“ರೋಡಲ್ಲಿ ಹೋಗೋರು ವ್ಯಾಪಾರ ಮಾಡ್ತಾರೆ, ಹಿಂದೂ ಮುಸ್ಲಿಮರೆಲ್ಲ ನಮ್ಮಲ್ಲಿ ಖರೀದಿಸುತ್ತಾರೆ. ನೋಡಿ ಪಕ್ಕದಲ್ಲೇ ಮಸೀದಿ ಇದೆ. ಇಲ್ಲಿ ವ್ಯಾಪಾರ ಮಾಡಬೇಡಿ ಎಂದು ಮಸೀದಿಯವರೇನೂ ನಮಗೆ ತೊಂದರೆ ಕೊಡುತ್ತಿಲ್ಲ. ಎಲ್ಲರದ್ದೂ ಹೊಟ್ಟೆಪಾಡು. ಜಾತಿ, ಧರ್ಮದ ಕಾರಣಕ್ಕೆ ಯಾರಿಗೂ ತೊಂದರೆ ಕೊಡಬಾರದು” ಎನ್ನುತ್ತಾರೆ ಮಂಡ್ಯ ಮೂಲದ ವ್ಯಾಪಾರಿ ಕೃಷ್ಣ.
ಕಳೆದ ಏಳೆಂಟು ವರ್ಷಗಳಿಂದ ಬಸವನಗುಡಿಯ ಮಸೀದಿ ಪಕ್ಕದಲ್ಲೇ ತಳ್ಳೋಗಾಡಿಯಲ್ಲಿ ನಿಂಬೆ ಹಣ್ಣು ಹಾಗೂ ಇತರೆ ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಅವರು, ಇಂದಿನ ಬೆಳವಣಿಗೆಗಳನ್ನು ಕಟುವಾಗಿ ಟೀಕಿಸುತ್ತಾರೆ. ಹಿಂದೂ ದೇವಾಲಯಗಳ ಬಳಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಅಡ್ಡಿಪಡಿಸುತ್ತಿರುವ ಸಂಘಟನೆಗಳ ವರ್ತನೆಗಳಿಗೆ ಬೇಸರ ವ್ಯಕ್ತಪಡಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರಿನ ಬಸವನಗುಡಿಯ ಖಾಝಿ ಸ್ಟ್ರೀಟ್ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಈಗ ರಂಜಾನ್ ಮಾಸವೂ ಇರುವುದರಿಂದ ವ್ಯಾಪಾರ ವಹಿವಾಟು ಕೂಡ ಜೋರಾಗಿ ನಡೆಯುತ್ತಿದೆ. ಇಲ್ಲಿನ ಮಸೀದಿಯ ನೆಲಮಹಡಿಯಲ್ಲಿರುವ ಮಳಿಗೆಗಳಲ್ಲಿ ಹಿಂದೂ, ಮುಸ್ಲಿಮ್ ಬಾಂಧವರಿಬ್ಬರೂ ಕಾಯಕ ನಡೆಸುತ್ತಿದ್ದಾರೆ.
ಇದನ್ನೂ ಓದಿರಿ: 40% ಕಮಿಷನ್ ನಿಜ; 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ: ಗುತ್ತಿಗೆದಾರರ ಸಂಘದ ಅಧ್ಯಕ್ಷರ ಗಂಭೀರ ಆರೋಪ
ಇಲ್ಲಿನ ಮಳಿಗೆಯೊಂದರಲ್ಲಿ ಕಳೆದ 42 ವರ್ಷಗಳಿಂದ ಹಿಂದೂ ಕುಟುಂಬವೊಂದು ಜೀವನೋಪಾಯ ಕಂಡುಕೊಂಡಿದೆ. ಟೈಲರಿಂಗ್ ಮಾಡುತ್ತಿದ್ದ ರೂಪಾ ರಾಘವೇಂದ್ರ ಎಂಬವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಳೆದ 42 ವರ್ಷಗಳಿಂದ ನಮ್ಮ ಮಾವನವರು ಇಲ್ಲಿ ವಹಿವಾಟು ನಡೆಸುತ್ತಿದ್ದರು. ಈಗ ನಾನು ಹಾಗೂ ನನ್ನ ಗಂಡ ಇದೇ ವೃತ್ತಿಯನ್ನು ಇಲ್ಲಿಯೇ ಮುಂದುವರಿಸಿದ್ದೇವೆ. ಈ ಮಳಿಗೆಯು ಮಸೀದಿಗೆ ಸೇರಿದೆ. ಆದರೆ ಮುಸ್ಲಿಮರ್‍ಯಾರೂ ನಮಗೆ ತೊಂದರೆ ಕೊಟ್ಟಿಲ್ಲ. ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂ ದೇವಾಲಯಗಳ ಬಳಿ ಮುಸ್ಲಿಮರು ಮಾರಾಟ ಮಾಡಬೇಡಿ ಎಂದು ಹೇಳುತ್ತಿರುವುದು ತುಂಬಾ ಹಿಂಸೆ ತಂದಿದೆ. ಬೇಕಂತಲೇ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಮಾತು ಮುಂದುವರಿಸಿದ ಅವರು, “ನಮಗೆ ಮುಸ್ಲಿಮರೇ ಹೆಚ್ಚು ಗ್ರಾಹಕರಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚು ಮುಸ್ಲಿಮರಿದ್ದಾರೆ. ಸುಮ್ಮನೆ ಈ ರೀತಿಯ ಗಲಾಟೆಗಳನ್ನು ಬಿಟ್ಟು ಅವರವರ ಕೆಲಸ ಮಾಡಿಕೊಂಡರೆ ಒಳ್ಳೆಯದು. ಈಗ ಕೋವಿಡ್ ಇಲ್ಲದ ಕಾರಣ ಇದನ್ನು ಎತ್ತಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಎಷ್ಟೊಂದು ಸಮಸ್ಯೆಯಾಯಿತು. ಜನರು ಬದುಕಲು ಬಿಡಿ. ಮಕ್ಕಳನ್ನು ಓದಲು ಬಿಡಿ. ಈ ಗಲಾಟೆಗಳಿಂದ ಒಳ್ಳೆಯದಾಗಲ್ಲ. ಹಿಂದೂ ಮುಸ್ಲಿಂ ಗಲಭೆಗಳಾಗುತ್ತವೆ ಅಷ್ಟೇ” ಎಂದು ಎಚ್ಚರಿಸಿದರು. ಅವರ ವಿಡಿಯೋ ನೋಡಿ.
ಮಸೀದಿಯ ಎದುರಲ್ಲೇ ನಂದಿನಿ ಹಾಲು ಉತ್ಪನ್ನ ಮಳಿಗೆ ಇದೆ. ಮಳಿಗೆಯಲ್ಲಿದ್ದ ಸುನಂದಾ ಅವರನ್ನು ಮಾತನಾಡಿಸಿದಾಗ, “ನನ್ನ ಯಜಮಾನರು ಸುಮಾರು 25 ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಮರೆಲ್ಲ ಅಣ್ಣತಮ್ಮಂದಿರಂತೆ ಇದ್ದೇವೆ. ಮಸ್ಲಿಮರೇ ನಮ್ಮಲ್ಲಿ ಹೆಚ್ಚು ವ್ಯಾಪಾರ ಮಾಡುತ್ತಾರೆ. ನಮ್ಮ ಕೆಲಸವನ್ನು ನಾವು ನೋಡಿಕೊಳ್ಳಬೇಕು. ಬೇರೆಯವರಿಗೆ ತೊಂದರೆ ಕೊಡಬಾರದು. ಎಲ್ಲರೂ ನಮ್ಮಂಥೇ ಅಲ್ಲವೇ?” ಎಂದು ಪ್ರಶ್ನಿಸಿದರು.

ಹಣ್ಣು, ತರಕಾರಿ ಮಾರುವ ತಮಿಳುನಾಡಿನ ಸೆಲಂನ ಧನಲಕ್ಷ್ಮಿ ಅವರು ಮಸೀದಿ ಬದಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಬದುಕು ಕಂಡುಕೊಂಡಿದ್ದಾರೆ. ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣನ್ನು ಮಾರುತ್ತಲೇ ಮಾತಿಗಿಳಿದ ಅವರು, “ಒಂದು ದಿನ ಬರದಿದ್ದರೆ ಏನಾಯಿತೆಂದು ಇಲ್ಲಿನ ಮುಸ್ಲಿಮರು ವಿಚಾರಿಸುತ್ತಾರೆ” ಎಂದು ತಮ್ಮ ಬಾಂಧವ್ಯವನ್ನು ಹಂಚಿಕೊಂಡರು.

ಹಣ್ಣು ತರಕಾರಿ ಖರೀದಿಸುತ್ತಿದ್ದ ಸ್ಥಳೀಯ ನಿವಾಸಿ ಎಸ್.ಎ.ಖಾದರ್ ಮಾತಿಗಿಳಿದು, “ಇಲ್ಲಿ ಸಾಕಷ್ಟು ಮುಸ್ಲಿಂ ಅಂಗಡಿಗಳಿವೆ. ಆದರೆ ನಾನು ಇವರಲ್ಲಿಯೇ ಹತ್ತು ವರ್ಷಗಳಿಂದ ಖರೀದಿಸುತ್ತಿದ್ದೇನೆ” ಎಂದು ತಿಳಿಸಿದರು.

