Homeಮುಖಪುಟವೈಧವ್ಯ-ಹೃದಯ ವಿದ್ರಾವಕ ಆಯಿತೇಕೆ?

ವೈಧವ್ಯ-ಹೃದಯ ವಿದ್ರಾವಕ ಆಯಿತೇಕೆ?

- Advertisement -
- Advertisement -

ಮಾರ್ಚ್ 8ರಂದು ‘ಮಹಿಳಾ ದಿನಾಚರಣೆ’ ಒಂದು ಸಾಧಾರಣ ದಿನವಾಗಿ ಕಳೆದು ಹೋಗಿದೆ. ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ ಮಾರ್ಚ್ 13ರಂದು ವಿಶ್ವ ಮಹಿಳಾ ದಿನಾಚರಣೆ ಮತ್ತು ಅಫ್ರಾ ಬೆನ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಿತು. ತಾಯಂದಿರ ‘ಪಾದಪೂಜೆ’ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಚಿವ ನಾರಾಯಣಗೌಡ ಸಲಹೆ ನೀಡಿದರು. ಮಹಿಳಾ ಮುಖ್ಯಮಂತ್ರಿ ಯಾಕಾಗಬಾರದೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜ ಅವರು ಪ್ರಶ್ನಿಸಿದರು. ಮಹಿಳೆ ಮೊದಲು ಸುಶಿಕ್ಷಿತಳಾಗಬೇಕು; ಆರ್ಥಿಕ ಸ್ವಾತಂತ್ರ್ಯ ಹೊಂದಬೇಕು; ಸ್ವಾವಲಂಬಿ ಆಗಬೇಕೆಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ದರಾಜು ಅವರು ಕರೆಕೊಟ್ಟರು. ಆದರೆ, ಸಮಾಜಕ್ಕೆ ಹೊರೆಯಂತೆ, ಕುಟುಂಬಕ್ಕೆ ಅಪವಿತ್ರದಂತೆ ಪರಿಭಾವಿಸುವ ವಿಧವೆಯರನ್ನು ಯಾರೂ ಸ್ಮರಿಸಲೇ ಇಲ್ಲವಲ್ಲ ಎಂಬ ಕೊರಗು ನನ್ನಲ್ಲಿ ಕಾಡುತ್ತಿತ್ತು.

ಅನಾದಿಕಾಲದಿಂದಲೂ ‘ವೈಧವ್ಯ’ಕ್ಕೆ ಒಳಗಾದ ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತಿದೆ. ಇವತ್ತಿಗೂ ತಲೆಕೂದಲು ಬೋಳಿಸಿ, ಕುಂಕುಮ ತೆಗೆದು, ಬಳೆ ಒಡೆದು ತೀರಾ ನಿರ್ಬಂಧಗಳನ್ನು ಹೇರಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಮೊದಲಿದ್ದಷ್ಟು ವಿಕೃತಿ, ಕ್ರೌರ್ಯ ಈಗ ಕಡಿಮೆಯಾಗಿದ್ದರೂ, ಅವರ ಬದುಕಿನ ಬವಣೆ ಹಾಗೆಯೇ ಉಳಿದಿದೆ. ಧಾರ್ಮಿಕ, ಸಾಂಪ್ರದಾಯಿಕ ಕಾರ್ಯಚಟುವಟಿಕೆಯಲ್ಲಿ ಅವರು ಇಂದಿಗೂ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ರಕ್ಷಿಸಿ ಪೋಷಿಸುವ ಕಾಶಿ, ಮಥುರಾ, ಬೃಂದಾವನಗಳಲ್ಲಿ ಅಕ್ರಮ, ಅನ್ಯಾಯ, ಲೈಂಗಿಕ ಶೋಷಣೆಗಳು ಜರುಗಿವೆ. ‘ವೈಧವ್ಯ’ ಸಹಿಸಲಾಗದಷ್ಟು ಬಹುದೊಡ್ಡ ಶಾಪ. ಮಹಿಳೆಯನ್ನು ಅವಮನಿಸುವ ಇದಕ್ಕಿಂತ ದೊಡ್ಡ ಬೈಗುಳ ಮತ್ತೊಂದಿಲ್ಲ.

ವಿಧವೆಯರು ಮತ್ತವರ ಮಕ್ಕಳನ್ನು ನಿಂದಿಸುವುದು ಅತ್ಯಂತ ಗಂಭೀರವಾದ ಮನವ ಹಕ್ಕುಗಳು ಉಲ್ಲಂಘನೆ. ನಮ್ಮ ದೇಶದಲ್ಲಿ ವಿಧವೆಯರೊಂದಿಗೆ, ಅವರ ಮಕ್ಕಳು ಕೂಡ ನಾನಾ ಬಗೆಯ ಕಠಿಣ ಸಮಸ್ಯೆಗಳನ್ನು
ಎದುರಿಸುತ್ತಿದ್ದಾರೆ. ಅಂತಹವುಗಳಲ್ಲಿ ಹಸಿವು, ಹಿಂಸೆ, ತಾರತಮ್ಯ, ಅನಾರೋಗ್ಯ, ವಸತಿ, ಕಾನೂನುಬದ್ಧ ಹಕ್ಕುಗಳ ನಿರಾಕರಣೆಯೂ ಒಳಗೊಂಡಿದೆ.

ಓರ್ವ ಬಾಲವಿಧವೆಯ ಮಗನಾಗಿ ಅನುಭವಿಸಿದ ಸಂಕಷ್ಟಗಳ ಚಿತ್ರಣದಲ್ಲಿ ಕೆಲವನ್ನಷ್ಟೆ ನಿಮ್ಮ ಮುಂದಿಟ್ಟಿರುವೆ. ನನಗರಿವಿಲ್ಲದೆ, ಗಮನಕ್ಕೆ ಬಾರದ ಇನ್ನೂ ಸಾಕಷ್ಟು ಚಿತ್ರಣಗಳಿರಬಹುದು. ನಮ್ಮಲ್ಲಿನ ಆಡಳಿತಗಾರರ ‘ನಿರ್ಲಕ್ಷ್ಯ ಮನೋಭಾವ’, ಪೂರ್ವಾಗ್ರಹದಿಂದಾಗಿ ವಿಧವೆಯರ ಕುರಿತ ಅಂಕಿ-ಅಂಶಗಳ ಕೊರತೆ ಇದೆ. ಇದರೊಂದಿಗೆ ಸಮಾಜಸೇವಾ ಸಂಘಟನೆಗಳ ಪದಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಡೆಗಾಣಿಸುವಿಕೆಯಿಂದಲೂ ನಮ್ಮ ದೇಶದಲ್ಲಿ ವಿಧವೆಯರ ಸಂಕಷ್ಟ ಸಂಪೂರ್ಣವಾಗಿ ಅನಾವರಣಗೊಂಡಿರುವುದಿಲ್ಲ.

ಇಷ್ಟಕ್ಕೂ ಕಾನೂನುಬದ್ಧವಾಗಿ ವಿವಾಹವಾದ ಮಹಿಳೆ ಪತಿಯನ್ನು ಕಳೆದುಕೊಂಡ ನಂತರದ ಆಕೆಯ ಸ್ಥಿತಿಯನ್ನು ‘ವೈಧವ್ಯ’ ಎನ್ನುವರು. ವೈಧವ್ಯಕ್ಕೊಳಗಾದ ಮಹಿಳೆ ಯಾವುದೇ ವಯೋಮನದವರಾಗಿರಲಿ, ಅವರನ್ನು ‘ವಿಧವೆ’ ಎಂದೇ ಕರೆಯುವರು.

‘ವೈಧವ್ಯ’ ಎಂಬುದು ಒಂದು ಸಂಬಂಧದ ಅಂತ್ಯವನ್ನು ಸೂಚಿಸುತ್ತದೆ. ಇದು ಶಾಶ್ವತವಲ್ಲ. ‘ವೈಧವ್ಯ’ಕ್ಕೆ ಒಳಗಾದವರು ಚಿಕ್ಕ ವಯಸ್ಸಿನ ಯುವತಿಯಾಗಿದ್ದರೆ, ಪುನರ್ವಿವಾಹವಾಗಿ ‘ವೈಧವ್ಯ’ವೆಂಬ ಕಳಂಕದಿಂದ ಹೊರಬರಬಹುದಾಗಿದೆ. ಒಂದೊಮ್ಮೆ ‘ವೈಧವ್ಯ’ಕ್ಕೆ ಒಳಗಾದ ಹೆಣ್ಣು ಸುಶಿಕ್ಷಿತಳಾಗಿದ್ದರೆ ಅಥವಾ ಆಕೆಯ ಮಕ್ಕಳು ಉದಾರವಾಗಿದ್ದರೆ ಪುನರ್ವಿವಾಹ ಆಗಬಹುದಾಗಿದೆ. ಅಕ್ಷರದಿಂದ ವಂಚಿತಳಾಗಿ, ಪುನರ್ವಿವಾಹ ಆಗದೆ, ಮಕ್ಕಳಿಗಾಗಿ ಜೀವನಪೂರ್ತಿ ನಿಂದನೆ ಸಹಿಸಿಕೊಂಡು, ಒಂಟಿ ಬದುಕು ಸಾಗಿಸುವುದೆಂದರೆ ಸುಮ್ಮನೆ ಮಾತಲ್ಲ.

‘ವಿಧವೆ’ಯರ ಮೇಲೆ ಇಂದಿಗೂ ಮೂರು ಮಾದರಿಯ ಕಳಂಕದ ಹೊರೆ ಇದೆ. ಅದು ಅವರ ಸ್ಥಾನಮಾನ ಕುರಿತಂತಿರುವ ಕಳಂಕ. ಅವರು ಸಂಪನ್ಮೂಲಗಳನ್ನು ಪಡೆಯಲು ಮತ್ತು ಲೈಂಗಿಕ ಸುಖ ಪಡೆಯಲು ಬಹಳಷ್ಟು ನಿರ್ಬಂಧಗಳನ್ನು ಎದುರಿಸಬೇಕಿದೆ. ಅನೇಕ ಭಾಗಗಳಲ್ಲಿ ‘ವಿಧವೆ’ಯರು ಪುರುಷರೊಂದಿಗೆ ನಿಕಟ ಸಂಬಂಧವನ್ನು ಬಯಸುವುದಿಲ್ಲ. ಮರುಮದುವೆಯನ್ನು ಆಗುವುದಿಲ್ಲ. ಪತಿ ಸತ್ತನಂತರ, ಪುನರ್ವಿವಾಹ ಆಗಬಹುದೆಂದು ಋಗ್ವೇದಲ್ಲಿಯೇ ಇದೆ. ಆದರೆ, ಗಂಡ ಕೆಟ್ಟವನಿರಲಿ, ಇರದಿರಲಿ, ಅವನೊಂದಿಗೆ, ಅವನ ಸ್ಮರಣೆಯಲ್ಲಯೇ ಇರಬೇಕೆಂದು ಸಮಾಜ ಬಯಸುತ್ತದೆ. ಒಂದೊಮ್ಮೆ ಮರುಮದುವೆಯಾದರೆ ಆಗ ‘ಕುಲಟಿ’, ‘ಗಂಡುಬೀರಿ’ ಎಂಬ ವಿಶೇಷಣಗಳನ್ನು ಹೊರಬೇಕಾಗುತ್ತದೆ. ಇವೆಲ್ಲ ‘ಲಿಂಗ ಅಸಮಾನತೆ’ಯಿಂದಾಗಿಯೂ ‘ವಿಧವೆ’ಯರನ್ನು ಅತ್ಯಂತ ಅಂಚಿನಲ್ಲಿರುವ ಮತ್ತು ದುರ್ಬಲ ಸಮುದಾಯಗಳಲ್ಲಿ ಒಂದನ್ನಾಗಿ ಮಾಡುತ್ತದೆ. ಇದೇ ಕಳಂಕದ ಹೊರೆ ಪುರುಷರಿಗೆ ಅನ್ವಯಿಸುವುದಿಲ್ಲ. ಪತ್ನಿ ಗತಿಸಿದರೂ ಇವರ್‍ಯಾರು ‘ಆರ್ಥಿಕ’ ಮತ್ತು ‘ಸಾಮಾಜಿಕ ಬಹಿಷ್ಕಾರ’ಕ್ಕೆ ಒಳಗಾಗುವುದಿಲ್ಲ. ಹೀಗಾಗಿಯೇ ಗಂಡ ಸತ್ತರೆ ಹೆಂಡತಿ ಆಗುವಳು ವಿಧವೆ; ಹೆಂಡತಿ ಸತ್ತರೆ ಗಂಡ ಆಗುವನು ಮದುವೆ ಎಂಬ ಮಾತು ಪ್ರಚಲಿತದಲ್ಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50₹100 ₹500 ₹1000 Others

2011ರ ಜನಗಣತಿಯ ಪ್ರಕಾರ ನಮ್ಮ ದೇಶದಲ್ಲಿ 5.6 ಕೋಟಿ ವಿಧವೆಯರಿದ್ದಾರೆ. 2016ರಂತೆ 40 ಮಿಲಿಯನ್ ವಿಧವೆಯರಿದ್ದಾರೆ. ‘ವೈಧವ್ಯ’ ಅನುಭವಿಸುತ್ತಿರುವವರ ಸಂಖ್ಯೆಯಲ್ಲಿ ಶೇಕಡ 78ರಷ್ಟು ಮಹಿಳೆಯರೇ ಆಗಿರುತ್ತಾರೆ. ಉಳಿಕೆ ಶೇಕಡ 22ರಷ್ಟು ಮಾತ್ರ ವಿಧುರರಿದ್ದಾರೆ. 2001ರಿಂದ 2011ರ ನಡುವೆ ಸುಮರು 89.71 ಲಕ್ಷ ‘ವಿಧವೆ’ಯರು ಪಟ್ಟಿಯಲ್ಲಿ ಸೇರಿದ್ದಾರೆ.

‘ವೈಧವ್ಯ’ಕ್ಕೊಳಗಾದವರಲ್ಲಿ ‘ಲಿಂಗ ಅಸಮಾನತೆ’ಯನ್ನು ಬಹುತೇಕ ಅಂಶಗಳು ವಿವರಿಸುತ್ತವೆ. ಅವುಗಳಲ್ಲಿರುವಂತೆ, ಪುರುಷರಿಗಿಂತ ಮಹಿಳೆಯರು ಹೆಚ್ಚು ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ. ನಮ್ಮ ದೇಶದಲ್ಲಿ 2001ರಿಂದ 2005ರವರೆಗೆ ಜೀವಿತಾವಧಿಯನ್ನು ಗಮನಿಸಿದಾಗ ಪುರುಷರಿಗೆ 62.3 ವರ್ಷಗಳು, ಮಹಿಳೆಯರಿಗೆ 63.9 ವರ್ಷಗಳಷ್ಟಿದೆ. 2011ರಿಂದ 2015ರವರೆಗೆ ಇದನ್ನು ಗಮನಿಸಿದಾಗ ಕ್ರಮವಾಗಿ 67.3 ವರ್ಷಗಳು ಮತ್ತು 69.6 ವರ್ಷಗಳಷ್ಟು ಏರಿಕೆಯಾಗಿದೆ. ಇದಲ್ಲದೆ ತಮ್ಮ ಗಂಡನಿಗಿಂತ ಮಹಿಳೆಯರು ವಯಸ್ಸಿನಲ್ಲಿ ಚಿಕ್ಕವರಾಗಿರುತ್ತಾರೆ. ಇದರಿಂದ, ತಮ್ಮ ಸಂಗಾತಿಯ ಸೇವೆ ಸಲ್ಲಿಸುವ ಸಂಭವಗಳು ಹೆಚ್ಚಿರುತ್ತವೆ.

ಅಮೆರಿಕದಲ್ಲಿ 2.5 ಮಿಲಿಯನ್ ಪುರುಷ ವಿಧುರರಿದ್ದಾರೆ. ಇದಕ್ಕಿಂತ 4 ಪಟ್ಟು ಹೆಚ್ಚು ಮಹಿಳೆಯರು ವಿಧವೆಯರಾಗಿದ್ದಾರೆ. 1999ರಲ್ಲಿ ಶೇಕಡ 8.9ರಷ್ಟು ಪುರುಷರು ವಿಧುರರಾಗಿದ್ದರು. ಶೇಕಡ 10.5ರಷ್ಟು ಮಹಿಳೆಯರು ‘ವಿಧವೆ’ಯರಾಗಿದ್ದರು. ಇದರಲ್ಲೂ ಕಪ್ಪು ಮತ್ತು ಬಿಳಿ ವರ್ಣದ ಮಹಿಳೆಯರನ್ನು ಪ್ರತ್ಯೇಕಿಸಿ ಕಂಡಾಗ ಶೇಕಡ 37.9ರಷ್ಟು ಕಪ್ಪು ಮಹಿಳೆಯರು ಜೀವನಪೂರ್ತಿ ಮದುವೆಯನ್ನೇ ಆಗಿರುವುದಿಲ್ಲ.

ಇನ್ನೂ ಜನಗಣತಿಯ ಅಂಕಿ-ಅಂಶಗಳ ಪ್ರಕಾರ ‘ವಿಧವೆ’ಯರನ್ನು ವಯೋಮಾನದ ಆಧಾರದ ಮೇಲೆಯೂ ನೋಡಬಹುದಾಗಿದೆ. ‘ವಿಧವೆ’ಯರ ಒಟ್ಟು ಸಂಖ್ಯೆಯಲ್ಲಿ 10ರಿಂದ 19 ವರ್ಷದ ‘ಬಾಲವಿಧವೆ’ಯರ ಸಂಖ್ಯೆ ಶೇಕಡ 0.45ರಷ್ಟಿದೆ. 20ರಿಂದ 35 ವರ್ಷದವರು ಶೇಕಡ 9.0ರಷ್ಟಿದ್ದಾರೆ. 40ರಿಂದ 59 ವರ್ಷದವರು ಶೇಕಡ 32ರಷ್ಟಿದ್ದಾರೆ. 60 ವರ್ಷಕ್ಕೂ ಮೇಲ್ಪಟ್ಟವರು ಶೇಕಡ 58ರಷ್ಟಿದ್ದಾರೆ.

2019ರಲ್ಲಿ ಅಂದಾಜಿಸಿದಂತೆ ನಮ್ಮ ದೇಶದಲ್ಲಿ 44 ಮಿಲಿಯನ್ ವಿಧವೆಯರಿದ್ದಾರೆ. ಇಂದಿನ ದಿನಮಾನಗಳಲ್ಲಿ ಅವಿಭಕ್ತ ಕುಟುಂಬದ ಪರಿಕಲ್ಪನೆ ನಾಶವಾಗುತ್ತಿರುವುದರಿಂದ ‘ವಿಧವೆ’ಯರು ತಾವೇ ಮನೆಬಿಟ್ಟು ಹೊರಬರುತ್ತಿದ್ದಾರೆ. ಕೆಲವೆಡೆ ಅವರ ಕುಟುಂಬವರ್ಗವೇ ಅವರನ್ನು ಮನೆಯಿಂದಾಚೆಗೆ ಹಾಕಲಾಗುತ್ತಿದೆ. ಆಗ ಅನಿವಾರ್ಯವಾಗಿ ‘ಬೃಂದಾವನ’ದ ಪಾಲಾಗುತ್ತಿದ್ದಾರೆ.

ದೆಹಲಿಯಿಂದ ಬೃಂದಾವನಕ್ಕೆ 2 ಗಂಟೆಗಳ ಪಯಣ. ಇಲ್ಲಿನ ‘ಶ್ರೀಕೃಷ್ಣ’ ಇವರುಗಳ ಆಕರ್ಷಣೆ. ‘ದಾನದ’ ಮೇಲೆ ಇವರ ಬದುಕು ಅವಲಂಬಿತವಾಗಿದೆ. ತಮ್ಮ ಹಸಿವು ನೀಗಿಸಿಕೊಳ್ಳಲು ‘ಭಜನೆ’ಯ ಮೊರೆ ಹೋಗುತ್ತಾರೆ. ಇಲ್ಲಿ ವಿಧವೆಯರು ಧರ್ಮದ ಮೇಲೆ ಅವಲಂಬಿತರಾಗಿದ್ದಾರೆ. ಧರ್ಮದಲ್ಲಿ ಸಾಂತ್ವನವನ್ನು ಹುಡುಕುವಾಗ ಅಕ್ಷರಶಃ ಅವರು ಭೋಜನಕ್ಕಾಗಿ ಹಾಡುತ್ತಾರೆ. ಇಲ್ಲಿ ನೆಲೆಸಿರುವ ‘ವಿಧವೆ’ಯರು ಭಜನಾ ಆಶ್ರಮಗಳಿಗೆ ಪ್ರಾರ್ಥನೆಯನ್ನು ಪಠಿಸಲು ಹೋಗುತ್ತಾರೆ. ಅಲ್ಲಿ 10 ರೂಪಾಯಿಯಷ್ಟು ಮಲ್ಯದ ದಿನಸಿಗಳನ್ನು ದಾನವಾಗಿ ಪಡೆದು ತರುತ್ತಾರೆ. ಇವರ ಬಳಿ ಆಧಾರ್, ಬ್ಯಾಂಕ್ ಖಾತೆ ಸೇರಿದಂತೆ ಇನ್ನಿತರ ದಾಖಲೆಗಳು ಲಭ್ಯವಿಲ್ಲವಾದ್ದರಿಂದ ಇವರು ಪಡಿತರ ಚೀಟಿಯನ್ನು ಹೊಂದಿರುವುದಿಲ್ಲ. ವೃದ್ಧಾಪ್ಯ ಅಥವಾ ವಿಧವಾ ವೇತನವನ್ನು ಪಡೆಯುತ್ತಿರುವುದಿಲ್ಲ. ಪ್ರಾರ್ಥನೆಯ ಜೀವನದಲ್ಲಿ ದಾನದಿಂದ ಬದುಕು ನಡೆಸುತ್ತಿದ್ದಾರೆ. ಇನ್ನೂ 2006ರ ಬಾಲ್ಯ ವಿವಾಹ ನಿಷೇಧ  ಕಾಯ್ದೆಯ ಹೊರತಾಗಿಯೂ ನಮ್ಮಲ್ಲಿ 1.94 ಲಕ್ಷ ‘ಬಾಲವಿಧವೆ’ಯರಿರುವುದು ನಿಜಕ್ಕೂ ಕಳವಳಪಡುವ ವಿಚಾರವಾಗಿದೆ.

ಹೀಗೆ ‘ವಿಧವೆ’ಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ‘ವೈಧವ್ಯ’ ಕುರಿತ ಧೋರಣೆ ಕೂಡ ಬದಲಾಗುತ್ತಿದೆ. ‘ವೈಧವ್ಯ’ದ ಹೆಸರಲ್ಲಿ ವಿಧವೆಯರನ್ನು ಹತ್ತಿಕ್ಕುವ ಧೋರಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿರುವಂತೆ ಭಾಸವಾಗುತ್ತಿದೆ. ಇವರುಗಳಲ್ಲಿ ಬೆರಳೆಣಿಕೆಯಷ್ಟು ಜನ ಉದ್ಯೋಗದಲ್ಲಿದ್ದಾರೆ. ಸಭೆ-ಸಮಾರಂಭಗಳಲ್ಲಿಯೂ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಾಜದ ಮುಖ್ಯ ವಾಹಿನಿಯಲ್ಲಿ ಮಿಳಿತವಾಗುವ ಸಂಭವವಿದೆ.

ಇನ್ನೂ ವಿಧವೆಯರು ದಾನದಿಂದ ಮತ್ರ ಬದುಕಬೇಕಿಲ್ಲ. ಹೋರಾಟ ಮಾಡಿಯೂ ಬದುಕಬಹುದೆಂಬುದನ್ನು ರಾಜಸ್ತಾನದ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಇಲ್ಲಿನ ಪೂಜಾ ಎಂಬಾಕೆ ಮದುವೆಯಗಿ 5 ವರ್ಷಕ್ಕೆ ಎರಡು ಮಕ್ಕಳನ್ನು ಹೆತ್ತು ವೈಧವ್ಯಕ್ಕೆ ಒಳಗಾದರು. ಅನಕ್ಷರಸ್ಥಳಾದ ಪೂಜಾಳನ್ನು ಪತಿಯ ಅಣ್ಣ-ತಮ್ಮಂದಿರು ಹೊರಹಾಕಿದರು. ಪತಿಯ ಆಸ್ತಿಯಲ್ಲಿ ಪಾಲು ಕೊಡಿ ಎಂದು ದುಂಬಾಲು ಬಿದ್ದರೂ ಪ್ರಯೋಜನವಾಗಲಿಲ್ಲ. ಕಡೆಗೆ ಒಂಟಿ ಮಹಿಳೆಯರ ಪರ ಕಾರ್ಯನಿರ್ವಹಿಸುವ ‘ಏಕ್ ನಾರಿ ಶಕ್ತಿ ಸಂಘಟನೆ’ಯ ಮೂಲಕ ಕಾನೂನು ಹೋರಾಟ ಮಾಡಿ ಪಾಲು ಪಡೆದಿದ್ದಾರೆ.

ವಿಧವೆಯರು ಆರ್ಥಿಕವಾಗಿ ಸ್ವತಂತ್ರಳಾಗಬೇಕೆಂಬುದನ್ನು ಪೂಜಾ ತೋರಿಸಿಕೊಟ್ಟಿದ್ದಾರೆ. ಇವರು ‘ಏಕ್ ನಾರಿ ಶಕ್ತಿ ಸಂಘಟನೆ’ ಸೇರಿ ಒಂಟಿ ಮಹಿಳೆಯರ ಪರ ಧ್ವನಿ ಎತ್ತಿ ‘ಸಬಲೀಕರಣ’ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ‘ನರೇಗಾ’ ಯೋಜನೆಯಡಿ ದೊರಕುವ ಸೌಲಭ್ಯಗಳನ್ನು ಸಂತ್ರಸ್ತೆಯರಿಗೆ ಕೊಡಿಸಿ ಕೊಡುತ್ತಿದ್ದಾರೆ. ನರೇಗಾ ಕಾರ್ಡುಗಳನ್ನು ಮೊದಲು ಕುಟುಂಬದ ಹೆಸರಲ್ಲಿ ನೀಡಲಾಗುತ್ತಿತ್ತು. ಪತಿಯ ಅಗಲಿಕೆಯಿಂದ ಕಂಗಾಲಾದ ಮಹಿಳೆಯರ ನೋವು ಕಂಡು ‘ಏಕ್ ನಾರಿ ಶಕ್ತಿ ಸಂಘಟನೆ’ ಧ್ವನಿ ಎತ್ತಿ ಪ್ರತ್ಯೇಕ ಉದ್ಯೋಗ ಕಾರ್ಡುಗಳನ್ನು ವಿತರಿಸುವಂತೆ ನೋಡಿಕೊಂಡಿದೆ. ಇದರೊಂದಿಗೆ ವಿಧವೆಯರು ಮತ್ತವರ ಮಕ್ಕಳು ಸ್ವತಂತ್ರ ಕೌಟುಂಬಿಕ ಘಟಕವೆಂದು ಪರಿಗಣಿಸಲು 2009ರಲ್ಲಿ ಸರ್ಕಾರಿ ಆದೇಶ ಹೊರತರುವಲ್ಲಿಯೂ ಶ್ರಮಿಸಿದೆ. ಹೀಗಾಗಿ ವಿಧವೆಯರು ತವರು ಮನೆಯಲ್ಲಿರಲಿ ಅಥವಾ ಗಂಡನ ಮನೆಯಲ್ಲಿರಲಿ ಅವರಿಗೆ ಪ್ರತ್ಯೇಕ ಕಾರ್ಡ್‌ಗಳನ್ನು ನೀಡಬೇಕಿದೆ. ಒಂದು ವೇಳೆ ಪಡಿತರ ಚೀಟಿ ಇಲ್ಲದಿದ್ದರೂ ಪ್ರತ್ಯೇಕ ಉದ್ಯೋಗ ಕಾರ್ಡ್ ಒದಗಿಸಿಕೊಡಬೇಕಿದೆ.

ಇದರ ನಡುವೆ, ಜನಗಣತಿ ನಡೆಸುವಾಗ ವಿಧವೆಯ ಸ್ಥಿತಿ ಮತ್ತು ಸಾಮಾಜಿಕ ರಕ್ಷಣೆ ಹಾಗೂ ಸಬಲೀಕರಣ ನಿಬಂಧನೆಗಳನ್ನು ಪ್ರವೇಶಿಸುವಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿಶ್ವಾಸಾರ್ಹ, ವಿಶ್ಲೇಷಣಾತ್ಮಕ ಅಧ್ಯಯನಗಳು ನಡೆದಿಲ್ಲ. ಹೀಗಾಗಿ ವಿಧವೆಯರ ಕುರಿತಂತೆ ಯಾವುದೇ ಇತರ ಅಂಕಿ-ಅಂಶಗಳು ಇಲ್ಲವಾದ್ದರಿಂದ ಪ್ರಸ್ತುತ ವಿಶ್ಲೇಷಣೆಯು ಜನಗಣತಿಯ ಅಂಕಿ-ಅಂಶವನ್ನು ಆಧರಿಸಿದೆ. ಆದಾಗ್ಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡಾಗ ವಿಧವಾ ವೇತನವನ್ನು 200 ರೂ.ಗಳಷ್ಟು ಏರಿಸಿದ್ದಾರೆ. ಆದರೆ, ಹಲವು ರಾಜ್ಯಗಳಲ್ಲಿ ವಿಧವಾ ವಿವಾಹ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವರ ಮಕ್ಕಳ ವಿವಾಹಕ್ಕೂ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ‘ನರೇಗಾ’ ಯೋಜನೆಯಡಿ ಜೀವಿತಾವಧಿಯವರೆಗೂ ಕನಿಷ್ಠ 100 ದಿನಗಳ ಉದ್ಯೋಗ ಅವಕಾಶಗಳನ್ನು ನೀಡಲಾಗಿದೆ.

ಹೀಗಾಗಿಯೇ ಹಲವೆಡೆ ವೈಧವ್ಯಕ್ಕೆ ಒಳಗಾದ ಮಹಿಳೆಯರಿಗೆ ಶೇ.10ರಿಂದ 15ರಷ್ಟು ಉದ್ಯೋಗ ಕಾರ್ಡುಗಳು ಹೆಚ್ಚುವರಿಯಗಿ ಲಭ್ಯವಾಗಿವೆ. ನರೇಗಾ ಯೋಜನೆಯಡಿ ಇವರುಗಳ ಉದ್ಯೋಗದ ಪ್ರಮಾಣವು ಹೆಚ್ಚಾಗಿದೆ. ಇಲ್ಲಿರುವ ಶೇ.69ರಷ್ಟು ಉದ್ಯೋಗ ಕಾರ್ಡುಗಳಲ್ಲಿ 95 ಲಕ್ಷ ಉದ್ಯೋಗ ಕಾರ್ಡುಗಳನ್ನು ಮಹಿಳೆಯರು ಬಳಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಸರಾಸರಿ ಶೇ.49ಕ್ಕಿಂತ ಅಧಿಕ ಮಹಿಳೆಯರು ‘ನರೇಗಾ ಯೋಜನೆ’ಯಡಿ ಸೌಲಭ್ಯ ಪಡೆದಿದ್ದಾರೆ.

ಇವರುಗಳು ಒಂದಾಗಿ ಸಂಘಟಿತರಾದರೆ ಯಾರೂ ಮೋಸಗೊಳಿಸಲು ಸಾಧ್ಯವಿಲ್ಲ. ಏಕ್ ನಾರಿ ಶಕ್ತಿ ಸಂಘಟನೆಯಂತಹ ‘ವನಿತಾ ಸೇವಾ ಸಮಾಜ’ ಧಾರವಾಡದಲ್ಲಿತ್ತು. ‘ಸರಸ್ವತಿ’ ಎಂಬ ಮಾಸಪತ್ರಿಕೆ ಕೂಡ ವಿಧವೆಯರ ಆಕ್ರಂದನವನ್ನು ಅನಾವರಣ ಮಾಡುತ್ತಿತ್ತು. ಇದೀಗ ಇಂತಹ ಸಂಘಟನೆ, ಪತ್ರಿಕೆಗಳ ಕೊರತೆ ಇದೆ. ಕೊರತೆಯಿಂದಾಗಿಯೇ ವಿಧವೆಯರ ಬದುಕು ಹಸನಾಗುತ್ತಿಲ್ಲ. ಇವರುಗಳಿಗೆಂದು ರೂಪಿಸಿರುವ ಯೋಜನೆಗಳು ದುರುಪಯೋಗವಾಗುತ್ತಿದೆ. ಆಶಾದಾಯಕ ಯೋಜನೆಗಳು ಹೊಸದಾಗಿ ಬರುತ್ತಿಲ್ಲ. ಜೊತೆಗೆ ಇಂದಿನ ಮಧ್ಯಮಗಳ ‘ಆದ್ಯತೆ’ ಬದಲಾಗಿರುವುದರಿಂದ ರಂಗಮ್ಮ ಅಂತಹವರು ‘ಹಿಂಸೆಯ ಕೂಪ’ದಲ್ಲಿ ಜೀವ ಬಿಗಿಹಿಡಿದು ಬದುಕು ಮಾಡುವಂತೆ ಮಾಡಿದೆ. ರಂಗಮ್ಮಳ ವೇದನೆಯ ವ್ಯಥೆಯ ಕಥೆ ಕೇಳುತ್ತಿದ್ದರೆ, ಅಸಹ್ಯ ಭಾವನೆ ಆವರಿಸಿಕೊಂಡುಬಿಡುತ್ತದೆ.

