Homeಅಂಕಣಗಳುಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..

ಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..

- Advertisement -
- Advertisement -

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ರಾಮನವಮಿ ದಿವಸ ಮಾಂಸಾಹಾರವನ್ನು ವಿರೋಧಿಸಿ ಸಂಘ ಪರಿವಾರ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಹಿಂಸಾಚಾರಕ್ಕೆ ಇಳಿದ ಘಟನೆ ವರದಿಯಾಗಿದೆ. ಜೆಎನ್‌ಯು ಪ್ರತಿನಿಧಿಸುತ್ತಿದ್ದ ಚಿಂತನೆಗಳನ್ನು ಹೇಗಾದರೂ ಮಾಡಿ ಮುಗಿಸುವ ಸಲುವಾಗಿ ಪ್ರಭುತ್ವ ಒಂದಲ್ಲಾ ಒಂದು ರೀತಿ ಅಲ್ಲಿ ಅಶಾಂತಿ ನೆಲೆಸುವಂತೆ ನೋಡಿಕೊಳ್ಳಲು ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ ಹವಣಿಸುತ್ತಿದೆ. ಇತ್ತೀಚಿನ ಹಿಂಸಾಚಾರ 2016ರಲ್ಲಿ ಅಲ್ಲಿ ನಡೆದ ಘಟನೆಗಳನ್ನು ನೆನಪಿಗೆ ತಂದವು. ಆನಂತರದ ದಿನಗಳಲ್ಲಿ ಬಲಪಂಥೀಯ ಕೋಮುವಾದ ಯಾವುದನ್ನು ತನ್ನ ಗುರಾಣಿಯಾಗಿ ಬಳಸುತ್ತಿತ್ತೋ, ಆ ನ್ಯಾಶನಲಿಸಂ ಕುರಿತ ಹಲವು ಸಾರ್ವಜನಿಕ ಉಪನ್ಯಾಸಗಳನ್ನು ಅಲ್ಲಿ ಹಮ್ಮಿಕೊಳ್ಳಲಾಯಿತು. ಆಗ ಒಂದಷ್ಟು ಮಾಧ್ಯಮಗಳು ನ್ಯಾಶನಲಿಸಂ ಕುರಿತ ಚಿಂತನೆಗಳನ್ನು ಜನಸಾಮಾನ್ಯರಿಗೂ ಮುಟ್ಟಿಸಲು ಪ್ರಯತ್ನಿಸಿದವು. ಈ ಚರ್ಚೆಗಳು ಸಾಮಾನ್ಯ ಜನರನ್ನು ಎಷ್ಟು ತಲುಪಿದವೋ ಇಲ್ಲವೋ ಆದರೆ ಶ್ರೀರಾಮನ ಹೆಸರಿನಲ್ಲಿ, ಹಿಂದೂ ಧಾರ್ಮಿಕತೆಯ ಹೆಸರಿನಲ್ಲಿ, ಶತ್ರುಗಳನ್ನು ಸೃಷ್ಟಿಸಿ ಅಭದ್ರತೆಯನ್ನು ಹುಟ್ಟುಹಾಕುವ ಮಾರ್ಗದಲ್ಲಿ ಮುನ್ನುಗ್ಗುತ್ತಿರುವ ನ್ಯಾಶನಲಿಸಂ ಸವಾರಿ ಕಿಂಚಿತ್ತೂ ಕನಲಲ್ಲಿ. ಇದಕ್ಕೆ ಮುಖ್ಯ ಕಾರಣ ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ಜನಪ್ರಿಯಗೊಳಿಸಿದ ಮತ್ತು ಅದನ್ನು ನಂತರದ ದಿನಗಳಲ್ಲಿ ಶಿಕ್ಷಣ, ಸಾಹಿತ್ಯ, ಸಿನಿಮಾ ಮತ್ತಿತರ ಕಲೆಯ ಮಾಧ್ಯಮಗಳ ಮೂಲಕ ರಿಇನ್ಫೋರ್ಸ್ ಮಾಡಿ ಜನರಿಗೆ ಸುಪ್ತವಾಗಿ ಆದರೆ ಆಳವಾಗಿ ತುಂಬಲಾಗಿರುವ ತಪ್ಪು ಪರಿಕಲ್ಪನೆಯ ನ್ಯಾಶನಲಿಸಂ. ಇದಕ್ಕೆ ಬದಲಿಯಾಗಬಹುದಿದ್ದ ಬಾಬಾಸಾಹೇಬರ ಚಿಂತನೆಗಳುಳ್ಳ ರಾಷ್ಟ್ರ ಭ್ರಾತೃತ್ವದ ಪರಿಕಲ್ಪನೆಯನ್ನು ಜನಸಮಾನ್ಯರಿಗೆ ತಿಳಿಸಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕೆಲಸಗಳು ಜರುಗಿದ್ದರೆ ಇವತ್ತಿನ ಎಷ್ಟೋ ಮತೀಯ ಮತ್ತು ಕೋಮುವಾದಿ ಘಟನೆಗಳನ್ನು ತಡೆಯಬಹುದಾಗಿದ್ದ ರೀತಿಯಲ್ಲಿ ಆರೋಗ್ಯಕರ ದೇಶವನ್ನು ಕಟ್ಟಿಕೊಳ್ಳಲು ಸಾಧ್ಯವಿತ್ತು. ಆ ನಿಟ್ಟಿನಲ್ಲಿ ಇಂದು ನಾವು ಬಾಬಾಸಾಹೇಬರ ಪರಿಕಲ್ಪನೆಯ ’ನೇಶನ್’ಅನ್ನು ಕಟ್ಟಿಕೊಳ್ಳುವಲ್ಲಿ ದಯನೀಯವಾಗಿ ಸೋತಿದ್ದೇವೆ.

ನೇಶನ್‌ಗೆ ಸಂವಾದಿಯಾಗಿ ಕನ್ನಡದಲ್ಲಿ ರಾಷ್ಟ್ರ ಮತ್ತು ದೇಶ ಎರಡನ್ನು ಬಳಸುವ ಪರಿಪಾಠವಿದೆ. ನ್ಯಾಶನಲಿಸಂಗೆ ರಾಷ್ಟ್ರವಾದ, ರಾಷ್ಟ್ರೀಯತೆ ಹೀಗೆ ಹಲವು ಬಳಕೆಗಳಿವೆ. ಕೆಲವೊಮ್ಮೆ ರಾಷ್ಟ್ರಭಕ್ತಿಯನ್ನೂ ಅದೇ ಅರ್ಥದಲ್ಲಿ ಬಳಸುವುದುಂಟು. ಆದರೆ ರಾಷ್ಟ್ರಪ್ರೇಮ ಅಥವಾ ದೇಶಪ್ರೇಮ ಪೇಟ್ರಿಯಾಟಿಸಂ ಪರಿಭಾಷೆಗೆ ಸರಿ ಹೊಂದುತ್ತದೆ ಎಂದು ವಾದಿಸಿದವರು ಇದ್ದಾರೆ. ಪೇಟ್ರಿಯಾಟಿಸಂ ಮತ್ತು ನ್ಯಾಶನಲಿಸಂ ನಡುವೆ ಅಜಗಜಾಂತರ ವ್ಯತ್ಯಾಸಗಳನ್ನೂ ಹಲವು ಅಧ್ಯಯನಕಾರರು ಗುರುತಿಸಿ ನಿರ್ದೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ’ಜಾತಿ ಮತಗಳ ಚಹರೆಯನ್ನು ತೊರೆದ ಭಾರತೀಯರು’ ನಾವು, ವಿವಿಧತೆಯಲ್ಲಿ ಏಕತೆ- ಆ ಏಕತೆಯೇ ಭಾರತೀಯತೆ ಎಂಬಂತಹ ಪಾಠಗಳನ್ನು ಪದೇಪದೇ ಓದಿಸಿ, ಸಿನಿಮಾ ಸಾಹಿತ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಅದನ್ನು ನೆಲೆಯೂರಿಸುವ ಪ್ರಕ್ರಿಯೆಯಲ್ಲಿ ನಾಜೂಕಾಗಿ ಮೇಲುಗೈ ಪಡೆದ ಬ್ರಾಹ್ಮಿನಿಕಲ್-ಹಿಂದೂಯಿಸಂ-ಹಿಂದುತ್ವದ ಪರಿಕಲ್ಪನೆಯ ರಾಷ್ಟ್ರೀಯತೆ-ಭಾರತೀಯತೆ ಇನ್ನೂ ವಿನಾಶಕಾರಿ ಹಾದಿ ಹಿಡಿದಿದೆ. ಇವೆಲ್ಲವೂ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಕಲಸೋಗರ ಮಾಡಿ, ಯಾವುದನ್ನೂ ವಿಶಾಲ ದೃಷ್ಟಿಕೋನದಲ್ಲಿ ಯೋಚಿಸಲು ಅನುವಾಗದಂತೆ ಕಣ್ಣಿನ ಪೊರೆ ಮೂಡಿಸಿ, ದೇಶ-ಪ್ರಭುತ್ವವೊಂದನ್ನು ಕಟ್ಟಿಕೊಳ್ಳಬೇಕಾದ ಪ್ರಕ್ರಿಯೆಯಲ್ಲಿ ಎಲ್ಲ ಜನರಿಗೂ ಅನ್ವಯವಾಗುವ ಸಮಾನತೆಯನ್ನು ತರುವ ಕರ್ತವ್ಯಕ್ಕೆ ಬೆನ್ನುತಿರುಗಿಸುವಂತೆ ಮಾಡಿರುವುದಲ್ಲದೆ, ಸಮಾಜದ ಒಂದು ವರ್ಗವನ್ನು ಅನ್ಯಗೊಳಿಸುವುದರಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಭಾರತದಲ್ಲಿ ದೇಶವನ್ನು ಕಟ್ಟಿಕೊಳ್ಳುವಾಗ ಪ್ರಚುರಪಡಿಸಿದ ಸಾಂಸ್ಕೃತಿಕ ನ್ಯಾಶನಲಿಸಂ ಆಗಲೀ ಅಥವಾ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಚಾಲ್ತಿಯಲ್ಲಿದ್ದ ರಾಜಕೀಯ ನ್ಯಾಶನಲಿಸಂ ಆಗಲೀ ಅಂಬೇಡ್ಕರ ತತ್ವಗಳನ್ನು, ಅವರ ಚಿಂತನೆಯ ತಳಹದಿಗಳನ್ನು ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡದೆ ಇದ್ದದ್ದರಿಂದ ಬಿದ್ದ ಹೊಡೆತ ಇದು.

ದೇಶವೊಂದರಲ್ಲಿ ಸಾಂಸ್ಕೃತಿಕ ರಾಷ್ಟ್ರವಾದವನ್ನು ಜನಸಾಮಾನ್ಯರಲ್ಲಿ ಬಿತ್ತಬೇಕಾದರೆ, ಆ ರಾಷ್ಟ್ರದ ಜನಸಾಮಾನ್ಯರೆಲ್ಲಾ ಹಂಚಿಕೊಂಡಿದ್ದಿರಬಹುದಾದ ಸಾಂಸ್ಕೃತಿಕ ಸಂಗತಿಗಳನ್ನು ಉತ್ಪಾದಿಸಿ ಅಥವಾ
ಆರೋಪಿಸಿ ನಂಬಿಸಬೇಕಾಗಿರುವ ಅಗತ್ಯವಿದೆ. ಇಂತಹದ್ದೊಂದು ಸುದೀರ್ಘ ವಿದ್ಯಮಾನ ಸ್ವತಂತ್ರ ಭಾರತದಲ್ಲಿ ನಡೆಯಿತು. ವೇದಗಳು ಮತ್ತು ಅವುಗಳ ಹುಸಿ ಶ್ರೇಷ್ಠತೆಯನ್ನು ಜನಸಾಮಾನ್ಯರೆಲ್ಲರ ಸಮಾನ ಸಂಸ್ಕೃತಿ ಎಂಬಂತೆ ಬಿತ್ತಲಾಯಿತು. ನೆಹರೂ ಅಂತಹವರೂ ಕೂಡ ವೇದಗಳನ್ನು ಉದಾಹರಿಸಿ ಬರೆದ ಹಲವು ಬರೆಹಗಳಿವೆ. ಇದು ಮುಂದುವರಿದು, ರಾಮಾಯಣವನ್ನು ಹಲವು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ, ಅದನ್ನು ಇತಿಹಾಸ ಎಂಬಂತೆ ಬಿಂಬಿಸಿ, ಅದು ಭಾರತದ ನಾಗರಿಕರೆಲ್ಲರೂ ಹಂಚಿಕೊಂಡಿರುವ ಪರಂಪರೆ ಎಂದು ಬಿಂಬಿಸುವ ಪ್ರಯತ್ನವಾಯಿತು. ಹಿಂದುತ್ವದ ಪ್ರಯೋಗಗಳಲ್ಲಂತು ಬಿಲ್ಲುಹಿಡಿದ ರಾಮನನ್ನು ಎಲ್ಲರೂ ಆರಾಧಿಸಲೇಬೇಕು ಎಂಬ ಆಗ್ರಹವಿತ್ತು. ಭಗವದ್ಗೀತೆಯನ್ನು ಎಲ್ಲರ ಜೀವನದ ಅಂಗವಾಗಿಸಲು ಇಂದಿಗೂ ಹುನ್ನಾರಗಳನ್ನು ಮಾಡಲಾಗುತ್ತಿದೆ. ಭಾರತದಲ್ಲಿ ನೆಲೆಸಿರುವ ಕೋಟ್ಯಂತರ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳನ್ನು ಬಿಡಿ; ಹಿಂದೂ ಧರ್ಮದ ತೆಕ್ಕೆಗೆ ಸೇರಿಸಿಕೊಂಡಿರುವ ಎಷ್ಟೋ ಸಮುದಾಯಗಳಿಗೂ ಮೇಲೆ ಪ್ರತಿಪಾದಿಸಲಾದ ’ಸಾಮಾನ್ಯ ಪರಂಪರೆ’ ಅನ್ಯವಾಗಿತ್ತು. ಎಷ್ಟೋ ಬುಡಕಟ್ಟು ಸಮುದಾಯಗಳು ಆ ಪರಂಪರೆಯ ಗಂಧಗಾಳಿಯಿಲ್ಲದೆ ಬದುಕಿ ಉಳಿದುಬಂದಿದ್ದವು. ಇನ್ನು ಆ ಪರಂಪರೆಯನ್ನು ವಿರೋಧಿಸಿ ಹುಟ್ಟಿದ್ದ ಹಲವು ಜನಸಮುದಾಯಗಳಿದ್ದವು. ಮೇಲಿನ ಸಾಂಸ್ಕೃತಿಕ ರಾಜಕೀಯ ಮಾಡಿದವರು ಇಲ್ಲಿ ನೆಲೆಸಿದ್ದ ಲಕ್ಷಾಂತರ ಪರಂಪರೆಗಳನ್ನು ಕಡೆಗಣಿಸಿದ್ದರು. ಇವೆಲ್ಲದರ ಪರಿಣಾಮ, ವೈದಿಕ-ಹಿಂದೂಯಿಸಂ-ಹಿಂದುತ್ವದ ನ್ಯಾಶನಲಿಸಂ ಜನಪ್ರಿಯವಾಗಿ ಮೇಲುಗೈ ಪಡೆಯಿತು. ಇಂತಹ ಪ್ರಕ್ರಿಯೆಯನ್ನು ಅಂಬೇಡ್ಕರ್ ಅವರ ಬರಹ-ಭಾಷಣಗಳ ಹಿನ್ನೆಲೆಯಲ್ಲಿ ಕೌಂಟರ್ ಮಾಡಿ ಸರಿದಾರಿಗೆ ತರಬಹುದಾದ ಪ್ರಯತ್ನ ಇಲ್ಲಿ ಆದದ್ದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಂತಹ ಸಾಂಸ್ಕೃತಿಕ ನ್ಯಾಶನಲಿಸಂಗೆ ತಳಹದಿಯನ್ನಾಗಿಸಿದ್ದ ಈ ವೈದಿಕ ಪುರಾಣಗಳನ್ನು ಬಾಬಾಸಾಹೇಬರು ವಿಮರ್ಶಿಸಿ ಕುಟ್ಟಿ ಪುಡಿಮಾಡಿದ್ದ ಪಠ್ಯಗಳು ನಮಗೆ ದಶಕಗಳಿಂದ ಲಭ್ಯವಿದ್ದರೂ ಅವನ್ನು ಜನಪ್ರಿಯಗೊಳಿಸದ ಕಾರಣ, ಆ ನಿಟ್ಟಿನಲ್ಲಿ ಜನಸಾಮಾನ್ಯರ ತಿಳಿವಳಿಕೆಯನ್ನು ಕಟ್ಟದ ಕಾರಣ ಇಂದು ಅಪಾಯಕಾರಿ ಧಾರ್ಮಿಕ ರಾಷ್ಟ್ರೀಯತೆಯಿಂದ ಈ ನಾಡು ಬಳಲುವಂತಾಗಿದೆ. ಅಂಬೇಡ್ಕರ್ ಅವರು ಬರೆದ ’ರಿಡಲ್ಸ್ ಇನ್ ಹಿಂದೂಯಿಸಂ’ನ (ಹಿಂದೂಯಿಸಂನ ಒಗಟುಗಳು) ಪ್ರಬಂಧಗಳನ್ನು ಗಂಭೀರವಾಗಿ ಓದಿದರೆ ಎಂಥವರಿಗಾದರೂ, ವೇದ-ರಾಮಾಯಣ-ಮಹಾಭಾರತಗಳು ಸಾಮಾನ್ಯ ತಳಹದಿಯೆಂದು ಹೇರಿ ಕಟ್ಟುವ ನ್ಯಾಶನಲಿಸಂ ಅಸತ್ಯದ್ದು ಮತ್ತು ಅಪಾಯಕಾರಿಯಾದದ್ದು ಎಂದು ಸುಲಭಕ್ಕೆ ಮನವರಿಕೆಯಾಗುತ್ತದೆ. ವೇದಗಳ ಬಗ್ಗೆ ಬರೆಯುವ ಆರನೇ ಒಗಟಿನಲ್ಲಿ ’ವೇದಗಳ ವಸ್ತುವಿಷಯ: ಅವುಗಳಲ್ಲಿ ಯಾವುದಾದರೂ ನೈತಿಕ ಅಥವಾ ಆಧ್ಯಾತ್ಮಿಕ ಮೌಲ್ಯಗಳು ಇವೆಯೇ?’ ಎಂಬ ಅಧ್ಯಾಯದಲ್ಲಿ ಅವರು ಹೀಗೆ ಹೇಳುತ್ತಾರೆ: “ವೇದಗಳಿಂದ ಬಹಳಷ್ಟನ್ನು ಬಸಿದು ತೋರಿಸಬಹುದಾದರೆ, ಆಧ್ಯಾತ್ಮಿಕವಾಗಿ ಅಥವಾ ನೈತಿಕವಾಗಿ ಉನ್ನತಿಗೆ ಕರೆದೊಯ್ಯುವಂತಹದ್ದು ಅವುಗಳಲ್ಲಿ ಏನೂ ಇಲ್ಲ”. [BAWS Vol-4].

ಹಾಗೆಯೇ ರಾಮಾಯಣ, ಮಹಾಭಾರತ ಮತ್ತಿತರ ವೈದಿಕ ಪುರಾಣಗಳಲ್ಲಿರುವ ಸಮಸ್ಯೆಗಳನ್ನು ಎತ್ತಿತೋರಿಸಿ ಇವುಗಳ ತಳಹದಿಯಲ್ಲಿ ಕಟ್ಟಿಕೊಳ್ಳುವ ವ್ಯವಸ್ಥೆ ಪೊಳ್ಳಾಗಿರುತ್ತದೆ ಎಂಬುದನ್ನು ಸಾಬೀತುಪಡಿಸಿದವರು ಬಾಬಾಸಾಹೇಬರು. ವರ್ಣಾಶ್ರಮವನ್ನು ಪ್ರತಿಪಾದಿಸುವ ಈ ಪುರಾಣ-ಕಾವ್ಯಗಳ ತಳಹದಿಯ ಮೇಲೆ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಧಿಸುವುದು ಸಾಧ್ಯವೇ ಇಲ್ಲ ಎಂಬುದು ಬಾಬಾಸಾಹೇಬರ ಅಚಲ ನಂಬಿಕೆಯಾಗಿತ್ತು. ಅಲ್ಲಿಗೆ ದೇಶವಾಗಿ ಕಟ್ಟಿಕೊಳ್ಳುವ ರಾಜಕೀಯ ಪ್ರಜಾಪ್ರಭುತ್ವವೂ ಸಮಸ್ಯೆಗಳ ಆಗರವಾಗಲಿದೆ ಎಂದು ಅವರು ಶೋಧಿಸಿ ಕನ್ನಡಿ ಹಿಡಿದಿದ್ದರು. ಇಷ್ಟೆಲ್ಲಾ ಕಾಣ್ಕೆಗಳು ನಮ್ಮ ಮುಂದಿದ್ದರೂ, ಇಲ್ಲಿನ ವೈದಿಕ ಪಾರಮ್ಯ ಮತ್ತು ಬ್ರಾಹ್ಮಣವಾದ ಹಿಂದೂ ಧರ್ಮಗ್ರಂಥಗಳ ಆಧಾರದ ಮೇಲೆ ಈ ದೇಶವಾಸಿಗಳು ಸಾಮಾನ್ಯವಾದ ಪರಂಪರೆ ಹೊಂದಿದ್ದರು ಎಂಬುದನ್ನು ಬಿಂಬಿಸಿಕೊಂಡು ಬಂದಿದ್ದು, ಅದಕ್ಕೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪರಿಣಾಮಕಾರಿಯಾಗಿ ಕೌಂಟರ್ ನೀಡದೆ ಹೋದದ್ದರ ದುರಂತ ಇಂದು ದೈತ್ಯರೂಪವನ್ನು ಮೈದಾಳಿದೆ.

