಷಗಳಿಂದ ನನ್ನ ಭಾಗದ ಜಮೀನಿನಲ್ಲಿ ಸುಮಾರು ನೂರೈವತ್ತು ಹಣ್ಣಿನ ಸಸಿ ಮತ್ತು ನೂರು ತೆಂಗಿನ ಸಸಿ ನೆಟ್ಟು, ಡ್ರಿಪ್ ನೀರಾವರಿ ಸಹಾಯದಿಂದ ಬದುಕಿನ ಅಂತ್ಯ ಅರ್ಥಪೂರ್ಣವಾಗುವಂತೆ ಮಾಡತೊಡಗಿದೆ. ಕಳೆದ ಮುಂಗಾರಿನಲ್ಲಿ ರಾಗಿಯನ್ನು ಬಿತ್ತಿದೆ. ರಾಗಿ ಚೆನ್ನಾಗಿ ಬಂದು ಇನ್ನೇನು ಕುಯ್ಯುವ ಸಮಯಕ್ಕೆ ನಿರಂತರವಾಗಿ ಮಳೆ ಹಿಡಿದುಕೊಂಡಿತು. ಇದರಿಂದ ಜವುಗಿಗೆ ಸಿಕ್ಕ ರಾಗಿ ಪೈರು ತೆನೆ ಹೊರಲಾರದೆ ಹೊಲದಲ್ಲಿ ಮಗ್ಗ ಮಲಗಿಬಿಟ್ಟಿತು. ಹೊಲಕ್ಕೆ ಕಾಲಿಟ್ಟರೆ ಬೆರಳ ಸಂದಿ ಕೆಸರು ಮೇಲೆ ಬರುತ್ತಿತ್ತು. ಆದ್ದರಿಂದ ದಡದಲ್ಲಿ ನಿಂತು ಅಸಹಾಯಕನಾಗಿ ಕೈಗೆ ಬಂದ ತುತ್ತು ಮಣ್ಣಾಗುವುದನ್ನು ನೋಡುತ್ತ ನಿಲ್ಲುವಂತಾಯ್ತು. ಮಲಗಿದ್ದ ರಾಗಿ ಪೈರಿನಿಂದ ತೆನೆ ಕಟಾವು ಮಾಡಿಕೊಂಡ ಇಲಿಗಳು ಮತ್ತು ತ್ಲಾಡಗಳು ಹೊಲದ ತುಂಬ ಬಿಲ ತೋಡಿಕೊಂಡು ರಾಗಿ ಸಂಗ್ರಹಿಸತೊಡಗಿದವು. ಇಷ್ಟೊಂದು ಇಲಿ ಬಿಲಗಳನ್ನು ನಾನು ಈವರೆಗೆ ಕಂಡಿರಲಿಲ್ಲ. ಮೊದಲಾಗಿದ್ದರೆ ಮಣ್ಣು ವಡ್ಡರು ಮತ್ತು ಕಲ್ಲು ವಡ್ಡರ ಜೊತೆ ನಾವು ಸೇರಿಕೊಂಡು ಇಲಿ ಬಿಲ ಅಗೆದು ಈಚಲು ದೊಣ್ಣೆಯಿಂದ ಬೀಸಿ ಹೊಡೆದು ಕೊಲ್ಲುತ್ತಿದ್ದೆವು ಮತ್ತು ಅಲ್ಲೇ ಸುಟ್ಟುಕೊಂಡು ತಿನ್ನುತ್ತಿದ್ದೆವು, ಮನೆಗೆ ತಂದು ಸಾರು ಮಾಡುವುದೂ ಇತ್ತು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಇನ್ನ ರಾತ್ರಿವೇಳೆ ಬಂದು ಕಾದು ಕೂತು ಬೇಟೆಯಾಡುವ ಗೂಬೆಗಳಿಂದಲೂ ಇಲಿ ಸಂತತಿಯನ್ನು ನಿಯಂತ್ರಿಸಲಾಗಿಲ್ಲ. ಸಾಮಾನ್ಯವಾಗಿ ಹೊಲದ ಇಲಿಗಳು ದಾಸ್ತಾನು ಸಂಗ್ರಹಿಸುವುದು ರಾತ್ರಿವೇಳೆ. ಅವುಗಳ ಈ ಕೆಲಸಕ್ಕೆ ಅವೇ ಮಾಡಿಕೊಂಡ ರೋಡುಗಳು ಇವೆ. ಈ ಚಟುವಟಿಕೆ ಗಮನಿಸುತ್ತ ಕುಳಿತ ಗೂಬೆ ಸದ್ದಿಲ್ಲದೆ ಬಂದು ಇಲಿಗಳನ್ನು ಅಪಹರಿಸುತ್ತಿದ್ದವು. ಇಲಿಯ ಹತ್ತಿರ ಬಂದರೂ ಈ ಗೂಬೆಗಳ ರಕ್ಕೆ ಸದ್ದು ಮಾಡುವುದಿಲ್ಲವಂತೆ.