“ನನ್ನ ಪತಿ ಮರಣಿಸಿದಾಗ ನಾನಿನ್ನು 18ರ ಆಸುಪಾಸಿನಲ್ಲಿದ್ದೆ. ಅಷ್ಟೊತ್ತಿಗೆ 2 ವರ್ಷಗಳ ವಿವಾಹ ವಾರ್ಷಿಕೋತ್ಸವ ಆಚರಿಸಲಾಗಿತ್ತು. ನೋಡಮ್ಮ ನೀವು ಇಲ್ಲಿಯೇ ಇರಬೇಕು. ಇದು ನಿಮ್ಮ ಪತಿಯ ಮನೆ ಎಂದರು. ಗಂಡನ ಅಣ್ಣಂದಿರ ಮಾತಿಗೆ ಎದುರು ಹೇಳಲಾಗದೆ ಅಲ್ಲಿಯೇ ನೆಲೆಸಿದೆ. ನಾನಲ್ಲಿ ಕೆಂಪು, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವಂತಿರಲಿಲ್ಲ. ತವರು ಮನೆಯವರು ಕೊಟ್ಟಿದ್ದ ಆಭರಣಗಳನ್ನು ಹಾಕಿಕೊಳ್ಳುವಂತಿರಲಿಲ್ಲ. ನೆರೆ-ಹೊರೆಯವರ, ಮನೆಯೋಳಗಿರುವ ಮಕ್ಕಳ ಅಥವಾ ಟಿ.ವಿ.ಯಲ್ಲಿರುವ ಹಾಸ್ಯ ದೃಶ್ಯಾವಳಿಯನ್ನು ಕಂಡು ಕೂಡ ನಗುವಂತಿರಲಿಲ್ಲ. ನಾನು ನಕ್ಕರೆ ಪತಿಯ ಮರಣದಿಂದ ಸಂತಸಗೊಂಡಿರುವೆನೆಂದು, ನೆರೆಹೊರೆಯವರು ಭಾವಿಸುತ್ತಾರೆಂದು ಹೇಳಿ ನನ್ನ ನಗುವನ್ನು ನಿರ್ಬಂಧಿಸಿದ್ದರು. ಪತಿಯ ಉದ್ಯೋಗ ದೊರಕುವವರೆಗೂ ಹಲ್ಲುಕಚ್ಚಿ ಸಹಿಸಿಕೊಳ್ಳಬೇಕಿತ್ತು.

“ಎಲ್ಲಾ ಬಗೆಯ ಜೀವವಿರೋಧಿ ಕಂದಾಚಾರ, ನಿರ್ಬಂಧಗಳನ್ನು ಸಹಿಸಿಕೊಂಡಾಗ ನೌಕರಿ ದೊರಕಿತು. 5 ವರ್ಷಗಳು ಉರುಳಿದಂತೆ ಕುಟುಂಬಸ್ಥರ ಕ್ರೋಧದ ಜ್ವಾಲೆ ಹೆಚ್ಚಾಗುತ್ತಾ ಸಾಗಿತು. ಅಪಮಾನದ ನುಡಿಗಳು ಸುರಿಯತೊಡಗಿದವು. ನಾನು ಸಹೋದ್ಯೋಗಿಯೊಬ್ಬರನ್ನು ಪ್ರೀತಿಸುತ್ತಿರುವೆನೆಂಬ ಕಥೆಯನ್ನು ಹೆಣೆದರು. ಸರ್ಕಾರಿ ಕಚೆರಿಯಲ್ಲಿ ಸಹೋದ್ಯೋಗಿಗಳಂತೆ, ಕಾರ್ಯನಿರ್ವಹಿಸಲು ಉತ್ತಮ ಉಡುಗೆ, ಸರಳ ಆಭರಣ, ಚಪ್ಪಲಿ ಧರಿಸುವುದು ಅಪರಾಧವಾಯಿತು. ಕೊನೆಗೆ ನಿತ್ಯ ಕಚೆರಿಗೆ ನಿರ್ಭಿತಿಯಿಂದ ಹೋಗಿ ಬರುವುದನ್ನು ಕುಟುಂಬಸ್ಥರು ಸಹಿಸಲಿಲ್ಲ. ಕಟ್ಟುಪಾಡಿನ ಹೆಸರಲ್ಲಿ ನಡೆಸುವ ಇಂತಹ ಹಿಂಸೆಗೆ ನಾನೀಗ ಕೊರಡಾಗಿಬಿಟ್ಟಿದ್ದೇನೆ” ಎಂದು ಮೇಲುಸಿರುಬಿಟ್ಟು ಹೇಳಿದರು.

ಇದಕ್ಕೆ ಆಪವಾದ ಎಂಬಂತೆಯೂ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ಪತಿಯನ್ನು ಕಳೆದುಕೊಂಡ ಹೆಣ್ಣನ್ನು ಆಪ್ತತೆಯಿಂದ ಕಾಣುವುದು ಇದೆ. ಇಂತಹ ಶೇಕಡ 0.05ರಷ್ಟಿರುವವರ ಅದೃಷ್ಟಕ್ಕೆ ಸಮಾಜವು ಒತ್ತಾಸೆಯಾಗಿ ನಿಲ್ಲುತ್ತದೆ. ಅಂತಹದ್ದೊಂದು ಕಥೆ ಇಲ್ಲಿ: “ನನ್ನ ಹೆಸರು ವಾಸಂತಿ. 2 ವರ್ಷಗಳ ಹಿಂದೆ ಪತಿ ಕೊರೊನಾಗೆ ಗತಿಸಿದರು. ನನ್ನ ತವರು ಮನೆಯವರು ನನಗೆ ಒತ್ತಾಸೆಯಾಗಿ ನಿಂತರು. ನನ್ನ ಮಕ್ಕಳನ್ನು ಸ್ವಂತ ಮಕ್ಕಳಂತೆ ನನ್ನ ಸಹೋದರ ಸಾಕುತ್ತಿದ್ದಾನೆ. ಆದರೂ, ಸ್ವಂತ ಕಾಲ ಮೇಲೆ ನಿಂತು ಸ್ವತಂತ್ರಳಾಗಿ ಜೀವನ ನಡೆಸಬೇಕೆಂಬ ಗುರಿ ಇದೆ. ವಿಧವೆಯರನ್ನು ಸಮಾಜ ಎಂದಿಗೂ ಗೌಣವಾಗಿ ಕಾಣುವುದಿಲ್ಲ. ಆದರೆ, ಕೆಲವು ಮಹಿಳೆಯರೇ ಕೀಳಾಗಿ ಕಾಣುವ, ನಡೆಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆಂದು” ವಿಷಾದ ವ್ಯಕ್ತಪಡಿಸಿದರು.

ಮಹಿಳೆಯರಿಗಾಗಿ ರಚಿತವಾದ ರಾಷ್ಟ್ರೀಯ ನೀತಿಯಲ್ಲಿಯೂ ವಿಧವೆಯರನ್ನು ವಿಶೇಷ ವರ್ಗದಲ್ಲಿ ತೋರಿಸಿ ಅವರ ಆರೈಕೆ ಮತ್ತು ರಕ್ಷಣೆಗೆ ಒತ್ತು ನೀಡಲಾಗಿದೆ. ಅಲ್ಲದೆ, ಒಂಟಿ ಮಹಿಳೆಯರು ಅಂದರೆ, ವಿಚ್ಛೇದಿತರು, ಬೇರ್ಪಟ್ಟವರು ಹಾಗೂ ವಿವಾಹವಾಗದೆ ಉಳಿದ ಮಹಿಳೆಯರ ಸಮಸ್ಯೆಗಳ ಬಗ್ಗೆಯೂ ಗಮನಹರಿಸಿರಬೇಕೆನಿಸುತ್ತದೆ. ಆಗ ಮಾತ್ರ ವಿಧವೆಯರು, ಒಂಟಿ ಮಹಿಳೆಯರು ಎದುರಿಸಬೇಕಾದ ಸಾಮಾಜಿಕ-ಆರ್ಥಿಕ, ದೈಹಿಕ ಮತ್ತು ಮಾನಸಿಕ ದುರ್ಬಲತೆಯ ಸಮಸ್ಯೆ ಬಗ್ಗೆ ವಿಶೇಷ ಗಮನ ಕೊಡಲು ಅನುವು ಮಾಡಿಕೊಡುತ್ತಿದೆ. ಆದಾಗ್ಯೂ ಕೆಲವು ಸವಾಲುಗಳು ಸರ್ಕಾರದ ನಿರಂತರ ಗಮನವನ್ನು ಸೆಳೆಯುತ್ತಿದೆ. ಇದರೊಂದಿಗೆ ಪೋಷಕರು ಮತ್ತು ಹಿರಿಯ ನಾಗರಿಕರ ಕಾಯ್ದೆ 2007ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ, ವಿಧವೆಯರ ಸುರಕ್ಷತೆಗೂ ಕ್ರಮವಹಿಸಿದಂತಾಗುತ್ತದೆ.