ಇನ್ನು ರಾಜಕೀಯವಾಗಿಯೂ ಭಾರತದಲ್ಲಿ ಹಲವು ರೀತಿಯ ರಾಷ್ಟ್ರೀಯತೆಗಳನ್ನು ಬೆಳೆಸಲಾಯಿತು. ಅದು ಮೊದಲಿಗೆ ಬೆಳೆದದ್ದು ಬ್ರಿಟಿಷರ ವಿರುದ್ಧದ ಹೋರಾಟವಾಗಿ. ಅಂದು ಜನರು ವಿವಿಧ ಪ್ರಾಂತ್ಯಗಳ ಮೂಲಕವೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದ ಕಾಲದಲ್ಲಿ ಬ್ರಿಟಿಷರ ಆಕ್ರಮಣಕ್ಕೆ ವಿರೋಧಕ್ಕೆ ಅಗತ್ಯವಾಗಿದ್ದ ಸಾಮೂಹಿಕ ಭಾರತೀಯ ಗುರುತನ್ನು ಬೆಳೆಸಬೇಕಾದ ಅವಶ್ಯಕತೆಯಿತ್ತು. ಅದು ಕೂಡ, ಬ್ರಾಹ್ಮಣವಾದದ ಬಿಗಿಹಿಡಿತ ಸಡಿಲವಾಗುತ್ತಿದ್ದುದರಿಂದ, ಎಚ್ಚೆತ್ತ ವರ್ಣಾಶ್ರಮದ ಮೇಲ್ವರ್ಗದ ಜನ ಕಟ್ಟಿದ ನರೆಟಿವ್ ಆಗಿತ್ತು ಎಂಬ ವಾದವೂ ಒಂದು ಕಡೆಯಿದೆ. 30-40ರ ದಶಕದಲ್ಲಿ ಬ್ರಿಟಿಷರ ಸರ್ಕಾರದೊಂದಿಗೆ ದಮನಿತ ವರ್ಗಗಳ ಹಿತಾಸಕ್ತಿಗಾಗಿ ದುಡಿಯುತ್ತಿದ್ದ, ದಲಿತ ಸಮುದಾಯಕ್ಕೆ ಪ್ರತ್ಯೇಕ ಚುನಾವಣೆಯಂತಹ ಬೇಡಿಕೆಯಿಟ್ಟಿದ್ದ ಅಂಬೇಡ್ಕರ್ ಅವರನ್ನು ’ಆಂಟಿ-ನ್ಯಾಷನಲ್’ ಎಂದು ಮೂದಲಿಸಿದ್ದ ವರ್ಗವೂ ಇತ್ತು. ಅಂದಿಗೂ, ದೇಶವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತಳವರ್ಗದ ಜನರ ಘನತೆ-ಸಮಾನತೆಯ ಪ್ರಶ್ನೆ ಬಗೆಹರಿಯದೆ ಹೊಸ ರಾಷ್ಟ್ರವನ್ನು ಕಟ್ಟಿಕೊಳ್ಳುವ ಬಗ್ಗೆ ಅಂಬೇಡ್ಕರ್ ತಮ್ಮ ಅನುಮಾನಗಳನ್ನು ಗಟ್ಟಿಯಾಗಿ ಹೇಳಿದ್ದರು.