ಇದೆಲ್ಲಕ್ಕಿಂತ ಮುಖ್ಯವಾದ ಘಟನೆಯೊಂದನ್ನು ಇಲ್ಲಿ ದಾಖಲಿಸಬೇಕಿದೆ. ಅಂಗರು ಗಿಡ ಅಗೆದು ತೆಗೆಯುತ್ತಿರುವಾಗ ಹೆಬ್ಬಾವಿನ ಗಾತ್ರದ ಮಂಡಲದ ಹಾವು ನಮ್ಮ ಹುಡುಗನ ಗುದ್ದಲಿಗೆ ಸಿಕ್ಕಿತ್ತು. ಸೀಳಿಹೋದ ಅದರೆ ಹೊಟ್ಟೆಯಿಂದ ಮೂರ್ನಾಲ್ಕು ಮರಿಗಳು ದೂರಕ್ಕೆ ಸಿಡಿದವು. ಆಶ್ಚರ್ಯವೆಂದರೆ ಐದೇ ನಿಮಿಷಕ್ಕೆ ಎರಡು ಹದ್ದುಗಳು ಪ್ರತ್ಯಕ್ಷವಾಗಿ ವಿಮಾನ ಇಳಿದಂತೆ ಬಂದು ಮಂಡಲದ ಹಾವಿನ ಮರಿಗಳನ್ನ ಎಗರಿಸಿಕೊಂಡು ಹೋದವು. ನಾನು ದಂಗು ಬಡಿದು ನಿಂತೆ. ಮಂಡಲದ ಹಾವಿನ ಹತ್ಯೆ ಈ ಹದ್ದುಗಳಿಗೆ ತಿಳಿದಿದ್ದು ಹೇಗೆ? ಆಹಾರ ಸರಪಳಿಯ ಜಾಲ ಇನ್ನೆಷ್ಟು ಸೂಕ್ಷ್ಮವಾಗಿರಬೇಕೆಂದು ಆಶ್ಚರ್ಯವಾಯ್ತು. ಈ ಭೂಮಿ ಸಂಬಂಧ ಕೊಡುವ ನೆಮ್ಮದಿ ಅಸಾಧಾರಣವಾದದ್ದು.
ಭೂಮಿಯ ಒಡನಾಟದಲ್ಲಿದ್ದರೆ ಹೊರ ಜಗತ್ತಿನ ಯಾವುದೂ ಬೇಕಾಗುವುದಿಲ್ಲ. ಟಿವಿ ಪತ್ರಿಕೆಗಳೂ ಕೂಡ ನಮ್ಮನ್ನ ಸೆಳೆಯಲಾರವು. ಇಂತಹದ್ದೊಂದು ಜೀವನ ಕ್ರಮಕ್ಕೆ ಮತ್ತೆ ಒಗ್ಗಿಕೊಂಡು ಇರಬೇಕಾದರೆ ತೆಂಗು ಮತ್ತು ಹಣ್ಣಿನ ತೋಟ ನಳನಳಿಸುತ್ತಿತ್ತು. ಇದರೊಳಗೆ ಮಲಗಿದ್ದ ರಾಗಿ ಮುಂದೆ ಗೊಬ್ಬರವಾಗುವದರಲ್ಲಿ ಯಾವ ಸಂಶಯವೂ ಇಲ್ಲ ಎಂದುಸಮಾಧಾನದಿಂದಿರಬೇಕಾದರೆ, ಇದ್ದಕ್ಕಿದ್ದಂತೆ ಜಮೀನಿಗೆ ಬೆಂಕಿ ಬಿದ್ದಿತು. ಅದೆಷ್ಟು ವೇಗವಾಗಿ ಉರಿದು ಬೂದಿಯಾಯ್ತೆಂದರೆ, ನಾಗಮಂಗಲದಿಂದ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಎಲ್ಲವೂ ಸರ್ವನಾಶವಾಗಿತ್ತು. ಹೊಲದಲ್ಲಿ ಒಣಗಿ ಮಲಗಿದ್ದ ರಾಗಿಹುಲ್ಲಿಗೆ ಬಿದ್ದ ಬೆಂಕಿ, ಪೆಟ್ರೋಲ್ ಎರಚಿದೆಯೇನೋ ಎಂಬಂತೆ ವೇಗವಾಗಿ ಹಬ್ಬಿ ಓಡತೊಡಗಿತು. ಹತ್ತಾರು ಮಾರು ದೂರದಲ್ಲಿದ್ದ ಬದುಗಳು ಕೂಡ ಬೆಂಕಿ ರವೆಗೆ ದಿಗ್ಗನೆ ಹತ್ತಿಕೊಳ್ಳುತ್ತಿದ್ದವು. ಕೆಲವು ವಾರಗಳ ಹಿಂದೆ ನಿರಂತರವಾಗಿ ಹೊಡೆದಿದ್ದ ಮಳೆ ದೆಸೆಯಿಂದ, ಹುಲ್ಲು ಚೆನ್ನಾಗಿ ಬೆಳೆದು ಒಣಗಿಕೊಂಡಿತ್ತು.