ಸಂಯೋಜಿತ ಸೇವೆಗಳ ಕೊರತೆ ಮತ್ತು ಸಂಕೀರ್ಣ ಕಾರ್ಯವಿಧಾನಗಳ ಸವಾಲುಗಳನ್ನು ವಿಧವೆಯರು ಎದುರಿಸುತ್ತಿದ್ದಾರೆ. ಅಂತಹ ಎರಡು ಪ್ರಕರಣಗಳನ್ನು ನಿಮ್ಮ ಮುಂದಿಡುತ್ತಿರುವೆ. “ನನ್ನ ಪತಿ ಓರ್ವ ಕುಡುಕ. ಬೆಳಗ್ಗೆ 8ಕ್ಕೆ ಆರಂಭಿಸಿದರೆ ರಾತ್ರಿ 10ರ ವರೆಗೂ ನೀರು ಕುಡಿದಂತೆ, ಕುಡಿಯುತ್ತಲೇ ಇರುತ್ತಿದ್ದರು. 5 ವರ್ಷಗಳ ದಾಂಪತ್ಯದ ಬದುಕಲ್ಲಿ 3 ಮಕ್ಕಳನ್ನು ಕೈಗಿಟ್ಟು ಪ್ರಾಣಬಿಟ್ಟರು. ವಿಪರೀತ ಕುಡಿತದಿಂದ ಪತಿ ಆಸ್ಪತ್ರೆ ಸೇರಿದರು. ದಿನಸಿ, ತರಕಾರಿ ಕೊಳ್ಳುವಾಗ ಉಳಿಸಿ ಕೂಡಿಟ್ಟ 10 ಸಾವಿರಗಳು ಆಸ್ಪತ್ರೆಯ ಸಿಬ್ಬಂದಿ ಪಾಲಾಯಿತು. ತವರು ಮನೆಯವರು ಕೊಡಿಸಿದ್ದ ಒಡವೆ ಪತಿಯ ಔಷಧ ನುಂಗಿಹಾಕಿತ್ತು. ಆದರೂ ಉಳಿಸಿಕೊಳ್ಳಲಾಗಲಿಲ್ಲ. ಅವರ ಪ್ರಾಣಪಕ್ಷಿ ಹಾರಿಹೋದಂತೆ ಸಮಸ್ಯೆಯೂ ಬಗೆಹರಿಯಿತೆಂದು ದುಃಖ ನುಂಗಿ ಸುಮ್ಮನಾದೆ. ಆದರೆ ಕೈಯಲ್ಲಿ ‘ಬಿಡಿಗಾಸು’ ಇಲ್ಲದಿದ್ದರೆ ಸಮಸ್ಯೆ ಹೇಗಿರುತ್ತದೆ ಎಂಬುದು ಪರಿಚಯವಾಯಿತು. ಪತಿಯ ತಂದೆ-ತಾಯಿ ಕುಡಿತಕ್ಕೆ ನೀಡುತ್ತಿದ್ದ ಹಣವನ್ನು ಬರೆದಿಟ್ಟುಕೊಂಡು, ನನ್ನ ಬಳಿಯೇ ವಸೂಲಿಗಿಳಿದರು. 3 ಮಕ್ಕಳೊಂದಿಗೆ
ಅನಾಥೆಯಗಿ ನಿಂತ ನಾನು ಎಲ್ಲಿಂದ ಕುಡಿತದ ಸಾಲ ತೀರಿಸಲು ಸಾಧ್ಯ. ಇವರ ಉಪಟಳ ಮಿತಿಮೀರಿದಾಗ, ಜಲವಾಯುವಿಹಾರದ ವಸತಿ ಸಂಕೀರ್ಣದಲ್ಲಿರುವ 4 ಮನೆಗಳ ಕಸ-ಮುಸುರೆ ತೊಳೆಯಲು ಹೋಗುತ್ತಿರುವೆ. ಇದರಿಂದ ತಿಂಗಳಿಗೆ 20 ಸಾವಿರ ಬರುತ್ತಿದೆ. 5 ಸಾವಿರದಷ್ಟು ಕುಡಿತದ ಸಾಲವನ್ನು ಅತ್ತೆ-ಮಾವನಿಗೆ ನೀಡಿ, ಉಳಿಕೆ 15 ಸಾವಿರದಲ್ಲಿ ಮನೆ ಬಾಡಿಗೆ, ನೀರಿನ ಶುಲ್ಕ, ವಿದ್ಯುತ್ ಶುಲ್ಕ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವೆ. ಹೊಸ ಬಟ್ಟೆ ಧರಿಸಿ, ಸಂಭ್ರಮ ಪಡುವುದು ತವರು ಮನೆಗೆ ಕೊನೆಯಾಯಿತು. ಮಧ್ಯವಯಸ್ಸು ದಾಟುತ್ತಿರುವುದರಿಂದ ‘ಆಯಾಸ’ ಅತಿಯಾಗುತ್ತಿದೆ. ನೆರವಿಗೆಂದು ಮೊದಲ ಮಗಳನ್ನು ಮನೆಕೆಲಸಕ್ಕೆ ಕರೆದೊಯ್ಯುತ್ತಿರುವೆ. ಕರೆದೊಯ್ಯುವುದರಿಂದ, ಮಗಳಿಗೆ ಹಳೆ ಬಟ್ಟೆ, ಆಹಾರ ದೊರಕುತ್ತಿದೆ” ಎಂದು ರೂಪಾ ಹೇಳುತ್ತಿದ್ದಾಗ ‘ಯಾತನೆ’ ತಡೆಯದಾಯಿತು.