ಸ್ಥಳೀಯ ನಿವಾಸಿ ಹಾಗೂ ವ್ಯಾಪಾರಿ ಅಹಮದ್ ಶರೀಫ್ ಪ್ರತಿಕ್ರಿಯಿಸಿ, “ನಮ್ಮ ಮಸೀದಿಯ ಬಳಿ ಯಾವ ಜಾತಿ, ಜನಾಂಗದವರು ಬಂದು ವ್ಯಾಪಾರ ಮಾಡಿದರೂ ಅಭ್ಯಂತರವಿಲ್ಲ. ಇದುವರೆಗೂ ನೀವು ಯಾವ ಜಾತಿಯವರು, ಯಾವ ಧರ್ಮದವರು ಎಂದು ನಾವು ಕೇಳಿಲ್ಲ” ಎಂದು ಸ್ಪಷ್ಟಪಡಿಸಿದರು.
“ನಮ್ಮನ್ನೆಲ್ಲ ದೇವರು ಸೃಷ್ಟಿ ಮಾಡಿದ್ದಾನೆ. ಗಾಳಿ, ನೀರು, ಭೂಮಿಯೆಲ್ಲ ದೇವರ ಸೃಷ್ಟಿ. ಸುನಾಮಿ ಬಂದರೆ, ಭೂಕಂಪವಾದರೆ, ಕೋವಿಡ್ ಬಂದರೆ ಹಿಂದೂ, ಮುಸ್ಲಿಂ ಎಂದು ನೋಡುತ್ತದೆಯೇ? ಎಲ್ಲರನ್ನೂ ಹೊತ್ತುಕೊಂಡು ಹೋಗುತ್ತದೆ. ದೇವರು ತಾರತಮ್ಯ ಮಾಡುತ್ತಿಲ್ಲ. ಸಾಯಿಸಿದರೆ ಒಟ್ಟಿಗೆ ಸಾಯಿಸುತ್ತಾನೆ, ಬದುಕಿಸಿದರೆ ಒಟ್ಟಿಗೆ ಬದುಕಿಸುತ್ತಾನೆ? ಇದನ್ನು ಸ್ವಲ್ಪ ಯೋಚನೆ ಮಾಡಿದರೆ ಸರಿಯಾಗುತ್ತದೆ. ಯೋಚನೆ ಮಾಡದವರು ಮಾತ್ರ ಹೀಗೆ ವರ್ತಿಸುತ್ತಾರೆ. ಶಿಕ್ಷಣ ಕಡಿಮೆ ಇದ್ದವರು ಧರ್ಮಗಳ ಜಗಳ ಮಾಡುತ್ತಿದ್ದಾರೆ. ಸರ್ಕಾರ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಸ್ವಲ್ಪ ವಿಳಂಬ ಮಾಡುತ್ತಿದೆ. ನೋಡೋಣ, ದೇವರು ಬುದ್ಧಿಕೊಡಬಹುದು” ಎಂದು ನಿಟ್ಟುಸಿರು ಬಿಟ್ಟರು.

ಮಸೀದಿಗೆ ಸೇರಿದ ಮಳಿಗೆಯೊಂದರಲ್ಲಿ ಕಿಡ್ನಿ ಸ್ಟೋನ್ ಮೆಡಿಕಲ್ ಶಾಪ್ ನಡೆಸುತ್ತಿರುವ ಮಹಮ್ಮದ್ ರಫೀ ಮಾತನಾಡಿ, “ನಮ್ಮ ತಂದೆಯವರು ಕಳೆದ ಐವತ್ತು ವರ್ಷಗಳಿಂದ ಅಂಗಡಿಯನ್ನು ನಡೆಸುತ್ತಿದ್ದರು. ತಂದೆಯವರು ಮನೆಯಲ್ಲಿರುವುದರಿಂದ ಆಗಾಗ್ಗೆ ಬಂದು ಹೋಗುತ್ತೇನೆ. ಪಕ್ಕದಲ್ಲಿರುವವರು ಹಿಂದೂಗಳು. ಕಳೆದ ನಲವತ್ತು ವರ್ಷಗಳಿಂದ ನಮ್ಮ ಜೊತೆ ಇದ್ದಾರೆ. ಈ ಬದಿಯಲ್ಲಿರುವ ಮೊಬೈಲ್ ಅಂಗಡಿ ಮುಸ್ಲಿಮ್ ವ್ಯಕ್ತಿಗೆ ಸೇರಿದ್ದರೂ ಇಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಹೆಸರು ಪ್ರಕಾಶ್” ಎಂದು ಹೇಳುತ್ತಾ ಹಿಂದೂ ಮುಸ್ಲಿಂ ಏಕತೆಯನ್ನು ಉಳಿಸಬೇಕೆಂದು ಕೋರಿದರು.