ಅಗ್ನಿಶಾಮಕ ದಳದವರು ಯಾವ ಆತಂಕವೂ ಇಲ್ಲದೆ ಮಹಜರು ರಿಪೋರ್ಟು ತಯಾರಿಸಿ ಸಹಿ ಪಡೆದರು. ಸಮಾಧಾನದಿಂದ ಎಳನೀರು ಕುಡಿದು ಮುಂದಿನ ಕೃಷಿಯ ಬಗ್ಗೆ ಮುಫತ್ತಾದ ಸಲಹೆಕೊಟ್ಟು ಹೊರಟರು. ಆಗ ಅವರು ಮಾಡಿದ ಮಹಜರಿನ ಕಾಪಿ ಕೇಳಿದೆ. ಮಂಡ್ಯಕ್ಕೆ ಹೋಗಿ ಪಡೆದುಕೊಳ್ಳಿ, ಇನ್ನೆರಡು ದಿನ ಬಿಟ್ಟು ಅಲ್ಲಿಗೆ ಕಳಿಸುತ್ತೇವೆ ಎಂದರು. ಹೀಗಂದು ಅಗ್ನಿಶಾಮಕ ವಾಹನ ಹತ್ತುವ ಮುನ್ನ ಕೈಬಾಯಿ ನೋಡಿದರು, ನಾನು ನಮಸ್ಕಾರ ಹಾಕಿದೆ.
ಮೂರ್ನಾಲ್ಕು ದಿನ ಬಿಟ್ಟು ಮಂಡ್ಯದ ಅಗ್ನಿಶಾಮಕ ಕಚೇರಿಗೆ ಹೋದರೆ ಎಸ್‌ಬಿಐನಲ್ಲಿ ಇನ್ನೂರು ರೂಪಾಯಿ ತುಂಬಿ ಬನ್ನಿ, ಆ ನಂತರ ವರದಿ ಕೊಡುತ್ತೇವೆ ಎಂದರು. ಅಲ್ಲಿ ನನ್ನಂತೆ ಬೆಂಕಿಗೆ ಭೂಮಿಯೊದಗಿಸಿದ್ದ ಇನ್ನಿಬ್ಬರಿದ್ದರು. ಅವರಲ್ಲೊಬ್ಬ ಮೆದೆಗೆ ಬಿದ್ದ ಬೆಂಕಿ ಆರಿಸಲು ಹೋರಾಡಿ ಮುಖ ಕೈಕಾಲನ್ನ ಸುಟ್ಟುಕೊಂಡು ಬಂದಿದ್ದ; ನಡೆಯಲಾರದೆ ಕುಂಟುತ್ತಿದ್ದ. ಅವನನ್ನ ಹತ್ತಿಸಿಕೊಂಡು ಎಸ್‌ಬಿಐ ಶಾಖೆ ಹುಡುಕುತ್ತ ಹೊರಟೆ. ಆಟೊದವನು ನಮ್ಮ ಜೊತೆಯೇ ಹುಡುಕಲು ಸಹಕರಿಸಿ, ಕೊನೆಗೆ ಕಚೇರಿಯ ಬಳಿ ಬಿಟ್ಟು ಹೊರಟುಹೋದ. ಬಸ್‌ಸ್ಟಾಂಡಿನಿಂದ ಅಗ್ನಿಶಾಮಕದಳದ ಆಫೀಸಿಗೆ ಬಿಡಲು ನೂರಿಪ್ಪತ್ತುರೂ ಆಟೋ ಖರ್ಚಾಗಿತ್ತು. ಅಷ್ಟೇ ದುಡ್ಡು ಎಸ್‌ಬಿಐ ಹುಡುಕಲು ಕೊಟ್ಟೆ. ಈಗ ಚಲನ್ ತುಂಬಿದ ನಂತರ, ಅದರ ರಸೀದಿ ಹಿಡಿದು ಅಗ್ನಿಶಾಮಕ ಕಚೇರಿಗೆ ಹೋಗಬೇಕು, ಆನಂತರ ವರದಿ ತೆಗೆದುಕೊಂಡು ಊರಿಗೆ ಹೋಗಬೇಕು. ಇದರ ಬದಲು ನಾಗಮಂಗಲದಲ್ಲಿ ಅಥವಾ ಬೆಂಕಿಬಿದ್ದ ಜಾಗದಲ್ಲೇ ಮಹಜರು ವರದಿಯ ನಕಲನ್ನು ವಿತರಿಸಲು ಇವರಿಗ್ಯಾವ ತೊಂದರೆ ಎಂದು ಯೋಚಿಸುತ್ತ ಆಫೀಸ್ ಒಳಗೇ ನಿಂತೆ. “ಹೊರಗೋಗಿ ಕುತಗಳಿ ಸುಮಾರೊತ್ತಾಗತ್ತೆ” ಎಂದ ಸಿಬ್ಬಂದಿಗೆ ಗದರುವ ಸ್ಥಿತಿಯಲ್ಲಿರಲಿಲ್ಲ. ಆದರೂ ಸಂಯಮದಿಂದ, “ನಾನೂ ಕೂಡ ಡಿಸ್ಟ್ರಿಕ್ಟ್ ಆಫೀಸರಾಗಿದ್ದೆ, ಬಂದವರಿಗೆ ಸಮಾಧಾನವಾಗಿ ಕೂತಗಳಿ ಅಂತ ಹೇಳತಿದ್ದೆ” ಎಂದೆ. ನನ್ನ ಮಾತನ್ನೇನು ಆತ ಕಿವಿಯ ಮೇಲೆ ಹಾಕಿಕೊಳ್ಳದೆ, “ನಮ್ಮ ಈ ವರದಿಯಿಂದ ಪರಿಹಾರ ಸಿಗಲ್ಲ, ನಾವು ಹೋಗಿ ಬಂದಿರೊ ರಿಪೋರ್ಟು ಅಷ್ಟೇ” ಎಂದ. “ಇರ್ಲಿ ವಿಲೇಜ್ ಅಕೌಂಟೆಂಟರಿಗೆ ವರದಿ ಬೇಕಂತೆ ಕೊಡಿ” ಎಂದೆ. ತಾಲೂಕಿನಲ್ಲಿರುವ ಅಗ್ನಿಶಾಮಕದಳ ಬರುವಷ್ಟರಲ್ಲಿ ಎಲ್ಲ ಸುಟ್ಟುಹೋಗಿತ್ತು. ಆ ಬಗೆಗಿನ ವರದಿ ಪಡೆಯಲು ಜಿಲ್ಲೆಗೆ ಅಲೆದಾಡಬೇಕಾದಾಗ ರೈತನಾಗಿ ಬದುಕುವುದು ಎಷ್ಟು ಕಷ್ಟ ಎಂಬುದರ ಜೊತೆಗೆ, ರೈತನ ಬೆಂಗಾವಲಿಗೆ ನಿಂತುಬಿಟ್ಟಿದ್ದ ಪ್ರೊ ನಂಜುಂಡಸ್ವಾಮಿ, ಸುಂದರೇಶ್, ಶಾಮಣ್ಣ ಬಾಬಾಗೌಡ ಪಾಟೀಲರೆಲ್ಲಾ ನೆನಪಿಗೆ ಬಂದು, ಅಯ್ಯೋ ಈಗ ರೈತನ ಪರ ಯಾರೂ ಇಲ್ಲವಲ್ಲ ಅನ್ನಿಸಿತು!
ಇದನ್ನೂ ಓದಿ: ಗಲಭೆಗೆ ಪ್ರಚೋದನೆ: ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸುವಂತೆ ಕೋರ್ಟ್…