ಇನ್ನೂ ಚರಾಸ್ತಿ-ಸ್ಥಿರಾಸ್ತಿ ಇರುವ ಕುಟುಂಬಗಳಲ್ಲಿ ಪತಿ ಮಾಡಿಟ್ಟು ಹೋದ ಅಸಲು, ಬಡ್ಡಿ, ಚಕ್ರಬಡ್ಡಿಯ ಸಾಲಕ್ಕೂ ‘ಪತ್ನಿ’ ಹೊಣೆ ಹೊರುವ ಅನಿವಾರ್ಯತೆ ಇದೆ. ಅದು ಹತ್ತಿಪ್ಪತ್ತು ಸಾವಿರಗಳಲ್ಲ, ಲಕ್ಷವೂ ಅಲ್ಲ. ಕೋಟಿಗಳ ಲೆಕ್ಕದಲ್ಲಿರುವ ಸಾಲದ ಶೂಲವದು. ಅವರು ಪತ್ರಿಕೆಯೊಂದರ ಮಾಲೀಕರಾಗಿದ್ದರು. ಸಾಕಷ್ಟು ಆಸ್ತಿಯನ್ನು ಮಾಡಿಟ್ಟಿದ್ದರು. ಇದಕ್ಕೆ ಸರಿಸಮನಾಗಿ ಕಗ್ಗಂಟುಗಳು ಸೃಷ್ಟಿಯಾಗಿದ್ದವು. ಇದ್ದ ಮನೆಯನ್ನು ಬ್ಯಾಂಕಿಗೆ ಅಡವಿಟ್ಟು ಸ್ವಂತ ಮುದ್ರಣ ಯಂತ್ರ ಖರೀದಿಸಿದ್ದರು. ಇದರ ನಡುವೆ ಓರ್ವ ಧಣಿಯ ಬಳಿ 1 ಕೋಟಿ ಸಾಲವನ್ನು ಪಡೆದಿದ್ದರು. ಸಾಲ ಕೊಟ್ಟ ಧಣಿ ಇಂದಿಲ್ಲ. ಆದರೆ, ಅವರ ಮಕ್ಕಳಿದ್ದಾರೆ. ಅವರುಗಳು 1 ಕೋಟಿಗೆ 4 ಕೋಟಿ ಸೇರಿಸಿ ಕೊಡಬೇಕೆಂದು ಹಠ ಹಿಡಿದಿದ್ದಾರೆ. ಹಣ ಕೊಡದಿದ್ದರೆ ಕೋರ್ಟಿನ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ಪತ್ರಿಕೆಯ ಮಾಲೀಕರ ಕುಟುಂಬ 20 ಕೋಟಿ ಬೆಲೆಬಾಳುವ ಮನೆಯನ್ನು ಕೇವಲ 12 ಕೋಟಿಗೆ ಮಾರಲು ಇಟ್ಟಿದೆ. ಬರುವ 12 ಕೋಟಿಯಲ್ಲಿ 5 ಕೋಟಿ ಧಣಿಯ ಮಗನ ಬಾಯಿಗೆ ಇಡಬೇಕು. ಉಳಿಕೆ ಹಣದಲ್ಲಿ ಬ್ಯಾಂಕ್ ಸಾಲ ತೀರಿಸಿ, ದೊಡ್ಡ ಕುಟುಂಬ ಹಂಚಿಕೊಂಡು ‘ಬಾಡಿಗೆ ಮನೆ’ ಸೇರಿಕೊಳ್ಳಬೇಕಿದೆ. ಮಾಲೀಕರಿದ್ದಾಗ ಜನಜಂಗುಳಿಯಿಂದ ಕೂಡಿರುತ್ತಿತ್ತು. ಇದೀಗ ‘ಬಂಗಲೆ’ ತನ್ನ ಹೊಳಪನ್ನು ಕಳೆದುಕೊಂಡು, ಸೂತಕದ ಕಳೆ ಹೊತ್ತು ನಿಂತಿದೆ. ಅಲ್ಲಿ ಬಂದು ಹೋದ ಸಾಧು-ಸಂತರು, ಮಂತ್ರಿ-ಮಹೋದಯರು, ಪ್ರಗತಿಪರರು ‘ವಿಷಾದ’ ವ್ಯಕ್ತಪಡಿಸುತ್ತಿರುವರೇ ಹೊರತು, ವಂಚನೆಗೊಳಗಾದ ಕುಟುಂಬಕ್ಕೆ ಆಸರೆಯಗಿ ನಿಂತಿಲ್ಲ. ಹೀಗೆ ವೈಧವ್ಯಕ್ಕೆ ಒಳಗಾಗುವ ಹೆಣ್ಣು ನಿರ್ಗತಿಕಳಾಗಿದ್ದರೂ ಕಷ್ಟ. ಚರಾಸ್ತಿ-ಸ್ಥಿರಾಸ್ತಿ ಹೊಂದಿದ್ದರೂ ಕಷ್ಟ. ಭೂಮಿಯ ಉತ್ತರಾಧಿಕಾರ ಹಾಗೂ ಆಸ್ತಿ ವಿವಾದ ಕುರಿತಂತೆ ವಿಧವೆಯರು ಎಂದೆಂದಿಗೂ ಬಲಿಪಶುಗಳೇ ಆಗಿರುತ್ತಾರೆ.

ಇಲ್ಲಿ ‘ವೈಧವ್ಯ’ಕ್ಕೆ ಒಳಗಾದ ಹೆಣ್ಣನ್ನು ಸುಶಿಕ್ಷಿತಳನ್ನಾಗಿಸಿದರೆ ಸಾಲದು. ಅವರಿಗೆ ಸಂಬಂಧಿಸಿದ ಎರಡು ಮನೆಯವರನ್ನು ಸುಶಿಕ್ಷಿತರನ್ನಾಗಿಸಬೇಕಿದೆ. ನೆರೆಹೊರೆಯವರು ಕೂಡ ‘ವಿಧವೆ’ಯರ ‘ಅವಶ್ಯಕತೆ’ಗಳನ್ನು ಅಸಹ್ಯವಾಗಿ ಬಿಂಬಿಸುವುದನ್ನು ಬಿಡಬೇಕಿದೆ. ಇದನ್ನೇಕೆ ಹೇಳಿದೆನೆಂದರೆ, “ನನ್ನ ಪತಿಯ ಸಾವನ್ನು ನಾನು ದೂಷಿಸುತ್ತೇನೆ. ಅವರು ಹೃದಯಘಾತಕ್ಕೆ ಒಳಗಾಗಿ ಜೀವಬಿಟ್ಟಿದ್ದರು. ನಾವಿಬ್ಬರೂ ಕೂಡಿ ಹೆಚ್.ಎ.ಎಲ್. ಮಾರುಕಟ್ಟೆಗೆ ಹೋಗಿ ತರಕಾರಿ-ಸೊಪ್ಪು ತರುತ್ತಿದ್ದೆವು. ದಾರಿಯ ಮಧ್ಯೆ ಅಪಘಾತವಾಯಿತು. ನಾನಾಗ 4 ತಿಂಗಳ ಗರ್ಭಿಣಿ. ಪತಿಯ ಮನೆಯವರು ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದರು. ನಾನು ಸುತಾರಾಂ ಒಪ್ಪಲಿಲ್ಲ. ಆಗ ಕೆಲವೊಂದು ಕಾಗದಪತ್ರಗಳಿಗೆ ಸಹಿ ಹಾಕಿಸಿಕೊಂಡು ಮನೆಯಿಂದ ಹೊರಹಾಕಿದರು. ತವರು ಮನೆಯವರು ಕೊಟ್ಟಿದ್ದ ವಸ್ತ್ರ, ಆಭರಣ, ಪಾತ್ರೆಗಳನ್ನಾದರೂ ಕೊಡಿ ಎಂದು ಗೋಗರೆದೆ. ಅವರ ಹೃದಯ ಕಲ್ಲಾಗಿತ್ತು. ಸಾಲದಕ್ಕೆ ‘ನನ್ನ ಕಾಲ್ಗುಣ’ ಸರಿ ಇಲ್ಲವೆಂದು, ‘ಅದೃಷ್ಟಹೀನ’ಳೆಂಬ ಹಣೆಪಟ್ಟಿ ಹಚ್ಚಿ ಹರಿಯಬಿಟ್ಟು ಹೊರಹಾಕಿದರು. ಸದ್ಯ ಕೊಳಗೇರಿಂಂದು ನನಗೆ ಆಸರೆ ಕೊಟ್ಟಿದೆ. ಅಲ್ಲಿ ರವಿಕೆ, ಹರಿದ ಬಟ್ಟೆ, ಹೊಸ ಬಟ್ಟೆ ಹೊಲಿದು ಮಗುವಿನ ಪಾಲನೆ ಮಡುತ್ತಿರುವೆ. ಸೌಮ್ಯಳ ತಮ್ಮ ಅಕ್ಕನಿಗೆ ಪುನರ್ವಿವಾಹ ಮಾಡಿಸಲು ಅಡ್ಡಾಡುತ್ತಿದ್ದಾನೆ. ಸೂಕ್ತ ವರ ಸಿಗುತ್ತಿಲ್ಲ ಎನ್ನುತ್ತಾರೊಬ್ಬರು.

‘ವಿಧವೆ’ಯರನ್ನು ಇಷ್ಟೊಂದು ಸಮಸ್ಯೆಗಳು ಕಾಡುತ್ತಿರುವಾಗ ನಮ್ಮ ಸರ್ಕಾರಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿವೆ.
ಆದರೆ ಇವು ಒಂದಕ್ಕೊಂದು ಸಮನ್ವಯತೆಯಿಂದ ಕೂಡಿರುವುದಿಲ್ಲ. ಕಾರ್ಯಕ್ರಮಗಳ ಅನುಷ್ಠಾನದಲ್ಲೂ ಕೆಟ್ಟ ಸಮನ್ವಯತೆ ಇದೆ. ಅನಕ್ಷರಸ್ಥ ವಿಧವೆಯರನ್ನು ಯೋಜನೆಯಿಂದಲೇ ಹೊರಗಿಡಲಾಗಿದೆ. ಇವರ ಬಳಿ ‘ಸರ್ಕಾರಿ ಸೌಲಭ್ಯ’ ಪಡೆಯಲು ಬೇಕಾದ ಅಗತ್ಯ ದಾಖಲೆಗಳು ಇರುವುದಿಲ್ಲ. ಇದರೊಂದಿಗೆ ಇವರಿಗೆ ಆರ್ಥಿಕ ಜ್ಞಾನದ ಕೊರತೆಯೂ ಇದೆ. ಅಲ್ಲದೆ ಸರ್ಕಾರದ ‘ದುರ್ಬಲ ಮೇಲ್ವಿಚಾರಣೆ’ ಮತ್ತು ‘ವರದಿ ಮಾಡುವ ವ್ಯವಸ್ಥೆ’ಯಿಂದಾಗಿ ಅನುಷ್ಠಾನದಲ್ಲಿ ಅಂತವರನ್ನು ಹೆಚ್ಚಿಸಿದೆ.