“ದೇಶ ಮತ್ತು ಅಸ್ಪೃಶ್ಯರ ನಡುವೆ ಹಿತಾಸಕ್ತಿಗಳ ಘರ್ಷಣೆ ಉಂಟಾದಾಗ, ನನಗೆ ಸಂಬಂಧಿಸಿದಂತೆ ಅಸ್ಪೃಶ್ಯರ ಹಿತಾಸಕ್ತಿಗಳು ದೇಶದ ಹಿತಾಸಕ್ತಿಗಿಂತಲೂ ಆದ್ಯತೆ ಪಡೆಯುತ್ತವೆ” ಎಂದು ಸ್ಪಷ್ಟವಾಗಿ ಹೇಳಿದ್ದರು. ಈ ನಿಟ್ಟಿನಲ್ಲಿ ದೇಶವೆಂದರೆ ಕೇವಲ ಗಡಿಗಳು ಮಾತ್ರವಲ್ಲ ಅಥವಾ ಆಳುವ ಒಂದು ವರ್ಗದ ಹಿತಾಸಕ್ತಿಗಾಗಿ ದಮನಿತ ಸಮುದಾಯಗಳ ಮೇಲೆ ಹೇರುವ ನಿರ್ಬಂಧಗಳಾಗಿರಬಾರದು ಎಂಬ ತತ್ವಗಳನ್ನು ಬಾಬಾಸಾಹೇಬರ ಚಿಂತನೆಗಳು ಮತ್ತು ಕೆಲಸಗಳು ಪ್ರತಿಪಾದಿಸಿದ್ದವು.

ರಾಜಕೀಯ ತತ್ವಶಾಸ್ತ್ರಜ್ಞ ಭಿಕು ಪಾರೇಕ್ ಹೀಗೆನ್ನುತ್ತಾರೆ: “ಭ್ರಾತೃತ್ವದ ಕಲ್ಪನೆಗೆ ಸಂಬಂಧಿಸಿದ ರಾಷ್ಟ್ರದ ಕಲ್ಪನೆಯ ಬಗ್ಗೆ ಅಂಬೇಡ್ಕರ್ ಅವರ ವ್ಯಾಖ್ಯಾನ ಕೂಡ ಬಹಳ ಸಂಪದ್ಭರಿತ ಹಾಗೂ ಸೂಚ್ಯವಾಗಿತ್ತು. ಅವರಿಗೆ ರಾಷ್ಟ್ರ ಎಂಬುದು ಅದರ ಸದಸ್ಯರ ತಲೆ ಮೇಲೆ ಹಾರುತ್ತಿದ್ದ ಅತೀಂದ್ರಿಯವಾದ ಅಮೂರ್ತ ಕಲ್ಪನೆಯಾಗಿರಲಿಲ್ಲ. ಬದಲಿಗೆ, ಅದು ತನ್ನ ಸದಸ್ಯರ ಸಂಕೀರ್ಣ ಸಂಬಂಧಗಳು ಮತ್ತು ಅವಲಂಬನೆಗಳನ್ನು ಹೊರತುಪಡಿಸಿ ಮತ್ತಿನ್ನೇನೂ ಆಗಿರಲಿಲ್ಲ. ರಾಷ್ಟ್ರ ಸೇವೆ ಎಂದರೆ ಅದರ ಸದಸ್ಯರ ಸೇವೆಗಾಗಿ ಮತ್ತು ಅವರ ಕಲ್ಯಾಣಾಭಿವೃದ್ಧಿಗಾಗಿ ಶ್ರಮಿಸುವುದರ ಹೊರತು ಬೇರಿನ್ನೇನು ಅಲ್ಲ. ಆದುದರಿಂದಲೇ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು, ತನ್ನೊಳಗಿನ ಶೋಷಣೆಯ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಹೋರಾಟದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದು. ರಾಷ್ಟ್ರ ಎಂಬುದು ಯಾವುದೋ ಪುರಾತನ ಯುಗದ ಸಂಗತಿಯಲ್ಲ. ಅದರ ಎಲ್ಲ ಸದಸ್ಯರ ಸಾಮೂಹಿಕ ಸೃಷ್ಟಿ ಮತ್ತು ತನ್ನ ಸ್ವ-ಅರ್ಥೈಸಿಕೆಯಲ್ಲಿ ಅವರನ್ನೆಲ್ಲಾ ಒಳಗೊಳ್ಳುವುದರಲ್ಲಷ್ಟೇ ಅದು ಹಕ್ಕು ಸಾಧಿಸಬೇಕು ಎಂದು ಗಮನಿಸಿದ್ದರು” ಎಂದು ಗುರುತಿಸುತ್ತಾರೆ. [Conversations with Ambedkar, (E): Valerian Rodrigues]