ಪಕ್ಕದಲ್ಲೇ ಇದ್ದ ಮೊಬೈಲ್ ಶಾಪ್‌ನಲ್ಲಿ ಮಾತಿಗೆ ಸಿಕ್ಕ ಪ್ರಕಾಶ್ ಮೂಲತಃ ರಾಜಸ್ಥಾನದವರು. ಕಳೆದ ಒಂದು ವರ್ಷದಿಂದ ತನ್ನ ಮುಸ್ಲಿಂ ಗೆಳೆಯನೊಂದಿಗೆ ಈ ಅಂಗಡಿಯಲ್ಲಿ ಪಾಲುದಾರನಾಗಿದ್ದಾರೆ. ಅವರು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. “ಇಲ್ಲಿ ನನಗೇನೂ ತೊಂದರೆಯಾಗಿಲ್ಲ. ಹಿಂದೂ ಮುಸ್ಲಿಂ ಎಲ್ಲರೂ ಚೆನ್ನಾಗಿದ್ದೇವೆ” ಎಂದು ಅವರು ತಮ್ಮ ಸಂತಸ ಹಂಚಿಕೊಂಡರು ಪ್ರಕಾಶ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: 40% ಕಮಿಷನ್ ಸರ್ಕಾರದ ವಿರುದ್ಧ ಜನಜಾಗೃತಿಗೆ ರಾಜ್ಯ ಪ್ರವಾಸ: ಸಿದ್ದರಾಮಯ್ಯ ಘೋಷಣೆ
ಈಗ ಹಿಂದೂ ಮುಸ್ಲಿಂ ಸೌಹಾರ್ದ ತೆ ಬಗ್ಗೆ ಮಾತಾಡೋ ನಿಮ್ಮ ಪತ್ರಿಕೆ ಹಾಗೂ 61ಜನ ಸ್ವಯಂಘೋಷಿತ ಬುದ್ದಿಜೀವಿಗಳು ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮಹಿಳಾ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದಾಗ ಎಲ್ಲಿ ಇದ್ರೀ ಮುಸುರೆ ತಿನ್ಕೊಂಡು
ಮುಸ್ಲಿಮರು ಮಂಗಳೂರಲ್ಲಿ ಎಂದೂ ಹಿಂದೂ ಮಹಿಳಾ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಿಲ್ಲ.
ರಾಜು ಅವರೇ ನೀವು ಮುಸ್ಲಿಂ ವ್ಯಾಪಾರಿಗೆ ಬಹಿಷ್ಕಾರ ಹಾಕಿದ್ದು ಸರಿ,ಹಾಗೆಯೇ ಮುಸ್ಲಿಮರು ಕೂಡ ಬೆಂಗಳೂರಿನ ಮಸೀದಿ ಹತ್ತಿರದ ಹಿಂದೂ ವ್ಯಾಪಾರಿಗಳಿಗೆ ಬಹಿಷ್ಕಾರ ಹಕಬೇಕಾಗಿತ್ತು ಅಂತೀರಾ.ಹಾಗೆಯೇ ನಿಮ್ಮ ನಿಲುವು ಸರಿಯಾಗಿದ್ದರೆ ಹಿಂದೂ ವ್ಯಾಪಾರಿಗಳನ್ನ ಮಸೀದಿ ಹತ್ತಿರ ಮಾರಾಟ ಮಾಡಬೇಡಿ ಮುತ್ತು ರಂಝಾನ್ ಹಬ್ಬಕ್ಕೆ ಬಟ್ಟೆ ಬರೆ ಹಬ್ಬದ ಸಾಮಾನು ಮುಸ್ಲಿಮರಿಗೆ ಮಾರುವುದಿಲ್ಲ ಎಂದು ಹಿಂದೂ ಅಂಗಡಿಗಳ ಮುಂದೆ ಬೋರ್ಡ್ ಹಾಕಿಸಿ ನೋಡೋಣ.ನೀವು ನಿಜವಾದ ನ್ಯಾಯವಂತರದರೆ.
ಈ ಲೇಖನ ಅರ್ಥಗರ್ಭಿತವಾಗಿದ್ದು. ವಿಚಾರ ಮಾಡಿಕೊಂಡು ಓದಿ…. ನಮ್ಮ ಭಾರತ ಜ್ಯಾತ್ಯಾತೀತ ರಾಷ್ಟ್ರ…. ಕನ್ನಡ ನಾಡು ಸುಂದರವಾದ ತೋಟವಿದ್ದಂತೆ. ಅಲ್ಲಿ ನಾನಾ ತರಹದ ಹೂವಿನ ಪರಿಮಳ ಪಸರಿಸುತ್ತದೆ…