ಇವೆಲ್ಲ ಸಮಸ್ಯೆಗಳನ್ನು ನೀಗಿಸಬೇಕೆಂದರೆ, ‘ವೈಧವ್ಯ’ಕ್ಕೆ ಒಳಗಾದ ಮಹಿಳೆಯರ ಸೌಲಭ್ಯಕ್ಕಾಗಿ ವಸತಿ, ಪಿಂಚಣಿ, ಆರೋಗ್ಯ ಮತ್ತು ಆಹಾರಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಅಂದರೆ ‘ಏಕ ಗವಾಕ್ಷಿ ಯೋಜನೆ’ಯಡಿ ತರಬೇಕು. ಸದ್ಯ ಅಸ್ತಿತ್ವದಲ್ಲಿರುವ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಒಂದಾಗಿ ಕಾರ್ಯನಿರ್ವಹಿಸಬೇಕು. ‘ವಿಧವಾ ವೇತನ’ ಪಡೆಯಲು ಬೇಕಾಗಿರುವ ದಾಖಲೆಗಳನ್ನು ಪ್ರಾಧಿಕಾರಗಳು ಒದಗಿಸಬೇಕು.

ವಿಧವೆಯರು ಹಾಗೂ ಅವರ ಮಕ್ಕಳ ಮೇಲಿನ ಹಿಂಸಾಚಾರದ ಬಗ್ಗೆ ನಿಸ್ಪಕ್ಷಪಾತವಾದ ತನಿಖೆ ಕೈಗೊಳ್ಳಲು ಪ್ರತ್ಯೇಕ ತನಿಖಾ ಸಂಸ್ಥೆ ರಚನೆಯಾಗಬೇಕು. ಇವರನ್ನು ಬಡತನದಿಂದ ಹೊರತರಲು ಇವರ ಮಕ್ಕಳಿಗೆ ಉಚಿತ ಶಿಕ್ಷಣ, ವಿಶೇಷ ವಸತಿನಿಲಯಗಳನ್ನು ತೆರೆಯಬೇಕು. ಆರ್ಥಿಕ ಮೀಸಲಾತಿಯಲ್ಲಿ ಶೇ,4ರಷ್ಟನ್ನು ‘ವಿಧವೆ’ಯರ ಮಕ್ಕಳಿಗೆ ನೀಡಬೇಕು. ವಿಧವಾ ವೇತನ ಏರಿಸಿದ ಮಾತ್ರಕ್ಕೆ ಇವರ ಬದುಕು ಹಸನಾಗುವುದಿಲ್ಲ. ಇವರ ಭವಿಷ್ಯದ ಹೊಣೆಗಾರಿಕೆಯನ್ನು ಸರ್ಕಾರ ಮತ್ತು ಸಮಜ ಹೊರುವಂತೆ ಮಾಡಬೇಕು. ವಿಶೇಷವಾಗಿ ‘ವಿಧವೆಯರಿಗೆ ಭೂಮಿ ಮತ್ತು ಆಸ್ತಿಯಲ್ಲಿ ಅರ್ಧಭಾಗ’ ಎಂಬ ಹಕ್ಕು ಎಷ್ಟರಮಟ್ಟಿಗೆ ಜಾರಿಯಾಗಿದೆ, ಇದರಿಂದ ಹಾನಿಗೊಳಗಾದವರ ಸಂಖ್ಯೆ, ಪ್ರಕರಣಗಳ ಸ್ವರೂಪಗಳ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ವಿಚಾರಣೆ ನಡೆಯುವ ಅಗತ್ಯವೂ ಇದೆ. ನೇಪಾಳದಂತೆ ನಮ್ಮ ದೇಶದಲ್ಲಿ ‘ವೈಧವ್ಯ’ಕ್ಕೆ ಒಳಗಾದ ಎಲ್ಲಾ ಜಾತಿ, ಧರ್ಮದ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಂಬಲಿಸಲು ಸರ್ಕಾರಿ ಭೂಮಿಯನ್ನು ಗುಂಪು ಮನೆ ನಿರ್ಮಾಣ ಹಾಗೂ ಕೌಶಲ್ಯ ತರಬೇತಿ ನೀಡಲು ಹಂಚಿಕೆ ಮಾಡಬೇಕು. ಇನ್ನೂ 1856ರ ಹಿಂದೂ ವಿಧವಾ ಪುನರ್ವಿವಾಹ ಕಾಯ್ದೆ ಜಾರಿಯಾದ ನಂತರ, ಮಹಿಳೆಯರ ಸ್ಥಾನಮನ ವಿಚಾರದಲ್ಲಿ ಬದಲಾವಣೆಯಂತೂ ಆಗಿದೆ. ವಿಧವೆಯರ ಬದುಕನ್ನು ಶಾಶ್ವತವಾಗಿ ಬದಲಾಯಿಸಲು ನೀತಿಯ ಚೌಕಟ್ಟನ್ನು ‘ಕಲ್ಯಾಣ’ ವಿಧಾನದಿಂದ ‘ಸಬಲೀಕರಣ’ ವಿಧಾನವಾಗಿ ಬದಲಾಯಿಸುವ ಅಗತ್ಯವಿದೆ.

2017ರಲ್ಲಿ ವಿಧವೆಯರ ಸ್ಥಾನಮಾನ ಅರಿಯಲು ಮತ್ತು 44 ಮಿಲಿಯನ್ ವಿಧವೆಯರ ಬದುಕನ್ನು ಹೇಗೆ ಉತ್ತಮಪಡಿಸಬಹುದೆಂದು ವರದಿ ನೀಡಲು ಸುಪ್ರೀಂ ಕೋರ್ಟ್ ಸಮಿತಿ ರಚಿಸಿತ್ತು. ಸಮಿತಿಯಲ್ಲಿ ಜಾಗೋರಿ, ಗಿಲ್ಡ್ ಆಫ್ ಸರ್ವಿಸಸ್, ಹೆಲ್ಪೇಜ್ ಇಂಡಿಯ ಮತ್ತು ಸುಲಭ್ ಇಂಟರ್‌ನ್ಯಾಷನಲ್‌ನಂತಹ ಸಂಘಟನೆಗಳಿದ್ದವು. ಇವು ತನ್ನ ವರದಿಯನ್ನು 3 ತಿಂಗಳೊಳಗೆ ನೀಡಿದೆ. ಸಮಿತಿಯ ಶೋಧನೆ ಮತ್ತು ಶಿಫಾರಸ್ಸು ವಿಶ್ವ ಸಂಸ್ಥೆಯ ಮಹಿಳಾ ವರದಿಯಂತಿದೆ. ವರದಿಯನ್ನು ಅನುಷ್ಠಾನಗೊಳಿಸಲು ಕೋರ್ಟು ನಿರ್ದೇಶನ ನೀಡಿದೆ. ಇನ್ನೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ.

ಒಟ್ಟಾರೆ ನಮ್ಮ ದೇಶದ ಉದ್ದಗಲ ‘ವೈಧವ್ಯ’ಕ್ಕೆ ಒಳಗಾದ ಹೆಣ್ಣು ಬಹುಪಾಲು ಖಿನ್ನತೆ, ಅಧೀರತೆ, ದುರ್ಬಲತೆ, ಒಂಟಿತನದ ಕೊರಗಿನಿಂದ ಬಳಲುತ್ತಿದ್ದಾರೆ. ಪತಿ ಕುಡುಕ, ವ್ಯಭಿಚಾರಿ ಯಾರೇ ಆಗಿರಲಿ ಸಹಿಸುವರು. ಆದರೆ ಆತನ ಮರಣವನ್ನು ನಂತರದ ಕಷ್ಟಗಳನ್ನು ಸಹಿಸಲಾರರು.

ಇದನ್ನು ಬರೆದು ಮುಗಿಸುತ್ತಿದ್ದಂತೆ, ನನಗೊಂದು ಪ್ರಶ್ನೆ ಎದ್ದಿದೆ. ‘ವೈಧವ್ಯ’ಕ್ಕೆ ಒಳಗಾದ ಮಹಿಳೆಯರು ತಮ್ಮ ಬದುಕುವ ಹಕ್ಕಿಗಾಗಿ ಹಾಗೂ ಘನತೆಯಿಂದ ಬದುಕಲು ಇನ್ನೆಷ್ಟು ಶತಮನ ಕಾಯಬೇಕು?

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

 


ಇದನ್ನು ಓದಿ: ಮಾರಣಹೋಮದ ಪೂರ್ವ ತಯಾರಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...