ಈಗ ರಾಜಕೀಯ ನ್ಯಾಶನಲಿಸಂ ಹಲವು ಹಂತಗಳನ್ನು ದಾಟಿ ಮುನ್ನುಗ್ಗಿದೆ. ನೆರೆ ರಾಷ್ಟ್ರಗಳನ್ನು ಶತ್ರುಗಳನ್ನಾಗಿಸಿ ಒಂದು ಕಡೆ ರಾಷ್ಟ್ರೀಯತೆಯನ್ನು ಉದ್ದೀಪಿಸಲಾಗುತ್ತಿದ್ದರೆ, ಅದನ್ನೇ ರ್‍ಯಾಡಿಕಲೈಸ್ ಮಾಡಿ ಇಲ್ಲಿನ ಅಲ್ಪಸಂಖ್ಯಾತರ ವಿರುದ್ಧ ಅದನ್ನು ತಿರುಗಿಸಲಾಗಿದೆ. ವಿವಿಧ ಸಮುದಾಯಗಳಿಗೆ ಸೇರಿದ ಜನರು ಭಾರತದ ಸಂವಿಧಾನದ ಅಡಿಯಲ್ಲಿ ಸಮಾನರು ಎಂಬ ತತ್ವಕ್ಕೆ ಬದ್ಧರಾಗಿರುವ ಚಿಂತಕರನ್ನು ಈ ರಾಷ್ಟ್ರೀಯತೆ ದೇಶದ್ರೋಹಿಗಳ್ನಾಗಿಸಿದೆ. ಭಾವನಾತ್ಮಕ ನೆಲೆಯಲ್ಲಿ ಇಂತಹ ದ್ವೇಷವನ್ನು ತುಂಬುವ ರಾಷ್ಟ್ರೀಯತೆಯನ್ನು ಈ ದೇಶದ ನಾಗರಿಕರು ಒಂದು ದೊಡ್ಡ ಸಂಖ್ಯೆಯಲ್ಲಿ ಒಪ್ಪಿಕೊಳ್ಳುವಂತೆ ಮಾಡಲು ಸಾಧ್ಯವಾಗಿದ್ದು ಅಂಬೇಡ್ಕರ್ ಅವರ ಚಿಂತನೆಗಳನ್ನು ದೇಶ ಕಟ್ಟುವಿಕೆಯಲ್ಲಿ ಅನುಷ್ಠಾನಗೊಳಿಸಲು ಸೋತಿರುವ ಪರಿಣಾಮವೇ ಆಗಿದೆ. ಸಂವಿಧಾನದ ಪ್ರಕಾರ ಭಾರತವೆಂಬ ರಾಷ್ಟ್ರ-ಪ್ರಭುತ್ವಕ್ಕೆ ತನ್ನ ಪ್ರತಿಯೊಬ್ಬ ನಾಗರಿಕನೂ ಸಮಾನ. ಪ್ರತಿ
ನಾಗರಿಕನ ಸಮಾನತೆಯನ್ನು ಸಾಧಿಸುವುದರತ್ತ, ಘನತೆಯನ್ನು ಗಳಿಸಿಕೊಡುವುದರತ್ತ ದೇಶವನ್ನು ಕಟ್ಟಿಕೊಳ್ಳಬೇಕಾದ ತುರ್ತಿನಲ್ಲಿ ನಾವಿದ್ದು, ಆ ನಿಟ್ಟಿನಲ್ಲಿ ಇಂದು ಹೆಮ್ಮರವಾಗಿ ಬೆಳೆದಿರುವ ಧಾರ್ಮಿಕ ರಾಷ್ಟ್ರೀಯತೆಯನ್ನು ಪ್ರಶ್ನಿಸಿ ಮರುಚಿಂತನೆಗೆ ಒಳಪಡಿಸಬೇಕಾಗಿರುವ ಅಗತ್ಯ ದೇಶದ ನಾಗರಿಕರ ಮುಂದಿದೆ. ’ದೇಶವೆಂದರೆ ದಿನವೂ ಪ್ರಶ್ನಿಸಿ ಕಟ್ಟಿಕೊಳ್ಳಬೇಕಾದ ಜನಾಭಿಮತ’ ಎಂಬ ಫ್ರೆಂಚ್ ಇತಿಹಾಸಕಾರ ಅರ್ನೆಸ್ಟ್ ರೆನನ್ ಅವರ ಮಾತುಗಳಿಗೆ ಬಾಬಾಸಹೇಬರ ಚಿಂತನೆಗಳು ಮತ್ತು ಈ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅವರು ಎತ್ತಿದ ಪ್ರಶ್ನೆಗಳು ಪೂರಕವಾಗಿವೆ ಮತ್ತು ಇಂದಿಗೂ ಪ್ರಸ್ತುತವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...